ಟಿ.ಆರ್.ಸಿ ಅಮಾನತು: ಯಾರ ಮಸಲತ್ತು?

-ಪರುಶುರಾಮ ಕಲಾಲ್
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದವರಲ್ಲಿ ಟಿ.ಆರ್. ಚಂದ್ರಶೇಖರ್ ಒಬ್ಬರು. ಅವರನ್ನು ಈಗ ತಾಂತ್ರಿಕ ಕಾರಣವೊಂದರ ನೆಪದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ  ಅಮಾನತ್ತುಗೊಳಿಸಿದೆ. ಕನ್ನಡ ವಿವಿಯಲ್ಲಿ ಇದೊಂದು ಕೆಟ್ಟ ಬೆಳವಣಿಗೆ. ಕುತ್ಸಿತ ಮನಸ್ಸುಗಳು ಹಾಗೂ ವಿಘ್ನ ಸಂತೋಷಿಗಳು ಮಾತ್ರ ಇಂತಹ ನಿರ್ಣಯ ಕೈಗೊಳ್ಳಬಲ್ಲರು.

ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಿದ ಅಭಿವೃದ್ಧಿ ಯೋಜನೆಯಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆಯದೆ ಚಂದ್ರಶೇಖರ್ ಅವರು ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಕನ್ನಡ ವಿಶ್ವವಿದ್ಯಾಲಯ ಕಾರ್ಯ ಕಾರಿ ಸಮಿತಿ ಅಮಾನತ್ತುಗೊಳಿಸಿದೆ. ವಾಸ್ತವವೆಂದರೆ ಅದನ್ನು ಯಾರ ಗಮನಕ್ಕೂ ತಂದಿಲ್ಲ ಎನ್ನುವುದು ಮಾತ್ರ ಅಪ್ಪಟ ಸುಳ್ಳಾಗಿದೆ.
ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ ಯೋಜನೆ (ಟುವರ್ಡ್ಸ್ ಎ ಚೈಲ್ಡ್ ಫ್ರೆಂಡ್ಲಿ ಡಿಸ್ಟಿಕ್ಟ್-ವಿಲೇಜ್ ಲೆವೆಲ್ ಮೈಕ್ರೋ ಪ್ಲಾನಿಂಗ್ ಅಂಡ್ ಕನ್ವರ್ಜೆಂಟ್ ಮಾನಿಟರಿಂಗ್ ಆಫ್ ಬೇಸಿಕ್ ಸರ್ವೇಸ್ ಇನ್ ರಾಯಚೂರು ಡಿಸ್ಟಿಕ್) ಈ ಯೋಜನೆಯಲ್ಲಿ ಪಾಲ್ಗೊಳ್ಳುವ ತಮ್ಮ ಇರಾದೆಯನ್ನು ಪ್ರಸ್ತಾಪವೊಂದರ ಮೂಲಕ ವಿಭಾಗದ ಗಮನಕ್ಕೆ ತಂದಿದ್ದಾರೆ. 2008 ನವೆಂಬರ್ 26ರಂದು ನಡೆದ ವಿಭಾಗದ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ಈ ಯೋಜನೆಯ ಬಗ್ಗೆ ವಿಭಾಗದ ಅನುಮತಿಯನ್ನು ಪಡೆದಿದ್ದಾರೆ. ಈ ಸಭೆಯ ನಡಾವಳಿಯ ಪ್ರತಿಯನ್ನು ಆಡಳಿತಾಂಗಕ್ಕೂ ಕಳಿಸಲಾಗಿದೆ.
2008-09ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ಅದೇ ವರ್ಷ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಯೋಜನೆ ಪೂರ್ಣಗೊಳಿಸಿರುವುದನ್ನು ವಿವಿ ಗಮನಕ್ಕೆ ತಂದಿದ್ದಾರೆ. ವಿವಿ ಗಮನಕ್ಕೆ ತರದೇ ಈ ಯೋಜನೆಯ ಜವಾಬ್ದಾರಿ ನಿರ್ವಹಿಸುವ ಉದ್ದೇಶ ಟಿ.ಆರ್. ಚಂದ್ರಶೇಖರ್ ಅವರಿಗಿದ್ದರೆ ಯೋಜನೆ ಪ್ರಸ್ತಾವನೆಯನ್ನೇ ವಿಭಾಗಕ್ಕೆ ಸಲ್ಲಿಸುತ್ತಿರಲಿಲ್ಲ. ವಾರ್ಷಿಕ ವರದಿಯಲ್ಲಿ ಇದನ್ನು ದಾಖಲಿಸುತಲೂ ಇರಲಿಲ್ಲ.
