Daily Archives: December 4, 2011

ಜೀವನದಿಗಳ ಸಾವಿನ ಕಥನ – 14

-ಡಾ. ಎನ್ ಜಗದೀಶ್ ಕೊಪ್ಪ

ಜಗತ್ತಿನಲ್ಲಿ ಮನುಷ್ಯ ನಿರ್ಮಿತ ವಸ್ತುಗಳಲ್ಲಿ ಅಣುಬಾಂಬ್ ಹೊರತುಪಡಿಸಿದರೆ, ಮನುಕುಲವನ್ನು ನಾಶಪಡಿಸುವ ಶಕ್ತಿ ಇರುವುದು ಅಣೆಕಟ್ಟುಗಳಿಗೆ ಮಾತ್ರ. ಇಂತಹ ಅರ್ಥಗರ್ಭಿತ ಮಾತನ್ನು ಆಡಿದವರು ಕವಿಯಲ್ಲ ಅಥವಾ ಜನಸಾಮಾನ್ಯ ಅಲ್ಲ. ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ವಿಶ್ವಬ್ಯಾಂಕ್ ನೇಮಿಸಿದ್ದ ಸಮಿತಿಯ ನಿರ್ದೇಶಕ ಹಾಗೂ ಪೆನಿಸೊಲಿಯಾದ ನೀರಾವರಿ ತಜ್ಞ ಜೋಸೆಫ್ ಎಲ್ಲಮ್. ಈ ತಜ್ಞನ ಮಾತುಗಳಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂಬುದು ಜಾಗತಿಕ ಮಟ್ಟದಲ್ಲಿ ಸಂಭವಿಸಿರುವ ಅಣೆಕಟ್ಟುಗಳ ಅನಾಹುತಗಳನ್ನು ಗಮನಿಸಿದಾಗ ನಮಗೆ ಮನದಟ್ಟಾಗುತ್ತದೆ.

ಕಮ್ಯೂನಿಸ್ಟ್ ಆಡಳಿತವಿರುವ ಚೀನಾದಲ್ಲಿ ಸಂಭವಿಸುವ ಯಾವುದೇ ದುರಂತಗಳು ಹೊರ ಜಗತ್ತಿಗೆ ತಿಳಿಯದಂತೆ ಅಲ್ಲಿನ ಸರಕಾರ ಕಟ್ಟೆಚ್ಚರ ವಹಿಸಿದೆ. 1975ರಲ್ಲಿ ಸಂಭವಿಸಿದ ಅಣೆಕಟ್ಟು ದುರಂತದಲ್ಲಿ 2 ಲಕ್ಷದ 30 ಸಾವಿರ ಮಂದಿ ಸಾವನ್ನಪ್ಪಿದ ಘಟನೆ ಹೊರಜಗತ್ತಿಗೆ ತಲುಪಲು 12 ವರ್ಷ ಬೇಕಾಯಿತು. ಅಮೆರಿಕಾ ಮೂಲದ ಮಾನವ ಹಕ್ಕುಗಳ ಸಂಸ್ಥೆಯೊಂದು 1987ರಲ್ಲಿ ಚೀನಾದ ಕೆಲವು ನಾಗರೀಕರ ಸಂಪರ್ಕ ಸಾಧಿಸಿ, ಈ ಸ್ಪೋಟಕ ಮಾಹಿತಿಯನ್ನು ಜಗತ್ತಿಗೆ ಬಹಿರಂಗಪಡಿಸಿತು.

ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ನಡೆದ ಈ ಭೀಕರ ದುರಂತ ಕುರಿತಂತೆ, ಅಮೆರಿಕಾದ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ 1995ರಲ್ಲಿ ಸವಿವರವಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸಿತು. ಆಧುನಿಕ ಯುಗದ ಮಾನವ ನೂತನ ತಾಂತ್ರಿಕತೆ, ಕುಶಲತೆ ಬುದ್ಧಿಮತ್ತೆ ಇವೆಲ್ಲವನ್ನು ಉಪಯೋಗಿಸಿಕೊಂಡು ಪ್ರಕೃತಿಯನ್ನು ಮಣಿಸಲು ಹೊರಟು, ಪ್ರಕೃತಿಯೆದುರು ಸೋತು ಸುಣ್ಣವಾದ ದುರಂತಗಾಥೆ ಚೀನಾದೇಶದ ಅಣೆಕಟ್ಟಿನ ಈ ಅವಘಡ.

