ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3

ನನ್ನ ಕುತೂಹಲವಿಷ್ಟೇ: ದಲಿತ ಚಳವಳಿ ಕೂಡ ರೈತಸಂಘದಷ್ಟೇ ಬಲಿಷ್ಠವಾಗಿತ್ತಾದರೂ, ರೈತಸಂಘದ ಭಾಷೆ ಅಥವಾ ಧೋರಣೆ ದಲಿತರಿಗೇಕೆ ಸಾಧ್ಯವಾಗಲಿಲ್ಲ? ಯಾಕೆಂದರೆ ರೈತಸಂಘಕ್ಕೆ ದಲಿತರಿಗಿಲ್ಲದ ಅನುಕೂಲವಿತ್ತು. ರೈತಸಂಘದ ತಿರುಳು, ಪರಂಪರಾಗತವಾಗಿ ಕರ್ನಾಟಕದಲ್ಲಿ ರಾಜಕೀಯ ಅಧಿಕಾರದ ಗುತ್ತಿಗೆ ಹಿಡಿದಿದ್ದ ಒಕ್ಕಲಿಗ, ಲಿಂಗಾಯಿತ ಸಮೂಹದ್ದೇ ಆಗಿತ್ತು. ಅರಸು ಬರುವವರೆಗೆ ಕರ್ನಾಟಕವನ್ನು ಮುಖ್ಯಮಂತ್ರಿಗಳಾಗಿ ಆಳಿದವರು ಲಿಂಗಾಯಿತರು, ಒಕ್ಕಲಿಗರು ಮಾತ್ರ. ಹಾವನೂರ್ ವರದಿಯಿಂದಾಗಿ ಹಿಂದುಳಿದ ವರ್ಗಗಳಿಗೆ ವ್ಯವಸ್ಥಿತ ಮೀಸಲಾತಿ ಸಿಕ್ಕುವವರೆಗೆ ಕಾಂಗ್ರೆಸ್ಸಿನಲ್ಲೂ ವೀರಪ್ಪ ಮೊಯ್ಲಿ, ಬಂಗಾರಪ್ಪ, ಧರಂಸಿಂಗ್ ರಂಥ ‘ಇತರರು’ ಮುಖ್ಯಮಂತ್ರಿ ಪದವಿ ಏರುವುದು ಸಾಧ್ಯವಾಗಿರಲಿಲ್ಲ!… ಹಾಗಾಗಿಯೇ ರೈತಸಂಘವನ್ನು ರೂಪಿಸಿದ್ದ ಆ ಜಾತಿ ಸಮುದಾಯಗಳಿಗೆ ಅಧಿಕಾರಯುಕ್ತ ಧೋರಣೆ ಸಹಜವಾಗಿಯೇ ಮೈಗೂಡಿತ್ತು ಎಂದರೆ, ಅದು ಚಳವಳಿಯ ನೈತಿಕ ಶಕ್ತಿಯನ್ನು, ಅದರ ಹಿಂದಿನ ಬೆವರನ್ನು ಅಲ್ಲಗಳೆದಂತೇನಲ್ಲ.

