ಬಳ್ಳಾರಿ (ಗ್ರಾ) ಉಪ ಚುನಾವಣೆ: ಗಣಿ ಎಂಜಲೆಲೆಯ ಮೇಲೆ ಉರುಳಾಡಿದ ರಾಜಕಾರಣಿಗಳು

-ಪರುಶುರಾಮ ಕಲಾಲ್

ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಕೊಳಕುತನವನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ.

ಗಣಿಯ ಕಪ್ಪ ಪಡೆಯದ ರಾಜಕಾರಣಿ ಯಾರು? ಎನ್ನುವಂತೆ ಎಲ್ಲಾ ಪಕ್ಷಗಳು ಗಣಿಧಣಿಗಳೊಂದಿಗೆ ಗುರುತಿಸಿಕೊಂಡೆ ಉಪ ಚುನಾವಣೆಯನ್ನು ಎದುರಿಸಿದರು. ಹೆಚ್ಚು ಗಣಿ ಹಣ ಖರ್ಚು ಮಾಡಿದ ಬಿ. ಶ್ರೀರಾಮುಲು ಬಿಜೆಪಿಯನ್ನು ಅವರೇ ಸೃಷ್ಠಿಸಿಕೊಂಡ “ಆಪರೇಷನ್ ಕಮಲ”ದ ತಂತ್ರದ ಮೂಲಕವೇ ಆಪರೇಷನ್ ಮಾಡಿ, ಚಿಂದಿ ಮಾಡಿ ಹಾಕಿದರು.

ಬಳ್ಳಾರಿ ಉಪ ಚುನಾವಣೆಯ ಮತದಾರರಿಗೆ ಆಯ್ಕೆಗಳೇ ಇರಲಿಲ್ಲ. ಅವರಾದರೂ ಏನು ಮಾಡಿಯಾರು? ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಪೈಕಿ ಯಾರನ್ನಾದರೂ ಆಯ್ಕೆ ಮಾಡಲೇ ಬೇಕಿತ್ತು. ಅವರಿಗೆ ರಾಮುಲು ಹೆಚ್ಚು ಸಭ್ಯನಾಗಿ ಕಂಡಿರಬೇಕು.

ಈ ಚುನಾವಣೆಯಲ್ಲಿ ಮತದಾರರು ಕುಕ್ಕೆ ಸುಬ್ರಮಣ್ಯಂ ದೇವಾಲಯದ ಮಲೆಕುಡಿಯರಂತೆ ಆಗಿದ್ದರು. ಗಣಿಯ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳನ್ನೇ ನೋಡಿದ ಮೇಲೆ ನಾವು ಅದರಲ್ಲಿ ಉರುಳಾಡಿದರೆ ತಪ್ಪೇನೂ ಇಲ್ಲ ಎಂದೇ ಅನ್ನಿಸಿಬಿಟ್ಟಿತು. ಬೇರೆ ಆಯ್ಕೆಯೇ ಇಲ್ಲದಾಗ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇಳಿಯುತ್ತಾರೆ. ಮತದಾರರು ಕೂಡಾ ಇದೇ ಹಾದಿ ತುಳಿದರು. ರಾಮುಲು ಮತ್ತೊಮ್ಮೆ ಗೆದ್ದರು. ಮತದಾರರು ಮಾತ್ರ ಸೋತು ಸುಣ್ಣವಾದರು.

ಬಿ.ಶ್ರೀರಾಮುಲು ಗೆಲುವಿಗೆ ನಾಲ್ಕು ಮುಖ್ಯ ಕಾರಣಗಳು ಇವೆ. ಮೊದಲನೆಯದು ಹಣದ ಬಲ, ತೋಳ್ಬಲ. ಈ ಚುನಾವಣೆಯಲ್ಲಿ ಬರೊಬ್ಬರಿ 120 ಕೋಟಿಯಷ್ಟು ಹಣವನ್ನು ಅವರು ಖರ್ಚು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿ ಹಳ್ಳಿಗಳಿಗೆ ತೆರಳಿ ಹಣದ ಬಟವಾಡೆಯನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಎಲ್ಲವೂ ಎಷ್ಟು ವ್ಯವಸ್ಥಿತವಾಗಿ ಮಾಡಲಾಯಿತು ಎಂದರೆ ಮತದಾರರ ಸಹಿ ಮೂಲಕವೇ ಹಣ ವಿತರಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಸಹಿ, ಹೆಬ್ಬಟ್ಟಿನ ಗುರುತು ಅಂದರೆ ಅದಕ್ಕೆ ಬಹಳ ಮಹತ್ವವಿದೆ. ಆಸ್ತಿ ಮಾರಾಟ, ಕೊಟ್ಟ ಮಾತು ಎಲ್ಲವನ್ನೂ ಅದು ಧ್ವನಿಸುತ್ತದೆ. ಸಹಿ ಮಾಡಿದ ಮೇಲೆ ಅದಕ್ಕೆ ಅವರು ಬದ್ಧ ಎನ್ನುವ ಸಂದೇಶವೊಂದನ್ನು ಅದು ರವಾನಿಸುತ್ತದೆ. ಊಳಿಗಮಾನ್ಯ ಸಮಾಜದ ಗುಣಲಕ್ಷಣಗಳನ್ನು ಮೈಗೊಡಿಸಿಕೊಂಡಿರುವ ಈ ಕ್ಷೇತ್ರದ ಮತದಾರರು ರಾಮುಲುಗೆ ಬದ್ಧತೆ ತೋರಿಸಬೇಕಿತ್ತು.

ಎರಡನೆಯ ಕಾರಣವೆಂದರೆ ವಾಲ್ಮೀಕಿ ನಾಯಕ ಸಮಾಜದ ಮತದಾರರು (ಇದು ಪರಿಶಿಷ್ಟ ಪಂಗಡದ ಕ್ಷೇತ್ರವೂ ಹೌದು) ರಾಮುಲು ಅವರನ್ನು ಪಕ್ಷಾತೀತವಾಗಿ ತಮ್ಮ ನಾಯಕನೆಂದು ಒಪ್ಪಿಕೊಂಡರು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಒಬ್ಬರೇ ನಾಯಕರಿಲ್ಲ. ಆದರೆ ರಾಮುಲು ಗಣಿಧಣಿಗಳ ಜೊತೆ ಗುರುತಿಸಿಕೊಂಡು ತಮ್ಮದೇ ಆದ ಪ್ರಭಾವ ಗಳಿಸಿಕೊಂಡಿದ್ದಾರೆ. ರಾಮುಲು ಪವರ್ ಏನೆಂದು ಇವರಿಗೆ ಗೊತ್ತು. ಹೀಗಾಗಿ ಇತನೇ ನಮ್ಮ ನಾಯಕ ಎಂದು ಮತದಾರರು ಭಾವಿಸಿದರು. ಇವರ ಜೊತೆಗೆ ಭೋವಿ ಸಮಾಜ ಕೈಗೂಡಿಸಿತು.

