Daily Archives: December 18, 2011

Three Gorges Dam

ಜೀವನದಿಗಳ ಸಾವಿನ ಕಥನ – 16

-ಡಾ. ಎನ್. ಜಗದೀಶ್ ಕೊಪ್ಪ

ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳ ಪ್ರವಾಹ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟಗಳು ಎದುರುಸುತ್ತಿರುವ ಅತಿ ದೊಡ್ಡ ನೈಸರ್ಗಿಕ ವಿಕೋಪ. ಇದಕ್ಕಾಗಿ ಪ್ರತಿ ವರ್ಷ ಕೊಟ್ಯಾಂತರ ರೂಪಾಯಿ ವ್ಯಯವಾಗುತ್ತಿದೆ.

ಭಾರತದ ಪೂರ್ವ ಭಾಗದ ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್, ತ್ರಿಪುರ, ಮಿಜೋರಾಂ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬ್ರಹ್ಮಪುತ್ರ ಮತ್ತು ಗಂಗಾ ನದಿಗಳ ಪ್ರವಾಹದಿಂದ ಪ್ರತಿ ವರ್ಷ ಹಲವಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗುತ್ತಿದೆ.

ಇಂತಹ ದಯನೀಯ ಸ್ಥಿತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನ ಎಲ್ಲೆಡೆ ನಿಯಮಿತವಾಗಿ ನಡೆಯುತ್ತಿರವ ನೈಸರ್ಗಿಕ ದುರಂತವಿದು.

ಅಮೇರಿಕಾ ದೇಶವೊಂದೇ ತನ್ನ ಆರ್ಮಿ ಕೋರ್‍ಸ್ ಇಂಜಿನಿಯರ್ಸ್ ಸಂಸ್ಥೆ ಮೂಲಕ ತನ್ನ ದೇಶದ 500 ಅಣೆಕಟ್ಟುಗಳನ್ನು ಪ್ರವಾಹದಿಂದ ಸಂರಕ್ಷಿಸಲು ಪ್ರತಿ ವರ್ಷ 25 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡುತ್ತಿದೆ. 1937 ರಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ವಿಶೇಷ ಮಸೂದೆಯನ್ನು ಜಾರಿಗೆ ತಂದ ಅಮೇರಿಕಾ ಸರ್ಕಾರ ಪ್ರತಿ ವರ್ಷ ತನ್ನ ವಾರ್ಷಿಕ ಬಜೆಟ್ಟಿನ್ನಲ್ಲಿ ಹಣವನ್ನು ಮೀಸಲಾಗಿಡುತ್ತಿದೆ. ಈ ವೆಚ್ಚ ಇತ್ತೀಚೆಗಿನ ವರ್ಷಗಳಲ್ಲಿ ದ್ವಿಗುಣಗೊಂಡಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಭಾರತ ಸರ್ಕಾರ ಕೂಡ 1953 ರಿಂದ 1980 ರವರೆಗೆ 40 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಆನಂತರ ಕಳೆದ 25 ವರ್ಷಗಳಲ್ಲಿ ಈ ವೆಚ್ಚ ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ನದಿಗಳ ಪ್ರವಾಹಕ್ಕೆ ಮಳೆಯಷ್ಟೇ ಕಾರಣ ಎಂದು ನಾವು ನಂಬಿದ್ದೇವೆ, ಅದೇ ರೀತಿ ಸರ್ಕಾರಗಳೂ ಕೂಡ ನಮ್ಮನ್ನು ನಂಬಿಸಿಕೊಂಡು ಬಂದಿವೆ. ಜಾಗತಿಕ ತಾಪಮಾನದಿಂದ ಏರುತ್ತಿರುವ ಉಷ್ಣತೆ, ಇದರಿಂದಾಗಿ ಹಿಮಗೆಡ್ಡೆಗಳು ಕರಗುತ್ತಿರುವುದು, ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಹೀರುತಿದ್ದ ಹಳ್ಳ ಕೊಳ್ಳಗಳ ನಾಶ, ನಗರೀಕರಣದಿಂದ ಕಣ್ಮರೆಯಾಗುತ್ತಿರುವ ಅರಣ್ಯ, ಕೆರೆಗಳು ಇಂತಹ ಅಂಶಗಳು ನಮ್ಮ ಗಣನೆಗೆ ಬರುವುದೇ ಇಲ್ಲ. ಜೊತೆಗೆ, ಮಳೆಗಾಲದಲ್ಲಿ ನದಿಯ ಇಕ್ಕೆಲಗಳು ನೀರಿನಲ್ಲಿ ಕೊಚ್ಚಿ ಹೋಗುವ ಪರಿಣಾಮ ನದಿಗಳಲ್ಲಿ ಹೂಳು ಶೇಖರವಾಗತ್ತಾ ಹೋಗಿ ನದಿಯ ಆಳ ಕಡಿಮೆಯಾದಂತೆ ಪ್ರವಾಹದ ನೀರು ಸುತ್ತ ಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ.

