ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1

-ಎನ್.ಎಸ್. ಶಂಕರ್

1982ರ ಮಾತು. ತಿಂಗಳು ಮರೆತಿದ್ದೇನೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ರೈತ ಚಳವಳಿ ಕುರಿತು ರಾಜ್ಯ ರೈತಸಂಘ ವಿಚಾರ ಸಂಕಿರಣ ಏರ್ಪಡಿಸಿತ್ತು. ಶಿವಮೊಗ್ಗ, ಹಾಸನ ಮತ್ತಿತರ ಕಡೆಗಳಿಂದ ಸಾಕಷ್ಟು ಮಂದಿ ರೈತಮಿತ್ರರು ಬಂದಿದ್ದರು. ಸಭೆಯಲ್ಲಿ ಮಾತಾಡಲು ಗೆಳೆಯರಾದ ಇಂದೂಧರ ಹೊನ್ನಾಪುರ ಹಾಗೂ ಕೋಟಿಗಾನಹಳ್ಳಿ ರಾಮಯ್ಯನವರನ್ನೂ ಕರೆದಿದ್ದರು.

ಪ್ರೊ. ಎಂ.ಡಿ. ನಂಜುಂಡಸ್ವಾಮಿ ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂಬ ಪೀಠಿಕೆಯ ಮೂಲಕ ಸಭೆಗೆ ಚಾಲನೆ ಕೊಟ್ಟರು. ಅಂದು ಸುಮಾರು ಜನ ಭಾಷಣಕಾರರಿದ್ದರೂ, ಈ ತಾತ್ವಿಕ ವಿವರಣೆಯನ್ನು, ಮೂರ್ತವಾದ ಸಂಶಯಗಳ ಮೂಲಕ ಎದುರಿಸಿ, ಕೆಲವು ಸ್ಪಷ್ಟನೆ ಪಡೆಯಲು ಮತ್ತು ನೀಡಲು ಯತ್ನಿಸಿದವರು ರಾಮಯ್ಯ ಮತ್ತು ಇಂದೂಧರ ಇಬ್ಬರೇ. ವೇದಿಕೆ ಮೇಲೆ ರಾಮಯ್ಯ ತುಸು ಅಳುಕಿನಿಂದ ಮತ್ತು ಇಂದೂಧರ ಇನ್ನಷ್ಟು ಗಟ್ಟಿ ದನಿಯಲ್ಲಿ ಹೇಳಿದ್ದಿಷ್ಟೇ:

“ರೈತ ಚಳವಳಿ ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಾದ ಟ್ರೇಡ್ ಯೂನಿಯನ್ ಹೋರಾಟಗಳ ಥರ ಆಗಬಾರದು. ತನ್ನ ಸದಸ್ಯರ ಆಂತರಿಕ ಶಿಸ್ತು ಮತ್ತು ಮನುಷ್ಯತ್ವದ ಬೆಳವಣಿಗೆಗೂ ಮಹತ್ವ ಕೊಡಬೇಕು. ಹಾಗಾಗದಿದ್ದರೆ, ಈಗಿನ ಸ್ಥಿತಿಯಲ್ಲೇ ಹಳ್ಳಿಗಳಿಗೆ ಹೆಚ್ಚಿನ ಅಧಿಕಾರ ಕೊಡುವುದೆಂದರೆ (ರೈತಸಂಘದ ಬೇಡಿಕೆಗಳಲ್ಲಿ ಇದೂ ಒಂದು) ಅದು ಮೇಲ್ವರ್ಗದ ಪಾಲಾಗಿ, ದಲಿತರು ಇನ್ನಷ್ಟು ತುಳಿತಕ್ಕೆ ಒಳಗಾಗುತ್ತಾರೆ…”- ಇದು ಅವರಿಬ್ಬರ ವಾದದ ಸಾರ.