ಮೂರನೆಯ ಕಾರಣ, ಬಳ್ಳಾರಿಯ ಮುಸ್ಲಿಂ ಮತದಾರರು. ಇವರು ರೆಡ್ಡಿ ಬ್ರದರ್ಸ್‌ರನ್ನು ಮೊದಲಿಂದಲೂ, ಅವರು ಬಿಜೆಪಿಯಲ್ಲಿದ್ದಾಗಲೇ ಬೆಂಬಲಿಸಿದ್ದರು. ಇದಕ್ಕೆ ಸ್ಥಳೀಯ ಕಾರಣಗಳು ಮುಖ್ಯವಾಗಿವೆ. ರೆಡ್ಡಿ ಬ್ರದರ್ಸ್ ಎಷ್ಟೇ ರಾಜಕಾರಣ ಮಾಡಲಿ, ಕೋಮುವಾದ ರಾಜಕಾರಣಕ್ಕೆ ಆಸ್ಪದ ಕೊಟ್ಟಿರಲಿಲ್ಲ. ರೆಡ್ಡಿ ಬ್ರದರ್ಸ್ ಮತ್ತು ರಾಮುಲುರವರಿಗೆ ತಾಯಿ ಸುಷ್ಮಾ ಸ್ವರಾಜ್‌ರನ್ನೇ ದರ್ಗಾಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿ, ತಲೆಯ ಮೇಲೆ ಹಸಿರು ಟವೆಲ್ ಹಾಕಿಸಿದ ಕೀರ್ತಿಯೂ ಸೇರುತ್ತದೆ. ರಾಮುಲು ಬಿಜೆಪಿಯಿಂದ ಹೊರ ಬಂದಿದ್ದು ಅವರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟ ವಿಷಯವಾಗಿತ್ತು. ಮರು ಆಲೋಚನೆ ಮಾಡದೇ ರಾಮುಲು ಅವರನ್ನು ಮತ್ತೊಮ್ಮೆ ಅಪ್ಪಿಕೊಂಡರು.

ನಾಲ್ಕನೆಯದು, ಜೆಡಿಎಸ್.

ಜೆಡಿಎಸ್ ಜಾತ್ಯಾತೀತತೆ:
ಜೆಡಿಎಸ್ ಬಿಜೆಪಿ ಮಧುಚಂದ್ರದ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹೊಸಪೇಟೆಯಲ್ಲಿ ಬೃಹತ್ ನಾಯಕ ಸಮಾಜದ ರಾಜ್ಯಮಟ್ಟದ ಸಮಾವೇಶ ನಡೆಸಿದರು. ನಾಯಕ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದಾಗ ಪ್ರಯತ್ನ ನಡೆಸಿದ್ದರು. ರಾಜ್ಯದ ರಾಜಕಾರಣದಲ್ಲಿ ಕುರುಬ ಸಮುದಾಯ ತಮ್ಮ ನಾಯಕನೆಂದೇ ಭಾವಿಸಿರುವ ಸಿದ್ಧರಾಮಯ್ಯ ಅವರನ್ನು ಹಿಂದಕ್ಕೆ ಸರಿಸಲು ಇದು ಅವರಿಗೆ ಅತ್ಯಗತ್ಯವಾಗಿತ್ತು.  “ಅಹಿಂದ”ವನ್ನು ಒಡೆಯಲು ಸಹ ಇದು ಅಗತ್ಯವಾಗಿತ್ತು. ನಾಯಕ ಸಮುದಾಯ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಕೀರ್ತಿಯನ್ನು ಈ ಹಿನ್ನೆಲೆಯಲ್ಲಿ ಪಡೆಯಲು ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಒಂದು ನೆಲೆ ಕಂಡುಕೊಳ್ಳುವುದೇ ಆಗಿತ್ತು. ಆದರೆ ನಂತರ ನಡೆದ ರಾಜಕೀಯ ಬದಲಾವಣೆಗಳು ಈ ಪ್ರಯೋಗಕ್ಕೆ ಆಸ್ಪದ ಕೊಡಲಿಲ್ಲ. ಪರಿಶಿಷ್ಟ ಪಂಗಡದ ಶಾಸಕರು ಬಿಜೆಪಿ ತೆಕ್ಕೆಗೆ ಸೇರಿಕೊಂಡರು. ನಾಯಕ, ಲಂಬಾಣಿ, ಭೋವಿ ಸಮಾಜಗಳು ಬಿಜೆಪಿಯಲ್ಲಿ ಗುರುತಿಸಿಕೊಂಡವು. ಈ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ಈ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಜೆಡಿಎಸ್ ಪ್ರಯತ್ನ ವಿಫಲವಾಗಿತ್ತು

