Karnataka High Court

ಸುಪ್ರೀಂಕೋರ್ಟಿನ ತೀರ್ಪು ಮತ್ತು ರಾಜ್ಯದ ಹೈಕೋರ್ಟಿನ ತೀರ್ಪು


– ರವಿ ಕೃಷ್ಣಾರೆಡ್ಡಿ  


ಕರ್ನಾಟಕದ ನ್ಯಾಯಾಂಗದ ಬಗ್ಗೆ ಮಾತನಾಡುವುದಕ್ಕೆ ಭಯವಾಗುತ್ತದೆ. ಇಲ್ಲಿರುವ ಭ್ರಷ್ಟತೆಯನ್ನು ಅಥವ ಅಯೋಗ್ಯತೆಯನ್ನು ಕುರಿತು ಎಷ್ಟು ಮಾತನಾಡಿದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ ಮತ್ತು ಆಗುತ್ತದೆ ಎನ್ನುವುದೇ ಗೊತ್ತಾಗದ ಸ್ಥಿತಿಯಲ್ಲಿದ್ದೇವೆ.

ಯಾರಿಗೆ ಯಾವ ಆಧಾರದ ಮೇಲೆ ಜಾಮೀನು ಸಿಗುತ್ತದೆ ಅಥವ ಸಿಗುವುದಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಯಾರೊ ಯಾರೋ ಗರ್ಲ್‌ಫ್ರೆಂಡ್‌ ಜೊತೆ ಡೀಲ್ ಮಾಡಿಕೊಂಡು ಏನೋ ಮಾಡಿಸಿಕೊಂಡರಂತೆ ಎನ್ನುವ ಸುದ್ದಿಗಳೆಲ್ಲ ಹರದಾಡುತ್ತವೆ. ಇನ್ಯಾರದೋ ತೀರ್ಪಿನ ಬಗ್ಗೆ ಜನ ರಾಜ್ಯಪಾಲರಿಗೇ ನೇರ ದೂರು ನೀಡುತ್ತಾರೆ. ನನಗೆ ಇತ್ತೀಚೆಗೆ ಗೊತ್ತಾದ ಪ್ರಕಾರ ಯಾವ ಬೆಂಚಿಗೆ ತಮ್ಮ ಕೇಸು ಹಾಕಿಕೊಂಡರೆ ಕೇಸು ತಮ್ಮ ಪರ-ವಿರುದ್ಧ ಆಗುತ್ತದೆ ಎನ್ನುವ ಕಲ್ಪನೆ ವಕೀಲರಿಗೆ ಇರುತ್ತದಂತೆ. ಎಲ್ಲಿಗೆ ಹೋಯಿತು ನಮ್ಮ ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯ?

ಈಗ, ನೆನ್ನೆ ತಾನೆ ಸುಪ್ರೀಮ್ ಕೋರ್ಟ್ ಕರ್ನಾಟಕ ಹೈಕೊರ್ಟ್‌ ಈ ಹಿಂದೆ ನೀಡಿದ್ದ ತೀರ್ಪನ್ನು ಮತ್ತೊಮ್ಮೆ ತಳ್ಳಿ ಹಾಕಿದೆ.

