ಜೀವನದಿಗಳ ಸಾವಿನ ಕಥನ – 19

ಡಾ. ಎನ್.ಜಗದೀಶ್ ಕೊಪ್ಪ 

ಜಗತ್ತಿನಾದ್ಯಂತ 1960 ರಲ್ಲಿ ಭಾರತವೆಂದರೆ, ಹಸಿದವರ, ಅನಕ್ಷರಸ್ತರ, ಸೂರಿಲ್ಲದವರ, ಹಾವಾಡಿಗರ, ಬಡವರ ದೇಶವೆಂದು ಪ್ರತಿಬಿಂಬಿಸಲಾಗುತಿತ್ತು. ಅಂದಿನ ದಿಗಳಲ್ಲಿ ಅಮೇರಿಕಾ ಭಾರತದ ಮಕ್ಕಳಿಗಾಗಿ ಕೇರ್ ಎಂಬ ಸಂಸ್ಥೆ ಅಡಿಯಲ್ಲಿ ಗೋಧಿ ಮತ್ತು ಹಾಲಿನ ಪುಡಿಯನ್ನು ಪೂರೈಕೆ ಮಾಡುತಿತ್ತು. ಇದನ್ನು ಶಾಲಾ ಮಕ್ಕಳಿಗೆ ಮಧ್ಯಾದ ಉಪಹಾರವಾಗಿ ಉಪ್ಪಿಟ್ಟು ಹಾಗು ಹಾಲನ್ನು ವಿತರಿಸಲಾಗುತಿತ್ತು. (1966 ರಿಂದ 1969 ರವರೆಗೆ 5, 6, ಮತ್ತು 7ನೇ ತರಗತಿಯಲ್ಲಿ ಓದುತಿದ್ದ ಈ ಲೇಖಕ ಕೂಡ ಇದರ ಫಲಾನುಭವಿಗಳಲ್ಲಿ ಒಬ್ಬ.)

ಆವತ್ತಿನ ಸಂಕಷ್ಟದ ದಿನಗಳಲ್ಲಿ ಭಾರತದ ಹಸಿದ ಹೊಟ್ಟೆಗಳ ಹಾಹಾಕಾರಕ್ಕೆ ಆಸರೆಯಾಗಿ ಬಂದದ್ದು ಹಸಿರು ಕ್ರಾಂತಿಯೋಜನೆ. ಅದೇ ತಾನೆ ಅಮೇರಿಕಾದಲ್ಲಿ ಬಿಡುಗಡೆಯಾಗಿದ್ದ ನೂತನ ಗೋಧಿ ತಳಿ ಮತ್ತು  ಪಿಲಿಪೈನ್ಸ್ ನಲ್ಲಿ ಬಿಡುಗಡೆಯಾಗಿದ್ದ ಅಧಿಕ ಇಳುವರಿ ಕೊಡುವ ಭತ್ತದ ತಳಿ ಭಾರತದ ಪಾಲಿಗೆ ಅಕ್ಷಯ ಪಾತ್ರೆಯಾಗಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು.

ಅಧಿಕ ಇಳುವರಿ ನೀಡುವ ಹೈಬ್ರಿಡ್ ತಳಿಗಳ ಅವಿಷ್ಕಾರ ರೈತರ ಬದುಕಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿತು ನಿಜ, ಆದರೆ ಈ ಉಲ್ಲಾಸ ಬಹಳ ದಿನ ಉಳಿಯಲಿಲ್ಲ. ಉತ್ತರಭಾರತದಲ್ಲಿ ನಿರ್ಮಾಣವಾದ ಬೃಹತ್ ಅಣೆಕಟ್ಟುಗಳ ಮೂಲಕ ಸಹಸ್ರಾರು ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು. ಪಾಕಿಸ್ತಾನದಲ್ಲೂ ಕೂಡ ಇಂತಹದ್ದೇ ಕ್ರಾಂತಿ ಜರುಗಿತು. ಕಾಲುವೆ ಮುಖಾಂತರ ರೈತರ ಭೂಮಿಗೆ ಹರಿಸಿದ ನೀರು ಅವರ ಬದುಕಿನ ಅಧ್ಯಾಯವನ್ನು ಬದಲಿಸಿತು. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ ಏಕೆಂದರೆ, ಹೈಬ್ರಿಡ್ ತಳಿಗಳು ಬೇಡುವ ಅಧಿಕ ಮಟ್ಟದ ನೀರು, ರಸಾಯನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಭೂಮಿಯ ಫಲವತ್ತತೆ ನಾಶವಾಗಿ ಇಳುವರಿ ಕುಂಠಿತಗೊಂಡಿತು. ಆಧುನಿಕ ತಳಿಗಳ ಬೇಸಾಯ ರೈತರನ್ನು ಬಸವಳಿಯುವಂತೆ ಮಾಡಿತು.

