ಬಂಗಾರಪ್ಪ ನಿಧನ: ತಣ್ಣಗಾದ ತಹತಹ

– ವಿ.ವಿ.ಸಾಗರ್

ರಾಜ್ಯ ರಾಜಕಾರಣದಲ್ಲಿ ಸಮಾಜವಾದದ ನೆಲೆಯಿಂದ ರಾಜಕಾರಣ ಆರಂಭಿಸಿ ಗಟ್ಟಿಯಾಗಿ ಕಾಲೂರಿದ್ದ ಒಂದೊಂದೇ ಕೊಂಡಿಗಳು ಕಳಚುತ್ತಿವೆ. ಕೆಲವೇ ದಿನಗಳ ಹಿಂದೆ ಬುದ್ಧಪ್ರಜ್ಞೆಯ ಕೆ.ಎಚ್.ರಂಗನಾಥ್, ಈಗ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಇನ್ನಿಲ್ಲ.

ಬಂಗಾರಪ್ಪ ಎಂಬ ಹೆಸರೇ ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯ ಆಕರ್ಷಣೆ, ತಲ್ಲಣ, ಗೊಂದಲ ಎಲ್ಲವೂ ಆಗಿತ್ತು. ಅದು ವಯಕ್ತಿಕ ಲಾಭಕ್ಕೊ ಅಥವಾ ಬೇರ್ಯಾವ ಕಾರಣಕ್ಕೊ ತಮ್ಮ ರಾಜಕೀಯ ಬದುಕನ್ನು ನಿರಂತರ ಪ್ರಯೋಗಕ್ಕೆ ಒಡ್ಡುತ್ತಲೇ ಒಂದು ಶಕ್ತಿಯಾಗಿ ಉಳಿದಿದ್ದು, ವರ್ಣ ರಂಜಿತ ರಾಜಕಾರಣಿ ಎಂದೆಲ್ಲಾ ಬಿರುದು ಗಳಿಸಿದ್ದು, ಕೆಲವೇ ವರ್ಷ ಮಾತ್ರ ಅಧಿಕಾರದಲ್ಲಿದ್ದರೂ ನಿರಂತರವಾಗಿ ಅಧಿಕಾರ ಗದ್ದುಗೆಯಲ್ಲಿ ಕುಳಿತವರು ಕೂಡ ಗಳಿಸಲಾರದಷ್ಟು ಜನಪ್ರಿಯತೆ ಪಡೆದಿದ್ದು, ಮಾಸ್ ಲೀಡರ್ ಎನಿಸಿಕೊಂಡಿದ್ದು ಎಲ್ಲವೂ ಅವರ ರಾಜಕೀಯ ಬದುಕಿನ ಅಕೌಂಟಿನ ಖಾತೆಯಲ್ಲಿ ಠೇವಣಿಯಾಗಿರುವುದು ಗೋಚರಿಸುತ್ತದೆ.

ನಮ್ಮಂತಹ ಕಿರಿಯರಲ್ಲಿ ರಾಜಕೀಯ ಪ್ರಜ್ಞೆ ಮೂಡುವ ಹೊತ್ತಿಗಾಗಲೇ ಬಂಗಾರಪ್ಪ ಅವರ ರಾಜಕೀಯ ದಿನಗಳ ವೈಭವ ಅಂತ್ಯಕ್ಕೆ ಸರಿಯುತ್ತಿತ್ತು. ಸಮಾಜವಾದಿ ನೆಲೆಯಿಂದ ರಾಜಕೀಯ ಆರಂಭಿಸಿ ಈಗ ಯಾವುದೇ ಪಕ್ಷಗಳಲ್ಲಿ ನೆಲೆಗೊಂಡಿದ್ದರೂ ಆ ರಾಜಕಾರಣಿಗಳ ಬಗ್ಗೆ ನಮ್ಮಂತವರಿಗೆ ಒಂದು ಸಣ್ಣ ಕುತೂಹಲ ಇದ್ದಿದ್ದರಿಂದ ಬಂಗಾರಪ್ಪ ಅವರ ಬಗ್ಗೆಯೂ ಕೇಳಿ ತಿಳಿದುಕೊಳ್ಳುವುದರೊಟ್ಟಿಗೆ ಅವರನ್ನು ಗಮನಿಸುವುದು ನಡೆದಿತ್ತು.

`ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು’ ಎಂಬ ಕವಿವಾಣಿಯಂತೆ ಸದಾ ತಹತಹದಿಂದ ಹಾರಾಡಿದ ರಾಜಕಾರಣಿ ಇವರು. ಕಾಂಗ್ರೆಸ್ ಬಿಡುವುದು, ಸೇರುವುದು, ತನ್ನದೇ ಪಕ್ಷ ಕಟ್ಟಿದ್ದು, ಕಮಲ ಮುದ್ದಿಸಿದ್ದು, ಸೈಕಲ್ ತುಳಿದಿದ್ದು, ಅಂತ್ಯದಲ್ಲಿ ತೆನೆ ಹೊತ್ತು ನಡೆದಿದ್ದು ಎಲ್ಲವೂ ಇದಕ್ಕೆ ತಾಜಾ ಸಾಕ್ಷಿ.

ಬಹುಶಃ ಕರ್ನಾಟಕದಲ್ಲಿ ಸ್ವಂತ ಪಕ್ಷ ಕಟ್ಟಿ ಒಂದಿಷ್ಟು ಕೊಂಚ ಯಶಸ್ಸು ಗಳಿಸಿ `ಭರವಸೆ ಹುಟ್ಟಿಸಿದವರಲ್ಲಿ ಮೊದಲಿಗರು. ದೇವರಾಜ ಅರಸು ಅಂತಹ ಗಟ್ಟಿ ವ್ಯಕ್ತಿತ್ವದ ರಾಜಕಾರಣಿಗೂ ಸಿಗದ ಫಲವನ್ನು ಈ ವಿಷಯದಲ್ಲಿ ಅವರು ಪಡೆದಿದ್ದರು. ಇವರು ಕಾಂಗ್ರೆಸ್ ಬಿಟ್ಟಾಗ ಪ್ರತಿ ಸಾರಿಯೂ ಈ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಸವಾಲಿನ ಎದುರು ಶಿವಮೊಗ್ಗ ಉಪ ಚುನಾವಣೆಯಲ್ಲಿ ಸೈಕಲ್ ಸವಾರಿ ಹೊರಟು ವಿಜಯ ಪತಾಕೆ ಹಾರಿಸಿದ್ದು ಎಲ್ಲವೂ ಅವರಿಗಿದ್ದ ರಾಜಕೀಯ ಶಕ್ತಿಯ ಕನ್ನಡಿ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಸಿಡಿದು ಪಕ್ಷ ಬಿಡುವ ಸಂದರ್ಭ ಎದುರಾಯಿತು. ಆ ವೇಳೆ ಸಂಪುಟ ಸಭೆಯ ನಂತರ ಅಂದು ಮಂತ್ರಿಯಾಗಿದ್ದ ವಿಶ್ವನಾಥ್(ಈಗ ಸಂಸದ) ಲೋಕಾಭಿರಾಮವಾಗಿ ಈ ವಿಷಯ ಚರ್ಚಿಸಿ ಬಂಗಾರಪ್ಪ ಅವರನ್ನು ಪಕ್ಷ ಬಿಡದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಹಿತದಷ್ಟಿಯಿಂದ ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ.

ಆದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದಾಗ, ನೋಡಿ ನಾವೆಲ್ಲಾ ಕೇವಲ ಮಂತ್ರಿಗಳಷ್ಟೇ, ಆದರೆ ಬಂಗಾರಪ್ಪ ಜನನಾಯಕ, ಅದರಲ್ಲೂ ಹಿಂದುಳಿದ ಸಮುದಾಯವಾದ ಈಡಿಗರ ಏಕಮಾತ್ರ ನಾಯಕ ಎಂದು ಹೇಳಿದಾಗ ಅದಕ್ಕೆ ದೊಡ್ಡ ಆಕ್ಷೇಪಣೆಗಳೇ ಏಳುತ್ತವೆ. ಆದರೆ ನಿಜಕ್ಕೂ ಬಂಗಾರಪ್ಪ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಕೆ.ಎಚ್.ರಂಗನಾಥ್ ಕೂಡ ವಿಶ್ವನಾಥ್ ಮಾತಿಗೆ ಬೆಂಬಲಿಸುತ್ತಾರೆ. ಆದರೆ ಇತರೆಯವರು ಒಪ್ಪಲು ತಯಾರಿರಲಿಲ್ಲ. ಅದರ ಫಲ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆಯುತ್ತದೆ. ಈ ವಿಷಯವನ್ನು ವಿಶ್ವನಾಥ್ ತಮ್ಮ ಆತ್ಮಕಥನ ಹಳ್ಳಿಹಕ್ಕಿಯ ಹಾಡು ಕೃತಿಯಲ್ಲಿ ದಾಖಲಿಸಿದ್ದಾರೆ. ಹಾಗೆ ನೋಡಿದರೆ ಬರೀ ಕಾಂಗ್ರೆಸ್ ಅಷ್ಟೇ ಅಲ್ಲ ಅವರ ಶಕ್ತಿಯನ್ನು ಇಡಿಯಾಗಿ ಅವರು ಕಾಲಿಟ್ಟ ಯಾವ ಪಕ್ಷವೂ ಬಳಸಿಕೊಳ್ಳಲಿಲ್ಲ.

ಇವೆಲ್ಲಾ ಅವರ ರಾಜಕೀಯ ಶಕ್ತಿಯ ನಿದರ್ಶನಗಳು. ಇದೆಲ್ಲದರ ಆಚೆ ಅವರಲ್ಲಿ ಎಂತಹ ಸಂದರ್ಭವನ್ನು ಹಾಸ್ಯದಿಂದ ತಿಳಿಗೊಳಿಸುವ ಮತ್ತೊಂದು ಮುಖವಿತ್ತು. ಭದ್ರಾವತಿಯಲ್ಲೊಮ್ಮೆ ಒಂದು ಪತ್ರಿಕೆ ಕಚೇರಿ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಭಾಷಣದ ನಂತರ ಅಲ್ಲಿನ ಪತ್ರಕರ್ತರು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಮನವಿ ಪಡೆದ ಅವರು ಅದು, ಇದು ಕೇಳುತ್ತಲೇ ‘ಬಂಗಾರಪ್ಪ ಅವರು ಒಳ್ಳೆಯವರು ಎಂದು ಬರೆಯಿರಿ, ಅನುದಾನ ಕೊಡೋಣ’ ಎಂದು ನಗುತ್ತಲೇ ಕಾರು ಹತ್ತಿ ಹೊರಟೇ ಬಿಟ್ಟರು.

ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ ನಂತರ ಪಕ್ಷ ಕಟ್ಟಲು ರಾಜ್ಯಾದ್ಯಂತ ಸೈಕಲ್ ತುಳಿಯುತ್ತಿದ್ದರು. ಈ ವೇಳೆ ಚಿತ್ರದುರ್ಗದಲ್ಲಿ ಸಭೆ ಆಯೋಜಿಸಲಾಗಿತ್ತು. ನಿಜಕ್ಕೂ ಆ ಸಭೆಗೆ ಬೆರಗಾಗುವಷ್ಟು ಜನ ಸೇರಿದ್ದರು. ವೇದಿಕೆ ಮೇಲೆ ಕೂತೇ ಇವರು ಎಲ್ಲವನ್ನು ನಿಯಂತ್ರಿಸುತ್ತಿದ್ದರು. ಜಾನಪದ ಕಲಾ ತಂಡವೊಂದು ಪ್ರದರ್ಶನ ನೀಡಿ ವೇದಿಕೆ ಇಳಿದು ಹೋಗುತ್ತಿತ್ತು. ಆಗ ಎದ್ದು ನಿಂತ ಬಂಗಾರಪ್ಪ, ಯಾರೂ ಗಲಾಟೆ ಮಾಡಬಾರದು, ಅವರು ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ನೀವ್ಯಾರು ಸರಿಯಾಗಿ ನೋಡ್ಲಿಲ್ಲ ಎಂದು ಆ ಕಲಾ ತಂಡವನ್ನು ವೇದಿಕೆ ಕರೆದು ಮತ್ತೊಮ್ಮೆ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು.

