ಸಾಕ್ರೆಟೀಸನಿಗೇ ಸಚ್ಚಾರಿತ್ರ್ಯ ಗೊತ್ತಿಲ್ಲವೆಂದಮೇಲೆ ನಮಗಿನ್ಯಾತಕ್ಕೆ ಅದು!

-ಬಿ. ಶ್ರೀಪಾದ್ ಭಟ್

“The world is a dangerous place not because of those who do evil, but because of those who look on and do nothing.” -Albert Einstein.

“ಕೆಟ್ಟದ್ದನ್ನು, ಕೆಟ್ಟವರನ್ನು ಹುಡುಕಲು ಹೊರಟ ನನಗೆ ಕೆಟ್ಟದ್ದು, ಕೆಟ್ಟವರಾರೂ ಸಿಗಲಿಲ್ಲ, ನನ್ನ ಮನಸ್ಸನ್ನೇ ಬಿಚ್ಚಿಕೊಂಡಾಗ ನನಗಿಂತಾ ಕೆಟ್ಟವರು ಯಾರೂ ಇರಲಿಲ್ಲ.” -ಸಂತ ಕಬೀರ್.

ಮೆನೊ: ಪ್ರಿಯ ಸಾಕ್ರೆಟೀಸ್, ಸಚ್ಚಾರಿತ್ರ್ಯವನ್ನು ಬೋಧಿಸಲು ಸಾಧ್ಯವೆ? ಅಥವ ಬೋಧನೆಯ ಮೂಲಕವಲ್ಲದೆ ಆಚರಣೆಯ ಮೂಲಕ ಅದನ್ನು ಸಾಧಿಸಬಹುದೇ? ಇಲ್ಲವೆ ಮನುಷ್ಯ ಇವೆರಡರಿಂದಲೂ ಅಲ್ಲದೆ ನಿಸರ್ಗದಿಂದಲೇ ಅದನ್ನು ಪಡೆಯಬೇಕೆ ಎಂಬುದನ್ನು ನನಗೆ ತಿಳಿಸುತ್ತೀಯ?
ಸಾಕ್ರೆಟೀಸ್: ಸಚ್ಚಾರಿತ್ರ್ಯವನ್ನು ಬೋಧಿಸಬಹುದೇ ಇಲ್ಲವೆ ಎಂದು ನಾನು ಬಲ್ಲೆ ಎಂಬುದು ನಿನಗರಿವಾದರೆ ನೀನು ಖುಷಿಪಡಬಹುದು…. ಆದರೆ ಸಚ್ಚಾರಿತ್ರ್ಯವನ್ನು ಬೋಧಿಸಬಹುದೇ ಇಲ್ಲವೆ ಎಂಬುದು ನನಗೆ ಈವರೆಗೆ ತಿಳಿಯದು, ಮಾತ್ರವಲ್ಲ ಸಚ್ಚಾರಿತ್ರ್ಯವೆಂದರೇನು ಎಂಬುದೇ ಅರಿಯದು.
-ಕೇಶವ ಮಳಗಿ ಸಂಪಾದಿತ “ಸಂಕಥನ” ಪುಸ್ತಕದಿಂದ.

“ಆ ಓಲಗ ಯಾರ ಸಾವನ್ನು, ನೋವನ್ನು, ಅನ್ಯಾಯವನ್ನು, ಯಾವ ಮಾಯವಾದ ಕನಸು, ಕ್ರಿಯಾಶೀಲತೆಯನ್ನು, ಯಾವ ಭ್ರಷ್ಟತೆ, ಹುಂಬುತನವನ್ನು, ಯಾವ ದ್ವೀಪವನ್ನು, ಸ್ವಾರ್ಥದ ಪರಿಣಾಮವನ್ನು ಸೂಚಿಸುತ್ತದೆ ? ಕೋಟ್ಯಾಂತರ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬಂದ ರಾಜಕಾರಣಿ ತನ್ನ ಗೆಲುವಿನ ಬಗ್ಗೆ ಹೆಮ್ಮೆ ಪಡುತ್ತಾನೆ. ಆತ ತನ್ನ ಹಣದಿಂದ ಬಿತ್ತಿದ ವಿಷಬೀಜ ಅವನಿಗೆ ಕಾಣಿಸುವುದೇ ಇಲ್ಲ. ಆದರೆ ಆತ ತನ್ನ ಗೆಲುವನ್ನು ಸೋಲು ಎಂದು ತಿಳಿಯುವ ಕಾಲ ದೂರ ಇರುವುದಿಲ್ಲ. ಆತನ ವಿಷಬೀಜದಿಂದ ಬೆಳೆದ ಕಪ್ಪು ವ್ಯಕ್ತಿಗಳು, ಕರಾಳ ಕೀಟಗಳು ಅತನನ್ನು ಬೆನ್ನಟ್ಟತೊಡಗುತ್ತವೆ, ವಿಚಿತ್ರ ಸದ್ದುಗಳನ್ನು ಮಾಡತೊಡಗುತ್ತವೆ, ತನ್ನ ಸುತ್ತ ಅನ್ಯಾಯವನ್ನು ಬೆಳೆಸತೊಡಗುತ್ತವೆ.”
– ಪಿ.ಲಂಕೇಶ್ ( 1985ರಲ್ಲಿ ಬರೆದ ಒಂದು ಅದ್ಭುತ ಟೀಕೆ ಟಿಪ್ಪಣಿ)

