Daily Archives: December 9, 2011

ಬದಲಾಗುತ್ತಿರುವ ಕಾಲಮಾನದಲ್ಲಿ ಶಾಸ್ತ್ರೀಯ ಸಂಗೀತ

 -ಶ್ರೀಮತಿ ದೇವಿ

“ಸಂಗೀತ ಎನ್ನುವುದು ಮನುಷ್ಯನ ಪ್ರಜ್ನೆಯನ್ನು ವಿಕಾಸಗೊಳಿಸುವ ಕಲೆಗಳಲ್ಲಿ ಒಂದಾಗಿರುವುದು ಮಾತ್ರವಲ್ಲ, ಅದು ಆ ಕಲಾಕಾರನ ಸೃಜನಶೀಲತೆಯ ಅಭಿವ್ಯಕ್ತಿಗಾಗಿ ಇರುವ ಮಾಧ್ಯಮವೂ ಆಗಿರುತ್ತದೆ. ಇದರಿಂದಾಗಿದೆಯೇ ಕಾಲ ಬದಲಾಗುತ್ತಾ ಮುಂದೆ ಸಾಗಿದಂತೆ, ಹೇಗೆ ಪರಿವರ್ತಿತವಾಗುವ ಸಮಾಜದೊಂದಿಗೆ ಬದುಕುತ್ತಿರುವ ವ್ಯಕ್ತಿಗಳ ಜೀವನವೂ, ಆಲೋಚನಾ ವಿಧಾನವೂ, ವ್ಯಕ್ತಿತ್ವವೂ, ಸಮಾಜದ ಬದಲಾವಣೆಗೆ ಸ್ಪಂದಿಸುವ ರೀತಿಯೂ ಬದಲಾಗುತ್ತದೋ ಹಾಗೆಯೇ ಅದರೊಂದಿಗೆ ಸಮಾನಾಂತರವಾಗಿ ಸಂಗೀತಾದಿ ಕಲೆಗಳು ಬದಲಾಗುತ್ತವೆ, ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತವೆ.” ಎಂಬ ಈ ಆಸಕ್ತಿದಾಯಕವಾದ ವಿಚಾರದೆಡೆಗೆ ಇತ್ತೀಚೆಗೆ ನನ್ನ ಗಮನವನ್ನು ಸೆಳೆದು ಆಲೋಚನೆಗೆ ಹಚ್ಚಿದವರು, ಬಹುದೊಡ್ಡ ಸಂಗೀತಗಾರರೂ ನನ್ನ ಗುರುಗಳೂ ಆದ ಪಂ. ನಾರಾಯಣ ಪಂಡಿತರು.

ಪಂಡಿತರು, ದ್ರುಪದ್ ಗಾಯನದ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲದ ವರೆಗಿನ ಸಂಗೀತದ ಪ್ರವಾಸವನ್ನು ಸುಂದರವಾಗಿ “ಸ್ಥೂಲತೆಯಿಂದ ಸೂಕ್ಷ್ಮತೆಯೆಡೆಗಿನ ಪ್ರವಾಸ” ಎಂದು ಕರೆಯುತ್ತಾರೆ.

ದ್ರುಪದ್ ಎಂಬುದು ಇಂದಿನ ಖ್ಯಾಲ್ ಗಾಯನಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಗಾಯನಪ್ರಕಾರ. ಬಹಳ ಧೀಮಂತವಾಗಿ, ಗಂಭೀರವಾಗಿ ಸಾಗುವ ಈ ಪಧ್ಧತಿಯಲ್ಲಿ ರಾಜ ಗಾಂಭೀರ್ಯವಿದೆ. ಹಾಗೆಯೇ ಇದು ಎಲ್ಲೂ ಗಮಕ್, ಖಟ್ಗಾ, ಮುರ್ಕಿಗಳು ಎಂಬಂತಹ ಉಪರಸ್ತೆಗಳ ಕಡೆ ತಿರುಗಿಯೂ ನೋಡದೇ ರಾಜಮಾರ್ಗದಲ್ಲಿ ಸಾಗುತ್ತದೆ.

