Daily Archives: December 3, 2011

ಹೀಗೊಂದು ಕನಸು: ಮಡೆಸ್ನಾನ ಎಂಬ ಅಸಹ್ಯವನ್ನು ಮೇಲ್ಜಾತಿಯವರೆ ಪ್ರತಿಭಟಿಸುವಂತಿದ್ದರೆ…

-ಹನುಮಂತ ಹಾಲಿಗೇರಿ

“ಹಾಡ ಹಾಡೋ ಅಂದ್ರ ಹಾಡಿದ್ದ ಹಾಡತಾನ ಕಿಸಬಾಯಿದಾಸ” ಅಂತ ಬೇಸರ ಮಾಡ್ಕೋಬೇಡಿ. ನಾನು ಏನು ಆಗಬಾರದು ಅಂತ ಆಶಿಸಿ ಮಡೆಸ್ನಾನದ ಬಗ್ಗೆ ಲೇಖನ ಬರೆದಿದ್ದೇನೋ ನನ್ನ ಲೇಖನಕ್ಕೂ ಅದೆ ಗತಿಯಾಗಿದೆ. ಲೇಖನಕ್ಕೆ ಪರ-ವಿರೋಧಗಳ ಪ್ರತಿಕ್ರಿಯೆಗಳು ಬಂದಿವೆಯಾದರೂ ಅದರಲ್ಲಿ ಬಹುತೇಕ ಮೇಲ್ವರ್ಗದವರು ಮಡೆಸ್ನಾನದ ಪರವಾಗಿಯೂ ಕೆಳವರ್ಗದವರು ವಿರೋಧವಾಗಿಯೂ ಬರೆದಿದ್ದಾರೆ. ಇದು ಸ್ವಲ್ಪ ಬದಲಾಗಿ ಪ್ರತಿಯೊಬ್ಬ ಮೇಲ್ವರ್ಗದವರೂ ವಿರೋಧವಾಗಿದ್ದಿದ್ದರೆ ಎಷ್ಟೊಂದು ಚಂದವಿರುತ್ತಿತ್ತಲ್ಲವೇ?

ಲೇಖನ ಪ್ರಕಟವಾದ ದಿನ ಫೇಸ್‌ಬುಕ್‌ನಲ್ಲಿ ಕೆಲವರಂತೂ ನಿನಗೆ ಒಂದೆರಡು ಪ್ರಶಸ್ತಿಗಳು ಬಂದಿದ್ದು, ಅವು ನಿನ್ನನ್ನು ಹೀಗೆ ಬರೆಸುತ್ತವೆ. ದೇವರ ಸಮಾನವಾದ ಗೋವು ಕಡಿದು ಗೋಮಾಂಸ ತಿನ್ನುವ ಅಸಹ್ಯ ಎನಿಸದ ನಿಮ್ಮಂಥ ವಿಕೃತ ಮನಸ್ಸಿನವರಿಗೆ ಮಡೆಸ್ನಾನದಂತಹ ಆಚರಣೆಗಳು ಮಾತ್ರ ಅಸಹ್ಯ ಎನಿಸುತ್ತವೆ ಎಂದು ನನ್ನ ವೈಯಕ್ತಿಕ ನಿಂದನೆಗೆ ಇಳಿದುಬಿಟ್ಟರು.