ಈ ಯಡಿಯೂರಪ್ಪ ಹಾಗೂ ಸಂಘಪರಿವಾರದವರು ನಿಜಕ್ಕೂ ಸಾಕ್ರೆಟೀಸನನ್ನು ಖುಣಾತ್ಮಕವಾಗಿ ಅರ್ಥಮಾಡಿಕೊಂಡಂತಿದೆ. ಅಲ್ಲವೇ ಮತ್ತೆ !! ಸಾಕ್ರೆಟೀಸನಿಗೇ ಸಚ್ಚಾರಿತ್ರ್ಯ ಗೊತ್ತಿಲ್ಲವೆಂದಮೇಲೆ ನಮಗಿನ್ಯಾತಕ್ಕೆ ಅದು!!! ಎಂದು ತಲೆ ಹಾರಿಸುತ್ತಾ ಈ ರಾಜ್ಯದ ರಾಜಕೀಯವನ್ನು, ಸಾಮಾಜಿಕತೆಯನ್ನು ನೈತಿಕವಾಗಿ ಸಂಪೂರ್ಣವಾಗಿ ನೆಲಕಚ್ಚಿಸಿದ್ದರೂ ಏನೂ ಆಗಿಲ್ಲವೆಂಬಂತೆ, ಮುಖದ ಮೇಲೆ ಉಗುಳು ಹನಿಗಳು ಬಿದ್ದರೂ ಅದು ಮಳೆ ಹನಿಗಳೆಂದು, ಹಾಗೆಯೇ ಜನರನ್ನು ನಂಬಿಸುತ್ತಾ, ಇನ್ನು ನಮ್ಮ ಬಹುಪಾಲು ಮಾಧ್ಯಮಗಳು ಕಬೀರನಂತೆ ಹುಡುಕಲೂ, ಚಿಂತಿಸಲೂ ಹೊರಡದೆ ಸಮಾಜದಲ್ಲಿನ ಕೆಟ್ಟದನ್ನು ಕೇವಲ ರೋಚಕತೆಗಾಗಿ ಮುಖಪುಟದಲ್ಲಿ ಅಚ್ಚುಹಾಕಿ ತಮ್ಮ ಮನಸ್ಸುಗಳನ್ನು ಮಾತ್ರ (ಲಂಕೇಶ್ ರವರು ಸದಾಕಾಲ ತಮ್ಮೊಳಗೆ ಜೀವಂತವಾಗಿಟ್ಟುಕೊಂಡಿದ್ದ ಆತ್ಮದ ಸೊಲ್ಲನ್ನು) ಬಿಚ್ಚಲು ನಿರಾಕರಿಸಿ ತಮ್ಮನ್ನು ತಾವು “moral police” ಎಂಬಂತೆ ಭ್ರಮಿಸುತ್ತಾ ಮಿಂಚುತ್ತಿದ್ದಾರೆ.

ಇನ್ನು ಪ್ರಜ್ಞಾವಂತರಾದ ನಾವೆಲ್ಲ ವ್ಯವಸ್ಥೆಯಲ್ಲಿನ ಕೊಳಕುಗಳನ್ನು, ಮೌಡ್ಯವನ್ನು, ರಾಜಕೀಯ ಅಧಃಪತನವನ್ನೂ ನೋಡುತ್ತ ಅದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿಭಟನಾತ್ಮಕವಾಗಿ ಯಾವುದೇ ಕ್ರಿಯಾತ್ಮಕ, ವೈಚಾರಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೆ ಈ ದುರಂತದ ಸರಣಿಗಳಿಗೆ ನಮ್ಮ ಪಾಲನ್ನೂ ಸೇರಿಸುತ್ತಿದ್ದೇವೆ. ಆದರೆ ಸಂಘಪರಿವಾರದ “ಅವರಿಗೆ” ಸರಿಯಾಗಿ ಪಾಠಕಲಿಸುತ್ತೇವೆ ಎನ್ನುವ ಒಂದಂಶದ ಕಾರ್ಯಕ್ರಮದ ಸುಳಿಯಿಂದ ಆತ್ಮಹೀನರಾದ ನಮ್ಮ ಬಹುಪಾಲು ವಿದ್ಯಾವಂತರು ಇನ್ನೂ ಹೊರಬಂದಿಲ್ಲ. ಈ ವಿದ್ಯಾವಂತರು ಭೈರಪ್ಪನವರಂತಹ, ವೈದಿಕಶಾಹಿ, ಜೀವವಿರೋಧಿ ಲೇಖಕರನ್ನು ಇಂದಿಗೂ ಆದರ್ಶವನ್ನಾಗಿ ಮಾಡಿಕೊಂಡಿರುವುದು, ಸರ್ಕಾರಗಳ ಸಾಮಾಜಿಕ ನಾಶದ ದೈತ್ಯ ಯೋಜನೆಗಳ ಬಗ್ಗೆ ವಿವೇಚನೆ ಇಲ್ಲದ ಕುರುಡು ಪ್ರೀತಿ, ಇತ್ತೀಚೆಗೆ ರಾಜ್ಯದ ಮಾನ ಕಳೆದ ಮಡೆಸ್ನಾನದಂತಹ ಅಮಾನವೀಯ ಅಚರಣೆಯ ಬಗ್ಗೆ ಈ ಜನ ತೋರಿಸಿದ ದಿವ್ಯ ನಿರ್ಲಕ್ಷ್ಯ, ಯಾವುದೇ ರೀತಿಯ ಪ್ರಗತಿಪರ ಚಳುವಳಿಗಳ ಬಗೆಗಿನ ಇವರ ಮಹಾನ್ ಅಸ್ಪೃಶ್ಯತೆ. ಸದ್ಯಕ್ಕೆ ಈ ವಿದ್ಯಾವಂತರು ಬಹಳ ಕಾತುರದಿಂದ ಕಾಯುತ್ತಿರುವುದು ಈ ವರ್ಷದ ಬಜೆಟ್ ಗಾಗಿ. ಅಲ್ಲಿ ಎಷ್ಟು ವರಮಾನ ತೆರಿಗೆ ವಿನಾಯ್ತಿ ಸಿಗಬಹುದು, ತಮ್ಮ ಕೊಳ್ಳುಬಾಕುತನಕ್ಕೆ ಪೂರಕವಾಗಿ ಇನ್ನೇನೇನು ಹೊಸ ಘೋಷಣೆಗಳು ಸಿಗಬಹುದು!! ಆದರೆ ತಮ್ಮ ಈ ಕೊಳ್ಳುಬಾಕುತನವನ್ನು, ವಾಕರಿಕೆಯ ಶ್ರೀಮಂತಿಕೆಯನ್ನು ಸಾಧ್ಯವಾಗಿಸುವ ರಾಜಕೀಯ, ಚುನಾವಣೆ ಮಾತ್ರ ಇವರಿಗೆ ಅಲರ್ಜಿ ಹಾಗೂ ಹೇಸಿಗೆ.

