ನನ್ನ ಭಯಾತಂಕಗಳು, ಮಡೆಸ್ನಾನ, ನಮ್ಮ ರಾಜಕಾರಣ…

-ರವಿ ಕೃಷ್ಣಾರೆಡ್ಡಿ

ಕಳೆದೆರಡು ವರ್ಷಗಳಿಂದ ನನಗಿರುವ ಭಯಾತಂಕಗಳೇ ಬೇರೆ. ಅವು ಬಹುಶಃ ನನ್ನ ಅನೇಕ ಸ್ನೇಹಿತರಿಗಿರುವ ಅಥವ ಇದ್ದಿರಬಹುದಾದ ಭಯಾತಂಕಗಳಿಗಿಂತ ಭಿನ್ನವಾದವು. ಹೆಚ್ಚುತ್ತಿರುವ ಜಾಗತಿಕ ತಾಪಮಾನವೆ ನನ್ನ ಭಯಾತಂಕಕ್ಕೆ ಮೂಲ ಕಾರಣ. ಏಳು ವರ್ಷದ ಮಗಳಿಗೆ ಮತ್ತು ಎರಡು ಮುಟ್ಟುತ್ತಿರುವ ಮಗನಿಗೆ ತಂದೆಯಾಗಿ ನನ್ನ ಆತಂಕ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.

ಈ ಆತಂಕದ ಹಿನ್ನೆಲೆಯೆಲ್ಲಿಯೇ ನಾನು ಸಸ್ಯಾಹಾರಿಯಾಗಲು ತೀರ್ಮಾನಿಸಿದ್ದು. ಅಮೇರಿಕದಲ್ಲಿದ್ದಾಗ ಅದಕ್ಕೊಂದಿಷ್ಟು ಅರ್ಥವಿತ್ತು. ಆದರೆ ಅದಕ್ಕೆ ಇಲ್ಲಿ ಅಷ್ಟು ಘನವಾದ ಅರ್ಥವಿಲ್ಲ. ಆದರೂ ನಾನು ಸುಡುವ ಪೆಟ್ರೋಲು ಮತ್ತು ವಿದ್ಯುತ್‌ಗೆ ಮತ್ತು ಜಾಗತಿಕ ತಾಪಮಾನ ವೃದ್ಧಿಗೆ ನನ್ನ ಕೊಡುಗೆ ಇದ್ದಿರಬಹುದಾದ ಇತರ ವೈಯಕ್ತಿಕ ಕ್ರಿಯೆಗಳಿಗೆ ಪ್ಯಾಯಶ್ಚಿತ್ತವೆಂಬಂತೆ ಅದನ್ನು ನಡೆಸಿಕೊಂಡು ಬರುತ್ತಿದ್ದೇನೆ. ಇನ್ನು ಸ್ಥಳೀಯ ಆಹಾರ ಪದಾರ್ಥಗಳನ್ನೇ–ಕಾರ್ಬನ್ ಫೂಟ್‌ಪ್ರಿಂಟ್ ಆದಷ್ಟೂ ಕಮ್ಮಿ ಇರುವುದನ್ನೇ, ತಿನ್ನಬೇಕು ಎನ್ನುವ ಆಶಯ ಇನ್ನೂ ಆರಂಭಿಸಲೇ ಆಗಿಲ್ಲ.

