ಉತ್ತರ ಪ್ರದೇಶದ ಮುಸ್ಲಿಮರ ಆಯ್ಕೆಗಳು…

ಚಿತ್ರಕೃಪೆ: ಗಾರ್ಡಿಯನ್

ಬಿ. ಶ್ರೀಪಾದ ಭಟ್

ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದಿದ್ದಾವೆ ಐದು ಹೆಣನು
ಬಂದು ಬಂದು ಅಳುವರು-ಬಳಗ ಘನವಾದ ಕಾರಣ
ಹೆಣನೂ ಬೇಯದು, ಕಾಡೂ ನಂದದು
ಮಾಡ ಉರಿಯಿತ್ತು ಗುಹೇಶ್ವರ
— ಅಲ್ಲಮ

ಇತ್ತೀಚೆಗೆ ತೆಹಲ್ಕ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಉತ್ತರ ಪ್ರದೇಶದ ಮುಸ್ಲಿಂ ನಾಯಕರು, ಧರ್ಮ ಗುರುಗಳು ಕಳೆದ 60 ವರ್ಷಗಳಿಂದ ಚುನಾವಣಾ ರಾಜಕೀಯ ಲಾಭಕ್ಕಾಗಿ ರಾಜ್ಯದ ಅಮಾಯಕ, ಮುಗ್ಧ ಮುಸ್ಲಿಮರನ್ನು ಬಳಸಿಕೊಂಡು ತದನಂತರ ಉಂಡ ಬಾಳೆ ಎಲೆಯನ್ನು ಬಿಸಾಡಿದಂತೆ ಕೆಳೆಗೆಸೆಯುವ ಆ ರಾಜ್ಯದ ಪ್ರಮುಖ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಈ ಮುಸ್ಲಿಂ ನಾಯಕರ ಆಕ್ರೋಶಕ್ಕೆ ತುತ್ತಾಗಿರುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜ ಪಾರ್ಟಿಗಳೆಂಬ ಸೋ ಕಾಲ್ಡ್ ಸೆಕ್ಯುಲರ್ ಪಕ್ಷಗಳು. ಮುಸ್ಲಿಂರ ಇಂದಿನ ಹೊಸ ಸಿಟ್ಟಿನ ಲಾಭದ ಪಾಲು ನೇರವಾಗಿ ತನ್ನ ತಟ್ಟೆಯೊಳಗೆ ಜಾರಿಬೀಳುತ್ತದೆ ಎನ್ನುವ ದುರಾಸೆಯಲ್ಲಿ ಕಾಯುತ್ತಿರುವುದು ಇದೇ ಮುಸ್ಲಿಂರ ರಾಷ್ಟ್ರೀಯತೆಯನ್ನು ಸದಾ ಕಾಲ ಒಂದಲ್ಲ ಒಂದು ರೀತಿ ಪ್ರಶ್ನಿಸಿ ಅವರನ್ನು ಅವಮಾನಿಸುತ್ತಿರುವ ಕೋಮುವಾದಿ ಸಂಘಪರಿವಾರ.