ಇದು ಪಕ್ಷೇತರರ ಅನರ್ಹತೆ ವಿಷಯಕ್ಕೆ ಸಂಬಂಧಿಸಿದ್ದು. ಕರ್ನಾಟಕದ ಈಗಿನ ಸ್ಪೀಕರ್ ಇಲ್ಲಿಯವರೆಗೆ ನಮ್ಮೆಲ್ಲರಿಗೂ ಗೌರವ ಹುಟ್ಟುವ ರೀತಿಯಲ್ಲಿ ಏನೇನೂ ನಡೆದುಕೊಂಡಿಲ್ಲ. ಬಿಜೆಪಿಯ ಹನ್ನೊಂದು ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ ವಿಷಯದಲ್ಲಿ ಸ್ಪೀಕರ್ ಹುದ್ದೆಯ ಎಲ್ಲಾ ಘನತೆ ಮತ್ತು ಸ್ವಾತಂತ್ರ್ಯವನ್ನು ಮಣ್ಣುಮುಕ್ಕಿಸಿದವರು ಅವರು. ಎಂತೆಂತಹ ಅನರ್ಹರು ಮತ್ತು ಅಯೋಗ್ಯರೆಲ್ಲ ಸ್ಪೀಕರ್ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಮತ್ತು ಅದನ್ನು ವಿಧಾನಸಭೆಯ ಆಡಳಿತ ಮತ್ತು ವಿರೋಧ ಪಕ್ಷದವರು ಸಹಿಸಿಕೊಳ್ಳುತ್ತಾರೆ ಎನ್ನುವುದೇ ನಮ್ಮ ಹಾಲಿ ವಿಧಾನಸಭಾ ಸದಸ್ಯರ composition ಎಂತಹುದು ಎನ್ನುವುದನ್ನು ತೋರಿಸುತ್ತದೆ. ನಾಚಿಕೆಗೇಡು.

ಆದರೆ, ನ್ಯಾಯಾಲಯ? ಯಾವ ಕೋರ್ಟನ್ನು ನಂಬುವುದು? ಹೇಗೆ ಇಲ್ಲಿಯ ನ್ಯಾಯಾಲಯದ ತೀರ್ಪುಗಳ ನಿಷ್ಪಕ್ಷಪಾತವನ್ನು ಖಚಿತ ಪಡಿಸಿಕೊಳ್ಳುವುದು?

ನ್ಯಾಯಾಂಗ ಸುಧಾರಣೆಗಳನ್ನು ಆದಷ್ಟು ಬೇಗ ಸಾಧ್ಯಮಾಡಿಕೊಳ್ಳದಿದ್ದರೆ ಈ ದೇಶದ ನ್ಯಾಯವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ, ಎರಡೂ ಉಳಿಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ಈ ಕೆಳಗಿನ ಲೇಖನ ನಾನು ಎಂಟು ತಿಂಗಳ ಹಿಂದೆ ಬರೆದದ್ದು ಮತ್ತು ಐದು ತಿಂಗಳ ಹಿಂದೆ ಇಲ್ಲಿ ವರ್ತಮಾನದಲ್ಲಿ ಪ್ರಕಟಿಸಿದ್ದು . ಇದನ್ನು ಸುಪ್ರೀಂ ಕೋರ್ಟ್‌ನ ನೆನ್ನೆಯ ತೀರ್ಪಿನ ಹಿನ್ನೆಲೆಯಲ್ಲಿ ನೋಡಿ; ಆ ತೀರ್ಪಿನ ವಿವರಗಳು ಡೆಕ್ಕನ್ ಹೆರಾಲ್ಡ್‌ನ ಈ ವರದಿಯಲ್ಲಿದೆ.

