RSS :ಬಾಲ್ಯವಿವಾಹ, ಮಡೆಸ್ನಾನ, ಮರ್ಯಾದಾ ಹತ್ಯೆ,… ಏನನ್ನುತ್ತಾರೆ?

-ಬಿ. ಶ್ರೀಪಾದ್ ಭಟ್

“ಆರ್.ಎಸ್.ಎಸ್. ಗಳ ದೇಶಭಕ್ತಿ ಮತ್ತು ಧರ್ಮ ಶ್ರದ್ಧೆ ಗಾಂಧೀಜಿಯಲ್ಲಿ ಶಂಕೆ ಮೂಡಿಸುತ್ತಿದ್ದವು. ಆರ್.ಎಸ್.ಎಸ್. ಗಳ ಈ ದೇಶ ಭಕ್ತಿ, ಧರ್ಮಶ್ರದ್ಧೆಯ ಇನ್ನೊಂದು ಮುಖವೇ ಅನ್ಯಧರ್ಮ ದ್ವೇಷ ಎಂದು ಗಾಂಧೀಜಿ ತಿಳಿದಿದ್ದರು. ಬರೀ ದೇವಾಲಯಗಳನ್ನು ಕಟ್ಟಿಸುವುವನು ಹೇಗೆ ಕಂದಾಚಾರದ, ಅಸಹನೆಯ ವ್ಯಕ್ತಿಯಾಗುತ್ತಾನೋ ಹಾಗೆಯೇ ಪರಂಪಾರಗತ ಧರ್ಮವನ್ನು ನಂಬಿದವನು ಜಾತಿಪದ್ಧತಿ ಮತ್ತು ಶೋಷಣೆಯನ್ನು ನೆಚ್ಚುತ್ತಾನೆ ಎಂದು ತಿಳಿದಿದ್ದರು. ಗಾಂಧೀಜಿಯ ಕಣ್ಣೆದುರಿಗೇ ಹಿಂದೂ ಧರ್ಮದ ರಕ್ಷಣೆಗೆಂದು ಹುಟ್ಟಿಕೊಂಡ, ಆರ್.ಎಸ್.ಎಸ್ ಮುಸ್ಲಿಂ ವಿರೋಧಿ ಗುಂಪಾಗಿ, ಸತ್ಯವನ್ನು ತಿರುಚಿ ಸುಳ್ಳುಗಳನ್ನು ನಂಬುವ ಫ಼್ಯಾಸಿಸ್ಟ್ ಗುಂಪಾಗಿ ಬೆಳೆದದ್ದು ಇತಿಹಾಸ.” — ಪಿ. ಲಂಕೇಶ್ ( ಟೀಕೆ ಟಿಪ್ಪಣಿ – 3 ನೇ ಸಂಪುಟ)

“ಬಡವರ ರಕ್ತ ಹೀರುವ ಬ್ರಾಹ್ಮಣರು ಮತ್ತು ಸಾಧುಗಳನ್ನು, ಹೆಣ್ಣು ಕುಲದ ಮೇಲೆ ದಬ್ಬಾಳಿಕೆ ನಡೆಸುವ ಮೇಲ್ಜಾತಿಯ ಪ್ರಭುತ್ವಕ್ಕೆ ಪ್ರತಿರೋಧ ತೋರಲು ಶೂದ್ರವರ್ಗ ತಲೆ ಎತ್ತಿ ನಿಲ್ಲುವುದು.” ಸ್ವಾಮಿ ವಿವೇಕಾನಂದ (“ಸಂಗ್ರಹ” ,  ಕಲ್ಕತ್ತ 1964)

“ದೇಶದಾದ್ಯಾಂತ ಕೋಮುಗಲಭೆಗಳು ಶೇಕಡ 65 ರಷ್ಟು ಇಳಿಮುಖವಾಗಿದ್ದರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಕೋಮುಗಲಭೆಗಳು ಶೇಕಡ 90 ರಷ್ಟು ಜಾಸ್ತಿಯಾಗಿವೆ.” ನಿವೃತ್ತ ನ್ಯಾಯಾಧೀಶ ಸಲ್ಡಾನ ( 12.1.2012 ಡೆಕ್ಕನ್ ಹೆರಾಲ್ಡ್ ವರದಿ)

70ರ ದಶಕದಲ್ಲಿ ನಾವೆಲ್ಲ ಸರ್ಕಾರಿ ಸ್ಕೂಲಿನಲ್ಲಿ ಓದುತ್ತಿದ್ದಾಗ ಆಗ ಬೆಳಗಿನ ಹೊತ್ತಿನಲ್ಲಿ ನಮಗೆ ಶಾಲೆಯ ಆಟದ ಮೈದಾನದಲ್ಲಿ ದಿನಂಪ್ರತಿ ಕಾಣುವ ಒಂದು ಸಾಮಾನ್ಯ ದೃಶ್ಯವೆಂದರೆ ಖಾಕಿ ಚೆಡ್ಡಿ ಹಾಕಿಕೊಂಡು ಕವಾಯತು ಮಾಡುತ್ತಿದ್ದ ಸಣ್ಣ ಹುಡುಗರು ಹಾಗೂ ಯುವಕರು. ಇವರೆಲ್ಲರ ಮುಖದಲ್ಲಿ ಒಂದು ರೀತಿಯ ಕಠೋರತೆ ಇರುತಿತ್ತು. ನಮಗೆ ಆಶ್ಚರ್ಯವೆಂದರೆ ಈ ಕಠೋರತೆಗೆ ವಯಸ್ಸಿನ ಭೇದವಿರಲಿಲ್ಲ. ನಾವೆಲ್ಲ ಕುತೂಹಲದಿಂದ ಅವರ ಅಕ್ಕ ಪಕ್ಕ ಸುಳಿದಾಡುತ್ತಿದ್ದಾಗಲೆಲ್ಲ ಇವರಿಗೆಲ್ಲ ಮುಖಂಡನಾದವನು ಹೇಳುತ್ತಿದ್ದ “ಅವರೇನಾದರು ಎದುರಿಗೆ ಬಂದರೆ ನೀವು ಪ್ರತಿಯಾಗಿ ಅವರನ್ನು ದೃಷ್ಟಿಸಿ ನೋಡಿ, ಸದಾ ಕಾಲ ಕೈಯಲ್ಲಿ ಒಂದು ಕೋಲನ್ನು ಇಟ್ಟಿಕೊಳ್ಳಿ, ಏನಾದರೂ ನಿಮಗೆ ಸಂಶಯವೆನಿಸಿದರೆ ಆ ಕೋಲನ್ನು ಅವರ ಮೇಲೆ ಬೀಸಲು ಹಿಂದುಮುಂದು ನೋಡಬೇಡಿ” ಎಂಬ ಮಾತುಗಳು ನಮ್ಮ ಕಿವಿಗೆ ಬಿದ್ದು ನಮಗೆಲ್ಲ ಭಯಮಿಶ್ರಿತ ಕುತೂಹಲ. ಯಾರು ಅವರೆಂದರೆ? ಏಕೆ ಅವರ ಮೇಲೆ ದಂಡವನ್ನು ಬೀಸಬೇಕು? ಇತ್ಯಾದಿಯಾಗಿ ಆಗ ಶಾಲೆ ಹುಡುಗರಾಗಿದ್ದ ನಮ್ಮಲ್ಲಿ ಗೊಂದಲಗಳಿದ್ದವು.