ತಪ್ಪಿತಸ್ಥ ವ್ಯಕ್ತಿ ಮುಂದೆ ನಡೆಯಲಿರುವ ತನಿಖೆಯನ್ನು ಪ್ರಭಾವಿಸಬಹುದೆನ್ನುವ ಕಾರಣಕ್ಕಾಗಿ ತನಿಖೆಗೆ ಮುನ್ನ ವ್ಯಕ್ತಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವ ಕ್ರಮವಿದೆ. ಟಿ.ಆರ್. ಚಂದ್ರಶೇಖರ್ ಅವರು ವಿವಿ ಆಡಳಿತಾಂಗದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಅವರು ಅಧ್ಯಾಪಕರು ಮಾತ್ರ. ತನಿಖೆ ನಡೆಸಿ, ತಪ್ಪಿತಸ್ಥರೆಂದು ತೀರ್ಮಾನವಾಗುವ ಮುಂಚೆಯೇ ಅಮಾನತ್ತು ಮಾಡಿರುವುದರ ಹಿಂದಿನ ಉದ್ದೇಶ ಏನು?
1996ರಲ್ಲಿ ಕನ್ನಡ ವಿವಿಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ ಸ್ಥಾಪನೆಗೊಂಡಾಗ ವಿಭಾಗದ ಉದ್ದೇಶವೇ ಅಭಿವೃದ್ಧಿ ಸಿದ್ಧಾಂತ ಮತ್ತು ಆಚರಣೆಯನ್ನು ಅಧ್ಯಯನ ಮಾಡುವುದು. ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು. ಅಭಿವೃದ್ಧಿ ತಜ್ಞರ ರೂಪದಲ್ಲಿ ವಿವಿಧ ಸಂಘ, ಸಂಸ್ಥೆಗಳಿಗೆ ನೆರವು ನೀಡುವುದೇ ಆಗಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಮುಂಬಯಿ ಕರ್ನಾಟಕದ  ಪ್ರದೇಶಗಳ ಜಿಲ್ಲಾ ಪಂಚಾಯತ್ಗಳೊಂದಿಗೆ ಸೇರಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ, ಜನಯೋಜನೆ ಸಿದ್ದಪಡಿಸುವುದು, ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇಲ್ಲೂ ಕೂಡ ವಿಭಾಗದ ಉದ್ದೇಶದ ಭಾಗವಾಗಿಯೇ ಡಾ. ಟಿ.ಆರ್. ಚಂದ್ರಶೇಖರ್ ಯುನಿಸೆಫ್ ಯೋಜನೆಯಲ್ಲಿ ಪಾಲ್ಗೊಂಡಿದ್ದರು. ಯುನಿಸೆಫ್ ಮತ್ತು ಜಿಲ್ಲಾ ಪಂಚಾಯ್ತಿಯು ಜಂಟಿಯಾಗಿ ಕೈಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವು ಎರಡೂ ಸರ್ಕಾರಿ  ಸಂಸ್ಥೆಗಳೇ ಆಗಿವೆ. ಲೆಕ್ಕಪತ್ರಗಳನ್ನು ಐ.ಎ.ಎಸ್. ಅಧಿಕಾರಿಗಳು ಧೃಢೀಕರಿಸಿದ್ದಾರೆ. ಅವರು ಯಾವ ಆರೋಪವನ್ನೂ ಸಹ ಮಾಡಿಲ್ಲ. ಟಿ.ಆರ್.ಚಂದ್ರಶೇಖರ್ ಅವರೇ ಸಲ್ಲಿಸಿದ ವಾರ್ಷಿಕ  ವರದಿಯನ್ನು ಉಲ್ಲೇಖಿಸಿಯೇ ಅಮಾನತ್ತು ಶಿಕ್ಷೆ ನೀಡಲಾಗಿದೆ.
