Daily Archives: December 13, 2011

ಸಮ್ಮೇಳನಗಳು 78 ಆದರೂ, ಸಾಹಿತ್ಯ ಪರಿಷತ್ತು ಸುಧಾರಣೆ ಆಗಿಲ್ಲ

ಭೂಮಿ ಬಾನು

ಗಂಗಾವತಿಯಲ್ಲಿ 78 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನಗಳು 78 ಆದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ, ಸಂಘಟಿಸುವಲ್ಲಿ ಇರುವ ಲೋಪಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲದಿರುವುದು ವಿಪರ್ಯಾಸ.

ಸಾಹಿತ್ಯ ಸಮ್ಮೇಳನದ ಈಗಿನ ಒಟ್ಟಾರೆ ಸ್ವರೂಪವೇ ‘ನಾನು ಬರೆಯಬಲ್ಲೆ’ ಎಂಬ ಏಕೈಕ ಕಾರಣಕ್ಕೆ ಹುಟ್ಟಿಕೊಳ್ಳುವ ಅಹಂ ಅನ್ನು ಪೋಷಿಸುವ ಉದ್ದೇಶದಿಂದ ರೂಪುಗೊಂಡದ್ದು. ಅದು ಸಾಹಿತಿಗಳು, ಬರಹಗಾರರು, ಕವಿಗಳು, ವಿಮರ್ಶಕರು ಎಂದು ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಅನೇಕರಿಗೆ ಒಂದು ವೇದಿಕೆ.

ಪರಿಷತ್ತು ‘ಸಾಹಿತ್ಯವನ್ನು’ ಪರಿಭಾವಿಸುವ ರೀತಿಯಲ್ಲಿಯೇ ಲೋಪಗಳಿವೆ. ಇದುವರೆಗೆ ಒಬ್ಬ ಅನಕ್ಷರಸ್ಥ ಕವಿ, ಅರ್ಥಾತ್ ಜನಪದ ಕವಿ ಸಮ್ಮೇಳನ ನೇತೃತ್ವ ವಹಿಸಿದ ಉದಾಹರಣೆ ಇದೆಯೇ? ಬರೆದದ್ದನ್ನೆಲ್ಲ ಪ್ರಿಂಟ್ ಮಾಡಿಸಿ, ಅಲ್ಲಲ್ಲಿ ಪ್ರಶಸ್ತಿ, ಮನ್ನಣೆ ಗಳಿಸಿದವರು ಮಾತ್ರ ಸಾಹಿತಿ. (ಖ್ಯಾತ ಬರಹಗಾರ, ಪತ್ರಕರ್ತ ಖುಷ್ವಂತ್ ಸಿಂಗ್ ಸಂಸತ್ ಸದಸ್ಯರಾಗಿದ್ದಾಗ ಒಮ್ಮೆ ಮಾತನಾಡುತ್ತ ‘ಸರಕಾರ ಸಾಹಿತಿಗಳಿಗೆ ನೀಡುವ ಪ್ರಶಸ್ತಿ, ಪುರಸ್ಕಾರಗಳು ಕಳೆ ಮೇಲೆ ಸಿಂಪಡಿಸುವ ರಸಗೊಬ್ಬರ’ ಎಂದಿದ್ದರು.) ಅಂತಹದೊಂದು ಪಟ್ಟ ಬಂದಾಕ್ಷಣ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಅರ್ಹತೆ ಸಾಹಿತಿಗೆ ತಂತಾನೆ ಬಂದು ಬಿಡುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಅನೇಕರು ಗಮನಿಸಿರಬಹುದು, ಕಾವೇರಿ ಗಲಾಟೆ, ಅಮೆರಿಕಾದೊಂದಿಗೆ ಅಣು ಒಪ್ಪಂದ, ಬೆಂಗಳೂರಿನ ಅಸ್ತವ್ಯಸ್ತ ರಸ್ತೆ ಸಂಪರ್ಕ… ಹೀಗೆ ಎಲ್ಲವುದರ ಬಗ್ಗೆಯೂ ಅಭಿಪ್ರಾಯ ಹೊಂದಿರುತ್ತಾರೆ. ಅದು ಅಕ್ಷರ ಜ್ಞಾನದೊಂದಿಗೆ ಉಚಿತವಾಗಿ ಒದಗುವ ಅಹಂನ ಕಾರಣ. ಇತ್ತೀಚೆಗೆ ಜನಪ್ರಿಯ ಸಾಹಿತಿ ಎಸ್. ಎಲ್. ಭೈರಪ್ಪ ಭಾರತದ ಸ್ವಾತಂತ್ರೋತ್ತರ ಇತಿಹಾಸದ ಬಗ್ಗೆ ತಮ್ಮ ಸೀಮಿತ ಅರಿವಿನ ಆಧಾರದ ಮೇಲೆಯೇ ತೀರ್ಪು ಹೊರಡಿಸುವ ಧಾಟಿಯಲ್ಲಿ ಅಂಕಣ ಬರೆಯುತ್ತಿರುವುದಕ್ಕೂ ಇಂತಹದೇ ಅಹಂ ಕಾರಣ.

