ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2

ಬಾಳ್ಳುಪೇಟೆ ರೈತ ದಲಿತರಿಬ್ಬರ ಒಗ್ಗಟ್ಟಿನ ಪ್ರಯೋಗಶಾಲೆಯಾಗಿತ್ತು. ರೈತಸಂಘ ಪಾಳೇಗಾರರಿಗೆ ‘ಥ್ರೆಟ್’ ನೀಡಬಲ್ಲ ಸಂಘಟನೆಯಾಗಿತ್ತು. ಅಷ್ಟೆಲ್ಲ ಆಗಿಯೂ ‘ಲಿಂಗಾಯಿತರು ರೈತಸಂಘ ಬಿಟ್ಟು ಹೋಗಿಬಿಡಬಹುದು’ ಎಂಬ ಹುಷಾರಿನ ಲೆಕ್ಕಾಚಾರವನ್ನು ಮೀರಲು ಸಂಘಟನೆಗೆ ಸಾಧ್ಯವಾಗಲಿಲ್ಲ. ಅಂದರೆ ರೈತಸಂಘ ತನ್ನ ಸುತ್ತ ತಾನೇ ಕಟ್ಟಿಕೊಂಡ ಜಾತಿಬೇಲಿಯಿಂದ ನಿರ್ಣಾಯಕವಾಗಿ  ಹೊರಬರಲು ಆಗಲೇ ಇಲ್ಲ! ಈ ನಿಟ್ಟಿನಲ್ಲಿ ಶಿವಪ್ರಸಾದ್ ಹೇಳಿದ್ದು ಮಾರ್ಮಿಕ ವಾಗಿದೆ:

ಪೆರಿಯಾರ್ ಮೂವ್ಮೆಂಟ್ ಥರದ ಕೆಲವು ಸಾಂಸ್ಕೃತಿಕ ಚಳವಳಿಯ ಪ್ರಯತ್ನವನ್ನು ನಾವು ರೈತಸಂಘ ಶುರುವಾಗೋದಿಕ್ಕೆ ಮುಂಚೆ ಮಾಡಿದ್ದೊ. ಆದ್ರೆ ರೈತಸಂಘ ಶುರುವಾದ ಮೇಲೆ ಆ ರೀತಿ ಮಾತಾಡಬೇಡಿ ಅಂತ್ಲೂ ನಮಗೆ ಆದೇಶಗಳು ಬಂದವು. ಏಕೆಂದರೆ it will affect the organisation, people wont join ಅಂತ. ನನಗೆ ಅನ್ಸೋದು cultural movement ಅಂದ್ರೆ ಪೆರಿಯಾರ್ ಥರದ ಚಳವಳಿ ಆಗ್ದೆ ಇದ್ರೆ ಈ caste barrier ನ ತೆಗೆಯೋದು ತುಂಬಾ ಕಷ್ಟ. ರೈತಸಂಘದ cultural wing ಅಂತಾನೆ ಮಾಡ್ಕೊಂಡು ಈ  problem tackle ಮಾಡಬಹುದು. ಆದರೆ ರೈತಸಂಘ ಈ ಬಗ್ಗೆ ಏನೇನೂ ಚಿಂತಿಸಿದಂತೆ ಕಾಣಲಿಲ್ಲ…

ಇದೆಲ್ಲ ಸರಿ. ಆದರೆ ಪ್ರೊಫೆಸರರು ಕೊಟ್ಟ ಒಂದು ಕರೆಗೆ ರೈತರು ಲಕ್ಷಾಂತರ ಸಮೂಹವಾಗಿ ಬಂದು ಕಬ್ಬನ್ ಪಾರ್ಕಿನಲ್ಲಿ ನೆರೆದಿದ್ದನ್ನು ಕಂಡಾಗ ನಿಜಕ್ಕೂ ಅದು ನಾಡು ಕಟ್ಟಬಲ್ಲ ಸಂಘಟನೆಯಾಗೇ ಕಂಡಿತ್ತು! ವಿಚಿತ್ರವೆಂದರೆ ಅಂದಿನ ಸಭೆಯಲ್ಲಿ ತೇಜಸ್ವಿ- ಒಂದು ವೇಳೆ ರೈತರ ಸರ್ಕಾರವೇ ಬಂದರೂ, ಆ ಸರ್ಕಾರದಲ್ಲಿ ‘ರೈತರೇ ಎದುರಿಸಬೇಕಾಗಬಹುದಾದ ಗಂಡಾಂತರಗಳ’ ಬಗ್ಗೆ ಮಾತಾಡಿ ಪ್ರೊಫೆಸರರ ಸಿಟ್ಟಿಗೆ ಗುರಿಯಾಗಿದ್ದರು…!

ಎಲ್ಲರಿಗೂ ಗೊತ್ತಿದ್ದಂತೆ, ಇವೆಲ್ಲಕ್ಕೆ ನಾಂದಿಯಾದದ್ದು ಸಮಾಜವಾದಿ ಯುವಜನ ಸಭಾ ಮತ್ತು ಜಾತಿವಿನಾಶ ಸಮ್ಮೇಳನ (1973). ಇಲ್ಲಿದ್ದವರೇ ‘ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ವಾಗಿ ಕವಲೊಡೆದು ಮತ್ತೆ ಜೇಪಿ ಚಳವಳಿಗೂ ನುಗ್ಗಿದರು. ಅಂದು ಯುವಜನ ಸಭಾದಲ್ಲಿ ಒಗ್ಗೂಡಿದವರೇ ಎರಡು ದಶಕಗಳ ಕಾಲ ಇಡೀ ನಾಡಿನ ಚಿಂತನ ಪರಿಸರವನ್ನು ರೂಪಿಸಿ ಆಳಿದ್ದನ್ನು ನೆನೆದರೆ ಆಗಿನ ಸಮಾಜ ಮೈ ಮುರಿದೆದ್ದ ರೀತಿಯ ಕಲ್ಪನೆ ಬರುತ್ತದೆ. ಮತ್ತು ಆ ಸಮೂಹದ ಸದಸ್ಯರ ಸಹಚರ್ಯ-ಮನಸ್ತಾಪಗಳ ಚರಿತ್ರೆಯೇ ನಾಡಿನ ಸಾಮಾಜಿಕ/ ಸಾಂಸ್ಕೃತಿಕ ಚರಿತ್ರೆಯೂ ಆಗಿ ಗೋಚರಿಸುತ್ತದೆ.

74ರ ಬರಹಗಾರರ ಒಕ್ಕೂಟ ಜನಿಸಿದ್ದೇ ಬ್ರಾಹ್ಮಣೇತರ ಆಂದೋಲನವಾಗಿ. ಹಾಗಾಗಿ ಸಮಾವೇಶಕ್ಕೆ ಯು.ಆರ್. ಅನಂತಮೂರ್ತಿ ಯವರನ್ನು ಕರೆಯದೆ ಹೊರಗಿಟ್ಟರು. ಹಾಗೆ ಮಾಡಿದ್ದಕ್ಕೆ ಶ್ರೀಕೃಷ್ಣ ಆಲನಹಳ್ಳಿ ಪ್ರತಿಭಟಿಸಿದರು. ನಂಜುಂಡಸ್ವಾಮಿಯವರ ಬಗ್ಗೆ ಬರೆಯುವಾಗ (ಪ್ರೊಫೆಸರ್ ಎಂಡಿಎನ್- ನೆನಪಿನ ಸಂಪುಟ) ಆ ಘಟನೆಯನ್ನು ಅನಂತಮೂರ್ತಿ ಮೆಲುಕು ಹಾಕುವುದು ಹೀಗೆ:

ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕಾಗಿ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು… ನನ್ನ ಜೊತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್ನಲ್ಲಿ ಸೀದಾ ಏಳನೆ ಮೈನಿನ ನನ್ನ ಸರಸ್ವತಿಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ‘ಅನಂತಮೂರ್ತಿ, ನಾವೆಲ್ಲಾ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ’…