ಯೊಜನೆಗಳ ನಿರ್ವಹಣೆಗಾಗಿ ವಿಶ್ವವಿದ್ಯಾಲಯದ ಧನ ಸಹಾಯ ಪಡೆದುಕೊಂಡು ಯೋಜನೆಯನ್ನು ಪೂರ್ಣಗೊಳಿಸದಿರುವ, ಯೋಜನೆಗಾಗಿ ಪಡೆದ ಹಣದ ಹೊಂದಾಣಿಕೆಯನ್ನು ವರ್ಷಾನುಗಟ್ಟಲೆ ಮಾಡದಿರುವ ಹಲವಾರು ಪ್ರಕರಣಗಳು ಕನ್ನಡ ವಿವಿಯಲ್ಲಿ ಇವೆ. ಈ ಬಗ್ಗೆ ಹಲವಾರು ಬಾರಿ ಕನ್ನಡ ವಿವಿ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಗಳೂ ಆಗಿವೆ. ಇವುಗಳ ಬಗ್ಗೆ ವಿವಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎನ್ಜಿಓಗಳೊಂದಿಗೆ ಯೋಜನೆಯನ್ನು ಹಂಚಿಕೊಂಡು ಅಲ್ಲೂ ಇಲ್ಲೂ ಲಾಭ ಮಾಡಿಕೊಂಡವರೂ  ವಿ.ವಿ.ಯಲ್ಲಿ ಇದ್ದಾರೆ. ಸರ್ಕಾರಿ ಸಾರ್ವಜನಿಕ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಯೋಜನೆ ಪೂರ್ಣಗೊಳಿಸಿದವರಿಗೆ ಮಾತ್ರ ಈ ಶಿಕ್ಷೆ ನೀಡಲಾಗಿದೆ.
ಟಿ.ಆರ್. ಚಂದ್ರಶೇಖರ್ ಅವರ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಸಮಾಜೋಮುಖಿ ಅಭಿವೃದ್ಧಿ ಬರಹಗಳು ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ನೇರ ಟೀಕೆಯಿಂದ ಕೂಡಿರುತ್ತಿದ್ದವು. ಅವರು ಕನ್ನಡ ವಿವಿಯ 80 ಏಕರೆ ಭೂಮಿಯ ಪರಭಾರೆ ವಿರುದ್ಧ ಹೋರಾಟದ ಮಂಚೂಣಿಯಲ್ಲಿದ್ದರು. ಆಡಳಿತಾಂಗದ ನಿರ್ಣಯವನ್ನು ಸದಸ್ಯರಾಗಿ ತಡೆ ಹಿಡಿಯುವ ಕೆಲಸ ಮಾಡಿದರು. ಆತ್ಮ ಸಾಕ್ಷಿಯಂತೆ ಕೆಲಸ ಮಾಡಿದ್ದ ಅವರ ನಿಲುವಿನಿಂದಾಗಿ ಭಗ್ನಗೊಂಡಿದ್ದ ಮನಸ್ಸುಗಳು ತಾಂತ್ರಿಕ ಕಾರಣವನ್ನು ಹೆಕ್ಕಿ ತೆಗೆದು, ಅವರ 17 ವರ್ಷದ ವಿವಿಯ ಸೇವೆಯನ್ನು ಪರಿಗಣಿಸಿದೇ ಅಮಾನತ್ತು ಎನ್ನುವ ಘೋರ ಶಿಕ್ಷೆಯನ್ನು ನೀಡಿ ಕೇಕೇ ಹಾಕಿ ನಕ್ಕಿವೆ. ಕನ್ನಡ ವಿವಿಯಲ್ಲಿ ಚೂರುಪಾರು ಮಾನ ಮರ್ಯಾದೆಯಿಂದ ಕೂಡಿದವರು ಕನ್ನಡ ವಿವಿಯ ಗೌರವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಅಂತವರ ಮನಸ್ಸುಗಳನ್ನು ಜಡಗೊಳಿಸಿ, ಅಧ್ಯಾಪಕರನ್ನು  ಗುಮಾಸ್ತರನ್ನಾಗಿ ಮಾಡಿ ಹಾಕಲಿದೆ ಈ ಅಮಾನತ್ತು ಎಂಬ ನಿರ್ಣಯ. ಇದೊಂದು ಯಕಶ್ಚಿತ ಘಟನೆ ಎಂಬಂತೆ ವಿಶ್ವವಿದ್ಯಾಲಯದ ಅಧ್ಯಾಪಕರು ಯೋಚಿಸುತ್ತಿದ್ದಾರೆ. ಅವರು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಬಲಿಗಳು ಅವರೇ ಆಗಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ  ಕಾರ್ಯಕಾರಿ ಸಮಿತಿಯು ಕೂಡಲೇ ಅಮಾನತ್ತು ಹಿಂತೆಗೆದುಕೊಳ್ಳುವ ಮೂಲಕ ವಿವಿಯ ಘನತೆ ಉಳಿಸಿಕೊಳ್ಳಬೇಕು.

