ನ್ಯಾ.ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿ

ರಾಜ್ಯದ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಲೋಕಾಯುಕ್ತ ನೇಮಕದ ವಿಚಾರ ಇನ್ನೂ ಬಗೆಹರಿದಿಲ್ಲ. ಈ ವಿಷಯ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಪಡೆದುಕೊಳ್ಳುತ್ತಿದೆ. ವಿರೋಧಪಕ್ಷಗಳಿಗೂ ಲೋಕಾಯುಕ್ತರ ನೇಮಕ ಬೇಕಿದ್ದಂತಿಲ್ಲ. ಇದ್ದಿದ್ದರೆ ಈ ರೀತಿ ದಿವ್ಯನಿರ್ಲಕ್ಷ್ಯದಲ್ಲಿ ಕಾಲಹರಣ ಮಾಡುತ್ತಿರಲಿಲ್ಲ. ರಾಜ್ಯದಲ್ಲಿನ ಪ್ರಜಾಸತ್ತೆಯ ಪ್ರಕ್ರಿಯೆ ಮತ್ತು ಅದರ ಗುಣಮಟ್ಟದ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗೂ ಕಿಂಚಿತ್ ಕಾಳಜಿ ಇದ್ದಂತಿಲ್ಲ.

ಈ ಮಧ್ಯೆ, ಮುಖ್ಯಸ್ಥನಿಲ್ಲದೆ ಲೋಕಾಯುಕ್ತ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅದಕ್ಕೆ ಸಲ್ಲಿಸಲಾಗುತ್ತಿರುವ ದೂರುಗಳೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬ ವರದಿಗಳು ಬರುತ್ತಿವೆ.

ರಾಜ್ಯಪಾಲರು “ಕೆಲವು ಕ್ರಿಮಿನಲ್ ಶಕ್ತಿಗಳು” ನ್ಯಾ.ಬನ್ನೂರುಮಠರೇ ಲೋಕಾಯುಕ್ತರಾಗಬೇಕೆಂದು ಹಠ ಹಿಡಿದಿದ್ದಾರೆ ಎನ್ನುತ್ತಿದ್ದಾರೆ ಮತ್ತು ಬನ್ನೂರುಮಠರನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ನನ್ನ ಬಳಿ ಸಾಕಷ್ಟು ಕಾರಣಗಳಿವೆ ಎಂದಿದ್ದಾರೆ.

ನ್ಯಾ.ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬಾರದೆಂದು ಮೂರು ತಿಂಗಳಿಗೂ ಹಿಂದೆ ದಾವಣಗೆರೆ ಜಿಲ್ಲೆಯ ನಂದಿಗಾವಿ ಗ್ರಾಮದ ಹಲವು ನಾಗರಿಕರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದು ಇಲ್ಲಿಯವರೆಗೂ ಎಲ್ಲಿಯೂ ಪ್ರಕಟವಾಗಿರಲಿಲ್ಲ. ನಮಗೆ ಈಗ ಆ ಪತ್ರದ ಪ್ರತಿ ಲಭ್ಯವಿದ್ದು ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ರವಿ ಕೃಷ್ಣಾರೆಡ್ಡಿ






One thought on “ನ್ಯಾ.ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿ

  1. Ananda Prasad

    ಕೇಂದ್ರದಲ್ಲಿ ಲೋಕ್ಪಾಲ್ ಮಸೂದೆಗಾಗಿ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಭಾರಿ ಸತ್ಯಾಗ್ರಹ ನಡೆಸಲಾಯಿತು. ಆದರೆ ನಮ್ಮ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಯತ್ನ ನಡೆಯುತ್ತಿರುವಾಗ ಯಾರೂ ಧ್ವನಿಯೆತ್ತದೆ ಇರುವುದು ವಿಪರ್ಯಾಸ. ರಾಜ್ಯ ಸರ್ಕಾರ ಬನ್ನೂರ್ಮಠ ಅವರನ್ನೇ ಲೋಕಾಯುಕ್ತ ಹುದ್ಧೆಗೆ ಶಿಫಾರಸು ಮಾಡುವಂತೆ ಹಠ ಹಿಡಿಯುವುದು ಯಾಕೆ ಎಂಬುದು ಪ್ರಜ್ನಾವಂತರೆಲ್ಲರೂ ಮೊದಲೇ ಯೋಚಿಸಿದ್ದರು. ಆರೋಪಿಗಳೇ ನ್ಯಾಯಾಧೀಶರ ಆಯ್ಕೆಯ ಸ್ವಾತಂತ್ರ್ಯಪಡೆದರೆ ನ್ಯಾಯ ಸಿಕ್ಕೀತೆ ಎಂಬುದು ಇಡೀ ರಾಜ್ಯದ ಜನ ಯೋಚಿಸಬೇಕಾದ ವಿಚಾರ. ಇದು ‘ನ್ಯಾಯಾಧೀಶರ ಫಿಕ್ಸಿಂಗ್’ ಹಗರಣದಂತೆ ಕಾಣುತ್ತದೆ. ಲೋಕಾಯುಕ್ತ ಸಂಸ್ಥೆಯನ್ನು ಆಡಳಿತ ಪಕ್ಷದ ಪರ ತೀರ್ಪು ಕೊಡುವಂತೆ ಮಾಡುವ ಹುನ್ನಾರ ಬನ್ನೂರ್ಮಠ ಅವರ ನೇಮಕದ ಹಿಂದೆ ಇದೆಯೋ ಏನೋ ಎಂಬ ಸಂದೇಹ ರಾಜ್ಯದ ಪ್ರಜ್ಞಾವಂತ ನಾಗರಿಕರಲ್ಲಿ ಮೂಡಿದರೆ ಅಚ್ಚರಿ ಇಲ್ಲ. ರಾಜ್ಯದ ಜನ ಹಾಗೂ ಮಾಧ್ಯಮಗಳು ಎಚ್ಚೆತ್ತುಕೊಳ್ಳದಿದ್ದರೆ ಲೋಕಾಯುಕ್ತ ಸಂಸ್ಥೆ ಇದ್ದೂ ಇಲ್ಲದಂತೆ ಆಗಲಿದೆ. ಕರ್ನಾಟಕದಲ್ಲಿ ಲೋಕಾಯುಕ್ತರ ನೇಮಕ ಮಾಡುವಾಗ ವಿರೋಧ ಪಕ್ಷದ ನಾಯಕರು, ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು, ರಾಜ್ಯಪಾಲರು ಇವರೆಲ್ಲರಿಗೂ ಒಪ್ಪಿಗೆಯಾಗುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂಬ ತಿದ್ದುಪಡಿ ಮಾಡಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಲೋಕಾಯುಕ್ತರ ಆಯ್ಕೆ ರಾಜಕೀಯದಿಂದ ಮುಕ್ತವಾಗಿರಲಾರದು ಹಾಗೂ ಎಲ್ಲ ಸಂದರ್ಭಗಳಲ್ಲೂ ಯೋಗ್ಯ ವ್ಯಕ್ತಿಯ ಆಯ್ಕೆ ಆಗಲಾರದು. ಈ ಬಗ್ಗೆ ಪ್ರಜ್ಞಾವಂತರು ಧ್ವನಿ ಎತ್ತಬೇಕಾಗಿದೆ.

    Reply

Leave a Reply to Ananda Prasad Cancel reply

Your email address will not be published. Required fields are marked *