ಈ ವರ್ಷದ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿದ್ದಾಗ ಈ “Hot: Living Through the Next Fifty Years on Earth” ಎನ್ನುವ ಪುಸ್ತಕ ಅಮೆಜಾನ್.ಕಾಮ್‌ನಲ್ಲಿ ಕಣ್ಣಿಗೆ ಬಿದ್ದದ್ದು. ನನ್ನ ಮಗಳದೇ ವಯಸ್ಸಿನ ಮಗಳೊಬ್ಬಳ ತಂದೆಯಾಗಿರುವ ಅಮೇರಿಕನ್ ಪತ್ರಕರ್ತ ಮಾರ್ಕ್ ಹರ್ಟ್ಸ್‌ಗಾರ್ಡ್ ತನ್ನ ಮಗಳ ಮುಂದಿನ ದಿನಗಳು ಹೇಗಿರುತ್ತವೆ ಮತ್ತು ಅವಳು ಹೇಗೆ ಜೀವನ ಸಾಗಿಸಬೇಕಾದೀತು ಎನ್ನುವ ಬಗ್ಗೆ ಬರೆದಿರುವ ಪುಸ್ತಕ ಎನ್ನುವ ಬ್ಲರ್ಬ್ ಓದಿಯೇ ಅದನ್ನು ಕೊಂಡಿದ್ದೆ. ಈಗ ಅದನ್ನು ಓದಲು ಆರಂಭಿಸಿರುವೆ. ನನ್ನ ರಾಜ್ಯದ ಮತ್ತು ರಾಷ್ಟ್ರದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಓದು ನನ್ನ ಭಯಾತಂಕಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಈ  ಹಿನ್ನೆಲೆಯಲ್ಲಿ ನಾನು ಕಳೆದ ವಾರದಿಂದ ಚರ್ಚೆಯಾಗುತ್ತಿರುವ ಎಂಜಲು ಮಡೆಸ್ನಾನದ ಬಗ್ಗೆ ಟಿಪ್ಪಣಿ ಮಾಡಬಯಸುತ್ತೇನೆ. ಯಾರು ಯಾರ ಎಂಜಲೆಲೆಯ ಮೇಲೆ ಉರುಳಾಡಿದರೂ ಅದು ಅವಮಾನದ ಪ್ರಶ್ನೆಯೇ. ಬಾಹ್ಮಣೇತರರು ಉಂಡೆದ್ದ ಎಲೆಯ ಮೇಲೆ ಬ್ರಾಹ್ಮಣರು ಉರುಳಾಡಿದರೂ (ಅಂತಹ ಒಂದು ಸಾಧ್ಯತೆ ಭಾರತದಲ್ಲೆಲ್ಲೂ ಇದ್ದ ಹಾಗೆ ಇಲ್ಲ; ಅದು ಬೇರೆ ಪ್ರಶ್ನೆ.) ಅದು ಮನುಷ್ಯನ ಘನತೆಯೆ ಹಿನ್ನೆಲೆಯಲ್ಲಿ ಅಸಹ್ಯವೇ ಮತ್ತು ಅವಮಾನವೆ. ಇನ್ನು ಬ್ರಾಹ್ಮಣರು ತಿಂದು ಎಂಜಲು ಬಳಿದು ಬಿಟ್ಟ ಎಲೆಯ ಮೇಲೆ ಬ್ರಾಹ್ಮಣೇತರರು ಉರುಳಾಡುವುದರಲ್ಲಿ ಕೇವಲ ವ್ಯಕ್ತಿಗತ ಘನತೆಯ ಪ್ರಶ್ನೆ ಮಾತ್ರವಲ್ಲ, ಜಾತೀಯತೆಯ, ಅದು ಪೋಷಿಸಿಕೊಂಡು ಬಂದ ಅಸ್ಪೃಶ್ಯತೆಯ, ಅಸಮಾನತೆಯ, ಹಿಂದೂ ಸಮಾಜದ ತಾರತಮ್ಯಗಳ ಪ್ರಶ್ನೆಗಳೆಲ್ಲಾ ಅಡಗಿವೆ. ಇದನ್ನು ನಿಲ್ಲಿಸಬೇಕೆ ಬೇಡವೆ ಎನ್ನುವುದು ನನ್ನಂತಹವನಿಗೆ ಚರ್ಚಾಸ್ಪದ ಪ್ರಶ್ನೆಯೇ ಅಲ್ಲ. ಕೆಲವರು ಕಳೆದ ವರ್ಷ ತಮ್ಮ ಅಹಂಕಾರದಲ್ಲಿ ಇದನ್ನು ಕೂದಲು ಸೀಳುವ ಪ್ರಶ್ನೆ ಮಾಡಿಕೊಂಡಿದ್ದರು. ಉದ್ದಟರು ಮತ್ತು ಮೂರ್ಖರು. ಒಂದು ಅಸಹ್ಯ ಸಾಮೂಹಿಕ ಕ್ರಿಯೆಯನ್ನು ಬಹಿರಂಗವಾಗಿ ಯಾವುದೇ ಸಂಕೋಚ-ನಾಚಿಕೆಗಳಿಲ್ಲದೆ ಸಮರ್ಥಿಸಿಕೊಳ್ಳುವಷ್ಟು ನಮ್ಮ ಸಮಾಜ ಹಿನ್ನಡೆದಿದೆ ಎಂದರೆ ಏನು ಹೇಳುವುದು?

