ಯಡಿಯೂರಪ್ಪನ ಯಾಗ ಮತ್ತು ನರಸತ್ತ ನಾಗರೀಕ ಸಮಾಜ

ಪ್ರಿಯ ಮಿತ್ರರೆ,

ಅತ್ಯಂತ ನೋವು ಮತ್ತು ಯಾತನೆಯಿಂದ ಈ ಲೇಖನ ಬರೆಯುತಿದ್ದೇನೆ. ಇಲ್ಲಿನ ಶಬ್ಧಗಳು ಕಟುವಾಗಿದ್ದರೆ, ಕ್ಷಮೆಯಿರಲಿ.

ನಿನ್ನೆ ಅಂದರೆ 19-12-11ರ ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡನೇ ಭಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಗ ನಡೆಸಿದರು. ಇದಕ್ಕೆ ಕೊಟ್ಟ ಕಾರಣ ಮಾತ್ರ “ಲೋಕ ಕಲ್ಯಾಣಕ್ಕಾಗಿ” ಎಂಬುದಾಗಿತ್ತು. ಇದಕ್ಕೂ ಮುನ್ನ 17ರ ಶನಿವಾರ ಯಲಹಂಕ ಉಪನಗರದ ಬಳಿ 10 ಸಾವಿರ ಮಹಿಳೆಯರ ಜೊತೆಗೂಡಿ ಲಲಿತ ಸಹಸ್ರ ಕುಂಕುಮಾರ್ಚನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನ ನೀವು ಗಮನಿಸಿದ್ದೀರಿ.

ಯಡಿಯೂರಪ್ಪ ಮತ್ತು ಆ ಹತ್ತು ಸಹಸ್ರ ಮಹಿಳೆಯರು ತಮಗೆ ಅರ್ಥವಾಗದ ಮಂತ್ರಗಳನ್ನು ವದರುತ್ತಾ ಸಹಸ್ರಾರು ರುಪಾಯಿಗಳ ಕುಂಕುಮವನ್ನು ಗಾಳಿಗೆ ತೂರುವ ಬದಲು 10 ಸಾವಿರ ಗಿಡಗಳನ್ನ ಅದೇ ಯಲಹಂಕದ ಸುತ್ತ ಮತ್ತಾ ನೆಟ್ಟಿದ್ದರೆ ಅದು ಎಷ್ಟು ಅರ್ಥಪೂರ್ಣವಾಗಿರುತಿತ್ತು ಅಲ್ಲವೆ? ಒಮ್ಮೆ ಯೋಚಿಸಿ.

ಮುಖ್ಯಮಂತ್ರಿಯ ಗಾದಿಯಿಂದ ಇಳಿದ ಮೇಲೆ ಈ ಮನುಷ್ಯನ ವರ್ತನೆ, ಪ್ರತಿಕ್ರಿಯೆ, ದೇವಸ್ಥಾನಗಳ ಸುತ್ತಾಟ ಇವೆಲ್ಲಾ ಗಮನಿಸಿದರೆ, ಇವರು ಮಾನಸಿಕ ಅಸ್ವಸ್ಥ ಎಂಬ ಗುಮಾನಿ ಮೂಡುತ್ತಿದೆ. ಈಗ ಯಡಿಯೂರಪ್ಪನವರ ಪಾಲಿಗೆ ಮೂರ್ಖ ಜೊತಿಷಿಗಳೇ ಆಪ್ತ ಬಾಂಧವರಾಗಿದ್ದಾರೆ. ಮತ್ತೇ ಅಧಿಕಾರ ಪಡೆಯುವುದಕ್ಕಾಗಿ ಏನೆಲ್ಲಾ ಕಸರತ್ತು ನಡೆಸಿರುವ ಯಡಿಯೂರಪ್ಪನವರಿಗೆ ಸದ್ಯಕ್ಕೆ ಬಾಕಿ ಉಳಿದಿರುವುದೊಂದೇ ಅದು ನರಬಲಿ. ಇಂತಹ ಮನೆಹಾಳತನದ ಸಲಹೆಯನ್ನು ಇವರಿಗೆ ಯಾರೂ ನೀಡಿಲ್ಲ.