ನಮ್ಮ ಮನೆಯಲ್ಲಿ ಕೂಡ ಆಕಳು, ಎಮ್ಮೆ, ಕುರಿ, ಕೋಳಿ, ಮೇಕೆ, ನಾಯಿ, ಬೆಕ್ಕುಗಳಿವೆ. ಈಗಲೂ ಕೂಡ ನಾನು ಊರಿಗೆ ಹೋದಾಗ ಎಮ್ಮೆ-ಆಕಳಗಳ ಮೈದಡವಿ ಮೈತೊಳೆದು, ಸಗಣಿ ಬಾಚಿ, ಮೇವು ಹಾಕುವ ಕೆಲಸವನ್ನು ಖುಷಿಯಿಂದ ಮಾಡುತ್ತೇನೆ. ಆದರೆ ಅವೆಲ್ಲ ನಮಗೆ ದೇವರು ಎನ್ನುವುದಕ್ಕಿಂತಲೂ ನಮ್ಮ ತೋಟ ಎಂಬ ಮಿನಿ ವಿಶ್ವದ ಜೀವ ಸದಸ್ಯರು. ಒಮ್ಮೊಮ್ಮೆ ನಾಯಿ ಮೇಕೆ ಮರಿಯನ್ನು, ಬೆಕ್ಕು ಕೋಳಿಮರಿಯನ್ನು ಬೇಟೆಯಾಡುವುದು ಇರುತ್ತದೆ. ಹಾಗಂತ ನಮ್ಮ ತೋಟದ ಮಾಲಿಕ ನಮ್ಮಪ್ಪ ಬೆಕ್ಕು ಅಥವಾ ನಾಯಿಯ ಜೀವ ತೆಗೆಯುವಂಥ ಕ್ರಮ ತೆಗೆದುಕೊಂಡಿದ್ದಿಲ್ಲ. ಹಣದ ಅಗತ್ಯಕ್ಕೆ ಅನುಗುಣವಾಗಿ ಈ ಜೀವ ಸದಸ್ಯರನ್ನು ಮಾರಾಟ ಮಾಡೊದು ಅಥವಾ ಮುದಿಯಾದ ಆಕಳು, ಎತ್ತು ಅಥವಾ ಎಮ್ಮೆಗಳನ್ನು ಕಟುಕರಿಗೆ ಮಾರುವುದು ಇದೆ. ಕೆಲವೊಮ್ಮೆ ಮನೆಗೆ ನೆಂಟರು ಬಂದ ಖುಷಿಯಲ್ಲಿ ಘಮಘಮಿಸುವ ಕೋಳಿ ಸಾರು ಸಿದ್ದವಾಗುತ್ತದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿ ಬಂತೆಂದರೆ ಮಾಂಸಾಹಾರ ನಿಸರ್ಗದ ನಿಯಮದಲ್ಲಿಯೆ ಮಿಳಿತವಾಗಿರುವಾಗ ಅದನ್ನು ಅಸಹ್ಯ ಎಂದರೆ ಏನು ಹೇಳುವುದು. ಒಂದು ಜೀವಿಯಲ್ಲಿಯೆ ಇನ್ನೊಂದು ಜೀವಿಯ ಆಹಾರವಿದೆ. ಹಾಲು ಕೊಡುವ ಆಕಳು, ಕರು, ಹೊಲ ಉಳುಮೆ ಮಾಡಲು ಅರ್ಹವಿರುವ ಎತ್ತನ್ನು ಹತ್ಯೆ ಮಾಡಬಾರದು, ಇನ್ನುಳಿದಂತೆ ಮುದಿಯಾದ ಗೋವನ್ನು ಮಾಂಸಕ್ಕೆ ಬಳಸಬಹುದು ಎಂದು ದೇಶದ ಕಾನೂನೆ ಹೇಳುತ್ತೆ. ಅಷ್ಟಕ್ಕೂ ಗೋವು ಒಂದನ್ನೆ ಮಾತ್ರ ಹತ್ಯೆ ಮಾಡಬಾರದು ಎಂದು ಪಟ್ಟು ಹಿಡಿಯುವ ಇಬ್ಬಂದಿತನದ ಹಿಂದಿನ ಹುನ್ನಾರವೇನು? ಒಂದು ವೇಳೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಮಂಸಾಹಾರವನ್ನು ಅವಲಂಭಿಸಿರುವ ಜನರ ಪರ್ಯಾಯ ವ್ಯವಸ್ಥೆ ಏನು? ಹಾಗೆ ನೋಡಿದರೆ ನಮ್ಮೂರ ಉತ್ತರ ಕರ್ನಾಟಕದ ಕಡೆ ಹೈನುಗಾರಿಕೆಗೆ ಸೂಕ್ತವಾದ ಪ್ರಾಣಿ ಎಮ್ಮೆ. ನಮ್ಮೂರಿನ ಹುಡುಗರು ಈಗಲೂ ಕೂಡ ಎಮ್ಮೆ ಹಾಲು, ಮೊಸರು, ಬೆಣ್ಣೆ ತಿಂದುಕೊಂಡೆ ಗರಡಿ ಮನೆ ಸಾಥ್ ಮಾಡುವುದು. ಔಷಧಿಗೆ ಹೆಚ್ಚು ಬಳಕೆಯಾಗುವುದು ಮೇಕೆ ಹಾಲು. ಆದರೆ ಗೋಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಂತೆ ಎಮ್ಮೆ-ಮೇಕೆಗಳ ಹತ್ಯೆ ವಿರೋಧಿಸಿ ಪ್ರತಿಭಟನೆಗಳು ನಡೆದದ್ದನ್ನು ನಾನು ಎಲ್ಲಿಯೂ ಕೇಳಿಲ್ಲ.