ಅಣೆಕಟ್ಟುಗಳ ಮೂಲಕ ಮತ್ತು ನದಿಯ ದಿಬ್ಬಗಳನ್ನು ಎತ್ತರಿಸುವುದರ ಮೂಲಕ ಪ್ರವಾಹ ನಿಯಂತ್ರಣಕ್ಕೆ ಪ್ರಯತ್ನ ನಡೆದಿದ್ದರೂ ಕೂಡ ಕೆಲೆವೆಡೆ ಈ ಕಾರ್ಯ ಅವೈಜ್ಙಾನಿಕವಾಗಿದ್ದು ನದಿ ತೀರದ ಜನವಸತಿ ಪ್ರದೇಶದ ನಾಗರೀಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಜಗತ್ತಿನೆಲ್ಲೆಡೆ ನಿರ್ಮಿಸಲಾಗಿರುವ ಅಣೆಕಟ್ಟುಗಳು ಕುಡಿಯುವ ನೀರಿಗಾಗಿ ಇಲ್ಲವೇ ನೀರಾವರಿ ಯೋಜನೆಗಾಗಿ ನಿರ್ಮಿಸಿರುವುದರಿಂದ, ಪ್ರವಾಹ ನಿಯಂತ್ರಣಕ್ಕಾಗಿ ನಿರ್ಮಿಸಿದ ಅಣೆಕಟ್ಟುಗಳು ಬಹುತೇಕ ಕಡಿಮೆ ಎಂದು ಹೇಳಬಹುದು. ಕುಡಿಯುವ ನೀರು ಇಲ್ಲವೆ, ನೀರಾವರಿ ಅಥವಾ ಜಲವಿದ್ಯುತ್‌ಗಾಗಿ ಜಲಾಶಯಗಳಲ್ಲಿ ಯಾವಾಗಲೂ ನೀರನ್ನು ಶೇಖರಿಸಿ ಇಟ್ಟುಕೊಳ್ಳುವುದರಿಂದ ಪ್ರವಾಹದಲ್ಲಿ ಹರಿದು ಬಂದ ನೀರನ್ನು ಹಾಗೆಯೇ ಹೊರಬಿಡಲಾಗುತ್ತದೆ. ಇದರ ಪರಿಣಾಮವಾಗಿ ನದಿ ಕೆಳ ಪಾತ್ರದ ಜನಕ್ಕೆ ನದಿಗಳ ಪ್ರವಾಹವೆಂಬುದು ಶಾಪವಾಗಿದೆ.

ಒರಿಸ್ಸಾದ ಮಹಾನದಿಯ ಪ್ರವಾಹ ನಿಯಂತ್ರಣಕ್ಕಾಗಿ ಭಾರತದಲ್ಲಿ ಪ್ರಥಮವಾಗಿ ಹಿರಾಕುಡ್ ಅಣೆಕಟ್ಟನ್ನು ನಿರ್ಮಿಸಲಾಯಿತು ಆದರೆ, 1980 ರ ಪ್ರವಾಹವನ್ನು ನಿಯಂತ್ರಿಸಲಾಗದೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಇಂತಹದ್ದೇ ಇನ್ನೊಂದು ದುರಂತ 1978 ರಲ್ಲಿ ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟಿನಲ್ಲೂ ಸಂಭವಿಸಿ 65 ಸಾವಿರ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾದರು.