ಇವರಿಗೆಲ್ಲಾ ಆತ್ಮಸಾಕ್ಷಿ, ಪ್ರಜ್ಷೆ ಎಂಬುದು ಇದ್ದಿದ್ದರೆ, ಜನ ನಾಯಕರಾಗಿ ಈ ರೀತಿ ವರ್ತಿಸುತ್ತಿರಲಿಲ್ಲ. ಚಾಮರಾಜ ನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಯಾವ ಮುಖ್ಯ ಮಂತ್ರಿಯೂ ಅಲ್ಲಿಗೆ ಬೇಟಿ ನೀಡಲಿಲ್ಲ. ಬೇಟಿ ನೀಡದಿದ್ದರೂ ಯಾಕೆ ಅಧಿಕಾರ ಕಳೆದುಕೊಂಡೆವು ಎಂಬುದನ್ನ ಯಾವ ಮುಖ್ಯಮಂತ್ರಿಯೂ ಆಲೋಚಿಸಲಿಲ್ಲ. ಇದು ಈ ನಾಡಿನ ವೈಚಾರಿಕ ಪ್ರಜ್ಙೆಗೆ ಗರ ಬಡಿದ ಸಂಕೇತವೇ? ನನಗಿನ್ನೂ ಅರ್ಥವಾಗಿಲ್ಲ.

ಎರಡು ತಿಂಗಳ ಹಿಂದೆ ಯಡಿಯೂರಪ್ಪನವರ  ಆಪ್ತರಾದ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಚಾಮರಾಜನಗರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇರಳದಿಂದ ಪುರೋಹಿತರನ್ನು ಕರೆಸಿ ಯಜ್ಞ ಯಾಗ ಮಾಡಿದರು. ಲಕ್ಷಾಂತರ ರೂಪಾಯಿಯ ತುಪ್ಪ ಬೆಣ್ಣೆ, ರೇಷ್ಮೆ ಬಟ್ಟೆಗಳನ್ನ ಬೆಂಕಿಗೆ ಹಾಕಿ ಆಹುತಿ ಮಾಡಿದರು. ನಾಡಿನ ಜನಪ್ರತಿನಿಧಿಗಳಾಗಿದ್ದುಕೊಂಡು, ಸಚಿವರಾಗಿ ಇಂತಹ ಅರ್ಥಹೀನ ಆಚರಣೆಗಳ ಮಾಡುವ ಮುನ್ನ ಈ ಮೂರ್ಖರು ಒಮ್ಮೆ ಉತ್ತರ ಕರ್ನಾಟಕದ ಸ್ಥಿತಿ ಏನಾಗಿದೆ ಎಂದು ನೋಡಿ ಬಂದಿದ್ದರೆ ಚೆನ್ನಾಗಿರುತಿತ್ತು. ಅಲ್ಲಿಯ ಬದುಕು ಅರ್ಥವಾಗುತಿತ್ತು