ಇದಕ್ಕೆಲ್ಲ ಉತ್ತರಿಸಬೇಕಾದ ಆ ರಾಜ್ಯದ ಮುಗ್ಧ ಮುಸ್ಲಿಂ ಪ್ರಜೆಗಳು ಮಾತ್ರ ಗೊಂದಲದ ಗೂಡಾಗಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಚುನಾವಣಾ ಫಲಿತಾಂಶಗಳು ಮಾತ್ರ ಇದಕ್ಕೆ ಸರಿಯಾದ ಉತ್ತರ ಕೊಡಬಲ್ಲವು. ಇದಕ್ಕೆ ಉದಾಹರಣೆಯಾಗಿ ಒಂದು ಕಾಲಕ್ಕೆ ಬಿಎಸ್‌ಪಿ ಪಕ್ಷದ ಪ್ರಮುಖ ಮುಸ್ಲಿಂ ನೇತಾರರಾಗಿದ್ದ ಇಲ್ಯಾಸ್ ಅಜ್ಮಿ ಅವರು ಆ ಪಕ್ಷದಿಂದ ಹೊರ ನಡೆದು ತಮ್ಮದೇ ಸ್ವತಂತ್ರ ಪಕ್ಷ “ಆರ್.ಐ.ಪಿ”ಯನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಮುಸ್ಲಿಂರ ಹಕ್ಕುಭಾದ್ಯತೆಗಳಿಗಾಗಿ ಹೋರಾಡುವ ಮಾತಾಡುತ್ತಿದ್ದಾರೆ. ಕಳೆದ 60 ವರ್ಷಗಳಿಂದ ಮುಮಸ್ಲಿಮರನ್ನು ನಂಬಿಸಿ ಕೈಕೊಟ್ಟ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಈ ಬಾರಿ ಮಣ್ಣುಮುಕ್ಕಿಸಲು ಟೊಂಕಕಟ್ಟಿ ನಿಂತಿರುವ ಇಲ್ಯಾಸ್ ಅವರು ಇದಕ್ಕಾಗಿ ಯಾವುದೇ ಸೈದ್ಧಾಂತಿಕ ತತ್ವಗಳ ಬದಲಾಗಿ ಆಸರೆ ಪಡೆದುಕೊಳ್ಳುತ್ತಿರುವುದು  ಇದೇ ಮುಸ್ಲಿಂರ ದುರ್ಗತಿಗೆ ಕಾರಣರಾದ ಸಂಘಪರಿವಾರವನ್ನು. ಈಗ ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಇಲ್ಯಾಸ್ ಅಜ್ಮಿ ಅವರು ಬಿಜೆಪಿಯ ಮುಸ್ಲಿಂ ಮುಖವಾಡವಾಗಿ ಗುರುತಿಸಲ್ಪಡುತ್ತಿದ್ದಾರೆ. ಬಿಜೆಪಿಯೊಂದಿಗೆ ವೇದಿಕೆಯನ್ನು ಕೂಡ ಹಂಚಿಕೊಂಡಿದ್ದಾರೆ.

ಇವರಷ್ಟು ನೇರವಾಗಿ ಸಂಘಪರಿವಾರದೊಂದಿಗೆ ಗುರುತಿಸಿಕೊಳ್ಳದಿದ್ದರೂ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳಿಗೆ ಮಾತ್ರ  ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿರುವ ಇತರ ಮುಸ್ಲಿಂ ನಾಯಕರೆಂದರೆ “ಶಾಂತಿ ಪಕ್ಷ”ದ ಮಹಮ್ಮದ್ ಅಯೂಬ್, “ಐಎಮ್‌ಸಿ”ಯ ತಕೀರ್ ರಾಜ, ಹಾಗೂ ಜಾವೆದ್ ಸಿದ್ದಿಕಿ. ಇವರ ಆಳದ ಆಕ್ರೋಶ ನಿಜಕ್ಕೂ ಅರ್ಥಪೂರ್ಣ ಹಾಗೂ ಸಹಜವಾದದ್ದು. ಆದರೆ ಬೆಂಕಿಯಿಂದ ಹೊರಬರಬೇಕೆನ್ನುವ ನಿರ್ಧಾರದಿಂದ ಇವರು ಬೀಳುತ್ತಿರುವುದು ಬಾಣಲೆಗೆ ಕೂಡ ಅಲ್ಲ, ಸಂಘ ಪರಿವಾರವೆಂಬ ಕುದಿಯುವ ಲಾವಾರಸಕ್ಕೆ. ಇಲ್ಲಿ ಬಂದು ಬಿದ್ದರೆ ಚಣ ಮಾತ್ರದಲ್ಲಿ ಬೂದಿಯಾಗುವುದು ಗ್ಯಾರಂಟಿ. ಇದು ಈ ನಾಯಕರಿಗೆ ಗೊತ್ತು. ಆದರೆ ಅವರು ಪ್ರದರ್ಶಿಸುವ ಅಸಹಾಯಕತೆ ಅರ್ಥವಾಗುವಂತದ್ದಾರೂ ಅದಕ್ಕೆ ಕಂಡುಕೊಳ್ಳುವ ಪರಿಹಾರ ಮಾತ್ರ ಅತ್ಮಹತ್ಯಾತ್ಮಕವಾದದ್ದು. ವರ್ಷಗಳಷ್ಟು ಕಾಲ ಅವಮಾನಕ್ಕೆ, ಮೋಸಕ್ಕೆ ಒಳಗಾಗಿರುವ ಸಮುದಾಯವೊಂದಕ್ಕೆ ಅದರಿಂದ ಬಿಡುಗಡೆ ಪಡೆಯಬೇಕಾದರೆ ಸೈದ್ಧಾಂತಿಕವಾಗಿ, ವೈಚಾರಿಕವಾಗಿ, ಸರಿ ತಪ್ಪುಗಳನ್ನು ಅಳೆದು ಸುರಿದು ಯೋಚಿಸಿ ಅತ್ಯಂತ ನ್ಯಾಯಬದ್ಧ ದಾರಿಯಲ್ಲಿ ನಡೆಸುವ, ತಮ್ಮೊಳಗಿನ ಸಂಸ್ಕೃತಿಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ನಾಯಕತ್ವದ ತಂಡವೊಂದರ ಅವಶ್ಯಕತೆ ಸದಾಕಾಲ ಬೇಕಾಗುತ್ತದೆ. ಏಕೆಂದರೆ ಕತ್ತಲಿನ ಈ ದೂರದ ದಾರಿಯನ್ನು ಕ್ರಮಿಸುವುದು ಅತ್ಯಂತ ಕಷ್ಟಕರವಾದದ್ದಾರರೂ, ಅತ್ಯಂತ ದೀರ್ಘವಾದದ್ದಾರೂ ನಂತರ ಅದು ತಲಪುವ ಗುರಿ ಮಾತ್ರ ನಿರ್ಣಾಯಕವಾಗಿರುತ್ತದೆ, ನೆಮ್ಮದಿಯದಾಗಿರುತ್ತದೆ. ಹಾಗೂ ಅಲ್ಲಿ ಸರಾಗವಾದ ಉಸಿರಾಡುವಂತಹ, ಆತ್ಮಾಭಿಮಾನದ ವಾತಾವರಣವಿರುತ್ತದೆ. ಆದರೆ ಅಂದಿಗೂ ಹಾಗೂ ಇಂದಿಗೂ ಭಾರತ ಮುಸ್ಲಿಂ ಸಮುದಾಯಗಕ್ಕೆ ಈ ಸುಯೋಗ ಲಭ್ಯವಾಗಿಲ್ಲ.