ಸುಪ್ರೀಂಕೋರ್ಟಿನ ತೀರ್ಪು ರಾಜ್ಯದ ಹೈಕೋರ್ಟನ್ನೂ ಟೀಕಿಸಿಲ್ಲವೆ

(ಈ ಲೇಖನ ಸುಮಾರು ಮೂರು ತಿಂಗಳಿನ ಹಿಂದೆ (16/05/11) ಬರೆದದ್ದು. ಕಾರಣಾಂತರಗಳಿಂದ ಇದು ಪ್ರಕಟವಾಗಬೇಕಾದ ಕಡೆ ಪ್ರಕಟವಾಗಲಿಲ್ಲ. ನೆನ್ನೆ (18/08/11) ರಾಜ್ಯಸಭೆಯಲ್ಲಿ ಬಂಗಾಳದ ಹೈಕೋರ್ಟ್ ನ್ಯಾಯಾಧೀಶರನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆ ಮೇಲೆ ಚರ್ಚೆ ಮತ್ತು ಮತ ಚಲಾವಣೆ ನಡೆದು ಜಡ್ಜ್ ವಿರುದ್ದ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ಪ್ರಕ್ರಿಯೆ ಲೋಕಸಭೆಯಲ್ಲಿ ಪೂರ್ಣಗೊಂಡಾಗ ಆ ಜಡ್ಜ್ ವಜಾ ಆಗಲಿದ್ದಾರೆ. ಆದರೆ, ನ್ಯಾಯಾಧೀಶರ ಭ್ರಷ್ಟಾಚಾರದ ವಿರುದ್ಧ ಮಾತು ಕೇಳಬರುತ್ತಿರುವುದು ಇದೇ ಮೊದಲಲ್ಲ. ಲೊಕಪಾಲ ಮಸೂದೆಯಲ್ಲಿ ನ್ಯಾಯಾಂಗವನ್ನು ಹೊರಗಿಡುವ ಬಗ್ಗೆ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮೂರು ತಿಂಗಳ ಹಿಂದೆ ಬರೆದ ಈ ಲೇಖನ ಈಗಲೂ ಪ್ರಸ್ತುತ ಇಂದು ಇಲ್ಲಿ ಪ್ರಕಟಿಸುತ್ತಿದ್ದೇನೆ… ರವಿ…)

Karnataka High Courtಕಳೆದ ಶುಕ್ರವಾರ ( ಮೇ 13, 2011 ) ಸುಪ್ರೀಂಕೋರ್ಟ್ ಕರ್ನಾಟಕದ 16 ಶಾಸಕರ ಅನರ್ಹತೆಯನ್ನು ರದ್ದುಪಡಿಸಿ ಆದೇಶ ಹೊರಡಿಸುವುದರ ಜೊತೆಗೆ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ರಾಜ್ಯದ ಮುಖ್ಯಮಂತ್ರಿಯನ್ನು ಕಟುಶಬ್ದಗಳಲ್ಲಿ ಟೀಕಿಸಿತು. ಆದರೆ, ಇದಕ್ಕೂ ಮುಖ್ಯವಾದುದನ್ನು ಸುಪ್ರೀಂಕೋರ್ಟ್ ನೇರವಾಗಿ ಹೇಳಲಿಲ್ಲ. ಅದೇನೆಂದರೆ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (11 ಬಿ.ಜೆ.ಪಿ. ಶಾಸಕರ ಅನರ್ಹತೆ ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ) ಕರ್ನಾಟಕ ರಾಜ್ಯದ ಉಚ್ಚನ್ಯಾಯಾಲಯ ಕೊಟ್ಟಿದ್ದ ತೀರ್ಪಿನಲ್ಲಿ ನ್ಯಾಯ ಇರಲಿಲ್ಲ ಎನ್ನುವುದು.

ಕಳೆದ ಅಕ್ಟೋಬರ್ 11ರ ವಿಶ್ವಾಸಮತ ಯಾಚನೆಯ ಹಿಂದಿನ ರಾತ್ರಿ ತರಾತುರಿಯಲ್ಲಿ ವಿಧಾನಸಭೆಯ ಸ್ಪೀಕರ್ ಮೇಲೆ ಉಲ್ಲೇಖಿಸಿದ 16 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಅವರು ಹಾಗೆ ಮಾಡಲು ಕಾನೂನು ಮತ್ತು ನ್ಯಾಯಪಾಲನೆಗಿಂತ ಹೆಚ್ಚಾಗಿ ತಮ್ಮ ಬಿ.ಜೆ.ಪಿ. ಪಕ್ಷದ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಜಯ ಲಭಿಸುವಂತೆ ಮಾಡುವುದೇ ಆಗಿತ್ತು. ಸ್ಪೀಕರ್‌ರ ಈ ಕ್ರಮ ಅನೈತಿಕ ಮತ್ತು ಅಕ್ರಮವಾದದ್ದು ಎಂದು ಎದ್ದು ಕಾಣಿಸುವಷ್ಟು ಲಜ್ಜಾಹೀನವಾಗಿತ್ತು. ಸ್ಪೀಕರ್‌ರ ಈ ಕ್ರಮವನ್ನು ಪ್ರಶ್ನಿಸಿ ಅನರ್ಹಗೊಂಡ ಬಿ.ಜೆ.ಪಿ.ಯ 11 ಬಂಡಾಯ ಶಾಸಕರು, ಮತ್ತು ಐವರು ಪಕ್ಷೇತರ ಶಾಸಕರು ಪ್ರತ್ಯೇಕವಾಗಿ ಹೈಕೋರ್ಟ್‌ಗೆ ದೂರು ನೀಡಿದರು.

