ಮಾಯಾ-ಮುಲಾಯಮ್ ಹಿನ್ನೆಲೆಯಲ್ಲಿ ವರ್ತಮಾನ ಕರ್ನಾಟಕದ “ಹಿಂದ” ರಾಜಕೀಯ

-ಬಿ.ಶ್ರೀಪಾದ ಭಟ್

“ಯಾವ ಪಕ್ಷದಲ್ಲಿ ಸ್ತ್ರೀಯರು, ಹರಿಜನರು, ಶೂದ್ರರು ಹಾಗೂ ಮುಸುಲ್ಮಾನರು ಅಗ್ರಪಂಕ್ತಿಯಲ್ಲಿದ್ದು ಪ್ರಭಾವಶಾಲಿಗಳಾಗುತ್ತಾರೋ ಅಂತಹ ಪಕ್ಷ ಮಾತ್ರ ಭಾರತವನ್ನು ಸುಖೀ, ಸಮೃದ್ಧ, ಬಲಶಾಲಿ, ಸತ್ಯಸಂಧ ರಾಷ್ಟ್ರವನ್ನಾಗಿ ಮಾಡಬಲ್ಲದೆಂದು ನನಗೆ ಖಾತ್ರಿಯಾಗಿದೆ. ಸೀತೆ, ಶಂಭೂಕರ ಅಕ್ಷವನ್ನು ಇನ್ನಷ್ಟು ಬಲಪಡಿಸಬೇಕು.” –ರಾಮ ಮನೋಹರ ಲೋಹಿಯಾ

ಅದು ಸುಮಾರು 1995 ರ ವರ್ಷವಿರಬೇಕು. ಬೆಂಗಳೂರಿನ “ಯವನಿಕ” ಸಭಾಂಗಣದಲ್ಲಿ ಒಂದು ಚಿಂತನ ಗೋಷ್ಟಿ ಹಾಗೂ ಸಂವಾದ ಇತ್ತು. ಅದರಲ್ಲಿ ಸಮಾಜವಾದಿ ನಾಯಕ “ಕಿಶನ್ ಪಟ್ನಾಯಕ್” ಅವರು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಅದೇ ಕಾಲಕ್ಕೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳ ಸಹಭಾಗಿತ್ವದಲ್ಲಿ ಸರ್ಕಾರವನ್ನು ಸ್ಥಾಪಿಸಲಾಗಿತ್ತು. ಅದರ ಹಿನ್ನೆಯಲ್ಲಿ ಸಂವಾದದಲ್ಲಿ ಭಾಗವಸಿದ್ದ ಕಿಶನ್ ಪಟ್ನಾಯಕ್ ಅವರು ಅಂದು ಅತ್ಯಂತ ಉತ್ಸಾಹದಿಂದ “ಇಂಡಿಯಾದಲ್ಲಿ ಹಿಂದುಳಿದ ಹಾಗೂ ದಲಿತರ ಒಗ್ಗೂಡಿಕೆಯ ದೊಡ್ಡ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಇದು ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡದಾದ ರೂಪವನ್ನು ಪಡೆದುಕೊಳ್ಳತೊಡಗಿದರೆ ಸಮಾಜವಾದಿಗಳು ಈ ಅಭೂತಪೂರ್ವ ಮೈತ್ರಿಗೆ ಕೈ ಜೋಡಿಸಬೇಕು. ಈ ಮಹಾ ಮೈತ್ರಿ ಇಂಡಿಯಾದ ಇತಿಹಾಸವನ್ನೇ ಬದಾಲಾವಣೆಗೊಳಿಸುವ ಎಲ್ಲಾ ಕ್ಷಮತೆಯನ್ನು ತನ್ನಲ್ಲಿ ತುಂಬಿಕೊಂಡಿದೆ,” ಎಂದು ಅತ್ಯಂತ ಉತ್ಸಾಹದಿಂದ ಮಾತನಾಡುತ್ತಿದ್ದರು. ಅವರಿಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯವತಿ ಅವರಲ್ಲಿ ಭವಿಷ್ಯದ ಕನಸನ್ನು ಕಂಡಿದ್ದರು. ಇವರಿಬ್ಬರೂ ಒಟ್ಟಾಗಿ ಉತ್ತರ ಪ್ರದೇಶದ ಹಿಂದುಳಿದ ಹಾಗೂ ದಲಿತರ ಏಳಿಗೆಗೆ ಶ್ರಮಿಸಬಲ್ಲವರಾದರೆ ಇದೇ ಮೈತ್ರಿಯ ಹಿನ್ನೆಲೆಯನ್ನು ಬಳಸಿಕೊಂಡು ಭಾರತದ ಇತರ ರಾಜ್ಯಗಳಲ್ಲೂ ಈ ಪ್ರಯೋಗ ಮಾಡಬೇಕು ಇದರಲ್ಲಿ ಸಮಾಜವಾದಿಗಳು ತುಂಬಾ ದೊಡ್ಡ ಪಾತ್ರವಹಿಸಬೇಕಾಗುತ್ತದೆ ಎಂದು ಆಗ ನಮ್ಮಂತಹ ಯುವ ಉತ್ಯಾಹಿಗಳಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿದ್ದರು. ಇದಾಗಿ 15 ವರ್ಷಗಳ ಮೇಲಾಗಿದೆ. ಅಹಿಂದ ವರ್ಗಗಳ ಒಗ್ಗೂಡುವಿಕೆಯ ಆ ಉತ್ಸಾಹ, ರೋಮಾಂಚನ ಕೊನೆಗೊಂಡು ಇಂದಿಗೆ 13 ವರ್ಷಗಳಾಗಿವೆ. ಸಮಾಜವಾದಿ ಕನಸುಗಾರ ಕಿಷನ್ ಪಟ್ನಾಯಕ್ ತೀರಿಕೊಂಡು 7 ವರ್ಷಗಳಾಗಿವೆ. ಏಕೆಂದರೆ 1997 ರಲ್ಲಿ ಇದೇ ಮಾಯಾವತಿ ಹಾಗೂ ಮುಲಾಯಮ್ ಸಿಂಗ್ ಯಾದವ್ ಬದ್ಧ ವೈರಿಗಳಾಗಿ ಮಾರ್ಪಟ್ಟು ಮಾಯಾವತಿ ಅವರ ದಲಿತರ ಆಶಾಕಿರಣದ ಬಹುಜನ ಪಕ್ಷ ಕೋಮುವಾದಿ, ಜಾತಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯಿತು. ಈ ಅನೈತಿಕ ಮೈತ್ರಿ ಯಾವ ನಾಚಿಕೆಯೂ ಇಲ್ಲದೆ 2002 ರಲ್ಲೂ ಪುನರಾವರ್ತನೆಯಾಯಿತು. ಅತ್ತ ಮುಲಾಯಮ್ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಒಂದು ಗೂಂಡಾಗಳ, ಕೊಬ್ಬಿದ, ಜಾತೀವಾದಿ ಕ್ಲಬ್ ತರಹ ರೂಪಾಂತರಗೊಂಡಿತು. ಇತ್ತ ಕರ್ನಾಟಕದಲ್ಲಿ ಈ ಅಹಿಂದ ಮೈತ್ರಿಕೂಟ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಕನಸನ್ನು, ದೇವರಾಜ್ ಅರಸರ ಹಿಂದುಳಿದ, ದಲಿತರ ಸಾಮಾಜಿಕ ಸಬಲೀಕರಣವನ್ನು ತನ್ನ ಧ್ಯೇಯವಾಗಿಟ್ಟುಕೊಂಡು   ಕೋಲಾರದಲ್ಲಿ ಒಂದು ರಾಜಕೀಯೇತರ ಸಂಘಟನೆಯಾಗಿ ಆರಂಭಗೊಂಡಿತು. ತದ ನಂತರ ತನ್ನ ಅನೇಕ ಏಳುಬೀಳುಗಳ ನಡುವೆ ರಾಜಕೀಯ ನಾಯಕರ ಆಡೊಂಬಲವಾಗಿ ಏದುಸಿರು ಬಿಡುತ್ತಿದೆ.

ಸರಿ ಸುಮಾರು 40 ವರ್ಷಗಳ ಹಿಂದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟದ ಹಾದಿಗೆ ಅಡಿಯಿಟ್ಟ ಕಾನ್ಸೀರಾಮ್ ಅವರು ನಂತರ ತುಳಿದ ಹಾದಿ ಅತ್ಯಂತ ಕಷ್ಟಕರವಾದದ್ದು. ದಲಿತರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರಿ ಹುದ್ದೆಯನ್ನೆ ತ್ಯಜಿಸಿದ ಕಾನ್ಸೀರಾಮ್ ದಲಿತರ ಹಕ್ಕುಗಳ ಪರವಾಗಿ ಹೋರಾಟ ಆರಂಭಿಸಿದಾಗ ಅವರು ಅಡಿಗಡಿಗೂ ಮೇಲ್ಜಾತಿ, ಮೇಲ್ವರ್ಗಗಳ ಕೊಂಕನ್ನು, ಹೀಯಾಳಿಕೆಯನ್ನು ಎದುರಿಸಬೇಕಾಯಿತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾನ್ಸೀರಾಮ್ ತಮ್ಮ ಸ್ನೇಹಿತ ಖಾಪರ್ಡೆ ಹಾಗೂ ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿಕೊಂಡು ದಲಿತ ಹಾಗೂ ಆದಿವಾಸಿ, ಹಿಂದುಳಿದ ಜಾತಿಗಳ ನೌಕರರ ಒಕ್ಕೂಟವನ್ನು ಸ್ಥಾಪಿಸಿದರು. ಮುಂದೆ ಅಖಿಲ ಭಾರತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪಿಸಿದರು (BAMCEF). ಅಂಬೇಡ್ಕರ್ ಪ್ರತಿಪಾದಿಸಿದ “ಶಿಕ್ಷಣ, ಸಂಘಟನೆ, ಚಳುವಳಿ” ಎನ್ನುವ ಧ್ಯೇಯ ಮಂತ್ರವನ್ನೇ ಈ ಒಕ್ಕೂಟದ ಮೂಲ ಉದ್ದೇಶವನ್ನಾಗಿಸಿದರು. ಇದರ ಮೂಲ ಉದ್ದೇಶ ಸರ್ಕಾರಿ ಹಾಗೂ ಸಾಮಾಜಿಕ ವಲಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೀಡಾಗುತ್ತಿದ್ದ, ದಬ್ಬಾಳಿಕೆಗೆ ತುತ್ತಾಗುತ್ತಿದ್ದ ದಲಿತ ಹಾಗೂ ಹಿಂದುಳಿದವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದೇ ಆಗಿತ್ತು. ಇದಕ್ಕಾಗಿ ಇವರು ತಮ್ಮ ಸಂಘಟನ ಚಾತುರ್ಯವನ್ನು ಬಳಸಿ  ರಾಷ್ಟಮಟ್ಟದಲ್ಲಿ ಹಗಲಿರುಳೂ ದುಡಿದು ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಇಲ್ಲಿ ನಿಸ್ವಾರ್ಥವಿತ್ತು. ಆದರೆ 70ರ ದಶಕದ ಅಂತ್ಯದ ವೇಳೆಗೆ ಅತ್ಯಂತ ಮಹಾತ್ವಾಕಾಂಕ್ಶೆಯ ನಾಯಕರಾಗಿ ಹೊರಹೊಮ್ಮಿದ ಕಾನ್ಸೀರಾಮ್ ಅವರಿಗೆ ಕೇವಲ ಸರ್ಕಾರಿ ನೌಕರರ ಮಟ್ಟದಲ್ಲಿ ಸಂಘಟನೆ ನಡೆಸುವುದು ಒಂದು ಕಾಲ ಕ್ಷೇಪವೆನಿಸತೊಡಗಿತು. ಆಗ 1981ರಲ್ಲಿ  ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ದಲಿತ ನೌಕರರಿಗೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜ್ಯನ್ಯವನ್ನು, ಹೀಯಾಳಿಕೆಗಳಿಗೆ ಪ್ರತಿಭಟನೆಯಾಗಿ ಸಂಘಟನೆಗೊಳ್ಳಲು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಲು ಅವಕಾಶವನ್ನು ದೊರಕಿಸಿಕೊಟ್ಟರು. ಅಲ್ಲದೆ ಇದನ್ನು ಒಂದು ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಿದರು. ಈ ಕಾಲಘಟ್ಟದಲ್ಲೇ ಕಾನ್ಸೀರಾಮ್ ದುಡಿದ ರೀತಿ ಬಣ್ಣನೆಗೂ ನಿಲುಕದ್ದು. ಅವರು ಸೈಕಲ್ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ಅಲ್ಲಿನ ಒಟ್ಟು ಜನಸಂಖ್ಯೆಯ ವಿವರಗಳು ಈ ಜನಸಂಖ್ಯೆಯಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಗಳೆಷ್ಟು, ಹಿಂದುಳಿದವಗಳ, ತಳ ಸಮುದಾಯಗಳ ಶೇಕಡಾವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗಳು, ಎಲ್ಲವನ್ನೂ ಆ ವರ್ಷಗಳಲ್ಲಿ ತಮ್ಮ ಅವಿರತ ಅಧ್ಯಯನದಿಂದ, ಹಗಲೂ ರಾತ್ರಿ ತಿರುಗಾಡಿ ಕಲೆಹಾಕಿದರು. 1984ರಲ್ಲಿ ಬಹುಜನ ಪಕ್ಷವನ್ನು ಸ್ಥಾಪಿಸುವಷ್ಟರಾಗಲೇ ಇಡೀ ಉತ್ತರಭಾರತದ ಸಾಮಾಜಿಕ ಸ್ವರೂಪಗಳು, ಅಲ್ಲಿನ ಜಾತಿಗಳು, ಅದರ ಆಳ, ಅವರ ಬದುಕು, ಶಕ್ತಿ, ದೌರ್ಬಲ್ಯ ಎಲ್ಲವೂ ಕಾನ್ಸೀರಾಮ್ ಅವರು ಸಂಪೂರ್ಣವಾಗಿ ಅರೆದು ಕುಡಿದಿದ್ದರು. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ರಾಜಕೀಯ ಸಂಘಟನೆಗಳನ್ನು ದೇಶದ ಉತ್ತರ ರಾಜ್ಯಕ್ಕೆ ತಲುಪಿಸುವ ಸೇತುವೆಯಾಗಿದ್ದರು ಈ ಕಾನ್ಸೀರಾಮ್.