ಅಷ್ಟಕ್ಕೂ ಪ್ರಾಣಿಬಲಿಯನ್ನು ಸಾರ್ವಜನಿಕವಾಗಿ ಹಬ್ಬದಂತೆ (ಮಡೆಸ್ನಾನದಂತೆ) ಆಚರಿಸುವುದನ್ನು ನಾನು ವಿರೋಧಿಸುತ್ತೇನೆ. ಸರಕಾರವೇ ಪ್ರಾಣಿಬಲಿಯನ್ನು ನಿಷೇಧಿಸಿದೆಯಲ್ಲ? ಆದರೂ ಕೆಲವು ದಲಿತ ಸಮುದಾಯಗಳು ಕದ್ದುಮುಚ್ಚಿ ತಮ್ಮ ದೇವರುಗಳಿಗೆ ಪ್ರಾಣಿಬಲಿ ಕೊಡುವುದು ಮತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗುವುದು ಆಗಾಗ ನಡೆಯುತ್ತಲೆ ಇರುತ್ತದೆ.

ಆದರೆ ಈ ಮಡೆಸ್ನಾನ ಎಂಬ ಘನ ಆಚರಣೆಗೆ ಸರಕಾರ ಮತ್ತು ಕೆಲವು ಮಠಾಧಿಪತಿಗಳೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ವಿ.ಎಸ್.ಆಚಾರ್ಯ ಎಂಬ ಮಾನ್ಯ ಸಚಿವರಂತೂ `ಜನರ ನಂಬಿಕೆಗಳನ್ನು ನಾವು ಮುಟ್ಟುವುದಿಲ್ಲ. ಈ ಮಡೆಸ್ನಾನದಿಂದ  ಅವರ ಚರ್ಮವ್ಯಾದಿಗಳು ಕಡಿಮೆಯಾಗುವುದಿದ್ದರೆ ಅದಕ್ಕೆ ನಾವೇಕೆ ಅಡ್ಡಬರುವುದು,” ಎಂದು ತಿಪ್ಪೆ ಸಾರಿದ್ದಾರೆ. ಅವರು ಈ ಹಿಂದೆ ಡಾಕ್ಟರಿಕೆಯನ್ನು ಓದಿ ವೈದ್ಯರು ಆಗಿದ್ದುದರಿಂದ ಅವರ ಹೇಳಿಕೆ ವಿಶೇಷ ಕಳೆಯಿಂದ ಕೂಡಿದೆ.

ಪ್ರಾಣಿಬಲಿಯಂಥ ಆಚರಣೆಗಳನ್ನು ದಲಿತರು ಆಚರಿಸಿದರೆ ಅವರನ್ನು ಒದ್ದು ಜೈಲಿಗೆ ಹಾಕುವ ಸರಕಾರ, ಇನ್ನೊಂದೆಡೆ ಮೇಲ್ವರ್ಗದವರು ದಲಿತರ ಮೇಲೆ ವಿಜಯೋತ್ಸವದಂತೆ ಆಚರಿಸುವ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಬೆಂಬಲ ಘೋಷಿಸುತ್ತದೆ. ಕೆಲವರು ಎಂಜಲೆಲೆಯ ಮೇಲೆ  ಕೇವಲ ದಲಿತರಷ್ಟೆ, ಎಲ್ಲ ವರ್ಗದವರು ಉರುಳುತ್ತಾರೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಉಂಡು ಎಂಜಲು ಮಾಡುವವರು ಬ್ರಾಹ್ಮಣರು ಮಾತ್ರವಲ್ಲವೆ? ಇಷ್ಟಕ್ಕೂ ಯಾರೆ ಉರುಳಾಡಲಿ. ದೇವರ ಹೆಸರಿನಲ್ಲಿ ಹೀಗೆ ಎಂಜಲಿನ ಮೇಲೆ ಉರುಳಾಡುವುದು ಸರಿಯೆ?. ದೇವರು ದೈರ್ಯ ವಹಿಸಿ ಪ್ರತ್ಯಕ್ಷವಾಗುವಂತಿದ್ದರೆ ಈ ಅಸಹ್ಯವನ್ನು ಸಹಿಸಿಕೊಳ್ಳುತ್ತಿದ್ದನೆ?

