ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ…


– ರವಿ ಕೃಷ್ಣಾರೆಡ್ಡಿ  


ಇಂದು ಭಾರತ ಜನತಂತ್ರಗೊಂಡ ದಿನದ ವಾರ್ಷಿಕಾಚರಣೆ.

ಬಹುಶಃ ನಾನು ಈ ನನ್ನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಎಂದೂ ಇಷ್ಟೊಂದು ನಿರುತ್ಸಾಹಗೊಂಡಿರಲಿಲ್ಲ. ಅದರಲ್ಲೂ ಕರ್ನಾಟಕದ ರಾಜಕೀಯ ವ್ಯವಸ್ಥೆಯ ಬಗ್ಗೆ, ಇಲ್ಲಿನ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ, ಮತ್ತು ಜನ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯ ಮತ್ತು ಅನೀತಿಗಳಿಗೆ ಪ್ರತಿಸ್ಪಂದಿಸುತ್ತಿರುವ ರೀತಿ ನೋಡಿ ನಿಜಕ್ಕೂ ವಾಕರಿಕೆ ಆಗುತ್ತಿದೆ.

ಇದಕ್ಕೆ ನಾನು ಕಳೆದ ಮೂರು ದಿನಗಳಿಂದ ಪಟ್ಟುಬಿಡದೆ ಕೂತು ಓದಿದ “All the President’s Men” ಪುಸ್ತಕ ಮತ್ತು ಇಂದು ಹರಡಿಕೊಂಡು ಕೂತಿರುವ ಶಾಸಕನೊಬ್ಬನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ದಾಖಲೆಗಳೂ ಸ್ವಲ್ಪಮಟ್ಟಿಗೆ ಕಾರಣ ಇರಬಹುದು.

ಬಹುಶಃ ನಿಮಗೆ ಗೊತ್ತಿರಬಹುದು, ಅಮೆರಿಕದ ಇತಿಹಾಸದಲ್ಲಿ ರಾಜೀನಾಮೆ ನೀಡಿ ಹೊರನಡೆದ ಏಕೈಕ ರಾಷ್ಟ್ರಾಧ್ಯಕ್ಷ ರಿಚರ್ಡ್ ನಿಕ್ಸನ್. ಅಮೆರಿಕದ ರಾಜಕೀಯ ನಮ್ಮಷ್ಟು ಎಂದೂ ಗಬ್ಬೆದ್ದಿರಲಿಲ್ಲ. ಆದಷ್ಟೂ ನೀತಿ-ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವ ವ್ಯವಸ್ಥೆ ಅದು. ಅದಕ್ಕೆ ಕಾರಣ ಅಲ್ಲಿನ ರಾಜಕಾರಣಿಗಳಷ್ಟೇ ಅಲ್ಲ. ಅಲ್ಲಿಯ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಚಿಂತಕರು, ಉತ್ತರದಾಯಿತ್ವವನ್ನು ಗಟ್ಟಿಯಾಗಿ ಅಪೇಕ್ಷಿಸುವ ಅಲ್ಲಿಯ ಜನಸಾಮಾನ್ಯರು. ಹೀಗೆ ಎಲ್ಲರೂ ಅಲ್ಲಿಯ ವ್ಯವಸ್ಥೆ ತಕ್ಕಷ್ಟು ಮಟ್ಟಿಗೆ ನ್ಯಾಯಯುತವಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಆದರೆ ಇಂತಹ ವ್ಯವಸ್ಥೆಯಲ್ಲಿಯೂ ನಿಕ್ಸನ್ ಮತ್ತು ಆತನ ಕೆಳಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಅಮೇರಿಕದ ಮಟ್ಟಿಗೆ ಮಾಡಬಾರದಂತಹ ಅಪಚಾರ ಮಾಡಿದರು. ಅದು 1971-72ರ ಸಮಯ. ನಿಕ್ಸನ್‌ನ ಮರುಚುನಾವಣೆಗೆ ಸಿದ್ಧಮಾಡಿಕೊಳ್ಳುತ್ತಿದ್ದ ಆತನ ಗುಂಪು ತಮ್ಮ ವಿರೋಧಿ ಗುಂಪಿನ ಜನರ ಫೋನ್‌ಗಳನ್ನು ಕದ್ದಾಲಿಸಿದರು. ಅವರ ಮೇಲೆ ವ್ಯವಸ್ಥಿತ ಅಪಪ್ರಚಾರ ಮತ್ತು ಪಿತೂರಿಗಳನ್ನು ಮಾಡಿದರು. ಕೊನೆಗೆ ವಿರೋಧಪಕ್ಷದ ಕಚೇರಿಯಲ್ಲಿಯೇ ಕದ್ದಾಲಿಕೆ ಯಂತ್ರ ಅಳವಡಿಸಲು ಯತ್ನಿಸಿದರು. ಆ ಯತ್ನದಲ್ಲಿ ಇವರ ಜನ ತೊಡಗಿದ್ದಾಗ ಅಚಾನಕ್ ಆಗಿ ಸಿಕ್ಕಿಬಿದ್ದರು. ಅದೇ ವಾಟರ್‌ಗೇಟ್ ಪ್ರಕರಣ ಮತ್ತು ಹಗರಣ.