ಕಾನ್ಸೀರಾಮ್ ಅವರಿಗೆ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಬೆಳೆದ, ಯಾವುದೇ ಆರ್ಥಿಕ, ರಾಜಕೀಯ ಬಲವಿಲ್ಲದೆ ಸೈದ್ಧಾಂತಿಕ ಚಿಂತನೆ, ಸಾಹಿತ್ಯ, ಸಂಘಟನೆಗಳನ್ನು ಬಲವಾಗಿ ತಬ್ಬಿಕೊಂಡು ದಲಿತರ ಪರವಾದ ಹೋರಾಟ ನಡೆಸುತ್ತಿದ್ದ ದಲಿತ ಪ್ಯಾಂಥರ್ಸ್, ಆರ್.ಪಿ.ಐ. ದಂತಹ ಪಕ್ಷಗಳು  ಅಲ್ಲಿನ ಪಟ್ಟಭದ್ರ, ಕೋಮುವಾದಿ ರಾಜಕೀಯ ಪಕ್ಷಗಳ ಪಿತೂರಿಗೆ ಸುಲಭವಾಗಿ ತುತ್ತಾದದ್ದು. ಅಲ್ಲಿಂದ ಇಲ್ಲಿಯವರೆಗೂ ಆ ಕಾಲಘಟ್ಟದ ನಾಮದೇವ್ ಢಸಾಳ್ ರಂತಹ ಧೀಮಂತ ದಲಿತ ಚಿಂತಕರಿಂದ ಮೊದಲುಗೊಂಡು ಇಂದಿನ ರಾಮದಾಸ್ ಅಟವಳೆ ರವರವರೆಗೂ ಎಲ್ಲರೂ ಈ ಪಟ್ಟಭದ್ರ ಹಿತಾಸಕ್ತಿ ಪಕ್ಷಗಳ ಸಂಚಿನಿಂದ ಎಲ್ಲಿಗೂ ಸಲ್ಲದೆ ತಮ್ಮನ್ನು ತಾವೇ ಕತ್ತಲಿಗೆ ನೂಕಿಕೊಂಡದ್ದು. ಈ ತರಹದ ಅನೇಕ ಉದಾಹರಣೆಗಳನ್ನು ಹತ್ತಿರದಿಂದ ಕಂಡಿದ್ದ ಕಾನ್ಸೀರಾಮ್ ರವರಿಗೆ ಕೇವಲ ಚಿಂತನೆ, ಸಂಘಟನೆ ಹಾಗೂ ಚಳುವಳಿಯ ಮುಖಾಂತರ ದಲಿತರಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಾನವಾದ, ಆತ್ಮಾಭಿಮಾನದ, ಅಧಿಕಾರದ ಬದುಕಿಗೆ ಹತ್ತಿರಕ್ಕೂ ತಂದುಕೊಡಲು ಸಾಧ್ಯವಿಲ್ಲ ಎನ್ನುವುದು ಮಹಾರಾಷ್ಟ್ರಾದ ದಲಿತ ಸಂಘಟನೆಗಳಿಂದ ಕಾನ್ಶೀರಾಮ್ ಅವರಿಗೆ ಎಂದೋ ಅರಿವಾಗಿ ಹೋಗಿತ್ತು. ಅದಕ್ಕಾಗಿಯೇ ಅಕಡೆಮಿಕ್ ಮಾದರಿ ಚಿಂತನ ಹಾಗೂ ಮಂಥನಗಳನ್ನು, ಆ ಮಾದರಿಯ ಎಡಪಂಥೀಯ ಒಲವುಳ್ಳ ಬುದ್ಧಿಜೀವಿಗಳನ್ನು ತಮ್ಮ ಹಾಗು ತಮ್ಮ ಒಕ್ಕೂಟದ ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅಂಬೇಡ್ಕರ್ ವಾದದ ಮೂಲ ಮಂತ್ರವಾದ “ಶಿಕ್ಷಣ, ಸಂಘಟನೆ, ಚಳುವಳಿ” ಗಳಲ್ಲಿ ಸದಾ ಕಾಲ ಎಚ್ಚರದ ಹೆಜ್ಜೆಗಳನ್ನು ಇಡುವಂತೆ ಪ್ರೇರೇಪಿಸುವ ಚಿಂತನೆಯ ನುಡಿಕಟ್ಟುಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟು ಸಂಘಟನೆಯನ್ನು ನೆಚ್ಚಿ ಚಳುವಳಿಗಳ ಮೂಲಕ ರಾಜಕೀಯದ ಅಧಿಕಾರವನ್ನು ದಲಿತರಿಗೆ ತಂದುಕೊಡಬೇಕು ಎನ್ನುವ ಒಂದಂಶದ ಕಾರ್ಯಕ್ರಮದ ಫಲವಾಗಿ 1984 ರಲ್ಲಿ ಬಹುಜನ ಸಮಾಜ ಪಕ್ಷ ಎನ್ನುವ ರಾಜಕೀಯ ಪಕ್ಷ ಜನ್ಮ ತಾಳಿತು. ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಹುಜನ ಪಕ್ಷ ಬ್ರಾಹ್ಮಣರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಅವರಿಗೇ ನೀಡುತ್ತೇವೆ ಎಂದು ಘೋಷಿಸುವುದರ ಮೂಲಕ ಬ್ರಾಹ್ಂಅಣರಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ಒಂದು ದಶಕದ ಅನುಭವ, ಸಂಘಟನಾ ಚತುರತೆಯನ್ನು ಬಳಸಿ ಕಾಲ 1984 ರಿಂದ  ನಂತರ ಒಂದು ದಶಕದವರೆಗೂ ಮತ್ತದೇ ಹೋರಾಟ, ಕಾರ್ಯತಂತ್ರಗಳು ಎಲ್ಲವೂ 1995ರಲ್ಲಿ ಬಿಎಸ್‌ಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ, ಬೆಹೆನ್ ಜೀ ಮಾಯಾವತಿ ದೇಶದ ದೊಡ್ಡ ರಾಜ್ಯದ  ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದರು. ದಲಿತ ಹಾಗೂ ಹಿಂದುಳಿದ ವರ್ಗಗಳ ಮೈತ್ರಿ, ಅದರ ಉಮೇದಿ, ಆ ಸಂಭ್ರಮ ಎಲ್ಲವೂ ಪ್ರಥಮವೇ. ಇಲ್ಲಿಂದ ಶುರುವಾದ ಕಾನ್ಸೀರಾಮ್ ಅವರ ರಾಜಕೀಯ ನಡಿಗೆ ನಂತರ ಓಟದ ರೂಪ ಪಡೆದುಕೊಂಡು 90ರ ದಶಕದ ಹೊತ್ತಿಗೆ ದಾಪುಗಾಲು ಇಡತೊಡಗಿತ್ತು. ನಂತರ ಕಾನ್ಸೀರಾಮ್ ದಣಿದಿದ್ದು 2000ರ ನಂತರವೇ.

ಅದರೆ ಈ ಸಂಭ್ರಮದ ಬೆಲೂನಿಗೆ ಸೂಜಿಯ ಮೊನೆ ತಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಈ “ಮಾಯಾಲೋಕ”ದ ಕಾಲದಲ್ಲಿ 1995 ರಿಂದ ಇಲ್ಲಿಯವರೆಗೂ ನಡೆದದ್ದು, ಆ ವಿಘಟನೆಗಳು, ಅತುರದ ನಡೆಗಳು, ಅತ್ಮಹತ್ಯಾತ್ಮಕ, ವಿವೇಚನಾಶೂನ್ಯ ನಿರ್ಧಾರಗಳು ಎಲ್ಲವೂ ಹೊಸ ದುರಂತಕ್ಕೆ ನಾಂದಿ ಹಾಡಿದವು. ಇದೆಲ್ಲ ಶುರುವಾದದ್ದು ತಾವು ನಡೆಯುವ ಹಾದಿಯನ್ನು, ನೆಲವನ್ನು ಅಸಮರ್ಪಕವಾಗಿ, ಪದೇ ಪದೇ ಜಾರಿಬೀಳುವಂತೆ ರೂಪಿಸಿಕೊಂಡಿದ್ದರಿಂದ. ರಾಜಕೀಯವಾಗಿ ಮಹಾತ್ವಾಕಾಂಕ್ಷಿಯಾಗಿ ಮಿಂಚತೊಡಗಿದ್ದ ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿ ಸೂತ್ರಬದ್ಧ ಕಾರ್ಯಕ್ರಮಗಳನ್ನು ರೂಪಿಸುವುದರ ಬದಲು ಉದ್ವೇಗದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವತ್ತ ನಂತರ ಅದರಿಂದುಟಾಗುವ ವಾದವಿವಾದಗಳಲ್ಲಿ ತಮ್ಮ ಶಕ್ತಿ ವ್ಯಯಿಸತೊಡಗುವತ್ತ ತೀವ್ರ ಆಸಕ್ತಿ ವಹಿಸತೊಡಗಿದರು. ಇದರ ಪರಿಣಾವಾಗಿ ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಭಿಪ್ರಾಯಗಳನ್ನು ಬಂಡವಾಳ ಮಾಡಿಕೊಂಡು ಗಾಂಧೀಜಿಯವರನ್ನು ಮನುವಾದಿ ಎಂದು ಹೀಯಾಳಿಸುತ್ತ ಅವರ ಚಿಂತನೆಗಳಿಗೆ ದಲಿತ ವಿರೋಧಿ ಬಣ್ಣ ಕೊಡತೊಡಗಿದ್ದು ಈ ಮೂಲಕ ಮುಗ್ಧ ದಲಿತರನ್ನು ಅನಗತ್ಯವಾಗಿ ದಿಕ್ಕುತಪ್ಪಿಸತೊಡಗಿದರು. ಇದು 90ರ ದಶಕದುದ್ದಕ್ಕೂ ಉತ್ತರಭಾರತದಲ್ಲಿ ಗಾಂಧಿ ವಿರೋಧಿ ನೆಲೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಗೆ  ಅಂಬೇಡ್ಕರ್ ಅವರ  “ಶಿಕ್ಷಣ, ಸಂಘಟನೆ, ಚಳುವಳಿ” ತನ್ನ ಅವಸಾನದತ್ತ ಸಾಗತೊಡಗಿತ್ತು. ಆದರೆ ನಮ್ಮ ಕರ್ನಾಟದಲ್ಲಿ ದಲಿತ ಚಳುವಳಿ ಬಿ.