ಹೀಗೆ ಒಬ್ಬಂಟಿಯಾದ ಅನಂತಮೂರ್ತಿಯವರು ಪ್ರವಾಹದ ವಿರುದ್ಧ ಈಜುತ್ತಲೇ ಕರ್ನಾಟಕದಲ್ಲಿ ಹಲವು ಮುಖ್ಯ ವಾಗ್ವಾದಗಳನ್ನು ಹುಟ್ಟು ಹಾಕಿದರು. ಅಸಂಖ್ಯ ಬಾರಿ ಜೊತೆಗಾರರಿಂದ ಗೇಲಿಗೊಳಗಾಗುತ್ತ, ಜಗಳವಾಡಿದರು. ಅಷ್ಟಾದರೂ ತಮ್ಮ ನಡೆಯ ಮೂಲ ದಿಕ್ಕಿನ ಬಗ್ಗೆ ಬಹುಕಾಲ ಗೊಂದಲಗೊಳ್ಳದೆ, ನಾಡಿನ ಸಾಕ್ಷಿಪ್ರಜ್ಞೆಯ ಭಾಗವೂ ಆದರು. ಅನಂತಮೂರ್ತಿಯವರ ಈ ‘ಹಾದಿ ತಪ್ಪದ’ ಎಚ್ಚರಕ್ಕೂ ಜೊತೆಗಾರರೊಂದಿಗಿನ ಜಗಳವೇ ಕಾರಣವಾಗಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಅದಕ್ಕೇ ಆಗಿನ ದೊಡ್ಡ ಜಗಳಗಳು ಕೂಡ ಕಿರಿಯರಾದ ನಮ್ಮ ಪಾಲಿಗೆ ಒಂದೇ ಕುಟುಂಬದೊಳಗಿನ ಮುನಿಸುಗಳಂತೆ ಸುಖಕರವೂ, ಸಾರ್ಥಕವೂ ಆಗಿದ್ದವು.

ಹೇಳಲೇಬೇಕಾದ ಮಾತು: ಒಟ್ಟಾರೆ ಆ ದಶಕಗಳ ಸಮಗ್ರ ಎಚ್ಚರದ ಹಿಂದೆ ಕುವೆಂಪು ನೀಡಿದ್ದ ಒಳಗಣ್ಣಿತ್ತು; ಸೃಷ್ಟಿಸಿದ್ದ ‘ಆಧ್ಯಾತ್ಮಿಕ ವೈಚಾರಿಕತೆ’ಯಿತ್ತು; ಬಂಡುಕೋರತನವಿತ್ತು. ಜೊತೆಗೆ ಲೋಹಿಯಾ ಚಿಂತನೆಯ ತಾತ್ವಿಕ ಚೌಕಟ್ಟಿತ್ತು.

ಹಾಗೂ, ಆ ಪೀಳಿಗೆಯ ಚಿಕ್ಕ ತಮ್ಮಂದಿರಂತಿದ್ದ ನನ್ನ ತಲೆಮಾರು ಈ ಎಲ್ಲ ಚಾರಿತ್ರಿಕ ಮುಖಾಮುಖಿಗಳ ವಾರಸುದಾರನಾಗಿತ್ತು.

ಒಕ್ಕೂಟದ ಸಂದರ್ಭದಲ್ಲಿ ಲಂಕೇಶರ ಮಾತಿಗೆ ಉತ್ತರವಾಗಿ ಅನಂತಮೂರ್ತಿ ಹೇಳಿದ ಮಾತುಗಳು:

…ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ‘ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿ ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ’… ಸುಮಾರು 1967ರಲ್ಲಿ ಎಂದು ನೆನಪಾಗುತ್ತದೆ; ಗತಿಸಿದ ಶಿವರಾಮ ಐತಾಳ್ರಿಗೆ ಉತ್ತರವಾಗಿ ‘ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ’ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯೂ ಆಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್ ದಿನಗಳಿಂದಲೂ, ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ….