ಬಂಡಾಯ ಶಾಸಕರ ಅನರ್ಹತೆಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಎನ್. ಕುಮಾರ್ ಸಾಕಷ್ಟು ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಕ್ಟೋಬರ್ 18ರಂದು ಪರಸ್ಪರ ಒಮ್ಮತವಿಲ್ಲದ ನ್ಯಾಯತೀರ್ಮಾನಕ್ಕೆ ಬಂದರು. ನ್ಯಾ. ಖೇಹರ್ ಸ್ಪೀಕರ್ ಮಾಡಿದ್ದು ಸರಿ ಎಂದರೆ, ನ್ಯಾ. ಕುಮಾರ್ ಸ್ಪೀಕರ್‌ರ ಕ್ರಮದಲ್ಲಿ ಲೋಪವನ್ನು ಗುರುತಿಸಿದರು. ಹೀಗೆ ಒಮ್ಮತದ ತೀರ್ಪಿಲ್ಲದ ಕಾರಣವಾಗಿ ಈ ಪ್ರಕರಣವನ್ನು ಮೂರನೆ ನ್ಯಾಯಮೂರ್ತಿಯ ಅಭಿಪ್ರಾಯಕ್ಕಾಗಿ ನ್ಯಾ. ಸಭಾಹಿತರಿಗೆ ಕಳುಹಿಸಲಾಯಿತು.

ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ನ್ಯಾ. ಸಭಾಹಿತರು ಅಕ್ಟೋಬರ್ 29ರಂದು ಮುಖ್ಯನ್ಯಾಯಮೂರ್ತಿ ಖೇಹರ್‌ರ ನ್ಯಾಯತೀರ್ಮಾನವನ್ನು ಅನುಮೋದಿಸಿದರು. ಇದರೊಂದಿಗೆ 2:1 ರ ಅನುಪಾತದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಸ್ಪೀಕರ್‌ರ ಕ್ರಮವನ್ನು ಎತ್ತಿಹಿಡಿದು 11 ಬಂಡಾಯ ಶಾಸಕರ ಅನರ್ಹತೆಯನ್ನು ಮಾನ್ಯಗೊಳಿಸಿತು. ಈ ಇಡೀ ಪ್ರಕರಣದಲ್ಲಿ ನಾವು ಗಮನಿಸಬೇಕಾಗಿರುವ ಅತಿಮುಖ್ಯ ಸಂಗತಿ ಏನೆಂದರೆ, ಕರ್ನಾಟಕದ ಉಚ್ಚನ್ಯಾಯಾಲಯದ ದೃಷ್ಟಿಗೆ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳ ನಡವಳಿಕೆಯಲ್ಲಿ ಯಾವುದೇ ಅನೈತಿಕತೆ ಮತ್ತು ಅಕ್ರಮ ಕಾಣಿಸದೆ ಇದ್ದುದು.