ಕೃಷ್ಣಪ್ಪರವರ ಅಂಬೇಡ್ಕರ್ ವಾದ, ದೇವನೂರು ಮಹಾದೇವರ ಸಮಾಜವಾದದ ಚಿಂತನೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ತನ್ನೊಡಳಲೊಳಗೆ ಗಾಂಧೀಜಿಯವರನ್ನು ಸ್ವೀಕರಿಸಿದ ರೀತಿ ಹಾಗು ಅದನ್ನು ದಲಿತ ಚಳುವಳಿಗೆ ರೂಪಿಸಕೊಂಡ ರೀತಿ ಅನನ್ಯವಾದದ್ದು. ಈ ಗಾಂಧೀವಾದಿ ಪ್ರೇರಣೆಯಿಂದಲ್ಲವೇ ಕರ್ನಾಟಕದ ದಲಿತರು ಅಂಬೇಡ್ಕರ್ ಜನ್ಮದಿನದಂದು ಸಮಾಜದ ಎಲ್ಲ ಜಾತಿಯ ಜನರಿಗೆ ತಮ್ಮ ಕೈಯಾರೆ ನೀರುಣಿಸಿದ್ದು ಆ ಮೂಲಕ ಮೌನವಾಗಿಯೇ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಅಹಂಗೆ ಪೆಟ್ಟು ನೀಡಿದ್ದು. ಕರ್ನಾಟಕದ ಈ ಸಮೃದ್ಧವಾದ ವೈಚಾರಿಕ ನೆಲೆಗಟ್ಟು ಇಲ್ಲಿನ ದಲಿತ ಚಳುವಳಿಗೆ ಒಂದು ರೀತಿಯಲ್ಲಿ ಸದಾಕಾಲ ನೈತಿಕ ಶಕ್ತಿಯಾಗಿ ಕಾದಿದ್ದು ಉತ್ತರ ರಾಜ್ಯದ ಬಹುಜನ ಪಕ್ಷಕ್ಕೆ ಇದು ದಕ್ಕಲಿಲ್ಲ. ಇದಕ್ಕೆ ಮೂಲಭೂತ ಕಾರಣ ಕಾನ್ಸೀರಾಮ್ ಹಾಗೂ ಮಾಯಾವತಿ ಜೋಡಿ ತಮ್ಮ ಜೀವಿತದುದ್ದಕ್ಕೂ ಈ ಅಕಡೆಮಿಕ್ ಚಿಂತಕರನ್ನೂ ಕೇವಲ ಬುರೆಡೇ ದಾಸರು ಎಂದೇ ತೀರ್ಮಾನಿಸಿದ ಫಲವಾಗಿ ತಮ್ಮ ಪಕ್ಷದ  ಹತ್ತಿರಕ್ಕೂ ಬಿಟ್ಟುಕೊಳ್ಳದಿದ್ದದ್ದು. ಸಾಮಾಜಿಕವಾಗಿ ಎಷ್ಟೇ ಬಲಶಾಲಿಯಾಗಿ, ಸಕ್ರಿಯವಾಗಿ, ಅತ್ಯಂತ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ್ದರೂ ಅದು ಎಲ್ಲೂ ಭೌದ್ಧಿಕವಾಗಿ, ಆರ್ಥಿಕವಾಗಿ ಭ್ರಷ್ಟವಾಗದಂತೆ ಸದಾ ನೈತಿಕ ಕಾವಲುಗಾರರಾದ ಚಿಂತಕರ ಅನುಪಸ್ಥಿತಿ ಬಹುಜನ ಪಕ್ಷವನ್ನು ಸಂಪೂರ್ಣ ದಿಕ್ಕುತಪ್ಪಿಸಿತ್ತು. ಇದರ ಫಲವೇ ಸ್ವತಹ ದಲಿತ ವಿರೋಧಿ ಚಿಂತನೆಗಳ ಕೋಮುವಾದಿ ಸಿದ್ಧಾಂತಗಳ ಬಿಜೆಪಿ ಪಕ್ಷದೊಂದಿಗೆ ಈ ಜೋಡಿ ಎರಡು ಬಾರಿ ಅಧಿಕಾರವನ್ನು ಹಂಚಿಕೊಂಡಿದ್ದು. ಇಲ್ಲಿಂದ ಆನೆ ತುಳಿದಿದ್ದೇ ಹಾದಿ ಎನ್ನುವಂತೆ ಕಾನ್ಶಿರಾಮ್ ಹಾಗೂ ಮಾಯಾವತಿ ಜೋಡಿ ಉತ್ತರ ಪ್ರದೇಶದ ರಾಜಕಾರಣದ ದಿಕ್ಕನ್ನು ಸದಾಕಾಲ “ಮಾಯಾಲೋಕ” ಸುತ್ತಲೇ ಪರಿಭ್ರಮಿಸುವಂತೆ ಮಾಡಿದ್ದರೂ ಅದಕ್ಕಾಗಿ ಆ ಪಕ್ಷ ಹಾಗೂ ದಲಿತರು ತೆತ್ತ ಬೆಲೆ ಅಪಾರ.

ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿಯ ಮತ್ತೊಂದು ಬಲು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು. ಅದನ್ನು ಸಮರ್ಥಿಸಿಕೊಳ್ಳಲು ಬಳಸಿದ್ದು ಮೇಲ್ಜಾತಿಯವರು ಮಾಡಿದರೆ ಕಣ್ಣು ಮುಚ್ಚುತ್ತೀರಿ ನಾವು ಮಾಡಿದರೆ ಕೆಂಗಣ್ಣೇಕೆ ಎನ್ನುವ ಉಡಾಫೆಯ ಹಾದಿತಪ್ಪಿದ ಸಾಮಾಜಿಕ ನ್ಯಾಯದ ಧೋರಣೆ. ಇದಕ್ಕಾಗಿಯೇ ಕಾಯುತ್ತಿದ್ದ ಬಹುಪಾಲು ಮಾಧ್ಯಮಗಳು ಮಾಯಾವತಿ ಹಾಗು ಬಿಎಸ್‌ಪಿ ಪಕ್ಷವನ್ನು ಭ್ರಷ್ಟಾಚಾರದ ಮತ್ತೊಂದು ಅವತಾರವೆನ್ನುವಂತೆ ಬಿಂಬಿಸಿದ್ದು. ಮುಂದೆ ಇದು ಬಹುಜನ ಸಮಾಜ ಪಕ್ಷ ಹಾಗೂ ಮಾಯಾವತಿಯವರ ವರ್ಚಸನ್ನೇ ಸಂಪೂರ್ಣವಾಗಿ ನುಂಗಿ ನೀರು ಕುಡಿಯಿತು. ಇವೆಲ್ಲದರಿಂದ ಹೊರಬರಲು ಮಾಯಾವತಿ ಅವರು ತಮ್ಮ ಆಡಳಿತದ, ರಾಜಕೀಯ ಶೈಲಿಯನ್ನೇ ಭಾವೋದ್ವೇಗದ, ಬಿಗಿಮುಷ್ಟಿಯ, ಉಪೇಕ್ಷೆಯ ಮಟ್ಟಕ್ಕೆ ನಿಲ್ಲಿಸಿಕೊಂಡು ಈಗಲೂ ತಮ್ಮ ಈ ಬಲೆಯಿಂದ ಹೊರಬರಲು ಇನ್ನಿಲ್ಲದೆ ಹೆಣಗುತ್ತಿರುವುದು ನಿಜಕ್ಕೂ ದುಖದ ಸಂಗತಿ. ತಮ್ಮ ಹಾದಿತಪ್ಪಿದ ರಾಜಕೀಯ ಲೆಕ್ಕಾಚಾರ ಹಾಗು ಗೊತ್ತುಗುರಿಯಿಲ್ಲದ ಆಡಳಿತದಿಂದಾಗಿ ಮತ್ತೆ ಬಲಿಯಾದದ್ದು ಅಲ್ಲಿನ ದಲಿತರು. ಕಾನ್ಸೀರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ನಿಸ್ವಾರ್ಥದಿಂದ ದಲಿತರ ಸಬಲೀಕರಣಕ್ಕಾಗಿ ಕಟ್ಟಿದ ಸಂಘಟನೆಯನ್ನು ತಮ್ಮ ಗೊತ್ತು ಗುರಿಯಿಲ್ಲದ ನೀತಿಗಳ ಮೂಲಕ ಸ್ವತಹ ತಾವೇ ಕೈಯಾರೆ ಕೆಡವಿದ್ದು ಇಂಡಿಯಾದ ಚರಿತ್ರೆಯಲ್ಲಿ ಒಂದು ದುರಂತ ಇತಿಹಾಸವಾಗಿಯೇ ನಮ್ಮೆಲ್ಲರನ್ನು ಅಣಕಿಸುತ್ತಿರುತದೆ.