ದೇವರ ವರ್ಣನೆ, ಆಶ್ರಯದಾತನಾದ ರಾಜನ ಹಿರಿಮೆಯನ್ನು ಹೊಗಳುವ ವಿಚಾರಗಳನ್ನುಳ್ಳ ದ್ರುಪದ್ ರಚನೆಯಲ್ಲಿ ಸಾಮಾನ್ಯ ಮಾನವನ ದೈನಂದಿನ ಜೀವನ, ತುಮುಲ, ಆತನ ಭಾವನೆಗಳು ಇವನ್ನೆಲ್ಲಾ ಕಾಣಲು ಸಾಧ್ಯವಿಲ್ಲ. ಇದಕ್ಕೆ ಸಾಥಿಗಾಗಿ ಬಳಸಲಾಗುತ್ತಿದ್ದ ಪಖವಾಜನ್ನು ಗಮನಿಸಿದಾಗಲು ಈ ಅಂಶಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಪಖವಾಜ್ ನೋಡಲು ಮೃದಂಗದಂತಹ ತಾಳವಾದ್ಯವಾಗಿದ್ದು, ಇದರಲ್ಲಿ ಖುಲ್ಲಾಬಾಜ್ ನ ಬೋಲ್ ಗಳನ್ನು ಬಾರಿಸಲಾಗುತ್ತದೆ. ’ಧಾ, ಧಿಂ, ತಿಟತಕ’ ಮೊದಲಾದ ಪದಗಳನ್ನು ದೊಡ್ಡ ಸ್ವರದೊಂದಿಗೆ ಗಂಭೀರವಾಗಿ ಬಾರಿಸಲಾಗುತ್ತದೆ.

ಕಾಲ ಸರಿದಂತೆ, ದ್ರುಪದ್ ಗಾಯನದಿಂದ ಖ್ಯಾಲ್ ಗಾಯನದೆಡೆಗೆ ಜನರ ಒಲವು ಬೆಳೆದಂತೆ ಸಂಗೀತದಲ್ಲಿ ಬದಲಾವಣೆಯ ಗಾಳಿ ಸಣ್ಣದಾಗಿ ಬೀಸಲು ಆರಂಭವಾಯಿತು. ಇದನ್ನು ಪಂಡಿತರು, “objectivity ಇಂದ subjectivity ಯ ಕಡೆಗೆ” ಎಂದು ಗುರುತಿಸುತ್ತಾರೆ. ಖ್ಯಾಲ್ ರಚನಾಕಾರನು ಇಲ್ಲಿ “ತನಗೇನು ಅನಿಸುತ್ತಿದೆ, ಹೇಗೆ ಕಾಣುತ್ತಿದೆ” ಎಂಬುದನ್ನು ಹೇಳಲೇಬೇಕಾದ ಒತ್ತಡವನ್ನು ಕಂಡುಕೊಂಡ. ಇದರಿಂದಾಗಿಯೇ ಸ್ವಲ್ಪಮಟ್ಟಿಗೆ ಜಾಸ್ತಿಯೇ ಎನ್ನಬಹುವಾದ ಶೃಂಗಾರ, ವಿರಹಮಯವಾದ ರಚನೆಗಳು ಬರಲು ಕಾರಣವಾಯಿತು. ಆದರೆ ಇವುಗಳೊಂದಿಗೆ ಗೆಳೆತನ, ಮಾತೃವಾತ್ಸಲ್ಯ, ಮಗುವಿನ ತುಂಟಾಟ, ಈ ಎಲ್ಲಾ ಭಾವನೆಗಳ ಅಭಿವ್ಯಕ್ತಿಗೂ ಆಸ್ಪದದೊರಕುವಂತಾಯಿತು.