ಈ ಘಟನೆಯ ಹಿಂದೆ ಬಿದ್ದು ಆ ಇಡೀ ಪ್ರಕರಣವನ್ನು ಬೇಧಿಸುತ್ತಾ ಹೋಗಿದ್ದು ವುಡವರ್ಡ್ ಮತ್ತು ಬರ್ನ್‍ಸ್ಟೀನ್ ಎಂಬ ಇಬ್ಬರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಪತ್ರಕರ್ತರು. ಆಗ ಅವರಿಬ್ಬರಿಗೂ ಮುವ್ವತ್ತರ ಆಸುಪಾಸು. ನಂತರದ ದಿನಗಳಲ್ಲಿ ಅಮೆರಿಕದ ಅನೇಕ ಪತ್ರಕರ್ತರು, ಟೈಮ್, ನ್ಯೂಸ್‌ವೀಕ್, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, .. ಹೀಗೆ ಹಲವು ಮಾಧ್ಯಮ ಸಂಸ್ಥೆಗಳು ಈ ಹಗರಣವನ್ನು ಬೇಧಿಸಲು ಯತ್ನಿಸುತ್ತವೆ. ಆದರೆ ವುಡವರ್ಡ್, ಬರ್ನ್‍ಸ್ಟೀನ್ ಮತ್ತು ವಾಷಿಂಗ್ಟನ್ ಪೋಸ್ಟ್‌ನ ಎಡಬಿಡದೆ ಸಾಗಿದ ಇನ್ವೆಸ್ಟಿಗೇಟಿವ್ ಜರ್ನಲಿಸಂ ಆ ಹಗರಣ ಬಯಲಾಗಲು ಪ್ರಮುಖ ಕಾರಣ. ತನ್ನ ಸಹಚರರು ಮಾಡುತ್ತಿದ್ದ ಕೆಲವು ಅಕ್ರಮ ಕೆಲಸಗಳು ನಿಕ್ಸನ್‌ಗೆ ಗೊತ್ತಿತ್ತು. ಅದನ್ನು ಮುಚ್ಚಿ ಹಾಕಲು ಮಾಡುತ್ತಿದ್ದ ಪ್ರಯತ್ನಗಳ ಬಗ್ಗೆಯೂ ಆತನಿಗೆ ಅರಿವಿತ್ತು. ಮತ್ತು ಆ ಇಡೀ ವಿದ್ಯಮಾನದಲ್ಲಿ ನಿಕ್ಸನ್ ಸುಳ್ಳು ಹೇಳುತ್ತ, ಆರೋಪಗಳನ್ನು ನಿರಾಕರಿಸುತ್ತ ಬಂದ. ಕೊನೆಗೆ ಎಲ್ಲವೂ ಬಯಲಾಗಿ ರಾಜೀನಾಮೆ ನೀಡಿ, ಆತನ ಉಪಾಧ್ಯಕ್ಷನೇ ಅಧ್ಯಕ್ಷನಾದ ಮೇಲೆ ಆತನಿಂದ ಕ್ಷಮಾದಾನ ಪಡೆದುಕೊಂಡು ಜೈಲುಪಾಲಾಗದೆ ಉಳಿದುಕೊಂಡ. (ಮತ್ತೂ ಒಂದಷ್ಟು ವಿವರಗಳಿಗೆ ನನ್ನ ಈ ಲೇಖನ ನೋಡಿ.)

