ಕಪ್ಪು ಹಣದ ನಿಯಂತ್ರಣಕ್ಕಾಗಿ ಪವರ್ ಆಫ್ ಅಟಾರ್ನಿ ಮಾರಾಟಗಳಿಗೆ ಕಡಿವಾಣ: ಸುಪ್ರೀಮ್ ಕೋರ್ಟ್‌ನ ದಿಟ್ಟ ಹೆಜ್ಜೆ

-ಪ್ರಶಾಂತ್ ಮಿರ್ಲೆ
ವಕೀಲರು

ದೇಶವ್ಯಾಪಿ ಸ್ಥಿರಾಸ್ಥಿಗಳು ಮತ್ತು ಅವುಗಳ ಮಾಲೀಕತ್ವವವನ್ನು ವರ್ಗಾವಣೆ ಮಾಡಿಸಲು ಕಾನೂನುಬದ್ದವಾಗಿ ಗುರುತಿಸಲ್ಪಟ್ಟ ಸ್ವತ್ತು ಹಸ್ತಾಂತರ ದಸ್ತಾವೇಜುಗಳನ್ನು (ಉದಾ: ಕ್ರಯಪತ್ರ/ದಾನಪತ್ರ/ವಿನಿಮಯಪತ್ರ ಇತ್ಯಾದಿ.) ಮಾಡಿಸಿ, ನಿಗದಿ ಪಡಿಸಿದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿಸುವುದರ ಮೂಲಕ ಸ್ವತ್ತಿನ ಪ್ರದೇಶವಾರು ವ್ಯಾಪ್ತಿಗೆ ಒಳಪಡುವ ನೊಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯಿಸಲಾಗುವುದು. ಆದರೆ ಇದಕ್ಕೆ ಪ್ರತಿಯಾಗಿ ಅನ್ಯಮಾರ್ಗದ ಮೂಲಕ ಸ್ಥಿರಸ್ವತ್ತುಗಳನ್ನು ಹೊಂದಲು ದೇಶದಲ್ಲಿ ಕೆಲವು ಮಾದರಿಯ ದಸ್ತಾವೇಜುಗಳು ಬಳಕೆಯಲ್ಲಿದ್ದು ಅವುಗಳಲ್ಲಿ ಪ್ರಮುಖವಾಗಿ ಕ್ರಯದ ಕರಾರು ಮಾಡಿಕೊಂಡು ಮತ್ತು ಅದಕ್ಕೆ ಪೂರಕವಾಗಿ ಪವರ್ ಆಫ್ ಅಟಾರ್ನಿ/ಮರಣ ಶಾಸನ ದಸ್ತಾವೇಜುಗಳ (ಇವುಗಳನ್ನು ಪವರ್ ಆಫ್ ಅಟಾರ್ನಿ ಮಾರಾಟಗಳು ಎನ್ನಬಹುದು) ಮೂಲಕ ಮಾಡಲಾಗುವ ಸ್ಥಿರಾಸ್ಥಿಗಳ ಮಾರಾಟಗಳ ಕುರಿತು ಇತ್ತೀಚೆಗೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ (ಸೂರಜ್ ಲ್ಯಾಂಪ್ ಮತ್ತು ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ವಿರುದ್ದ ಸ್ಟೇಟ್ ಆಫ್ ಹರಿಯಾಣ ಅಂಡ್ ಅದರ್ಸ್  2009 (7) ಎಸ್ಸಿಸಿ 363) ಪ್ರಕರಣದಲ್ಲಿ ವಿಸ್ತೃತವಾಗಿ ಚರ್ಚಿಸಿ, ಇಂತಹ ಪವರ್ ಆಫ್ ಅಟಾರ್ನಿ ಮಾರಾಟಗಳ ಕಾನೂನುಬದ್ದವಾಗಿರುವುದಿಲ್ಲ ಎಂದು ಹೇಳಿದೆ. ಮತ್ತು ಸ್ಥಳೀಯ ಪ್ರಾಧಿಕಾರಗಳು ಈ ಸಂಬಂಧ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳನ್ನು ಪರಿಗಣಿಸಬಾರದು ಎಂಬ ಸ್ಪಷ್ಟ ನಿರ್ದೇಶನ ನೀಡಿದೆ.