ಏಳೆಂಟು ವರ್ಷಗಳ ಹಿಂದೆ ಪರಿಚಯದವರೊಬ್ಬರ ಮಗನೊಬ್ಬ ಈ ಆರ್.ಎಸ್.ಎಸ್. ನವರು ನಡೆಸುತ್ತಿದ್ದ ರೆಸಿಡೆನ್ಸಿ ಶಾಲೆಯೊಂದರಲ್ಲಿ ಓದುತ್ತಿದ್ದ. ಅವನನ್ನು “ಏನಯ್ಯ ಓದುವುದನ್ನು ಬಿಟ್ಟು ಮತ್ತೇನನ್ನು ಕಲಿಯುತ್ತಿದ್ದೀಯ” ಎಂದು ಕುತೂಹಲದಿಂದಲೇ ಕೇಳಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗ ಹೇಳಿದ್ದು” ನಮಗೆಲ್ಲ ಕವಾಯತನ್ನು, ಲಾಠೀ ಬೀಸುವುದನ್ನು, ಅವರೇನಾದರು ಎದುರಿಗೆ ಬಂದರೆ ಸರಿಯಾಗಿ ಲಾಠಿ ತಿರುಗಿಸಿ ಹೇಗೆ ಬೀಸಬೇಕು ಎಂದು ಕಲಿಯುತ್ತಿದ್ದೇನೆ.”

ಮೇಲಿನೆರೆಡು ಘಟನೆಗಳ ಅಂತರ ಸುಮಾರು 25 ರಿಂದ 27 ವರ್ಷಗಳು. ಎರಡು ತಲೆಮಾರು ಬದಲಾಗಿದೆ. ಆದರೆ ಸಂಘಟನೆ ಬದಲಾಗಿಲ್ಲ. ಆರ್.ಎಸ್.ಎಸ್. ಹಾಗೆಯೇ ಇದೆ.  ಚಿಂತನೆಗಳು ಬದಲಾಗಿಲ್ಲ. ಅಗ ಅವರೆಂದರೆ ಮುಸ್ಲಿಮರು. ಈಗಲೂ ಅವರೆಂದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು. ಇನ್ನೂ ನಾವು 20ರ ದಶಕಕ್ಕೆ ಹೋದರೂ ಕೂಡ ಅಷ್ಟೆ ಆಗ ಸಾವರ್ಕರ್ ಬರೆದ  “ಹಿಂದೂ ಅಂದರೆ ಯಾರು”?  ಎನ್ನುವ ವ್ಯಾಖ್ಯಾನದಿಂದ ಶುರುವಾದ ಇವರ ಹಿಂದೂ ಧರ್ಮದ ಮೇಲಿನ ಉಗ್ರಾಭಿಮಾನ ಹಾಗೂ ಪರಧರ್ಮದ ಬಗೆಗಿನ ಇನ್ನಿಲ್ಲದ ದ್ವೇಷದ ವಿಷವಾಹಿನಿ 80 ವರ್ಷಗಳ ನಂತರವೂ ಇಂದಿಗೂ ಹರಿಯುತ್ತಿದೆ ತಲೆಮಾರಿನಿಂದ ತಲೆಮಾರಿಗೆ. ಅಂತಹ ತೀವ್ರವಾದ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನ ನಡುವೆಯೂ 1927 ರಲ್ಲಿ ನಾಗಪುರದಲ್ಲಿ  “ಹಿಂದೂ ಡಾಕ್ಟರ್ ಒಬ್ಬರ ಮನೆಯ ಮೇಲೆ ಯಾರೋ ಕೆಲವರು ಅಲ್ಲಾಹೋ ಅಕ್ಬರ್ ಎಂದು ಕೂಗುತ್ತಾ ಕಲ್ಲು ತೂರಾಟ ನದೆಸಿದರು” ಎಂದು ಗುಲ್ಲೆಬ್ಬಿಸಿ ಕೋಮುಗಲಭೆಯನ್ನು ಹುಟ್ಟು ಹಾಕುವುದರಿಂದ ಹಿಡಿದು 2012 ರ ಸಿಂಧಗಿಯಲ್ಲಿ ಶ್ರೀರಾಮ ಸೇನೆಯು ಪಾಕಿಸ್ತಾನ ಬಾವುಟ ಹಾರಿಸಿ ಮತ್ತೊಂದು ಕೋಮುಗಲಭೆಗಳಿಗೆ ಸಂಚು ರೂಪಿಸುವವರೆಗೂ 85 ವರ್ಷಗಳ ಇವರ ಈ ಕರ್ಮಕಾಂಡದ ಇತಿಹಾಸವಿದೆ. ತಮ್ಮ ಅನೇಕ ಚಿಂತನ ಮಂಥನ ಕಾರ್ಯಕ್ರಮಗಳಲ್ಲಿ, ಬೈಠಕ್ ಗಳಲ್ಲಿ ಇವರೆಂದೂ ಸಮಕಾಲೀನ ವಿಷಯಗಳನ್ನಾಗಲಿ, ಚಿಕಿತ್ಸಕ ದೃಷ್ಟಿಕೋನಗಳ ಸಂವಾದಗಳಾಗಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬಗೆಗೆ ಶಿಕ್ಷಣವಾಗಲಿ ಕಳೆದ 80 ವರ್ಷಗಳ ಆರ್.ಎಸ್.ಎಸ್. ಇತಿಹಾಸದಲ್ಲಿ ನಡೆದ ಪುರಾವೆಯೇ ಇಲ್ಲ. ಸಂಪೂರ್ಣ ಪುರುಷ ಕೇಂದ್ರಿತ ಸಂಘಟನೆಯನ್ನಾಗಿ ರೂಪಿಸಿಕೊಂಡಿರುವ ಆರ್.ಎಸ್.ಎಸ್. ಎಂದು ಪ್ರಗತಿಪರವಾಗಿ ಕ್ಷೀಣ ಧ್ವನಿಯನ್ನು ಹೊರಡಿಸುವ ಯಾವ ಅವಕಾಶವನ್ನೂ ಅದು ನೀಡಿಲ್ಲ. ಅಲ್ಲಿ ಪ್ರಶ್ನೆಗಳೇ ಇಲ್ಲ. ಇರುವುದು ಒಂದೇ ಅದು ಕೇವಲ ಹಿಂದೂಗಳನ್ನೊಳಗೊಂಡ ಆಖಂಡ ಭಾರತದ ಮಂತ್ರ ಜಪ. ಜಾತಿ ವಿನಾಶದ ಮಾತು ಬಿಡಿ ಅದು ದೂರ ಉಳಿಯಿತು, ಇಂದಿಗೂ ತಮ್ಮ ಹಿಂದೂ ಧರ್ಮದ ಅಡಿಯಲ್ಲಿ ಜರುಗುತ್ತಿರುವ ಬಾಲ್ಯ ವಿವಾಹಗಳು, ಮಡೆ ಸ್ನಾನದಂತಹ ಮೂಢ ಆಚರಣೆಯ ಬಗ್ಗೆ, ಅಂತರ್ಜಾತಿ ವಿವಾಹಿತರನ್ನು ಮರ್ಯಾದೆಯ ಹೆಸರಿನಲ್ಲಿ ಸಾಯುಸುತ್ತಿರವುದರ ಬಗೆಗೆ  ಯಾವ ಆರ್.ಎಸ್.ಎಸ್. ಸ್ವಯಂಸೇವಕರೂ, ಮುಖಂಡರೂ ಬಾಯಿಬಿಟ್ಟಿಲ್ಲ. ಟೀಕಿಸಿಲ್ಲ. ಇದು ಇವರ ಹಿಂದೂ ಧರ್ಮದ ಪುನರುತ್ಥಾನ ಪರಿ!! ಇದೇ ಜನ ಸಮಯ ಸಿಕ್ಕಾಗಲೆಲ್ಲ ಶಾಬಾನು ಪ್ರಕರಣ, ಇಸ್ಲಾಂನ ಮೌಢಾಚರಣೆಗಳು, ಅಲ್ಲಿನ ಬುರ್ಖಾ ಪದ್ಧತಿಗಳ ಬಗ್ಗೆ ಪುಂಖಾನುಪಂಖವಾಗಿ ಕೂಗುತ್ತಿರುತ್ತಾರೆ.