ಯಾಂಗ್ವೇಜ್ ನದಿಯ ಕೆಳಭಾಗದಲ್ಲಿ ಹರಿಯುವ ಹುವಾಯ್ ನದಿಗೆ ಚೀನಾ ಸರಕಾರ, ಬಾರಿಕ್ವಿಯಾ ಮತ್ತು ಶಿಮಾಂಟಾನ್ ಎಂಬ ಅಣೆಕಟ್ಟುಗಳನ್ನು ವಿಶೇಷ ತಂತ್ರಜ್ಞಾನದಿಂದ ತಯಾರಿಸಿದ ಉಕ್ಕು ಮತ್ತು ಸಿಮೆಂಟ್ ಬಳಸಿ, 1950ರ ದಶಕದಲ್ಲೇ ನಿರ್ಮಿಸಿತು. ಇವುಗಳ ಆಯುಷ್ಯ ಕನಿಷ್ಠ 1 ಸಾವಿರ ವರ್ಷಗಳು ಎಂದು ಸರಕಾರ ಅಂದಾಜಿಸಿತ್ತು.

1975ರ ಆಗಸ್ಟ್ 7ರಿಂದ 9ರವರೆಗೆ ಮೂರು ದಿನಗಳ ಅವಧಿಯಲ್ಲಿ ನದಿಯ ಪ್ರವಾಹದ ಒತ್ತಡವನ್ನು ತಡೆಯಲಾರದೆ ಮೊದಲನೇ ಅಣೆಕಟ್ಟು ಬಾರಿಕ್ವಿಯಾ ಒಡೆದು ಹೋಯಿತು. ಇದರ ಪರಿಣಾಮ ಎರಡನೇ ಅಣೆಕಟ್ಟು ಶಿಮಾಂಟಾನ್ ಮೇಲೆ ಉಂಟಾಗಿ ಅದು ಕೊಚ್ಚಿಹೋಯಿತು. ಒಮ್ಮೆಲೇ ಗಂಟೆಗೆ 80 ಕಿ.ಮೀ. ವೇಗದಲ್ಲಿ ಹರಿದ 500 ದಶಲಕ್ಷ ಕ್ಯೂಬಿಕ್ ನೀರು, ಕೆಳಭಾಗದಲ್ಲಿ ನಿರ್ಮಿಸಿದ್ದ 62 ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು ನಿರ್ನಾಮಗೊಳಿಸಿ, ನೂರಾರು ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಆಕ್ರಮಿಸಿ ಅಸಂಖ್ಯಾತ ಹಳ್ಳಿಗಳನ್ನು, ಪಟ್ಟಣಗಳನ್ನು ನೀರಿನಲ್ಲಿ ಮುಳುಗಿಸಿತು. ಈ ಅವಘಡದಲ್ಲಿ 20 ಲಕ್ಷ ನಾಗರೀಕರು ತಮ್ಮ ಆಸಿ – ಪಾಸ್ತಿ ಕಳೆದುಕೊಂಡು ನಿರಾಶ್ರಿತರಾದರು. ಇದರಲ್ಲಿ 85 ಸಾವಿರ ಮಂದಿ ನೀರಿನಲ್ಲಿ ಮುಳುಗಿ ಸತ್ತರೆ, 1 ಲಕ್ಷದ 45 ಸಾವಿರ ಮಂದಿ ಪ್ರವಾಹದಿಂದ ಹರಡಿದ ಸಾಂಕ್ರಾಮಿಕ ರೋಗಗಳಿಗೆ ಬಲಿಯಾದರು. ಆದರೆ ಚೀನಾ ಸರಕಾರ ತನ್ನ ಅಧಿಕೃತ ದಾಖಲೆಗಳಲ್ಲಿ ಈ ಅಣೆಕಟ್ಟು ದುರಂತದಿಂದ ಮಡಿದವರ ಸಂಖ್ಯೆ ಕೇವಲ 13 ಸಾವಿರದ 500 ಮಂದಿ ಎಂದು ದಾಖಲಿಸಿತು.