ಇಲ್ಲಿ ನಾಜೂಕಾಗಿ ಮಾತನಾಡುವವರೂ ಹಲವರಿದ್ದಾರೆ. ಪೇಜಾವರ ವಿಶ್ವೇಶ್ವರ ತೀರ್ಥರೆಂಬ ಪೂರ್ಣಾವಧಿ ಮತೀಯ ರಾಜಕೀಯ ಕಾರ್ಯಕರ್ತ ಮತ್ತು ಅಲ್ಪಾವಧಿ ಮಠಾಧೀಶರನ್ನು ಕೆಲವು ಟಿವಿ ಚಾನಲ್‌ಗಳು ಸಂದರ್ಶಿಸಿದವು. ಅವರು ಹೇಳಿದ್ದು, ’ಈ ವಿಷಯದ ಬಗ್ಗೆ ನಾನು ತಟಸ್ಥ’. ತಾನು ಅದರ ಪರವೂ ಇಲ್ಲ, ವಿರುದ್ಧವೂ ಇಲ್ಲ ಎನ್ನುವ ಇವರು ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? Status quo ಕಾಯ್ದುಕೊಳ್ಳಬೇಕು ಎನ್ನುವುದರಲ್ಲಿಯೇ ಎಂಜಲು ಮಡೆಸ್ನಾನದ ಪರವಾದ ಬಲವಾದ ನಿಲುವು ಇದೆ. ಅವರ ಇಡೀ ಮಾತಿನ ಅರ್ಥ ಅದೇ ಇತ್ತು. ತಾನು ತಟಸ್ಥ ಎಂದು ಹೇಳುವುದು ತಾನು ಎಂಜಲು ಮಡೆಸ್ನಾನದ ಪರ ಇದ್ದೇನೆ ಎನ್ನುವುದನ್ನು ಧ್ವನಿಸುತ್ತದೆ ಎಂದು ಗೊತ್ತಾಗದಷ್ಟು ಮುಗ್ಧ ಅಥವ ಮೂರ್ಖರೇ ಇವರು? ಯಾರಾದರೂ ಈ ವಿಷಯದ ಬಗ್ಗೆ ತಾನು ತಟಸ್ಥ, ನೋ ಕಾಮೆಂಟ್ಸ್ ಎಂದರೆಂದರೆ ಅವರು ಎಂಜಲು ಸ್ನಾನದ ಪರ ಇದ್ದಾರೆ ಎಂದೇ ಅರ್ಥ.