ಪವರ್ ಆಫ್ ಅಟಾರ್ನಿ ಮಾರಾಟಗಳಿಗೆ ಕಾನೂನುಬದ್ದ ಮಾನ್ಯತೆಯಿಲ್ಲ:

ಇದರಲ್ಲಿ ಗಮನಾರ್ಹ ಸಂಗತಿಗಳೆಂದರೆ, ಸ್ಥಿರಸ್ವತ್ತುಗಳ ವರ್ಗಾವಣೆಯಲ್ಲಿ ಚಾಲ್ತಿಯಲ್ಲಿರುವ ಕೆಲವು ಪ್ರಕಾರಗಳಲ್ಲಿ ಮಾಲೀಕರಿಂದ ಖರೀದಿದಾರನು ಪವರ್ ಆಫ್ ಅಟಾರ್ನಿ (ಅಧಿಕಾರ ನಾಮೆ)  ಮಾರಾಟಗಳ ಮೂಲಕ ಸ್ಥಿರಸ್ವತ್ತಿನ ಸ್ವಾಧೀನ ಹೊಂದುವುದು, ಅಥವಾ ಸ್ವತ್ತಿನ ಮಾಲೀಕರೊಂದಿಗೆ ಕ್ರಯದ ಕರಾರು ಮಾಡಿಕೊಂಡು ಮತ್ತು ಅದಕ್ಕೆ ಪೂರಕವಾಗಿ ಪವರ್ ಆಫ್ ಅಟಾರ್ನಿಯನ್ನು ಪಡೆದುಕೊಂಡು ಸ್ಥಿರಸ್ವತ್ತಿನ ಸ್ವಾಧೀನ ಹೊಂದುವುದು ಅಥವಾ ಮಾಲೀಕರಿಂದ ಮರಣ ಶಾಸನ ಬರೆಸಿಕೊಳ್ಳುವ ಮೂಲಕ ಸ್ವತ್ತಿನ ಸ್ವಾಧೀನ ಹೊಂದುವುದು, ತದನಂತರ ತಮ್ಮ ಹೆಸರಿಗೆ (ಹೊಲ್ಡರ್) ಖಾತಾ ಮಾಡಿಸಿಕೊಂಡು ಸ್ವತ್ತನ್ನು ಅನುಭವಿಸುವುದು, ಈ ಹಸ್ತಾಂತರ ದಸ್ತಾವೇಜುಗಳ ಮೂಲಕ ಸ್ವತ್ತನ್ನು ಅನುಭವಿಸುತ್ತಾ ಇರುವವರ ಹೆಸರಿಗೆ ಯಾವುದೇ ನೋಂದಾಯಿತ ದಾಖಲೆಗಳಿರುವುದಿಲ್ಲ ಮತ್ತು ಇರುವಂತಹ ದಾಖಲೆಗಳು ಪೂರ್ವ ಮಾಲೀಕರ ಹೆಸರಿನಲ್ಲೆ ಇರುತ್ತವೆ, ಕಾರಣ ಸ್ಥಿರಾಸ್ಥಿಗಳನ್ನು