20 ವರ್ಷಗಳ ಅವಿರತ ಹೋರಾಟ, ಅಭೂತಪೂರ್ವ, ಸ್ವಾರ್ಥರಹಿತ ಹೋರಾಟಕ್ಕೆ ಈ ಗತಿಯಾದರೆ ಇನ್ನು ಕೇವಲ ಭ್ರಷ್ಟಾಚಾರ, ಹುಂಬ, ಸರ್ವಾಧಿಕಾರದ ಹಿನ್ನೆಲೆಯಿಂದ, ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ರಾಜಕೀಯ ನಡೆಸಿದ ಶ್ರೀರಾಮುಲು ಎನ್ನುವ ಗೊತ್ತು ಗುರಿ ಇಲ್ಲದ ನಾಯಕರು ಮುಂದಿನ ತಿಂಗಳು ಹೊಸ ಬಡವರ, ಹಿಂದುಳಿದ ವರ್ಗಗಳ ಪಕ್ಷ ಹುಟ್ಟಿಹಾಕುತ್ತೇನೆ ಎಂದು ಹೇಳುತ್ತಿರುವುದರ ಗತಿ ಈಗಲೇ ಸರ್ವವಿದಿತವಾಗಿದೆ. ಇವರೆಲ್ಲರ ರಾಜಕೀಯ ಮಹಾತ್ವಾಕಾಂಕ್ಷೆಗೋಸ್ಕರ ಅಮಾಯಕ ಹಿಂದುಳಿದ ವರ್ಗಗಳು ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಇದರಿಂದ ಅವರಿಗಷ್ಟೇ ಹಾನಿಯಲ್ಲ ನಮ್ಮೆಲ್ಲರ ನೈತಿಕತೆಯೂ ಹಾನಿಗೊಳ್ಳುತ್ತದೆ ಹಾಗೂ ಪ್ರಶ್ನಾರ್ಹವಾಗುತ್ತದೆ.

2 thoughts on “ಮಾಯಾ-ಮುಲಾಯಮ್ ಹಿನ್ನೆಲೆಯಲ್ಲಿ ವರ್ತಮಾನ ಕರ್ನಾಟಕದ “ಹಿಂದ” ರಾಜಕೀಯ

  1. Ananda Prasad

    ಬಡವರ, ಶ್ರಮಿಕರ, ರೈತರ ಹಿತಕ್ಕಾಗಿ ಅಧಿಕಾರದಲ್ಲಿದ್ದಾಗ ಈ ಗಣಿ ಕಳ್ಳರು ಏನು ಮಾಡಿದ್ದಾರೆ ಎಂಬುದನ್ನು ನೋಡಿದರೆ ಮುಂದೆ ಏನು ಆಗುತ್ತದೆ ಎಂಬುದರ ಮುನ್ಸೂಚನೆ ಸಿಕ್ಕುತ್ತದೆ. ಕೋಟೆಯಂಥ ಜನಸಾಮಾನ್ಯರು ಪ್ರವೇಶಿಸಲು ಸಾಧ್ಯವಾಗದ ಅರಮನೆ, ಚಿನ್ನದ ಕುರ್ಚಿ, ಚಿನ್ನದ ತಟ್ಟೆ, ಚಮಚ, ಕಿಲೋಗಟ್ಟಲೆ ಚಿನ್ನ ಇಟ್ಟುಕೊಂಡು ಮೆರೆದಾಡುತ್ತಿರುವ, ರೈತರ ಫಲವತ್ತಾದ ಜಮೀನನ್ನು ಅಗೆದು ಅದಿರನ್ನು ಅಕ್ರಮವಾಗಿ ಪರದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿ ಹಾಕಿರುವ ಇವರು ಬಡವರ, ಶ್ರಮಿಕರ, ರೈತರ ಬಗ್ಗೆ ಮಾತಾಡುವುದೇ ಹಾಸ್ಯಾಸ್ಪದವಾಗಿದೆ. ಹೆಲಿಕಾಪ್ಟರಿನಲ್ಲೇ ಓಡಾಡುವ ಈ ಗಣಿಕಳ್ಳರಿಗೆ ಬಡವರ, ಶ್ರಮಿಕರ, ರೈತರ ಕಷ್ಟ ಹೇಗೆ ಗೊತ್ತಾಗಬೇಕು? ರೈತರ ಫಲವತ್ತಾದ ಜಮೀನನ್ನು ವಿಮಾನ ನಿಲ್ದಾಣಕ್ಕೆ ಗಣಿಕಳ್ಳರು ವಶಪಡಿಸಿಕೊಂಡಾಗ ಇವರ ರೈತಪರ ಕಾಳಜಿ ಎಲ್ಲಿ ಹೋಗಿತ್ತು? ಈ ಬಗ್ಗೆ ಪ್ರಶ್ನಿಸುವವರು ಯಾರಾದರೂ ಇದ್ದಾರೆಯೇ? ಇಂಥ ಗಣಿ ಕಳ್ಳರ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎನ್ನುವ ಜೆ.ಡಿ.ಎಸ್. ತೆನೆ ಹೊತ್ತ ಮಹಿಳೆಯ ಚಿನ್ಹೆ ಇಟ್ಟುಕೊಂಡು ಹೇಗೆ ತಾನು ರೈತ ಪರ ಎಂದು ಬಿಂಬಿಸುತ್ತದೆ? ಇವರು ಕರ್ನಾಟಕದ ಜನರನ್ನು ಕುರಿಗಳೆಂದು ತಿಳಿದಿದ್ದಾರೆ.

    Reply

Leave a Reply

Your email address will not be published. Required fields are marked *