ನಿಜಕ್ಕೂ ಸಭೆಯ ನಡಾವಳಿ ಕೌತುಕಮಯವಾದದ್ದು- ಈ ಮಾತುಗಳು ಹೊರಬಿದ್ದ ಮೇಲೆ. ಒಮ್ಮೆಲೇ ಹೆಚ್ಚೂಕಮ್ಮಿ ಇಡೀ ಸಭೆ ಎದ್ದು ನಿಂತು ‘ರೈತಚಳವಳಿಗೂ, ಇದಕ್ಕೂ ಸಂಬಂಧವಿಲ್ಲ’ ಎಂದು ಪ್ರತಿಭಟಿಸತೊಡಗಿತು. ಅದೂ ವ್ಯವಸ್ಥಿತವಾದ, ತಾಳ್ಮೆ, ಸೌಜನ್ಯಗಳ ಗಡಿ ದಾಟದ ಸಹೃದಯ ಭಿನ್ನಾಭಿಪ್ರಾಯವೂ ಅಲ್ಲ. ಹೋ ಎಂಬ ಅರಚಾಟ; ಒಬ್ಬರ ಮಾತುಗಳು ಇನ್ನೊಬ್ಬರ ಕೂಗಿನೊಡನೆ ಕಲಸಿ ಬಿದ್ದಾಡುವ ಮಹಾ ಗೊಂದಲದ ಗದ್ದಲ. ಆ ಗದ್ದಲದಲ್ಲೇ ಸಭೆಯಿಂದ ಕೇಳಿ ಬಂದ ಮಾತು: ‘ಎರಡು ಕರಿಮೀನು ಬಂದವೆ. ಎಳಕಳ್ರೋ, ಹುರ್ಕೊಂಡು ತಿಂದುಬಿಡಣ…’! ಸ್ವಲ್ಪ ಹೊತ್ತಾದ ಮೇಲೆ ಇದೇ ಗಲಾಟೆಯ ಹಿನ್ನೆಲೆಯಲ್ಲಿ ಸಭಿಕರ “ಸಂದೇಹಗಳಿಗೆ” ಉತ್ತರ ಕೊಡಲು ಮತ್ತೆ ಕರೆದಾಗ ಆ ‘ಕರಿಮೀನು’ಗಳಲ್ಲೊಂದಾದ ಇಂದೂಧರ ಇಡೀ ದೃಶ್ಯವನ್ನು ವರ್ಣಿಸಿದ್ದು ಹೀಗೆ: “ನಮ್ಮೂರಲ್ಲಿ ನಮ್ಮಕ್ಕ ತಂಗಿಯರನ್ನು ಯಾರಾದರೂ `ದೊಡ್ಡವರು’ ಕೆಡಿಸಿದಾಗ ನಾವು ಪ್ರತಿಭಟನೆ ತೋರಿದರೆ, ನಮ್ಮ ಧ್ವನಿಯನ್ನು ಮುಚ್ಚಿಹಾಕಲು ಏಳುವ ಗದ್ದಲದ ಹಾಗಿದೆ ನಿಮ್ಮ ಕೂಗು. ಇದು ನಿಮ್ಮ ಶತಮಾನಗಳ ಕೊಬ್ಬು ಮತ್ತು ಅಹಂಕಾರದ ಫಲ…” ಆ ಮಾತಿನಲ್ಲಿ, ಬೇಕೆಂದೇ ಕೆಣಕುವ ಸವಾಲಿನ ದನಿ ಇದ್ದುದು ನಿಜ. ಆದರೆ ನೇರ ಮರ್ಮಕ್ಕೆ ನಾಟುವ ಇಂಥ ಮಾತು ಕೂಡ ಸಭೆಯನ್ನು ಇನ್ನಷ್ಟು ರೊಚ್ಚಿಗೆಬ್ಬಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ನಂಜುಂಡಸ್ವಾಮಿಯವರ ಕೆಲವು ಸಹಾನುಭೂತಿಯ ಹೇಳಿಕೆಗಳ ಹೊರತಾಗಿ ಇನ್ನಾರೂ ಇಂದೂಧರ, ರಾಮಯ್ಯನ ನಿಲುವು ಒಪ್ಪುವುದಿರಲಿ, ಅವರನ್ನು ಅರ್ಥ ಮಾಡಿಕೊಳ್ಳಲೂ ತಯಾರಿರಲಿಲ್ಲ.