ಹೈಬ್ರಿಡ್ ತಳಿಗಳ ಬಗ್ಗೆ ನಮ್ಮ ತಕರಾರುಗಳು ಏನೇ ಇದ್ದರೂ ಕೂಡ ರೈತರು ಅವುಗಳನ್ನೇ ಆಶ್ರಯಿಸಿದ್ದಾರೆ. ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ಜೊತೆಗೆ ನಮ್ಮ ನಾಟಿ ಬಿತ್ತನೆ ತಳಿಗಳು ಹೈಬ್ರಿಡ್ ತಳಿಗಳ ಸಂಕರದಿಂದಾಗಿ ನಾಶವಾಗತೊಡಗಿವೆ. ಪ್ರಾರಂಭದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 10 ಟನ್ ಭತ್ತದ ಇಳುವರಿ ನೀಡುತಿದ್ದ ಹೈಬ್ರಿಡ್ ಬೀಜಗಳಿಂದ ಈಗ ಏಷ್ಯಾ ಖಂಡದ ದೇಶಗಳಲ್ಲಿ ಕೇವಲ 2.6 ರಿಂದ 3.7 ಟನ್ ಇಳುವರಿ ಸಾಧ್ಯವಾಗಿದೆ. ಈ ಕುರಿತು ಸೃಷ್ಟೀಕರಣ ನೀಡಿರುವ ಪಿಲಿಪೈನ್ಸ್ ದೇಶದ ಮನಿಲಾದ ಭತ್ತದ ಸಂಶೋಧನಾ ಸಂಸ್ಥೆಯ ವಿಜ್ಙಾನಿಗಳು, ವರ್ಷವೊಂದಕ್ಕೆ ಒಂದು ಬೆಳೆ ತೆಗೆಯುತಿದ್ದ ಭೂಮಿಯಲ್ಲಿ ಎರಡು ಅಥವಾ ಮೂರು ಬೆಳೆ ತೆಗೆಯುತ್ತಿರುವುದರಿಂದ ಭೂಮಿಯ ಫಲವತ್ತತೆ ನಾಶವಾಗತೊಡಗಿದ್ದು ಇಳುವರಿ ಕಡಿಮೆಯಾಗಿರುವುದಕ್ಕೆ ಕಾರಣ ಎಂದಿದ್ದಾರೆ. ಇಂತಹ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಹೇಗೆ ಸಾಮಾಜಿಕ ಪರಿಣಾಮಗಳನ್ನು ಬೀರಬಲ್ಲವು ಎಂಬುದಕ್ಕೆ ಸಣ್ಣ ಉದಾಹರಣೆ ಮಾತ್ರ.