1986 ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯದ ರಾಜಧಾನಿ ಸಾಕ್ರೊಮೆಂಟೊ ನಗರದ 5 ಲಕ್ಷ ಜನತೆ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು. ಮಳೆಯಿಂದಾಗಿ ಅಲ್ಲಿನ ಪಾಲ್ ಸೋಮ್ ಜಲಾಶಯ ಇಂಜಿನೀಯರಗಳ ನಿರೀಕ್ಷೆಯನ್ನು ಮೀರಿ ವಾರಕ್ಕೆ ಬದಲಾಗಿ ಕೇವಲ 36 ಗಂಟೆಯ ಅವಧಿಯಲ್ಲಿ ತುಂಬಿ ಹೋಗಿತ್ತು.

ಚೀನಾ ದೇಶದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ರೂಪುಗೊಂಡ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾದ ತ್ರೀ ಗಾರ್ಜಸ್ ಜಲಾಶಯದ ಸ್ಥಿತಿ ಕೂಡ ಇವುಗಳಿಗಿಂತ ಬೇರೆಯಾಗಿಲ್ಲ. ಪ್ರವಾಹದ ಸಂದರ್ಭದಲ್ಲಿ ಮತ್ತು ಜಲಾಶಯದ ಹಿನ್ನೀರಿನಿಂದಾಗಿ ಸುಮಾರು 10 ಲಕ್ಷ ಮಂದಿ ನಿರ್ವಸತಿಗರಾಗಿದ್ದಾರೆ. ಯಾಂಗ್ಟೇಜ್ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟಿನ ಕೆಳಭಾಗದ 5 ಲಕ್ಷ ಮಂದಿ ರೈತರು ಪ್ರವಾಹದ ಸಮಯದಲ್ಲಿ ತಮ್ಮ ಆಸ್ತಿ, ಮನೆಗಳನ್ನು ಕಳೆದುಕೊಂಡ ಪರಿಣಾಮ ಅವರ ಬದುಕು ಮೂರಾಬಟ್ಟೆಯಾಗಿದೆ.

ನಮ್ಮ ಅಭಿವೃದ್ಧಿಯ ವಾಖ್ಯಾನಗಳನ್ನು, ಚಿಂತನೆಗಳನ್ನು ಮರುಚಿಂತನೆಗೆ ಒಳಪಡಿಸಬೇಕಾದ ಅವಶ್ಯಕತೆ ಇದ್ದು, ನಮ್ಮ ನದಿಗಳ ಇತಿಹಾಸದ ಪುಟಗಳನ್ನು ತೆರೆದು ನೋಡಬೇಕಾಗಿದೆ. ನದಿಯ ಮೊದಲ ಪ್ರವಾಹದ ಮೂಲ ಹಿಡಿದು ಸಾಗಿದರೆ, ಸ್ವಚ್ಛಂದ ನದಿಯ ಹರಿಯುವಿಕೆಗೆ ನಮ್ಮ ಅಭಿವೃದ್ಧಿಯ ಕೆಲಸಗಳು ಎಲ್ಲೆಲ್ಲಿ ಅಡ್ಡಿಯಾಗಿವೆ ಎಂಬುದು ನಮ್ಮ ಅರಿವಿಗೆ ಬರುವ ಸಾಧ್ಯತೆಗಳಿವೆ. ಅದು ಅರಣ್ಯ ನಾಶವಿರಬಹುದು, ಕೆರೆ, ಹಳ್ಳ-ಕೊಳ್ಳಗಳ ನಾಶವಿರಬಹುದು ಅಥವಾ ನದಿಯಲ್ಲಿ ತುಂಬಿಕೊಂಡಿರುವ ಹೂಳಿನ ಪ್ರಮಾಣವಿರಬಹುದು, ಇವುಗಳನ್ನು ನೋಡುವ, ತಿಳಿಯುವ ಮನಸ್ಸುಗಳು ಬೇಕಷ್ಟೆ.