ಈ ಪ್ರಕರಣ ಮತ್ತು ಅದನ್ನು ಬಯಲಿಗೆಳೆದ ರೀತಿ ನಮ್ಮ ಎಲ್ಲಾ ಪತ್ರಕರ್ತರಿಗೂ, ಅದರಲ್ಲೂ ವಿಶೇಷವಾಗಿ ರಾಜಕೀಯ ವರದಿಗಾರರಿಗೆ ಗೊತ್ತಿರಲೇಬೇಕು. ಈ ಪುಸ್ತಕ ಪತ್ರಕರ್ತರಿಗೆ ಪಠ್ಯವಾಗಬೇಕು. ಆದರೆ ಇತ್ತೀಚಿನ ಪತ್ರಕರ್ತರಿಗೆ ಇದು ಗೊತ್ತಿರುವ ಸಾಧ್ಯತೆಗಳು ಬಹಳ ಕಮ್ಮಿ ಎನ್ನಿಸುತ್ತದೆ. ನಾನು 2006ರಲ್ಲಿ ವಿಕ್ರಾಂತ ಕರ್ನಾಟಕ ಆರಂಭಿಸುವ ಮೊದಲು ಬೆಂಗಳೂರಿನಲ್ಲಿ ಕೆಲವು ಹಿರಿಯ ಪತ್ರಕರ್ತರು ಮತ್ತು ಸಂಪಾದಕರೊಡನೆ ಒಂದು ಸಂವಾದ ಏರ್ಪಡಿಸಿದ್ದೆ. ಅದಾದ ನಂತರ ಈ ಪುಸ್ತಕವನ್ನು ಆಧರಿಸಿ ತೆಗೆದಿರುವ ಅದೇ ಹೆಸರಿನ ಸಿನೆಮಾ ಪ್ರದರ್ಶನವನ್ನೂ ವ್ಯವಸ್ಥೆ ಮಾಡಿಸಿದ್ದೆ. ಅದನ್ನು ನೋಡಲು ಉಳಿದವರು ಹತ್ತು ಜನರೂ ಇರಲಿಲ್ಲ.

ಕರ್ನಾಟಕದಲ್ಲಿ ಇಂದು ಭ್ರಷ್ಟಾಚಾರ ಎನ್ನುವುದು, ಅದರಲ್ಲೂ ರಾಜಕಾರಣಿಗಳ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳು, ಎಲ್ಲಾ ತರಹದ ಎಲ್ಲೆಗಳನ್ನೂ ಮೀರಿವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಹತ್ತಾರು ಜನ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್‌ಗಳು, ಪ್ರಾಮಾಣಿಕ ವರದಿಗಾರರು ಹುಟ್ಟಿಕೊಳ್ಳಬೇಕಿತ್ತು. ಏನಾಗಿದೆ ಇಲ್ಲಿ?