ಈ ಮೂಲಪ್ರವೃತ್ತಿ ರೈತ ಚಳವಳಿಯ ಉತ್ತುಂಗ ಕಾಲದಲ್ಲೂ ಮರೆಯಾಗಿರಲಿಲ್ಲ. 82-83ರ ಸುಮಾರಿನಲ್ಲಿ ಹಾಸನ ಜಿಲ್ಲೆಯಲ್ಲಿ ರೈತಸಂಘ ಕೆಲ ಕಾಲ ‘ಜನತಾ ನ್ಯಾಯಾಲಯ’ಗಳ ಪ್ರಯೋಗಕ್ಕೆ ಕೈ ಹಾಕಿತ್ತು. ಅಂದರೆ ಸ್ಥಳೀಯ ವ್ಯಾಜ್ಯಗಳಿಗೆ ಪೊಲೀಸ್ ಠಾಣೆ, ಕೋರ್ಟು ಕಚೇರಿ ಮೆಟ್ಟಿಲು ಹತ್ತದೆ ಊರ ಪ್ರಮುಖರೇ ಬಗೆಹರಿಸಿಕೊಳ್ಳುವ ಕ್ರಮ. ರೈತ ಚಳವಳಿ ಬಗ್ಗೆ ಅಪಾರ ಸಹಾನುಭೂತಿಯಿದ್ದ ನನ್ನ ಗೆಳೆಯರು ಈ ಪ್ರಯೋಗ ಕುರಿತು ಆಗ ರೋಮಾಂಚನಗೊಂಡು ಮಾಡುತ್ತಿದ್ದ ಬಣ್ಣನೆ ನನಗೀಗಲೂ ನೆನಪಿದೆ. ನಿಜ. ಸರ್ಕಾರದ ಮೇಲಿನ ಅವಲಂಬನೆ ಹಂತ ಹಂತವಾಗಿ ತಗ್ಗುತ್ತ ಬಂದು ಕ್ರಮೇಣ ಸ್ವಯಮಾಧಿಕಾರ ಸಾಧ್ಯವಾಗಬೇಕು ಎಂಬುದು ಉನ್ನತ ಆದರ್ಶವೇನೋ ಹೌದು; ಮತ್ತು ಚಳವಳಿಗಳ ಅಂತಿಮ ಗುರಿಯೂ ಅದೇ. ಸರಿ. ಆದರೆ ಹಳ್ಳಿಗಾಡಿನ ಅಧಿಕಾರದ ಹಂದರದಲ್ಲಿ ಯಾವ ಮಾರ್ಪಾಡೂ ತರದೆ, ಅದರ ಚೌಕಟ್ಟಿನಲ್ಲೇ ಕೊಡಮಾಡುವ ನ್ಯಾಯ, ಎಷ್ಟರ ಮಟ್ಟಿಗೆ ನ್ಯಾಯವಾಗಿರಲು ಸಾಧ್ಯ ಎಂಬ ಅನುಮಾನಗಳು ನನಗೆ ಆಗಲೂ ಇದ್ದವು. ಆ ಅನುಮಾನ ನಿರಾಧಾರವಲ್ಲವೆಂದು, ರಾಜ್ಯದಲ್ಲಿ ಮುಂದಕ್ಕೆ ಜಿಲ್ಲಾ ಪಂಚಾಯ್ತಿ ಇತ್ಯಾದಿಗಳು ಬಂದ ಮೇಲೆ ನಿಸ್ಸಂದಿಗ್ಧವಾಗಿ ಸಾಬೀತಾಗಿಹೋಯಿತು.

ನಜೀರ್ ಸಾಬ್ ಅಧಿಕಾರ ವಿಕೇಂದ್ರೀಕರಣ ಪ್ರಯೋಗಕ್ಕೆ ಕೈ ಹಾಕಿ (1986) ಜಿಲ್ಲಾ ಪಂಚಾಯ್ತಿ, ಮಂಡಲ್ ಪಂಚಾಯ್ತಿಗಳನ್ನು ರೂಪಿಸಿದ ಮೇಲೆ, ಒಮ್ಮಿಂದೊಮ್ಮೆಲೇ ದಲಿತರ ಮೇಲಿನ ದೌರ್ಜನ್ಯಗಳು ಇನ್ನಷ್ಟು ಹೆಚ್ಚಿದಂತೆ, ಕರಾಳವಾದಂತೆ ಕಾಣತೊಡಗಿತು. ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದ್ದು (1987) ಆ ದೌರ್ಜನ್ಯಗಳ ಪರಾಕಾಷ್ಠೆ. (ಬೆಂಡಿಗೇರಿಯಲ್ಲಿ ದೌರ್ಜನ್ಯ ಎಸಗಿದವರು- ಲಿಂಗಾಯಿತರು). ಮತ್ತು ಇಂಥ ಬಹುಪಾಲು ದೌರ್ಜನ್ಯಗಳ ಹಿಂದೆ ಗ್ರಾಮ ಮಂಚಾಯ್ತಿ, ಮಂಡಲ ಪಂಚಾಯ್ತಿ ಸದಸ್ಯರೇ ಇದ್ದರು! ಇದರರ್ಥ, ದಲಿತ ದ್ವೇಷಿಗಳೇ ಹಳ್ಳಿ ಹಳ್ಳಿಗಳಲ್ಲಿ ಅಧಿಕಾರಕ್ಕೆ ಬಂದರು ಎಂದಲ್ಲ; ಈ ವಿಕೇಂದ್ರೀಕರಣ ಪ್ರಯೋಗವೂ ಮೊದಮೊದಲು ಪರಂಪರಾಗತ ಅಧಿಕಾರ ಕೇಂದ್ರಗಳ ಸ್ವರೂಪವನ್ನೇ ಗಟ್ಟಿಗೊಳಿಸಿತು ಎಂದಷ್ಟೇ. ಎಲ್ಲ ಸಮುದಾಯಗಳಿಗೂ ಸ್ಥಳೀಯ ಆಡಳಿತದಲ್ಲಿ ಸಮಾನ ಪಾಲು ದೊರೆಯತೊಡಗಿದ್ದು ನಂತರವೇ. ಆದರೆ ಆ ಹಂತ ಬರುವ ಮುಂಚೆ ಹೊಸ ರಾಜಕೀಯ ಅಧಿಕಾರವೂ, ಸಾಮಾಜಿಕ ಅಧಿಕಾರವಿದ್ದ ‘ಉಳ್ಳವರ’ ಕೈಗೇ ಸೇರಿತ್ತು.