ಕಳೆದ ಹತ್ತು ವರ್ಷಗಳ ನಂತರ ಉತ್ತರ ಕರ್ನಾಟಕ ಭೀಕರ ಬರಗಾಲದಲ್ಲಿ ತತ್ತರಿಸುತ್ತಿದೆ. ಬಿಜಾಪುರ ಜಿಲ್ಲೆಯಲ್ಲಿ ಈ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆ ಬಿದ್ದಿದೆ ಎಂದರೆ ನೀವು ನಂಬಲಾರರಿ. ಅಲ್ಲಿನ ಜನ ತಮಗೆ ಹಾಗೂ ತಮ್ಮ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ, ತಿನ್ನುವ ಅನ್ನ ಮತ್ತು ಮೇವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಸ್ಥಿತಿವಂತ ರೈತರು ತಮ್ಮ ದನ ಕರುಗಳನ್ನ ಮೇವು ನೀರು ಇರುವ ಪ್ರದೇಶಗಳ ನೆಂಟರ ಮನೆಗಳಿಗೆ ಸಾಗಿಸುತಿದ್ದಾರೆ, ಏನೂ ಇಲ್ಲದವರು ಗೋವಾ ಹಾಗೂ ಕೇರಳದ ಕಸಾಯಿಖಾನೆಗಳಿಗೆ ಅಟ್ಟುತಿದ್ದಾರೆ. ಅವುಗಳ ಮೇಲಿನ ಪ್ರೀತಿ ಮತ್ತು ಭಾವುಕತೆಯಿಂದ ಮಾರಲಾಗದ ಅಸಹಾಯಕರು ಮೂಕ ಪ್ರಾಣಿಗಳನ್ನ ಬಟ್ಟ ಬಯಲಿನಲ್ಲಿ ಬಿಟ್ಟು ರಾತ್ರೋರಾತ್ರಿ ಕೂಲಿ ಅರಸಿಕೊಂಡು ಪೂನಾ, ಮುಂಬೈ ರೈಲು ಹತ್ತುತಿದ್ದಾರೆ. ಡಿಸಂಬರ್ ಚಳಿಗಾದಲ್ಲಿ ಕೂಡ ಉರಿಯುತ್ತಿರುವ ಸೂರ್ಯನ ಬಿಸಿಲಿಗೆ ಮೇವು ನೀರಿಲ್ಲದ ಈ ಮೂಕ ಪ್ರಾಣಿಗಳು ನಿಂತಲ್ಲೆ ನೆಲಕ್ಕೊರುಗುತ್ತಿವೆ.

ಕಳೆದ ಒಂದು ತಿಂಗಳಿನಿಂದ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡದ ಗ್ರಾಮಾಂತರ ಪ್ರದೇಶಗಳನ್ನು ಸುತ್ತಿ ಬಂದ ಮೇಲೆ ನನಗೆ,  ಜನಪ್ರತಿನಿಧಿಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಇಲ್ಲಿನ ಜನತೆ ಕಪಾಳಕ್ಕೆ ಇನ್ನೂ ಬಾರಿಸಿಲ್ಲವಲ್ಲ ಏಕೆ ಎಂಬ ಪ್ರಶ್ನೆ ಕಾಡತೊಡಗಿದೆ. ಅಲ್ಲದೆ ನನ್ನ ಬಾಲ್ಯದ ದಿನಗಳಲ್ಲಿ ಕೇಳಿದ್ದ ಜನಪದ ಗೀತೆಗಳು ನೆನಾಪಾಗುತ್ತಿವೆ.

1) ಹಾದೀಲಿ ಹೋಗುವವರೇ ಹಾಡೆಂದು ಕಾಡಬೇಡಿ
ಇದು ಹಾಡಲ್ಲ ನನ್ನೊಡಲುರಿ ದೇವರೆ
ಇದು ಬೆವರಲ್ಲ ನನ್ನ ಕಣ್ಣೀರು

2) ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ
ಒಡಲ ಬೆಂಕೀಲಿ ಹೆಣ ಬೆಂದೋ ದೇವರೆ
ಬಡವರಿಗೆ ಸಾವ ಕೊಡಬೇಡೋ

3) ಹೆಣ್ಣಿನ ಗೋಳಟ್ಟಿ ಬನ್ನಿಯ ಮರ ಬೆಂದೋ
ಅಲ್ಲಿ ಸನ್ಯಾಸಿ ಮಠ ಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೋ

4) ಕಣಜ ಬೆಳೆದ ಮನೆಗೆ ಉಣಲಾಕೆ ಕೂಳಿಲ್ಲ
ಬೀಸಾಕ ಕವಣೆ ಬಲವಿಲ್ಲ ಕೂಲಿಯವರ
ಸುಡಬೇಕ ಜನುಮ ಸುಖವಿಲ್ಲ