ಇವತ್ತು ಬಯಲಾಗುತ್ತಿರುವ ಪ್ರಕರಣಗಳೂ ಸಹ ರಾಜಕೀಯ ವಿರೋಧಿಗಳು ಪತ್ರಿಕಾಲಯಗಳಿಗೆ ತಾವೇ ಖುದ್ದಾಗಿ ತಲುಪಿಸುತ್ತಿರುವ ದಾಖಲೆ ಮತ್ತು ಮಾಹಿತಿಗಳೇ ಹೊರತು ಪತ್ರಕರ್ತರು ತಮ್ಮ ಕಚೇರಿಯಿಂದ ಹೊರಗೆ ಹೋಗಿ ಮಾಹಿತಿ ಕಲೆಹಾಕುತ್ತಿಲ್ಲ. ಇಂತಹ ಸ್ವಚ್ಚಂದ ಭ್ರಷ್ಟಾಚಾರದ ಸಮಯದಲ್ಲಿ ಮತ್ತು ಮಾಹಿತಿ ಹಕ್ಕಿನ ಯುಗದಲ್ಲೂ ಪತ್ರಕರ್ತರು ಮತ್ತು ಅವರ ಸಂಪಾದಕರು ದಡ್ಡರಾಗಿದ್ದಾರೆ; ಸೋಮಾರಿಗಳಾಗಿದ್ದಾರೆ; ಭ್ರಷ್ಟರಾಗಿದ್ದಾರೆ; ಖದೀಮರಾಗಿದ್ದಾರೆ; ಪಕ್ಷಪಾತಿಗಳಾಗಿದ್ದಾರೆ; ಶ್ರೀಮಂತರಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದ ಹಗರಣಗಳನ್ನೇ ನೆನಪಿಸಿಕೊಳ್ಳಿ. ಒಂದೊಎರಡೊ ಬಿಟ್ಟರೆ ಮಿಕ್ಕೆಲ್ಲ ಹಗರಣ ಖಾಸಗಿ ಜನ ಕೋರ್ಟ್ ಮೆಟ್ಟಿಲು ಹತ್ತಿ ಜನರ ಮುಂದೆ ಇಟ್ಟದ್ದೇ ಹೊರತು ನಮ್ಮ ಪತ್ರಿಕೆಗಳು ಬಯಲಿಗೆಳೆದದ್ದು ಎಷ್ಟು?

ಈ ಮಧ್ಯೆ ಅಧಿಕಾರಸ್ಥರಿಂದ ಲಾಭ ಮಾಡಿಕೊಂಡ ಪತ್ರಕರ್ತರ ಮತ್ತು ಮಾಧ್ಯಮಸಂಸ್ಥೆಗಳ ಪಟ್ಟಿಯೇ ದೊಡ್ದದಿದೆ.

ಇನ್ನು ವರ್ಷ ಒಪ್ಪತ್ತಿನಲ್ಲಿ ಬರಲಿರುವ ಚುನಾವಣೆಗಳಲ್ಲಿ ಅದೇ ಭ್ರಷ್ಟ ಜನ ಚುನಾವಣೆಗೆ ನಿಲ್ಲಲಿದ್ದಾರೆ. ನಮ್ಮ ರಾಜಕೀಯ ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ.

ಇಂತಹ ಸ್ಥಿತಿಯಲ್ಲಿ ಗಣತಂತ್ರ ಎಲ್ಲಿದೆ?

4 thoughts on “ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ…

  1. ashok gc

    Satya sangatiyanne dittatanadinada heliruviri. modalina patrakartara hage eegina patrakartaralli vruttigourava kadime aagi hanada daha hechhagtide.