ರೈತಸಂಘ ಹೋಳಾದ ಮೇಲೆ, ಸಿಡಿದು ಹೋದ ಹೆಚ್ಚಿನವರು ನೆಲೆ ಕಂಡುಕೊಂಡಿದ್ದು,- ಆಗಂತೂ ಒಕ್ಕಲಿಗ ಲಿಂಗಾಯಿತರದ್ದೇ ಪಕ್ಷವಾಗಿದ್ದ ಜನತಾ ಪರಿವಾರದಲ್ಲೇ ಎಂಬುದೂ ಆಕಸ್ಮಿಕವಲ್ಲ… ಅಧಿಕಾರಿಯ ಕೊರಳಪಟ್ಟಿ ಹಿಡಿಯುವ ‘ಆತ್ಮವಿಶ್ವಾಸ’,- ಇಂಥ ಪರಂಪರಾಗತ ಅಧಿಕಾರದ ನೆನಪುಗಳಿರದ ದಲಿತ ಸಂಘಟನೆಗೆ ದಕ್ಕುವುದು ಸಾಧ್ಯವಿರಲಿಲ್ಲ.

ಇನ್ನು ದಲಿತ ಚಳವಳಿಯ ಸ್ವರೂಪವನ್ನು ಅರಿಯಲು ಒಂದೇ ಒಂದು ಕಾರ್ಯಕ್ರಮದ ಉದಾಹರಣೆ ಸಾಕು: ಉದ್ದಕ್ಕೂ ಅನಿವಾರ್ಯವಾಗಿ ಭೂಹೋರಾಟಗಳು ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆಯಲ್ಲೇ ಜೀವ ಸವೆಸಿದ ದಸಂಸ, ರಾಜ್ಯದಲ್ಲಿ ಒಮ್ಮೆ ಸ್ವಾತಂತ್ರ್ಯೋತ್ಸವಕ್ಕೆ ಆಯೋಜಿಸಿದ ಕಾರ್ಯಕ್ರಮವದು. (ಸಂಘರ್ಷ ಸಮಿತಿಯ ಭೂಹೋರಾಟಗಳಿಂದಾಗಿ, ದಲಿತರೂ ಸೇರಿದಂತೆ ರಾಜ್ಯದಲ್ಲಿ ಎಲ್ಲ ಜಾತಿಯ ಭೂಹೀನರ ಒಡೆತನಕ್ಕೆ ಸಿಕ್ಕಿದ ಒಟ್ಟು ಜಮೀನು- ನಾಲ್ಕು ಲಕ್ಷ ಎಕರೆ!) ಅಂದು ಊರೂರುಗಳಲ್ಲಿ ದಲಿತ ಕೇರಿಯ ಪ್ರವೇಶದಲ್ಲಿ ಒಂದು ಗಡಿಗೆ ತುಂಬ ನೀರು ಇಟ್ಟುಕೊಂಡ ದಲಿತರು, ‘ನಾವು ಇನ್ನೇನೂ ಕೊಡಲಾರೆವು. ನಮ್ಮದೊಂದು ಲೋಟ ನೀರು ಕುಡಿದು ಹೋಗಿ’ ಎಂದು ಊರಿನ ಎಲ್ಲ ಜಾತಿ ಸಮುದಾಯಗಳನ್ನು ಆಹ್ವಾನಿಸಿದರು! ‘ದಲಿತ ಚಳವಳಿ ಬ್ರಾಹ್ಮಣರಿಗೂ ಬಿಡುಗಡೆ ಕೊಡುವಂತಿರಬೇಕು’ ಎನ್ನುತ್ತ ದೇವನೂರರು ರೂಪಿಸಿದ ಆ ಕಾರ್ಯಕ್ರಮದ ಮೂಲಕ ಗಾಂಧಿಯ ತುಣುಕೊಂದು ಮತ್ತೆ ಹುಟ್ಟಿ ಬಂದಂತಾಗಿತ್ತು. ನನ್ನ ಕಣ್ಣಲ್ಲಿ ನೀರು ತರಿಸಿದ ಏಕೈಕ ಸ್ವಾತಂತ್ರ್ಯೋತ್ಸವವದು. ಊರೂರುಗಳಲ್ಲಿ ಗಮನಾರ್ಹ ಯಶಸ್ಸನ್ನೂ ಪಡೆದ ಈ ಕಾರ್ಯಕ್ರಮದ ಹಿಂದಿನ ಉದಾತ್ತ ಅಂತಃಕರಣ,’ದೊಡ್ಡ ಮನಸ್ಸ’ನ್ನು- ರೈತಸಂಘದ ಧೋರಣೆಗೆ ಹೋಲಿಸಿದರೆ, ಅಂಥ ‘ಪರಿವರ್ತನೆ’ಯ ಕಾಲಘಟ್ಟದಲ್ಲೂ ನಮ್ಮ ಮೂಲ ಸಾಮಾಜಿಕ ಹಂದರ ಅಲ್ಲಾಡಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ…

ಇಷ್ಟು ಹೇಳುತ್ತ ಅವೆರಡು ಸ್ವಾಭಿಮಾನ ಚಳವಳಿಗಳ ಅಭೂತಪೂರ್ವ ಸಾಧನೆಗೆ, ತಂದ ಸಂಚಲನಕ್ಕೆ ಕುರುಡಾಗಬಾರದು. ಆ ಚಳವಳಿಗಳು ತೆತ್ತ ಬೆಲೆ; ಅನುಭವಿಸಿದ ಸಾವು ನೋವು, ಪ್ರಯಾಸ, ಸಂಕಟ, ಪರಿಶ್ರಮ; ಎದುರಿಸಿದ ಎಡರು ತೊಡರು, ಸಂದಿಗ್ಧಗಳು… ಎಲ್ಲವೂ ವಿರಾಟ್ ಸ್ವರೂಪದ್ದೇ. ನಮ್ಮ ಪಾಲಿಗೆ ಆಗಿನ ಸಂಭ್ರಮ, ಹುರುಪು, ಹುಂಬತನಗಳೆಲ್ಲ ಈಗಲೂ ನಲ್ಮೆಯ ನೆನಪುಗಳೇ. ‘ಅಕಾರಣ ಪ್ರೀತಿ, ಸಕಾರಣ ಸಿಟ್ಟು’ ನಮ್ಮ ನೆಚ್ಚಿನ ಮಂತ್ರವಾಗಿದ್ದ ಕಾಲವದು. ಆ ಸಾಮಾಜಿಕ ಚಳವಳಿಗಳಿಗೆ ಪೂರಕವಾಗಿಯೇ ಉದಿಸಿದ ಭಾಷಾ ಚಳವಳಿ, ಲಂಕೇಶ್ ಪತ್ರಿಕೆ, ದೇವರಾಜ ಅರಸರ ಆಡಳಿತಾತ್ಮಕ ಕ್ರಾಂತಿ, ನಾವೇ ಮಾಡಿದ ‘ಮುಂಗಾರು’ ದಿನಪತ್ರಿಕೆ, ‘ಸುದ್ದಿ ಸಂಗಾತಿ’ ವಾರಪತ್ರಿಕೆ… ಎಲ್ಲವೂ ಒಂದೊಂದು ಕಾಲಘಟ್ಟದಲ್ಲಿ ಸಾಧ್ಯವಾಗುವ ಮಹಾನ್ ಚೈತನ್ಯ ಸ್ಫೋಟದ ಕುರುಹುಗಳು.