ಗೋರಕ್ಷಣೆಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುವ ಹಾಗೂ ಅವುಗಳ ಪಕ್ಕ ನಿಂತು ಚಿತ್ರ ತೆಗೆಸಿಕೊಳ್ಳುವ ಕಪಟ ಸ್ವಾಮಿಗಳಿಗೆ, ನಕಲಿ ರೈತರ ಹೆಸರಿನ ಅಸ್ತಿತ್ವಕ್ಕೆ ಬಂದ ಸಾವಯವ ಕೃಷಿ ಮಿಷನ್ ಮೂಲಕ ರೈತರಲ್ಲದವರಿಗೆ ವರ್ಷಕ್ಕೆ ನೂರಾರು ಕೋಟಿ ಹಣ ನೀಡುತ್ತಿರುವ ಸರ್ಕಾರದ ಕ್ರಮವನ್ನು ನಾಗರೀಕ ಸಮಾಜದಲ್ಲಿ ಬದುಕುತ್ತಿರುವ ನಾವು ಈಗಲಾದರೂ ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ, ಈ ಸಮಾಜವನ್ನು ನರಸತ್ತ ನಾಗರೀಕ ಸಮಾಜವೆಂದು ನಾವೆಲ್ಲರೂ ಒಕ್ಕೊರಲಿನಿಂದ ಘೋಷಿಸಿ ಕೊಳ್ಳಬೇಕಾಗಿದೆ.

ಸಮ್ಮನೆ ಒಮ್ಮೆ ತಣ್ಣಗೆ ಕುಳಿತು ಯೋಚಿಸಿ. ಈ ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ದೇಗುಲಗಳಿಗೆ, ಮಠ ಮಾನ್ಯಗಳ ಬೇಟಿಗಾಗಿ ಖರ್ಚು ಮಾಡಿದ ಪ್ರಯಾಣದ ವೆಚ್ಚ, ಹಾಗೂ ಇವುಳಿಗೆ ನೀಡಿದ ಅನುದಾನ ಇದನ್ನು ಲೆಕ್ಕ ಹಾಕಿದರೆ, ನೂರು ಕೋಟಿ ರೂಪಾಯಿ ದಾಟಲಿದೆ.

ಇದೇ ಹಣವನ್ನ ದನಕರುಗಳ ಮೇವಿಗಾಗಿ ಇಂದು ಉತ್ತರ ಕರ್ನಾಟಕದಲ್ಲಿ ವಿನಿಯೋಗಿಸಿದ್ದರೆ,  ದೇವಸ್ಥಾನ, ಮಠ ಬೇಟಿ ನೀಡಿದ್ದಕ್ಕೆ ಹಾಗು ಹೋಮ ಹವನ ಮಾಡಿಸಿದ್ದಕ್ಕೆ ಸಿಗುವ ಫಲಕ್ಕಿಂತ ಹೆಚ್ಚಿನ ಪುಣ್ಯ ಯಡಿಯೂರಪ್ಪನವರಿಗೆ ಸಿಗುತ್ತಿತ್ತೇನೊ?

