ಜೀವನದಿಗಳ ಸಾವಿನ ಕಥನ – 18

ಡಾ.ಎನ್.ಜಗದೀಶ್ ಕೊಪ್ಪ

ಜಗತ್ತಿನಲ್ಲಿ ನಿರ್ಮಾಣಣವಾಗಿರುವ ಬಹುತೇಕ ಅಣೆಕಟ್ಟುಗಳು ನೀರಾವರಿ ಯೋಜನೆಗಳಿಗಾಗಿ ರೂಪುಗೊಂಡಿವೆ. ಜಲಾಶಯಗಳಲ್ಲಿ ಬಳಸಲಾಗುತ್ತಿರುವ ಮೂರನೇ ಎರಡು ಪ್ರಮಾಣದಷ್ಟು ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದೆ. ಅಮೇರಿಕಾದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಶೇ.80 ರಷ್ಟನ್ನು ಕೃಷಿಗೆ ಬಳಸುತಿದ್ದರೆ, ಭಾರತದಲ್ಲಿ ಶೇ.90 ರಷ್ಟು ನೀರನ್ನು ಕೃಷಿಗೆ ವಿನಿಯೋಗಿಸಲಾಗುತ್ತಿದೆ. ಜಗತ್ತಿನಾದ್ಯಂತ ಕೃಷಿ ಉತ್ಪಾದನೆ ಪೈಕಿ ಶೇ.60 ರಷ್ಟು ಭಾಗ ನೀರಾವರಿ ಪ್ರದೇಶದಿಂದ ಬರುತ್ತಿದೆ.

19ನೇ ಶತಮಾನದ ಪ್ರಾರಂಭದಿಂದ ದೇಶಿ ತಂತ್ರಜ್ಞಾನದ ಜೊತೆಗೆ ಅವಿಷ್ಕಾರಗೊಂಡ ನೂತನ ತಂತ್ರಜ್ಞಾನಗಳೊಂದಿಗೆ ಜಲಾಶಯದ ನೀರನ್ನು ಕೃಷಿ ಚಟುವಟಿಕೆಗೆ ಬಳಸಲು ಆರಂಭಿಸಲಾಯಿತು. ಭಾರತದ ಸಿಂಧೂ ಮತ್ತು ಗಂಗಾ ನದಿಯ ಪಾತ್ರದಲ್ಲಿ, ಈಜಿಪ್ಟ್‌ನ ನೈಲ್ ನದಿಯ ಪ್ರಾಂತ್ಯ, ಪಶ್ಚಿಮದ ಅಮೇರಿಕಾ, ಆಸ್ಷೇಲಿಯಾ ಮುಂತಾದ ದೇಶಗಳಲ್ಲಿ 1800 ರಿಂದ 1900 ರ ವೇಳೆಗೆ 44 ಮಿಲಿಯನ್ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿತ್ತು. ಮುಂದಿನ 50 ವರ್ಷಗಳಲ್ಲಿ ಅತಿ ದೊಡ್ಡ ಅಣೆಕಟ್ಟುಗಳು ನಿರ್ಮಾಣವಾದ ನಂತರ ನೀರಾವರಿ ಪ್ರದೇಶ ದ್ವಿಗುಣಗೊಂಡಿತು. ಇದರ ಜೊತೆಗೆ 1960 ರಲ್ಲಿ ಅವಿಷ್ಕಾರಗೊಂಡ ನೂತನ ತಳಿಗಳು, ವಿಶೇಷವಾಗಿ ಭತ್ತ ಮತ್ತು ಗೋಧಿಯ ತಳಿಗಳಿಂದಾಗಿ ಜಗತ್ತಿನೆಲ್ಲೆಡೆ ಹಸಿರುಕ್ರಾಂತಿಗೆ ಕಾರಣವಾಯ್ತು.

1970 ರ ನಂತರ ನೀರಾವರಿ ಪ್ರದೇಶದ ವಿಸ್ತೀರ್ಣದ ವೇಗ ನಾಟಕೀಯವಾಗಿ ಬೆಳೆಯತೊಡಗಿತು.ಅಂತರರಾಷ್ಟೀಯ ನೀರಾವರಿ ಮತ್ತು ಒಳಚರಂಡಿ ಸಮಿತಿಯ ಅಧ್ಯಯನದ ಪ್ರಕಾರ 1985 ರಲ್ಲಿ 310 ಮಿಲಿಯನ್ ಹೆಕ್ಟೇರ್ ನೀರಾವರಿ ಪ್ರದೇಶವಿದ್ದದ್ದು 2000 ದ ಅಂತ್ಯದ ವೇಳೆಗೆ 420 ಮಿಲಿಯನ್ ಹೆಟ್ಕೇರ್ ಪ್ರದೇಶಕ್ಕೆ ವಿಸ್ತೀರ್ಣಗೊಂಡಿತ್ತು. ನಂತರ ಈ ಬೆಳವಣಿಗೆ ಕುಂಠಿತಗೊಂಡಿತು. ಫಲವತ್ತಾದ ಭೂಮಿಯ ಕೊರತೆ, ನೀರಾವರಿಗೆ ಯೋಗ್ಯವಲ್ಲದ ಸ್ಥಳಗಳಲ್ಲಿ ಜಲಾಶಯಗಳ ನಿರ್ಮಾಣಣ, ಮುಂತಾದ ಅಂಶಗಳು ಇದಕ್ಕೆ ಕಾರಣವಾದವು.
ಹಸಿರು ಕ್ರಾಂತಿಯ ಫಲವಾಗಿ ಪ್ರಾರಂಭದಲ್ಲಿ ಅತ್ಯಧಿಕ ಇಳುವರಿ ಸಿಕ್ಕಿತಾದರೂ, ಹೈಬ್ರಿಡ್ ತಳಿಗಳು ಬೇಡುವ ಅತ್ಯಧಿಕ ನೀರು, ರಸಾನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಕೇವಲ ಹತ್ತು ವರ್ಷಗಳಲ್ಲಿ ಫಲವತ್ತಾದ ಭೂಮಿ ಬಂಜರು  ಭೂಮಿಯಾಗಿ ಮಾರ್ಪಟ್ಟಿತು. ಈ ಕುರಿತಂತೆ  ಜಗತ್ತಿನ ಕೃಷಿತಜ್ಞರ ನಡುವೆ ಮರುಚಿಂತನೆ ಆರಂಭವಾಯಿತು.

ಭೂಮಿಗೆ ನೀರುಣಿಸುವ ನೀರಾವರಿ ಯೋಜನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಕೃತಿಯ ಕೊಡುಗೆಯಾದ ಮಳೆ ನೀರನ್ನು ಆಶ್ರಯಿಸಿ ಬೇಸಾಯ ಮಾಡುತಿದ್ದ ನಮ್ಮ ಪೂರ್ವಿಕರು ತಮ್ಮ ಜಮೀನುಗಳ ಸಮೀಪ ಕೆರೆ, ಕಟ್ಟೆಗಳನ್ನು ನಿರ್ಮಿಸಿಕೊಂಡು ಕಿರು ಕಾಲುವೆಗಳ ಮುಖಾಂತರ ನೀರುಣಿಸಿ ಬೆಳೆ ಬೆಳೆಯುತಿದ್ದರು. ಇದಲ್ಲದೆ ಮಳೆಯಾಶ್ರಿತ ಬೆಳೆಗಳಿಗಾಗಿ ದೇಶಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತಿದ್ದರು. ಮಳೆಗಾಲ ಮುಗಿದ ನಂತರ, ಭೂಮಿಯ ತೇವಾಂಶ ಮತ್ತು ಚಳಿಗಾಲದ ಇಬ್ಬನಿಯಿಂದ ಕೂಡಿದ ಕಪ್ಪು ಎರೆಮಣ್ಣಿನಲ್ಲಿ ಮೆಣಸಿನಕಾಯಿ, ಹತ್ತಿ ಬೇಳೆಯುತಿದ್ದರು. ಈ ಪದ್ಧತಿಯನ್ನು ಈಗಲೂ ನಾವು ಉತ್ತರ ಕರ್ನಾಟಕದಲ್ಲಿ ಕಾಣಬಹುದು.