ಸಭಾಂಗಣದಲ್ಲಿ ರಾಮಯ್ಯ, ಇಂದೂಧರನ ಮೇಲೆ ಹರಿಹಾಯ್ದವರು ಅವರಿಬ್ಬರನ್ನೂ ಚೆನ್ನಾಗಿ ಬಲ್ಲ ಗೆಳೆಯರೇ ಎಂಬುದೇನೂ ಅನಿರೀಕ್ಷಿತವಲ್ಲ. ಆ ಗೆಳೆಯರು ಸಭಿಕರಾಗಿದ್ದಾಗ- ಮಬ್ಬಾದ ಒಂದು ನಿರಾಕಾರ ಮಂದೆಯಾಗಿದ್ದಾಗ ಪ್ರತಿನಿಧಿಸುತ್ತಿದ್ದುದು ಗುಂಪಿನ ಸ್ವಭಾವವನ್ನು; ಅಂದರೆ ಜಾತಿ- ಒಂದು ಸಮೂಹದ ಮನೋಧರ್ಮವಾಗಿ ತಳೆಯುವ- ‘ನಿತ್ಯಸಹಜ’ ಎನ್ನಬಹುದಾದ- ನಿಷ್ಕರುಣೆಯನ್ನು. ಸಭೆ ಮುಗಿಯಿತು. ಎಲ್ಲ ಆಚೆ ಬಂದರು. ಸೆನೆಟ್ ಹಾಲ್ ಹೊರಗಿನ ಮಬ್ಬುಗತ್ತಲಲ್ಲಿ ಈ ಗೆಳೆಯರೇ ಇಂದೂಧರನ ಜೊತೆ ಮತ್ತೆ ವಾದ ಮುಂದುವರೆಸುವಾಗ ಅವರ ನೋಟ ಬದಲಾಗದಿದ್ದರೂ, ಧಾಟಿ ಬದಲಾಗಿತ್ತು! ಒಳಗೆ ಏರುದನಿಯಲ್ಲಿ ದಬಾಯಿಸುವ ಗತ್ತಿನಲ್ಲಿದ್ದವರೇ ಇಲ್ಲಿ ನಯವಾಗಿ ಒಪ್ಪಿಸುವ ಧಾಟಿಗಿಳಿದಿದ್ದರು! ಅಂದರೆ ಮಂದೆಯ ಮನೋವೃತ್ತಿ ಕರಗಿ ಅವರ ವ್ಯಕ್ತಿಗತ ಔದಾರ್ಯ ಮರುಕಳಿಸಿತ್ತು…