ಡಾ. ಎನ್. ಜಗದೀಶ್ ಕೊಪ್ಪ

6 thoughts on “ಯಡಿಯೂರಪ್ಪನ ಯಾಗ ಮತ್ತು ನರಸತ್ತ ನಾಗರೀಕ ಸಮಾಜ

 1. prasad raxidi

  ಡಾ.ಜಗದೀಶ್ ಹೌದು ನಮಗೆಲ್ಲ ಏನಾಗಿದೆ ಎಂದು ನಾವೇ ಕೇಳಿಕೊಳ್ಳಬೇಕು. ನಮ್ಮ ಎಲ್ಲ ಹೋರಾಟಗಳು ಜಾತಿ ಕೇಂದ್ರಿತವಾಗುತ್ತಿರುವಾಗ, ಎಲ್ಲದನ್ನೂ ಒಳಗೊಳ್ಳುವ ಸಾಮಾಜಿಕ ಚಳುವಳಿಗಳನ್ನು ರೂಪಿಸುವುದು ಹೇಗೆ. ಮಡೆಸ್ನಾನದ ವಿರುದ್ಧ ದಲಿತಸಂಘಟನೆಗಳಷ್ಟು ಬಲವಾಗಿ ನಮ್ಮ ಮಧ್ಯಮ ಜಾತಿಗಳು ಪ್ರತಿಭಟಿಸುತ್ತಿಲ್ಲ. ಗಾಂಧಿ ಬಂದ ಪುಸ್ತಕದ ಬಗ್ಗ ವಿನಾಕಾರಣ ಪ್ರತಿಭಟನೆ ನಡೆಯುತ್ತದೆ. ಆದರೆ ಇಂತಹ ಜಾತ್ಯತೀತ ಸಮಸ್ಯೆಗಳಬಗ್ಗೆ ಜನರನ್ನು ಒಂದುಗೂಡಿಸುವುದು ಹೇಗೆ..? ಇಷ್ಟಕ್ಕೂ ಇದು ಯಾವುದೇ ಕಾರ್ಪೊರೇಟ್ ವಲಯಕ್ಕೆ ತೊಂದರೆಯಾಗುವಂತಹದ್ದು ಅಲ್ಲವಲ್ಲ!. ದೇವರಾಜ ಅರಸು ಅವರು ಮೃತಪಟ್ಟಾಗ ಪ್ರಜಾವಾಣಿಯಲ್ಲಿ ಬಂದ ಲೇಖನವೊಂದರಲ್ಲಿದ್ದ ಕತೆಯ ನೆನಪಾಗುತ್ತದೆ. ಹೋರಾಟದಲ್ಲಿ ಸತ್ತ ಜನನಾಯಕನ ಶವವನ್ನು ಹೊತ್ತು ಸಾಗುತ್ತಿದ್ದ ಜನರು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಿದ್ದ ಘೋಷಣೆ “ನಮಗೆ..ಧಿಕ್ಕಾರ…ನಮಗೆ..ಧಿಕ್ಕಾರ”…..

  Reply
 2. Ananda Prasad