ಮಡೆಸ್ನಾನ ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದರ ಬಗ್ಗೆ ನನಗೆ ಅತೀವ ಬೇಸರವಾಗಿದೆ. ಹೀಗೆ ಸಮರ್ಥಿಸಿಕೊಳ್ಳವವರಲ್ಲಿ ಬಹುತೇಕ ಮೇಲ್ವರ್ಗದವರೆ ಅಗಿರುವುದು ಕಾಕತಾಳಿಯವೆಂದೆನೂ ಅನಿಸುವುದಿಲ್ಲ. ಅಥವಾ ಅವರಿಗೆ ಮಡೆಸ್ನಾನ ತಪ್ಪು ಎಂದು ಎನಿಸುತ್ತಿಲ್ಲವೆಂದರೆ ಅದು ನಮ್ಮ ದೇಶದ ಮಹಾನ್ ಸಂಸ್ಕೃತಿಯ ದೌರ್ಭಾಗ್ಯ.

ಅಸ್ಪಶ್ಯತೆಯಂತಹ ನೆನಪಿಸಿಕೊಳ್ಳಲಿಕ್ಕೂ ಅಸಹ್ಯವೆನಿಸುವಂಥ ದೌರ್ಜನ್ಯಗಳನ್ನು  ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ಮಾಡಿಕೊಂಡು ಬಂದಿರುವ ಮೇಲ್ಜಾತಿಯವರು ಈಗಲೂ ಏಕೆ ತಮ್ಮ ಹಠವನ್ನೆ ಸಾಧಿಸಲೆತ್ನಿಸುತ್ತಾರೆಯೋ ತಿಳಿಯದು. ಈಗಷ್ಟೆ ಗತ ಅವಮಾನಗಳಿಂದ ಚೇತರಿಸಿಕೊಳ್ಳುತ್ತಿರುವ ದಲಿತರ ಮೇಲೆ ಮಡೆಸ್ನಾನದಂತಹ ಆಯುಧಗಳನ್ನು ಸೃಷ್ಟಿಸಿ ಪ್ರಯೋಗಿಸುವುದು ಸರಿಯೆ? ದಲಿತರೆ ಆಯುಧ, ದಲಿತರೆ ವೈರಿ.

ಮೇಲ್ಜಾತಿಯವರೆ ನೇತೃತ್ವ ವವಹಿಸಿಕೊಂಡು ಮಡೆಸ್ನಾನವನ್ನು ವಿರೋಧಿಸುತ್ತಿದ್ದರೆ ಎಷ್ಟೊಂದು ಚಂದವಾಗಿರುತ್ತಿತ್ತು? ಶಿವರಾಮು ಅವರ ಸಂಘಟನೆಯ ಬದಲಿಗೆ ಬ್ರಾಹ್ಮಣರ ಸಂಘಟನೆಯೊಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪ್ರತಿಭಟಿಸಿದ್ದರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು? ದಲಿತ ಸಂತ ದೇವನೂರು ಮಹಾದೇವ ಅವರು ಬಯಸುವಂತೆ ಈ ದೇಶದಲ್ಲಿನ ಎಲ್ಲ ಮನುಷ್ಯರು ಪರಸ್ಪರ ಭಾವ-ಮೈದುನರಾಗುವ, ನೆಂಟಸ್ಥರಾಗಿ ತೊಡೆಗೆ ತೊಡೆ ತಾಗಿಸಿಕೊಂಡು ಕುಳಿತು ಸಹಪಂಕ್ತಿ ಭೋಜನ ಮಾಡುವಂತಾಗಿದ್ದರೆ ಎಷ್ಟೊಂದು ಚಂದ ಅನಿಸುತ್ತಿತ್ತಲ್ಲವೇ? ಆ ದಿನ ನಮ್ಮ ತಲೆಮಾರಿನವರ ಆಯುಷ್ಯದಲ್ಲಿಯೆ ಬರಲಿ ಎಂದು ಆಶಿಸುತ್ತೇನೆ. ಕಾಯುತ್ತೇನೆ ಕೂಡ!