ಇದೊಂದು ಕ್ಷುಲ್ಲಕ ಪ್ರಕರಣವೆಂದು ನಾನು ಬಲ್ಲೆ. ರೈತ, ದಲಿತ ಚಳವಳಿಗಳನ್ನು ಕುರಿತು ಪಂಚಮ 1983ರಲ್ಲಿ ಹೊರತಂದ ವಿಶೇಷಾಂಕದಲ್ಲಿ ಇದೇ ಘಟನೆಯನ್ನು ಉಲ್ಲೇಖಿಸಿ ನಾನು ಆಗ ಟಿಪ್ಪಣಿಯೊಂದನ್ನು ಬರೆಯದೇ ಹೋಗಿದ್ದಿದ್ದರೆ ಪ್ರಾಯಶಃ ಈಗ ನನಗೂ ಮರೆತುಹೋಗಿರುತ್ತಿತ್ತು! ಆದರೆ ಇಷ್ಟು ವರ್ಷಗಳ ನಂತರ, ಇದೀಗ ಚಳವಳಿಗಳನ್ನು ಒಟ್ಟಾರೆಯಾಗಿ ವಿವೇಚಿಸಲು ಯತ್ನಿಸುವಾಗ ಈ ಜುಜುಬಿ ಪ್ರಸಂಗವೇ ಹಲವು ಇಂಗಿತಗಳನ್ನು ಧ್ವನಿಸಬಲ್ಲ ಘಟನೆಯಂತೆ ಕಾಣುತ್ತಿದೆ. ಯಾಕೆಂದರೆ ರೈತಸಂಘಟನೆ, ಆಗ ಸ್ವತಃ ಸಮಾನತೆಗಾಗಿ, ಅನ್ಯಾಯದ ವಿರುದ್ಧ ಹೊಡೆದಾಡುತ್ತಿದ್ದರೂ ಹಳ್ಳಿಗಾಡಿನ ಚೌಕಟ್ಟಿನಲ್ಲಿ ಯಜಮಾನ ಸಮೂಹವನ್ನು ಪ್ರತಿನಿಧಿಸುತ್ತಿತ್ತು. ಹಾಗಾಗಿ ರೈತಸಂಘಟನೆಯ ಆಂತರ್ಯದಲ್ಲೇ ಒಂದು ವಿರೋಧಾಭಾಸವಿತ್ತು. ಮಧ್ಯಮಜಾತಿಗಳ ರೈತಸಮೂಹ ಹಳ್ಳಿಯಲ್ಲಿ ದಲಿತನನ್ನು ತುಳಿಯುತ್ತ, ಪಟ್ಟಣಕ್ಕೆ ಬಂದಾಗ ಸಮಾನ ವೇದಿಕೆಗಾಗಿ ಕೈ ಚಾಚುತ್ತಿತ್ತು! ಮತ್ತು ಎಂದೂ ಈ ದ್ವಂದ್ವದಿಂದ ಮುಕ್ತಿ ಸಿಗಲೇ ಇಲ್ಲವಾದ್ದರಿಂದ ರೈತಸಂಘ ಉದ್ದಕ್ಕೂ, ದಲಿತ ಸಂಘಟನೆಯಿಂದ ಆತ್ಮಸಾಕ್ಷಿ ಕೆಣಕುವ, ಮುಜುಗರದ ಪ್ರಶ್ನೆಗಳನ್ನು ಎದುರಿಸುತ್ತಲೇ ಹೋಗಬೇಕಾಯಿತು.

ಅದೇ ಪಂಚಮ ವಿಶೇಷಾಂಕದಲ್ಲಿ ಪ್ರೊ. ನಂಜುಂಡಸ್ವಾಮಿಯವರನ್ನು ದೇವನೂರ ಮಹಾದೇವ ಕೇಳಿದರು:

ರೈತಸಂಘದಲ್ಲಿ ಲಿಂಗಾಯಿತ ಒಕ್ಕಲಿಗ ಜನತೆಯೇ ಹೆಚ್ಚಾಗಿದ್ದು ಈ ರೈತ ಜನಸ್ತೋಮವು ಅಸ್ಪೃಶ್ಯ ಜನಾಂಗವನ್ನು ಅವಮಾನಿಸುತ್ತ, ವಂಚಿಸುತ್ತ, ತುಳಿಯುತ್ತ, ಕೊಲ್ಲುತ್ತ ಬರುತ್ತಿರುವ ಜಟಿಲ ಪರಿಸ್ಥಿತಿಯನ್ನು ಮಾನವೀಯಗೊಳಿಸುವ ಕಡೆ ತಮ್ಮ ಚಿಂತನೆ, ಕಾರ್ಯಕ್ರಮಗಳೇನು?

 ಪ್ರೊ. ನಂಜುಂಡಸ್ವಾಮಿ: ನಮ್ಮ ಹಳ್ಳಿಯ ಆಸ್ತಿ ಸಂಬಂಧವನ್ನು ಬದಲಾವಣೆ ಮಾಡುವುದೇ ನಿಮ್ಮ ಮೇಲಿನ ಪ್ರಶ್ನೆಗೆ ಉತ್ತರ. ಸಾಮಾಜಿಕ ಅಸಮಾನತೆ ನಿವಾರಣೆಗೆ ಶೋಷಕ- ಶೋಷಿತ ಇಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ…