ಅನರ್ಹಗೊಂಡ ಬಂಡಾಯ ಶಾಸಕರ ಜೊತೆಜೊತೆಗೆ ಅನರ್ಹಗೊಂಡ ಐವರು ಪಕ್ಷೇತರ ಶಾಸಕರೂ ಕೂಡ ಕರ್ನಾಟಕದ ಉಚ್ಚನ್ಯಾಯಾಲಯಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾ. ಮೋಹನ್ ಶಾಂತನಗೌಡರ್, ನ್ಯಾ. ಅಬ್ದುಲ್ ನಜೀರ್, ಮತ್ತು ನ್ಯಾ. ಎಸ್. ಬೋಪಣ್ಣನವರ ಪೀಠವು ಸುದೀರ್ಘ ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಯಾವುದೇ ದುರುದ್ದೇಶದಿಂದ ನಡೆದುಕೊಂಡಿಲ್ಲ ಮತ್ತು ಅವರ ಕ್ರಮ ಸರಿ ಎಂಬ ತೀರ್ಪನ್ನು ಫೆಬ್ರವರಿ 15ರಂದು ನೀಡಿತು. ಇಲ್ಲಿ ಒತ್ತಿಹೇಳಬೇಕಾದ ಸಂಗತಿಯೆಂದರೆ ಈ ತೀರ್ಪು ಮೂವರು ನ್ಯಾಯಮೂರ್ತಿಗಳ ಒಮ್ಮತದ ನ್ಯಾಯತೀರ್ಮಾನವಾಗಿದ್ದದ್ದು.

ಹೀಗೆ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟಿನ ಆರು ನ್ಯಾಯಮೂರ್ತಿಗಳ ಪೈಕಿ ಐವರಿಗೆ ಸ್ಪೀಕರ್‌ರ ಕ್ರಮ ಮತ್ತು ನಡವಳಿಕೆಯಲ್ಲಿ ಯಾವುದೇ ಪಕ್ಷಪಾತ, ದುರುದ್ದೇಶ, ಮತ್ತು ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ ಕಂಡಿರಲಿಲ್ಲ.

ತಮಗೆ ಸಿಕ್ಕ ನ್ಯಾಯತೀರ್ಮಾನದಿಂದ ತೃಪ್ತರಾಗದ ಎಲ್ಲಾ 16 ಅನರ್ಹ ಶಾಸಕರು ದೆಹಲಿಯ ಸುಪ್ರೀಂಕೋರ್ಟಿಗೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದರು. ಈ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಪರಿಶೀಲಿಸಿದ ಅದೇ ದಾಖಲೆಗಳನ್ನು ಪುನರ್‌ಪರಿಶೀಲಿಸಿ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾ. ಕಬೀರ್ ಮತ್ತು ನ್ಯಾ. ಜೋಸೆಫ್ ಹೈಕೋರ್ಟ್ ತೀರ್ಪಿಗೆ ಸಂಪೂರ್ಣ ವ್ಯತಿರಿಕ್ತವಾದ ಅವಳಿ ತೀರ್ಮಾನವನ್ನು ನೀಡಿದರು. ಅಷ್ಟೇ ಅಲ್ಲದೆ, “ನೈಸರ್ಗಿಕ ನ್ಯಾಯ ಮತ್ತು ನ್ಯಾಯಯುತ ನಡವಳಿಕೆಯ ಅವಳಿ ತತ್ವಗಳ ಪರೀಕ್ಷೆಯಲ್ಲಿ ಸ್ಪೀಕರ್ ಬೋಪಯ್ಯನವರ ಆದೇಶ ಪಾಸಾಗುವುದಿಲ್ಲ. ಸಂವಿಧಾನದ 10ನೇ ಷೆಡ್ಯೂಲಿನಲ್ಲಿ ಕಾಣಿಸಲಾಗಿರುವ ಸಾಂವಿಧಾನಿಕ ನಡವಳಿಕೆಗಳು ಮತ್ತು 1986ರ ಅನರ್ಹತೆ ನಿಯಮಗಳನ್ನು ಉಲಂಘಿಸುವುದಷ್ಟೇ ಅಲ್ಲದೆ ನ್ಯಾಯಯುತ ವಿಚಾರಣೆಯ ಮೂಲತತ್ವವನ್ನು ಕೂಡ ಗಾಳಿಗೆ ತೂರಿದ ಸ್ಪೀಕರ್ ಮುಂದಿದ್ದ ಏಕೈಕ ಗುರಿ ಎಂದರೆ ಯಡಿಯೂರಪ್ಪ ಸರ್ಕಾರವನ್ನು ವಿಶ್ವಾಸಮತದ ಸಂಕಟದಿಂದ ಪಾರುಮಾಡುವುದು. ಸ್ಪೀಕರ್ ಮುಂದೆ ಪರಿಶೀಲನೆಗೆ ಇಟ್ಟಿದ್ದ ಪ್ರಕರಣಕ್ಕೆ ನೇರವಾಗಿ ಸಂಬಂಧ ಪಡದೇ ಇರುವಂತಹ ಬಾಹ್ಯ ಪರಿಗಣನೆಗಳು ಸ್ಪೀಕರ್ ಆದೇಶದ ಮೇಲೆ ಎದ್ದು ಕಾಣಿಸುತ್ತಿವೆ. ಇಂತಹ ಆದೇಶವನ್ನು ತಳ್ಳಿ ಹಾಕಲೇಬೇಕು,” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಸ್ಪೀಕರ್ ಕ್ರಮವನ್ನು ತಳ್ಳಿಹಾಕಿದ್ದೇ ಅಲ್ಲದೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಕೂಡ ಅಮಾನ್ಯಗೊಳಿಸಿದರು.