ಆಧುನಿಕ ನೀರಾವರಿ ಪದ್ಧತಿಯಿಂದಾಗಿ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಸಂಭವಿಸಿದ್ದು  ಈ ಕುರಿತಂತೆ ಸಮಾಜಶಾಸ್ತ್ರಜ್ಙರು ಜಗತ್ತಿನಾದ್ಯಂತ ಅಧ್ಯಯನ ನಡೆಸುತಿದ್ದಾರೆ. ಈಗಾಗಲೆ ಕೆಲವು ಅಂಶಗಳನ್ನು ನಿಖರವಾಗಿ ಗುರುತಿಸಿದ್ದಾರೆ. ಆಧುನಿಕ ನೀರಾವರಿ ಪದ್ಧತಿ ಬಳಕೆಗೆ ಬಂದ ನಂತರ ಕೃಷಿ ಕುರಿತಂತೆ ರೈತರಿಗೆ ಇದ್ದ ಅನೇಕ ಹಕ್ಕುಗಳು ಮತ್ತು ಚಿಂತನೆಗಳು ನಾಶವಾದವು. ಈ ಮೊದಲು ರೈತ ತನ್ನ ಭೂಮಿಯಲ್ಲಿ ಯಾವ ಬೆಳೆಯನ್ನು ಯಾವ ಕಾಲದಲ್ಲಿ ಬೆಳೆಯ ಬೇಕು ಎಂದು ನಿರ್ಧರಿಸುತಿದ್ದ. ಈಗ ಇವುಗಳನ್ನು ನೀರಾವರಿ ಇಲಾಖೆ ಇಲ್ಲವೆ ಸರಕಾರಗಳು ನಿರ್ಧರಿಸುತ್ತಿವೆ.

ನಮ್ಮ ಪ್ರಾಚೀನ ಭಾರತದ ದೇಶಿ ಕೃಷಿ ಪದ್ಧತಿಯ ನೀರಾವರಿ ಚಟುವತಿಕೆಗಳನ್ನು ಆಯಾ ರೈತ ಸಮುದಾಯ ನಿರ್ಧರಿಸುತಿತ್ತು. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ  ನೀರು ಹಂಚಿಕೆ ಕುರಿತು ಇದ್ದ ಪದ್ಧತಿಯನ್ನು ಕಂಡು ಬ್ರಿಟೀಷರು ಬೆರಗಾಗಿದ್ದರು. ಆಯಾ ಕೆರೆಗಳಿಂದ ಹಿಡಿದು ಕಾಲುವೆಗಳ ದುರಸ್ತಿ, ನಿರ್ವಹಣೆ ಎಲ್ಲವನ್ನು ರೈತರೇ ನಿರ್ವಹಿಸುತಿದ್ದರು. ಇದು ಚೋಳರ, ಪಾಂಡ್ಯರ ಆಡಳಿತ ಕಾಲದಿಂದಲೂ ನಡೆದುಬಂದ ಪದ್ಧತಿಯಾಗಿತ್ತು. ಇಂತಹದೆ ಪದ್ಧತಿ ಏಷ್ಯಾದ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿತ್ತು. ಇಂಡೊನೇಷಿಯಾದ ಬಾಲಿ ದ್ವೀಪದ ರೈತರು ಸುಬಕ್ ಎಂಬ ವ್ಯವಸ್ಥೆಯ ಹೆಸರಿನಡಿ ಭತ್ತದ ಬೆಳೆಗೆ ನೀರನ್ನು ಹಂಚಿಕೊಳ್ಳುವ ಪದ್ಧತಿಯನ್ನು ನಾವು ಇಂದಿಗೂ ಕಾಣಬಹುದು.