ಇದೇ ವಿದ್ಯಾವಂತರಿಂದ ಹಣ ಹಾಗೂ ಹೆಂಡಕ್ಕಾಗಿ ತಮ್ಮನ್ನು ಮಾರಿಕೊಳ್ಳುತ್ತಾರೆ ಎಂದು ಸದಾ ಜರಿತಕ್ಕೆ, ಮೂದಲಿಕೆಗೆ ಬಲಿಯಾಗುವ ನಮ್ಮ ರಾಜ್ಯದ ಬಡ, ಹಿಂದುಳಿದ, ಅನಕ್ಷರಸ್ತ ಜನತೆ ಈ ವಿದ್ಯಾವಂತರಿಗೆ ಈ ಎಲ್ಲ ಅನುಕೂಲಗಳನ್ನು ತಂದುಕೊಡುವ ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಚುನಾವಣೆಗಳಲ್ಲಿ ಅತ್ಯಂತ ಮುಗ್ಧತೆಯಿಂದ ಬಾಗವಹಿಸಿ, ತಾವು ಮಾತ್ರ ಅನುದಿನ ಸಂಕಷ್ಟಗಳಲ್ಲಿ ಮುಳುಗಿ ಕಣ್ಮರೆಯಾಗುತ್ತಾರೆ. ಈ ವಿದ್ಯಾವಂತರಾಗಲೇ ಆ ಅಮಾಯಕ, ಸರಳ, ಮುಗ್ಧ ಅಣ್ಣಾ ಹಜಾರೆಯವರನ್ನು ಎತ್ತಿ ಕಸದ ಬುಟ್ಟಿಗೆ ಹಾಕಿಯಾಯ್ತು !!!

ದೃಶ್ಯ 1 :
ಜನವರಿ 7ರಂದು ಬೆಂಗಳೂರಿನಲ್ಲಿ ಜರುಗಿದ ವೈದಿಕವರ್ಗದ ಅತ್ಯಂತ ಮೂಢ ಆಚರಣೆ ಮಡೆಸ್ನಾನದ ವಿರುದ್ಧದ ಬ್ರಾಹ್ಮಣೇತರ ಮಠಾಧೀಶರ ಸಮಾವೇಶಕ್ಕೆ ನಾನೂ ಭಾಗವಹಿಸಿದ್ದೆ. ನಿಜಕ್ಕೂ ಆಲ್ಲಿನ ಬಹುಪಾಲು ಸ್ವಾಮಿಜೀಗಳಲ್ಲಿ, ಅವರ ಚಿಂತನೆಗಳಲ್ಲಿ ನನಗೆ ಮೊಟ್ಟಮೊದಲ ಬಾರಿಗೆ ಜೀವಂತಿಕೆ ಕಾಣಿಸುತಿತ್ತು. ಈ ಪುರೋಹಿತಶಾಹಿಗಳ ಕುಟಿಲತೆಯ ವಿರುದ್ಧ ಸಾಣೇಹಳ್ಳಿ ಸ್ವಾಮಿಗಳ ಆಕ್ರೋಶ ನನ್ನಲ್ಲಿ ಮೊಟ್ಟಮೊದಬಾರಿಗೆ ಇವರ ಬಗ್ಗೆ ಅಭಿಮಾನ ಮೂಡಿಸಿದ್ದು ನಿಜ. ಹೌದು 80ರ ದಶಕದಲ್ಲಿ ಕಾಲೇಜಿನಲ್ಲಿದ್ದ ನಾವೆಲ್ಲ ವೈಚಾರಿಕತೆಯ, ಎಡಪಂಥೀಯ ಚಿಂತನೆಗಳ ಅತ್ಯುತ್ಸಾಹದ ಹಿನ್ನೆಲೆಯಲ್ಲಿ ನಮ್ಮ ಜನರಲ್ಲಿನ ಜಾತೀಯತೆಯನ್ನು, ಮೌಢ್ಯತೆಯನ್ನು ಬೇರು ಸಮೇತ ಕಿತ್ತು ಹಾಕುವುದು ಹೇಗೆ, ಅದಕ್ಕಾಗಿ ಯಾವ ರೀತಿ ಹೋರಾಟ ನಡೆಸಬೇಕು ಎಂದು ಆಗ ಪ್ರಗತಿರಂಗದ ಸಭೆಯೊಂದರಲ್ಲಿ ಭಾಗವಹಿಸಲು ಬಂದಿದ್ದ ತೇಜಸ್ವಿ ಅವರನ್ನು ಅತ್ಯಂತ ಮುಗ್ಧತೆಯಿಂದ ಕೇಳಿದಾಗ ಅವರು “ರೀ ಅವಕ್ಕೆಲ್ಲ ನಾವು ನೀವೆಲ್ಲ ಏನೂ ಮಾಡಲಿಕ್ಕೆ ಆಗಲ್ಲ ಕಣ್ರೀ ಸುಮ್ಮನೆ ನಿಮ್ಮ ವೇಳೆ ವ್ಯರ್ಥ ಮಾಡಬೇಡ್ರಿ, ಮಠಾಧೀಶರುಗಳು ಮಾತ್ರ ಇವನ್ನೆಲ್ಲ ಕಿತ್ತೊಗೆಯುವ ಸಾಧ್ಯತೆಯುಳ್ಳವರು,” ಎಂದು ಹೇಳಿ ನಮ್ಮಲ್ಲಿ ದಂಗು ಬಡಿಸಿದ್ದರು.