ಖ್ಯಾಲ್ ಗಾಯನದಲ್ಲಿ, ದ್ರುಪದ್ ಗಾಯನದಲ್ಲಿ ಇರುವುದಕ್ಕಿಂತ ಹೆಚ್ಚು ಹಾಡುಗಾರನಿಗೆ ಸ್ವಾತಂತ್ರ್ಯವಿರುವುದರಿಂದ ಆತನೂ ಈ ರಚನೆ ” ನನ್ನ ಕಣ್ಣಿಗೆ ಹೇಗೆ ಕಾಣುತ್ತಿದೆ” ಎಂದು ತಿಳಿದು ಹಾಡಲು ಆರಂಭಿಸಿದ. ಪಂಡಿತರು ಹೇಳುವಂತೆ ಈ ರೀತಿಯಾಗಿ ಸಂಗೀತದಲ್ಲಿ “humanizing process” ಆರಂಭವಾಯಿತು. ಪಖವಾಜ್ ಗಿಂತ ಬೇರೆಯಾದ ತಬಲ ಸಾಥ್, ಸೂಕ್ಷ್ಮವಾದ ಬೋಲ್ ಗಳೊಂದಿಗೆ ಸಂಗೀತಕ್ಕೆ ಮತ್ತಷ್ಟು ತರಲತೆಯನ್ನು ನೀಡತೊಡಗಿತು. ಅಭಿವೃದ್ಧಿಯೆಡೆಗೆ ಧಾಪುಗಾಲು ಇಟ್ಟು ಸಾಗುತ್ತಿದ್ದ ಸಮಾಜದಲ್ಲಿ ಮೈಕ್ರೋಫೋನ್ ಇತ್ಯಾದಿಗಳ ಆವಿಷ್ಕಾರದಿಂದ, ಹಾಡಲು ಹಿಂದೆ ಬೇಕಾಗಿದ್ದ ಶಾರೀರಿಕ ಶ್ರಮ ಕಡಿಮೆಯಾಗಿ ಮನಸ್ಸಿನ ಪಿಸುಮಾತುಗಳನ್ನು ಹೇಳಲು ಸಾಧ್ಯವಾಯಿತು. ಇದನ್ನೇ ಪಂಡಿತರು “expressionism in music”ಎನ್ನುತ್ತಾರೆ.

ಗಾಯಕರ ಕೇಳುಗರ ಕಿವಿಗಳು ಸೂಕ್ಷ್ಮವಾಗುತ್ತಾ ಸಾಗಿದಂತೆ, ಒಂದುಕಾಲದಲ್ಲಿ “ಕೋಟೆ ಸಂಗೀತ” ಎಂದು ಮಡಿವಂತರಿಂದ ದೂರ ಇರಿಸಲ್ಪಟ್ಟಿದ್ದ ಠುಮ್ರಿ ಮೊದಲಾದ ಪ್ರಕಾರಗಳು ವೇದಿಕೆಯ ಮೇಲೆ ಸ್ಥಾನ ಪಡೆದುಕೊಳ್ಳತೊಡಗಿದವು. ರಚನೆಯ ಸಾಹಿತ್ಯಕ್ಕೂ ಗಮನ ನೀಡಲಾಯಿತು. ಹಲವು ರೀತಿಯ ಭಾವನೆಗಳಿಗೆ ಅಭಿವ್ಯಕ್ತಿ ನೀಡಲು ರಚನೆಯ ಶಬ್ದಗಳ ನೆರವು ಪಡೆಯಲಾಯಿತು. ಶಾಸ್ತ್ರೀಯ ಸಂಗೀತ ತಿಳಿಯದ ಸಾಮಾನ್ಯರ ಮನಸ್ಸನ್ನು ತಲುಪುವಂತಹ ಈ ರಚನೆಗಳು ಬಹುಬೇಗ ಜನಪ್ರಿಯತೆ ಗಳಿಸಿದವು. ಅಂತೆಯೇ, ಹಿಂದೊಮ್ಮೆ ದ್ರುಪದ್ ಪ್ರಭಾವದ ಖ್ಯಾಲ್ ಸಂಗೀತವನ್ನು ನೋಡಿದಂತೆ ಇಂದು ಠುಮ್ರಿ ಸಂಗೀತದ ಪ್ರಭಾವದಲ್ಲಿರುವ ಖ್ಯಾಲ್ ಗಾಯನವನ್ನು ನೋಡಬಹುದಾಗಿದೆ. ಠುಮ್ರಿಯಲ್ಲಿ ಹೇಳುವ ಭಾವನೆಗಳನ್ನೇ ಮತ್ತಷ್ಟು ಧ್ರುತ್ ಆಗಿ ಟಪ್ಪಾ ದಲ್ಲಿ ಹೇಳಲಾಗುತ್ತದೆ.

