Daily Archives: December 14, 2011

ಮುಲ್ಲಪೆರಿಯಾರ್ ಅಣೆಕಟ್ಟು – ತಮಿಳುನಾಡಿನ ತರ್ಕವಿಲ್ಲದ ತಕರಾರು

ಡಾ. ಎನ್. ಜಗದೀಶ್ ಕೊಪ್ಪ

ಭಾಷೆ ಮತ್ತು ಸಂಸ್ಕೃತಿ ಮೇಲಿನ ಅಭಿಮಾನಕ್ಕೆ ತಮಿಳರು ಇಡೀ ದೇಶಕ್ಕೇ ಮಾದರಿ. ಅದರೆ ಇಂತಹ ಅಭಿಮಾನವನ್ನು ಇತರೆ ಎಲ್ಲಾ ವಿಷಯಗಳಿಗೂ ವಿಸ್ತರಿಸಲಾಗದು. ವರ್ತಮಾನದ ದುರಂತವೆಂದರೆ, ತಮಿಳುನಾಡಿನ ರಾಜಕಾರಣಿಗಳು ಅಲ್ಲಿನ ಜನರ ಬಡತನ ಮತ್ತು ಹುಚ್ಚು ಅಭಿಮಾನವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರದ ಗದ್ದುಗೆ ಏರುವುದರಲ್ಲಿ ನಿಸ್ಸೀಮರು. ಪ್ರತಿ ಚುನಾವಣೆಯಲ್ಲಿ, ಶಿಕ್ಷಣ, ಆರೋಗ್ಯ. ಬಡತನ ನಿವಾರಣೆ ಇವುಗಳಿಗೆ ಅಲ್ಲಿನ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಮಹತ್ವವಿಲ್ಲ. ಏನಿದ್ದರೂ ಕಲರ್ ಟಿ.ವಿ., ಮಿಕ್ಸರ್ ಗ್ರೈಂಡರ್, ಒಂದು ರೂಪಾಯಿಗೆ ಕಿಲೋ ಅಕ್ಕಿ, ಅರಿಶಿನ ಪುಡಿ, ಸಾಂಬಾರ್ ಪೌಡರ್, ಮದುವೆಗೆ ತಾಳಿ, ಸೀರೆ ಇಂತಹುಗಳಿಗೆ ಮಾತ್ರ ಆದ್ಯತೆ.

ತಮಿಳರ ಭಾವನೆಯನ್ನ, ದುರ್ಬಲತೆಯನ್ನ ಚೆನ್ನಾಗಿ ಅರಿತಿರುವ ಮುಖ್ಯಮಂತ್ರಿ ಜಯಲಲಿತ ಈಗ ನೀರಿನ ರಾಜಕೀಯ ಶುರುವಿಟ್ಟುಕೊಂಡಿದ್ದಾರೆ. ಕಾವೇರಿ ನೀರು ಹಂಚಿಕೆ ಕುರಿತಂತೆ ಸದಾ ಕರ್ನಾಟಕದ ವಿರುದ್ಧ ಕಾಲು ಕೆರೆದು ನಿಲ್ಲುತ್ತಾ ಅಲ್ಲಿನ ತಮಿಳರನ್ನ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಈಕೆ ಇದೀಗ ಕೇರಳ ಜೊತೆ ಸಂಘರ್ಷ ಶುರುವಿಟ್ಟುಕೊಂಡು ಎರಡು ರಾಜ್ಯಗಳ ಗಡಿಭಾಗದಲ್ಲಿ ಉದ್ವಿಗ್ನತೆಗೆ ಕಾರಣವಾಗಿ ತಮಿಳರ ಪಾಲಿಗೆ ಪಕ್ಕಾ ಅಮ್ಮನಾಗಿದ್ದಾರೆ. ಜಯಲಲಿತ ಕೇರಳ ವಿರುದ್ದ ಎತ್ತಿರುವ ತಕರಾರು ಕ್ಷುಲ್ಲಕವಾಗಿದ್ದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾವು ಬದುಕುತಿದ್ದೆವೆ ಎಂಬುದನ್ನು ಈಕೆ ಮರೆತಂತಿದೆ.

ಕೇರಳದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿ ಸೇರುತ್ತಿರುವ ಪೆರಿಯಾರ್ ನದಿ ಈಗ ಕೇರಳ ಮತ್ತು ತಮಿಳುನಾಡು ನಡುವಿನ ವಿವಾದಕ್ಕೆ ಕಾರಣವಾಗಿದೆ.

ಈ ನದಿಗೆ ಪಶ್ಚಿಮ ಘಟ್ಟದ ಜೀವಜಾಲದ ತೊಟ್ಟಿಲು ಎನಿಸಿರುವ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಅಣೆಕಟ್ಟನ್ನು ಅಂದಿನ ತಿರುವಾಕೂರಿನ ರಾಜ ನಿರ್ಮಿಸಿದ್ದ. 116 ವರ್ಷಗಳ ಹಿಂದೆ ಬ್ರಿಟೀಷ್ ಇಂಜಿನಿಯರ್ ಕೋರ್‍ಸ್‌ ಸಂಸ್ಥೆ  ಅಂದಿನ ತಂತ್ರಜ್ಙಾನವಾದ ಸುಣ್ಣ ಮತ್ತು ಮರಳನ್ನು ನುಣ್ಣಗೆ ಅರೆದ ಗಾರೆ ಮತ್ತು ಇಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಸ್ವಾತಂತ್ರ ಪೂರ್ವದಲ್ಲಿ ತಮಿಳನಾಡಿನ ದಕ್ಷಿಣದ ಹಲವು ಭಾಗ ತಿರುವಾಂಕೂರು ( ಇಂದಿನ ತಿರುವನಂತಪುರ ) ಸಂಸ್ಥಾನಕ್ಕೆ ಸೇರಿದ್ದ ಕಾರಣ, ಮಧುರೈ, ಶಿವಗಂಗಾ, ತೇಣಿ, ರಾಮನಾಥಪುರ ಜಿಲ್ಲೆಗಳ ಪ್ರದೇಶಗಳಿಗೆ ಕುಡಿಯುವ ನೀರು, ನೀರಾವರಿ ಯೋಜನೆಗಳನ್ನ ಗುರಿಯಾಗಿರಿಸಿಕೊಂಡು ರಾಜ ಈ ಅಣೆಕಟ್ಟನ್ನು ನಿರ್ಮಿಸಿದ್ದ. ಸ್ವಾತಂತ್ರದ ನಂತರ ರಾಜ್ಯಗಳು ಪುನರ್ ವಿಂಗಡಣೆಯಾದಾಗ ಅಣೆಕಟ್ಟು ಪ್ರದೇಶ ಕೇರಳಕ್ಕೆ, ನೀರಾವರಿ ಪ್ರದೇಶಗಳು ತಮಿಳುನಾಡಿಗೆ ಸೇರ್ಪಡೆಯಾದವು..

1970 ರಲ್ಲಿ ಎರಡು ರಾಜ್ಯಗಳ ನಡುವೆ ಒಪ್ಪಂದವೇರ್ಪಟ್ಟು ತಮಿಳನಾಡಿನ 45 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯುತ್ತಿರುವುದರಿಂದ ತಮಿಳುನಾಡು ಸರ್ಕಾರ ಅಣೆಕಟ್ಟು ನಿರ್ವಹಣೆಗೆ ವಾರ್ಷಿಕ 10 ಲಕ್ಷ ರೂಪಾಯಿ ನೀಡುವಂತೆ ನಿರ್ಧರಿಸಲಾಗಿತ್ತು. ಅದರಂತೆ ತಮಿಳನಾಡು ಸರ್ಕಾರ ಕೇರಳ ಸರ್ಕಾರಕ್ಕೆ ಹಣ ಪಾವತಿಸುತ್ತಾ ಬಂದಿದೆ.