ಇದು ಇವರ ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೆ ಬೇರೆಯವರ ಎಲೆಯಲ್ಲಿ ನೊಣ ಓಡಿಸುವ ಶೈಲಿ. ಇದರ ಜೊತೆಗೆ  “ತಂದೆ ತಾಯಿ, ಗೌರವಿಸಿ, ಪರಂಪರೆ ಶ್ರೇಷ್ಟತೆಯನ್ನು ಮರೆಯಬೇಡಿ ಸಂಪ್ರದಾಯ ನಮ್ಮ ಬದುಕಿನ ತಳಪಾಯ” ಎನ್ನುವ ಸಿಹಿಲೇಪಿತ ಮಾತುಗಳ ಮೂಲಕ ಮುಗ್ಧ ಮೋಡಿಗೊಳಗಾದ ತಂದೆ ತಾಯಿಗಳು ಅಲ್ಲಿ ತಮ್ಮ ಮಕ್ಕಳು ಶಿಷ್ಟವಂತರಾಗಿಯೂ, ಸಹನಶೀಲರಾಗಿಯೂ ರೂಪಿತಗೊಳ್ಳುತ್ತಾರೆ ಎನ್ನುವ ಕನಸಿನೊಂದಿಗೆ ಆರ್.ಎಸ್.ಎಸ್. ಸಂಪರ್ಕಕ್ಕೆ ಬಿಡುತ್ತಾರೆ. ನಂತರ ಈ  ತಮ್ಮೆಲ್ಲ ಮೇಲಿನ ದ್ವೇಷಪೂರಿತ ಚಿಂತನೆಗಳನ್ನು ಬಹುಸಂಖ್ಯಾತ ಹಿಂದೂಗಳಲ್ಲಿ ಸದಾಕಾಲ ತುಂಬಿರುವಂತೆ ಮಾಡಲು ಇವರು ಬಳಸಿಕೊಳ್ಳುವುದು ಕಡಲಾಚೆಯಿಂದ ಬಂದ ಮೊಘಲರ ಆಕ್ರಮಣ. ಇದು ಕೇವಲ ರಾಜ್ಯ ವಿಸ್ತರಣೆ, ಅಧಿಕಾರ ಕಬಳಿಕೆಯ ಭಾಗವಾಗಿದ್ದ  ಈ ಯುದ್ದಗಳನ್ನು ಅಸಹಿಷ್ಣತೆ ಹಾಗೂ ಮುಸ್ಲಿಂ ದ್ವೇಷದ ಚಿಂತನೆಗಳನ್ನಾಗಿ ರೂಪಿಸಿರುವುದರಿಂದ ಶುರುವಾಗಿ ನಂತರ ದೇಶಾಭಿಮಾನದ ಹೆಸರಿನಲ್ಲಿ ಪಾಕಿಸ್ತಾನವನ್ನು ನೆಪ ಮಾಡಿಕೊಂಡು ಎರಡು ಧರ್ಮಗಳ ಮಧ್ಯೆ ಹುಟ್ಟು ಹಾಕಿದ ಕಂದಕಗಳು, ಕೊನೆಗೆ ಗುಜರಾತ್ ನಲ್ಲಿ ಮುಸ್ಲಿಂರ ಹತ್ಯಾಕಾಂಡಕ್ಕೆ ತಲುಪಿ ಇದರ ರೂವಾರಿ ನರೇಂದ್ರ ಮೋದಿ “ಮಿಯ್ಯಾ ಮುಶ್ರಾಫ್, ಮೇಡಮ್ ಮೇರಿಅಮ್, ಮೈಖೆಲ್ ಲಿಂಗ್ಡೋ” ಎಂದು ಅತ್ಯಂತ ಕ್ರೂರವಾಗಿ ಮಾತನಾಡುವಷ್ಟರ ಮಟ್ಟಿಗೆ ಬಂದು ತಲುಪಿದೆ.