’ಕುಡಿಯುವ ನೀರಿಗಾಗಿ ಅಣೆಕಟ್ಟುಗಳ” ಎಂಬ ಯೋಜನೆಗಳು ಎಂಬುದು ಜಾಗತಿಕ ಮಟ್ಟದ ಅತಿ ದೊಡ್ಡ ಪ್ರಹಸನವೆಂದರೆ ತಪ್ಪಾಗಲಾರದು. ಚೀನಾದಲ್ಲಿ ವಿಶೇಷವಾಗಿ ಜನಪದರಲ್ಲಿ ಒಂದು ಗಾದೆ ಪ್ರಚಲಿತದಲ್ಲಿದೆ, ’ನೀರು ಕುಡಿಯುವಾಗ ಋತುಮಾನಗಳನ್ನು ನೆನಪಿಡು,’ಎಂದು . ಪ್ರಕೃತಿಯ ಕೊಡುಗೆಯಾದ ನೀರಿನ ಬಗ್ಗೆ ಇರುವ ಕಾಳಜಿ ಇದರಲ್ಲಿ ಎದ್ದು ಕಾಣುತ್ತದೆ. ನೀರು ಮಾರಾಟದ ಸರಕಾಗಿರುವಾಗ ಇಂತಹ ಆಲೋಚನೆಗಳು ಈಗ ಅಪ್ರಸ್ತುತವಾಗಿವೆ.

ದಶಕ ಹಿಂದೆ ಜಗತ್ತಿನಲ್ಲಿ ಇದ್ದ ದೊಡ್ಡ ಅಣೆಕಟ್ಟುಗಳು ಅಂದರೆ, 100 ಅಡಿ ಎತ್ತರದ 3602 ಅಣೆಕಟ್ಟುಗಳಲ್ಲಿ ಅಮೇರಿಕವನ್ನು ಹೊರತು ಪಡಿಸಿದರೆ, ಉಳಿದ ಅಣೆಕಟ್ಟುಗಳು ಕುಡಿಯುವ ನೀರಿಗಿಂತ ನೀರಾವರಿ ಯೋಜನೆಗಾಗಿ, ಮತ್ತು ಜಲವಿದ್ಯುತ್‌ಗಾಗಿ ರೂಪುಗೊಂಡಂತಹವು. ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ಭಾರತ, ಚೀನಾ, ಜಪಾನ್, ಅಮೇರಿಕ ದೇಶಗಳಲ್ಲಿ ಅಣೆಕಟ್ಟುಗಳು ಯಾವ ಉದ್ದೇಶಕ್ಕೆ ಬಳಕೆಯಾಗಿವೆ ಎಂಬ ವಿವರ ಈ ಕೆಳಗಿನಂತಿದೆ:

  1. ಭಾರತದಲ್ಲಿ 20 ನೇ ಶತಮಾನದ ಅಂತ್ಯಕ್ಕೆ ಇದ್ದ 324 ದೊಡ್ಡ ಅಣೆಕಟ್ಟುಗಳ ಪೈಕಿ ನೀರಾವರಿಗೆ 44, ಜಲವಿದ್ಯುತ್ಗಾಗಿ 22, ಪ್ರವಾಹ ನಿಯಂತ್ರಣಕ್ಕೆ 1, ಕುಡಿಯುವ ನೀರಿಗಾಗಿ 4 ಅಣೆಕಟ್ಟುಗಳಿದ್ದವು.
  2. ಚೀನಾದಲ್ಲಿರುವ 1336 ಅಣೆಕಟ್ಟುಗಳಲ್ಲಿ ನೀರಾವರಿಗೆ 84, ವಿದ್ಯುತ್ ಉತ್ಪಾದನೆಗೆ 44, ಪ್ರವಾಹ ನಿಯಂತ್ರಣಕ್ಕೆ 29, ಹಾಗೂ ಕುಡಿಯುವ ನೀರಿಗಾಗಿ 1 ಅಣೆಕಟ್ಟು ಬಳಕೆಯಾಗಿದೆ.
  3. ಜಪಾನ್ ದೇಶದಲ್ಲಿ ಇರುವ 800 ಅಣೆಕಟ್ಟುಗಳಲ್ಲಿ 43 ನೀರಾವರಿಗೆ, 45 ವಿದ್ಯುತ್ ಉತ್ಪಾದನೆಗೆ, 43 ಪ್ರವಾಹ ನಿಯಂತ್ರಣಕ್ಕೆ, ಮತ್ತು 25 ಕುಡಿಯುವ ನೀರಿಗೆ ಬಳಕೆ ಮಾಡಲಾಗಿದೆ.
  4. ಅಮೇರಿಕಾದಲ್ಲಿರುವ 1146 ಅಣೆಕಟ್ಟುಗಳಲ್ಲಿ ನೀರಾವರಿಗೆ 29, ವಿದ್ಯುತ್ ಉತ್ಪಾದನೆಗೆ 31, ಕುಡಿಯುವ ನೀರಿಗಾಗಿ 44 ಮತ್ತು ಮನರಂಜನೆ ಹಾಗೂ ಜಲಕ್ರೀಡೆಗಾಗಿ 4 ಅಣೆಕಟ್ಟುಗಳು ಬಳಕೆಯಾಗುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ 230 ಕೋಟಿಗೂ ಅಧಿಕ ಮಂದಿ ಕುಡಿಯುವ ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ. ಇವರಲ್ಲಿ 170 ಕೋಟಿ ಜನ ಗ್ರಾಮಾಂತರ ಪ್ರದೇಶದ ವಾಸಿಗಳಾಗಿದ್ದಾರೆ. ಇವರುಗಳಿಗೆ ಕುಡಿಯುವ ನೀರು ಕೊಡಲು ಜಗತ್ತಿನಾದ್ಯಂತ ಸರ್ಕಾರಗಳು ಇಂದಿಗೂ ಹೆಣಗಾಡುತ್ತಿವೆ.

ಅಸಹಜವಾಗಿ ಬೆಳೆಯುತ್ತಿರುವ ನಗರಗಳಿಂದಾಗಿ ಕುಡಿಯುವ ನೀರಿನ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಕೊಲ್ಕತ್ತಾ ನಗರದ ಜನಕ್ಕೆ ನೀರು ಒದಗಿಸಲು ಗಂಗಾ ನದಿಯ ನೀರನ್ನು ಫರಕ್ಕಾ ಜಲಾಶಯಕ್ಕೆ ತಿರುಗಿಸಿದ ಫಲವಾಗಿ ನದಿಯ ಕೆಳ ಪಾತ್ರದ ಬಂಗ್ಲಾದೇಶದ 80 ಲಕ್ಷ ಜನತೆ ಕುಡಿಯುವ ನೀರಿನಿಂದ ವಂಚಿತರಾದರು.

ಅಣೆಕಟ್ಟು ನಿರ್ಮಾಣವಾದ ನಂತರ ಕೆಳಗಿನ ಪ್ರದೇಶದಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಅಂತರ್ಜಲ ಮಟ್ಟ ಕೂಡ ಕುಸಿಯುತ್ತದೆ ಇದರಿಂದಾಗಿ ಎಲ್ಲರೂ ನದಿಯ ನೀರನ್ನೇ ಆಶ್ರಯಿಸಬೇಕು. ನದಿ ನೀರನ್ನು ಸಂಸ್ಕರಿಸದೆ ಬಳಸಲಾಗದು.  ನೀರನ್ನು ನೇರವಾಗಿ ಜನತೆಗೆ ಸರಬರಾಜು ಮಾಡಿದ ಪರಿಣಾಮ ಬ್ರೆಜಿಲ್ ದೇಶದ ಸಾವೊ ಪ್ರಾನ್ಸಿಸ್ಕೊ ಜಲಾಶಯದ ಸಮೀಪದ ಪಟ್ಟಣಗಳಲ್ಲಿ ಮತ್ತು ಈಜಿಪ್ತ್ ನ ಅಸ್ವಾನ್ ಜಲಾಶಯದ ನೀರು ಕುಡಿದ ಸಾವಿರಾರು ಮಂದಿ ವಾಂತಿ- ಬೇಧಿಯಿಂದ ಮೃತಪಟ್ಟ ದಾಖಲೆಗಳು ಇತಿಹಾಸದಲ್ಲಿ ದಾಖಲಾಗಿವೆ.

(ಮುಂದುವರಿಯುವುದು)