Daily Archives: January 10, 2012

ದಲಿತ, ಶೂದ್ರರು – ಹಿಂದೂಗಳಲ್ಲ ಎಂದು ತಿಳಿಯಬೇಕಿದೆ

: ಭೂಮಿ ಬಾನು

ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಮಡೆಸ್ನಾನ ಕುರಿತು ಬೆಂಗಳೂರಿನಲ್ಲಿ ಭಾನುವಾರ ನಡೆದ ಸಂವಾದ ಒಂದು ಬಹುಮುಖ್ಯ ಸಮಾರಂಭ. ಮಡೆಸ್ನಾನ ಅಷ್ಟೇ ಅಲ್ಲದೆ, ಅನೇಕ ವಿಚಾರಗಳು ಅಲ್ಲಿ ಚರ್ಚೆಗೆ ಬಂದವು. ಯಾವ ಪ್ರಶ್ನೆಗಳಿಗೂ ಸೂಕ್ತ ಪರಿಹಾರಗಳು ಸಿಗದಿದ್ದರೂ, ಚರ್ಚೆಗೆ ವೇದಿಕೆ ಸಿದ್ಧಗೊಂಡಿತ್ತು ಎನ್ನುವುದೇ ಸಮಾಧಾನದ ಸಂಗತಿ.

ಪೇಜಾವರ ಮಠದ ವಿಶ್ವೇಶತೀರ್ಥರು ಸಂವಾದದಲ್ಲಿ ಪಾಲ್ಗೊಂಡ ಏಕೈಕ ಕಾರಣಕ್ಕೆ ಅಭಿನಂದನಾರ್ಹರು. ಸಂವಾದದ ಚರ್ಚೆಗಳು, ಅಭಿಪ್ರಾಯ ವಿನಿಯಮ ಅವರ ಆಲೋಚನಾ ಕ್ರಮದಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ಆದರೂ, ಹೀಗೊಂದು ಚರ್ಚೆಯಲ್ಲಿ ಪಾಲ್ಗೊಳ್ಳಬಲ್ಲ ಪುರೋಹಿತಶಾಹಿ ಸ್ವಾಮಿ ಅವರೊಬ್ಬರೇ. ಅವರೂ ಕೂಡ ತಾನು ಬರುವುದಿಲ್ಲ ಎಂದು ನಿರಾಕರಿಸಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಅವರನ್ನು ಒತ್ತಾಯ ಮಾಡಲಾಗುತ್ತಿರಲಿಲ್ಲ. ಆದರೆ ಅವರ ಗುಂಪಿನ ಇತರೆ ಸ್ವಾಮಿಗಳನ್ನು ಇಂತಹದೊಂದು ಸಂವಾದಕ್ಕೆ ಒಪ್ಪಿಸಿ ಕರೆತರುವುದು ಊಹಿಸಲೂ ಸಾಧ್ಯವಿಲ್ಲ.

ಪೇಜಾವರ ಶ್ರೀಗಳು ತಮ್ಮ ಕೆಲ ಕಾರ್ಯಕ್ರಮಗಳಿಂದ (ದಲಿತರ ಕೇರಿಯಲ್ಲಿ ಪಾದಯಾತ್ರೆ, ದಲಿತ ಸ್ವಾಮಿಯೊಂದಿಗೆ ಭೋಜನ) ತಾವು ಸಮುದಾಯಗಳ ಮಧ್ಯೆ ಸಾಮರಸ್ಯ ಬಯಸುತ್ತೇವೆ ಎಂದು ತೋರಿದ್ದರೂ, ಅದರ ಹಿಂದೆ ‘ಹಿಂದೂ ಧರ್ಮ’ ಎಂಬ ದೊಡ್ಡ ಬ್ಯಾನರ್ ನ ಅಸ್ಥಿತ್ವವನ್ನು ಗಟ್ಟಿಗೊಳಿಸುವುದೇ ಹೊರತು ಬೇರೆ ಉದ್ದೇಶ ಇದ್ದಂತೆ ಕಾಣುವುದಿಲ್ಲ.

ಮಡೆಸ್ನಾನ ಕುರಿತ ಚರ್ಚೆಯಲ್ಲಿ ಪೇಜಾವರ ಶ್ರೀಯ ಒಳಗಡೆ ಎಂಥ ಕಠೋರ ಕೋಮುವಾದಿ ಅಡಗಿದ್ದಾನೆ ಎನ್ನುವುದು ಗೊತ್ತಾಯಿತು. ಮುಸಲ್ಮಾನ ಬಾಂಧವರು ರಂಜಾನ್ ವೇಳೆ ಉಪವಾಸ ಅಂತ್ಯ ಮಾಡುವಾಗ ಕುಟುಂಬ ವರ್ಗ, ಸ್ನೇಹಿತರೆಲ್ಲಾ ಸೇರಿ ಒಂದೇ ಅರಿವಾಣ (ತಟ್ಟೆ) ದಲ್ಲಿ ಊಟಮಾಡುವ ಶ್ರೇಷ್ಠ ನಡೆಯನ್ನು (gesture) ಮಡೆಸ್ನಾನದಂತಹ ಅನಿಷ್ಟ ಪದ್ಧತಿಗೆ ಹೋಲಿಸುತ್ತಾರೆ.

ಚರ್ಚೆಯ ಸಂದರ್ಭದಲ್ಲಿ ಮುಸಲ್ಮಾನ ಬಾಂಧವರೊಬ್ಬರು ತಮ್ಮ ಸಂಪ್ರದಾಯ ಭ್ರಾತೃತ್ವದ ಸಂಕೇತ ಎಂದು ಸ್ಪಷ್ಟಪಡಿಸಿದ ನಂತರವೂ, ಸ್ವಾಮೀಜಿ ಬದಲಾಗಲಿಲ್ಲ. ಅವರ ಪ್ರಕಾರ ಅದು ಒಬ್ಬರ ಎಂಜಲನ್ನು ಇನ್ನೊಬ್ಬರು ತಿಂದಂತೆಯೇ. ಅಪ್ಪ, ಮಗ, ಸ್ನೇಹಿತ ಎಲ್ಲರೂ ಒಂದೇ ತಟ್ಟೆಯಲ್ಲಿ ಕುಳಿತು ಊಟಮಾಡುವಾಗ ಅಸಹ್ಯ ಹುಟ್ಟಿಸುವ ಸಂಗತಿಯಾದರೂ ಏನಿರುತ್ತೆ? ಇಂತಹ ನಡೆಯನ್ನು ಸಮಚಿತ್ತದಿಂದ ಗ್ರಹಿಸದಷ್ಟು ಮೂಢರಲ್ಲ ಸ್ವಾಮೀಜಿ. ಆದರೆ ಅವರಲ್ಲಿ ಕೋಮುದ್ವೇಷ ಭಾವನೆಗಳು ಆಳವಾಗಿ ನೆಲೆಯೂರಿವೆ. ಆ ಕಾರಣವೇ ಅವರು ಮಡೆಸ್ನಾನ ಚರ್ಚೆ ಸಂದರ್ಭದಲ್ಲಿ ಮುಸಲ್ಮಾನರಲ್ಲಿ ಜಾರಿಯಲ್ಲಿರುವ ಕ್ರೂರ ವಿವಾಹ ವಿಚ್ಚೇದನ ಪದ್ಥತಿಯನ್ನು ಉದಾಹರಿಸುವ ಪ್ರಯತ್ನ ಮಾಡುತ್ತಾರೆ. ಮಹಿಳೆಯರನ್ನು ಶೋಷಿಸುವ ಅಂತಹ ಕ್ರೂರ ಪದ್ಥತಿ ಟೀಕೆಗೆ ಅರ್ಹವೇ. ಅದು ಬದಲಾಗಬೇಕು. ಆದರೆ ಮಡೆಸ್ನಾನದ ಸಮರ್ಥನೆಗೆ ದಾಳವಾಗಬಾರದಷ್ಟೆ.