ಕಾರ್ಯಕ್ರಮ ಆರಂಭವಾದಾಗ ಮುಖಂಡರೊಬ್ಬರು ಬಂಗಾರಪ್ಪ ಅವರನ್ನು ಯರ್ರಾಬಿರ್ರಿ ಹೊಗಳಿ ಭಾಷಣ ಬಿಡುತ್ತಿದ್ದರು. ಕ್ಷಣ ಹೊತ್ತು ಕೇಳಿಸಿಕೊಂಡ ಇವರು, ನೀವು ಮಾತನಾಡಿದ್ದು ಸಾಕು ಬನ್ನಿ ಎಂದು ವಾಪಾಸು ಕರೆದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಮುಖಂಡನನ್ನು ಹೋಗಿ ನೀವು ಮಾತನಾಡಿ ಎಂದು ಕಳುಹಿಸಿದ್ದು ನೋಡಿ ನಾವು ಬಿದ್ದು, ಬಿದ್ದು ನಕ್ಕಿದ್ದೆವು.

ತಮ್ಮ ತವರಾದ ಶಿವಮೊಗ್ಗ ಸೇರಿದಂತೆ ಕರಾವಳಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇವರ ಪ್ರಭಾವದ ಗಾಢತೆ ಕಾಣಬಹುದು. ಅದಕ್ಕೆ ಜಾತಿಯ ಬೆಂಬಲವೂ ಒಂದು ಕಾರಣವಾದರೆ, ಅದರಾಚೆಗೂ ಅವರಿಗಿದ್ದ ಬಡ ಜನರೆಡೆಗಿನ ಕಾಳಜಿಯೂ ಒಂದಾಗಿತ್ತು. ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಎಂಬಂತೆ ಗುರುತಿಸಿಕೊಂಡಿದ್ದ ಬಂಗಾರಪ್ಪ ಅವರ ಸ್ಥಾನವನ್ನು ತುಂಬುವವರು ಯಾರು ? ರಾಜಕೀಯ ಬದುಕಿನ ಅಕೌಂಟಿನಲ್ಲಿ ಇಂತಹ ದೊಡ್ಡ ಠೇವಣಿಯಿದೆ. ಇದನ್ನು ಯಾರು ನಗದೀಕರಿಸಿಕೊಳ್ಳುತ್ತಾರೆ ಎಂಬುದನ್ನು ಕಾಲ ನಿರ್ಧರಿಸಬೇಕಿದೆ.

ಸಮಾಜವಾದಿ ನೆಲೆಯಿಂದ ಬಂದರೂ ಅವರ ರಾಜಕೀಯ ಬದುಕಿನಲ್ಲಿ ಸಮಾಜವಾದದ ಶಿಸ್ತು ಅಳವಡಿಸಿಕೊಳ್ಳದೆ ಚೆಲ್ಲಿದಂತೆ ಬದುಕಿದರು. ಆದರೆ ಅವರು ನಡೆ, ನುಡಿ ಸೇರಿದಂತೆ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದ ಅನೇಕ ಯೋಜನೆಗಳಲ್ಲಿ ಸಮಾಜವಾದದ ಅಂಶಗಳಿದ್ದವು. ಹಿಂದುಳಿದ ಸಮುದಾಯದ ರಾಜಕಾರಣಿಯೊಬ್ಬ ಇಲ್ಲಿನ ಎಲ್ಲ ತರತಮಗಳ ನಡುವೆ ಶಕ್ತಿಯಾಗಿ ಬೆಳೆದಿದ್ದು ಅನೇಕರಿಗೆ ಮಾದರಿ. ಜನರಿಗೆ ಹತ್ತಿರಾಗುವ ಮೂಲಕ ರಾಜಕೀಯ ಶಕ್ತಿ ಗಳಿಸಿಕೊಳ್ಳಬಹುದು ಎಂಬುದನ್ನು ಸಾರೆಕೊಪ್ಪದ ಬಂಗಾರಪ್ಪ ಸಾಧಿಸಿ ತೋರಿಸಿದ್ದರು.