ಹಣ ನೀಡುತ್ತಿರುವುದನ್ನ ತನ್ನ ಹಕ್ಕು ಎಂದು ಭಾವಿಸಿರುವ ತಮಿಳುನಾಡು ಸಕಾರ, ನೀರಿನ ಬೇಡಿಕೆ ಹೆಚ್ಚಾದ ಕಾರಣ ಅಣೆಕಟ್ಟಿನ ಎತ್ತರವನ್ನ ಈಗಿನ 142 ಅಡಿಯಿಂದ 152ಅಡಿಗೆ ಎತ್ತರಿಸುವಂತೆ ಕೇರಳವನ್ನು ಒತ್ತಾಯಿಸುತ್ತಿದೆ.

116 ವರ್ಷ ಹಳೆಯದಾದ ಹಾಗೂ ಹಳೆಯ ತಂತ್ರಜ್ಙಾನದಿಂದ ನಿರ್ಮಿಸಲಾದ ಈ ಮುಲ್ಲ ಪೆರಿಯಾರ್ ಅಣೆಕಟ್ಟಿನಲ್ಲಿ ಹಲವೆಡೆ ಬಿರುಕು ಕಾಣಿಸಿಕೊಂಡಿದ್ದು ನೀರು ಸಂಗ್ರಹಕ್ಕೆ ಅಣೆಕಟ್ಟು ಯೋಗ್ಯವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1979 ರಿಂದ ಶಿಥಿಲಗೊಳ್ಳುತ್ತಾ ಬಂದಿರುವ ಈ ಅಣೆಕಟ್ಟಿನ ಸಮೀಪ ಇದೇ ವರ್ಷ ಜುಲೈ ತಿಂಗಳಲ್ಲಿ ಲಘು ಭೂಕಂಪ ಸಂಭವಿಸಿದ್ದು ಕೇರಳ ಸರ್ಕಾರ ಅಣೆಕಟ್ಟನ್ನು ಒಡೆದು ಹಾಕುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು ತಮಿಳರನ್ನು ಕೆರಳಿಸಿದೆ. ಕಳೆದ 15 ದಿನಗಳಿಂದ ಎರಡು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಘರ್ಷಣೆ ಸಂಭವಿಸುತಿದ್ದು ಸಂಚಾರ ಸ್ಥಗಿತಗೊಂಡಿದೆ. ಈ ದಿನಗಳಲ್ಲಿ ಅಯ್ಯಪ್ಪ ಭಕ್ತರ ಸ್ಥಿತಿ ಹೇಳಲಾರದಂತಾಗಿದೆ.

ಪೆರಿಯಾರ್ ಅಣೆಕಟ್ಟು ಅನಿರೀಕ್ಷಿತವಾಗಿ ಒಡೆದುಹೋದರೆ, ಕೇರಳದ 35 ಲಕ್ಷ ಮಂದಿಯ ಮಾರಣ ಹೋಮ ಖಚಿತ ಜೊತೆಗೆ ಇಡುಕ್ಕಿ ಪ್ರದೇಶದ ಬಳಿ ಇರುವ ಮೌನ ಕಣಿವೆಯಲ್ಲಿರುವ ಅಪರೂಪದ ಪಕ್ಷಿಪ್ರಭೇದ, ಜಲಚರಗಳು, ಪ್ರಾಣಿಗಳು, ಗಿಡಮೂಲಿಕೆ ಸಸ್ಯಗಳು ಹೀಗೆ ಜೀವಜಾಲದ ವ್ಯವಸ್ಥೆಯೊಂದು ಕುಸಿದು ಬೀಳಲಿದೆ. ಇವುಗಳ ಪರಿವೇ ಇಲ್ಲದಂತೆ ವರ್ತಿಸುತ್ತಿರುವ ತಮಿಳುನಾಡಿನ ಜಯಲಲಿತಾಗೆ ತನ್ನ  ಹಾಗು ತನ್ನ ಜನರ ಹಿತಾಸಕ್ತಿಯೇ ಮುಖ್ಯವಾದಂತಿದೆ. ಇಡೀ ಭಾರತದಲ್ಲಿ ತನ್ನ ನೆರೆಯ ರಾಜ್ಯಗಳ ಜೊತೆ ನೀರಿನ ವಿಷಯದಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವುದು ಈಕೆ ಮಾತ್ರ. ಒಂದು ಗಣತಂತ್ರ ವ್ಯವಸ್ಥೆಯಲ್ಲಿ ನಾವೆಲ್ಲಾ ಮೊದಲು ಭಾರತೀಯರು, ನಂತರ ಕನ್ನಡಿಗ, ತಮಿಳಿಗ, ಮರಾಠಿ, ಇತ್ಯಾದಿ ಎಂಬುದನ್ನ ಅರಿಯಬೇಕಾದ ತಾಳ್ಮೆ ಈಕೆಗೆ ಇದ್ದಂತಿಲ್ಲ..