ಈ ಆರ್.ಎಸ್.ಎಸ್. ಗುಂಪಿಗೆ ಈ ಮುಸ್ಲಿಂದ್ವೇಷದ ಮೂಲಭೂತ ಕಾರಣ ಇವರಿಗೆ ತಮ್ಮ ಹಿಂದೂ ಧರ್ಮದ ಮೇಲಿರುವ ಅತ್ಯಂತ ಅಪಾಯಕಾರಿಯಾದ, ಆತಂಕಕಾರಿಯಾದ, ಜೀವವಿರೋಧಿಯಾದ ಅತ್ಯುಗ್ರ ಅಭಿಮಾನ. ಈ ಸದರಿ ಧರ್ಮದಲ್ಲಿ ಅಂತರ್ಗತವಾಗಿರುವ ಜಾತೀಯತೆಯ ಕ್ರೌರ್ಯದ ಬಗ್ಗೆ, ತಳ ಸಮುದಾಯಗಳ ಶೋಷಣೆಯ ಬಗ್ಗೆ ಈ ಆರ್.ಎಸ್.ಎಸ್. ನವರಿಗೆ ಇರುವ ಅಪಾರ ನಂಬುಗೆ. ಪುರೋಹಿತಶಾಹಿಗಳ ಅಮಾನವೀಯ ಚಿಂತನೆಗಳ ಬಗ್ಗೆ ಇನ್ನಿಲ್ಲದ ಭಕ್ತಿ. ಸಾರ್ವಜನಿಕ ಜೀವನದಲ್ಲಿ ಧಾರ್ಮಿಕತೆಯನ್ನು ಬಳಸುವುದಕ್ಕೆ ಇನ್ನಿಲ್ಲದ ಉತ್ಸಾಹ, ಆವೇಶಗಳನ್ನು ತೋರುವ ಆರೆಸಸ್ ಅದಕ್ಕಾಗಿ ಅವರು ಆಶ್ರಯಿಸುವುದು ವೇದ,ಪುರಾಣಗಳನ್ನು, ಅಲ್ಲಿಂದ ಅವರು ಹೆಕ್ಕಿಕೊಳ್ಳುವುದು ಮನುವಾದಿ, ಸನಾತನ ಧರ್ಮದ ಹುಸಿ ಶ್ರೇಷ್ಟತೆಯನ್ನು ಸಾರುವ ಅಮಾನವೀಯ ವೈದಿಕ ಚಿಂತನೆಗಳನ್ನು. ಭ್ರಾಹ್ಮಣ ಮಠಗಳನ್ನು. ಆದರೆ  ತಮ್ಮ ಜೀವನವನ್ನೇ ಪ್ರಯೋಗವನ್ನಾಗಿ ಮಾಡಿಕೊಂಡು ಧಾರ್ಮಿಕತೆಯನ್ನು ಬಳಸಿ ಅಧ್ಯಾತ್ಮದ ವಿವಿಧ ಮಜಲುಗಳನ್ನು, ಅದೇ ಅಧ್ಯಾತ್ಮವನ್ನು ಬಳಸಿ ಸತ್ಯದ ವಿವಿಧ ಮುಖಗಳನ್ನು ನಿರಂತರವಾಗಿ ಶೋಧಿಸಿದ “ರಾಮಕೃಷ್ಣ ಪರಮಹಂಸ”ರನ್ನು ಆರ್.ಎಸ್.ಎಸ್. ನವರು ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಏಕೆಂದರೆ ಪ್ರತಿಯೊಂದು ಚಿಂತನೆಗಳೂ ಸತ್ಯಶೋಧನೆಗೊಳಪಡಲೇಬೇಕು, ನಿಕಷನಕ್ಕೆ, ಪ್ರಯೋಗಗಳಿಗೆ ಒಳಪಟ್ಟು ಆ ಪ್ರಯೋಗದಲ್ಲಿ ಬೆಂದು ಹೊರಬಂದಂತಹ ತತ್ವಮೀಮಾಂಸೆಯನ್ನು ಮಾತ್ರ ರಾಮಕೃಷ್ಣ ಪರಮಹಂಸರು ಒಪ್ಪಿಕೊಳ್ಳುತ್ತಿದ್ದರು. ಇದಕ್ಕಾಗಿಯೇ ಅಲ್ಲವೆ ಅನೇಕ ಪ್ರಯೋಗಗಳ ನಂತರ ಪರಮಹಂಸರು ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳನ್ನು ಕೂಡ ಆಚರಿಸುತ್ತಿದ್ದರು. ಇವರು ಹೇಳುತ್ತಿದ್ದುದು ಎಲ್ಲಾ ದೇವರು ಒಂದೇ. ಇದೆಲ್ಲ ಆರೆಸಸ್ ನವರಿಗೆ ಅರಗಿಸಿಕೊಳ್ಳಲೂ ಸಾಧ್ಯವಾಗದು. ಇವರು ಪರಮಹಂಸರ ಈ ಸಂಕೀರ್ಣತೆಯ ಆಧ್ಯಾತ್ಮವನ್ನು ಮುಟ್ಟದೆ ಪರಮಹಂಸರ ಪ್ರಿಯ ಶಿಷ್ಯರಾದ ವಿವೇಕಾನಂದರನ್ನು ಗಟ್ಟಿಯಾಗಿ ಹಿಡಿದುಕೊಂಡರು. ವಿವೇಕಾನಂದರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಸರ್ವಧರ್ಮ ಸಮಾನತೆ, ಭ್ರಾತೃತ್ವ ಮನೋಧರ್ಮಕ್ಕೆ ಸಂಘಪರಿವಾರದವರು ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು, ವಿವೇಕಾನಂದರು ಪ್ರತಿಪಾದಿಸಿದ ನ್ಯಾಯ,ನೀತಿಗಳನ್ನೊಳಗೊಂಡ, ಮಾನವೀಯತೆಯ ದೇಶಪ್ರೇಮವನ್ನು ಅತ್ಯಂತ ಋಣಾತ್ಮವಾಗಿ ಬಳಸಿಕೊಂಡು ವಿವೇಕಾನಂದರ ಜೀವಪರ ಚಿಂತನೆಗಳನ್ನೇ ಅಪಮೌಲ್ಯಗೊಳಸಿದರು. ಇಂದು ಬಲಪಂಥೀಯರು ಮಾನವತಾವಾದಿ ವಿವೇಕಾನಂದರನ್ನು ತಮಗೆ ಬೇಕಾದ ಹಾಗೆ ಒಗ್ಗಿಸಿಕೊಂಡ ರೀತಿನೀತಿಗಳೇ ಖಂಡನೆಗೆ, ತಿರಸ್ಕಾರಕ್ಕೆ ಅರ್ಹವಾದವುಗಳು. ಕಳೆದ ಅನೇಕ ದಶಕಗಳಿಂದ ಪ್ರಗತಿಪರ ಚಿಂತಕರು ಇದನ್ನು ಸಾಕ್ಷಿ ಸಮೇತ ಹೇಳುತ್ತಾ ಬಂದಿದ್ದಾರೆ.

ಆದರೆ ಬದಲಾದ ಕಾಲಘಟ್ಟದಲ್ಲಿ, ದೇಶ ಸ್ವಂತಂತ್ರಗೊಂಡನಂತರ ನೆಹರೂ ಹಾಗೂ ಅಂಬೇಡ್ಕರ್ ರವರು ಭಾರತ ದೇಶವನ್ನು ಜಾತ್ಯಾತೀತ, ಸೆಕ್ಯುಲರ್ ರಾಷ್ಟ್ರವನ್ನಾಗಿಯೂ, ಇಲ್ಲಿ ಸರ್ವಧರ್ಮಗಳಿಗೆ ಸಮಾನ ಅವಕಾಶವನ್ನು ನೀಡಿ ಸಂವಿಧಾನವೇ ಈ ದೇಶದ ಅಧಿಕೃತ ಕಾನೂನನ್ನಾಗಿಯೂ, ಇದಕ್ಕೆ ಸದಾಕಾಲ ಕಾವಲಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ಇರುವಂತೆ ಶಾಸನವನ್ನು ರೂಪಿಸಿ ಭಾರತವನ್ನು ಒಂದು ಮಾದರಿ ಗಣತಂತ್ರ ದೇಶವನ್ನಾಗಿಯೂ ರೂಪಿಸಿಬಿಟ್ಟರು. ಇದು 50ರ ದಶಕದಲ್ಲಿ  ಆರ್.ಎಸ್.ಎಸ್. ಮುಂದಾಳುಗಳಿಗೆ ಇನ್ನಿಲ್ಲದ ಅಘಾತವನ್ನುಂಟುಮಾಡಿತ್ತು. ಅತ್ಯಂತ ಕುತೂಹಲದ ವಿಷಯವೆಂದರೆ ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೂ ನಡೆದ ಕೋಮುಗಲಭೆಗಳಲ್ಲಿ ಆರ್.ಎಸ್.ಎಸ್. ಎಂದೂ ಮುಂಚೂಣಿಯಲ್ಲಿ ಇರಲೇ ಇಲ್ಲ ಹಾಗೂ ಇರುತ್ತಲೂ ಇಲ್ಲ!. ತನ್ನನ್ನು ತಾನು ಸಾಂಸ್ಕ್ರತಿಕ ಸಂಘಟನೆಯಾಗಿ ಮಾತ್ರ ಐಡೆಂಟಿಟಿ ಉಳಿಸಿಕೊಂಡು ತನ್ನ ಎಲ್ಲ ಮೇಲಿನ ಕರ್ಮಠ ಚಿಂತನೆಗಳಿಗೆ,  ಬೌದ್ಧಿಕ  ಪ್ರಚಾರಕ್ಕಾಗಿ ತನ್ನ ಶಾಖಾ ಮಠಗಳನ್ನು ಬಳಸಿಕೊಂಡು ಈ ಅಸಹಿಷ್ಣುತೆಯ ಕರ್ಮಠ ಚಿಂತನೆಗಳನ್ನು ಬಹಿರಂಗವಾಗಿ ವ್ಯವಸ್ಥೆಯಲ್ಲಿ ಪ್ರಯೋಗಿಸಲು ಹಾಗೂ ತಮ್ಮ ಈ ಹಿಂಸಾತ್ಮಕ ಕಾರ್ಯಸಾಧನೆಗಾಗಿ ಇದು ಬಳಸಿಕೊಂಡಿದ್ದು ಶೂದ್ರ ಹಾಗು ಹಿಂದುಳಿದ ಸಮುದಾಯಗಳನ್ನ. ಇದಕ್ಕೆ ಸಾಕ್ಷಿಯಾಗಿ ಸ್ವತಂತ್ರ ಭಾರತದಲ್ಲಿ ಕಳೆದ 64 ವರ್ಷಗಳಲ್ಲಿ ನಡೆದ ಕೋಮುಗಲಭೆಗಳಲ್ಲಿ, ದೊಂಬಿಗಳಲ್ಲಿ ಆರ್.ಎಸ್.ಎಸ್. ಗೆ ಸೇರಿದ ಯಾವುದೇ ಸಂಘ ಪ್ರಚಾರಕನೂ, ಸ್ವಯಂಸೇವಕನೂ ಹಾಗೂ ಸದಸ್ಯನೂ ಆರೋಪಿಯಾಗಿಲ್ಲ ಹಾಗೂ ಯಾವುದೇ ರೀತಿಯ ನ್ಯಾಯಾಂಗ ವಿಚಾರಣೆಗೂ ಒಳಗಾಗಿಲ್ಲ. ಆದರೆ ಇವರ ಬೂಟಾಟಿಕೆಯ, ತಮ್ಮ ಕಾರ್ಯ ಸಾಧನೆಗಾಗಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕುತಂತ್ರಕ್ಕೆ ಬಲಿಯಾದದ್ದು  ಹಿಂದುಳಿದ, ದಲಿತ ಸಮುದಾಯ. ಇವರನ್ನು ತಮ್ಮ ಮಾತೃ ಸಂಘಟನೆ ಭ್ರಾಹ್ಮಣಶಾಹೀ ವ್ಯಕ್ತಿತ್ವದ ಆರ್.ಎಸ್.ಎಸ್. ಒಳಗೆ ಕೂಡ ಬಿಟ್ಟುಕೊಳ್ಳದೆ ಇವರಿಗೋಸ್ಕರ ವಿ.ಎಚ್.ಪಿ., ಬಜರಂಗದಳಗಳನ್ನು ಹುಟ್ಟಿಹಾಕಿ ಇವರ ಈ  ಸಂಘಟನೆಗೆ ಸೇರಿದ ಅಮಾಯಕ ಹಿಂದುಳಿದ ಸಮುದಾಯದ ಹುಡುಗರೆಲ್ಲ ಕಳೆದ 40 ವರ್ಷಗಳಿಂದ ಕೋಮು ಗಲಭೆಗಳಲ್ಲಿ, ನ್ಯಾಯಾಂಗ ವಿಚಾರಣೆಗಳಲ್ಲಿ ಸಿಲುಕಿಕೊಂಡು ನಾಶವಾಗಿದ್ದಾರೆ, ಜೀವ ತೆತ್ತಿದ್ದಾರೆ.