ಪ್ರತಿಗಾಮಿ ಬ್ರಾಹ್ಮಣ್ಯದ ವೈದಿಕ ಸಿದ್ಧಾಂತವನ್ನು, ಶೂದ್ರರ ದೈಹಿಕತೆಯನ್ನೂ ಬಳಸಿಕೊಂಡು ಮುಸ್ಲಿಂರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಒಂದಂಶದ ಕಾರ್ಯಕ್ರಮದ ಮೂಲಕ “ಏಕ್ ಧಕ್ಕ ಔರ್ ದೋ”ಎನ್ನುವ ಠೇಂಕಾರದ ಕ್ರೌರ್ಯದ ಅಮಾನುಷತೆಯನ್ನು ಬಳಸಿಕೊಂಡು ಮುಸ್ಲಿಂರ ನರಮೇಧವನ್ನು ನಡೆಸಿ, ರಾಷ್ಟ್ರೀಯತೆಯ, ಹುಸಿ ದೇಶಪ್ರೇಮದ  ಹೆಸರಿನಲ್ಲಿ ಸದಾಕಾಲ “ಅವರನ್ನು” ಅವಮಾನಕ್ಕೆ ಗುರಿಪಡಿಸುತ್ತ “ಅವರು” ಈ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಬದುಕುವಂತಹ ಸ್ಥಿತಿ ನಿರ್ಮಾಣಗೊಳಿಸಿರುವ ಈ ಸಂಘ ಪರಿವಾರ ಅಧಿಕಾರದ ದುರಾಸೆಗೆ ಇಂದು ಯಾವುದೇ ನಾಚಿಕೆಯಿಲ್ಲದೆ ಈ ಗೊಂದಲದ ವಾತಾವರಣದ ದುರ್ಲಾಭ ಪಡೆಯುವ ಹುನ್ನಾರದಲ್ಲಿದೆ. ದಶಕಗಳ ಕಾಲ ಸದಾ ಸುಳ್ಳುಗಳನ್ನೇ ಹುಟ್ಟಿ ಹಾಕುತ್ತಾ, ಫ್ಯಾಸಿಸಂ ಮಾರ್ಗವನ್ನೇ ಬಳಸಿ ತನ್ನ ಗುಪ್ತ  ಕಾರ್ಯಸೂಚಿಗಳನ್ನು ಅನುಷ್ಟಾನಗೊಳಿಸಿಕೊಳ್ಳುತ್ತಿರುವ ಇವರ ಕುಟಿಲ ನೀತಿಗೆ ಇಂದು ಉತ್ತರ ಪ್ರದೇಶದಲ್ಲಿ ಮುಸ್ಲಿಂರು ವಿಚಿತ್ರ ರೀತಿಯಲ್ಲಿ ಬಲಿಯಾಗುತ್ತಿರುವುದು ಅತ್ಯಂತ ದುರಂತ ಸ್ಥಿತಿ. ಇದು ಮುಸ್ಲಿಂರ ಹೊರಗಿನ ಶತ್ರುಗಳು ಇವರನ್ನು ಒಂದು ಕಡೆಗೆ ಜಗ್ಗಿದರೆ ಒಳಗಿನ ಶತ್ರುಗಳಾದ ಇಸ್ಲಾಂ ಮೂಲಭೂತವಾದವು ಇವರನ್ನು ಮತ್ತೆಲ್ಲಿಗೂ ಹೋಗದಂತೆ ಕಟ್ಟಿಹಾಕಿದೆ. ಪ್ರತಿ ಹೆಜ್ಜೆಗೂ ಅಧುನಿಕತೆಯನ್ನು ,ಸಮಾನತೆಯನ್ನು ಚಿವುಟಿಹಾಕುವ ಈ ಮೂಲಭೂತವಾದಿಗಳ ಕಪಿಮುಷ್ಟಿಯಿಂದ ನಿಸ್ಸಾಹಯಕ ಮುಸ್ಲಿಂ ಸಮಾಜವನ್ನು ಬಿಡುಗಡೆಗೊಳಿಸುವ ಯಾವ ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಬಹುಪಾಲು ಮುಸ್ಲಿಂ ನಾಯಕರು ವಿನಾಕಾರಣವಾಗಿ ಪರಿಸ್ಥಿತಿಯನ್ನು ಕೈತಪ್ಪಿಸಿಕೊಳ್ಳುವಂತೆ ನಡೆದುಕೊಳ್ಳುತ್ತಿರುವುದು ಯಾರಿಗೆ ಲಾಭವೆನ್ನುವುದು ಸರ್ವವಿದಿತ.