ಜಲಾಶಯದ ನೆಪದಲ್ಲಿ ಆಧುನಿಕ ನೀರಾವರಿ ಯೋಜನೆಗಳು ಜಾರಿಗೆ ಬಂದ ನಂತರ ರೈತರ ಹಕ್ಕುಗಳು ಮತ್ತು ಪರಿಸರಕ್ಕೆ ಪೂರಕವಾಗಿದ್ದ ದೇಶಿ ತಂತ್ರಜ್ಞಾನಗಳು ಮರೆಯಾಗಿ ರೈತರೆಲ್ಲರೂ ಸರಕಾರಗಳ ಗುಲಾಮರಂತೆ ಬದುಕಬೇಕಾಗಿದೆ. ಇದಕ್ಕೆ ಸೂಡಾನ್ ದೇಶದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸೂಡಾನ್ ನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೊಳ, ಗೆಣಸು, ಅನೇಕ ಬಗೆಯ ಕಿರುಧಾನ್ಯಗಳನ್ನು ಬೆಳೆಯುತಿದ್ದ ರೈತರನ್ನು, ಅಲ್ಲಿ ಹೊಸದಾಗಿ ಜಾರಿಗೆ ಬಂದ ಹಾಲ್ಪ ಎಂಬ ಸರಕಾರದ ನೀತಿಯಿಂದಾಗಿ ರೈತರು ಬಲವಂತವಾಗಿ ಹತ್ತಿ ಬೆಳೆಯುವಂತಾಯಿತು. ತುಟ್ಟಿಯಾದ ಬಿತ್ತನೆ ಬೀಜದ ಬೆಲೆ, ಗೊಬ್ಬರ, ಕೀಟನಾಶಕ ಇವುಗಳಿಂದ ತತ್ತರಿಸಿ ಹೋದ ರೈತರು ಲಾಭ ಕಾಣದೆ ಕಂಗಾಲಾದರು. ಇಂತಹದ್ದೇ ಸ್ಥಿತಿ ಅಂದಿನ ಸೋವಿಯತ್ ಒಕ್ಕೂಟದಲ್ಲೂ ಸಹ ಜಾರಿಯಲ್ಲಿತ್ತು. ಕಮ್ಯೂನಿಷ್ಟ್ ಸರಕಾರದ ಈ ನಿರ್ಧಾರಗಳನ್ನು ಆಗ ಕಜಕಿಸ್ಥಾನದ ಇಬ್ಬರು ಪಕ್ಷದ ಪದಾಧಿಕಾರಿಗಳು ಬಲವಾಗಿ ಖಂಡಿಸಿ ಇದು ರೈತರ ಹಕ್ಕುಗಳನ್ನು ಧಮನ ಮಾಡುವ ಸರ್ವಾಧಿಕಾರದ ನೀತಿ ಎಂದು ಪ್ರತಿಭಟಿಸಿದ್ದರು.

ನೀರಾವರಿ ಯೋಜನೆಗಳಲ್ಲಿ ಸರಕಾರಗಳು ನೇರವಾಗಿ ಹಸ್ತಕ್ಷೇಪ ಮಾಡುವುದರಿಂದ ಹಲವಾರು ಬಾರಿ ಯೋಜನೆಗಳು ತಮ್ಮ ಮೂಲ ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿರುವುದುಂಟು. 1970 ರ ದಶಕದಲ್ಲಿ ಇರಾನಿನ ಅತ್ಯಂತ ಎತ್ತರದ ಅಣೆಕಟ್ಟು ಡೆಜ್ ಜಲಾಶಯದಿಂದ 80 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರಮಾನದಲ್ಲಿ ಸಣ್ಣ ಹಿಡುವಳಿದಾರರಿದ್ದರು. ಆದರೆ, ಆಗಿನ ದೊರೆಯಾಗಿದ್ದ ಷಾ ಇಡೀ ಯೋಜನೆಯ ರೂಪು ರೇಷೆಗಳನ್ನು ಬದಲಿಸಿ ಅಮೇರಿಕಾದ ಬಹುರಾಷ್ಟೀಯ ಕಂಪನಿಗಳ ಬೃಹತ್ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡಿದರು. ಇದರ ಲಾಭ ಪಡೆದ ಕಂಪನಿಗಳೆಂದರೆ, ಶೆಲ್ , ಡೆಲ್ ಅಂಡ್ ಕೊ, ಮತ್ತು ಟ್ರಾನ್ಸ್‌ವರ್ಲ್ಡ್  ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಇತ್ಯಾದಿ ಕಂಪನಿಗಳು. ಇಂತಹದ್ದೇ ಕಥನಗಳು ಜಗತ್ತಿನ ಹಲವಾರು ದೇಶಗಳಲ್ಲಿ ಜರುಗಿವೆ.