ಮಳೆಗಾಲದಲ್ಲಿ ಹರಿದು ಬರುತಿದ್ದ ನೀರನ್ನು ಕಟ್ಟೆಗಳಲ್ಲಿ ಸಂಗ್ರಹಿಸಿ, ಕಟ್ಟೆಯ ಕೆಳಭಾಗದ ಅಚ್ಚು ಕಟ್ಟು ಪ್ರದೇಶದಲ್ಲಿ ದೀರ್ಘಾವಧಿ ಬೆಳೆ ತೆಗೆಯುವುದರ ಜೊತೆಗೆ ತಮ್ಮ ಜಾನುವಾರುಗಳಿಗೂ ಇದೇ ನೀರನ್ನು ಬಳಕೆ ಮಾಡುತಿದ್ದರು. ಇದು ಜಗತ್ತಿನೆಲ್ಲೆಡೆ, ನಮ್ಮ ಪೂರ್ವಿಕರು ಅಳವಡಿಸಿಕೊಂಡಿದ್ದ ಒಂದು ದೇಶೀಯ ಜ್ಞಾನಶಿಸ್ತು.

ಆಧುನಿಕ ತಂತ್ರಜ್ಞಾನದ ನೀರಾವರಿಯಲ್ಲಿ ಎರಡು ವಿಧಾನಗಳಿವೆ. ಒಂದು ಏತ ನೀರಾವರಿ ಪದ್ಧತಿ, ಇನ್ನೊಂದು ಕಾಲುವೆಗಳ ಮೂಲಕ ಭೂಮಿಗೆ ನೀರುಣಿಸುವ ಪದ್ಧತಿ. ಏತ ನೀರಾವರಿಯಲ್ಲಿ ಬಾವಿ, ಕಟ್ಟೆ ಅಥವಾ ಕೆರೆಗಳಿಂದ ನೀರನ್ನು ಮೇಲಕ್ಕೆ ಎತ್ತಿ ಭೂಮಿಗೆ ಹರಿಸುವ ಕ್ರಮವಿದ್ದರೆ, ಜಲಾಶಯಗಳಿಂದ ನಾಲುವೆ ಮೂಲಕ ನೀರುಣಿಸುವ ಕ್ರಮ ಈಗ ಜನಪ್ರಿಯ ಪದ್ಧತಿಯಾಗಿದೆ.

ಆಫ್ರಿಕಾ ಖಂಡದ ಅನೇಕ  ಹಿಂದುಳಿದ ರಾಷ್ಟಗಳಲ್ಲಿ ಜಲಾಶಯಗಳ ಹಂಗಿಲ್ಲದೆ, ಮಳೆ ನೀರನ್ನು ಶೇಖರಿಸಿಟ್ಟುಕೊಂಡು ಅಲ್ಲಿ ರೈತರು ಬೇಸಾಯ ಮಾಡುವುದನ್ನು ವಿಶ್ವ ಕೃಷಿ ಮತ್ತು ಆಹಾರ ಸಂಘಟನೆ ಗುರುತಿಸಿದೆ. 1987 ರವರೆಗೆ ಅಲ್ಲಿ ರೈತರು ಕೃಷಿ ಬೂಮಿಯ ಶೇ.37ರಷ್ಟು ಅಂದರೆ, 50 ಲಕ್ಷ ಹೆಕ್ಟೇರ್ ಭೂಮಿಯನ್ನು ದೇಶಿ ತಂತ್ರಜ್ಞಾನದ ಬೇಸಾಯಕ್ಕೆ ಅಳವಡಿಸಿದ್ದರು.

ಇಂತಹದ್ದೇ ಮಾದರಿಯ ಕೃಷಿ ಪದ್ಧತಿ ಬಾರತ, ಈಜಿಪ್ಟ್, ಇಂಡೊನೇಷಿಯ ಮತ್ತು ಅಮೇರಿಕಾ ದೇಶಗಳಲ್ಲಿ ಜಾರಿಯಲ್ಲಿತ್ತು. ಅಮೇರಿಕಾದ ಮೂಲನಿವಾಸಿಗಳು ಮಳೆನೀರನ್ನು ಬಳಸಿ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ, ಮೆಕ್ಕೆಜೋಳ ಬೆಳೆಯುತಿದ್ದದನ್ನು ವಿಜ್ಙಾನಿಗಳು ಗುರುತಿಸಿದ್ದಾರೆ.