ಈ ಉಪ ಚುನಾವಣೆಯಲ್ಲಿ ರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಂತೆ ಜೆಡಿಎಸ್ ತನ್ನ ಹಳೆಯ ಪ್ರಯೋಗವನ್ನು ಇಲ್ಲಿ ಪ್ರಯೋಗಿಸಲು ರಾಮುಲುವನ್ನೇ ಅಸ್ತ್ರ ಮಾಡಿಕೊಂಡರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ರಾಮುಲು ಹೊಸ ಪಕ್ಷ ಸ್ಥಾಪಿಸಲು ಇವರೇ ನೀರು ಎರೆಯುತ್ತಿದ್ದಾರೆ. ಜೆಡಿಎಸ್ ಪಕ್ಷ ಸೇರ್ಪಡೆಗಿಂತ ಹೊಸ ಪಕ್ಷವೇ ಅವರಿಗೆ ಖುಷಿ ಕೊಡುವ ಸಂಗತಿಯಾಗಿದೆ. ಹೊಂದಾಣಿಕೆ ಮಾಡಿಕೊಂಡು ರಾಜ್ಯದ ರಾಜಕಾರಣವನ್ನು ನಿರ್ವಹಿಸಲು ಯೋಜಿಸಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಛಿದ್ರಗೊಳಿಸುವ ಯಾವುದೇ ಶಕ್ತಿ ಇರಲಿ. ಅದು ಜೆಡಿಎಸ್ ಮಿತ್ರ ಪಕ್ಷ.

ಜೆಡಿಎಸ್ ಜಾತ್ಯಾತೀತತೆ ಅಂದರೆ ಜಾತಿ ಲೆಕ್ಕಚಾರವೇ ಆಗಿದೆ.

ಇನ್ನು, ಪಾಪ ಕಾಂಗ್ರೆಸ್ ಪಕ್ಷ ಮಾತ್ರ ಒಂದು ಶತಮಾನದಷ್ಟು ಹಿಂದಿನ ಗತ ವೈಭವದಲ್ಲಿಯೇ ಇನ್ನೂ ಲೆಕ್ಕಚಾರ ಹಾಕುತ್ತಾ ಕುಳಿತುಕೊಂಡಿದೆ.