ಇದು 70 ದಶಕದಲ್ಲಿ ಭಾರತದಲ್ಲಿ ನಡೆದ ಘಟನೆ. ರಾಜಸ್ಥಾನದಲ್ಲಿ ನಿರ್ಮಿಸಲಾದ ಇಂದಿರಾಗಾಂಧಿ ಬೃಹತ್ ನಾಲುವೆಗಾಗಿ ಭೂಮಿ ಕಳೆದುಕೊಂಡ ಸಾವಿರಾರು ರೈತ ಕುಟಂಬಗಳೂ ಸೇರಿ ಹಲವಾರು ಭೂಹೀನ ರೈತರಿಗೆ ತಲಾ 2 ರಿಂದ 5 ಹೆಕ್ಟೇರ್ ಜಮೀನು ನೀಡಿ, ಅವರ ಭೂಮಿಗೆ ಉಚಿತವಾಗಿ ನೀರು, ಸಬ್ಸಿಡಿ ರೂಪದಲ್ಲಿ ಬೀಜ ಗೊಬ್ಬರ ಒದಗಿಸಲಾಗುವುದೆಂದು ಆಶ್ವಾಸನೆ ನೀಡಲಾಗಿತ್ತು. ಅದರಂತೆ ಈ ಪ್ರದೇಶಕ್ಕೆ ನೀರೂ ಹರಿಯಿತು. ಕೆಲವೇ ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಭೂಮಿಯೆಲ್ಲಾ  ಪ್ರಭಾವಿ ರಾಜಕಾಣಿಗಳ, ಶ್ರೀಮಂತರ, ದಲ್ಲಾಳಿಗಳ ಪಾಲಾಗಿ ಅಲ್ಲಿನ ರೈತರು ತಮ್ಮದೇ ಭೂಮಿಯಲ್ಲಿ ಜೀತದಾಳುವಿನಂತೆ ದುಡಿಯುತಿದ್ದರು. 1989 ರಲ್ಲಿ ಸಮೀಕ್ಷೆ ನಡೆಸಿದಾಗ ಕೇವಲ ಶೇ.30 ರಷ್ಟು ರೈತರು ಮಾತ್ರ ಭೂಮಿ ಉಳಿಸಿಕೊಂಡಿದ್ದರು.

ಉತ್ತರ ಪ್ರದೇಶದ ಸದರ್ಲಾರ್ ಸಹಾಯಕ್ ಕಾಲುವೆಯ ಫಲಾನುಭವಿಗಳು ಕೂಡ ಅತಿ ದೊಡ್ಡ ಶ್ರೀಮಂತ ಜಮೀನಿದಾರರಾಗಿದ್ದಾರೆ. ಇವರೆಲ್ಲಾ ನೀರು ಉಪಯೋಗಿಸಿದ ನಂತರ ಉಳಿದ ನೀರನ್ನು ಕಾಲುವೆ ಕೊನೆ ಭಾಗದ ಸಣ್ಣ ಹಿಡುವಳಿದಾರರು ಬಳಸುವ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ.

ಕರ್ನಾಟಕದ ತುಂಗಭದ್ರಾ, ಕಾವೇರಿ, ತಮಿಳುನಾಡಿನ ಮೆಟ್ಟೂರು ಜಲಾಶಯಗಳ ಕೃಷಿ ಚಟುವಟಿಕೆ ಕುರಿತು ಅಧ್ಯಯನ ನಡೆಸಿರುವ ನ್ಯೂಯಾರ್ಕ್ ನಗರದ ಸಿರಾಕಸ್ ವಿ.ವಿ.ಯ ಪ್ರೀತಿ ರಾಮಚಂದ್ರನ್ ಎಂಬಾಕೆ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದ್ದ ಮಹಿಳೆ ಬೇಸಾಯದಿಂದ ವಿಮುಖವಾಗಿರುವುದನ್ನು ಗುರುತಿಸಿದ್ದಾರೆ.

ಅಮೇರಿಕಾದ ಬಹುತೇಕ ಕೃಷಿ ಚಟುವಟಿಕೆ ಬೃಹತ್ ಕಂಪನಿಗಳ ಇಲ್ಲವೆ ಶ್ರೀಮಂತರ ಪಾಲಾಗಿದೆ. ಅಲ್ಲಿನ ಫೆಡರಲ್ ಸರ್ಕಾರದ ನೀರಾವರಿ ಯೋಜನೆ ಕುರಿತಂತೆ ಮಸೂದೆಯನ್ನು ಜಾರಿಗೆ ತಂದಿತ್ತು. ಇದರ ಅನ್ವಯ 160 ಎಕರೆ ಮಿತಿಯೊಳಗೆ ಇರುವ ರೈತರಿಗೆ ಸಬ್ಸಿಡಿ ರೂಪದಲ್ಲಿ ನೀರು ಒದಗಿಸಲಾಗುತಿತ್ತು. ನಂತರ   ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದ ಸಕಾðರ ಭೂಮಿತಿಯನ್ನು 900 ಎಕರೆಗೆ ವಿಸ್ತರಿಸಿತು. ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿ ಇಂತಹ ಅವಕಾಶಗಳನ್ನು  ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಬೃಹತ್ ಕಂಪನಿಗಳು ಸಮರ್ಥವಾಗಿ ಬಳಸಿಕೊಂಡವು.