ಇದರೊಂದಿಗೆ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್‌ನ ವಿಶ್ವಾಸಾರ್ಹತೆ ಮತ್ತು ಅದರ ನ್ಯಾಯಮೂರ್ತಿಗಳ ಸಂವಿಧಾನವನ್ನು ಅರ್ಥೈಸುವ ಸಾಮರ್ಥ್ಯವನ್ನು ಪರೋಕ್ಷವಾಗಿ ಪ್ರಶ್ನಿಸಿದಂತಾಗಿದೆ ಎನ್ನುವ ಅಭಿಪ್ರಾಯಕ್ಕೆ ಸದ್ಯದ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರು ಬರುವ ಹಾಗೆ ಆಗಿದೆ.

ಕರ್ನಾಟಕದ ಸಮಕಾಲೀನ ರಾಜಕೀಯ ವ್ಯವಸ್ಥೆ ಅತ್ಯಂತ ಭ್ರಷ್ಟವೂ, ಅನೈತಿಕವೂ, ಸ್ವಾರ್ಥಪೂರಿತವೂ ಆಗಿರುವುದನ್ನು ಕಳೆದ ನಾಲ್ಕೈದು ವರ್ಷಗಳ ಇತಿಹಾಸ ಸಾರಿ ಹೇಳುತ್ತಿದೆ. ಈ ಅನೈತಿಕತೆ ಮತ್ತು ಭ್ರಷ್ಟತೆ ರಾಜಕೀಯ ವಲಯಕ್ಕಷ್ಟೆ ಸೀಮಿತವಾಗದೆ ಬೇರೆಲ್ಲ ಸಾರ್ವಜನಿಕ ರಂಗಗಳಿಗೂ ವ್ಯಾಪಿಸುತ್ತ ಬಂದಿದೆ. ಇಂತಹ ನಿರಾಶಾದಾಯಕ ಸಂದರ್ಭದಲ್ಲಿ ಪ್ರಾಮಾಣಿಕರಿಗೆ ಮತ್ತು ದೇಶಪ್ರೇಮಿಗಳಿಗೆ ಉಳಿದಿದ್ದ ಏಕೈಕ ಭರವಸೆ ಎಂದರೆ ಅದು ನಮ್ಮ ಭ್ರಷ್ಟವಾಗಿಲ್ಲದಿದ್ದ ಮತ್ತು ಸಾಮರ್ಥ್ಯದಿಂದ ಕೂಡಿದ್ದ ನ್ಯಾಯಸ್ಥಾನಗಳು. ಈಗ ಮೇಲೆ ಉಲ್ಲೇಖಿಸಿರುವ ಪ್ರಕರಣಗಳಿಂದ ತಾವು ಇಟ್ಟುಕೊಂಡಿದ್ದ ಆ ಒಂದು ಭರವಸೆಯ ಬಗ್ಗೆಯೂ ನಾಗರಿಕರು ಸಂಶಯಾಸ್ಪದಿಂದ ನೋಡುವಂತೆ ಆಗಿದೆ. ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವ ಸಂಶಯ ಇವೆಲ್ಲದರಿಂದ ಗಟ್ಟಿಯಾಗದೆ?