ಹೀಗೆ ಬರೆದುಕೊಂಡ, ಹಾಗೇ ನಮ್ಮ ಸಮಾಜದ ಜಾತಿಯೇ ಮುಂತಾದ ಬಿಕ್ಕಟ್ಟುಗಳನ್ನು ಅಸೀಮ ಧೈರ್ಯದಿಂದ ಎದುರಿಸಿ ವಿಶ್ಲೇಷಿಸುತ್ತಲೇ ಸಾಗಿದ ಅನಂತಮೂರ್ತಿ ಕೂಡ ಆಗಾಗ ಜಾತಿಪದ್ಧತಿಯಲ್ಲೂ ‘ಸೃಜನಶೀಲತೆ’ ಕಾಣುತ್ತ  ನೀವೇ ಬ್ರಾಹ್ಮಣರ ಬಗ್ಗೆ ಕಟುವಾಗಿ ಮಾತಾಡಿ ಅದನ್ನು ನಂಜುಂಡಸ್ವಾಮಿಯವರು ಮಾತಾಡಿದರೆ ಅಸಹನೆಗೆ ಒಳಗಾಗುತ್ತೀರಿ. ಯಾಕೆ ಹೀಗೆ? ಎಂಬ- ದೇವನೂರ ಮಹಾದೇವರ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ! ಹಾಗೇ ಅವರು ಉಲ್ಲೇಖಿಸಿದ ‘ಬ್ರಾಹ್ಮಣ- ಶೂದ್ರ’ (ಲೋಹಿಯಾ ಚಿಂತನೆಯಿಂದ ಪ್ರೇರಣೆ ಪಡೆದ) ಲೇಖನ ಕೂಡ ಅನಂತ ಮೂರ್ತಿಯವರಿಗೇ ವಿಶಿಷ್ಟವಾದ ‘ದ್ವಂದ್ವ ಸಾಮರಸ್ಯ’ದ ನುಣುಪು ಶೈಲಿಯಲ್ಲಿದ್ದುದನ್ನೂ ಮರೆಯಬೇಕಿಲ್ಲ. ಜೊತೆಗೆ ಅವರು ನಮ್ಮೆಲ್ಲರ ಗೌರವಕ್ಕೆ ಪಾತ್ರರಾದ ಹಿರಿಯರಾಗಿ ಆಗಾಗ ಇಂಥ ತಪ್ಪುಗಳನ್ನು ಮಾಡುವುದನ್ನು ಈವತ್ತಿಗೂ ನಿಲ್ಲಿಸಿಲ್ಲ; ನಮ್ಮ ಗೌರವಪೂರ್ವಕ ಆಕ್ಷೇಪಣೆಗಳೂ ನಿಂತಿಲ್ಲ…!

ಇಲ್ಲಿ ಆ ಕಾಲದ ಪ್ರಮುಖ ತವಕ, ತಾಕಲಾಟ, ದುಗುಡಗಳನ್ನು ತಿಳಿಯಲೆತ್ನಿಸುತ್ತಿದ್ದೇನೆ. ಆಗಿನ ಬಹುದೊಡ್ಡ ಪ್ರೇರಕ ಘಟನೆಗಳಲ್ಲೊಂದು ಎಂದು ಗುರುತಿಸಿ ಹೇಳುವುದಿದ್ದರೆ ಅದು ಬಸವಲಿಂಗಪ್ಪನವರ ಬೂಸಾ ಪ್ರಕರಣ. 70ರ ದಶಕದ ಸಮಗ್ರ ವೈಚಾರಿಕ ಎಚ್ಚರಕ್ಕೆ ನಿಮಿತ್ತವಾಗಿ ನಮ್ಮ ಯುಗದ ಮುಖ್ಯ ಮುಖಾಮುಖಿಗಳನ್ನು ಮುನ್ನೆಲೆಗೆ ತಂದ ಘಟನೆಯಿದು. ಈ ಪ್ರಕರಣದ ಪ್ರತಿಧ್ವನಿಯಾಗಿ ಜನಿಸಿದ ದಲಿತ ಲೇಖಕ ಕಲಾವಿದರ ಯುವ ಸಂಘಟನೆ (ದಲೇಕಯುಸಂ)- ದಲಿತ ಪ್ರಜ್ಞೆಯ ಮೊಟ್ಟ ಮೊದಲ ವೇದಿಕೆ. ಈ ಸಂಘಟನೆ ಹುಟ್ಟಿದ್ದು ತುರ್ತುಸ್ಥಿತಿಯಲ್ಲಿ (1976). ಅನಂತ ಮೂರ್ತಿಯವರ ಪ್ರಕಾರವೇ, ಒಗ್ಗೂಡಲು ಅಥವಾ ಜಾತಿವಾದಿಯಾಗಲು ನೂರಕ್ಕೆ ನೂರು ಅರ್ಹತೆ ಪಡೆದ ದಲಿತ ಸಮೂಹ (ಶಿವಮೊಗ್ಗದ ಕಬ್ಬು ಬೆಳೆಗಾರರ ಸಂಘ, ಹಾಸನದ ಸಮತಾ ವೇದಿಕೆಯೊಂದಿಗೆ ಸೇರಿಕೊಂಡು ರೈತಸಂಘವಾದ ಹಾಗೆಯೇ) ಅನತಿ ಕಾಲದಲ್ಲೇ ತಾನು ಪ್ರೊ. ಬಿ. ಕೃಷ್ಣಪ್ಪನವರ ಭದ್ರಾವತಿ ಕಾರ್ಮಿಕ ಸಂಘಟನೆಯೊಂದಿಗೆ ವಿಲೀನಗೊಂಡು ದಲಿತ ಸಂಘರ್ಷ ಸಮಿತಿಯಾಯಿತು. ಹುಟ್ಟುತ್ತಲೇ ಲೇಖಕ ಕಲಾವಿದರ ಬಳಗವಾಗಿದ್ದ ಈ ಸಂಘಟನೆ, ಆ ಕಾರಣಕ್ಕೇ ದೊಡ್ಡ ದಲಿತೇತರ ಸಮೂಹದ ಸಕ್ರಿಯ ಸಹಾನುಭೂತಿಯನ್ನೂ ಪಡೆಯಿತು. ಮುಸ್ಲಿಮರ ಹೊರತು, ಬ್ರಾಹ್ಮಣರಾದಿಯಾಗಿ ಎಲ್ಲ ಸಮುದಾಯಗಳ ಪ್ರತಿನಿಧಿಗಳೂ ದಲಿತ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಮತ್ತು ಜಾತಿವಿನಾಶವನ್ನೇ ತನ್ನ ಗುರಿಯಾಗಿ ಮಾಡಿಕೊಂಡಿದ್ದ ದಲಿತ ಚಳವಳಿಯಿಂದಾಗಿ, ದಲಿತ ಪ್ರಜ್ಞೆ ಎಂಬುದು ಒಟ್ಟು ಸಾಮೂಹಿಕ ಸಂವಾದದ ಕೇಂದ್ರ ಪ್ರಶ್ನೆಯಾಯಿತು; ದಲಿತ ಚಳವಳಿಯೆಂಬುದು ಸಮಷ್ಟಿ ನಡಿಗೆಯ ಪವಾಡವಾಯಿತು.