ಧರ್ಮಧ ಅಧಾರದ ಮೇಲೆ ವಿಭಜನೆಗೊಂಡ ದೇಶದಲ್ಲಿ ಅಲ್ಪಸಂಖ್ಯಾತರು ಹೊರಗಿನ ಕೋಮುವಾದದ ಫ್ಯಾಸಿಸಂ ವಿರುದ್ಧವೂ, ಒಳಗಿನ ಪ್ರತಿಗಾಮಿ ಮೂಲಭೂತವಾದದ ವಿರುದ್ಧವೂ ಏಕ ಕಾಲಕ್ಕೆ ಹೋರಾಡಬೇಕಾದ ಪ್ರಸಂಗದಲ್ಲಿ ಅತ್ಯಂತ ಆಧುನಿಕ ಶಿಕ್ಷಣದ ಜರೂರತ್ತು, ಸದಾಕಾಲ ಪೊರೆಯುವ ದಿಟ್ಟತೆ ಏಕಕಾಲಕ್ಕೆ ಬೇಕಾಗುತ್ತದೆ. ಆದರೆ ಇದ್ಯಾವುದೂ ಮಾತಾಡಿದಷ್ಟೂ ಸುಲುಭವಲ್ಲ ಎನ್ನುವುದು ಭಾರತ ಸ್ವಾತಂತ್ರಗೊಂಡ 64 ವರ್ಷಗಳ ನಂತರವೂ ದೇಶದ ಉತ್ತರ ಭಾಗದಲ್ಲಿ ಕೋಮು ಗಲಭೆಗಳು, ಭಯೋತ್ಪಾದನೆ ನಡೆದರೆ ಉತ್ತರದಿಂದ ತುದಿಯಿಂದ ದಕ್ಷಿಣದ ತುದಿಯುದ್ದಕ್ಕೂ ಇಡೀ ಮುಸ್ಲಿಂ ಸಮುದಾಯ ಅನುಮಾನದ ಹಿಂಸೆಯಲ್ಲಿ ಕಣ್ತಪ್ಪಿಸಿ ಬದುಕಬೇಕಾಗಿ ಬರುವುದು ಇದಕ್ಕೆ ಸಾಕ್ಷಿ. ಇವೆಲ್ಲಕೂ ಆಶಾವಾದದಂತೆ ಹುಟ್ಟಿಕೊಂಡ ಎಡಪಂಥೀಯ ಸೆಕ್ಯುಲರ್ ಚಿಂತನೆಗಳು, ಚಳುವಳಿಗಳು ಮುಸ್ಲಿಂರಲ್ಲಿ ಕೊಂಚ ನಿರಾಳತೆಯನ್ನು, ಸ್ಥಿರತೆಯನ್ನು, ಇವ ನಮ್ಮವ ಇವ ನಮ್ಮವ ಎನ್ನುವ ಭ್ರಾತೃತ್ವವನ್ನು ತಂದು ಕೊಟ್ಟರೂ ಈ ಚಳುವಳಿಗಳ ನಾಸ್ತಿಕವಾದತ್ವ ಮತ್ತೊಂದು ರೀತಿಯಲ್ಲಿ ಬಿಕ್ಕಟ್ಟನ್ನೂ ಸೃಷ್ಟಿಸಿದ್ದು ಯಾರೂ ನಿರಾಕರಿಸುವಂತಿಲ್ಲ. ಈ ಬಿಕ್ಕಟ್ಟಿನ ದುರ್ಲಾಭ ಪಡೆದ ಸಂಘ ಪರಿವಾರ ಬಹುಪಾಲು ಹಿಂದೂಗಳಲ್ಲಿ ಎಡಪಂಥೀಯರ ಬಗ್ಗೆ ನಿರಾಕರಣೆ ಧೋರಣೆಯನ್ನು ಯಶಸ್ವಿಯಾಗಿ ಹುಟ್ಟಿ ಹಾಕಿತು. ಈ ಸಂದರ್ಭದಲ್ಲಿ ಚಿಂತಕ ಅಸ್ಗರ್ ಅಲಿ ಇಂಜಿನಿಯರ್ ಹೇಳಿದ” ಗಾಂಧೀಜಿಯವರೇನಾದರೂ ನಾಸ್ತಿಕರಾಗಿದ್ದರೆ ಈ ಸಂಘಪರಿವಾರ ಅವರನ್ನು ಸೈದ್ಧಾಂತಿಕವಾಗಿ ಎಂದೋ ಮುಗಿಸಿಬಿಡುತ್ತಿತ್ತು” ಮಾತು ಎಷ್ಟೊಂದು ಅರ್ಥಪೂರ್ಣ. ಅದಕ್ಕೆ ಇರಬೇಕು ಪ್ರಗತಿಪರ, ಎಡಪಂಥೀಯ ಪ್ರಜಾಪ್ರಭುತ್ವವಾದಿ ಚಳುವಳಿಗಳು ಪ್ರಖರವಾಗಿರುವ ದಕ್ಷಿಣದ ರಾಜ್ಯಗಳಲ್ಲಿನ ಕೋಮುಗಲಭೆಗಳ ಪ್ರಮಾಣ ಪ್ರಗತಿಪರ ಚಳವಳಿಗಳ ಕೊರತೆಯಿರುವ ಉತ್ತರ ಭಾರತಕ್ಕೆ ಹೋಲಿಸಿದರೆ  ಬಹುಪಾಲು ಕಡಿಮೆಯೆ. ಏಕೆಂದರೆ ದಕ್ಷಿಣ ರಾಜ್ಯಗಳ ಈ ಪ್ರಗತಿಪರ ಚಳುವಳಿಗಳು ಕೇವಲ ಕೋಮುವಾದವನ್ನಷ್ಟೇ ವಿರೋಧಿಸದೆ ಈ ಕೋಮುವಾದದ ಗುಪ್ತ ಕಾರ್ಯಸೂಚಿಯಾದ ಪುರೋಹಿತಶಾಹಿಯ ಪುನುರುಜ್ಜೀವೀಕರಣದ ಕುಟಿಲ ನೀತಿಗಳ ವಿರುದ್ಧವೂ ದೊಡ್ಡದಾದ ಹೋರಾಟಗಳನ್ನೇ ನಡೆಸಿದವು. ಇಲ್ಲಿನ ಚಿಂತಕರು ಸಂಘಪರಿವಾರದ ದುಷ್ಟತನದ ಬಗ್ಗೆ ಮಾತನಾಡುತ್ತಿದ್ದರೂ ಅದೇ ಕಾಲಘಟ್ಟಕ್ಕೆ ಅದು ಜೀವವಿರೋಧಿ ವೈದಿಕ ಪರಂಪರೆಯ ವಿರೋಧದ ಅಯಾಮವನ್ನೂ ಪಡೆದುಕೊಳ್ಳುತ್ತಿತ್ತು. ಆದರೆ ಉತ್ತರ ಭಾರತದ ಪರಂಪರೆಯ ಅಸ್ಮಿತೆ ದಕ್ಷಿಣಕ್ಕಿಂತಲೂ ಭಿನ್ನವಾದದ್ದು.ಅಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಅನ್ಯಧರ್ಮೀಯರೊಂದಿಗೆ ಕೊಡು ಕೊಳ್ಳುವಿಕೆಯ ಮೂಲಕ ಸಾಧಿಸಿರುವ ಸಾಮರಸ್ಯ ಅನನ್ಯವಾದದ್ದು. ಅದು ಲಕ್ನೋವಿನ ಅಲ್ಲಿನ ಅವಧ ರಾಜ್ಯದ, ಪುರಾತನ ದೆಹಲಿಯ, ಕಿಲ್ಲೆಗಳ, ಗುಂಬಸುಗಳ ಈ ವೈವಿಧ್ಯಮಯ ಪರಂಪರೆಗಳೊಂದಿಗೆ ಅಲ್ಲಿನ ಮುಸ್ಲಿಂ ಜನತೆಯ ಬದುಕು ಹಾಸುಹೊಕ್ಕಾಗಿರುವುದು, ಗುರುತಿಸಿಕೊಂಡಿರುವುದು ಹಾಗೂ ಏಕಕಾಲಕ್ಕೆ ಪರಂಪರೆಯೂ ಹಾಗೂ ಜೀವಪರವೂ ಆಗಿರುವ ಇಲ್ಲಿನ ಬದುಕು ಹಾಗು ಅದರ ವಿಶ್ಲೇಷಣೆ  ಚಿಂತನೆಯ ಮತ್ತೊಂದು ಆಯಾಮವನ್ನೇ ಬೇಡುತ್ತದೆ.