ಅಂದರೆ ಇಂಥ ಮುಜುಗರದ ಪ್ರಶ್ನೆಗೆ, ಪ್ರೊಫೆಸರ್ ತಕ್ಷಣಕ್ಕೇನು ಮಾಡಬಹುದು, ತಲೆ ಕೆಡಿಸಿಕೊಳ್ಳಲೇ ಇಲ್ಲ; ಬದಲಿಗೆ ಅಷ್ಟೇನೂ ವಾಸ್ತವಿಕವಲ್ಲದ ಉನ್ನತ ಆದರ್ಶದ ಉತ್ತರ ನೀಡಿ ನುಣುಚಿಕೊಂಡಂತಿಲ್ಲವೇ?! ಇದಷ್ಟೇ ಅಲ್ಲ, ಇಡೀ ಸಂದರ್ಶನವೇ ಆ ಧಾಟಿಯಲ್ಲಿದೆ! ಮಹಾದೇವ ಎತ್ತಿದ ಜಾತಿ ವೈಷಮ್ಯದ ಎಲ್ಲ ಪ್ರಶ್ನೆಗಳಿಗೂ ಪ್ರೊಫೆಸರ್ ತಾವು ಪಡೆದ ಸಮಾಜವಾದಿ ತರಬೇತಿಯ ‘ಕಲಿತ’ ಉತ್ತರಗಳ ಮೂಲಕವೇ ಸಂಭಾಳಿಸುವಂತೆ ಕಾಣುತ್ತಾರೆಯೇ ಹೊರತು, ಹಳ್ಳಿಗಾಡಿನ ಮೂಲ ಮಾರ್ಪಾಡುಗಳ ಬಗ್ಗೆ ಗಂಭೀರವಾಗಿ ಧ್ಯಾನಿಸಿ, ಪರದಾಡಿದವರಂತಲ್ಲ.

ಪ್ರಶ್ನೋತ್ತರದ ಇನ್ನೂ ಕೆಲವು ತುಣುಕುಗಳು:

…ದಲಿತನೇನಾದರೂ ಧ್ವನಿ ಎತ್ತರಿಸಿದರೆ ರೈತಸಂಘ ಬಯಸುವ ‘ಹಳ್ಳಿಯೇ ಒಂದು ಘಟಕ’ ನಡೆಯುವುದಿಲ್ಲವಲ್ಲ?

ನಿಜ, ದಲಿತ ಸಮಾನತೆಗೆ ನಿಂತಾಗ ಅಲ್ಲಿ ಸಾಮರಸ್ಯ ಹೋಗಿಬಿಡ್ತದೆ….

ಹಾಗಾದರೆ ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿ ಆಚರಣೆಗೆ ತರುವ ತಾಕತ್ತು ರೈತಸಂಘಕ್ಕೆ ಇದೆಯೇ?

ಸಾವಿರಾರು ವರ್ಷದ ಜಡ್ಡನ್ನು ಒಂದೆರಡು ದಿನದಲ್ಲಿ ನಾಶ ಮಾಡುವ ಆಶಾವಾದವನ್ನೂ ನಾನು ಇಟ್ಟುಕೊಂಡಿಲ್ಲ. ಮೊದಲು ನಾನು ಉದಾಹರಣೆ ಆಗುವ ಮೂಲಕ…

ನೀವು ಬ್ಯಾಡ್ರಪ್ಪ. ಒಂದ್ಸಲ ಉಂಡಾದ ಮೇಲೆ ಸಾಕು. ನಾವು ಎಲ್ಲಿಂದ ತಂದಿಕ್ಕುವ? ನಾನು ಕೇಳ್ತಾ ಇರೋದು ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಆಚರಣೆಗೆ ಹೊರಟರೆ ರೈತಸಂಘಕ್ಕೆ ನುಂಗಲಾರದ ತುತ್ತಾಗುವುದಿಲ್ಲವೇ? ರೈತಸಂಘವೇ ಇಲ್ಲದಂತೂ ಆಗಬಹುದಲ್ಲವೇ?

ಆ ಮಟ್ಟಕ್ಕೆ ರೈತಸಂಘ ಹೋಗಿಲ್ಲ. ಇದು ನುಂಗಲಾರದ ತುತ್ತಾದರೂ ಮಾಡಲೇಬೇಕು. ಭಯಪಡಬೇಕಾಗಿಲ್ಲ…

ಕೆಲವು ಕಡೆ ರೈತಸಂಘದವರೇ ಅಸ್ಪೃಶ್ಯರಿಗೆ ಬಹಿಷ್ಕಾರ ಹಾಕಿರುವುದಾಗಿ ಸುದ್ದಿ ಇದೆಯಲ್ಲ?