ಬರಹಗಾರರ ಒಕ್ಕೂಟ ತನ್ನ ಸಮಾವೇಶದ ಅಂಗವಾಗಿ, ಲಂಕೇಶರ ಸಂಪಾದಕತ್ವದಲ್ಲಿ ಹೊರತಂದ ಪಾಂಚಾಲಿ ದೀಪಾವಳಿ/ ರಾಜ್ಯೋತ್ಸವ ವಿಶೇಷಾಂಕವೇ, ಬೂಸಾ ಪ್ರಕರಣ ಹಾಗೂ ದಲಿತ ಚಿಂತನೆ ಆ ಕಾಲಘಟ್ಟವನ್ನು ಆವರಿಸಿಕೊಂಡ ರೀತಿಗೆ ಸಾಕ್ಷಿಯಾಗಿದೆ. (ಶ್ರೀಕೃಷ್ಣ ಆಲನಹಳ್ಳಿಯವರ ‘ಪರಸಂಗದ ಗೆಂಡೆತಿಮ್ಮ’ ಮೊದಲು ಅಚ್ಚಾಗಿದ್ದು ಈ ಸಂಚಿಕೆಯಲ್ಲೇ.) ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಲೇಖನ- ‘ಪಂಚಮರನ್ನು ಮರೆತ ಪಂಚವಾರ್ಷಿಕ ಯೋಜನೆ’. ಕವಿ ಸಿದ್ದಲಿಂಗಯ್ಯ ‘ಬೂಸಾ ಪ್ರಕರಣ- ನನ್ನ ಅನುಭವ’ ಬರೆದರೆ, ವಿಜಯ ಸಾಸನೂರರು ಬರೆದ ಕತೆ- ‘ಅಸ್ಪೃಶ್ಯ’! ಸ್ವತಃ ಲಂಕೇಶರು ಬರೆದ ಎರಡು ವ್ಯಕ್ತಿಚಿತ್ರಗಳು- ಜೇಪಿ ಮತ್ತು ಬಸವಲಿಂಗಪ್ಪ. ದೇವನೂರ ಮಹದೇವ ಮತ್ತು ಶ್ರೀಧರ ಕಲಿವೀರ- ಈ ಇಬ್ಬರು ಬರೆದ ಇಬ್ಬರು ‘ಹೊಲೆಯ’ರ ರಕ್ತಸಂವೇದನೆಯ ಮಾತುಗಳು; ಅಷ್ಟೇಕೆ, ಸಾಕ್ಷಾತ್ ಡಾ. ಎಂ. ಚಿದಾನಂದಮೂರ್ತಿ ಬರೆದಿದ್ದು- ‘ದೇವದಾಸಿಯೊಬ್ಬಳೊಡನೆ ಸಂಭಾಷಣೆ’…!