ಇಷ್ಟೆಲ್ಲ ಚರ್ವಿತ ಚರ್ವಣ ವಿಷಯಗಳನ್ನು ಅನಿವಾರ್ಯವಾಗಿ ಈಗಲೂ ವಿಧಿ ಇಲ್ಲದೆ ಪದೇ ಪದೇ ಹೇಳಲೇಬೇಕಾಗಿದೆ. ಏಕೆಂದರೆ:

ಮೊದಲನೆಯದಾಗಿ ಇತ್ತೀಚೆಗೆ ಕಾನೂನಿನ ಕುಣಿಕೆ ಬಲವಾಗುತ್ತಿರುವುದನ್ನು ಗಮನಿಸಿರುವ ಸಂಘ ಪರಿವಾರಕ್ಕೆ, ತಮ್ಮ ಎಂದಿನ ಪರಧರ್ಮ ಅಸಹಿಷ್ಣುತೆಯ, ಅಲ್ಪಸಂಖ್ಯಾತ ದ್ವೇಷದ ಮಾಮೂಲಿ ರಾಗಗಳು ಎಂದಿನ ಪ್ರತಿಫಲವನ್ನು ತಂದುಕೊಡುತ್ತಿಲ್ಲ ಎನ್ನುವುದು ಮನವರಿಕೆಯಾಗತೊಡಗಿದೆ. ತಮ್ಮ ಹಳೇ ಚಾಳಿಯನ್ನು ನೇರವಾಗಿಯೇ ಮುಂದುವರಿಸಿದರೆ ನ್ಯಾಯಾಲಯದ ಕಟಕಟೆ ಹತ್ತುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಈಗ ಜಾಸ್ತಿ ಎನ್ನುವ ಜ್ನಾನೋದಯ, ಸಾವಿರಾರು ಸುಳ್ಳುಗಳನ್ನು ಹೇಳಿ ತಾವು ಅತ್ಯಂತ ಜತನದಿಂದ ಬೆಳೆಸಿದ ಮಧ್ಯಮವರ್ಗ ಹಾಗು ಅವರ ಮೃದು ಬಲಪಂಥೀಯ ನಿಲುವುಗಳು ಹಾಗೂ ಒಂದು ರೀತಿಯಲ್ಲಿ ಧರ್ಮವನ್ನು ಅಫೀಮಿನಂತೆ ಬಳಸಿ ದೇಶದ ಉದ್ದಗಲಕ್ಕೂ ಹಬ್ಬಿದ್ದ ಅದರ ಅಮಲು ಕ್ರಮೇಣ ಕ್ಷೀಣವಾಗುತ್ತಿದೆಯೇನೋ ಎನ್ನುವ ಆತಂಕ ಈ ಸಂಘ ಪರಿವಾರದ ಯಜಮಾನನಿಗೆ. ಆ ಕಾರಣಕ್ಕಾಗಿಯೇ ಇದನ್ನು ಮುಂಚಿನಂತೆ ನೇರವಾಗಿ ಹಾಡುತ್ತಿಲ್ಲ. ಬದಲಾಗಿ ತಮ್ಮ ಎಂದಿನ ಕುಖ್ಯಾತ ಗುಪ್ತ ಕಾರ್ಯಸೂಚಿಗಳಿಗೆ ಮೊರೆ ಹೋಗಿದ್ದಾರೆ. ಕೆಲವು ಉದಾಹರಣೆಗಳು:

1. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತಮ್ಮ ಕೆಲವು ಅಂಗ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದೂ ಧರ್ಮದ ಮೇಲರಿಯಮೆಯನ್ನು ಸಾರುವ ಪುಸ್ತಕಗಳನ್ನು ವಿತರಿಸಿ ವಿಧ್ಯಾರ್ಥಿಗಳನ್ನು ತಮ್ಮ ಜಾಲಕ್ಕೆ ಬಗ್ಗಿಸುವುದು. ವಿಶ್ವೇಶ್ವರ ಹೆಗಡೆ ಕಾಗೇರಿಯಂತಹ ಪರಮ ಆರ್.ಎಸ್.ಎಸ್. ಸ್ವಯಂಸೇವಕರು ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳುವಂತೆ (ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಟ್ಟಾ ಆರ್.ಎಸ್.ಎಸ್. ಮುರುಳಿ ಮನೋಹರ ಜೋಶಿಯವರು ಶಿಕ್ಷಣ ಮಂತ್ರಿಯಾಗಿದ್ದರು) ನೋಡಿಕೊಂಡು ಈ ಕಾಗೇರಿಯಂತಹ ಸ್ವಯಂಸೇವಕರ ಕೈಯಲ್ಲಿ ಪದೇ ಪದೇ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತೇವೆ ಎನ್ನುವ ಹೇಳಿಕೆ ಕೊಡಿಸುವುದು, ಶಾಲೆಗಳಲ್ಲಿ ಯೋಗಭ್ಯಾಸವನ್ನು ಪಠ್ಯವನ್ನಾಗಿ ಅಳವಡಿಸಬೇಕೆಂದು ಪದೇ ಪದೇ ರಾಗ ಹಾಡಿಸುವುದು, ಭಗವದ್ಗೀತೆಯ ಅಭಿಯಾನ ಎನ್ನುವ ಮರೆ ಮೋಸದ ಮೂಲಕ ತಮ್ಮ ಪರಧರ್ಮ ದ್ವೇಷದ, ಪುರೋಹಿತಶಾಹಿ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವುದು. ನಂತರ ಸದಾನಂದ ಗೌಡರಂತಹ   ದುರ್ಬಲ ಮುಖ್ಯಮಂತ್ರಿಯ ಮೂಲಕ ಭಗವದ್ಗೀತೆಯ ಪಾಠವನ್ನು ಸರ್ಕಾರೀ ಶಾಲೆಗಳಲ್ಲಿ ಅಳವಡಿಸುತ್ತೇವೆ ಎಂದು ಹೇಳಿಸಿ ಅದರ ಪರಿಣಾಮಗಳನ್ನು ಕಾದು ನೋಡುವುದು, ಹಾಗೂ ಆ ಮೂಲಕ ಒಂದು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವುದು. ನಂತರ ತಮ್ಮ ರಾಷ್ಟ್ರೋತ್ಥಾನ ಪರಿಷತ್ತಿನ ಮೂಲಕ  “ತಮ್ಮ ಅಖಂಡ ಹಿಂದೂ ಧರ್ಮವನ್ನು”  ಸಾರುವ ಪುಸ್ತಕಗಳನ್ನು ಪಠ್ಯಪುಸ್ತಕಗಳನ್ನಾಗಿ ರೂಪಿಸುವುದು. ಆದರೆ ವೈಚಾರಿಕವಾಗಿ ಅತ್ಯಂತ ಗಟ್ಟಿಯಾಗಿರುವ ಕರ್ನಾಟಕದಂತಹ ನೆಲದಲ್ಲಿ ಇವರ ಈ ಗುಪ್ತ ಕಾರ್ಯಾಚರಣೆಗೆ ಅವಕಾಶವೇ ದೊರೆತಿಲ್ಲ ಹಾಗೂ ಇಲ್ಲಿನ ಪ್ರಗತಿಪರ ಸಂಘಟನೆಗಳು ಅದಕ್ಕೆ ಮುಂದೆಯೂ ಅವಕಾಶ ಕೊಡುವ ಸಾಧ್ಯತೆಗಳೂ ಕಡಿಮೆ. ಇಷ್ಟರ ಮಟ್ಟಿಗೆ ನಮ್ಮ ರಾಜ್ಯ ಇವರ ವಿಷಮಯವಾದ ರೀತಿನೀತಿಗಳಿಂದ ಮುಕ್ತವಾಗಿದೆ.

2.  ಎಂದಿನಂತೆ ಹಳೇ ಬಾಣವಾದ ಗೋಹತ್ಯೆ ನಿಷೇಧವನ್ನು ಇನ್ನಿಲ್ಲದಂತೆ ಉಗ್ರವಾಗಿ ಪ್ರತಿಪಾದಿಸುತ್ತ,(ಈಶ್ವರಪ್ಪರಂತಹ ಹುಂಬ ಶೂದ್ರರ ಮುಖಾಂತರ ಯಾರಾದರೂ ವಿರೋಧಿಸಿದರೆ ನಾಲಿಗೆ ಸೀಳಲಾಗುತ್ತದೆ ಎಂದು ಫತ್ವ ಹೊರಡಿಸುವುದು)  ಇದು ಸಮಾಜದ ಜೀವನ್ಮರಣದ ಪ್ರಶ್ನೆಯನ್ನಾಗಿಸಿ ಇನ್ನಿಲ್ಲದ ವಿಷಮಯ ವಾತಾವರಣ ನಿರ್ಮಿಸುವುದು.

3. ಮತಾಂತರದ ಬಗೆಗಿನ ಉದ್ವೇಗ, ಭಯವನ್ನು ಹುಟ್ಟಿಹಾಕಿ ಈ ಸಿಂಡ್ರೋಮ್ ಜನರಲ್ಲಿ ಸದಾಕಾಲ ನೆಲೆ ನಿಲ್ಲುವಂತೆ ಅನೇಕ ಪುಕಾರುಗಳನ್ನು ಹಬ್ಬಿಸುತ್ತಾ ನಂತರ ಅಲ್ಪ ಸಂಖ್ಯಾತರ ಮೇಲೆ ತಮ್ಮ ಅಂಗ ಸಂಸ್ಥೆಗಳ ಮೂಲಕ ದಬ್ಬಾಳಿಕೆಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬರುವುದು ಹಾಗೂ ಈ ಪ್ರಕ್ರಿಯೆ ನಿರಂತರವಾಗಿರುವಂತೆ ನೋಡಿಕೊಳ್ಳುವುದು.

4. ಬಲಪಂಥೀಯ ಪತ್ರಕರ್ತರ ಮೂಲಕ ಯಶಸ್ವಿಯಾಗಿ ಮಾಧ್ಯಮಗಳ ಮೂಲಕ ಹಿಂದೂಗಳ, ಹಿಂದೂ ಧರ್ಮದ ಶ್ರೇಷ್ಟತೆಯ ಹಸೀ ಹಸೀ ಸುಳ್ಳುಗಳನ್ನು ಬಿಟ್ಟೂ ಬಿಡದೆ ಕೂಗುಮಾರಿಯ ರೀತಿಯಲ್ಲಿ ಪುಂಖಾನುಪುಂಖವಾಗಿ ಬರೆಸುತ್ತಾ ಇಲ್ಲಿ ಈ ದೇಶ  ಬದುಕಿರುವುದೇ ಒಂದು ಪವಾಡದಿಂದ ಎನ್ನುವ ಭ್ರಮೆಗಳನ್ನು ಹುಟ್ಟಿಸುವುದು.

ಮೇಲಿನ ಎಲ್ಲಾ ಉದಾಹರಣೆಗಳ ಮೂಲಕ ತಮ್ಮ ಪ್ರೈಜ್ ಕ್ಯಾಚ್ ಆದಂತಹ ಮಧ್ಯಮವರ್ಗ, ಮೇಲ್ಮಧ್ಯಮವರ್ಗ, ಮೇಲ್ಜಾತಿಗಳು, ವರ್ತಕರು ಹೀಗೆ ತಮ್ಮ ಸಹಜ ಅಭಿಮಾನಿಗಳನ್ನು ಮತ್ತೆ ಟ್ರ್ಯಾಪ್ ಮಾಡುವುದು. ಆ ಮೂಲಕ ಬಿಜೆಪಿಗೆ ಮತ್ತೆ ಅಧಿಕಾರದ ಗದ್ದುಗೆಗೆ ಕುಳ್ಳಿರಿಸುವುದು.