ನಮ್ಮಲ್ಲಿನ ಬಂಡಾಯಕ್ಕೆ ಇವರ ಸಮಾಜವಾದಿ ವ್ಯಕ್ತಿತ್ವವೇ ಕಾರಣ ಎಂದುಕೊಂಡಿದ್ದ ನಮಗೆಲ್ಲ ಆಗ ಇವರು ಈ ರೀತಿ ಹೇಳಿದ್ದು, ನಾವೆಲ್ಲ ಹತಾಶೆಗೊಂಡದ್ದು, ಇದಕ್ಕೆ ಪೂರಕವೆನ್ನುವಂತೆ ಆಗ ಪ್ರಗತಿರಂಗದ ಸಭೆಗಳಲ್ಲಿ ಸೇರುತ್ತಿದ್ದ ಕೇವಲ 30 ರಿಂದ 50 ರಷ್ಟು ಜನರು ಇವೆಲ್ಲ ಸೇರಿ ನಮ್ಮಲ್ಲಿ ಇನ್ನಿಲ್ಲದ ನಿರಾಶೆಯನ್ನು, ರೇಜಿಗೆಯನ್ನು ಮೂಡಿಸುತ್ತಿದ್ದವು. ನಂತರ ವರ್ಷಗಳು ಕಳೆದ ಹಾಗೆ ಬಂಡಾಯದ ತೀವ್ರತೆ ನಮ್ಮಿಂದ ಇಳಿಯುತ್ತ ಹೋದ ಹಾಗೆ ತೇಜಸ್ವಿಯವರ ಅನುಭವದ ಮಾತುಗಳ ಜೀವಾಮೃತ ನಮಗೆ ಮನದಟ್ಟಾಗತೊಡಗಿತು. ಇಂದಿನ ಈ ಬ್ರಾಹ್ಮಣೇತರ ಸ್ವಾಮಿಗಳ ನಡೆಗಳು 25 ವರ್ಷಗಳ ಹಿಂದಿನ ತೇಜಸ್ವಿಯವರ ಚಿಂತನೆಯನ್ನು ಸಾಕಾರಗೊಳಿಸುವಂತಿತ್ತು. ನಾವೆಲ್ಲ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಹಾಗೂ ಈ ಸ್ವಾಮಿಗಳ ಈ ವೈಚಾರಿಕ ಧೋರಣೆ ಎಲ್ಲಿಯವರೆಗೆ ?

ತಮ್ಮ ಭ್ರಷ್ಟ ಅಧಿಕಾರ ಅವಧಿಯಲ್ಲಿ ರಾಜ್ಯದ ಮಠಗಳಿಗೆ ಜನತೆಯ ರೊಕ್ಕವನ್ನು ಬೇಕಾಬಿಟ್ಟಿಯಾಗಿ ಹಂಚಿ ಈ ಮಠದ ಸ್ವಾಮಿಗಳೆಲ್ಲ ನನ್ನ ಜೇಬಿನೊಳಗಿದ್ದಾರೆ ಹೀಗಾಗಿ ಈ ರಾಜ್ಯ ನನ್ನ ಮುಷ್ಟಿಯೊಳಗೆ ಎನ್ನುವ ದುರಹಂಕಾರದದಿಂದ ಹೆಜ್ಜೆ, ಹೆಜ್ಜೆಗೂ ತಪ್ಪು, ಆನೀತಿ ಹೆಜ್ಜೆಗಳನ್ನಿಡುತ್ತಿರುವ ಯಡಿಯೂರಪ್ಪ, ಈ ಕಾರಣಕ್ಕೆ ಹಾಗೂ ಕೇವಲ ಜಾತೀಯತೆಯಿಂದ ಯಡಿಯೂರಪ್ಪನವರನ್ನು ಬೆಂಬಲಿಸಿದ ಬಹುಪಾಲು ಮಠಗಳು ಹಾಗೂ ಅವುಗಳ ಆರ್ಥಿಕ ಮತ್ತು ಬೌದ್ಧಿಕ ಭ್ರಷ್ಟತೆ, ಮಾತು ಮಾತಿಗೆಲ್ಲ ಜನ ನನ್ನ ಹಿಂದೆ ಇದ್ದಾರೆ ಎಂದು ಯಡಿಯೂರಪ್ಪ ಹೂಂಕರಿಸಿದಾಗಲೆಲ್ಲ ಆ ಜನ ಮತ್ತ್ಯಾರು ಅಲ್ಲ ಲಿಂಗಾಯತರು ಎನ್ನುವ ಅಪಾದನೆಗೆ ಇಂಬು ಕೊಡುವಂತೆ ಯಡಿಯೂರಪ್ಪನವರಲ್ಲಿ ಇನ್ನಿಲ್ಲದ ಹುಂಬ ಆತ್ಮವಿಶ್ವಾಸಕ್ಕೆ ಕಾರಣವಾಗಿರುವ ಲಿಂಗಾಯಿತರು, ಇವರು ತಮ್ಮ ಈ ಅನಾಹುತಕಾರಿ, ಜಾತೀವಾದಿ ಧೋರಣೆ ಎಂತಹ ಅಸಮರ್ಥ, ಸಂಪೂರ್ಣ ಹಾದಿ ತಪ್ಪಿದ ನಾಯಕನನ್ನು ಸೃಷ್ಟಿಸಿದೆಯಲ್ಲ ಎನ್ನುವ ತೀವ್ರವಾದ ವಿಷಾದದ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾರೆಯೇ? ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆಯೇ? ಇಂತಹ ವಿಷಮಯ ಪರಿಸ್ಥಿಯಲ್ಲಿ ಈ ವಿರಕ್ತ ಮಠಗಳ ಪ್ರಗತಿಪರ ಧೋರಣೆಗಳು ತಮ್ಮ ನಿಷ್ಟ ಅನುಯಾಯಿಗಳಾದ ಅಮಾಯಕ ಲಿಂಗಾಯಿತರಿಗೆ ನಿಜಕ್ಕೂ ಹೊಸ ಚಿಂತನೆಗಳನ್ನು ತುಂಬಿಸುತ್ತವೆಯೇ, ಹಾಗೂ ಇನ್ನು ಮುಂದಾದರೂ ಇವರೆಲ್ಲ ಈ ಯಡಿಯೂರಪ್ಪ ಹಾಗು ಮಠಗಳ ಜಂಟಿ ಭ್ರಷ್ಟಾಚಾರಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆ ? ಇದು ಆರಂಭ ಮಾತ್ರ. ನಾವು ಸಿನಿಕರಾಗುವ ಅಗತ್ಯವಿಲ್ಲವೆನಿಸುತ್ತಿತ್ತು ಈ ಸಮಾವೇಶದಿಂದ ಮರಳುವಾಗ.