ಹಿಂದೊಮ್ಮೆ ಹಾ.ಮಾ.ನಾಯಕರು ಕನಿಷ್ಟ ಒಂದು ಪುಸ್ತಕವನ್ನಾದರೂ ಪ್ರಕಟಿಸಿದವರು ಮಾತ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಬೇಕು ಎಂದು ಹೇಳಿದ್ದರು. ಈ ಮಾತು ಅಲ್ಲಲ್ಲಿ ಟೀಕೆಗೆ ಗುರಿಯಾಗಿತ್ತು. ಸಾಹಿತ್ಯ ಪರಿಷತ್ತು ಸೀಮಿತ ಪರಿಧಿಯಾಚೆಗೆ ಸಮ್ಮೇಳನವನ್ನು ರೂಪಿಸುವ ಅಗತ್ಯವಿದೆ. ಒಟ್ಟಾರೆ ಕನ್ನಡ ಸಮ್ಮೇಳನ ಆಗಬೇಕಿದೆ. ಕನ್ನಡ ಕೇವಲ ಭಾಷೆ ಅಲ್ಲ, ಸಮಾಜ ಮತ್ತು ಕನ್ನಡಿಗರ ಬದುಕು. ರೈತರ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಒಂದು ಗೋಷ್ಠಿ ಏರ್ಪಡಿಸಿ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಎಸ್ ಪುಟ್ಟಣ್ಣಯ್ಯ ನವರು ಮಾತನಾಡಲು ಅವಕಾಶ ಕೊಟ್ಟರೆ ಜವಾಬ್ದಾರಿ ಮುಗಿಯಿತೆ? ಅಥವಾ ರೈತರ ಸಮಸ್ಯೆಗಳ ಬಗ್ಗೆ ಒಂದು ನಿರ್ಣಯ ಮಂಡಿಸಿದರೆ ಸಾಕೆ?

ವಿಮರ್ಶಕ ಚಿದಾನಂದಮೂರ್ತಿಯವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನಿರಾಕರಿಸಿದಾಗ ಅದರ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ಸಾಹಿತ್ಯ ಪರಿಷತ್ತು, ಮಂಗಳೂರು, ಉಡುಪಿಗಳಲ್ಲಿ ನಡೆದ ಚರ್ಚ್ ಮೇಲಿನ ದಾಳಿಗಳನ್ನು ಖಂಡಿಸುವ ಉಸಾಬರಿಗೇ ಹೋಗುವುದಿಲ್ಲ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತ, ನಾವು ಸಮ್ಮೇಳನಕ್ಕೆ ಸಾಕಷ್ಟು ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಕೆಲಸಕ್ಕೆ ನಿಯೋಜಿಸಲಾಗಿರುವ ಪೊಲೀಸರಿಗೆ ಸಮ್ಮೇಳನಕ್ಕೆ ಆಗಮಿಸುವವರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕೆಂಬುದರ ಬಗ್ಗೆಯೂ ತರಬೇತಿ ನೀಡಿದ್ದೇವೆ ಎಂದರು. ಅದು ನಿಜ. ಪೊಲೀಸರಿಗೆ ಅಂತಹ ತರಬೇತಿ ಅಗತ್ಯ. ಆದರೆ ಸಾಹಿತಿಗಳ ಜೊತೆ ವ್ಯವಹರಿಸಲು ಮಾತ್ರ ಅಂತಹ ತರಬೇತಿಯೇ? ರೈತರ ಬಗ್ಗೆ, ಇತರೆ ಕನ್ನಡಪರ ಹೋರಾಟಗಾರರ ಬಗ್ಗೆ, ದಲಿತರ ಹಕ್ಕುಗಳಿಗಾಗಿ ಹೋರಾಡುವವರ ಜೊತೆ ವ್ಯವಹರಿಸುವಾಗ ಸಂಯಮ ಬೇಕಿಲ್ಲವೆ?

ಗಂಗಾವತಿಯಲ್ಲಿ ಮೂರು ಕವಿಗೋಷ್ಟಿಗಳು ನಡೆದವು. ಅದೊಂಥರಾ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಂತೆ. ಅರ್ಜಿ ಹಾಕಿದವರಿಗೆಲ್ಲ ನೂರು ದಿನಗಳ ಕೆಲಸ ಕೊಡಲೇ ಬೇಕು ಎಂಬಂತೆ, ಇಲ್ಲಿಯೂ ಬೇಡಿಕೆ ಸಲ್ಲಿಸಿದವರಿಗೆಲ್ಲಾ ಕವಿತೆ ಓದುವ ಅವಕಾಶ. ಅಲ್ಲಿ ಅನೇಕರು ‘ಕನ್ನಡ ಮಾತೆಗೆ’ ಜೈಕಾರ ಹಾಕುವವರೇ. ಸಾಹಿತ್ಯ ಸಮ್ಮೇಳನ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸ ಬೇಕಾದ ಪರಿಷತ್ತು ಇಂತಹ ತೀರಾ ಸಾಧಾರಣ ಕವಿತೆಗಳಿಗೆ ಮಣೆ ಹಾಕಿ ಅಭಿರುಚಿಯನ್ನೇ ಕೊಲ್ಲುತ್ತಿದೆ.

