Daily Archives: December 25, 2011

ಜೀವನದಿಗಳ ಸಾವಿನ ಕಥನ – 17

ಡಾ.ಎನ್. ಜಗದೀಶ್ ಕೊಪ್ಪ

ಕುಡಿಯುವ ನೀರಿನ ಯೋಜನೆಯಡಿ ಗುಜರಾತ್ ರಾಜ್ಯದ ಜನತೆಯನ್ನು ವಂಚಿಸಿದ ಕರ್ಮಕಾಂಡ ಸರದಾರ್ ಸರೋವರ ಅಣೆಕಟ್ಟಿನ ಇತಿಹಾಸದಲ್ಲಿ ತಳಕು ಹಾಕಿಕೊಂಡಿದೆ. ಗುಜರಾತ್, ರಾಜಸ್ತಾನ,ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹರಿಯುವ ಈ ನದಿಯಿಂದ 1989 ರಲ್ಲಿ 3 ಕೋಟಿ 20 ಲಕ್ಷ ಜನತೆಗೆ ಕುಡಿಯುವ ನೀರು ಒದಗಿಸಲಾಗುವುದೆಂದು ಹೇಳಲಾಗಿತ್ತು. ನಂತರ 1992 ರಲ್ಲಿ 4 ಕೋಟಿ ಜನಕ್ಕೆ ಎಂದು ತಿಳಿಸಿ, ಮತ್ತೆ 1998ರಲ್ಲಿ 3 ಕೋಟಿ ಜನತೆಗೆ ಮಾತ್ರ ನೀರು ಒದಗಿಸಲಾಗುವುದೆಂದು ಹೇಳುವುದರ ಮೂಲಕ ಸುಳ್ಳುಗಳನ್ನು ಪುಖಾನುಪುಂಖವಾಗಿ ಹರಿಯಬಿಡಲಾಯಿತು. ಈ ನದಿಯ ನೀರಿನ ಯೋಜನೆ ಎಷ್ಟು ಗೊಂದಲದ ಗೂಡಾಗಿದೆಯೆಂದರೆ, 1992ರಲ್ಲಿ ಒಟ್ಟು 8236 ನಗರ, ಪಟ್ಟಣ, ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುವುದೆಂದು ಹೇಳಲಾದ ಪಟ್ಟಿಯಲ್ಲಿ 236 ಹಳ್ಳಿಗಳಲ್ಲಿ ಜನರೇ ವಾಸಿಸುತ್ತಿಲ್ಲ. ಈವತ್ತಿಗೂ ಈ ಯೋಜನೆಯ ಮೂಲ ಉದ್ದೇಶ ಏನೂ?, ಎಷ್ಟು ಹಣ ಖರ್ಚಾಗುತ್ತಿದೆ, ನೀರಾವರಿಗೆ ಒಳಪಡುವ ಪ್ರದೇಶದ ವ್ಯಾಪ್ತಿ ಎಷ್ಟೆಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

2000 ದ ಇಸವಿ ವೇಳೆಗೆ ಜಗತ್ತಿನಾದ್ಯಂತ ಸಮೀಕ್ಷೆ ಪ್ರಕಾರ ಜಲಾಶಯಗಳಿಂದ ಬಳಕೆಯಾಗುತ್ತಿರುವ ನೀರಿನಲ್ಲಿ ಶೇ.70ರಷ್ಟು ಕುಡಿಯುವ ನೀರಿಗಾಗಿ, ಶೇ.24ರಷ್ಟು ಕೈಗಾರಿಕೆಗಳಿಗಾಗಿ ಬಳಕೆಯಾಗುತಿದ್ದು, ಶೇ.4ರಷ್ಟು ಆವಿಯಾಗತ್ತಿದೆ. ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಬಳಕೆಯಾಗುತ್ತಿರುವ ಶೇ65ರಷ್ಟು ಭಾಗದ ನೀರು ತೆರದ ಹಾಗೂ ಕೊಳವೆ ಬಾವಿಗಳ ಮೂಲದ್ದು.

ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದ ಫಲವಾಗಿ ಜಗತ್ತಿನ ಹಲವೆಡೆ ಅಸ್ತಿತ್ವದಲ್ಲಿ ಇದ್ದ ಜಲಸಾರಿಗೆಗೆ ದೊಡ್ಡಪೆಟ್ಟು ಬಿದ್ದಿತು. ಹಲವಾರು ದೇಶಗಳಲ್ಲಿ ಆಳವಾದ ಮತ್ತು ನಿಧಾನವಾಗಿ ಹರಿಯುವ ನದಿಗಳನ್ನು ಜಲಸಾರಿಗೆಗೆ ಬಳಸಲಾಗುತಿತ್ತು. ತೈಲ, ಕಲ್ಲಿದ್ದಲು, ಅದಿರು, ಮರದ ದಿಮ್ಮಿಗಳನ್ನು, ತೆರದ ಮಧ್ಯಮಗಾತ್ರದ (ಬಾರ್ಜ್) ಹಡಗುಗಳಲ್ಲಿ ಸಮುದ್ರ ತೀರದ ಬಂದರುಗಳಿಗೆ ಸಾಗಿಸುವುದು ರಸ್ತೆ ಸಾರಿಗೆಗಿಂತ ಕಡಿಮೆ ಖರ್ಚಿನದಾಗಿತ್ತು. ಜೊತೆಗೆ ಪ್ರಯಾಣಿಕರ ಅನೂಕೂಲಕ್ಕೆ ದೋಣಿಗಳು ಇದ್ದವು. ಈಗ ಜಲಸಾರಿಗೆ ಕೆಲವೆಡೆ ಮಾತ್ರ ಇನ್ನೂ ಅಸ್ತಿತ್ವದಲ್ಲಿದೆ.

ಇತ್ತೀಚಿಗೆ ಮತ್ತೆ ಜಲಸಾರಿಗೆಯನ್ನು ಪುನಶ್ಚೇತನಗೊಳಿಸಲು ಹಲವಾರು ದೇಶಗಳು ಶ್ರಮಿಸುತ್ತಿವೆ. ಅಣೆಕಟ್ಟು ಇರವ ಸ್ಥಳದಲ್ಲಿ ದೊಡ್ಡ ಲಿಪ್ಟ್‌ಗಳನ್ನು ಸ್ಥಾಪಿಸಿ ಅವುಗಳ ಮೂಲಕ ಹಡಗು ಮತ್ತು ದೋಣಿಗಳನ್ನು ಜಲಾಶಯದಿಂದ ಕೆಳಗಿನ ನದಿಗೆ ಬಿಡುವುದು, ಇಲ್ಲವೇ ಕೆಳಗಿನ ನದಿಯಿಂದ ಸಾಗಿಬಂದ ಹಡಗು, ದೋಣಿಗಳನ್ನು ಜಲಾಶಯದ ಮೇಲ್ಬಾಗದ ನದಿಗೆ ಎತ್ತಿ ಬಿಡುವ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಇದು ನಿರಿಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ‍. ನೈಜೀರಿಯದಲ್ಲಿ ಜಗತ್ತಿನ ಅತಿದೊಡ್ಡ ಅಂದರೆ, 10 ಸಾವಿರ ಟನ್ ಸಾಮರ್ಥದ ಲಿಪ್ಟ್ ಅಳವಡಿಸಲಾಯಿತು ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಚೀನಾದ ತ್ರೀ ಗಾರ್ಜಸ್ ಅಣೆಕಟ್ಟಿನ ಬಳಿ ಸಹ ಇಂತಹದೇ ಮಾದರಿ ಲಿಪ್ಟ್ ಅಳವಡಿಸಲಾಗಿದೆ. ಇಂತಹ ಜಲಸಾರಿಗೆಯ ಪರ್ಯಾಯ ಭವಿಷ್ಯದಲ್ಲಿ ಯಶಸ್ವಿಯಾಗದು ಎಂದು ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಜಲಾಶಯದ ಹಿನ್ನೀರಿನ ನದಿಯಲ್ಲಿ ಹೂಳು ಶೇಖರವಾಗುವುದರಿಂದ ಹಡಗು ಮತ್ತು ದೋಣಿಗಳ ಚಲನೆಗೆ ಅಡ್ಡಿಯಾಗುತ್ತದೆ ಎಂಬುದು ತಜ್ಙರ ನಿಲುವು.