ಸುಪ್ರೀಂಕೋರ್ಟ್ ಕಂಡಂತೆ ಅಕ್ರಮ ಆದೇಶ ಹೊರಡಿಸಿದ್ದ ಸ್ಪೀಕರ್‌ರ ಕ್ರಮ ರಾಜ್ಯದ ಹೈಕೋರ್ಟ್‌ನಲ್ಲಿ ಸಕ್ರಮವಾಗಿ ಮಾನ್ಯತೆ ಪಡೆದಿದ್ದರ ಹಿಂದೆ ಇರುವ ಕಾರಣಗಳಾದರೂ ಏನು? ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿ ಜನರ ಪ್ರಜ್ಞೆಗೂ ಬಂದಿರುವ ನ್ಯಾಯಾಧೀಶರುಗಳ ಭ್ರಷ್ಟಾಚಾರವೆ? ಅಥವ, ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಸಮರ್ಥರೂ ನ್ಯಾಯಮೂರ್ತಿಗಳಾಗಿರುವುದೇ? ಅಥವ, ನ್ಯಾಯಮೂರ್ತಿಗಳ ವೈಯಕ್ತಿಕ ರಾಜಕೀಯ ನಿಲುವುಗಳೂ ಅವರು ಕೊಡುತ್ತಿರುವ ತೀರ್ಪಿನ ಮೇಲೆ ಪ್ರಭಾವ ಬೀರುತ್ತಿರುವುದೆ? ಅಥವ, ಅಧಿಕಾರರೂಢರ ಪರ ಇರುವುದರಿಂದ ತಮ್ಮ ಸವಲತ್ತುಗಳಲ್ಲಿ ಹೆಚ್ಚಳವಾಗುತ್ತದೆಯೆಂಬ ಸ್ವಹಿತಾಸಕ್ತಿಯೆ? ಒಟ್ಟಿನಲ್ಲಿ, ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವುದೇ?

ಈ ಪ್ರಶ್ನೆಗಳು ರಾಜ್ಯದಲ್ಲಿ ಈಗ ನಡೆಯುತ್ತಿರುವ ಎಲ್ಲಾ ರಾಜಕೀಯ ಘಟನೆಗಳಿಗಿಂತ ಮುಖ್ಯವಾಗಿ ಚರ್ಚೆಯಾಗಬೇಕಾದ ಮತ್ತು ಕೂಡಲೇ ಸರಿಪಡಿಸಬೇಕಾದ ವಿಷಯಗಳಾಗಿವೆ. ನ್ಯಾಯಸ್ಥಾನದ ಬಗ್ಗೆ ನಾಗರಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಂದಿಗೂ ನ್ಯಾಯಮೂರ್ತಿಗಳದ್ದೇ ಆಗಿದೆ. ಅಲ್ಲವೆ?