ಮತ್ತೆ ದಲಿತ ಚಳವಳಿಗೆ ಬಂದರೆ ಅದರ ನೈತಿಕ ಶಕ್ತಿಯ ಕುರುಹಾಗಿ ಕವಿ ಸಿದ್ದಲಿಂಗಯ್ಯನವರು ದಾಖಲಿಸುವ ಹಾಸನ ಜಿಲ್ಲೆಯ ಒಂದು ‘ಅತಿಮಾನುಷ’ ಪ್ರಕರಣ ನೋಡಬೇಕು:

ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಗ್ರಾಮದೇವತೆ ಪೂಜಾರಿಗೆ ವಾರಕ್ಕೊಮ್ಮೆ ಮೈದುಂಬುತ್ತಿತ್ತು. ಪೂಜಾರಿಯು ಮೇಲುಜಾತಿಗೆ ಸೇರಿದವರು. ದಲಿತ ವ್ಯಕ್ತಿಯೊಬ್ಬ ತನ್ನ ಕಷ್ಟ ಪರಿಹಾರಕ್ಕಾಗಿ ಆ ದೇವತೆಗೆ ಮೊರೆಯಿಡಲು ಪ್ರತಿ ವಾರವೂ ಬರುತ್ತಿದ್ದ. ಅದೇ ಗ್ರಾಮದ ಬಲಾಢ್ಯನೊಬ್ಬ ಈ ಬಡ ದಲಿತನಿಗೆ ಅಪಾರ ಕಿರುಕುಳ ನೀಡುತ್ತಿದ್ದ. ಬಲಾಢ್ಯನಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಈ ಮುಗ್ಧ ದಲಿತ ಗ್ರಾಮದೇವತೆಯಲ್ಲಿ ಬೇಡಿಕೊಳ್ಳುತ್ತಿದ್ದ.

ಮೂರು ನಾಲ್ಕು ವಾರಗಳು ದೇವತೆಯ ಬಳಿ ಹೋದರೂ ದಲಿತನಿಗೆ ಯಾವುದೇ ಪರಿಹಾರ ದೊರೆಯಲಿಲ್ಲ. ದಲಿತ ಬೇಸರದಿಂದ ಒಮ್ಮೆ ದೇವತೆಯನ್ನು ‘ತಾಯಿ, ಇಷ್ಟು ದಿನಗಳಿಂದ ಬಂದರೂ, ನನಗೆ ದಿಕ್ಕು ತೋರಿಸುತ್ತಿಲ್ಲ, ಯಾಕವ್ವಾ?’ ಎಂದು ಪ್ರಶ್ನಿಸಿದ. ಈ ಪ್ರಶ್ನೆಯಿಂದ ದೇವತೆ ವಿಚಲಿತವಾಗಿ ‘ನಿನ್ನ ಕಷ್ಟ ಪರಿಹರಿಸಲು ನನ್ನಿಂದ ಸಾಧ್ಯವಿಲ್ಲ’ ಎಂದು ತನ್ನ ಅಸಹಾಯಕತೆ ತೋಡಿಕೊಂಡಿತು. ‘ನಾನೇನು ಮಾಡಲಿ ತಾಯಿ?’ ಎಂದು ಈತ ಕೇಳಿದ. ‘ದಲಿತ ಸಂಘ ಸೇರು. ಹೋರಾಡು’ ಎಂದು ದೇವತೆ ಅಪ್ಪಣೆ ಮಾಡಿತು…!

ಹೀಗೆ ‘ದೇವತೆಗಳ ಆಶೀರ್ವಾದ ಪಡೆದೇ’ ಬಂದಂತಿದ್ದ ಸಂಘಟನೆಗಳು ನಿತ್ರಾಣವಾಗತೊಡಗಿದ್ದು; ಆ ಅಖಂಡ ಎಚ್ಚರದ ವಾತಾವರಣ ಹಳಸತೊಡಗಿದ್ದು ಯಾವಾಗಿನಿಂದ? ನಾಡನ್ನೇ ಆವರಿಸಿದ್ದ ಆ ಮಟ್ಟಿನ ಜಾಗೃತಿಗೆ ತುಕ್ಕು ಹಿಡಿಯತೊಡಗಿದ್ದು ಯಾವಾಗ? ಹೇಗೆ? ಯಾಕೆ?