ಒಂದು ರಾಗದ ಚೌಕಟ್ಟಿನ ಒಳಗೇ, ಸ್ವರಗಳ ಚಲನೆ ಹಾಗೂ ಸ್ಪಂದನೆಗಳನ್ನು ನೋಡಬಹುದಾದ ಸೂಕ್ಷ್ಮತೆಯ ಎಡೆಗೆ ಇಂದು ನಾವು ಸಾಗುತ್ತಿದ್ದೇವೆ. ಶಾಸ್ತ್ರದ ಬಿಗಿ ಕಟ್ಟುಪಾಡು ಇಲ್ಲದೆ ಬಹಳ aggressive ಆಗಿ ಮನಸ್ಸಿನ ಭಾವನೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಹೊರಹಾಕಲು ಇಲ್ಲಿ ಸಾಧ್ಯವಿದೆ ಹಾಗೂ ಅದು ಕೇಳುಗರನ್ನೂ ತಟ್ಟುತ್ತದೆ ಎಂಬ ಕಾರಣವೂ ಇಂದು ಉಪಶಾಸ್ತ್ರೀಯ ಸಂಗೀತ, fusion ಇತ್ಯಾದಿಗಳ ಜನಪ್ರಿಯತೆಯ ಹಿಂದಿದೆ ಎಂದು ಅನಿಸುತ್ತದೆ.

ನಾರಾಯಣ ಪಂಡಿತರು ಪರಿಭಾವಿಸುವಂತೆ ಸಿನಿಮಾದ ಅಥವಾ ಯಾವುದೇ ಬಹುಜನಪ್ರಿಯವಾದ ಹಾಡಿನ ಧಾಟಿಯನ್ನು ಗಮನಿಸಿದಾಗ ಅದು ಹೆಚ್ಚಾಗಿ ನಮ್ಮ ಮಣ್ಣಿನ folk tune ಇಂದ ಬಂದಿರುತ್ತದೆ. ಶಾಸ್ತ್ರೀಯ ಸಂಗೀತಗಾರರು ತಮ್ಮ ಸಂಗೀತವನ್ನು ಬಹು ಶಿಷ್ಟವಾದದ್ದು ಎಂದು ಪರಿಗಣಿಸುವುದರಿಂದ ಇಂತಹ tune ಕಡೆಗೆ ನಿರ್ಲಕ್ಷ್ಯವನ್ನು ತಾಳಿರುತ್ತಾರೆ. ಈ ಅಂಶವನ್ನು ಗಮನಿಸಿದಾಗ ನಮಗೆ ಅನಾಯಾಸವಾಗಿ ನೆನೆಪಾಗುವುದು ಪಂ. ಕುಮಾರ ಗಂಧರ್ವರು ಮಾಡಿದ ಮಹತ್ಕಾರ್ಯ. ಅವರು ಮಧ್ಯಪ್ರದೇಶದ ಜನಪದ ಗೀತೆಗಳನ್ನು ಅಭ್ಯಸಿಸಿ, ಅವುಗಳಿಂದ ಸುಂದರವಾದ tune ಗಳನ್ನು ಎತ್ತಿಕೊಂಡು ಅವುಗಳನ್ನು ರಾಗಗಳನ್ನಾಗಿ ಮಾಡಿದರು. ಆಧುನಿಕ ಕಾಲದ ಸಂಗೀತದ ಹರಿಕಾರರಾದ ಕುಮಾರ್ ಜೀಯವರು ಸಂಗೀತದ ಸೂಕ್ಷ್ಮತೆಯೆಡೆಗಿನ ಪ್ರವಾಸದ ಬಹುದೊಡ್ಡ ನೇತಾರರು.