One thought on “ಸುಪ್ರೀಂಕೋರ್ಟಿನ ತೀರ್ಪು ಮತ್ತು ರಾಜ್ಯದ ಹೈಕೋರ್ಟಿನ ತೀರ್ಪು

  1. Ananda Prasad

    ನ್ಯಾಯಾಂಗ ಸುಧಾರಣೆ ಆಗದ ಹೊರತು ಲೋಕ್ಪಾಲ್ ಮಸೂದೆ ಕೇಂದ್ರದಲ್ಲಿ ಬಂದರೂ ಪ್ರಯೋಜನ ಆಗಲಾರದು ಎಂದು ಇತ್ತೀಚೆಗೆ ಒಬ್ಬರು (ಬಹುಶ: ಸ್ವಾಮಿನಾಥನ್ ಅಯ್ಯರ್) ಪತ್ರಿಕೆಯಲ್ಲಿ ಬರೆದಿದ್ದರು. ಏಕೆಂದರೆ ಲೋಕಪಾಲದ ತೀರ್ಪುಗಳು ಅಂತಿಮವಲ್ಲ ಮತ್ತು ಅದು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲ್ಪ್ಪಟ್ಟು ಅಲ್ಲಿ ತೀರ್ಪು ಬರುವವರೆಗೆ ಆರೋಪಿ ಜಾಮೀನು ಪಡೆದು ಹಾಯಾಗಿ ಜೀವನ ನಡೆಸುತ್ತಿರಬಹುದು ಮತ್ತು ಸುಪ್ರೀಂ ಕೋರ್ಟಿನ ತೀರ್ಪು ಬರುವಾಗ ಆರೋಪಿ ಮರಣ ಹೊಂದಿದರೂ ಹೊಂದಬಹುದು ಎಂಬುದು ತಾತ್ಪರ್ಯ. ಲೋಕ್ಪಾಲ್ ಮಸೂದೆಯ ಬಗ್ಗೆ ಒತ್ತಾಯಿಸುವಾಗ ನ್ಯಾಯಾಂಗ ಸುಧಾರಣೆಯ ಬಗ್ಗೆಯೂ ಒತ್ತಾಯಿಸದಿದ್ದರೆ ಪ್ರಯೋಜನ ಆಗಲಾರದು. ಆರೋಪಿ ಕೋರ್ಟಿನಲ್ಲಿ ವಿಚಾರಣೆ ಆರಂಭವಾಗಿ ಒಂದು ವರ್ಷದೊಳಗೆ ಅಪರಾಧಿ ಹೌದೋ ಅಲ್ಲವೋ ಎಂಬ ಬಗ್ಗೆ ತೀರ್ಮಾನ ಬರುವಂಥ ವ್ಯವಸ್ಥೆ ಇಲ್ಲದಿದ್ದರೆ ಲೋಕಪಾಲ ಅಲ್ಲ ಬ್ರಹ್ಮನೇ ಬಂದರೂ ಪ್ರಯೋಜನ ಆಗಲಾರದು. ದೇಶದಲ್ಲಿ ಸಮರ್ಪಕ ಹಾಗೂ ಶೀಘ್ರ ನ್ಯಾಯ ವ್ಯವಸ್ಥೆಯನ್ನು ರೂಪಿಸದೆ ನಮ್ಮ ಸರ್ಕಾರಗಳು ಕಾಲಹರಣ ಮಾಡುತ್ತಿವೆ. ಈ ಬಗ್ಗೆ ಯಾವ ದೇಶಭಕ್ತ ಸಂಘಟನೆಗಳೂ ಪ್ರತಿಭಟನೆ ನಡೆಸುವುದು ಕಂಡು ಬರುತ್ತಿಲ್ಲ. ಧರ್ಮದ ಹೆಸರಿನಲ್ಲಿ ಮಾತ್ರ ದೇಶದಲ್ಲಿ ಜಾಗೃತಿ ನಡೆಸುವ ಕೆಲಸ ದೇಶಭಕ್ತ ಸಂಘಟನೆಗಳಿಂದ ನಡೆಯುತ್ತಿದೆ. ೬೦ ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ದೇಶಭಕ್ತ ಸಂಘಟನೆಯೊಂದು ತನ್ನ ಶಕ್ತಿಯನ್ನು ದೇಶ ಕಟ್ಟುವ ಬದಲು ಧರ್ಮದ ಬಗ್ಗೆ ಮಾತಾಡಲು ಮಾತ್ರ ಬಳಸುತ್ತಿದೆ. ಇಷ್ಟು ದೊಡ್ಡ ಸಂಘಟನೆ ಇದ್ದೂ ನಮ್ಮ ದೇಶದ ಪ್ರಧಾನ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಿ ಸಮರ್ಪಕ ಕಾನೂನು ರೂಪಿಸುವ ಹಕ್ಕೊತ್ತಾಯವನ್ನು ಮಾಡದೇ ಇರುವುದು ವಿಪರ್ಯಾಸ

    Reply

Leave a Reply to Ananda Prasad Cancel reply

Your email address will not be published. Required fields are marked *