One thought on “ಬಂಗಾರಪ್ಪ ನಿಧನ: ತಣ್ಣಗಾದ ತಹತಹ

  1. ಕವಿಸ್ವರ, ಶಿಕಾರಿಪುರ

    ಬಂಗಾರಪ್ಪನವರ ಕಲ್ಪನೆಯ ಮೂಸೆಯಲ್ಲಿ ಅರಳಿದ ವಿಶ್ವ,ಆರಾಧನಾ,ಆಶ್ರಯ,ಗ್ರಾಮೀಣ ಕೃಪಾಂಕಗಳಂತಹ ಬಡಪರ-ಜನಪರ ಕಾರ್ಯಕ್ರಮಗಳು ಒಂದೆಡೆ ಅವರಲ್ಲಿನ ಅಪ್ಪಟ ಮನುಷ್ಯನನ್ನು ಅನಾವರಣಗೊಳಿಸಿದರೆ, ಇನ್ನೊಂದೆಡೆ ಅವರ ಸಿಟ್ಟು,ಹುಂಬತನ,ಅವಸರ,ಅಸಹನೆಗಳು ಅವರೊಳಗಣ ಅಸಡ್ಡಾಳ ರಾಜಕಾರಣಿಯನ್ನು ಬಡಿದೆಬ್ಬಿಸುತ್ತಿತ್ತು.. ಬಹುಶಃ ಬಂಗಾರಪ್ಪನವರ ಅಸಲೀಯತ್ತೇ ಹಾಗಿತ್ತೇನೋ, ತನ್ನೊಳಗಿನ ರಾಜಕಾರಣಿ ಹಾಗೂ ಮನುಷ್ಯನ ನಡುವೆ ದ್ವಂದ್ವಕ್ಕೆ ಬಿದ್ದವರಂತೆ ವರ್ತಿಸಿದರು..ಈ ದ್ವಂದ್ವಯುದ್ಧ ಅಂತರಂಗವನ್ನೂ ಮೀರಿ ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಸಾದರಗೊಳ್ಳುತ್ತಿತ್ತು.
    ಅವರ ಬಗೆಗಿನ ಅನೇಕ ದಂತಕತೆಗಳಲ್ಲಿ ನಾನು ಕಣ್ಣಾರೆ ಕಂಡ ಸತ್ಯಕತೆಯಂತಹ ಸನ್ನಿವೇಶವನ್ನು ಹಂಚಿಕೊಳ್ಳಲು ಬಯಸುತ್ತೇನೆ..
    ಬಂ.ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್-ಡಿ ಹುದ್ದೆಗಳನ್ನು ಹಲವಾರು ವರ್ಷಗಳಿಂದ ಗುತ್ತಿಗೆಯಾಧಾರದಲ್ಲಿ ಕನಿಷ್ಟ ವೇತನದಲ್ಲಿ ದುಡಿಯುತ್ತಿದ್ದ ನೂರಾರು ಬಡ ಜವಾನರನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸಿದರು.. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಮ್ಮ ಅಹವಾಲನ್ನು ಯಾವುದೇ ಅಧಿಕಾರಿ-ಮಂತ್ರಿ ಮಹೋದಯರು ಆಲಿಸಿಕೊಳ್ಳಲಾಗದ ಸಮಯದಲ್ಲಿ, ಮುಖ್ಯಮಂತ್ರಿಯೊಬ್ಬ ತಮ್ಮನ್ನು ಪರಿಗಣಿಸಿದ ರೀತಿಗೆ ಮಾರುಹೋಗಿದ್ದರು.. ಅಂತಹ ನಾಲ್ಕನೇ ಸ್ತರದ ನೌಕರನೊಬ್ಬ ಆಗ ತನಗೆ ಹುಟ್ಟಿದ ಮಗನಿಗೆ ಬಂಗಾರಪ್ಪನೆಂದು ಹೆಸರಿಡುವ ಮೂಲಕ ತನ್ನ ಕುಟುಂಬದಲ್ಲಿ ಅವರ ಹೆಸರನ್ನು ಪ್ರತಿಷ್ಟಾಪಿಸಿಬಿಟ್ಟರು.. ನರಸಿಂಹಲು ಎಂಬ ತೆಲುಗು ಮಾತೃಭಾಷಿಕ ಆ ನೌಕರರು ಅಪ್ಪಟ ಕನ್ನಡದ ಹೆಸರನ್ನು ಆ ಹೆಸರಿನ ವ್ಯಕ್ತಿಯೆಂಬ ಮಹೋದಯನನ್ನು ಅಳಿಸಲಾರದಂತೆ ಉಳಿಸಿದ್ದು ಹೀಗೆ..
    ಬಂಗಾರಪ್ಪನವರ ಅಸಲೀಯತ್ತೇ ಹೀಗೆ..

    Reply

Leave a Reply to ಕವಿಸ್ವರ, ಶಿಕಾರಿಪುರ Cancel reply

Your email address will not be published. Required fields are marked *