ಜಾಗತಿಕ ಸಮೀಕ್ಷೆಯ ಪ್ರಕಾರ 1900 ರಿಂದ 1980ರವರೆಗೆ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ಅಣೆಕಟ್ಟುಗಳಲ್ಲಿ ಇಂತಹ ಅವಘಡಗಳು ಸಂಭವಿಸಿವೆ. ಚೀನಾ ದೇಶವೊಂದರಲ್ಲೇ ಸಣ್ಣ ಅಣೆಕಟ್ಟುಗಳು ಸೇರಿದಂತೆ 80 ಸಾವಿರ ಅಣೆಕಟ್ಟುಗಳಿದ್ದು, 1950ರಿಂದ ಇತ್ತೀಚಿನವರೆಗೆ 200ಕ್ಕೂ ಹೆಚ್ಚು ಅಣೆಕಟ್ಟುಗಳು ನಾಶವಾಗಿವೆ.

1987ರಲ್ಲಿ ಅಂತರಾಷ್ಟ್ರೀಯ ಅಣೆಕಟ್ಟುಗಳ ಪರಾಮರ್ಶೆ ಸಮಿತಿ, ಅಣೆಕಟ್ಟುಗಳ ಸುರಕ್ಷತೆ, ಅವುಗಳ ನಿರ್ಮಾಣ ಕುರಿತಂತೆ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದ್ದರೂ ಕೂಡ, ದುಬಾರಿ ವೆಚ್ಚದ ನೆಪವೊಡ್ಡಿ ಎಲ್ಲಾ ರಾಷ್ಟ್ರಗಳು, ಸರಕಾರಗಳು ಈ ಮಾರ್ಗದರ್ಶಿ ಸೂತ್ರವನ್ನು ಕಡೆಗಣಿಸಿವೆ.

ಬಹುತೇಕ ಅಣೆಕಟ್ಟುಗಳು ವಿಫಲವಾಗಿರುವುದು ಎರಡು ಪ್ರಮುಖ ಕಾರಣಗಳಿಂದ. ಶೇ.40 ರಷ್ಟು ಅಣೆಕಟ್ಟುಗಳು ಅನಾವಶ್ಯಕ ಎತ್ತರದಿಂದ ಒಡೆದಿದ್ದರೆ, ಶೆ. 30 ರಷ್ಟು ಅಣೆಕಟ್ಟುಗಳು ವಿಫಲವಾಗಿರುವುದು ಭದ್ರ ಹಾಗೂ ವಿಶಾಲವಾದ ತಳಹದಿಯ ಕೊರತೆಯ ಕಾರಣಕ್ಕಾಗಿ. ಇದರಿಂದಾಗಿಯೇ ಅಣೆಕಟ್ಟು ತಜ್ಞ ರಾಬರ್ಟ್ ಜಾನ್ಸನ್ ಯಾವುದೇ ಅಣೆಕಟ್ಟು ಅಥವಾ ಜಲಾಶಯ ನಿರ್ಮಿಸುವಾಗ ರಕ್ಷಣಾತ್ಮಕವಾದ ತಾಂತ್ರಿಕ ಜ್ಞಾನ ಬಳಸಬೇಕು ಎಂದು ಅಭಿಪ್ರಾಯಪಟ್ಟಿದ್ದಾನೆ. ಅಂದರೆ, ನದಿಯ ನೀರಿನ ರಭಸ, ನೀರಿನಲ್ಲಿ ಮಿಳಿತವಾಗುವ ಹೂಳಿನ ಪ್ರಮಾಣ, ಅಣೆಕಟ್ಟು ನಿರ್ಮಿಸಲು ಆಯ್ಕೆ ಮಾಡಿರುವ ಸ್ಥಳದ ಇತಿಹಾಸ, ಭೂಗರ್ಭ ದಾಖಲೆಗಳು, ಅವುಗಳ ಪದರ, ಆ ಪ್ರದೇಶದ ಭೂಕಂಪದ ಸಾಧ್ಯತೆಗಳು, ಜಲಾಶಯದಲ್ಲಿ ಶೇಖರವಾಗುವ ಒಟ್ಟು ನೀರಿನ ಪ್ರಮಾಣ, ಈ ತೂಕವನ್ನು ತಡೆದುಕೊಳ್ಳುವ ಭೂಮಿಯ ಶಕ್ತಿ  ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದೇ ರಾಬರ್ಟ್ ಜಾನ್ಸನ್‌ನ ಅಭಿಮತ.