ವಿಶ್ವಬ್ಯಾಂಕ್ ಸಮೀಕ್ಷೆಯಂತೆ 1960 ರಲ್ಲಿ ಜಗತ್ತಿನಾದ್ಯಂತ 1 ಲಕ್ಷ 70 ಸಾವಿರ ಕಿಲೋಮೀಟರ್ ಜಲಸಾರಿಗೆಯಿದ್ದದ್ದ್ದು, 2000 ದ ವೇಳೆಗೆ ಅದು ಕೇವಲ 79 ಸಾವಿರ ಕಿ.ಮೀ.ಗೆ ಕುಸಿದಿತ್ತು.

ಉತ್ತರ ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಇಂದಿಗೂ ಜಲಸಾರಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೇರಿಕಾದ ಆರ್ಮಿ ಕೋರ್ಸ್ ಆಫ್ ಇಂಜಿನಿಯರ್ಸ್ ಸಂಸ್ಥೆ ಮಿಸಿಸಿಪ್ಪಿ ನದಿಯ ಮೇಲ್ಭಾಗದಲ್ಲಿ 1914 ರಿಮದ 1950 ರವರೆಗೆ ಅಣೆಕಟ್ಟುಗಳಿಗೆ 29 ಲಿಪ್ಟ್ ಅಳವಡಿಸಿ 800 ಕಿಲೋಮೀಟರ್ ಜಲಸಾರಿಗೆಯನ್ನು ಅಭಿವೃದ್ಧಿ ಪಡಿಸಿತ್ತು. 1990 ರಲ್ಲಿ ಅಮೇರಿಕಾ ಸರ್ಕಾರ ಜಲಸಾರಿಗೆ ನಿರ್ವಹಣೆಗಾಗಿ 12 ಶತಕೋಟಿ ಡಾಲರ್ ಹಣ ಖರ್ಚು ಮಾಡಿತ್ತು. ಅಲ್ಲಿ 12 ಬೃಹತ್ ವ್ಯಾಪಾರ ಸಂಸ್ಥೆಗಳು ಹಡಗುಗಳ ಮೂಲಕ ಅದಿರು, ತೈಲ, ಕಲ್ಲಿದ್ದಲು ಹಾಗು ಸರಕುಗಳನ್ನು ಸಾಗಿಸುತಿದ್ದು ಇದಕ್ಕಾಗಿ ಸರ್ಕಾರದಿಂದ ಹಲವಾರು ರಿಯಾಯತಿಗಳನ್ನು ಪಡೆದಿವೆ. ಆದರೆ ಲಿಪ್ಟ್ ಗಳ ದುರಸ್ತಿ ಮತ್ತು ನಿರ್ವಹಣೆ ಸಕಾರಕ್ಕೆ ಹೊರೆಯಾಗಿದೆ. ಇಲಿನಾಯ್ಸ್ ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ಲಿಪ್ಟ್ ಒಂದರ ಬದಲಾವಣೆಗಾಗಿ ಸರ್ಕಾರ 100 ಕೋಟಿ ಡಾಲರ್ ವ್ಯಯ ಮಾಡಿತು.