    Reply
  2. patrakarta

    ದಡ್ಡರಾಗಿದ್ದಾರೆ, ಸೋಮಾರಿಗಳಾಗಿದ್ದಾರೆ, ಭ್ರಷ್ಟರಾಗಿದ್ದಾರೆ – ಎಲ್ಲವೂ ಸತ್ಯ. ಕೆಲವರು ಕೇವಲ ದಡ್ಡರಾಗಿರಬಹುದು ಅಥವಾ ಭ್ರಷ್ಟರಾಗದೆ ಕೇವಲ ಸೋಮಾರಿಗಳಾಗಿರಬಹುದು. ಎಲ್ಲೋ ಕೆಲವರು, ಕೆಲವೇ ಕೆಲವರು ಮಾತ್ರ ಈ ಮೂರೂ ಆಗಿರುತ್ತಾರೆ. ಏಕೆಂದರೆ ದಡ್ಡ ಪತ್ರಕರ್ತ ಭ್ರಷ್ಟನಾಗಲು ಕಷ್ಟ. ಸೋಮಾರಿಯಾಗಿದ್ದರೂ ಲಾಭವಿಲ್ಲ. ಆದರೆ ಇದರಾಚೆಗಿನ ಪತ್ರಕರ್ತರೂ ಇದ್ದಾರೆ ಎನ್ನುವುದನ್ನು ನೀವು ನಿರಾಕರಿಸುತ್ತೀರಿ ಎಂದು ಅನ್ನಿಸುವುದಿಲ್ಲ. ಆದರೆ ಒಂದಂತೂ ಸ್ಪಷ್ಟ. ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ನಿಕ್ಸನ್ ನಂತೆ ಯಾರನ್ನೂ ಅಧಿಕಾರದಿಂದ ಮನೆಗೆ ಕಳುಹಿಸುವ ಸಾಧ್ಯತೆ ಕಡಿಮೆ ಎಂದೇ ನನ್ನ ಭಾವನೆ. ಎಷ್ಟೇ ಆರೋಪಗಳು ಕೇಳಿ ಬಂದರೂ, ಅಧಿಕಾರದಲ್ಲಿದ್ದವರನ್ನು ಬೆಂಬಲಿಸಲು ಒಂದು ಜಾತಿಗೆ ಸೇರಿದ ಜನಾಂಗದವರು, ಮಠದ ಸ್ವಾಮೀಜಿಗಳು ಬೀದಿಗಿಳಿಯುತ್ತಾರೆ. ಇತ್ತೀಚೆಗೆ ನ್ಯಾಯಾಂಗವೂ ನ್ಯಾಯಪರ ಇಲ್ಲವೇನೋ ಎಂಬ ಭಾವನೆ ಮೂಡುತ್ತಿದೆ. ಆದರೂ ನಿರಾಶರಾಗುವ ಅಗತ್ಯವಿಲ್ಲ. 2ಜಿ ಹಗರಣ ಬಯಲಾಗಿದ್ದು ಒಬ್ಬ ಪತ್ರಕರ್ತನಿಂದ. ವಾಜಪೇಯಿ ನೇತೃತ್ವದಲ್ಲಿದ್ದ ಆಡಳಿತಗಾರರ ಭ್ರಷ್ಟಾಚಾರ ಬಯಲಾದದ್ದು ತೆಹಲ್ಕಾ ವೆಬ್ ತಾಣ ನಡೆಸಿದ ಸ್ಟಿಂಗ್ ನಿಂದ.
    ಭ್ರಷ್ಟಾಚಾರ ಬಯಲುಗೆಳೆಯುವ ಆಚೆಗೂ ಪತ್ರಿಕೋದ್ಯಮಕ್ಕೆ ಅನೇಕ ಸಾಧ್ಯತೆಗಳಿವೆ. ಅವುಗಳೆಡೆಗಾದರೂ ಹೆಚ್ಚಿನ ಗಮನ ವಹಿಸಿದರೆ ಒಳಿತು.
    – ಹೀಗೊಬ್ಬ ಪತ್ರಕರ್ತ.