ಈ ಕುರಿತಂತೆ ವಿಶ್ವಬ್ಯಾಂಕ್ ಕೂಡ ಅಣೆಕಟ್ಟುಗಳ ದುರಂತದ ಬಗ್ಗೆ ಪರಾಮರ್ಶೆ ನಡೆಸಿ, ಬಹುತೇಕ ರಾಷ್ಟ್ರಗಳು ಇಲ್ಲವೇ ಸರಕಾರಗಳು ನೀರಾವರಿ ಅಥವಾ ಜಲ ವಿದ್ಯುತ್ ಉತ್ಪಾದನೆಗೆ ಲಕ್ಷ್ಯ ವಹಿಸುತ್ತವೆಯೇ ಹೊರತು, ಹಣ ಖರ್ಚಾಗುವ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಕಾಮಗಾರಿ ಮತ್ತು ಅಣೆಕಟ್ಟಿನ ಸುರಕ್ಷತೆಯತ್ತ ಗಮನ ಹರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಮೆರಿಕಾದಂತಹ ಮುಂದುವರಿದ ರಾಷ್ಟ್ರದಲ್ಲಿ ನಿರ್ಮಿಸಿರುವ ಬೃಹತ್ ಅಣೆಕಟ್ಟುಗಳಿಂದಾಗಿ, ಆ ಪ್ರದೇಶದಲ್ಲಿ ಪದೇ-ಪದೇ ಭೂಕಂಪನವಾಗುತ್ತಿರುವುದನ್ನು ಭೂಗರ್ಭ ಶಾಸ್ತ್ರಜ್ಞರು ಇತ್ತೀಚೆಗೆ ಗುರುತಿಸಿದ್ದಾರೆ. ಇಂತಹದ್ದೇ ಸಮಸ್ಯೆಗಳನ್ನು ಆಸ್ಟ್ರೇಲಿಯಾ, ಕೆನಡಾ ರಾಷ್ಟ್ರಗಳು ಸಹ ಎದುರಿಸುತ್ತಿವೆ.

ಮುಂದುವರಿದ ರಾಷ್ಟ್ರಗಳಲ್ಲಿ ಖಾಸಗಿ ಅಣೆಕಟ್ಟುಗಳು ನಿರ್ಮಾಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಸರಕಾರಗಳೇ ಪೂರ್ಣಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿವೆ. ಆದರೆ ರಷ್ಯಾ, ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಪ್ರಾನ್ಸ್, ಇಂಗ್ಲೆಂಡ್, ಜರ್ಮನಿಯಂತಹ ರಾಷ್ಟ್ರಗಳಲ್ಲಿ ಜಲವಿದ್ಯುತ್ ಉತ್ಪಾದನೆಗೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಿರುವ ಕಾರಣ, ಸರಕಾರ ನಿರ್ಮಿಸಿರುವ ಅಣೆಕಟ್ಟುಗಳಿಗಿಂತ ಖಾಸಗಿ ಅಣೆಕಟ್ಟುಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ಹೀಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿ.ವಿ. ತಯಾರಿಸಿರುವ ಮುನ್ನೆಚ್ಚರಿಕೆ ಕ್ರಮದ ಮಾರ್ಗದರ್ಶನವನ್ನು ಈ ಎಲ್ಲಾ ರಾಷ್ಟ್ರಗಳು ಕಟ್ಟುನಿಟ್ಟಾಗಿ ಜಾರಿಗೆ ತಂದಿವೆ. ಅಂದರೆ ಅಪಾಯಕಾರಿ ಅಂಶಗಳನ್ನು ಗುರುತಿಸುವುದು (ಭೂಕಂಪನ ಇತ್ಯಾದಿ), ಅಣೆಕಟ್ಟಿನ ಗೋಡೆಗಳ ಬಿರುಕುಗಳ ಬಗ್ಗೆ ಪ್ರವಾಹ ಸಂದರ್ಭದಲ್ಲಿ ತೀವ್ರ ನಿಗಾ ವಹಿಸುವುದು, ಜೊತೆಗೆ ಪ್ರತಿ ವರ್ಷ ಶೇಖರವಾಗುವ ಹೂಳಿನ ಪ್ರಮಾಣವನ್ನು ಅಂದಾಜಿಸುವುದು. ಇವೆಲ್ಲಕ್ಕಿಂತ ಹೆಚ್ಚಾಗಿ 50 ವರ್ಷಕ್ಕಿಂತ ಹೆಚ್ಚು ಹಳೆಯದಾದ ಅಣೆಕಟ್ಟುಗಳನ್ನು ಒಡೆದು ಹೂಳು ಹಾಗು ನದಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಮುಂದುವರಿದ ರಾಷ್ಟ್ರಗಳು ಜಾಗರೂಕವಾಗಿವೆ.