ಇಷ್ಟೆಲ್ಲ ಪ್ರತಿಗಾಮಿ ನೀತಿಗಳನ್ನುಳ್ಳ ಆರ್.ಎಸ್.ಎಸ್. ನವರು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಂವಿಧಾನ ಬಾಹಿರವಾದ ಅಧಿಕಾರವನ್ನು ಬಳಸುತ್ತಾರೆ, ಅವರು ತಮ್ಮ ಕೇಶವಕೃಪ, ಗರ್ಭಗುಡಿಗೆ ಜನರಿಂದ, ಜನರಿಗಾಗಿ ಆಯ್ಕೆಗೊಂಡ ಶಾಸಕರನ್ನ, ಮಂತ್ರಿಗಳನ್ನ,ಮುಖ್ಯಮಂತ್ರಿಗಳನ್ನ ಕರೆಸಿಕೊಂಡು ಶಿಷ್ಯಂದಿರಂತೆ ಇವರನ್ನು ನಡೆಸಿಕೊಳ್ಳುತ್ತಾ, ಅನೇಕ ರೀತಿಯ ಸರ್ಕಾರಿ ನಿರ್ಧಾರಗಳಲ್ಲಿ ಹಸ್ತಕ್ಷೇಪಗೊಳಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ನಿರ್ನಾಮ ಮಾಡುತ್ತಾರೆ. ನಮ್ಮ ಕರ್ನಾಟಕದಲ್ಲಿ ಈಗ ಕಳೆದ ಕೆಲವು ವರ್ಷಗಳಿಂದ ಅದರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಆರ್.ಎಸ್.ಎಸ್. ಹಲವಾರು ಬಾರಿ ಕಿಂಗ್ ಮೇಕರ್ ಪಾತ್ರ ವಹಿಸುತ್ತಿರುವುದೂ, ಅನೇಕ ವೇಳೆ ಆಡಳಿತದಲ್ಲಿ ತನ್ನ ಹಸ್ತಕ್ಷೇಪವನ್ನು ನಡೆಸುತ್ತಾ ಆ ಮೂಲಕ ತನ್ನ ಪ್ರಭಾವ ಬಳಸಿಕೊಂಡು ತನ್ನ ಅಂಗ ಸಂಸ್ಥೆಗಳು ನಡೆಸುತ್ತಿರುವ ಕೋಮುವಾದಿ ಶಿಕ್ಷಣಕ್ಕೆ ಭರಪೂರು ಅನುದಾನವನ್ನು ಪಡೆದುಕೊಳ್ಳುತ್ತಾ, ಕಳೆದ 3 ವರ್ಷಗಳಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಸದಾಕಾಲ ಒಂದಿಲ್ಲೊಂದು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಾಗ ತಾನು ಸಂಧಾನಕಾರನಾಗಿಯೂ  ಭಾಗವಹಿಸುತ್ತಾ ತನ್ನ ಸುತ್ತ ಒಂದು ಪ್ರಭಾವಳಿಯನ್ನು ನಿರ್ಮಿಸಿಕೊಂಡಿರುವುದೂ, ಯಾವ ಯಾವ ಶಾಸಕರು ಮಂತ್ರಿಯಾಗಬೇಕೆಂದು ಅವಶ್ಯಕತೆ ಇದ್ದರೆ ಹೇಳುತ್ತೇನೆ ಎನ್ನುವಂತಹ ಪ್ರಭಾವಳಿಗಳ ಮೂಲಕ ತನ್ನ ಕೇಶವ ಕೃಪದಲ್ಲಿ ಆಡಳಿತದ ರೀತಿನೀತಿಗಳನ್ನು ರೂಪಿಸುತ್ತದೆ. ಈ ಮೂಲಕ ಬಿಜೆಪಿ ಸರ್ಕಾರದ, ಮಂತ್ರಿಮಂಡಲದ ಎಲ್ಲಾ ನಿರ್ಣಯಗಳೂ ತನ್ನ ಕಣ್ಣಳತೆಯಲ್ಲಿ ಜರಗುವ ಒಂದು ಸ್ವಾರ್ಥ ವ್ಯವಸ್ಥೆಯನ್ನು,ತನ್ನ ಸುತ್ತಲೂ ಇನ್ನಿಲ್ಲದ ಪ್ರಭಾವಳಿಯನ್ನು ನಿರ್ಮಿಸಿಕೊಳ್ಳುತ್ತದೆ. ಇವರು ಈ ಮೂಲಕ ಸಂವಿಧಾನದಡಿಯಲ್ಲಿ  ಆಯ್ಕೆಗೊಂಡ ಒಂದು ಪ್ರಜಾಸತ್ತಾತ್ಮಕ ಸರ್ಕಾರವನ್ನು ತಮ್ಮ ಕಿರುಬೆರಳಿನಲ್ಲಿ ಕುಣಿಸುತ್ತ ತಮ್ಮ ಸಂವಿಧಾನ ವಿರೋಧಿ ಧೋರಣೆಯನ್ನು ಯಶಸ್ವಿಯಾಗಿ ನಡೆಸಿಕೊಳ್ಳುತ್ತಾರೆ.

ಅತ್ಯಂತ ಖಂಡನಾರ್ಹವಾದ ಇಂತಹ ನಡುವಳಿಕೆಗಳು ಸಂವಿಧಾನದ ಆಶಯಗಳನ್ನೇ ನಾಶಗೊಳಿಸುತ್ತವೆ. ಇದರ ದುರಂತ ಅಧ್ಯಾಯವೇ ತಾವು ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರಿಂದ ಆಯ್ಕೆಯಾಗಿದ್ದರಿಂದ, ತಾವೂ ಉತ್ತರಿಸಬೇಕಾಗಿದ್ದರೆ ಪ್ರಜೆಗಳಿಗೆ ಮಾತ್ರ, ತಾವು ತಮ್ಮ ಭಿನ್ನಪ್ರಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳಬೇಕಾಗಿರುವುದು ಅಧಿಕಾರದಲ್ಲಿರುವ ತಮ್ಮ ಪಕ್ಷದ ಮಿತಿಯೊಳಗೆ ಎನ್ನುವ ಪ್ರಜಾಪ್ರಭುತ್ವದ ಮೂಲ ಮಂತ್ರಕ್ಕೆ ಸಂಪೂರ್ಣ ತಿಲಾಂಜಲಿಯಿಟ್ಟು  ಈ ಬಿಜೆಪಿ ಶಾಸಕರು ಹಾಗು ಮಂತ್ರಿಗಳು ಹಾಗೂ  ಮುಖ್ಯಮಂತ್ರಿಗಳು ಸೀನಿದ್ದಕ್ಕೂ, ಕೆಮ್ಮಿದ್ದಕ್ಕೆಲ್ಲ ಆರ್.ಎಸ್.ಎಸ್. ಕೇಶವಕೃಪಕ್ಕೆ ಎಡೆತಾಕುತ್ತಿರುವುದನ್ನು ನಾವೆಲ್ಲ ತೀವ್ರವಾಗಿ ವಿರೋಧಿಸಲೇಬೇಕಾಗುತ್ತದೆ. ಇವರೆಲ್ಲರ ಈ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯನ್ನು ಪ್ರಶ್ನಿಸಿಲೇಬೇಕಾಗಿದೆ.

2 thoughts on “RSS :ಬಾಲ್ಯವಿವಾಹ, ಮಡೆಸ್ನಾನ, ಮರ್ಯಾದಾ ಹತ್ಯೆ,… ಏನನ್ನುತ್ತಾರೆ?