ತಮ್ಮ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು, ಇಲ್ಲವೆ ಏರಲು ಭಾವನಾತ್ಮಕ ವಿಷಯಗಳಾದ ನೆಲ, ಜಲ, ಭಾಷೆ, ಧರ್ಮ ಇವುಗಳು ರಾಜಕಾರಣಿಗಳ ದಾಳಗಳಾಗುತ್ತಿರುವುದನ್ನ ಎಲ್ಲರೂ ಒಗ್ಗಟ್ಟಿನಿಂದ ಖಂಡಿಸಬೇಕಾಗಿದೆ. ಆಗ ಮಾತ್ರ ಈ ಜಯಲಲಿತಾ, ಬಾಳ್ ಠಾಕ್ರೆ, ಪ್ರವೀಣ್ ತೊಗಾಡಿಯಾ ರಂತಹ ಶನಿಸಂತಾನಗಳು ತೊಲಗಲು ಸಾಧ್ಯ.

ಈ ವಿಷಯದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ತನ್ನ ಕಾರ್ಯ ವೈಖರಿಯನ್ನ ಬದಲಿಸಿಕೊಳ್ಳಬೇಕಾಗಿದೆ. ಕಡು ಭ್ರಷ್ಟಾಚಾರದಲ್ಲಿ ಜೈಲು ಸೇರಿರುವ ರಾಜಕಾರಣಿಗಳಿಗೆ ಜಾಮೀನು ನೀಡುವ ಅಥವಾ ಅವರ ಮೊಕದ್ದಮೆಯನ್ನ ತ್ವರಿತವಾಗಿ ಮುಗಿಸುವ ಕಾಳಜಿ ರಾಜ್ಯ ರಾಜ್ಯಗಳ ನಡುವಿನ ನೆಲ-ಜಲ ವಿವಾದ ಬಗೆಹರಿಸುವಲ್ಲಿ ಏಕೆ ಇಲ್ಲ? ಕರ್ನಾಟಕ ಮಹರಾಷ್ಟ್ರ ಗಡಿ ವಿವಾದ 40 ವರ್ಷಗಳಿಂದ ನ್ಯಾಯಾಲಯದಲ್ಲಿ ಕೊಳೆಯುತ್ತಿದೆ ಎಂದರೆ, ನಮ್ಮ ನ್ಯಾಯಾಧೀಶರುಗಳು ಒಮ್ಮ ತಮ್ಮ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಕರ್ನಾಟಕ ಸರ್ಕಾರ ಗಡಿವಿವಾದಕ್ಕೆ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಕುರಿತ ವಿವಾದಕ್ಕೆ ಕೇವಲ 10 ವರ್ಷಗಳಲ್ಲಿ ವಕೀಲರಿಗಾಗಿ ಖರ್ಚು ಮಾಡಿರುವ ಹಣ 50 ಕೋಟಿ ರೂಪಾಯಿ ದಾಟಿದೆ ಎಂದರೆ, ಈ ನೆಲದಲ್ಲಿ ವಿವೇಕ-ಅವಿವೇಕಗಳ ನಡುವಿನ ಗಡಿರೇಖೆ ಅಳಿಸಿಹೋಗಿದೆ ಎಂದರ್ಥ.

(ಚಿತ್ರಕೃಪೆ: ವಿಕಿಪೀಡಿಯ)