ಆದರೆ ಸರಕಾರಿ ಸ್ವಾಮ್ಯದಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ನಿರ್ಮಾಣವಾಗುವ ಅಣೆಕಟ್ಟುಗಳ ದುರಂತ ಸರಮಾಲೆ ಹಾಗೆ ಮುಂದುವರಿದಿದೆ. ಏಕೆಂದರೆ ಇಲ್ಲಿ ಹಣ ಮತ್ತು ಅಧಿಕಾರ ಮುಖ್ಯವಾಗಿದೆಯೇ ಹೊರತು ಮಾನವ ಜೀವಗಳಲ್ಲ. ಇದಕ್ಕೆ ಸಾಕ್ಷಿಯಾಗಿ ನಮ್ಮ ನೆರೆಯ ಪಾಕಿಸ್ತಾನದಲ್ಲಿ ನಡೆದ ಟರ್ಬೆಲಾ ಅಣೆಕಟ್ಟಿನ ದುರಂತ ನಮ್ಮ ಮುಂದಿದೆ.

1975ರಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಪಾಕಿಸ್ತಾನ ನಿರ್ಮಿಸಿದ ಟರ್ಬೆಲಾ ಅಣೆಕಟ್ಟು ಪ್ರವಾಹದ ಒತ್ತಡ ತಡೆಯಲಾರದೆ 1979ರಲ್ಲಿ ಹಲವೆಡೆ ಬಿರುಕು ಬಿಟ್ಟಾಗ, ಮತ್ತೆ ಅಣೆಕಟ್ಟು ವಿನ್ಯಾಸ ಬದಲಿಸಿ ದುರಸ್ತಿ ಮಾಡಲಾಯಿತು. ಇದರ ಪರಿಣಾಮ 1968ರಲ್ಲಿ ಅಂದಾಜಿಸಿದ್ದ 800 ಮಿಲಿಯನ್ ಡಾಲರ್ ಹಣದ ವೆಚ್ಚ 1986ರ ವೇಳೆಗೆ ಶತಕೋಟಿ ಡಾಲರ್‌ಗೆ ಏರಿ ಪಾಕಿಸ್ತಾನ ಸರಕಾರವನ್ನು ಸಾಲದ ಸುಳಿಗೆ ಸಿಲುಕಿಸಿತು. ಇಷ್ಟಾದರೂ ಜಲಾಶಯದಲ್ಲಿ ಶೇಖರವಾದ ನೀರಿನ ಒತ್ತಡಕ್ಕೆ ಭೂಗರ್ಭದ ಶಿಲೆಗಳ ಪದರುಗಳಲ್ಲಿ ಚಲನೆಯುಂಟಾಗಿ ಹಲವೆಡೆ ಭಾರಿ ಭೂಕಂಪ ಸೃಷ್ಟಿಯಾದ್ದರಿಂದ ನೀರಿನ ಸೋರಿಕೆಯಾಗಿ ಅಣೆಕಟ್ಟು ವಿಫಲವಾಯಿತು.