ಅಣೆಕಟ್ಟುಗಳ ನಿರ್ಮಾಪಕರು ಜಲಾಶಯಗಳಲ್ಲಿ ನಡೆಸಬಹುದಾದ ಮೀನುಗಾರಿಕೆ ಕೂಡ ಒಂದು ಲಾಭದಾಯಕ ಉಧ್ಯಮ ಎಂದು ಬಣ್ಣ ಬಣ್ಣದ ಕರಪತ್ರಗಳಲ್ಲಿ ಮುದ್ರಿಸಿ ಪ್ರಸಾರ ಮಾಡುತ್ತಿದೆ. ಆದರೆ, ಪರಿಸರ ತಜ್ಙರು ಲಾಭದಾಯಕವಲ್ಲ ಎಂದು ವಾದಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದರಿಂದ ನೀರಿನಲ್ಲಿರುವ, ಮೀನಿಗೆ ಬೇಕಾದ ಪೋಷಕಾಂಶಗಳು ಹರಿದು ಹೋಗುವುದನ್ನು  ತಜ್ಙರು ಗುರುತಿಸಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಕುಡಿಯುವ ನೀರು ಮತ್ತು ವಿದ್ಯುತ್ ಗಾಗಿ ನೀರು ಬಳಕೆಯಾಗುವುದನ್ನು ಗುರಿ ಮಾಡಿ ಇಂತಹ ಸ್ಥಿತಿಯಲ್ಲಿ ಮೀನು ಸಾಕಾಣಿಕೆ ಲಾಭ ತರುವುದಿಲ್ಲ ಎಂದು ಅವರು ವಾದಿಸಿದ್ದಾರೆ.

ಆಫ್ರಿಕಾದ ಕೈಂಜಿ ಅಣೆಕಟ್ಟಿನ ಜಲಾಶಯದಲ್ಲಿ 10 ಸಾವಿರ ಟನ್ ಮೀನು ಸಿಗಬಹುದೆಂದು ಅಂದಾಜಿಸಲಾಗಿತ್ತು 1970 ರಲ್ಲಿ ಎಲ್ಲರ ನಿರೀಕ್ಷೆ ಮೀರಿ 28 ಸಾವಿರ ಮೀನು ದೊರೆಯಿತು. ನಂತರದ ನಾಲ್ಕು ವರ್ಷಗಳಲ್ಲಿ ಅಂದರೆ, 1974 ರಲ್ಲಿ ಮೀನಿನ ಇಳುವರಿ ಕೇವಲ 4ಸಾವಿರದ 500 ಟನ್ಗೆ ಕುಸಿದಿತ್ತು.

ಜಗತ್ತಿನ ಅತಿ ದೊಡ್ಡ ವಿಶಾಲವಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಘಾನದ ವೊಲ್ಟಾ ನದಿಗೆ ಕಟ್ಟಿರುವ ಅಕೊಸೊಂಬೊ ಜಲಾಶಯದಿಂದ ಉಂಟಾಗಿರುವ ವೊಲ್ಟಾ ಸರೋವರದಲ್ಲಿ 60 ಸಾವಿರ ಟನ್ ಮೀನು ಉತ್ಪಾದನೆಯಾಗಿ 20 ಸಾವಿರ ಮೀನುಗಾರರಿಗೆ ಉದ್ಯೋಗ ದೊರಕಿಸಿತ್ತು. ಆದರೆ ಜಲಾಶಯ ನಿರ್ಮಾಣದಿಂದ ನೆಲೆ ಕಳೆದುಕೊಂಡ 80 ಸಾವಿರ ಮೀನುಗಾರರ ಪೈಕಿ ಉಳಿದ 60 ಸಾವಿರ ಮೀನುಗಾರರು ಅರಣ್ಯಗಳಲ್ಲಿ ಬೇಟೆಯಾಡುತ್ತಾ, ಗೆಡ್ಡೆ ಗೆಣಸು ತಿನ್ನುತ್ತಾ ಬದುಕು ದೂಡುವಂತಾಯಿತು.

ಉರುಗ್ವೆ ದೇಶದ ಮಿಲಿಟರಿ ಸರ್ಕಾರ ತಾನು ನಿರ್ಮಿಸಿದ್ದ ಸಾಲ್ವೋ ಗ್ರಾಂಡ್ ಜಲಾಶಯದಲ್ಲಿ ಅತ್ಯಾಧುನಿಕ ತಂತ್ರಜ್ಙಾನ ಬಳಸಿ ಮೀನುಗಾರಿಕೆಗೆ ಯೋಜನೆ ರೂಪಿಸಿತ್ತು. ಆದರೆ ಜರ್ಮನಿ ದೇಶದಿಂದ ಬರಬೇಕಾದ ಆರ್ಥಿಕ ನೆರವು ಬಾರದೆ ಇಡೀ ಯೋಜನೆ ವಿಫಲವಾಯಿತು.