2 thoughts on “ಬಳ್ಳಾರಿ (ಗ್ರಾ) ಉಪ ಚುನಾವಣೆ: ಗಣಿ ಎಂಜಲೆಲೆಯ ಮೇಲೆ ಉರುಳಾಡಿದ ರಾಜಕಾರಣಿಗಳು

  1. Ananda Prasad

    ದೇಶದ ಗಣಿಸಂಪತ್ತನ್ನು ಕೊಳ್ಳೆ ಹೊಡೆದು ಜೈಲುಪಾಲಾಗಿರುವ ವ್ಯಕ್ತಿಗಳು ಹಾಗೂ ತತ್ವ ಸಿದ್ಧಾಂತ ಇಲ್ಲದ ಸಮಯಸಾಧಕ ಪಕ್ಷಗಳು ಮೈತ್ರಿ ಮಾಡಿಕೊಂಡು ಮುಂದೆ ರಾಜ್ಯದ ರಾಜಕೀಯವನ್ನು ಹಿಡಿತಕ್ಕೆ ತೆಗೆದುಕೊಂಡರೆ ಬಳ್ಳಾರಿಯ ಮತದಾರರಿಗೆ ಬಂದ ಅಸಹಾಯಕ ಪರಿಸ್ಥಿತಿ ಇಡೀ ಕರ್ನಾಟಕದ ಮತದಾರರಿಗೂ ಬರುವುದರಲ್ಲಿ ಸಂದೇಹವಿಲ್ಲ. ಹೀಗಾಗದಂತೆ ಎಚ್ಚರ ವಹಿಸುವುದು ರಾಜ್ಯದ ಪ್ರಜ್ಞಾವಂತರ ಕರ್ತವ್ಯವಲ್ಲವೇ? ಸದ್ದಾಂ ಹುಸೇನ್, ಗದ್ದಾಫಿಯಂತೆ ಚಿನ್ನದ ಕುರ್ಚಿ, ತಟ್ಟೆ, ಲೋಟಗಳನ್ನು ಹೊಂದಿರುವ ಗಣಿ ಕಳ್ಳರು ದೇಶದ ಗಣಿಸಂಪತ್ತನ್ನು ಅಕ್ರಮವಾಗಿ ಕೊಳ್ಳೆ ಹೊಡೆದು ಪರದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿಹಾಕಿದ್ದು ದೇಶದ್ರೋಹವಲ್ಲದೆ ಮತ್ತೇನೂ ಅಲ್ಲ. ಇಂಥ ವ್ಯಕ್ತಿಗಳನ್ನು ಚುನಾವಣೆಗಳಲ್ಲಿ ಗೆಲ್ಲಿಸುವ ಮತದಾರರೂ ಭ್ರಷ್ಟರೂ, ದೇಶದ್ರೋಹಿಗಳೇ ಅಲ್ಲವೇ? ಇಂಥ ಜನ ಇದ್ದರೆ ದೇಶ ಉದ್ಧಾರ ಆದೀತೆ? ಅಕ್ರಮ ಗಣಿ ಕಳ್ಳರಿಗೆ ನ್ಯಾಯಾಲಯಗಳು ಶಿಕ್ಷೆ ವಿಧಿಸಿದರೆ ಮಾತ್ರ ದೇಶ ಬಚಾವಾಗಬಹುದು. ಇಲ್ಲದೆ ಹೋದರೆ ಭ್ರಷ್ಟ ಹಾಗೂ ದೇಶದ್ರೋಹಿ ಮತದಾರರು ತುಂಬಿರುವ ನಮ್ಮ ದೇಶದಲ್ಲಿ ಮುಂದೆ ಪ್ರಜಾಪ್ರಭುತ್ವವೂ ಅರ್ಥಹೀನವಾಗುವುದರಲ್ಲಿ ಸಂದೇಹವಿಲ್ಲ.

    Reply
  2. Mathihalli Madan Mohan

    Mr Kalal deserves congratulations for the lucid analysis to explain the performanance of Sriramulu in the Bellary bye election.
    But the amount of money that Sriramulu is supposed to have spent is in the realm of speculation. It is a mere guess work. Ones guess is as good as other.
    If this is to be believed Sriramulu and the Reddy group should still be rolling in money despite the ban on the mining activities and the investigation being done by the CBI under the watchful eye of the Supreme Court.

    But one thing should be noted is that this is the kind of support that no money can buy. It looks as is if the whole community of voters rose as one man to rally behind Sriramulu tothe much to the chagrin and humiliation of national parties.

    It would be interesting to fathom the reasons for such a rally. Explanation given by Kalal that the Valmikis have backed him to the hilt is only one part of it. But much more appears to be definitely there. Track record of the work of Sriramulu as a legislator and Minsiter is atrociously bad. The threesome group of Sriramulu and
    Reddy mentors were busy in using the power as minister for self aggrandisement than as an opportunity toserve the community. How could under circustances Sriramulu could get overwhelming support is a matter to be pondered over.

    It would be too premature at this juncture to come tothe conclusion that the magic that Sriramulu did in Bellary rural could be replicated in the state, a premises on which Kumaraswamy has been banking, on thebasis ofwhich he has started wooing Sriramulu.

    It would be nothing but a disaster if it materialised since it would throw back Karnatatka in the lap of the coalition government, which is nothing a free for all situation for anybody to do anything in the name of the government.

    This is also a sad commentary on the manner in which the major political parties are losing their hold. And this is product of the crisis of leadership that the parties are facing at all level.
    One this is clear. The BJP in Karnataka deserved it for the cavalier manner in which it discharged the responsibilities after the voters trusted them to govern.

    Reply

Leave a Reply to Mathihalli Madan Mohan Cancel reply

Your email address will not be published. Required fields are marked *