ಭಾರತದಲ್ಲೂ ಸಹ ಅತ್ಯಧಿಕ ಸಣ್ಣ ಹಿಡುವಳಿದಾರರಿದ್ದು ಅವರೂ ಕೂಡ ದೇಶಿ ತಂತ್ರಜ್ಞಾನ ಬಳಸಿ ಬೇಸಾಯ ಮಾಡುತಿದ್ದಾರೆ. ಅವರುಗಳು ಗ್ರಾಮಾಂತರ ಪ್ರದೇಶದಲ್ಲಿ ಕೆರೆ, ಬಾವಿ ಉಪಯೋಗಿಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಭೂಮಿಯ ಪ್ರಮಾಣ, ಜಲಾಶಯ ಮತ್ತು ಕಾಲುವೆಗಳ ಮೂಲಕ ನೀರು ಹರಿಸಿ ಮಾಡುತ್ತಿರುವ ಕೃಷಿ ಭೂಮಿಗಿಂತ ಎರಡು ಪಟ್ಟು ಅಧಿಕವಾಗಿದೆ.

ಕೃಷಿ ಉತ್ಪನ್ನ ಕುರಿತ ಇಂದಿನ ಅಂಕಿ ಅಂಶಗಳು ಜಲಾಶಯದ ಮೂಲಕ ಕೃಷಿ ಮಾಡುತ್ತಿರುವ ಭೂಮಿಯಲ್ಲಿ ಅಧಿಕ ಇಳುವರಿ ನೀಡಿರುವುದನ್ನು ಧೃಡಪಡಿಸಿವೆ ನಿಜ. ಇದಕ್ಕೆ ಕಾರಣವಾದ ಅಂಶಗಳೆಂದರೆ, ಹೈಬ್ರಿಡ್ ಬಿತ್ತನೆ ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಸಮರ್ಪಕ ನೀರು ಪೂರೈಕೆ. ವರ್ಷಕ್ಕೆ ಒಂದೇ ಬೆಳೆ ಬೆಳೆಯುತಿದ್ದ ಭೂಮಿಯಲ್ಲಿ ಈಗ ಅಲ್ಪಾವಧಿ ಕಾಲದ ತಳಿಗಳನ್ನು ಸೃಷ್ಟಿಸಿ ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರ ನೇರ ಪರಿಣಾಮ ಭೂಮಿಯ ಮೇಲಾಗಿದೆ. ಫಲವತ್ತಾದ ಭೂಮಿಯಲ್ಲಿ ಸುಧೀರ್ಘ ಕಾಲ ಅತ್ಯಧಿಕ ಫಸಲನ್ನು ತೆಗೆಯಲು ಸಾದ್ಯವಾಗುವುದಿಲ್ಲ. ಏಕೆಂದರೆ, ನಿರಂತರವಾಗಿ ಬಳಸುವ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕದಿಂದ ಭೂಮಿಯಲ್ಲಿ ಕ್ಷಾರಕ ಅಂಶಗಳೂ ಹೆಚ್ಚಾಗಿ ಚೌಳು ಪ್ರದೇಶವಾಗಿ ಪರಿವರ್ತನೆ ಹೊಂದುತ್ತಿದೆ.

ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ಮಟ್ಟದಲ್ಲಿ ಫಲವತ್ತಾದ ಭೂಮಿ ಕಾಲುವೆ ಹಾಗೂ ನೀರು ಬಸಿದು ಹೋಗುವ ಚರಂಡಿಗಳಿಗೆ ಬಳಕೆಯಾಗುತಿದ್ದು ಇದರಿಂದಾಗಿ ನೀರಾವರಿ ಯೋಜನೆಗಳ ಮೂಲ ಉದ್ದೇಶಗಳಿಗೆ ಧಕ್ಕೆಯುಂಟಾಗಿದೆ. ಕೆಲವೆಡೆ ಯಾವ ಕಾರಣಕ್ಕಾಗಿ ಜಲಾಶಯ ನಿರ್ಮಾಣವಾಯಿತೊ, ಅದರ ಉದ್ದೇಶಕ್ಕೆ ಅನುಗುಣವಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಸಾದ್ಯವಾಗಿಲ್ಲ. ಇನ್ನೂ ಹಲವೆಡೆ ಉದ್ದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಒತ್ತಡಗಳಿಂದಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಿ ನೀರುಣಿಸಲು ಸಾಧ್ಯವಾಗಿಲ್ಲ. ಜಗತ್ತಿನ ಹಲವಾರು ಅಣೆಕಟ್ಟುಗಳ ನಿರ್ಮಾಣದಿಂದ, ನೀರಾವರಿ ಕೃಷಿಗೆ ಒಳಪಟ್ಟ ಭೂಮಿಗಿಂತ ಎರಡು ಪಟ್ಟು ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾದ ಉದಾಹರಣೆಗಳಿವೆ.