ನಮ್ಮ ಮಾಧ್ಯಮಗಳು ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಿಗೆ ಉತ್ತಮ ಪ್ರಚಾರ ಕೊಡುತ್ತವೆ. ಅಲ್ಲಿ ಕೇಳಿಬರುವ ಹೇಳಿಕೆಗಳಿಗೆ ಸುಖಾಸುಮ್ಮನೆ ಮನ್ನಣೆ ದೊರಕಿಬಿಡುತ್ತದೆ. ಆದರೆ ಆ ಸಾಧ್ಯತೆಯ ಲಾಭ ಪಡೆದುಕೊಂಡು ಮೌಢ್ಯದ ಗುಂಡಿಯಲ್ಲಿರುವ ಜನಸಾಮಾನ್ಯರನ್ನು ಮೇಲೆತ್ತುವ ಪ್ರಯತ್ನ ಮಾಡಿದ ಉದಾಹರಣೆಗಳು ಕಡಿಮೆ.

ಜಾತ್ಯತೀತ ನೆಲೆ:
ಸಮ್ಮೇಳವನ್ನು ಜಾತ್ಯತೀತ ನೆಲೆಗಟ್ಟಿನ ಮೇಲೆ ರೂಪಿಸುವಲ್ಲಿ ಆಸಕ್ತಿಯನ್ನೇ ತೋರಿಸಿಲ್ಲ. ಇವತ್ತಿಗೂ ಸಮ್ಮೇಳನ ಅಧ್ಯಕ್ಷರನ್ನು ಆರತಿ ಎತ್ತಿ, ಹಣೆಗೆ ಕುಂಕುಮವಿಟ್ಟು ಸ್ವಾಗತಿಸುತ್ತಾರೆ. ‘ಪೂರ್ಣ ಕುಂಭ’ ಹೊತ್ತ ‘ಮುತ್ತೈದೆಯರು’ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಅದಕ್ಕೂ ಮುನ್ನ ಅಡಿಗೆ ಕೋಣೆಯನ್ನು ಅಣಿಗೊಳಿಸಿದ ದಿನ ಸ್ಥಳೀಯ ಪುರೋಹಿತರು ಕಾಯಿ ಒಡೆದು, ಪೂಜೆ ಮಾಡಿ ಒಲೆ ಹೊತ್ತಿಸುತ್ತಾರೆ.

ಅಷ್ಟೇ ಅಲ್ಲ ಕನ್ನಡಾಂಬೆ, ಭುವನೇಶ್ವರಿ ಎಂಬ ಪರಿಕಲ್ಪನೆಯೇ ಜಾತ್ಯತೀತ ನಂಬಿಕೆಗಳಿಗೆ ವಿರುದ್ಧವಾಗಿವೆ. ಆ ನಂಬಿಕೆಗಳನ್ನು ಪ್ರತಿನಿಧಿಸುವ ಸಂಕೇತಗಳು ಸಮುದಾಯವನ್ನು ಒಗ್ಗೂಡಿಸುವುದರ ಬದಲಿಗೆ ವಿಭಜಿಸುವ ಉದ್ದೇಶವನ್ನೇ ಇಟ್ಟುಕೊಂಡಿವೆ. ಸಮಷ್ಟಿಯನ್ನು ಪ್ರತಿನಿಧಿಸುವ ಸಂಕೇತಗಳೊಂದಿಗೆ ಸಮ್ಮೇಳನವನ್ನು ಆಯೋಜಿಸುವ ತುರ್ತನ್ನು ಸಾಹಿತ್ಯ ಪರಿಷತ್ತು ಇದುವರೆಗೂ ಅರ್ಥಮಾಡಿಕೊಳ್ಳದಿರುವುದು, ಅಜ್ಞಾನವೋ, ಹೊಣೆಗೇಡಿತನವೋ.

ಬಿಜಾಪುರದಲ್ಲಿ ನಡೆಯಲಿರುವ 79 ನೇ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಅಲ್ಲಿಯವರೆಗೆ ಸಾಕಷ್ಟು ಚರ್ಚೆಯಾಗಲಿ, ಸಮ್ಮೇಳನ ಸ್ವರೂಪದಲ್ಲಿ ಒಂದಿಷ್ಟು ಸುಧಾರಣೆಗಳಾಗಲಿ.

(ಫೋಟೋ ಕೃಪೆ: ದಿ ಹಿಂದು)