ಹೊಂದಲು ಇರುವ ಪ್ರತಿಬಂದಕ ನಿಯಮಗಳಿಂದ ತಪ್ಪಿಸಿಕೊಳ್ಳಲು, ಸ್ಥಿರಸ್ವತ್ತುಗಳ ವರ್ಗಾವಣೆಯಲ್ಲಿ ಭರಿಸಬೇಕಾದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಪಾವತಿಸದಂತೆ ವಂಚಿಸಲು, ಸ್ವತ್ತಿನ ವರ್ಗಾವಣೆಯಿಂದ ಬರುವ ಆದಾಯದ ಮೇಲಿನ ಕ್ಯಾಪಿಟಲ್ ಗ್ಯೇನ್ ಪಾವತಿ ಮಾಡದಿರಲು, ಕಪ್ಪು ಹಣವನ್ನು ಬಂಡವಾಳವಾಗಿ ಪರಿವರ್ತಿಸಲು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಸ್ವತ್ತಿನ ವರ್ಗಾವಣೆಯಿಂದ ಬರುವ ಇತರೇ ಅಭಿವೃದ್ಧಿ ಹೊರತಾದ ಶುಲ್ಕಗಳನ್ನು ಭರಿಸದಂತೆ ತಪ್ಪಿಸಿಕೊಳ್ಳಲು ಕಂಡುಕೊಂಡಿರುವ ಮಾರ್ಗಗಳಾಗಿದ್ದು. ಆದ್ದರಿಂದ ಬರೀ ಅಧಿಕಾರ ನಾಮೆಯ (ಪವರ್ ಆಫ್ ಅಟಾರ್ನಿಯ) ಪಡೆಯುವ ಮೂಲಕವಾಗಲಿ ಅಥವಾ ಕ್ರಯದ ಕರಾರು ಮತ್ತು ಅದಕ್ಕೆ ಪೂರಕವಾಗಿ ಅಧಿಕಾರ ನಾಮೆಯನ್ನು ನೀಡುವ ಮೂಲಕ ವಾಗಲಿ ಅಥವಾ ಮರಣ ಶಾಸನ ಮಾಡಿಕೊಟ್ಟರೆ, ಇದರಿಂದ ಸಂಬಂಧಪಟ್ಟ ಸ್ಥಿರಾಸ್ಥಿಗಳ ಸಂಪೂರ್ಣ ಮಾಲೀಕತ್ವ ವರ್ಗಾವಣೆ ಆಗುವುದಿಲ್ಲ ಎಂಬುದನ್ನು ನ್ಯಾಯಾಲಯ ಸ್ವಷ್ಟಪಡಿಸಿದೆ.