    Reply
  3. narasimha

    ಮಾಧ್ಯಮಗಳ ಇತ್ತೀಚಿನ ವರ್ತಮಾನಗಳನ್ನು ಕಂಡರೆ ಸಾಮಾಜಿಕ ಪ್ರಜ್ಞೆ ಯನ್ನು ಅವು ಕಳೆದುಕೊಂಡಿವೆ ಎಂದೆನ್ನಿಸದಿರದು.ರಿಯಾಲಿಟಿ ಷೋ, ದೊಡ್ಡವರೆಂದು ಕೊಂಡವರ ದಾರಿ ತಪ್ಪಿದ ಚಟುವಟಿಕೆಗಳ ವರ್ಣನೆ, ಕ್ರೈಂ ಸುದ್ದಿಗಳೇ ಅವುಗಳಿಗೀಗ ಮೃಷ್ಟಾನ್ನ ಭೋಜನ. ಅದನ್ನು ಜನರೂ ಚಪ್ಪರಿಸಿ ಸವಿಯುತ್ತಿದ್ದಾರೆಂಬ ಭ್ರಾಂತಿಯಲ್ಲಿ ಸಾಗುತ್ತಿರುವ ಅವುಗಳು ನಾವು ಪ್ರಕಟಿಸಿದ್ದು, ತೋರಿಸಿದ್ದೆ ಅಂತಿಮ ಎಂಬ ನಿರ್ಧಾರಕ್ಕೆ ಬಂದಿರುವುದು ಕೂಡ ಬದಲಾಗದ ಅವುಗಳ ನಡೆಯಲ್ಲಿ ವ್ಯಕ್ತಗೊಳ್ಳುತ್ತಿದೆ. ಮಾಧ್ಯಮಗಳು ಪರಸ್ಪರ ವಿರೋಧಿಗಳ ಕೆಸರೆರಚಾಟದ ವೇದಿಕೆಗಳಾಗುತ್ತಿರುವುದು ದುರಂತ. ಒಟ್ಟಾರೆ ಬಹುತೇಕ ಮಾಧ್ಯಮಗಳು ವಾಸ್ತವದಿಂದ – ವರ್ತಮಾನದಿಂದ ದೂರಾಗಿರುವುದು ಸಮಾಜದ ದೃಷ್ಟಿಯಿಂದ ಆರೋಗ್ಯಕರವಲ್ಲ. ಪತ್ರಕರ್ತನಾದವನು ಯಾರಿಗೂ/ಯಾವುದಕ್ಕೂ ಆಪ್ತನೆನಿಸಿ ಕೊಳ್ಳಬಾರದು,ಕೇವಲ ಪರಿಚಿತನಾಗಿರಬೇಕಷ್ಟೇ ,ಅದೂ ಅವಶ್ಯವೆನಿಸಿದಾಗ ಮಾತ್ರ.ಆದರೆ ಹೀಗೆ ವೃತ್ತಿ ಬದ್ದತೆಯಿಂದ ದುಡಿಯುತ್ತಿರುವವರು ಮಾಧ್ಯಮದಲ್ಲಿ ಇದ್ದಾರ ಎಂಬ ಪ್ರಶ್ನೆ ಮಾಧ್ಯಮಗಳ ನಡೆಯನ್ನು ಕಂಡವರಲ್ಲಿ ಉದ್ಭವಿಸದೇ ಇರದು. ಒಂದು ಸಂದರ್ಭವನ್ನು ಪ್ರಸ್ತಾಪಿಸಿ ‘ಹತ್ತಾರು ಜನ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್‌ಗಳು, ಪ್ರಾಮಾಣಿಕ ವರದಿಗಾರರು ಹುಟ್ಟಿಕೊಳ್ಳಬೇಕಿತ್ತು. ಏನಾಗಿದೆ ಇಲ್ಲಿ?’ ಎಂದು ಪ್ರಶ್ನಿಸಿದ್ದೀರಿ. ಇಲ್ಲಿ ಅನೇಕ ಪತ್ರಿಕೋದ್ಯಮದ ಪ್ರಾಮಾಣಿಕ ಕಳಕಳಿಯ ಆಶಯದನುಸಾರ ದುಡಿಯಬೇಕೆಂಬ ಆಕಾಂಕ್ಷೆ ಇರುವವರು ಖಂಡಿತಾ ಇದ್ದಾರೆ.ಆದರೆ ಅವರಿಗೆ ಅವಕಾಶಗಳ ಪ್ರವೇಶ ದೊರಕಿಲ್ಲ,ದೊರಕಿರುವವರಿಗೆ ಪ್ರಾಮಾಣಿಕ ಪ್ರಯತ್ನದ ಅವಕಾಶ ದಕ್ಕುತ್ತಿಲ್ಲದಿರಬಹುದು.ಎಲ್ಲರೂ ವಾಣಿಜ್ಯಿ ಕರಣದಿಂದಲೇ ಖ್ಯಾತಿ ಹಣ ಎಂದು ತಿಳಿದುಕೊಂಡು ಆ ವರ್ತುಲದಲ್ಲಿ ತಾವೂ ಸಿಲುಕಿ, ಆ ಕ್ಷೇತ್ರಕ್ಕೆ ಪ್ರವೆಶಿಸುವವರನ್ನೂ ಸಿಲುಕಿಸುವುದು ನಡೆಯುತ್ತಿದೆ.
    ಆ ಪರಿಸ್ತಿತಿ ಬದಲಾಗದ ಹೊರತು ಆಶಯ, ಆಶಯವಾಗಿಯೇ ಉಳಿಯಲಿದೆ.ಪ್ರಶ್ನೆಗಳಿಗೆ ಉತ್ತರವೇ ದೊರಕದ ಗೊಂದಲದ ಪರಿಸ್ತಿತಿ ಮುಂದುವರಿಯುತ್ತದೆ