ರಾಗವೆಂದರೆ, ಕೆಲವು ನಿರ್ದಿಷ್ಟ ಸ್ವರಗಳನ್ನೊಳಗೊಂಡ ಆರೋಹ ಅವರೋಹದಿಂದ ಕೂಡಿದ ಅಸ್ಥಿಪಂಜರವಲ್ಲ; ಇದು ರಾಗದ ಚೌಕಟ್ಟಿನ ಒಳಗೆ ಇದ್ದುಕೊಂಡೇ, ಹಲವು ಮಧುರವಾದ ಸಂಚಾರಗಳಿಂದ ಆದ ಭಾವಭಿವ್ಯಕ್ತಿಗಾಗಿ ಇರುವ ಮಾಧ್ಯಮ. ಅಂತೆಯೇ ರಾಗದ ಗುರುತಿಸುವಿಕೆ, ಸ್ವರಗಳ ಆಧಾರದ ಮೇಲಲ್ಲ, ಭಾವದ ಆಧಾರದಲ್ಲಿ ಎಂಬುದು ಪಂಡಿತರ ನಿಲುವು.

ಹಾಗೆಯೇ ಇಂದು ಠುಮ್ರಿ, ಟಪ್ಪಾ, ದಾದ್ರಾ ಗಾಯನಗಳಲ್ಲಿ ರಾಗದ ಒಳಗಿನ ಸ್ವರಗಳ ವಿವಿಧ ರೀತಿಯ ಸಂಯೋಜನೆಯ ಜೊತೆಗೆ ಹಲವು ಅನ್ಯಸ್ವರಗಳ ಬಳಕೆಯೂ ಆಗುತ್ತದೆ. ಉದಾ., ಕಾಫಿ ರಾಗದಲ್ಲಿ ಕೋಮಲ ದೈವತ ಹಾಗೂ ಶುದ್ಧ ನಿಶಾದದ ಬಳಕೆ ಇತ್ಯಾದಿ.

ಪಂಡಿತರು ಗಮನಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಯಾವುದೇ ಒಂದು ರಾಗದಲ್ಲಿ ಬರುವ ರಚನೆ – ಅದರ ಸಾಹಿತ್ಯ – ತಾಳದ ರೂಪ ಬದಲಾದಂತೆ ಆ ರಾಗದ ರೂಪವೂ ಬದಲಾಗುತ್ತದೆ ಎನ್ನುವುದು. ಆ ನಿರ್ದಿಷ್ಟ ರಚನೆಗೆ ನ್ಯಾಯನೀಡಲು ಬೇಕಾದ ರೀತಿಯಲ್ಲಿ ರಾಗವು ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಆ ನಿರ್ದಿಷ್ಟ ರಚನೆಯಲ್ಲಿ ಬರುವ ಸಾಹಿತ್ಯಕ್ಕೆ ನ್ಯಾಯ ನೀಡಲು ಬೇಕಾದ ರಸವನ್ನು ನೀಡಲು ರಾಗ ಸಮರ್ಥವಾಗುತ್ತದೆ. ಅಂತೆಯೇ ಯಾವ ರಾಗಗಳಿಗೂ ನಿರ್ದಿಷ್ಟ ರಸಗಳು ಎನ್ನುವುದು ಇಲ್ಲ. ಎಲ್ಲಾ ರಾಗಗಳ ಹಿಂದೆ ಸ್ಥಾಯೀ ಆಗಿರುವುದು ಒಂದೇ ರಸ, ಅದೆಂದರೆ ಶಾಂತ ರಸ. ಇದಕ್ಕೆ ಉದಾಹರಣೆಯಾಗಿ ಅವರು ಸಂಗೀತ ಕ್ಷೇತ್ರದಲ್ಲಿ ಅತಿ ಗಂಭೀರರಾಗವೆಂದು ಪರಿಗಣಿತವಾದ ದರ್ಬಾರಿ ಕಾನಡದ ’ಅನೋಖಾ ಲಾಡಲಾ ಮಾಯಿ’ ಎಂಬ ಪಾರಂಪರಿಕ ರಚನೆಯನ್ನು ನೀಡುತ್ತಾರೆ. ಇದು ಸಣ್ಣ ಮಕ್ಕಳ ಆಟದ ವರ್ಣನೆ ಇರುವ ರಚನೆಯಾಗಿದೆ.