ದೃಶ್ಯ 2 :
ಬಿಜಾಪುರದ ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ವಿಷಯವಾಗಿ ಆ ಊರು ಅತ್ಯಂತ ಪ್ರಕ್ಷುಬ್ದವಾಗಿ ಇನ್ನೇನು ಸ್ಫೋಟಿಸಲು ತಯಾರಾಗಿತ್ತು. ನಮ್ಮ ಮಧ್ಯಮವರ್ಗಗಳ ವಿದ್ಯಾವಂತರು ನೋಡಿ ನಾವು ಹೇಳಲಿಲ್ಲವೇ ಎನ್ನುವ ತಮ್ಮ ಎಂದಿನ ಸ್ವಾರ್ಥ ಮುಖಭಾವದಿಂದ ಸೂಡೋ ಸೆಕ್ಯುಲರ್ ಗಳ ಮೇಲೆ ಇನ್ನೇನು ಮುಗಿಬೀಳಬೇಕು ಎನ್ನುವಷ್ಟರಲ್ಲಿ, ಈ ಘಟನೆಯನ್ನು ಅತ್ಯಂತ ರೋಚಕವಾಗಿ ಮುಖಪುಟದಲ್ಲಿ, ಬ್ರೇಕಿಂಗ್ ನ್ಯೂಸ್ನಲ್ಲಿ ಐದು ನಿಮಿಷಕ್ಕೊಮ್ಮೆ ಬಿತ್ತರಿಸುತ್ತಾ ಮುಂದಿನ ದಿನಗಳಲ್ಲಿ ಅದು ತಂದುಕೊಡುವ ರೋಚಕತೆಯನ್ನು ನೆನೆದು ಸಂಪೂರ್ಣ ಖುಷಿಯಲ್ಲಿದ್ದ ಕೆಲವು ಪತ್ರಿಕಾ ಮಾಧ್ಯಮಗಳು ಹಾಗೂ ಬಹುಪಾಲು ದೃಶ್ಯ ಮಾಧ್ಯಮಗಳು. ಅಷ್ಟರಲ್ಲೇ ಈ ಪ್ರಕರಣ ಅತ್ಯಂತ ವಿಚಿತ್ರ ತಿರುವು ಪಡೆದುಕೊಂಡು ಇದೆಲ್ಲ ಸಂಘಪರಿವಾರದ ಅಂಗ ಸಂಸ್ಥೆಯಾದ “ಶ್ರೀರಾಮ ಸೇನೆಯ” ಕೈವಾಡವೆಂದು ಪೋಲೀಸರ ಪ್ರಥಮ ತನಿಖೆಯಿಂದ ಬಯಲಾಗುತ್ತಲೇ ಈ ಸತ್ಯಸಂಗತಿಯನ್ನು ಸಣ್ಣ ಸುದ್ದಿಯನ್ನಾಗಿ ಎಲ್ಲೋ 4ನೇ ಅಥವಾ 5ನೇ ಪುಟದಲ್ಲಿ ಹಾಕಿದ ನಮ್ಮ ಬಹುಪಾಲು ಮಾಧ್ಯಮಗಳ, ಇಂತಹ ಘೋರ ಪಾತಕ ವಿಷಯವನ್ನು ಎಂದೂ ಮುಖ್ಯ ವೇದಿಕೆಗಳಲ್ಲಿ ಚರ್ಚಿಸದ ದೃಶ್ಯ ಮಾಧ್ಯಮಗಳ ಆತ್ಮವಂಚನೆ, ಬಹುಸಂಖ್ಯಾತ ಹಿಂದೂಗಳ ರಕ್ಷಕರು ಎಂದು ಅಬ್ಬರಿಸುವ ಶ್ರೀರಾಮ ಸೇನೆಯ ಈ ಸಮಾಜಘಾತುಕ, ವೈಷಮ್ಯದ, ದೇಶದ್ರೋಹಿ ಕೃತ್ಯದ ಬಗ್ಗೆ ತುಟಿ ಬಿಚ್ಚದ ನಮ್ಮ ಮಧ್ಯಮವರ್ಗದ ಕ್ಯಾಂಡಲ್ ವೀರರ ಆತ್ಮವಂಚನೆ.

ಇನ್ನು ಪ್ರಮುಖ ವಿರೋಧ ಪಕ್ಷವಾದ, ಸೋ ಕಾಲ್ಡ್ ಸೆಕ್ಯುಲರ್ ಕಾಂಗ್ರೆಸ್ ವತಿಯಿಂದ ಸಣ್ಣ ಪ್ರಮಾಣದ ಗೊಣಗುವಿಕೆಯೂ ಕೂಡ ಇಲ್ಲದ ಒಂದು ಹೆಳವಂಡ ಸ್ಥಿತಿ, ಇದು ಉತ್ತಮ ಪ್ರಜಾಪ್ರಭುತ್ವ ಎಂದರೆ ಒಂದು ಲೊಳಲೊಟ್ಟೆಯೇ ಎನ್ನುವ ನೀತಿಯನ್ನು ಮತ್ತೆ ಮತ್ತೆ ಬಯಲಾಗಿಸುತ್ತಿದೆ. ಇನ್ನು ಇಲ್ಲಿ ಬಿಜೆಪಿ ಆಡಳಿತವಿರುವುದರಿಂದ, ಎಂದಿನಂತೆ ಶಾಸಕಾಂಗ, ಕಾರ್ಯಾಂಗದ ಒಬ್ಬರಿಗೊಬ್ಬರು ಮಿಲಾಕತ್ತಾಗಿರುವುದರಿಂದ ಈ ಶ್ರೀರಾಮ ಸೇನೆಯ ದೇಶದ್ರೋಹದ ಘಾತಕ ಕೃತ್ಯದ ನಿಷ್ಪಕ್ಷಪಾತ ತನಿಖೆ ನ್ಯಾಯದ ತಾರ್ಕಿಕ ಅಂತ್ಯಕ್ಕೆ ಮುಟ್ಟುವ ಸಾಧ್ಯತೆಗಳೂ ತುಂಬಾ ಕಡಿಮೆಯೇ.