    Reply
  4. Ananda Prasad

    ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಾಕಷ್ಟು ಅನುಕೂಲಗಳಿರುವಂತೆ ಕೆಲವು ಗಂಭೀರ ಲೋಪಗಳೂ ಇವೆ. ಬಂಡವಾಳಶಾಹಿ ವ್ಯವಸ್ಥೆಯ ಬಹಳ ದೊಡ್ಡ ಲೋಪವೆಂದರೆ ಇಂದು ಪ್ರಭಾವಶಾಲಿ ಜನಪರ ಮಾಧ್ಯಮವನ್ನು ಕಟ್ಟಲು ಬಂಡವಾಳಶಾಹಿ ವ್ಯವಸ್ಥೆಯೇ ಅಡ್ಡಗಾಲಾಗಿರುವುದು. ಇಂದು ಒಂದು ಟಿವಿ ವಾಹಿನಿಯನ್ನು ಕಟ್ಟಬೇಕಾದರೆ ೫೦ ರಿಂದ ೧೫೦ ಕೋಟಿ ಬಂಡವಾಳ ಬೇಕು ಎಂದು ಹೇಳಲಾಗುತ್ತಿದೆ. ಇಷ್ಟು ಬಂಡವಾಳ ಹಾಕಿ ಟಿವಿ ವಾಹಿನಿಯನ್ನು ನಡೆಸಬೇಕಾದರೆ ಪ್ರಮುಖ ಆದಾಯ ಮೂಲ ಜಾಹೀರಾತುಗಳು. ಜಾಹೀರಾತುಗಳು ಸಿಗುವುದು ಹೆಚ್ಚು ಜನ ನೋಡುವ ಕಾರ್ಯಕ್ರಮಗಳಿಗೆ ಮತ್ತು ಅದನ್ನು ನಿರ್ಣಯಿಸಲು ಟಿ. ಆರ್. ಪಿ. ರೇಟಿಂಗ್ ನಿರ್ಣಾಯಕ. ಇಂಥ ಪರಿಸ್ಥಿತಿಯಲ್ಲಿ ಮಾಧ್ಯಮಗಳಿಗೆ ದೇಶದ ಬಗ್ಗೆ, ಜನಪರ ನಿಲುವುಗಳ ಬಗ್ಗೆ ಚಿಂತಿಸಲು ಸಾಧ್ಯವಿಲ್ಲದ ಸ್ಥಿತಿ ಬಂದಿದೆ. ಯಾವುದು ಹೆಚ್ಚು ಜಾಹೀರಾತು ತರುತ್ತದೋ ಅದೇ ಕಾರ್ಯಕ್ರಮಗಳು ಟಿವಿಯಲ್ಲಿ ವಿಜ್ರಂಭಿಸುತ್ತವೆ. ಇಂದು ಭಾರೀ ಬಂಡವಾಳಗಾರರು ಸಾವಿರಾರು ಕೋಟಿ ರೂಪಾಯಿಗಳನ್ನು ಚೆಲ್ಲಿ ಟಿವಿ ವಾಹಿನಿಗಳ ಸಮೂಹವನ್ನೇ ಕೊಳ್ಳಲಾರಂಭಿಸಿದ್ದಾರೆ. ಅಲ್ಲಿಗೆ ಜನಪರ ಕಾಳಜಿಗಳ ಬಗ್ಗೆ ಚಿಂತಿಸುವ ಮಾತು ದೂರ ಉಳಿಯುತ್ತದೆ. ಬಂಡವಾಳಗಾರರಿಗೆ ಇನ್ನಷ್ಟು, ಮತ್ತಷ್ಟು ಹಣ ಹೇಗೆ ಮಾಡುವುದು ಎಂಬುದು ಒಂದೇ ಚಿಂತೆ. ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಮಾಧ್ಯಮವನ್ನು ಹೇಗೆ ಬಳಸಬಹುದು ಎಂಬುದು ಅವರ ಪ್ರಧಾನ ಆದ್ಯತೆ. ಹೀಗಾಗಿ ದೇಶದ ಬಗ್ಗೆ, ಮಾನವ ಜನಾಂಗದ ಒಳಿತಿನ ಬಗ್ಗೆ, ಜನಪರ ಕಾಳಜಿಗಳ ಬಗ್ಗೆ ಗಮನ ಹರಿಸಬೇಕಾಗಿರುವ ಮಾಧ್ಯಮಗಳು ಏನನ್ನು ಕೊಡುತ್ತವೆಯೋ ಅದನ್ನು ನೋಡುವುದು ಸಾಮಾನ್ಯ ಜನರ ಕರ್ಮವಾಗಿದೆ. ನಮಗೆ ಇಂಥ ಕಾರ್ಯಕ್ರಮ ಬೇಕು ಎಂದು ಹೇಳುವ, ಪ್ರಶ್ನಿಸುವ ಹಕ್ಕು ಸಾಮಾನ್ಯ ವೀಕ್ಷಕರಿಗೆ ಇಲ್ಲ. ಈ ಬಗ್ಗೆ ಯಾರಾದರೂ ಕೇಳಿದರೂ ಬಂಡವಾಳಶಾಹಿಗಳು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ. ಇಂದು ಜನರಲ್ಲಿ ಜಾಗೃತಿ ಮೂಡಿಸುವ ಹೆಚ್ಚಿನ ಸಾಧ್ಯತೆ ಟಿವಿ ವಾಹಿನಿಗಳಿಗೆ ಇದೆ. ಏಕೆಂದರೆ ಇದು ಅನಕ್ಷರಸ್ಥರನ್ನೂ, ಡಿ.ಟಿ. ಎಚ್. ಮೂಲಕ ದೇಶದ ಯಾವುದೇ ಮೂಲೆಯ ಹಳ್ಳಿಯನ್ನೂ ತಲುಪುವ ಪ್ರಭಾವಿ ಮಾಧ್ಯಮ. ಪತ್ರಿಕೆಗಳಾದರೆ ಹಳ್ಳಿಯ ಮೂಲೆಯನ್ನು ತಲುಪುವುದಿಲ್ಲ, ತಲುಪಿದರೂ ಅದನ್ನು ಕೊಂಡುಕೊಳ್ಳುವ ಜನ ಬಹಳ ಕಡಿಮೆ. ಇಂಥ ಪರಿಸ್ಥಿತಿಯಲ್ಲಿ ದೇಶದ ಬಗ್ಗೆ, ಹಾಗೂ ಜನಪರವಾಗಿ ಹೇಗೆ ಕಾರ್ಯಕ್ರಮಗಳನ್ನು ರೂಪಿಸಿ ಜನಜಾಗೃತಿ ಮಾಡಬಹುದು ಎಂಬುದು ಬಂಡವಾಳಗಾರರಿಗೆ ಬಿಟ್ಟದ್ದು. ಈ ಬಗ್ಗೆ ಅವರೇ ಚಿಂತಿಸಬೇಕು.

    Reply

Leave a Reply to narasimha Cancel reply

Your email address will not be published. Required fields are marked *