ಇಷ್ಟಲ್ಲದೆ, ಇಂತಹ ದಸ್ತಾವೇಜುಗಳ ಬಳಕೆಗಳಿಂದ ಉಂಟಾಗಿದ್ದ ಹಲವು ದ್ವಂದ್ವಗಳಿಗೆ ತೆರೆ ಎಳೆದು ಸ್ವಷ್ಠೀಕರಣ ನೀಡಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಗುರುತಿಸಬಹುದು :

  1. ದೆಹಲಿ ಉಚ್ಛ ನ್ಯಾಯಾಲಯವು ಆಶಾ ಎಂ. ಜೈನ್ ವಿರುದ್ದ. ಕೆನರಾ ಬ್ಯಾಂಕ್ (94 (2001) ಡಿಎಲ್ಟಿ 841) ಪ್ರಕರಣದಲ್ಲಿ ನಿರ್ಣಯಿಸಿದಂತೆ ಅಧಿಕಾರ ನಾಮೆಯಲ್ಲಿ ಅಧಿಕಾರ ಸ್ಥಾಪಿತವಾಗಿದ್ದರೆ ಅದನ್ನು ಆಸ್ತಿ ಹಸ್ತಾಂತರ ವರ್ಗಾವಣೆಯ ವಿಧಾನವಾಗಿ ಮಾನ್ಯತೆ ಇದೆ ಎಂಬುದನ್ನು ಗುರುತಿಸಿದ ಸರ್ವೋಚ್ಛ ನ್ಯಾಯಾಲಯವು ಪವರ್ ಆಫ್ ಅಟಾರ್ನಿ ಮಾರಾಟಗಳ ಮೂಲಕ ಮಾಡಲಾಗುವ ಸ್ಥಿರಾಸ್ಥಿಗಳ ವರ್ಗಾವಣೆ ಸಂಪೂರ್ಣ ಮಾಲೀಕತ್ವವನ್ನು ವರ್ಗಾಯಿಸುವ ವಿಧಾನ ಎಂದು ಪರಿಗಣಿಸಬಾರದು ಮತ್ತು ಅವುಗಳಲ್ಲಿ ಕ್ರಯದ ಕರಾರು ಬಾದ್ಯತೆಯನ್ನು ಮಾತ್ರ ಸೃಷ್ಟಿಸುತ್ತದೆ, ಎಂದು ವ್ಯಾಖ್ಯಾನಿಸಿದೆ. ಮತ್ತು ಮಾಲೀಕರು ಆ ಸ್ವತ್ತುಗಳನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಯಾವುದೇ ನಿರ್ಬಂಧಗಳಿರುವುದಿಲ್ಲ ಮತ್ತು ಅಧಿಕಾರ ನಾಮೆ ಮಾಡಿಸಿಕೊಂಡವನಿಗೆ ತಾನು ಕೊಟ್ಟ ಹಣದ ಹಿಂಪಾವತಿಗೆ ಮಾತ್ರ ನಿರ್ದಿಷ್ಟ ಅನುಷ್ಠಾನದ ದಾವಾ ಹೂಡಬಹುದು ಎಂಬುದನ್ನು ಸ್ವಷ್ಟಪಡಿಸಿದೆ.
  2. ಯಾವುದೇ ಸ್ಥಿರ ಆಸ್ತಿಗಳ ವರ್ಗಾವಣೆಯು ನೋಂದಣಿಯಾಗುವುದು ಖಡ್ಡಾಯ.
  3. ಈಗಾಗಲೇ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳ ಮೂಲಕ ಆಸ್ತಿಗಳನ್ನು ಹೊಂದಿರುವವರ ವಿರುದ್ದ ಕ್ರಮ ಕೈಗೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಬಹು ಮತ್ತು ಸಕ್ರಮಗೊಳಿಸಲು ಸೂಕ್ತ ಕಾಲಾವಕಾಶವನ್ನು ನೀಡಬೇಕಾಗುತ್ತದೆ ಎಂದು ಪರಿಗಣಿಸಿ ಪ್ರಸ್ತುತ ತೀರ್ಪು ದಿನಾಂಕ 11.10.2011ರ ನಂತರವಷ್ಟೆ ್ಜಾರಿಯಾಗುವಂತೆ ಆದೇಶಿದೆ. ಮುಖ್ಯವಾಗಿ ಈಗಾಗಲೇ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳ ಮೂಲಕ ಅಸ್ತಿಗಳನ್ನು ಹೊಂದಿರುವವರ ಬಗ್ಗೆ ಸಂಬಧಪಟ್ಟ ಪ್ರಾಧಿಕಾರಗಳು ಯಾವ ಕ್ರಮ ಕೈಗೊಳ್ಳಲು ಮುಂದಾಗಬಾರದು ಎಂದು ಸ್ವಷ್ಟವಾಗಿ ನಿರ್ದೇಶಿಸಿದೆ.
  4. ದಿನಾಂಕ 11.10.2011ರ ನಂತರ ಯಾವುದೇ ಸ್ಥಿರ ಸ್ವತ್ತುಗಳ ಮೇಲೆ ಸಂಬಂಧಪಟ್ಟ ಕಂದಾಯ ಪ್ರಾಧಿಕಾರಗಳು ಅಥವಾ ಕಾರ್ಪೊರೇಷನ್‌ಗಳು ಅಥವಾ ಮುನ್ಸಿಪಾಲಿಟಿಗಳು ಅಥವಾ ಪಂಚಾಯ್ತಿಗಳು ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತವೇಜುಗಳ ಮೂಲಕ ತಮ್ಮ ಹೆಸರಿಗೆ ಸ್ಥಿರಾಸ್ಥಿಗಳ ಖಾತಾ ವರ್ಗಾವಣೆಗೆ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಬಾರದು.
  5. ಯಾವುದೇ ಗುತ್ತಿಗೆ/ಲಿಸ್ ಹೊಲ್ಡ್ ಸ್ವತ್ತುಗಳಿಗೂ ಮತ್ತು ಅವುಗಳ ವರ್ಗಾವಣೆಗೂ ಈ ತೀರ್ಪಿನ ನಿರ್ದೇಶಿಸಿದ ತತ್ವಗಳು ಅನ್ವಯವಾಗುತ್ತದೆ. ಅಂದರೆ ಗುತ್ತಿಗೆ/ಲಿಸ್ ಹೊಲ್ಡ್ ಸ್ವತ್ತುಗಳ ಹಕ್ಕು ಹಸ್ತಾಂತರವು ನೋಂದಾಯಿತ ಅಸೈನ್ಮೆಂಟ್ ಆಫ್ ಲೀಸ್ ಮಾಡುವುದರ ಮೂಲಕವಷ್ಟೆ ಕಾನೂನುಬದ್ದವಾಗುತ್ತದೆ.
  6. ಕುಟುಂಬ ಸದಸ್ಯರಿಗೆ ನೀಡುವ ಅಧಿಕಾರ ನಾಮೆ, ಸ್ಥಿರಸ್ವತ್ತುಗಳನ್ನು ನಿವೇಶನಗಳಾಗಿ ಅಥವಾ ವಸತಿ/ವಾಣಿಜ್ಯ ಸಮುಚ್ಚಯಗಳಾಗಿ ಅಭಿವೃದ್ಧಿ ಪಡಿಸುವ ಇಚ್ಛೆಯಿಂದ ಮಾಲೀಕನು ಅಭಿವೃದ್ಧಿದಾರರೊಡನೆ ಜಂಟಿಯಾಗಿ ಅಭಿವೃದ್ಧಿ ಮಾಡುವ ನೋಂದಾಯಿತ ಒಪ್ಪಂದ ಜ್ಞಾಪನದ ಪತ್ರಗಳಿಗೆ ಮತ್ತು ಸೃಜಿಸಿದ ಅಧಿಕಾರಗಳ ಯಶಸ್ವಿ ಅನುಷ್ಠಾನಕ್ಕೆ ಮಾಲೀಕನು ಅಭಿವೃದ್ಧಿದಾರನಿಗೆ ನೀಡುವ ನೋಂದಾಯಿತ ಪವರ್ ಆಫ್ ಅಟಾರ್ನಿಯ ಮೇರೆಗೆ ಮಾಡಿಕೊಡುವ ವರ್ಗಾವಣೆಗಳನ್ನು ನೈಜ ವರ್ಗಾವಣೆಗಳೆಂದು ಪರಿಗಣಿಸಿ ಇವುಗಳಿಗೆ ಈ ತೀರ್ಪು ಅನ್ವಯವಾಗುವುದಿಲ್ಲ ಎಂದು ಹೇಳಿದೆ.