ನೈಜೀರಿಯಾ ಸರ್ಕಾರ ತಾನು ನಿರ್ಮಿಸಿದ ಬಾಕಲೋರಿ ಅಣೆಕಟ್ಟಿನಿಂದ 44 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ಹೊಂದಿತ್ತು. ಜಲಾಶಯ ನಿರ್ಮಾಣದ ನಂತರ 12 ಸಾವಿರ ಹೆಕ್ಟೇರ್ ಪ್ರದೇಶ ಹಿನ್ನೀರಿನಲ್ಲಿ ಮುಳುಗಿದರೆ, ನದಿಯ ಕೆಳಗಿನ ಪಾತ್ರದ 11 ಸಾವಿರ ಹೆಕ್ಟೇರ್ ಪ್ರದೇಶ ನೀರಿಲ್ಲದೆ ಬಂಜರು ಭೂಮಿಯಾಯಿತು. ಇದೇ ನೈಜೀರಿಯಾದ ಉತ್ತರ ಭಾಗದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ನಿರ್ಮಿಸಿದ ಡಾಡಿನ್ಕೋವಾ ಅಣೆಕಟ್ಟಿನಿಂದಾಗಿ 35 ಸಾವಿರ ಹೆಕ್ಟೇರ್ ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಯಿತು.

ವಿಶ್ವಬ್ಯಾಂಕ್‌ನ ಸಮೀಕ್ಷೆಯ ಪ್ರಕಾರ ಭಾರತದಲ್ಲೂ ಕೂಡ ಶೇ.5ರಿಂದ ಶೇ.13ರಷ್ಟು ಪ್ರಮಾಣದ ಫಲವತ್ತಾದ ಭೂಮಿ ಕಾಲುವೆಗಳ ನಿರ್ಮಾಣಕ್ಕಾಗಿ ಬಳಕೆಯಾಗಿದೆ. ಸೋಜಿಗದ ಸಂಗತಿಯೆಂದರೆ ಭಾರತದಲ್ಲಿ ಜಲಾಶಯಗಳ ಮೂಲಕ ನೀರಾವರಿಗೆ ಒಳಪಟ್ಟ ಪ್ರದೇಶದ ಬಗ್ಗೆ ನಿಖರವಾದ ಅಂಕಿ ಅಂಶಗಳೇ ಇಲ್ಲ. ಕೆಲವೆಡೆ ಜಲಾಶಯದಲ್ಲಿ ದೊರೆಯುವ ನೀರಿನ ಪ್ರಮಾಣಕ್ಕಿಂತ ಹೆಚ್ಚಾಗಿ ಒಣಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಪ್ರಯತ್ನಗಳು ನಡೆದು ವಿಫಲವಾಗಿರುವುದು ಕಂಡುಬಂದಿದೆ.

ನರ್ಮದಾ ನದಿಗೆ ನಿರ್ಮಿಸಲಾದ ಬಾಗ್ರಿ ಅಣೆಕಟ್ಟಿನಿಂದ 81 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುವುದೆಂದು ಸರ್ಕಾರ ಪ್ರಕಟಿಸಿತ್ತು. ಈ ಅಣೆಕಟ್ಟಿನಿಂದಾಗಿ 4 ಲಕ್ಷದ 40 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನೀರಿನಲ್ಲಿ ಮುಳುಗಡೆಯಾಯಿತು. 1986ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ನೀರಾವರಿಗೆ ಒಳಪಟ್ಟ ಪ್ರದೇಶ ಕೇವಲ 12 ಸಾವಿರ ಹೆಕ್ಟೇರ್ ಮಾತ್ರ.