ಅಷ್ಟಕ್ಕೂ ಯಾರಿಗೆ ಬೇಕು ಸತ್ಯದ ಅನಾವರಣ !!! ಸದ್ಯಕ್ಕೆ ಏನಿದ್ದರು ರಾಜ್ಯದ ಅಧಿಕಾರ ನನಗೆ ಸಿಕ್ಕ ಹಾಗೂ ನಿರಂತರವಾಗಿ ಸಿಗಬೇಕಾದ ಜಹಗೀರು ಎನ್ನುವ ಮಾನಸಿಕ ಅಸ್ವಸ್ಥತೆಯ ಸಿಂಡ್ರೋಮಿನಿಂದ ನರಳುತ್ತಿರುವ ಯಡಿಯೂರಪ್ಪನವರ ಆತ್ಮಹತ್ಯಾತ್ಮಕ ನಡೆಗಳನ್ನು ಸದಾಕಾಲ ಬಿತ್ತರಿಸುವುದಷ್ಟೇ ನಮ್ಮ ಮಾಧ್ಯಮಗಳ ಸದ್ಯದ ಕಾಯಕವಾಗಿದೆ. ನೀನನಗಿದ್ದರೆ ನಾನಿನಗೆ ಎನ್ನುವ ಅವಕಾಶವಾದಿ ಧೋರಣೆ. ಇಲ್ಲಿ, ಲಂಕೇಶರ ಗುಣಮುಖ ನಾಟಕದ ನಾದಿರ್ ನ ಮಾತುಗಳು “ಹಿಂದೂಸ್ತಾನಕ್ಕೆ ಬಂದ ಮೇಲೆ ಚಿಕ್ಕ ಪ್ರಶ್ನೆಗಳೂ ಇಲ್ಲಿ ಪರ್ವತದಂತೆ, ನದಿಗಳಂತೆ… ಕಡೆಗೆ ಮಂಜಿನಂತೆ ಆಗಿ ಪ್ರಶ್ನೆಯೇ ಇಲ್ಲ ಅನಿಸಿಬಿಡ್ತವೆ. ಸುಳ್ಳು ನಿಜದಂತೆ, ನಿಜ ಸುಳ್ಳಿನಂತೆ ಆಗ್ತದೆ, ಇಲ್ಲಿ ಮಾತನಾಡಿದರೆ ಪ್ರತಿಧ್ವನಿಗಳು ಮಾತ್ರ ಬರುತ್ತದೆ, ಸತ್ಯದ ಹೆಸರಿನಲ್ಲಿ ಸುಳ್ಳು ಕುತಂತ್ರಗಳು ಮಾತ್ರ ಹೊಮ್ಮುತ್ತವೆ.” ಹಾಗೂ ಅಲಾವಿಖಾನ್‌ನ “ಭೂಮಿಯನ್ನು ಮರೆಯುವ ಮನುಷ್ಯ, ಎಷ್ಟು ಮದರಾಸಗಳು, ಎಷ್ಟು ಬೃಹತ್ ಗ್ರಂಥಗಳು, ಎಷ್ಟು ಶೋಧನೆಗಳು, ಎಷ್ಟು ಜನ ಸಂತರು ಬಂದರೂ ಮನುಷ್ಯ ಏಕೆ ಹೀಗೆ ಭೀಕರ ವ್ಯಸನಗಳಲ್ಲಿ, ಅಜ್ಞಾನದಲ್ಲಿ ಸಿಕ್ಕಿಕೊಂಡಿದ್ದಾನೆ,” ಎನ್ನುವ ಮಾರ್ಮಿಕ ಮಾತುಗಳು ಎಲ್ಲಾ ಕಾಲಕ್ಕೂ ಕೈದೀಪಗಳು ಹಾಗೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತವೆ.

ದೃಶ್ಯ 3:
ಎಂದಿನಂತೆ ಸಂಕ್ರಾಂತಿಯ ನಂತರ ತನ್ನ ಪಥ ಬದಲಿಸುವ ಸೂರ್ಯ ಹಾಗೂ ಭೂತಾಯಿಗೆ ಬಲಿ ಬೇಕು. ಇದೇ ವೇಳೆಗೆ ನಮ್ಮ ರಾಜ್ಯಕ್ಕೆ ಶ್ರೀರಾಮುಲು ಅವರ “ಬಡವರ ಹಿಂದುಳಿದವರ ಪಕ್ಷ” ಉದಯವಾಗುತ್ತಲಿದೆ. ಈ ಮರೀಚಿಕೆಗೆ, ಖೆಡ್ಡಾಗೆ ಬಲಿಯಾಗಲು ಅಮಾಯಕ ಹಿಂದುಳಿದ ವರ್ಗಗಳ ಜನತೆ, ರುದ್ರರು, ಉಜ್ಜರು ರಾಜ್ಯದಲ್ಲಿ ತಮಗೆ ಗೊತ್ತಿಲ್ಲದೆಯೇ ತಯಾರಾಗಿರುವುದು ಶ್ರೀರಾಮುಲುರಂತಹ ರಾಜಕಾರಣಿಗಳಲ್ಲಿ ಇನ್ನಿಲ್ಲದ ಉತ್ಸಾಹವನ್ನು ಹುಟ್ಟಿಹಾಕಿದಂತಿದೆ. ಅಲ್ಲದೆ ನಮ್ಮ ಯಡಿಯೂರಪ್ಪನವರೂ ಬದಲಾಗುತ್ತಿದ್ದಾರಂತೆ ಸಂಕ್ರಾಂತಿಯ ನಂತರ. ಇವರನ್ನೆಲ್ಲ ಬದಲಾಯಿಸಿ ಹೊಸ ಗಾಳಿ ಬೀಸುವಂತೆ ಮಾಡುವ ಗುರುತರ ಹೊಣೆಗಾರಿಕೆಯ ನಾವೆಲ್ಲ ನಿದ್ರಿಸುತ್ತಿದ್ದೇವೆ.

5 thoughts on “ಸಾಕ್ರೆಟೀಸನಿಗೇ ಸಚ್ಚಾರಿತ್ರ್ಯ ಗೊತ್ತಿಲ್ಲವೆಂದಮೇಲೆ ನಮಗಿನ್ಯಾತಕ್ಕೆ ಅದು!