ಆಗಿನ ಎಲ್ಲ ಪ್ರಗತಿಪರ ಕದಲಿಕೆಗಳೂ ಹೇಗೆ ದಲಿತ ಪ್ರಜ್ಞೆಯ ಸುತ್ತಲೇ ಗಸ್ತು ತಿರುಗುತ್ತಿದ್ದವು ಎಂಬುದಕ್ಕೆ, ಕಮ್ಯೂನಿಸ್ಟ್ ತಾತ್ವಿಕತೆಯ ಸಾಂಸ್ಕೃತಿಕ ಸಂಘಟನೆ ‘ಸಮುದಾಯ’, ‘ಬಂಡಾಯ ಸಾಹಿತ್ಯ ಸಂಘಟನೆ’ಗಳ ಚಟುವಟಿಕೆಗಳನ್ನೂ ಗಮನಿಸಬಹುದು.

ಹೀಗೆಲ್ಲ ಇದ್ದರೂ, ಜಾತಿವಿನಾಶವೆಂಬುದು ರೈತಸಂಘದ ಪಾಲಿಗೆ ಕೇಂದ್ರ ಪ್ರಶ್ನೆಯಾಗದೆ ಹೋದದ್ದರಿಂದಲೇ, ಆ ಸಂಘಟನೆ-  ಆರಂಭದಲ್ಲೇ ಸೂಚಿಸಿದ ಹಾಗೆ, ಒಮ್ಮೆ ದಲಿತರ ಮಿತ್ರನಾಗಿ ಇನ್ನೊಮ್ಮೆ ಶತ್ರುವಾಗಿ ದ್ವಿಪಾತ್ರಾಭಿನಯ ಮಾಡುತ್ತ ಬಂತು!

ಇಲ್ಲಿ ನನಗೆ ಮುಖ್ಯವಾದದ್ದು- ದಲಿತ ಸಂಘರ್ಷ ಸಮಿತಿ, ಯಾವ ಮಾನದಂಡದಲ್ಲೂ ದಲಿತನಲ್ಲದ ನನ್ನಂಥವರನ್ನೂ ಸಂಘಟನೆಯ ಅಂತರಂಗಕ್ಕೆ ಬಿಟ್ಟುಕೊಂಡು ಪೊರೆದದ್ದು. ದೇವನೂರ ಮಹಾದೇವ, ಬಹುಕಾಲ ನಾನು ಮನಸಾ ಸ್ವೀಕರಿಸಿದ್ದ ನನ್ನ ನಾಯಕರಾಗಿದ್ದರು. ಜೊತೆಗೆ ನನ್ನ ತಿಳುವಳಿಕೆಯ ಬಹುಭಾಗ ನನಗೆ ದಕ್ಕಿದ್ದೇ ದಲಿತ ಸಂಘಟನೆಯ ಸಂಪರ್ಕದಲ್ಲಿ. ನಾನೊಬ್ಬನೇ ಅಲ್ಲ, ನನ್ನ ಥರದ ಇನ್ನೂ ಅನೇಕರನ್ನು ನಾನೇ ಬಲ್ಲೆ. ಇಂದಿಗೂ ದಲಿತ ಚಿಂತನೆಯೇ ನನ್ನ ತಾತ್ವಿಕ ತವರುಮನೆ ಎಂದು ಹೇಳಲು ನನಗೆ ಯಾವ ಅಳುಕೂ ಇಲ್ಲ. (ಆತ್ಮೀಯರೊಬ್ಬರು, ನನಗೆ ‘ದಲಿತ ಕಾಮಾಲೆ’ ಎಂದು ಛೇಡಿಸಿದ್ದೂ ಇದೆ!)