  1. Ananda Prasad

    ಕರ್ನಾಟಕದ ಬಹುತೇಕ ಮಾಧ್ಯಮಗಳು ಇಂದು ಬಲಪಂಥೀಯ ಪತ್ರಕರ್ತರಿಂದ ತುಂಬಿ ಹೋಗಿವೆ. ಹೀಗಾಗಿ ಮಾಧ್ಯಮಗಳಲ್ಲಿ ಸಂಘದ ಚಿಂತನೆಗಳಿಗೆ ಹೆಚ್ಚು ಒತ್ತು ಸಿಗುತ್ತಿದೆ. ಮೂಢ ನಂಬಿಕೆಗಳನ್ನು ನಮ್ಮ ಬಹುತೇಕ ಟಿವಿ ವಾಹಿನಿಗಳು ವೈಭವೀಕರಿಸುತ್ತಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಶಬರಿಮಲೆ ಯಾತ್ರೆ, ಪುರಿ ಜಗನ್ನಾಥ ರಥೋತ್ಸವ, ತಿರುಪತಿಯಲ್ಲಿ ನಡೆಯುವ ಉತ್ಸವಗಳ ನೇರ ಪ್ರಸಾರ ಹೆಚ್ಚುತ್ತಿದೆ. ಇದೆಲ್ಲ ಹೆಚ್ಚಲು ಕಾರಣ ಮಾಧ್ಯಮಗಳನ್ನು ಪುರೋಹಿತಶಾಹಿಗಳು ನಿಯಂತ್ರಿಸುತ್ತಿರುವುದು. ಟಿವಿ ವಾಹಿನಿಗಳಲ್ಲಿ ಜ್ಯೋತಿಷ್ಯ, ವಾಸ್ತು ಇತ್ಯಾದಿ ಮೂಢನಂಬಿಕೆಗಳನ್ನು ಬಲಪಡಿಸಿ ಸಮಾಜವನ್ನು ಹಿಂದಕ್ಕೆ ಕೊಂಡೊಯ್ಯುವ ಕಾರ್ಯ ಭರದಿಂದ ನಡೆಯುತ್ತಿದೆ. ಕರ್ನಾಟಕದಲ್ಲಿ ಒಂದೇ ಒಂದು ಪ್ರಗತಿಪರ ನಿಲುವಿನ ಟಿವಿ ವಾಹಿನಿ ಇಲ್ಲ. ಇದರಿಂದಾಗಿ ಕರ್ನಾಟಕ ಮತ್ತೆ ಹಿಂದಕ್ಕೆ ಹೋಗುತ್ತಿದೆ. ಬರುವ ಜನವರಿ ೨೬ ರಂದು ಪತ್ರಕರ್ತರಾಗಿ ಹಲವು ವರ್ಷ ಕೆಲಸ ಮಾಡಿದ ಹೆಚ್. ಆರ್. ರಂಗನಾಥ್ ಅವರ ಸಾರಥ್ಯದಲ್ಲಿ ‘ಪಬ್ಲಿಕ್ ಟಿವಿ’ ಹೆಸರಿನ ಕನ್ನಡ ವಾರ್ತಾವಾಹಿನಿ ‘ರೈಟ್ ಮನ್ ಮೀಡಿಯಾ’ ಸಂಸ್ಥೆಯ ಅಡಿಯಲ್ಲಿ ಕಾರ್ಯ ಆರಂಭಿಸುತ್ತದೆ ಎಂಬ ಮಾಹಿತಿ ಇದೆ. ಇದು ಕನ್ನಡದ ಪ್ರಪ್ರಥಮ ಪತ್ರಕರ್ತ ಹಿನ್ನೆಲೆಯ ವ್ಯಕ್ತಿಗಳು ರೂಪಿಸುತ್ತಿರುವ ಕನ್ನಡ ಟಿವಿ ವಾಹಿನಿಯಾಗಿದ್ದು ಪ್ರಗತಿಪರ ವಿಚಾರಗಳಿಗೆ ಒತ್ತು ಕೊಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಉಳಿದಂತೆ ಇಂದು ಕನ್ನಡ ಟಿವಿ ವಾಹಿನಿಗಳನ್ನು ನಡೆಸುತ್ತಿರುವವರು ರಾಜಕೀಯ ಪಕ್ಷಗಳ ಹಿನ್ನೆಲೆಯವರು ಅಥವಾ ಬಂಡವಾಳಶಾಹಿ ಹಿನ್ನೆಲೆಯವರು. ಹೀಗಾಗಿ ಕನ್ನಡ ನೆಲ ಪ್ರಗತಿಪರ ವಿಚಾರಗಳಿಂದ ಹಿಂದೆ ಸರಿಯುತ್ತಿದೆ. ಪಬ್ಲಿಕ್ ಟಿವಿ ವಾಹಿನಿಯನ್ನು ಡಿಡಿ ಡೈರೆಕ್ಟ್ ವಾಹಿನಿಯಲ್ಲಿ ದೊರೆಯುವಂತೆ ಮಾಡಿದರೆ ಅದು ಇನ್ನಿತರ ಎಲ್ಲ ಖಾಸಗಿ ಡಿ.ಟಿ. ಎಚ್. ಸಂಸ್ಥೆಗಳ ಪ್ರಸಾರದಲ್ಲೂ ಸಿಗಬಹುದಾಗಿದ್ದು ಗ್ರಾಮೀಣ ಜನರನ್ನೂ ತಲುಪಿ ಹೆಚ್ಚು ಪ್ರಭಾವಶಾಲಿಯಾಗಬಹುದು.

    Reply
  2. ಮಹೇಶ ಪ್ರಸಾದ ನೀರ್ಕಜೆ

    { ಬಾಲ್ಯ ವಿವಾಹಗಳು, ಮಡೆ ಸ್ನಾನದಂತಹ ಮೂಢ ಆಚರಣೆಯ ಬಗ್ಗೆ, ಅಂತರ್ಜಾತಿ ವಿವಾಹಿತರನ್ನು ಮರ್ಯಾದೆಯ ಹೆಸರಿನಲ್ಲಿ ಸಾಯುಸುತ್ತಿರವುದರ ಬಗೆಗೆ ಯಾವ ಆರ್.ಎಸ್.ಎಸ್. ಸ್ವಯಂಸೇವಕರೂ, ಮುಖಂಡರೂ ಬಾಯಿಬಿಟ್ಟಿಲ್ಲ}

    ಆರೆಸ್ಸೆಸ್ ಬಗ್ಗೆ ಗೊತ್ತಿಲ್ಲದೆ ಬರೆಯುವವರಲ್ಲಿ ಶ್ರೀಪಾದ್ ಭಟ್ ಅವರೂ ಒಬ್ಬರು ಅನಿಸುತ್ತದೆ. ತಮಾಷೆಯೆಂದರೆ ಆರೆಸ್ಸೆಸ್ ಸಂಪ್ರದಾಯ ವಿರೋಧಿ ಅಂತ ಹಿಂದೂ ಸಂಪ್ರದಾಯವಾದಿಗಳಿಂದ ಬೈಸಿಕೊಳ್ಳುತ್ತದೆ, ಸಂಪ್ರದಾಯವಾದಿ ಪರ ಅಂತ ವಿಚಾರವಾದಿಗಳಿಂದ ಬೈಸಿಕೊಳ್ಳುತ್ತದೆ. ಆರೆಸ್ಸೆಸ್ ಮಾತ್ರ ತನ್ನ ಪಾಡಿಗೆ ಮಾಡಬೇಕಾದ್ದನ್ನು ಮಾಡುತ್ತಿದೆ…. ಸಂಪ್ರದಾಯವಾದಿಗಳಿಗೂ ಒಣ ವಿಚಾರವಾದಿಗಳಿಗೂ ಇದನ್ನು ಅರಗಿಸಿಕೊಳ್ಳಕ್ಕೆ ಆಗ್ತಿಲ್ಲ.

    Reply

Leave a Reply to ಮಹೇಶ ಪ್ರಸಾದ ನೀರ್ಕಜೆ Cancel reply

Your email address will not be published. Required fields are marked *