ಬಹಳ ಹಿಂದಿನ ಸಮಯದಿಂದ ಆರೋಪಿತವಾಗಿರುವ ಇಂತಹ ಕೆಲವು sterotype ವಿಚಾರಗಳನ್ನು ಇಟ್ಟುಕೊಳ್ಳದೆ, ಸಂಗೀತಕ್ಕೆ ಯಾವುದೇ ಚ್ಯುತಿಬಾರದಂತೆ ವಿಚಾರಗಳನ್ನು ಚಿಂತನೆಯ ಒರೆಗೆ ಹಚ್ಚಿ ’ಇದು ನನಗೆ ಹೇಗೆ ಕಾಣುತ್ತಿದೆ’ ಎಂಬುದಕ್ಕೆ ಗಮನಕೊಡುವುದು ಇಂದಿಗೆ ಅಗತ್ಯವಾಗಿದೆ.

ಇವತ್ತು ಹೊಸ ಹೊಸ ಆವಿಷ್ಕಾರಗಳ ಮೂಲಕ ತಂತ್ರಜ್ನಾನ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ಸೂಕ್ಷ್ಮತೆಯೆಡೆಗೆ ಸಾಗುತ್ತಿದ್ದೇವೆ. ನ್ಯಾನೊ ಟೆಕ್ನಾಲಜಿ, ಪಾಮ್ ಟಾಪ್, ಇತ್ಯಾದಿಗಳು ಇನ್ನೂ ಸೂಕ್ಷ್ಮತೆಯತ್ತ ಚಲಿಸುತ್ತಲೇ ಇವೆ. ಆದರೆ ಈ ಸೂಕ್ಷ್ಮತೆ ನಮ್ಮ ಪ್ರಜ್ಞೆಯ ಭಾಗವಾಗಿ ಆಗಬೇಕಾಗಿದೆ. ಕೇವಲ ಬೌದ್ಧಿಕ ಮಟ್ಟದಲ್ಲಿ ಎಲ್ಲವನ್ನು ಸೀಳಿ ಪರೀಕ್ಷಿಸಿ ಒಳಹೊಕ್ಕು ನೋಡಬೇಕು ಎಂಬ ಬರಿಯ ಅಹಂಕಾರದ ಬುಧ್ಧಿವಂತಿಕೆ ಬಿಟ್ಟು ಭಾವನಾತ್ಮಕವಾಗಿ ಅಧ್ಯಾತ್ಮಿಕವಾಗಿ ಸೂಕ್ಷ್ಮತೆಯೆಡೆಗೆ ಸಾಗಿದಾಗ ಮಾತ್ರ ಈ ಬೆಳವಣಿಗೆಗೆ ನಿಜವಾದ ಅರ್ಥ ಬಂದೀತು.