ಎಲ್ಲಿ? ವಿವರ ಕೊಡಿ. We are not allowing such things to happen. We will expel that village from ರೈತಸಂಘ. ಗೊತ್ತೇನು?…

ಅದೇ ಪ್ರೊಫೆಸರ್ ಶೈಲಿ! ನಾವೆಲ್ಲ ಮೆಚ್ಚಿದ ಶೈಲಿ…

ವಾಸ್ತವವೆಂದರೆ, ಈ ಜಾತಿ ಸಂಬಂಧಗಳ ಕಗ್ಗಂಟನ್ನು ರೈತಸಂಘಟನೆ ಎಂದೂ ಕ್ರಿಯಾಶೀಲವಾಗಿ ಎದುರುಗೊಳ್ಳಲೇ ಇಲ್ಲ. ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂದು ನಂಜುಂಡಸ್ವಾಮಿಯವರು ಘೋಷಿಸಿದರೂ, ಅದು ಕೇವಲ ಮಾತಿನ ಶೈಲಿಯಾಯಿತೇ ಹೊರತು ರೈತಸಂಘದ ಕಾರ್ಯಕ್ರಮವಲ್ಲ. ಚಳವಳಿಯ ಉಚ್ಛ್ರಾಯ ಸ್ಥಿತಿಯಲ್ಲಿ ಸಂಘಟನೆ ಆಶ್ರಯದಲ್ಲಿ ಅನೇಕ ಅಂತರ್ಜಾತಿ ಮದುವೆಗಳು ನಡೆದಿದ್ದು ಹೌದು. ಅವನ್ನೇ ರೈತಸಂಘದ ಜಾತಿವಿನಾಶ ಕಾರ್ಯಕ್ರಮವಾಗಿ ಕಾಣುವವರೂ ಇದ್ದಾರೆ. ಆದರೆ ಒಂದು ಕಡೆ ಇದು, ರೈತ- ದಲಿತ ಚಳವಳಿಗಳೆರಡೂ ಪರಸ್ಪರ ಸೆಣೆಸುತ್ತ, ಬೆನ್ನುಜ್ಜಿಕೊಳ್ಳುತ್ತ, ಕೆರೆಯುತ್ತ ಒಂದರಿಂದೊಂದು ಕೊಟ್ಟು ಪಡೆದು ಮಾಡಿದ್ದರ ಪರಿಣಾಮವಾಗಿದ್ದಂತೆಯೇ ಮತ್ತೊಂದೆಡೆ ರೈತ ಮುಖಂಡರ ಸಮಾಜವಾದಿ ತಿಳುವಳಿಕೆಯೂ ಇದರ ಬೆನ್ನಿಗಿತ್ತು. ಆದರೆ ಅದರಾಚೆಗೆ ಜಾತಿ ತಾರತಮ್ಯದ ಪ್ರಶ್ನೆ ರೈತಸಂಘಟನೆಗೆ ಎಂದೂ ಜೀವನ್ಮರಣದ ಕಾಳಜಿ ಆಗಲೇ ಇಲ್ಲ. 1980ರಲ್ಲಿ ಲಂಕೇಶರು ರೈತಚಳವಳಿ ಬಗ್ಗೆ ಬರೆಯುವಾಗ ಚರ್ಚೆಗ ಎತ್ತಿಕೊಂಡ ಪ್ರಶ್ನೆಗಳಿಗೆ ಇದೇ ಹಿನ್ನೆಲೆಯಿತ್ತು.

(ಮುಂದುವರೆಯುವುದು)

1 thought on “ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1

  1. M.Lingaraju

    ಚನ್ನಾಗಿ ಬಂದಿದೆ..
    ಮುಂದುವರೆದ ಭಾಗ ಯಾವಾಗ ಪ್ರಕಟಗೊಳ್ಳುತ್ತದೆ ಎಂದು ತಿಳಿಸಿದರೆ, ಒಳ್ಳೆಯದು.

    Reply

Leave a Reply

Your email address will not be published.