ಸರ್ಕಾರದ ಕ್ರಮ :

ಈ ಮೇಲಿನ ಅಂಶಗಳನ್ನು ಪರಿಗಣಿಸಿದಾಗ ನಮ್ಮ ರಾಜ್ಯದಲ್ಲೂ ದಶಕಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಿರಸ್ವತ್ತುಗಳನ್ನು ಖರೀದಿಸಿರುವವರಲ್ಲಿ ಈ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳನ್ನು ಮಾಡಿಸಿಕೊಂಡು ಇಂದಿಗೂ ತೊಂದರೆ ಅನುಭವಿಸುತ್ತಿರುವವರು ಸಾಕಷ್ಟು ಜನ ಕಾಣಸಿಗುತ್ತಾರೆ. ಇವರುಗಳು ಆಸ್ತಿಗಳ ಮೇಲಿನ ತಮ್ಮ ಹಕ್ಕುಗಳನ್ನು ಸಕ್ರಮಗೊಳಿಸಿಕೊಳ್ಳುವುದು ಒಳಿತು. ಪ್ರಸ್ತುತ ನಮ್ಮ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾನೂನುಗಳಿಗೆ ತಿದ್ದುಪಡಿಗಳನ್ನು ತರುವ ಮೂಲಕ ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ, ಇದರಲ್ಲಿ ಮುಖ್ಯವಾಗಿ ಅಧಿಕಾರ ನಾಮೆಯಡಿ ಸ್ಥಿರಸ್ವತ್ತಿನ ಹಸ್ತಾಂತರಣ ಕುರಿತ ಅಧಿಕಾರವನ್ನು ಪ್ರಾಪ್ತಿಸಿದ್ದರೆ ಅಂತಹ ದಸ್ತವೇಜುಗಳ ನೊಂದಣಿಯನ್ನು ಕಡ್ಡಾಯಗೊಳಿಸಿ, ಸ್ವತ್ತಿನ ಮಾರುಕಟ್ಟೆ ಮೌಲ್ಯದ ಮೇಲೆ ಅಥವಾ ಪ್ರತಿಫಲದ ಮೇಲೆ, ಇವುಗಳಲ್ಲಿ ಯಾವುದು ಹೆಚ್ಚೋ, ಅದರ ಮೇಲೆ, ಶೇ.6ರಷ್ಟು ಹಣವನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸುವುದನ್ನು ಮತ್ತು ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಅಂತೆಯೇ, ಕ್ರಯದ ಕರಾರು ಪತ್ರ ಮಾಡಿಕೊಳ್ಳುವಾಗಲು ಸ್ವತ್ತಿನ ಮಾರುಕಟ್ಟೆ ಮೌಲ್ಯ ಅಥವಾ ದಸ್ತಾವೇಜಿನಲ್ಲಿ ತೋರಿಸಿರುವ ಮೌಲ್ಯ, ಇವುಗಳಲ್ಲಿ ಯಾವ ಮೌಲ್ಯ ಹೆಚ್ಚಾಗಿರುತ್ತದೋ ಅದರ ಮೇಲೆ ನಿಗದಿ ಪಡಿಸಿದ ಮುದ್ರಾಂಕ ಶುಲ್ಕ (ಕಬ್ಜೆಯನ್ನು ನೀಡಿದ್ದರೆ ಶೇ.6ರಷ್ಟು ಅಥವಾ ಕಬ್ಜೆಯನ್ನು ನೀಡದಿದ್ದರೆ ಶೇ.0.01ರಷ್ಟು ಅಥವಾ 20,000 ರೂಪಾಯಿಗಳು, ಇದರಲ್ಲಿ ಯಾವುದು ಕಡಿಮೆಯೋ ಅದು ಅನ್ವಯ) ಪಾವತಿಸುವುದು ಕಡ್ಡಾಯ.

ನ್ಯಾಯಾಲಯದ ಆದೇಶದಿಂದ ಮುಖ್ಯವಾಗಿ ಅಧಿಕಾರ ನಾಮೆ/ಕ್ರಯದ ಕರಾರು/ಮರಣ ಶಾಸನ ಪತ್ರಗಳ ಮೂಲಕ ಮಾಲೀಕತ್ವವವನ್ನು ಹೊಂದುವುದನ್ನು ಅಸಿಂಧುಗೊಳಿಸಿರುವುದು ಸ್ಥಿರ ಆಸ್ತಿಗಳ ವಹಿವಾಟಿನಲ್ಲಿ ಸಾಮಾನ್ಯನಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚಾಗುವುದರಲ್ಲಿ ಸಂಶಯ ಇಲ್ಲ, ನ್ಯಾಯಾಲಯದ ತೀರ್ಪಿನಿಂದ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಏಕರೂಪ ನಿಯಮದಂತೆ ಅಸ್ತಿಗಳ ವರ್ಗಾವಣೆಗೆ ಸ್ವತ್ತಿನ ಮಾಲೀಕನೇ ಖುದ್ದಾಗಿ ನೋಂದಣಿ ಕಛೇರಿಯಲ್ಲಿ ಹಾಜರಾಗಬೇಕಾಗುತ್ತದೆ.