ಇನ್ನು ರಾಜಕಾರಣಿಗಳ ವಿಷಯ. ಇಂದು ಕರ್ನಾಟಕದ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಇದರ ಬಗ್ಗೆ ಗಂಭೀರವಾಗಿ ಮಾತನಾಡುತ್ತಿಲ್ಲ. ಇದು ಕೇವಲ ಸಾಮಾಜಿಕ ಅಥವ ಮತಾಚರಣೆಯ ಪ್ರಶ್ನೆ ಅಲ್ಲ. ಇಂತಹ ಒಂದು ವಿಷಯದ ಬಗ್ಗೆ ತೆಗೆದುಕೊಳ್ಳುವ ನಿಲುವು ನಮ್ಮ ಭವಿಷ್ಯದ ನಿಲುವುಗಳನ್ನೂ ನಿರ್ದೇಶಿಸುತ್ತದೆ. ಈ ಇಡೀ ಚರ್ಚೆಯನ್ನು ಪ್ರಗತಿಪರ ಮತ್ತು ಉದಾರವಾದಿ ಹಿನ್ನೆಲೆಯಲ್ಲಿ ನೋಡಿ ರಾಜ್ಯದ ಜನತೆಯ ಮುಂದೆ ಹೇಗೆ ಇದು ಅಸಹ್ಯ ಮತ್ತು ಒಂದು ಕೆಟ್ಟ ಪರಂಪರೆಯೊಂದರ ಪಳೆಯುಳಿಕೆ, ಯಾಕಾಗಿ ಇದನ್ನು ನಿಲ್ಲಿಸಬೇಕು ಮತ್ತು ವಿರೋಧಿಸಬೇಕು, ಜನ ಮತ್ತು ಸರ್ಕಾರ ಈಗ ಮಾಡಬೇಕಿರುವುದು ಏನು ಎಂದು ಹೇಳಬಲ್ಲ ಒಬ್ಬನೇ ಒಬ್ಬ ರಾಜಕಾರಣಿ ನಮ್ಮ ಮಧ್ಯದಲ್ಲಿಲ್ಲ.

ಇದೇ ಈ ಹೊತ್ತಿನ ದೊಡ್ಡ ದುರಂತ.

ನಾವು ಅಧಿಕಾರ ರಾಜಕಾರಣಿಗಳನ್ನು ಬೆಳೆಸುತ್ತಿದ್ದೇವೆ. ಆದರೆ ನಮ್ಮ ವರ್ತಮಾನವನ್ನು ಸಹನೀಯಗೊಳಿಸಬಲ್ಲ ಮತ್ತು ನಮ್ಮ ಮತ್ತು ನಮ್ಮ ಮುಂದಿನ ತಲೆಮಾರಿಗೆ ಭವಿಷ್ಯವನ್ನು ಕಟ್ಟಿಕೊಡಬಲ್ಲ ಮುಂದಾಳುಗಳನ್ನು ಬೆಳೆಸುತ್ತಿಲ್ಲ. ನಾವು ಬೆಳೆಸುತ್ತಿರುವುದೆಲ್ಲ ಓಟಿನ ಮೇಲೆ ಗಮನವಿಟ್ಟುಕೊಂಡಿರುವ ಸ್ವಾರ್ಥಿಗಳನ್ನು, ಗಂಭೀರ ವಿಷಯದ ಬಗ್ಗೆ ಮಾತನಾಡಲು ಧೈರ್ಯ ಸಾಲದ ಹೆದರುಪುಕ್ಕಲರನ್ನು, ಇಲ್ಲವೆ ಇವು ಯಾವೊಂದೂ ಅರ್ಥವಾಗದ ಮೂರ್ಖರನ್ನು. ಇಂದು ಕರ್ನಾಟಕದಲ್ಲಿ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಪ್ರಗತಿಪರ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದರೆ ಅದಕ್ಕೆ ಎರಡು ಕಾರಣಗಳಿವೆ. ಒಂದು, ಈ ರಾಜಕಾರಣಿಗಳು ಇಂತಹುದರ ಬಗ್ಗೆ ಮಾತನಾಡಬಲ್ಲಷ್ಟು ಅರ್ಹತೆ ಪಡೆದಿಲ್ಲದಿರುವುದು, ಎರಡನೆಯದು, ಅರ್ಹತೆ ಇದ್ದರೂ ಅವರ ಮಾತನ್ನು ಸಾವಧಾನದಿಂದ ಕೇಳುವಂತಹ ಮತ್ತು ಪ್ರಶಂಸಿಸುವಂತಹ ವಾತಾವರಣವೆ ಇಲ್ಲಿ ಇಲ್ಲದಿರಬಹುದು. ಎರಡೂ ಒಳ್ಳೆಯ ಲಕ್ಷಣಗಳಲ್ಲ.