ಇವತ್ತಿಗೂ ವಿಶ್ವ ಬ್ಯಾಂಕ್ ಅಣೆಕಟ್ಟುಗಳ ಮೂಲಕ ನಿರ್ಮಾಣವಾಗಿರುವ ಜಲಾಶಯಗಳಲ್ಲಿ ಮೀನು ಮತ್ತು ಸೀಗಡಿ ಸಾಕಾಣಿಕೆ ಒಂದು ಲಾಭದಾಯಕ ಉದ್ಯಮ ಎಂದು ನಂಬಿದೆ. ಅದರಂತೆ ಹಲವು ದೇಶಗಳಿಗೆ ಈ ಉದ್ಯಮಕ್ಕಾಗಿ ನೆರವು ನೀಡಿದೆ. ಚೀನಾ, ಇಂಡೊನೇಷಿಯಾ, ಜಾವ ದೇಶಗಳಲ್ಲಿ ಇದು ಯಶಸ್ವಿಯಾಗಿದೆ. ಆದರೆ ಅಧುನಿಕ ಹಾಗೂ ವೇಗವಾಗಿ ಬೆಳೆಯುವ ಮೀನಿನ ಸಂತತಿಯನ್ನು ಪರಿಚಯಿಸಿದ ಫಲವಾಗಿ ದೇಶೀಯ ತಳಿಗಳು ನಾಶವಾಗುತ್ತಿವೆ. ಈ ಸಂತತಿ ರೋಗವನ್ನು ತಾಳಿಕೊಳ್ಳು ಶಕ್ತಿ ಪಡೆದಿದ್ದವು.

ಇದನ್ನು ಅಭಿವೃದ್ಧಿಯ ವ್ಯಂಗ್ಯ ಎನ್ನಬೇಕೊ ಅಥವಾ ಶಾಪವೆನ್ನಬೇಕೊ ತಿಳಿಯುತ್ತಿಲ್ಲ. ಬಹುಉಪಯೋಗಿ ಅಣೆಕಟ್ಟು ಯೋಜನೆಗಳಲ್ಲಿ ಮನರಂಜನೆ ಒಂದು ಭಾಗವಾಗಿದ್ದು ಇದೀಗ ಅದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಗೊಡಿದೆ.

ಅಮೇರಿಕಾದ ಹೂವರ್ ಅಣೆಕಟ್ಟಿನ ಜಲಾಶಯ ಇದೀಗ ಜಲಕ್ರೀಡೆ, ಸಾಹಸ ಕ್ರೀಡೆ, ದೋಣಿ ವಿಹಾರಕ್ಕೆ, ಮತ್ತು ಹವ್ಯಾಸಿ ಮೀನುಗಾರರಿಗೆ ಆಕರ್ಷಣೀಯ ಕೇಂದ್ರವಾಗಿದೆ. ಇದರ ಸಮೀಪದಲ್ಲೇ ಇರುವ ಜಗತ್ ಪ್ರಸಿದ್ಧ ಮೋಜಿನ ನಗರ ಹಾಗೂ ಜೂಜು ಮತ್ತು ವಿಲಾಸಕ್ಕೆ ಹೆಸರಾದ ಲಾಸ್ ವೆಗಾಸ್ ನಗರವಿದ್ದು ವಾರಾಂತ್ಯದಲ್ಲಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತಿದ್ದಾರೆ. ಇದೇ ನದಿಗೆ ಕಟ್ಟಲಾಗಿರುವ ಪೊವೆಲ್ ಮತ್ತು ಮೀಡ್ ಜಲಾಶಯಗಳು ಕೂಡ ಜಲಕ್ರೀಡೆಗಳಿಗೆ ಹೆಸರುವಾಸಿಯಾಗಿವೆ. ಈ ಪ್ರದೇಶಗಳ ಸುತ್ತ ಮುತ್ತ ಐಷಾರಾಮಿ ರೆಸಾರ್ಟ್‌ಗಳು, ಹೊಟೇಲ್‌ಗಳು, ಶ್ರೀಮಂತರ ವಿಶ್ರಾಂತಿಧಾಮಗಳು, ತಲೆಯೆತ್ತಿ ನಿಂತಿವೆ. ಈಗಾಗಲೇ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾಗಿದ್ದ ಮೂಲನಿವಾಸಿಗಳು ಮತ್ತೊಮ್ಮೆ ಉಳ್ಳವರ ವಿಲಾಸದ ಬದುಕಿಗೆ ತಾವು ವಾಸಿಸುತಿದ್ದ ಜಾಗಗಳನ್ನು ಬಿಟ್ಟುಕೊಟ್ಟು ಕಾಡು ಸೇರುತಿದ್ದಾರೆ.