  1. Ananda Prasad

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಇತ್ತೀಚಿಗೆ ಪ್ರತಿಗಾಮಿ ಸಂಘಟನೆಗಳು ಪೋಲೀಸ್ ಠಾಣೆಯ ಮೇಲೆ ಕಲ್ಲೆಸೆದು ಕಾನೂನು ಕೈಗೆತ್ತಿಕೊಂಡಾಗ ಅವರ ಮೇಲೆ ಕಾನೂನು ಕ್ರಮ ಕೈಗೊಂಡ ಪೊಲೀಸರು (ಜಿಲ್ಲಾ ಎಸ್. ಪಿ. ಸಹಿತ) ಎತ್ತಂಗಡಿಯಾದರು. ಸಿಂಧಗಿಯಲ್ಲಿಯೂ ಪೊಲೀಸರು ಪ್ರತಿಗಾಮಿ ಸಂಘಟನೆಗಳ ಮೇಲೆ ಕಾನೂನು ಕ್ರಮ ಕೈಗೊಂಡದ್ದಕ್ಕಾಗಿ ಎತ್ತಂಗಡಿಯಾಗದಿದ್ದರೆ ಸಾಕು. ಇದನ್ನು ನೋಡಿದಾಗ ಪೊಲೀಸರು ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲವಾಗುತ್ತಿದೆ ಎನಿಸುತ್ತದೆ. ಹೀಗಾಗಿ ಸಮಗ್ರ ಪೋಲೀಸ್ ಇಲಾಖೆಯನ್ನು ಸಂಪೂರ್ಣ ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಬೇಕಾದ ಅಗತ್ಯ ಕಂಡುಬರುತ್ತಿದೆ. ಇಲ್ಲದೆ ಹೋದರೆ ಗುಜರಾತಿನಂತೆ ಕರ್ನಾಟಕದಲ್ಲೂ ಪೊಲೀಸರು ಪ್ರತಿಗಾಮಿ ಸಂಘಟನೆಗಳ ಗುಲಾಮನಂತೆ ಕುಣಿಯಬೇಕಾದ ಸನ್ನಿವೇಶ ಬರಬಹುದು. ಇತ್ತೀಚಿಗೆ ರಾಜ್ಯ ಪೋಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದೆ, ಯಾವುದೇ ರಾಜಕಾರಣಿ ಪೋಲೀಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುವ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು ಟಿವಿ ಸಂದರ್ಶನದಲ್ಲಿ. ಹಾಗಾದರೆ ಸುಳ್ಯದಲ್ಲಿ ನಡೆದದ್ದು ಏನು ಎಂಬ ಪ್ರಶ್ನೆ ಮೂಡುತ್ತದೆ. ಪ್ರತಿಗಾಮಿ ಸಂಘಟನೆಗಳು ಹೇಳಿದಂತೆ ಕುಣಿಯದ ಪೊಲೀಸರು ಏಕೆ ಜಿಲ್ಲಾ ಎಸ್. ಪಿ. ಸಹಿತ ಎತ್ತಂಗಡಿಯಾದರು? ಹೀಗಾದರೆ ಪೋಲೀಸರ ನೈತಿಕ ಸ್ಥೆರ್ಯ ಕುಸಿಯದೇ ಇನ್ನೇನಾಗುತ್ತದೆ?

    Reply
  2. ದಿನೇಶ್ ಕುಕ್ಕುಜಡ್ಕ

    ಶಂಕರ್ ಬಿದರಿಯವರ ಕೆಚ್ಚೆದೆಯ ಭಾಷಣದ ಕೆಸೆಟ್ ಇನ್ನು ಮುಂದೆಯೂ ಹೀಗೆಯೇ ಮುಂದುವರಿಯುತ್ತದೆ.ನಿರ್ದಾಕ್ಷಿಣ್ಯವಾಗಿ ಕರ್ತವ್ಯ ಬದ್ಧತೆ ತೋರಿದ ಸಿಬ್ಬಂದಿಯ ಅಮಾನತು ಅಥವಾ ವರ್ಗಾವಣೆ ಆದೇಶ ಈ ಸೂಪರ್ ಕಾಪ್ ಕೈಯಿಂದ ಇನ್ನು ಮುಂದೆಯೂ ಹೊರಬೀಳುತ್ತದೆ! ಇವತ್ತು ಪೊಲೀಸ್ ದಿನಾಚರಣೆಯ ಸಂದರ್ಭ ಸದಾನಂದ ಗೌಡರು ಪೊಲೀಸರನ್ನು ನಿಷ್ಪಕ್ಷಪಾತವಾಗಿ- ಯಾರ ಒತ್ತಡಕ್ಕೂ ಮಣಿಯದೆ ವೃತ್ತಿನಿಷ್ಠೆ ಮೆರೆಯಬೇಕು ಎನ್ನುತ್ತಿರುವಾಗ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.ತೀರಾ ಹದಿನೈದು ದಿನವೂ ಪೂರ್ತಿಯಾಗಿಲ್ಲ;ಪೊಲೀಸರ ಮೇಲೆ ತಾನೇ ನಡೆಸಿದ ಅನ್ಯಾಯವೊಂದರ ಸಣ್ಣದೊಂದು ನೆನಪೂ ಇಲ್ಲದಂತೆ ಗೌಡರು ನಟಿಸಿದ್ದು ಕಂಡಾಗ ನಗಲಲ್ಲದೆ ಇನ್ನೇನು ಮಾಡಲು ಸಾಧ್ಯ?ಆವತ್ತು ಗೌಡರು ಮುಖ್ಯಮಂತ್ರಿಯಾದ ಅನಿರೀಕ್ಷಿತ ಪುಳಕದ ಖುಷಿ ಮತ್ತು ಕೃತಜ್ಝತೆಗಾಗಿ ಯಾರ ಪಾದಕ್ಕೆರಗಿ ವಿನೀತತೆ ತೋರಿದ್ದರೋ, ಮೊನ್ನೆಯ ಘಟನೆಯಲ್ಲಿ ಅವರ ಮನೆಹಾಳು ಆಜ್ಝೆ ಮೀರುವ ನಿಷ್ಠುರ ಆಡಳಿತದ ಕೆಚ್ಚು ಗೌಡರಲ್ಲಿ ಕಾಣಿಸಿಕೊಂಡಿದ್ದರೆ,ಅವರನ್ನು ಹೆತ್ತ ನನ್ನೂರು ಪಡುತ್ತಿದ್ದ ಹೆಮ್ಮೆಗೊಂದು ಅರ್ಥವಿರುತ್ತಿತ್ತು! ಇನ್ನು, ಇಲ್ಲಿ ವೃತ್ತಿನಿಷ್ಠೆ ಮೆರೆದು ಅಮಾನತಿಗೊಳಪಟ್ಟ ಅಸಹಾಯಕ ಪೊಲೀಸರ ಪತ್ನಿಯರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು ಕೇವಲ ತಾಲೂಕು ಮಟ್ಟದ ಸುದ್ದಿಯಾಗಿತ್ತಷ್ಟೇ! ಇಲ್ಲಿ ಪ್ರಭುತ್ವ-ಮಾಧ್ಯಮ-ಬ್ಯುರೋಕ್ರಸಿ- ಈ ಎಲ್ಲದರ ಆಷಾಢಭೂತಿತನವೂ ಪ್ರಜ್ಝಾವಂತರ ಎದೆ ಗುದ್ದುವಂತೆ ಆರ್ಭಟಿಸುತ್ತಿದೆ.ಈ ಅಪ್ರಜಾಸತ್ತಾತ್ಮಕ ದೃಶ್ಯ…ನಮ್ಮೆಲ್ಲರ ಸಾಮಾಜಿಕ ಸಂವೇದನಾರಾಹಿತ್ಯಕ್ಕೆ ಉದಾಹರಣೆಯಾಗಲೋ- ಅಥವಾ ಚರ್ಚೆಗೆ ಅರ್ಹವೆನಿಸುವ ಹಸಿ ರೋಚಕತೆಯನ್ನು ಹೊಂದಿಲ್ಲದ ಕಾರಣಕ್ಕಾಗಿಯೋ ,ಒಟ್ಟಿನಲ್ಲಿ ಯಾವ ಮಟ್ಟದಲ್ಲೂ ಚರ್ಚೆಯಾಗದೆ ಕಾಲದ ಕಸದ ಬುಟ್ಟಿಗೊಂದು ಹೊಸ ಸೇರ್ಪಡೆ ಪಡೆಯಿತಷ್ಟೇ ಎಂಬುದನ್ನು ವಿಷಾದದಿಂದ ಹೇಳಬೇಕಾದ ಪರಿಸ್ಥಿತಿಯೊದಗಿದೆ!!