ವೀರಭದ್ರ ಚನ್ನಮಲ್ಲ ಸ್ವಾಮಿಯವರು ಇಂತಹದೊಂದು ಚರ್ಚೆ ಆಯೋಜನೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಪಾತ್ರ ಶ್ಲಾಘನೀಯ. ಅಂತೆಯೇ ಸಾಣೇಹಳ್ಳಿ ಪಂಡಿತಾರಾಧ್ಯರು ಮತ್ತಿತರ ಸ್ವಾಮೀಜಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಇವರೆಲ್ಲಾ ಸೇರಿ ಮಡೆಸ್ನಾನ ನಿಷೇಧಕ್ಕೆ ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ. ಆದರೆ, ನೆನಪಿಡಲೇಬೇಕಾದ ಬಹುಮುಖ್ಯ ಸಂಗತಿ ಎಂದರೆ, ಶೂದ್ರ ಸಮುದಾಯಗಳನ್ನು ಪ್ರತಿನಿಧಿಸುವ ಬಹುಮುಖ್ಯ ಮತ್ತು ಪ್ರಭಾವಶಾಲಿ ಮಠಗಳನ್ನು ಪ್ರತಿನಿಧಿಸುವವರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ಕೊಡುವವರನ್ನ, ಆರ್.ಎಸ್.ಎಸ್ ಬೈಠಕ್ ಗಳಲ್ಲಿ ಕುಂತು ಬರುವವರನ್ನು ಇಂತಹದೊಂದು ಸಂವಾದಕ್ಕೆ ಕರೆಯುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನುವ ನಿರ್ಧಾರಕ್ಕೆ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಬಂದಿದ್ದರೆ ತಪ್ಪೇನಿಲ್ಲ.

ಚನ್ನಮಲ್ಲ ಸ್ವಾಮೀಜಿಯವರು ಪೇಜಾವರರ ಮುಂದೆ ಕೆಲವು ಬೇಡಿಕೆಗಳನ್ನಿಟ್ಟರು. ಪಂಕ್ತಿಬೇಧವನ್ನು ನಿಲ್ಲಿಸಿ, ಶೂದ್ರ, ದಲಿತ ಸಮುದಾಯ ಪ್ರತಿನಿಧಿಸುವ ಗುರುಗಳಿಗೆ ವರ್ಷಕ್ಕೆ ಒಮ್ಮೆಯಾದರೂ ಉಡುಪಿ ಕೃಷ್ಣನನ್ನು ಪೂಜಿಸುವ ಅವಕಾಶ ಕಲ್ಪಿಸಿ ಎಂದು ಮನವಿ ಇಟ್ಟರು. ಪೇಜಾವರರಿಂದ ಇದಾವುದರ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಅವರಿಂದ ಅದನ್ನು ನಿರೀಕ್ಷಿಸುವುದೂ ತಪ್ಪು. ಮುಖ್ಯವಾಗಿ ಅವರೊಬ್ಬ ಸಂಪ್ರದಾಯನಿಷ್ಠ, ಜಾತಿವ್ಯವಸ್ಥೆ ನಿಷ್ಠ, ಅತಿಯಾದ ಕೋಮುಭಾವನೆಗಳನ್ನು ತುಂಬಿಕೊಂಡಿರುವ ಸ್ವಾಮೀಜಿ.