ಆ ಎರಡೂ ಸಂಘಟನೆಗಳ ವ್ಯತ್ಯಾಸ ಇನ್ನೂ ಸ್ಪಷ್ಟವಾಗಬೇಕಾದರೆ, ಅವೆರಡರ ನಿರ್ದಿಷ್ಟ ಕಾರ್ಯಕ್ರಮಗಳನ್ನೇ ನೋಡಬಹುದು.

ಎಲ್ಲರಿಗೂ ಗೊತ್ತು- ರೈತಸಂಘದ ಮುಖ್ಯ ಸಾಧನೆ ಅಧಿಕಾರಶಾಹಿಯನ್ನು ಮಣಿಸಿದ್ದು. ‘ಬ್ರಹ್ಮ ಬಂದರೂ ಬಗ್ಗದ’ ಪೊಲೀಸರೂ ಸೇರಿದಂತೆ ಎಲ್ಲ ಅಧಿಕಾರಿಗಳೂ, ವಿಶೇಷವಾಗಿ ರೈತ ಚಳವಳಿ ಪ್ರಬಲವಾಗಿದ್ದ ಜಿಲ್ಲೆಗಳಲ್ಲಿ, ಹಸಿರು ಶಾಲು ಕಂಡರೆ ತಗ್ಗಿ ಬಗ್ಗಿ ನಡೆಯುವ ಪರಿಸ್ಥಿತಿ ಉಂಟಾಗಿದ್ದು ಹುಡುಗಾಟದ ಮಾತಲ್ಲ. ರೈತ ಕಾರ್ಯಕರ್ತರು ಅಧಿಕಾರಿಯ ಕೊರಳಪಟ್ಟಿ ಹಿಡಿದು, ಅವನ ಜೋಬಿಗೆ ಕೈ ಹಾಕಿ, ತಿಂದ ಲಂಚ ವಾಪಸು ಕೊಡಿಸಿದ ನಿದರ್ಶನಗಳು ನನಗೇ ಗೊತ್ತು. ಇನ್ನೊಂದು ಮಹತ್ವದ ಕಾರ್ಯಕ್ರಮ- ಮರುಜಫ್ತಿ,- ಕೆ.ಟಿ. ಶಿವಪ್ರಸಾದ್ರ ಪರಿಕಲ್ಪನೆ. ಸಹಕಾರ ಸಂಘಗಳ ಅಧಿಕಾರಿಗಳು ಜಫ್ತಿ ಮಾಡಿಕೊಂಡು ಹೋದ ಮನೆ ಸಾಮಾನುಗಳನ್ನು ರೈತರೇ ಮರುಜಫ್ತಿ ಮಾಡಿ ವಾಪಸು ತರುವುದು! ಸಾಲ ವಸೂಲು ಮಾಡಲು ಬರುವ ಆ ಅಧಿಕಾರಿಗಳು ರೈತರ ಮನೆಯ ಪಾತ್ರೆ ಪಡಗಗಳನ್ನೂ ಬಿಡದೆ ಜಫ್ತಿ ಮಾಡಿ ಒಯ್ಯುವುದು ಅತ್ಯಾಚಾರಕ್ಕೆ ಸಮಾನವಾದ ದೌರ್ಜನ್ಯ. ಗುಂಡೂರಾಯರ ಕಾಂಗ್ರೆಸ್ ಸರ್ಕಾರದಲ್ಲಿ ಅವ್ಯಾಹತವಾಗಿ ನಡೆದ ಅತಿರೇಕವಿದು. ‘ನನ್ನ ಕಣ್ಣೆದುರೇ ನಮ್ಮ ಮನೆ ಜಫ್ತಿಯಾಗಿತ್ತು. ಅದು ತರುವ ವೇದನೆ ಅಪಾರ. ಅವಮಾನ, ಅಸಹಾಯಕತೆ, ಆಕ್ರಂದನ ಜೊತೆಯಾಗಿಯೇ ತರುವ, ಹಳ್ಳಿಗರ ವ್ಯಕ್ತಿತ್ವವನ್ನೇ ನಾಶಪಡಿಸುವ ಕಾರ್ಯಕ್ರಮವದು. ಈ ಮರುಜಫ್ತಿ ರೈತರಲ್ಲಿ ಆತ್ಮಸ್ಥೈರ್ಯವನ್ನು ಹುಟ್ಟುಹಾಕಿತು. ಅಧಿಕಾರಿಗಳನ್ನು ಕಂಡರೆ ಹೆದರುತ್ತಿದ್ದವರು ಕಪಾಳಕ್ಕೆ ಬಾರಿಸಲು ಹಿಂದೆಗೆಯದಂತೆ ಮಾಡಿಸಿತು…’ ಎಂದು ರೈತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕರಾಗಿದ್ದ ಪಾಂಡುರಂಗ ವಿಠಲ (ಕಲ್ಲರಳಿ ಹೂವ್ವಂತೆ ಕೃತಿಯಲ್ಲಿ) ನೆನೆಸಿಕೊಂಡಿದ್ದರು. (ಇದನ್ನು ಬರೆಯುತ್ತಿರುವ ಸಂದರ್ಭದಲ್ಲೇ ಕಡಿದಾಳು ಶಾಮಣ್ಣನವರ ಆ ದಶಕ ಎಂಬ ಅಪೂರ್ವ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಈ ಜಫ್ತಿ ಎಂಬ ಹೆಸರಿನ ಅತ್ಯಾಚಾರದ ಎದೆಯೊಡೆಯುವ ವಿವರಗಳಿವೆ…)