ಈಜಿಪ್ಟ್ ದೇಶದ ನೈಲ್ ನದಿಗೆ ನಿರ್ಮಿಸಲಾದ ಅಸ್ವಾನ್ ಅಣೆಕಟ್ಟಿನ ಮೂಲ ಗುರಿ 6 ಲಕ್ಷದ 80 ಸಾವಿರ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಿ ಹತ್ತಿ, ಕಬ್ಬು, ಗೋಧಿ ಬೆಳೆಯುವ ಯೋಜನೆಯಾಗಿ ರೂಪಿಸಲಾಗಿತ್ತು. ಈ ಜಲಾಶಯದಿಂದ ನೀರುಣಿಸಲು ಸಾಧ್ಯವಾಗಿದ್ದು ಕೇವಲ 2 ಲಕ್ಷದ 60 ಸಾವಿರ ಹೆಕ್ಟೇರ್ ಭೂಮಿಗೆ ಮಾತ್ರ. ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿರುವ ಅಣೆಕಟ್ಟುಗಳ ನಿರ್ಮಾಣಣದ ವೆಚ್ಚವನ್ನು ಮರೆಮಾಚಲು ಹಲವಾರು ಸರಕಾರಗಳು ಸುಳ್ಳು ಅಂಕಿ ಅಂಶಗಳನ್ನು ಪ್ರಕಟಿಸುತ್ತಾ ಜನಸಾಮಾನ್ಯರನ್ನು ವಂಚಿಸುವುದು ವಾಡಿಕೆಯಾಗಿದೆ.

ಜಲಾಶಯದಲ್ಲಿ ಸಂಗ್ರಹವಾದ ನೀರಿನಿಂದ ಕೃಷಿ ಚಟುವಟಿಕೆಗೆ ಪರೋಕ್ಷವಾಗಿ ಧಕ್ಕೆಯಾಗುತ್ತಿರುವುದನ್ನು ಕೃಷಿ ವಿಜ್ಞಾನಿಗಳು ಇತ್ತೀಚೆಗಿನ ಅಧ್ಯಯನದಿಂದ ಧೃಡಪಡಿಸಿದ್ದಾರೆ. ನೀರಿನಲ್ಲಿರುವ ಲವಣ ಮತ್ತು ಕ್ಷಾರಕ ಅಂಶಗಳು ಭೂಮಿಯ ಫಲವತ್ತತೆಯನ್ನು ತಿಂದು ಹಾಕುತ್ತಿವೆ ಎಂದಿದ್ದಾರೆ. ಸೂರ್ಯನ ತಾಪದಿಂದ ಜಲಾಶಯದಲ್ಲಿನ ನೀರು ಆವಿಯಾಗುವುದರ ಜೊತೆಗೆ ನೀರಿನಲ್ಲಿ ಹೆಚ್ಚಿನ ಲವಣಾಂಶಗಳು ಉತ್ಪಾದನೆಯಾಗುತ್ತಿವೆ ಎಂದು ವಿಜ್ಙಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಆಸ್ಟ್ರೇಲಿಯಾದ ನ್ಯಾಷನಲ್ ಯೂನಿವರ್ಸಿಟಿಯ ಸೆಂಟರ್ ಫಾರ್ ರೀಸೋರ್ಸ್ ಅಂಡ್ ಎನ್ವಿರಾನ್ಮೆಂಟ್ ಸ್ಟಡೀಸ್ ಅಧ್ಯಯನ ಕೇಂದ್ರ ನಡೆಸಿರುವ ಅಧ್ಯಯನದಲ್ಲಿ ಜಗತ್ತಿನ 4 ಕೋಟಿ 54 ಲಕ್ಷ ಹೆಕ್ಟೇರ್ ಪ್ರದೇಶ ಲವಣಾಂಶಗಳಿಂದ ಕೂಡಿದ್ದು, ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ ಎಂದಿದೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ 20ರಿಂದ 30 ಲಕ್ಷ ಹೆಕ್ಟೇರ್ ಪ್ರದೇಶ ಕ್ಷಾರಕ ಅಂಶಗಳಿಂದಾಗಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದುತ್ತಿದೆ ಎಂದು ವಿಶ್ವಬ್ಯಾಂಕ್ ತಜ್ಞರ ತಂಡ ಕೂಡ ಅಭಿಪ್ರಾಯ ಪಟ್ಟಿದೆ.

(ಮುಂದುವರಿಯುವುದು)

Leave a Reply

Your email address will not be published. Required fields are marked *