ಮುಖ್ಯವಾಗಿ ಶೂದ್ರ ಹಾಗೂ ದಲಿತ ವರ್ಗಗಳು ಅರಿತು ಕೊಳ್ಳಬೇಕಿರುವ ಸತ್ಯ, ಅವರ್ಯಾರೂ ಹಿಂದುಗಳಲ್ಲ, ಬದಲಿಗೆ ಹಿಂದುಗಳೆಂದು ‘ಗುರುತಿಸಲ್ಪಡುತ್ತಿರುವವರು’. ದಲಿತ ಅಥವಾ ಶೂದ್ರ ಕುಟುಂಬಗಳಲ್ಲಿ ಚಾಲ್ತಿಯಲ್ಲಿರುವುದು ಜಾತಿ ಮಾತ್ರ, ಧರ್ಮವಲ್ಲ. ಹುಟ್ಟಿದ ಮಗುನಿಗೆ ಅಪ್ಪ-ಅಮ್ಮ ತಾವು ಯಾವ ಜಾತಿಯವರು ಎಂಬುದನ್ನು ಹೇಳಿಕೊಡುತ್ತಾರೆಯೇ ಹೊರತು ಯಾವ ಧರ್ಮದವರೆಂದಲ್ಲ. ಅಪ್ಪ-ಅಮ್ಮ ನೇ ‘ನೀನು ಇಂತಹ ಧರ್ಮಕ್ಕೆ ಸೇರಿದವನು’ ಹೇಳಿಲ್ಲ. ಹಿಂದುಗಳೆಂದು ಗುರುತಿಸುವುದು, ಗುರುತಿಸಿಕೊಳ್ಳುವುದು ಇತ್ತೀಚಿನ ಸಂಪ್ರದಾಯ. ಯಾರು ಕ್ರಿಶ್ಚಿಯನ್ ಅಲ್ಲವೋ, ಯಾರು ಜೈನರಲ್ಲವೋ, ಯಾರು ಮುಸಲ್ಮಾನರಲ್ಲವೋ ಅವರನ್ನೆಲ್ಲಾ ಹಿಂದೂಗಳೆಂದು ಗುರುತಿಸುವ ಪ್ರಕ್ರಿಯೆ ಇತ್ತೀಚಿನದ್ದು. ಈ ಮಾತನ್ನು ಅನೇಕರು ಒಪ್ಪದೇ ಇರಬಹುದು. ಸಾವಿರಾರು ವರ್ಷಗಳ ಹಿಂದಿನ ಪುರಾತನ ಗ್ರಂಥಗಳನ್ನು ಉಲ್ಲೇಖಿಸಿ ‘ಶೂದ್ರ, ದಲಿತರೆಲ್ಲಾ ಹಿಂದುಗಳೇ’ ಎಂದು ಹೇಳಲು ಬರಬಹುದು. ಆದರೆ ಒಂದಂತೂ ಸ್ಪಷ್ಟ. ದಲಿತ, ಶೂದ್ರರಿಗೆ ಶತಶತಮಾನಗಳಿಂದ ಅಕ್ಷರ ಜ್ಞಾನ ನಿರಾಕರಿಸಲಾಗಿತ್ತು. ಹಾಗಾಗಿ ಯಾವು ಪುರಾತನ ಗ್ರಂಥಗಳ ಉಲ್ಲೇಖಕ್ಕೂ, ಇವರಿಗೂ ಯಾವುದೇ ಸಂಬಂಧವಿಲ್ಲ.

ಈ ನಿಟ್ಟಿನಲ್ಲಿ ಯೋಚನೆ ಆರಂಭವಾದಾಗ, ಜಾಗೃತಿಯಾದಾಗ, ಸಹಪಂಕ್ತಿ ಭೋಜನಕ್ಕೆ, ಗರ್ಭಗುಡಿ ಪ್ರವೇಶಕ್ಕೆ, ಬೇಡಿಕೆ ಇಡುವ ಚಾಳಿ ಬಿಟ್ಟುಹೋಗುತ್ತದೆ. ಆಗ ಸಮಾಜದಲ್ಲಿ ನಿಜ ಅಲ್ಪಸಂಖ್ಯಾತರು ಯಾರು ಎಂಬುದು ಅರಿವಾಗುತ್ತದೆ. ಹಾಗಾದಾಗ, ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳು ತಾನೇತಾನಾಗಿ ನಿಂತುಹೋಗುತ್ತವೆ.