  ಕರ್ನಾಟಕವು ಮತ್ತೆ ಪುರೋಹಿತಶಾಹಿಗಳ ಹಿಡಿತಕ್ಕೆ ಹೋಗುತ್ತಿರುವುದರ ಸಂಕೇತ ಈ ಯಜ್ಞ ಯಾಗಾದಿಗಳು. ಲಿಂಗಾಯತರಾದ ಯಡಿಯೂರಪ್ಪನವರು ಪುರೋಹಿತಶಾಹಿಯ ಅಡಿಯಾಳಿನಂತೆ ನಡೆದುಕೊಳ್ಳುತ್ತಿರುವುದು ದೊಡ್ಡ ವಿಪರ್ಯಾಸ. ಇವರ ಮೇಲೆ ಬಸವಣ್ಣ ಹಾಗೂ ಇನ್ನಿತರ ಶರಣರ ಚಿಂತನೆಗಳು ಸ್ವಲ್ಪವೂ ಪ್ರಭಾವ ಬೀರಿಲ್ಲ ಎಂಬುದು ಎದ್ದು ಕಾಣುತ್ತದೆ. ನಾವು ೨೧ ನೆಯ ಶತಮಾನದಲ್ಲಿದ್ದರೂ ನಮ್ಮ ಜನಗಳು ಇನ್ನೂ ಪುರೋಹಿತಶಾಹಿಯಿಂದ ಹಿಡಿತದಿಂದ ಹೊರಬಂದಿಲ್ಲ ಮಾನಸಿಕವಾಗಿ. ಹೀಗಾಗಿ ನಾವು ಅಸಹಯಾಕರಾಗಿದ್ದೇವೆ. ಜನರನ್ನು ಪುರೋಹಿತಶಾಹಿಯ ಕಬಂಧ ಬಾಹುಗಳಿಂದ ಹೊರತರಬೇಕಾದ ಮಾಧ್ಯಮಗಳಲ್ಲಿ ಇಂದಿಗೂ ಪುರೋಹಿತಶಾಹಿಯ ಹಿಡಿತ ಇರುವುದರಿಂದ ನಾವು ಹೆಚ್ಚಿನದೇನನ್ನೂ ಮಾಡಲಾರದ ಸ್ಥಿತಿ ಇದೆ. ಬಸವಣ್ಣನವರಿದ್ದ ೧೨ನೆಯ ಶತಮಾನಕ್ಕೂ ಇಂದಿನ ೨೧ ಶತಮಾನಕ್ಕೂ ನಮ್ಮ ಮಾನಸಿಕತೆಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಪ್ರಜ್ಞಾವಂತರು, ವಿಚಾರಶೀಲರು ಒಂದು ಗುಂಪನ್ನು ರಚಿಸಿಕೊಂಡು ನಮ್ಮ ಏಕಾಂಗಿತನದಿಂದ ಹೊರ ಬಂದು ಸಮಾಧಾನ ಪಟ್ಟುಕೊಳ್ಳಬಹುದೇ ಹೊರತು ಬಹುಸಂಖ್ಯಾತ ಅವೈಚಾರಿಕ ಜನಸಮೂಹವನ್ನು ಪ್ರಭಾವಿಸಲಾಗದ ಪರಿಸ್ಥಿತಿ ಇಂದೂ ಇದೆ. ಬಹುಶ: ಇಂಥ ಸ್ಥಿತಿ ಮುಂದೆಯೂ ಇರುತ್ತದೆ. ಇದಕ್ಕೆ ಕಾರಣ ಬಹುಶ: ಭಾರತೀಯರ ವಂಶವಾಹಿಗಳಲ್ಲೇ ಅವೈಚಾರಿಕತೆಯೇ ಪ್ರವಹಿಸುತ್ತಿರುವ ಸಾಧ್ಯತೆಗಳಿವೆ.