ನಮ್ಮನ್ನು ಆಳುವ ಸರ್ಕಾರಗಳ ಇಂತಹ ದ್ವಂದ್ವ ನಿಲುವಿನಿಂದಾಗಿ ಹಲವೆಡೆ ಹಿಂಸೆ ಸಾವಿನ ಘಟನೆಗಳು ಜರುಗಿವೆ. ಪಶ್ಚಿಮ ಆಫ್ರಿಕಾದ ಸೆನಗಲ್ ಮತ್ತು ಮಾರಿಷೇನಿಯಾ ನಡುವೆ ಹರಿಯುವ ನದಿಗೆ ಮಿನಂಟಾಲಿ ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಮೊದಲು ನದಿಯು ತಂದು ಹಾಕುತಿದ್ದ ಮೆಕ್ಕಲು ಮಣ್ಣಿನ ಕಣಜ ಭೂಮಿಯಲ್ಲಿ ಸೆನಗಲ್ ದೇಶದ ಕರಿಯ ವರ್ಣದ ರೈತರು ಬೇಸಾಯ ಮಾಡುತಿದ್ದರು. ಜಲಾಶಯ ನಿರ್ಮಾಣವಾದ ನಂತರ ಮಾರಿಷೇನಿಯದ ಬಿಳಿಯ ಬಣ್ಣದ ಅರಬ್ಬರು ಬೃಹತ್ ಮಟ್ಟದಲ್ಲಿ ಕೃಷಿ ಚಟುವಟಿಕೆಗೆ ತೊಡಗಿಕೊಂಡದ್ದರಿಂದ ನೀರಿಲ್ಲದೆ  ನದಿ ಕೆಳಗಿನ ಪ್ರಾಂತ್ಯದ ಸೆನಗಲ್ ರೈತರು ದಂಗೆಯೆದ್ದ ಪರಿಣಾಮ 250 ಮಂದಿ ಅರಬ್ಬರು ಅಸುನೀಗಿದರು. ಮಾರಿಷೇನಿಯಾದಲ್ಲಿದ್ದ ಸಾವಿರಾರು ಸೆನಗಲ್ ದೇಶದ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ನಂತರ ಉಭಯ ದೇಶಗಳು ಜಂಟಿಯಾಗಿ ನಡೆಸಿದ ವಿಚಾರಣೆಯಲ್ಲಿ 600 ಮಂದಿ ರೈತರನ್ನು ನೇಣು ಹಾಕಲಾಯಿತು. ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಸಮಿತಿಯ ವರದಿಯ ಪ್ರಕಾರ, ಇಂದು ಸೆನಗಲ್ ದೇಶದ ಲಕ್ಷಾಂತರ ಹೆಕ್ಟೇರ್ ರೈತರ ಭೂಮಿ ಅಮೇರಿಕಾದ ಬೃಹತ್ ಕಂಪನಿಗಳ ಪಾಲಾಗಿದೆ. ಇವುಗಳ ಸಂರಕ್ಷಣೆಗೆ ಅಲ್ಲಿನ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ರೈತರು ಅತಂತ್ರರಾಗಿ ಕಡಿಮೆ ಕೂಲಿ ದರಕ್ಕೆ ಕಂಪನಿಗಳಲ್ಲಿ ಜೀತದಾಳುಗಳಂತೆ ದುಡಿಯುತಿದ್ದಾರೆ.

(ಮುಂದುವರಿಯುವುದು)

Leave a Reply

Your email address will not be published.