ನಮ್ಮ ಭವಿಷ್ಯದ ದಿನಗಳು ನಿಜಕ್ಕೂ ಕರಾಳವಾಗಲಿವೆ. ಕಳೆದ ಆರೇಳು ವರ್ಷದಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಳೆ ಹೇಳಿಕೊಳ್ಳುವ ರೀತಿಯಲ್ಲಿ ಕೈಕೊಟ್ಟಿಲ್ಲ. ಆದರೆ ಇದೊಂದು ಚಕ್ರದ ರೀತಿ. ಎಲ್ ನೀನ್ಯೊ ಪರಿಣಾಮವಾಗಿ ಮುಂದಿನ ವರ್ಷಗಳಲ್ಲಿ ಮಳೆ ಕೈಕೊಡಲಿದೆ. ಇದನ್ನು ಹೇಳಲು ಕಾಲಜ್ಞಾನಿಯೇ ಬೇಕಿಲ್ಲ. ವಿಜ್ಞಾನ ಮತ್ತು ಕಳೆದ ಹಲವು ದಶಕಗಳ ಮಳೆಬೆಳೆಗಳ ಗಮನಿಕೆಯೇ ಸಾಕು. ಇದರ ಜೊತೆಗೆ ಊಹಿಸಲು ಸಾಧ್ಯವಾಗದಂತಹ ದಿನಗಳು ಜಾಗತಿಕ ತಾಪಮಾನ ಏರಿಕೆಯಿಂದ ನಮ್ಮದಾಗಲಿವೆ. ವಿಶೇಷವಾಗಿ ಮಳೆಯಾಶ್ರಿತ ಬಯಲುಸೀಮೆಯ ಜನರ ಸ್ಥಿತಿ ದುರ್ಭರವಾಗಲಿದೆ. ಪ್ಪ್ರತಿಯೊಂದು ಆಹಾರಪದಾರ್ಥಕ್ಕೂ ಕೈಚಾಚುವ ನಗರವಾಸಿಗಳ ಸ್ಥಿತಿಯೂ ಘೋರವಾಗಲಿದೆ. ಆ ದಿನಗಳ ಸವಾಲಿಗೆ ನಮ್ಮ ಇಂದಿನ ರಾಜಕಾರಣಿಗಳು ಸಿದ್ದರಿದ್ದಾರೆಯೇ? ಅಂದಿಗೆ ನಾಯಕತ್ವ ಕೊಡಬಲ್ಲ, ಸತ್ಯ ನುಡಿಯಬಲ್ಲ, ವಿಜ್ಞಾನ ಗಮನಿಸಬಲ್ಲ, ಸ್ವಾರ್ಥ ತೊರೆಯಬಲ್ಲವರಂತಹವರನ್ನು ನಾವು ನಮ್ಮ ಪ್ರತಿನಿಧಿಗಳನ್ನಾಗಿ ಆರಿಸಿಕೊಂಡಿದ್ದೇವೆಯೇ? ಅಥವ, ಅಂದಿನ ದಿನಗಳು ಬಯಸುವ ನಾಯಕತ್ವವನ್ನು ಸಾಧ್ಯವಾಗಿಸುವಂತಹ ಪೂರಕ ವಾತಾವರಣವನ್ನು ನಾವು ನಿರ್ಮಿಸುತ್ತಿದ್ದೇವೆಯೇ?

ಹೌದು ಎಂದು ಹೇಳಲು ನನಗೆ ಯಾವ ಸೂಚನೆ ಸಂಕೇತಗಳೂ ಕಾಣಿಸುತ್ತಿಲ್ಲ. ನಮ್ಮ ಸಮಾಜ ಆತ್ಮಹತ್ಯಾತ್ಮಕ ರೀತಿಯಲ್ಲಿಯೇ ವರ್ತಿಸುತ್ತಿದೆ.