  Reply
 3. Sadanand

  ಸರ್…..
  ನಿಮ್ಮ ಮಾತು ಕೇಳಿ ನನಗೆ ಒಂತರಾ ನೊವು ಉಂಟಾಯಿತು ,ಆದ್ರು ಎನ ಮಾಡುದು ನಮ್ಮ ಊರಿನ ಜನರಿಗೆ ಓಟು ಹಾಕಿದವ್ರಿಗೆ ಒದ್ದು ಕೇಳೊಬುದ್ದಿ ಯಾವಾಗ ಬರತ್ತೊ ಅನ್ನೊದೆ ಗೊತ್ತಿಲ್ರಿ ಅವ್ರಿಗಿ ಎಷ್ಟೆ ಕಷ್ಟಬಂದ್ರು ಅವ್ರನ್ನ ಅಂತ್ರು ಕೆಳಲ್ಲ ಬಿಡ್ರಿ……

  Reply
 4. Chetan Buradikatti

  ಗೋರಕ್ಷಣೆಗೆಂದು ಸರಕಾರ ಬಿಡುಗಡೆ ಮಾಡುವ ಹಣವು ನಾವು ಆಳಿಸಿಕಳ್ಳವು ಅಧಿಕಾರಿಗಳೆ ಅದನ್ನು ತಿಂದು ತಮ್ಮ ದೇಹ, ಸಂಸಾರವನ್ನು ಉನ್ನತಿಯತ್ತ ಸಾಗಿಸಿಕೊಳ್ಲುತ್ತಿದ್ದಾರೋ ಹೊರತು ತಮಗೆ ಓಟು ಹಾಗಿ ಅಧಿಕಾರದಲ್ಲಿ ಕೂರಿಸಿದವರನ್ನು ಮರೆತು, ತಮಗೆ ಕಾಲಿ ನಿವೇನ ಹೀಗೆ ಮುಂತಾದ ಅವ್ಯವಹಾರ ತೊಡಗಿ ಕರ್ನಾಟಕ ಈ ಹೀಂದೆದೂ ಕಾಣದಂತಹ ಹೊಲಸು ರಾಜಕಾರಣವನ್ನು ಮಾಡಿ ಬಂಧಿಖಾನೆಗೆ ಹೋಗೆ ಬಂದರು ಸಹ ಇವರಿಗೆ ಬುದ್ದಿ ಬಂದಿಲ್ಲ. ಈ ಎಲ್ಲವನ್ನು ನೋಡಿದ ಮೇಲೆ ಇವರನ್ನು ಏನು ಮಾಡಬೇಕು ಎಂದು ಕೋಪ ಬರುತ್ತದೆ. ಅದೇರೀತಿಯಾಗಿ ನಮ್ಮ ಜನರು ಸಹ ಚುನಾವಣೆಯ ಸಮಯದಲ್ಲಿ ಯಾರು ಉತ್ತಮ ಎಂದು ಯೋಚಿಸುವುದನ್ನು ಬಿಟ್ಟು ಯಾರು ಹಣ, ಸೀರೆ, ಸಾರಾಯಿಗಳನ್ನು ನೀಡುವಂತಹವರಿ ಹೋಗಿ ಮೊದಲು ತಮ್ಮ ಹಕ್ಕನ್ನು ಮಾರಿಕೊಳ್ಳುತ್ತಿದ್ದಾರೆ. ಮುಂದೊಂದು ದಿನ ನಮ್ಮ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಮಾರಿಕೊಂಡರು ಅದು ನಮಗೆ ಸಂಬಂಧವೇ ಇಲ್ಲವೆಂದು ಕುಳಿತು ನೋಡುತ್ತಿರುವ ನಮ್ಮ ಜನರಿಗೆ ಯಾವಾಗ ಬುದ್ದಿ ಬರುತ್ತದೆಯೋ ಆ ದೇವರಿಗೆ ಗೊತ್ತು.