ನಾವು ರೂಢಿಸಿಕೊಂಡ ಆಧುನಿಕತೆ ಎಲ್ಲರನ್ನೂ ಭ್ರಮೆಯ ಜಗತ್ತಿಗೆ ದೂಡಿದೆ. ಮಲೇಷಿಯಾದ ಜಲಾಶಯದ ಬಳಿ ಪ್ರಾರಂಭವಾದ ರೆಸಾರ್ಟ್ ಅನ್ನು ಉದ್ಘಾಟಿಸಿ ಮಾತನಾಡಿದ್ದ ಅಂದಿನ ಪ್ರಧಾನಿ ಡಾ. ಮಹತೀರ್ ಇದೊಂದು ಪರಿಸರ ಸ್ನೇಹಿ ಯೋಜನೆ ಎಂದು ಕರೆದಿದ್ದರು. ಆದರೆ ಇಂತಹ ಯೋಜನೆಗಳಿಗೆ ತಮ್ಮ ಆಸ್ತಿ ಹಾಗೂ ಬದುಕನ್ನು ಬಲಿ ಕೊಟ್ಟು ಮೂರಾ ಬಟ್ಟೆಯಾದ 10 ಸಾವಿರ ಸ್ಥಳೀಯ ನಿವಾಸಿಗಳ ಧಾರುಣ ಬದುಕು ಅವರ ನೆನಪಿಗೆ ಬಾರಲೇಇಲ್ಲ.

ಕೊಲಂಬಿಯಾದಲ್ಲಿ ಜಲಕ್ರೀಡೆಗಾಗಿ ನಿರ್ಮಾಣವಾದ ಕೊಲಿಮಾ ಐ ಡ್ಯಾಮ್ ಎಂಬ ಜಲಾಶಯಕ್ಕಾಗಿ 8 ಸಾವಿರ ಎಂಬೇರಾ ಮತ್ತು ಚಾಮಿ ಬುಡಕಟ್ಟು ನಿವಾಸಿಗಳು ಅತಂತ್ರರಾದರು.

ಇದೀಗ ಭಾರತದಲ್ಲಿ ಕೂಡ ಈ ಸಂಸ್ಕೃತಿ ಹರಡುತಿದ್ದು ಪಶ್ಚಿಮ ಘಟ್ಟದ ಕಾಳಿನದಿ, ಶರಾವತಿಯ ಹಿನ್ನೀರಿನ ಪ್ರದೇಶಗಳಲ್ಲಿ ಹುಟ್ಟಿಕೊಂಡಿರುವ ರೆಸಾರ್ಟ್‌ಗಳಲ್ಲಿ ಮೋಜು ಮತ್ತು ಉನ್ಮಾದದ ಪ್ರಪಂಚವೇ ಈಕೊ ಟೂರಿಸಂ ಹೆಸರಿನಲ್ಲಿ ತೆರೆದುಕೊಂಡಿದೆ.

(ಮುಂದುವರಿಯುವುದು)