2 thoughts on “ಟಿ.ಆರ್.ಸಿ ಅಮಾನತು: ಯಾರ ಮಸಲತ್ತು?

  1. G N Narasimha Murthy

    ಕೇವಲ ಕ್ಷುಲ್ಲಕ ಕಾರಣಗಳಿಗಾಗಿ ಓವ೵ ಸೃಜನಶೀಲ ಅಧ್ಯಯನಶೀಲ ಸಂಶೋಧಕರನ್ನು ಅಮಾನತುಗೊಳಿಸಿರುವುದು ಅನ್ಯಾಯ. ಬೇಗನೆ ಚಂದ್ರಶೇಖರ್ ಅವರು ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಂತಾಗಲಿ.
    ಜಿ ಎನ್ ನರಸಿಂಹಮೂರ್ತಿ

    Reply
  2. purnachandra

    ಟಿಆರ್ಸಿ ಅವ್ರು ವಿವಿ ಸಿಂಡಿಕೇಟ್ಗೆ ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರಂತೆ. ಅವರು ಏನೆಲ್ಲಾ ಹಾಗೂ ಯಾವುದೆಲ್ಲ ತಪ್ಪು ಮಾಡಿದ್ದಾರೆ ಎಂಬ ಸುದ್ದಿಗಳು ಬಂದಿರುವುದು ಪ್ರಜಾವಾಣಿ ಮತ್ತು ವಿಜಯ ಕರ್ನಾಟಕದಲ್ಲಿ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ.
    ಪ್ರಗತಿಪರ ವಿಚಾರ ಮಾತನಾಡುವವರೆಲ್ಲರು ಪ್ರಾಮಾನಿಕರಾಗಿರಬೇಕು ಎಂದೇನಿಲ್ಲ. ತನಿಖೆ ನಡೆಯುವ ತನಕ ಕಾಯುವುದು ಒಳ್ಳೆಯದು.
    -ಪೂರ್ಣಚಂದ್ರ ಮೈಸೂರು

    Reply

Leave a Reply to purnachandra Cancel reply

Your email address will not be published. Required fields are marked *