ಇಂತಹ ಘಟನೆ ಕೊಲರಾಡೊ ನದಿಗೆ ಕಟ್ಟಿದ ಗ್ಲೇನ್ ಕ್ಯಾನಲ್ ಅಣೆಕಟ್ಟಿನಲ್ಲೂ ಸಂಭವಿಸಿತು. ಅಣೆಕಟ್ಟು ನಿರ್ಮಿತ ಸ್ಥಳ ಸಮುದ್ರತೀರದಿಂದ ಎಷ್ಟು ಮೀಟರ್ ಎತ್ತರದಲ್ಲಿದೆ ಎಂಬುದನ್ನು ನಿಖರವಾಗಿ ಗುರುತಿಸಲು ಇಂಜಿನಿಯರ್‌ಗಳು ವಿಫಲರಾದದ್ದೇ ಈ ಅಣೆಕಟ್ಟು ಬಿರುಕು ಬಿಡಲು ಕಾರಣವಾಯ್ತು.

ಈ ಎಲ್ಲಾ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಬಹುತೇಕ ಮುಂದುವರಿದ ರಾಷ್ಟ್ರಗಳ ಸರಕಾರಗಳು, ಖಾಸಗಿ ಅಣೆಕಟ್ಟುಗಳ ಅವಧಿ ಮತ್ತು ನಿರ್ಧರಿಸಿದ್ದ ಅವುಗಳ ಆಯಸ್ಸು ಮುಗಿದ ನಂತರ ಕಾರ್ಯಾಚರಣೆ ವಿಸ್ತರಣೆಗೆ ಅನುಮತಿ ನಿರಾಕರಿಸಿವೆ. ಇದರ ಹಿಂದೆ ಪರಿಸರವಾದಿಗಳ ಹೋರಾಟ ಮತ್ತು ನಿರಂತರವಾಗಿ ಸಂಭವಿಸುತ್ತಿರುವ ಅವಘಡಗಳೂ ಸಹ ಪರೋಕ್ಷವಾಗಿ ಕಾರಣವಾಗಿವೆ.

ಈಗಾಗಲೇ ಅಮೆರಿಕಾ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲಿ 4 ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಅವುಗಳ ಆಯಸ್ಸು ಮುಗಿದ ನಂತರ ಒಡೆದುಹಾಕಿರುವುದರಿಂದ ಸಾಲ್ಮನ್ ಜಾತಿಯ ಮೀನುಗಳು ಸಮುದ್ರದ ಉಪ್ಪು ನೀರಿನಿಂದ ಹೊರಬಂದು, ಸಿಹಿ ನೀರಿನ ನದಿಗಳಲ್ಲಿ ಸಾವಿರಾರು ಕಿಲೋಮೀಟರ್ ಚಲಿಸಿ ತಮ್ಮ ಸಂತಾನಾಭಿವೃದ್ಧಿಗೆ ತೊಡಗಿವೆ. ಇದರಿಂದಾಗಿ ಮೀನುಗಾರಿಕೆಯನ್ನೇ ನಂಬಿ ಬದುಕಿದ್ದ ನದಿತೀರದ ಅರಣ್ಯವಾಸಿಗಳ ಜೀವನದಲ್ಲಿ ಮತ್ತೆ ಆಶಾಕಿರಣ ಮೂಡಿದೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಅರಣ್ಯ ಪ್ರದೇಶದಲ್ಲಿ ಮತ್ತೆ ಗಿಡ ಮರಗಳು ತಲೆಎತ್ತಿದ್ದು, ಹಕ್ಕಿಗಳ ಕಲರವ, ಪ್ರಾಣಿಗಳ ಚಲನವಲನ ಪ್ರಕೃತಿ ಪ್ರಿಯರಲ್ಲಿ ಹರ್ಷವನ್ನುಂಟುಮಾಡಿದೆ.

(ಮುಂದುವರಿಯುವುದು)

(ಚಿತ್ರಕೃಪೆ: ವಿಕಿಪೀಡಿಯ)