ಈ ಹಿನ್ನೆಲೆಯಲ್ಲಿಯೇ, ನನ್ನೆಲ್ಲ ಸಾಮಾಜಿಕ ಜವಾಬ್ದಾರಿಗಳನ್ನು ಮರೆತು ಕೇವಲ ಒಬ್ಬ ತಂದೆಯಾಗಿ ಯೋಚಿಸಿದಾಗಲೆಲ್ಲ ನನ್ನ ಭಯಾತಂಕಗಳು ಹೆಚ್ಚುತ್ತಲೇ ಹೋಗುತ್ತವೆ. ಎಂಜಲು ಮಡೆಸ್ನಾನದಂತಹ ಸರಳ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳಲಾಗದ ಸಮಾಜ ಮತ್ತು ಸರ್ಕಾರಗಳು ಇದಕ್ಕಿಂತ ಗಂಭೀರವಾದ ವಿಷಯಗಳ ಬಗ್ಗೆ ಏನೆಲ್ಲಾ ಮಾಡಬಹುದು? ಅವರು ಏನು ಮಾಡಿದರೂ ಅದು ಸರಿಯಾದ ಕ್ರಮ ಆಗಿರುವುದಿಲ್ಲ. ಯಾಕೆಂದರೆ ಹಾಗೆ ನಿರ್ಧಾರ ತೆಗೆದುಕೊಳ್ಳುವವರ್‍ಯಾರಿಗೂ ಅಂತಹ ವಿಷಯಗಳ ಬಗ್ಗೆ ಮೂಲಭೂತ ಜ್ಞಾನ ಇರುವುದೂ ಸಂದೇಹವೆ.

ಆದರೂ, ಈ ಎಲ್ಲಾ ಭಯಾತಂಕಗಳ ನಡುವೆಯೂ ನನಗಿರುವ ಏಕೈಕ ಧೈರ್ಯ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಅದನ್ನು ನಾವು ಸ್ವಚ್ಚವಾಗಿ ಉಳಿಸಿಕೊಂಡರೆ ಭವಿಷ್ಯ ಎಂತಹ ಸವಾಲು ಒಡ್ಡಿದರೂ ಕೊನೆಗೆ ಒಂದು ನಾಗರೀಕತೆಯಾಗಿ ನಾವು ಉಳಿಯುತ್ತೇವೆ, ಗೆಲ್ಲುತ್ತೇವೆ.

ನಮ್ಮ ಮುಂದಿನ ದಿನಮಾನಗಳನ್ನು define ಮಾಡುವ ವಿದ್ಯಮಾನ ಒಂದಿದ್ದರೆ ಅದು ಜಾಗತಿಕ ತಾಪಮಾನ ಏರಿಕೆ ಮತ್ತು ಬದಲಾಗುವ ಹವಾಮಾನ. ಆ ಕಾರಣದಿಂದಾಗಿಯೇ ನಮ್ಮ “ವರ್ತಮಾನ.ಕಾಮ್”ನಲ್ಲಿ ಈ ವಿದ್ಯಮಾನದ ಕುರಿತಾಗಿ ನಿಯಮಿತವಾಗಿ ಚರ್ಚೆಯಾಗುವಂತೆ ನೋಡಿಕೊಳ್ಳುವ ಜರೂರು ಇದೆ ಎನ್ನಿಸುತ್ತಲೆ ಇದೆ. ಯಾರಾದರು ಓದುಗರು ಇದರ ಬಗ್ಗೆ ಗಮನ ಹರಿಸಿದ್ದರೆ ದಯವಿಟ್ಟು ಬರೆಯಿರಿ. ಇಲ್ಲವೆ, ಕರ್ನಾಟಕದಲ್ಲಿ ಅಂತಹವರ್ಯಾರಾದರೂ ಇದ್ದರೆ ತಿಳಿಸಿ, ಅವರ ಕೈಯ್ಯಲ್ಲಿ ಬರೆಸಲು ಪ್ರಯತ್ನಿಸೋಣ. ನಾನು ಆಗಲೇ ಹೇಳಿದಂತೆ ಬೇರೆಲ್ಲಾ ವಿಷಯಗಳಿಗಿಂತ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುವ, ಬದಲಾಯಿಸುವ ಸಂಗತಿ ಇದೇ ಎನ್ನುವುದು ನನ್ನ ಅಭಿಪ್ರಾಯ. ಅದಕ್ಕೆ ನಾವು ನಮ್ಮದೇ ನೆಲೆಯಲ್ಲಿ ರಾಜಕೀಯ-ಸಾಮಾಜಿಕ-ಆರ್ಥಿಕ ನೆಲೆಗಳಲ್ಲಿ ಸಿದ್ಧವಾಗುವುದು ಸೂಕ್ತ. ನಮ್ಮ ಭವಿಷ್ಯದ ಸವಾಲುಗಳನ್ನು ಎದುರಿಸಲು ಸೂಕ್ತವಾದಂತಹ ಪೂರಕವಾದ ರಾಜಕಿಯ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ನಾವು ವಿಫಲರಾದರೆ, ಒಂದು ನಾಗರೀಕತೆಯಾಗಿಯೂ ನಾವು ವಿಫಲರಾದಂತೆಯೆ.