    Reply
  3. vasanth

    One TV is conducting a survey to rank BJP Minister performance. How stupid it is. They should have conducted a survey about who has looted our State more or less in this BJP government. The Chief Editor of that TV channel has written and talk about very much about Tejaswi, Castro and other great leaders. But interview highly corrupt BJP ministers. What a pity.

    Reply
  4. prasad raxidi

    ಒಂದು ವೇಳೆ ದ್ವಂದ್ವಾಚಾರ್ಯರೆಂದು ಖ್ಯಾತರಾಗಿರುವ ಪೇಜಾವರರು ಪ್ರಾಮಾಣಿಕವಾಗಿ (ಅದು ಅವರ ಮಾತಿನಲ್ಲಿ ವ್ಯಕ್ತವಾಗಲಿಲ್ಲ) ಬದಲಾವಣೆ ತರಬಯಸಿದರೂ ಕೂಡಾ ಅವರ ಪೀಠ ಅದಕ್ಕೆ ಅವಕಾಶ ಕೊಡುವುದಿಲ್ಲ. ಸಂವಾದದಲ್ಲಿ ಭಾಗವಹಿಸಿದರೆಂಬುದಕ್ಕಷ್ಟೆ ನಾವು ಸಮಾಧಾನ ಪಟ್ಟುಕೊಳ್ಳಬೇಕು. ಆದರೆ ಲಿಂಗಾಯತ (ವಿರಕ್ತ ಮಠ)ಮಠಾಧೀಶರಿಗೆ ಇದು ಸಾಧ್ಯ. ಅವರು ವಚನಕಾರರು ಹೇಳಿದ್ದನ್ನು ಆಚರಣೆತಂದರೆ ಸಾಕು, ಆದರೆ ಅವರುಕೂಡಾ ವೇದಿಕೆಯಲ್ಲಿ ಹೇಳಿದ್ದನ್ನು ಕೃತಿಗಿಳಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಬುದ್ಧಿಜೀವಗಳು ಮತ್ತು ಚಳುವಳಿಗಾರರೂ ಕೂಡಾ ದ್ವಂದ್ವಾಚಾರ್ಯ ರಾಗಿರುವುದು ಮತ್ತು ಕೋಮುವಾದವನ್ನು ಎಲ್ಲ ರೂಪಗಳಲ್ಲೂ ವಿರೋದಿಸದೆ, ಹೆಚ್ಚಿನವರು ‘ಸೆಲೆಕ್ಟಿವ್’ ಆಗಿರುವುದು ನಮ್ಮ ಪುರಾತನ-ಸನಾತನರನ್ನು, ಕೋಮುವಾದಿಗಳನ್ನು ಬಲಪಡಿಸುತ್ತದೆ. ಇದೆಲ್ಲವನ್ನೂ ನೋಡಿಯೇ ತೇಜಸ್ವಿಯವರು ಹೀಗೆಂದಿದ್ದರು (ನಿರಾಶೆಯಿಂದಲ್ಲ) “ನನಗೆ ಈ ಗುಂಪುಗಳಲ್ಲಿ ಮಾಡುವ ಕೆಲಸದಲ್ಲಿ ನಂಬಿಕೇನೇ ಹೋಗಿದೆ ಕಣ್ರಿ ಅದಕ್ಕೇ ಏನು ಮಾಡ್ಬೇಕಾದ್ರೂ ನಾನೊಬ್ನೇ ಮಾಡೋವಂತದನ್ನು ಮಾಡ್ತಾ ಇದ್ದೀನಿ.”

    Reply

Leave a Reply

Your email address will not be published. Required fields are marked *