ಅದು ಹಾಗಿದ್ದರೂ, ಅಧಿಕಾರಿಗಳಿಗೆ ‘ಕಪಾಳಕ್ಕೆ ಬಾರಿಸುವುದು’; ಅಥವಾ ಪ್ರೊಫೆಸರ್ ಸ್ವತಃ ಒಮ್ಮೆ ರಾಮಕೃಷ್ಣ ಹೆಗಡೆಯವರನ್ನು ‘ಕಂಬಕ್ಕೆ ಕಟ್ಟಿ ಹಾಕಿ ಹೊಡೆಸುತ್ತೇವೆ’ ಅಂದಿದ್ದು, (ಆರಂಭದ ‘ಕರಿಮೀನು’ ಪ್ರಸಂಗ ಸಹ)- ಸೂಚಿಸುವುದು ಫ್ಯೂಡಲ್ ಮನೋಧರ್ಮವನ್ನೇ ಅಂದರೆ ಕೆಲವರಿಗೆ ಇರಿಸು ಮುರಿಸಾಗಬಹುದು. (ಫ್ಯೂಡಲ್ ಶಬ್ದದ ಸೀಮಿತ ಅರ್ಥವ್ಯಾಪ್ತಿ ತಿಳಿದೂ ಎಲ್ಲರ ಗ್ರಹಿಕೆಗೆ ಅನುವಾಗಲೆಂಬ ಒಂದೇ ಕಾರಣಕ್ಕೆ ಅದನ್ನು ಬಳಸುತ್ತಿದ್ದೇನೆ.)

(ಮುಂದುವರೆಯುವುದು)

2 thoughts on “ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3

  1. ಚೇತನ್ ಹೊಸಕೋಟೆ

    ಲೇಖನ ಸಮಗ್ರವಾಗಿ ಅರ್ಥ ಮೂಡಿಸುತ್ತಿದೆ, ಮುಂದುವರೆಸಿ.

    Reply
  2. KOTETHOTA ARUNA KUMAR

    ಪ್ರಿಯರೇ
    ರೈತ ಚಳುವಳಿ ನಿಂತಲ್ಲೇ ಇರುವ ಕಾರಣವೆಂದರೆ ಪೂರ್ವ ಯೋಜನೆಯಿಲ್ಲದ ಅನಗತ್ಯವಾದ ರಾಜಕೀಯ ಪ್ರವೇಶ. ಪ್ರೊಫೆಸರ್ ನ೦ತರ ದಿಕ್ಕು ದಸೆಯಿಲ್ಲದ ನಾಯಕತ್ವ ಚಳುವಳಿಯ ದಿಕ್ಕಪಾಲಾಗಿದೆ.

    Reply

Leave a Reply to ಚೇತನ್ ಹೊಸಕೋಟೆ Cancel reply

Your email address will not be published. Required fields are marked *