One thought on “ನನ್ನ ಭಯಾತಂಕಗಳು, ಮಡೆಸ್ನಾನ, ನಮ್ಮ ರಾಜಕಾರಣ…

  1. Ananda Prasad

    ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವ ಸ್ಥಿತಿಯಲ್ಲಿ ಇಂದಿನ ನಮ್ಮ ಜಗತ್ತು ಇಲ್ಲ. ಹೀಗಾಗಿ ಇದರ ಜೊತೆಗೇ ಬದುಕಬೇಕಾಗಿರುವುದು ಅನಿವಾರ್ಯವಾಗಲಿದೆ. ಮುಂಬರುವ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಪಳೆಯುಳಿಕೆ ಇಂಧನಗಳ ಬಳಕೆ ಇನ್ನಷ್ಟು ಹೆಚ್ಚಬಹುದೆ ಹೊರತು ಕಡಿಮೆಯಾಗುವ ಸಂಭವ ಇಲ್ಲ. ಹಾಗಾಗಬೇಕಾದರೆ ಒಂದೋ ಪಳೆಯುಳಿಕೆ ಇಂಧನಗಳೇ ಮುಗಿಯಬೇಕು ಅಥವಾ ಪಳೆಯುಳಿಕೆ ಇಂಧನಗಳಿಗಿಂತ ಅಗ್ಗವಾದ ಪರ್ಯಾಯ ಇಂಧನ ಮೂಲಗಳನ್ನು ವಿಜ್ಞಾನಿಗಳು ರೂಪಿಸಬೇಕು. ಹಾಗಾಗದ ಹೊರತು ಜಾಗತಿಕ ತಾಪಮಾನದ ವಿರುದ್ಧ ಹೋರಾಡುವುದು ಪ್ರವಾಹದ ವಿರುದ್ಧದ ವಿಫಲ ಹೋರಾಟವಷ್ಟೇ ಆಗುತ್ತದೆ ಏಕೆಂದರೆ ಇಂದು ಮನುಷ್ಯರು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಪಳೆಯುಳಿಕೆ ಇಂಧನ ಬಳಕೆ ಕಡಿಮೆ ಮಾಡುವ ಯಾವ ಪ್ರಯತ್ನಗಳನ್ನೂ ಮಾಡುತ್ತಿಲ್ಲ ಬದಲಿಗೆ ಅದನ್ನು ಹೆಚ್ಚಿಸುವಲ್ಲೇ ಆಸಕ್ತನಾಗಿದ್ದಾನೆ. ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮ ಮುಂಬರುವ ವರ್ಷಗಳಲ್ಲಿ ಬಡವರ್ಗಕ್ಕೇ ಹೆಚ್ಚು ಪರಿಣಾಮ ಬೀರುವುದೂ ಖಚಿತ.

    Reply

Leave a Reply to Ananda Prasad Cancel reply

Your email address will not be published. Required fields are marked *