ಕಪ್ಪು ಹಣದ ನಿಯಂತ್ರಣ :

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮಾಡಿರುವ ಶಿಫಾರಸ್ಸಿನಂತೆ ನಮ್ಮ ರಾಜ್ಯ ಸರ್ಕಾರವು ಸಹಾ ಸುಧಾರಣೆಯತ್ತ ಗಮನಿಸಬೇಕಾದುದು ಮುಖ್ಯ, ರಾಜ್ಯದಲ್ಲಿ ಸ್ಥಿರಸ್ವತ್ತಿನ ಹಸ್ತಾಂತರ ದಸ್ತಾವೇಜು (ಕ್ರಯಪತ್ರ) ನೋಂದಣಿ ಸಮಯದಲ್ಲಿ ಒಟ್ಟು ಭರಿಸಬೇಕಾದ ವೆಚ್ಚ ಸ್ವತ್ತಿನ ಮಾರುಕಟ್ಟೆ ಮೌಲ್ಯ ಅಥವಾ ದಸ್ತಾವೇಜಿನಲ್ಲಿ ತೋರಿಸಿರುವ ಪ್ರತಿಫಲ, ಇವುಗಳಲ್ಲಿ ಯಾವುದು ಹೆಚ್ಚೋ, ಅದರ ಮೇಲೆ ಶೇ.7.78ರಷ್ಟು ಹಣವನ್ನು ಶುಲ್ಕದ ರೂಪದಲ್ಲಿ ಭರಿಸಬೇಕಾಗಿರುತ್ತದೆ, ಇದರಿಂದ ರಿಯಲ್ ಎಸ್ಟೇಟ್ ಉದ್ಯಮದ ಕಾರ್ಯಚಟುವಟಿಕೆಗಳು ಹೆಚ್ಚಿರುವ ನಗರ ಪ್ರದೇಶಗಳಲ್ಲಿ ನೋಂದಣಿ ಸಮಯದಲ್ಲಿ ಭರಿಸಬೇಕಾದ ಶುಲ್ಕದಿಂದ ಪಾರಾಗಲು ಹೆಚ್ಚಿನ ಮೌಲ್ಯವನ್ನು ದಸ್ತಾವೇಜುಗಳಲ್ಲಿ ಕಾಣಿಸದಂತೆ ಮಾಡುವುದು ಕಪ್ಪುಹಣದ ಬಳಕೆಗೆ ಸರ್ಕಾರವೇ ಪರೋಕ್ಷವಾಗಿ ಪ್ರೋತ್ಸಾಹಿಸಿದಂತೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳನ್ನು ಕಡಿಮೆ ಮಾಡುವುದು ಈ ಸಂದರ್ಭದಲ್ಲಿ ಸೂಕ್ತ, ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ.

ಇದರಿಂದ ಸಾರ್ವಜನಿಕರು ಅಸ್ತಿಗಳ ಖರೀದಿ ಪ್ರಕ್ರಿಯೆಗಳನ್ನು ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸಿ ಸಂಪೂರ್ಣ ಪ್ರತಿಫಲವನ್ನು ದಾಖಲಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಮುದ್ರಾಂಕ ಪಾವತಿಯಲ್ಲಿ ಹೆಚ್ಚು ವಿವಾದಗಳಿಗೆ ಆಸ್ಪದ ಇರುವುದಿಲ್ಲ. ಯಾವಾಗ ಸಂಪೂರ್ಣ ಪ್ರತಿಫಲ ದಾಖಲಿಸಲು ಉತ್ಸುಕರಾಗುತ್ತಾರೋ ಪರೋಕ್ಷವಾಗಿ ಕಪ್ಪುಹಣದ ಬಳಕೆ ತಗ್ಗುತ್ತದೆ. ಈ ಕ್ರಮದಿಂದ ಸರ್ಕಾರಕ್ಕೆ ತಾತ್ಕಲಿಕವಾಗಿ ರಾಜಸ್ವದಲ್ಲಿ ಕಡಿಮೆಯಾದರು ಕಪ್ಪುಹಣದ ಬಳಕೆಯನ್ನು ನಿಯಂತ್ರಣಕ್ಕೆ ತರುವುದು ಶ್ರೇಷ್ಠ ಸಾಧನೆಯೆ ಸರಿ.

Leave a Reply

Your email address will not be published. Required fields are marked *