  Reply
 5. Hariprasad

  ಇಂದಿನ ಕಾಲಘಟ್ಟದಲ್ಲಿ ಬದುಕುತ್ತಿರುವ ನಮ್ಮನ್ನೆಲ್ಲಾ ಜ್ಯೋತಿಷ್ಯ-ನಂಬಿಕೆ-ದೇವರು-ಯಾಗ ಇವುಗಳೇ ಆಳುತ್ತಿವೆಯೋ ಎಂಬಷ್ಟರ ಮಟ್ಟಿಗೆ ಇವುಗಳು ನಮ್ಮನ್ನು ಆವರಿಸಿಕೊಂಡಿವೆ. ಪ್ರತೀ ಮನೆಯಿಂದ ಹಿಡಿದು ನಮ್ಮನ್ನಾಳುವ ರಾಜಕಾರಣಿಗಳ ಕಛೇರಿಗಳ ತನಕ ಇಷ್ಟೇ ಯಾಕೆ ಪ್ರಜಾಪ್ರಭುತ್ವದ ಶಕ್ತಿ ಸಂಕೇತವಾಗಿರುವ ವಿಧಾನ ಸೌಧದ ಕೊಠಡಿ ಕೊಠಡಿಯೂ ಹೋಮದ ಹೊಗೆಯ ರುಚಿ ನೋಡಿದ್ದಾಗಿದೆ. ಧಾರ್ಮಿಕತೆ ಮತ್ತು ರಾಜಕೀಯವನ್ನು ಎಲ್ಲಿ ಎಷ್ಟು ಪ್ರಮಾಣದಲ್ಲಿ ಹೇಗೆ ಬೆರೆಸಬೆಕೆಂಬುದನ್ನು ಮರೆತು ಅತಿಪಾಕ ಮಾಡಿದರ ಪರಿಣಾಮ ಇದು. ಇಂದು ಲ್ಯಾಪ್‌ಟಾÂಪ್‌ ಜ್ಯೋತಿಷಿಗಳ ಕಾಟ ಒಂದೆಡೆಯಾದರೆ, ಬಗಲಲ್ಲೆ ಸಮಿದೆ, ದಭೆì, ಬೆಂಕಿ ಹಿಡಿದು ಆ ಹೋಮ ಈ ಹೋಮ ಎಂದು ಬುದ್ದಿಹೀನ ರಾಜಕಾರಣಗಳಿಗೆ ಹೊಗೆ ಹಾಕಿಸುತ್ತಿರುವ ವಿಪ್ರಗಡಣ ಇನ್ನೊಂದೆಡೆ. ಇತ್ತ ಶ್ರೀ ಸಾಮಾನ್ಯನೊಬ್ಬ ಯಾವುದೇ ದೇವಸ್ಥಾನಕ್ಕೆ ತೆರಳಿದರೂ ತೀರ್ಥ-ಗಂಧ-ಪ್ರಸಾದ ಸೇವೆಗಳಿಗೆ ತಾಸುಗಟ್ಟಲೆ ಕ್ಯೂ ನಿಂತು ತಥಾಕಥಿತ ದೇವಸೇವಕರ ಬೈಗುಳದ ಸಹಸ್ರನಾಮ ತಿಂದು ಬಳಿಕ ದೇವರ ದರ್ಶನ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಇದ್ದರೆ, ಇಂತಹ ಗಣ್ಯರು ಯಾವುದೇ ತೊಂದರೆಪಡದೆ ದೇವರೆದುರಲ್ಲೇ ಮಲ್ಲಿಗೆ ಹಾರ ಹಾಕಿಸಿಕೊಂಡು ದೇವರಿಗಿಂತ ದೊಡ್ಡವರಾಗಿಬಿಡುತ್ತಾರೆ, ಆಗಲೇ ಬೇಕಲ್ಲ.. ಯಾಕೆಂದರೆ ದೇವರನ್ನು ಸಾಕುವವರು ಅವರೇ ತಾನೆ…?
  ಕೊನೆಯದಾಗಿ, ಒಳಗಡೆ ಬಿಸಿನೀರ ಸ್ನಾನ ಮುಗಿಸಿ ಪುಷ್ಕರಣಿಯಲ್ಲಿ ಅರ್ಧಮುಳುಗಿ ತಾವು ನಡೆಯುವ ಜಾಗದಲ್ಲಿ ಕಮಂಡಲದ ನೀರು ಚೆಲ್ಲುತ್ತಾ ಕೃಷ್ಣ… ಕೃಷ್ಣ.. ಎಂದು ಸಾಗುವ ಸಾಧು ಸಂತರಿಗೆ ತಮ್ಮ ಕೃಷ್ಣನನ್ನು ಸಂದರ್ಶಿಸಲು ಬರುವ ಭಕ್ತರಿಗೆ ಕೈ-ಕಾಲು ತೊಳೆಯಲು ಸರಿಯಾದ ವ್ಯವಸ್ಥೆಯಿಲ್ಲ ಮತ್ತು ತಮ್ಮ ಕೃಷ್ಣನ ಗುಡಿಯ ಹೊರ ಆವರಣವೆಲ್ಲಾ ಗುಟ್ಕಾ ಮಡೆಯಿಂದ ಸಿಂಗಾರಗೊಂಡಿದೆ ಎಂಬ ಸತ್ಯ ತಿಳಿಯದಿರುವುದು ವಿಪರ್ಯಾಸವೇ ಸರಿ… ಅಥವಾ ಇದನ್ನೂ ಮಡೆಸ್ನಾನ ಎಂದುಕೊಂಡು ಬಿಟ್ಟಿದ್ದಾರೋ ಏನೋ… ಕೃಷ್ಣ.. ಕೃಷ್ಣಾ…!!!

  Reply
 6. L V Ravikumar

  ಡಾ.ಜಗದೀಶ್ ಮಾತು ಕೇಳಿ ನನಗೆ ಒಂತರಾ ನೊವು ಉಂಟಾಯಿತು ,ಆದ್ರು ಎನ ಮಾಡುದು ನಮ್ಮ ಊರಿನ ಜನರಿಗೆ ಓಟು ಹಾಕಿದವ್ರಿಗೆ ಒದ್ದು ಕೇಳೊಬುದ್ದಿ ಯಾವಾಗ ಬರತ್ತೊ ಅನ್ನೊದೆ ಗೊತ್ತಿಲ್ರಿ ಅವ್ರಿಗಿ ಎಷ್ಟೆ ಕಷ್ಟಬಂದ್ರು ಅವ್ರನ್ನ ಅಂತ್ರು ಕೆಳಲ್ಲ ಬಿಡ್ರಿ………

  Reply

Leave a Reply

Your email address will not be published.