ಕೊನೆಗೂ ಉತ್ತರ ಪ್ರದೇಶದ ಮುಸ್ಲಿಂರ ನಿರ್ಣಾಯಕ ಪಾತ್ರ ಹಾಗೂ ನಿರ್ಣಯಗಳು ಇಂದು ಆ ರಾಜ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಹಿಂದೆಂಗಿಂತಲೂ ಪ್ರಮುಖ ಪಾತ್ರವಹಿಸುತ್ತಿರುವುದು ಕುತೂಹಲಕರ ಹಾಗೂ ದುರಂತ. ಏಕೆಂದರೆ ಇದರ ಫಲಿತಾಂಶಗಳಿಂದ ಬದುಕು ಹಸನಾಗುವ ಸಾಧ್ಯತೆಗಳು ಬಹಳ ಕಡಿಮೆ. ಇವೆಲ್ಲದರ ಮಧ್ಯೆ ಮನೆಗೆ ಬೆಂಕಿ ಬಿದ್ದಾಗ ಬೀಡಿ ಹಚ್ಚಿಕೊಂಡರು ಎನ್ನುವಂತೆ ಕಾಂಗ್ರೆಸ್ ಮುಸ್ಲಿಂರಿಗೆ ಒಳ ಮೀಸಲಾತಿಯನ್ನು ಘೋಷಿಸಿದೆ. ಇದು ಉತ್ತರ ಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಬಂದಂತಹ ಕೊಡುಗೆ. ಮತ್ತೊಮ್ಮೆ ಹಳ್ಳ ಬಂತು ಹಳ್ಳ. ಕಾಂಗ್ರೆಸ್ ಪಾಠ ಕಲಿಯುವ ಕಾಲವೂ ಮುಗಿದಿದೆ. ಏಕೆಂದರೆ ಈ ಪಕ್ಷ ಪದೇ ಪದೇ ಎಡವುವದನ್ನು, ಆ ಮೂಲಕ ತಮ್ಮನ್ನು ನಂಬಿದವರನ್ನು ಕೂಡ ದಿಕ್ಕುತಪ್ಪಿಸುವುದನ್ನು, ಇಂದು ತನ್ನ ಒಂದು ನಿತ್ಯ ಪರಿಪಾಠವನ್ನಾಗಿ ಮಾಡಿಕೊಂಡಿದೆ.

ಎಂದಿನಂತೆ “ಅಲ್ಪಸಂಖ್ಯಾತರ ಹಿತರಕ್ಷಣೆಗೆ ನಾವೆಲ್ಲ ಟೊಂಕಕಟ್ಟಿ ಅರ್ಥಾತ್ ಕಟಿಬದ್ಧರಾಗಿ ನಿಂತಿದ್ದೇವೆ” ಹಾಗೂ “ಭಾರತದಲ್ಲಿನ ಮುಸ್ಲಿಂರ ಸುರಕ್ಷತೆ ಇಲ್ಲಿನ ಬಹುಸಂಖ್ಯಾತ ಹಿಂದೂಗಳೊಂದಿಗೆ ಹೊಂದಿಕೊಂಡು ಬದುಕುವುದರಲ್ಲಿದೆ” ಎನ್ನುವ ಎರಡು ದಂಡೆಗಳ ಮಧ್ಯೆ ಮುಸ್ಲಿಮರು ನಿಂತಿದ್ದಾರೆ ಎಂದಿನಂತೆ ಅಸಹಾಯಕರಾಗಿ, ಒಂಟಿಯಾಗಿ. ಈ ಸಂಧಿಗ್ಧತೆ ಅತ್ತ ದರಿ ಇತ್ತ ಪುರಿ ಎನ್ನುವ ಗಾದೆ ಮಾತನ್ನೂ ಮೀರಿಸುವಷ್ಟು ಶೋಚನೀಯವಾಗಿದೆ.

Leave a Reply

Your email address will not be published. Required fields are marked *