ಈ ಪ್ರಶ್ನೆಗೆ ಆ ಸಂಘಟನೆಗಳ ರಾಜಕೀಯ ನಡಾವಳಿಯಲ್ಲೇ ಉತ್ತರ ಹುಡುಕಬೇಕು.

ಇಂದಿರಾ ಗಾಂಧಿ ಇರುವವರೆಗೆ ದಲಿತ ಚಳವಳಿ ಒಂದು ಸಂಘಟನೆಯಾಗಿ ಆರಿಸಿಕೊಂಡಿದ್ದ ಹಾದಿ- ಚುನಾವಣೆಗಳ ಬಹಿಷ್ಕಾರದ್ದು. ಸಂಘಟನೆಯ ರಾಜಕೀಯ ಧೋರಣೆಯೇ ಅದು. ಆ ‘ಎಳಸು’ ನಿಲುವನ್ನು ಸರಿ ಮಾಡಲು ದೇವನೂರ ಮಹಾದೇವ 80ರ ದಶಕದ ಆರಂಭದಲ್ಲಿ ಪಟ್ಟು ಹಿಡಿದು ನಿಂತರು. ಮಂಗಳೂರು ಮತ್ತು ಹಾಸನಗಳಲ್ಲಿ ದಸಂಸ ರಾಜ್ಯಸಮಿತಿ ಸಭೆ. ಅಲ್ಲಿ ಎರಡು ಮುಖ್ಯ ವಿಷಯಗಳ ಬಗ್ಗೆ ತೀರ್ಮಾನವಾಗಬೇಕೆಂದು ಮಹಾದೇವ ಹಟ ಹಿಡಿದರು. ಒಂದು ಚುನಾವಣೆ; ಇನ್ನೊಂದು ಹಿಂಸೆ-ಅಹಿಂಸೆಯ ಪ್ರಶ್ನೆ. “ಅಲ್ರಪ್ಪ, ಎಷ್ಟೋ ದೇಶಗಳಲ್ಲಿ ಮತದಾನದ ಹಕ್ಕೇ ಇಲ್ಲ. ಕೆಲವು ಕಡೆ ಹೆಂಗಸರಿಗೆ ಮತದಾನವಿಲ್ಲ. ಹೀಗಿರುವಾಗ ನಾವು ಮತದಾನ ಬಹಿಷ್ಕರಿಸಿ ಕೂತರೆ, ಸರ್ಕಾರ ಹೀಗೂ ಮಾಡಬಹುದು: ನಿಮಗೆ ಹೇಗಿದ್ದರೂ ಮತದಾನ ಬೇಕಿಲ್ಲವಲ್ಲ, ನಿಮಗ್ಯಾಕೆ ಕಷ್ಟ? ದಲಿತರಿಗೆ ಮತದಾನದ ಹಕ್ಕಿಲ್ಲ ಅಂತ ಸರ್ಕಾರವೇ ಕಾನೂನು ಮಾಡಿಬಿಡುತ್ತೇವೆ ಅಂದರೆ, ಆಗ ನಾವೇನು ಮಾಡುತ್ತೇವೆ? ‘ನಮ್ಮ ರಕ್ತ ಚೆಲ್ಲಿದರೂ ಸರಿ, ಮತದಾನದ ಹಕ್ಕು ಬೇಕು’ ಅನ್ನುತ್ತೇವೆ! ಈಗ ಅನಾಯಾಸವಾಗಿ ಆ ಹಕ್ಕಿದೆ. ಅದನ್ನು ಗೌರವಿಸೋಣ ಎಂದು ವಿವರಿಸಿದಾಗ ಎಲ್ಲರೂ ಕಕ್ಕಾಬಿಕ್ಕಿಯಾದರು. ಹಾಗೇ ಹಿಂಸೆಯ ಪ್ರಶ್ನೆ. ‘ಚುನಾವಣೆ ಬೇಡ, ಅಹಿಂಸೆ ಬೇಡ ಅನ್ನುವುದಾದರೆ ನಾವು ನಕ್ಸಲೀಯರಾಗಬೇಕಾಗುತ್ತೆ’ ಎಂದು ಮಹಾದೇವ ಹೇಳಿದಾಗಲೂ ಗೆಳೆಯರಿಗೆ ದಿಕ್ಕು ತೋಚದಂತಾಯಿತು. ಇವೆರಡೂ ಪ್ರಶ್ನೆಗಳು ಅಂದೇ ಬಗೆಹರಿಯದಿದ್ದರೂ, ದಲಿತ ಚಿಂತನೆಯಲ್ಲಿ ದೊಡ್ಡದೊಂದು ಪಲ್ಲಟಕ್ಕೆ ಈ ಮಾತುಗಳೇ ನಾಂದಿಯಾದವು.

ಕರ್ನಾಟಕದಲ್ಲಿ ಆಗ ಗುಂಡೂರಾಯರ ದರ್ಬಾರಿನ ಕಾಲ. ಇಡೀ ನಾಡು ಕಾಂಗ್ರೆಸ್ ವಿರೋಧವನ್ನೇ ಉಸಿರಾಡುತ್ತಿತ್ತು. ಅಷ್ಟೂ ಕಾಲ ಅವಿರತವಾಗಿ ಕಾಂಗ್ರೆಸ್ಸಿನ ಠೇಂಕಾರ, ನಿರಂಕುಶತೆ, ಜೋಭದ್ರಗೇಡಿತನ, ಭಕ್ಷಣೆಗಳನ್ನು ಕಂಡ ಜನತೆ ರೋಸಿಹೋಗಿದ್ದರು. ಕಾಂಗ್ರೆಸ್ ಬಗ್ಗೆ ಜನರಲ್ಲಿ ಎಂಥ ಹೇವರಿಕೆ ಹುಟ್ಟಿತ್ತೆಂದರೆ, ಈ ನಾಡು ಕಂಡ ಸರ್ವಶ್ರೇಷ್ಠ ಮುಖ್ಯಮಂತ್ರಿ ದೇವರಾಜ ಅರಸರ ಕೊಡುಗೆಯೂ ಕಾಂಗ್ರೆಸ್ಸಿನ ಒಟ್ಟಾರೆ ದುರ್ನಾತದಲ್ಲಿ ಮುಚ್ಚಿಹೋಗಿದೆ. (ಅರಸು ಕುರಿತು ನಮಗೆ ಈ ತಿಳುವಳಿಕೆ ಆಗ ಇರಲಿಲ್ಲ ಎಂಬ ಮಾತು ಬೇರೆ.) ಅರಸು ಆಡಳಿತದ ಸರಿಯಾದ ಮೌಲ್ಯಮಾಪನವೇ ಇಂದಿಗೂ ಸಾಧ್ಯವಾಗಿಲ್ಲ ಎನ್ನುವುದು ಕಾಂಗ್ರೆಸ್ ಕುರಿತ ಸಗಟು ಜನಾಭಿಪ್ರಾಯವೇ ಹೊರತು, ಅರಸು ಕುರಿತ ವ್ಯಾಖ್ಯಾನವಲ್ಲ. ಅರಸರ ಈ ‘ಶ್ರೇಷ್ಠ’ದ ಬೆನ್ನಿಗೇ ಬಂದಿದ್ದು ಗುಂಡೂರಾಯರ ‘ಕನಿಷ್ಠ’. ಕರ್ನಾಟಕದಲ್ಲಿ ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆಯಲು ಅಷ್ಟು ಸಾಕಿತ್ತು. ‘ಲಂಕೇಶ್ ಪತ್ರಿಕೆ’ ಪ್ರಸಾರ ಉತ್ತುಂಗ ತಲುಪಿದ್ದು, ಆ ಕಾಂಗ್ರೆಸ್- ಗುಂಡೂರಾವ್ ವಿರೋಧಿ ಅಲೆಯಲ್ಲಿ ಎಂಬುದೇ ಆಗಿನ ಸಾಮೂಹಿಕ ಮನಸ್ಥಿತಿಯ ದ್ಯೋತಕ. ರೈತಸಂಘವೂ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ರೈತರಿಗೆ ಕರೆ ನೀಡಿತ್ತು. ಆದರೆ ದಲಿತ ಸಮೂಹ? ಕಾಂಗ್ರೆಸ್ಸು ಅಷ್ಟೂ ಕಾಲ ದಲಿತರನ್ನು ಗುತ್ತಿಗೆಗೆ ಪಡೆದಿತ್ತು. ಅಂಥ ವಾತಾವರಣದಲ್ಲಿ ಇಂದಿರಾ ಹತ್ಯೆಯಾಯಿತು. (‘ಇಂದಿರಾಗಾಂಧಿ ಸತ್ತಾಗ ದಲಿತರು ಅತ್ತ ಕಣ್ಣೀರು ಒಂದು ಸಮುದ್ರದಷ್ಟಾಗಬಹುದು’ ಎಂದು ಮಹಾದೇವ ಕರಪತ್ರ ಬರೆದಿದ್ದು ಆಗಲೇ). ಒಂದು ಲೆಕ್ಕದಲ್ಲಿ ಇಂದಿರಾ ಸಾವಿನೊಂದಿಗೆ ದಲಿತರ ಮಟ್ಟಿಗೆ ಕಾಂಗ್ರೆಸ್ಸಿನ ಋಣ ಹರಿಯಿತು. ಇಡೀ ದಲಿತ ಸಮೂಹವನ್ನು ಕಾಂಗ್ರೆಸ್ ವಿರೋಧಿ ನಿಲುವಿಗೆ ಒಗ್ಗಿಸುವುದು ಅಂದಿನ ಚಾರಿತ್ರಿಕ ಅಗತ್ಯವೂ ಆಗಿತ್ತು. ಕಾಂಗ್ರೆಸ್ಸಿನ ಹಿಡಿತದಿಂದ ದಲಿತರನ್ನು ಪಾರು ಮಾಡಲು ಆಗ ಕಣ್ಣೆದುರಿಗಿದ್ದ ಆಯ್ಕೆ ಒಂದೇ- ಕಾಂಗ್ರೆಸ್ಸೇತರ ಜನತಾ ಪಕ್ಷಕ್ಕೆ ಸಕ್ರಿಯ ಬೆಂಬಲ ಘೋಷಿಸುವುದು. (ಹಾಗೆಯೇ ಕಾಲಾಂತರದಲ್ಲಿ ದಲಿತ ಚಳವಳಿ ಅಹಿಂಸೆಯನ್ನೇ ತನ್ನ ಮಾರ್ಗವಾಗಿ ಸ್ವೀಕರಿಸಿತು ಕೂಡ.)

ಗುಂಡೂರಾವ್ ನಂತರ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದ ರಾಮಕೃಷ್ಣ ಹೆಗಡೆ (1983), ಬರುವಾಗಲೇ ಸಜ್ಜನ ಸೌಜನ್ಯಮೂರ್ತಿಯಾಗಿ ಕಂಡು, ಜನಸಾಮಾನ್ಯರಲ್ಲಿ ಹೊಸ ಭರವಸೆ, ಸಾರ್ಥಕ್ಯಭಾವ ತಂದಿದ್ದರು. ಇನ್ನೊಂದೆಡೆ, ತಮ್ಮ ಇಂಥ ಜನಾನುರಾಗವನ್ನೂ ಲೆಕ್ಕಿಸದೆ ತಮ್ಮ ವಿರುದ್ಧ ಕಠೋರ ವಿಮರ್ಶಾಧೋರಣೆ ತಳೆದಿದ್ದ ಚಳವಳಿಗಳನ್ನು- ವಿಶೇಷವಾಗಿ ರೈತ ಚಳವಳಿಯನ್ನು ಹಣಿಯಲು ಹೆಗಡೆ ಒಳಗಿಂದೊಳಗೇ ಕತ್ತಿ ಮಸೆಯತೊಡಗಿದರು. ದಲಿತರತ್ತ ಸ್ನೇಹ ಹಾಗೂ ರೈತರ ದಮನ- ಇದು ಅವರು ಅನುಸರಿಸಿದ ತಂತ್ರ. ಆದರೆ ನಿಜಕ್ಕೂ ಶಕ್ತವಾದ ಚಳವಳಿಗಳು ಅಷ್ಟಕ್ಕೇ ನಿಸ್ತೇಜವಾಗಬೇಕಿರಲಿಲ್ಲ. ವಿಷಯವೆಂದರೆ, ಜನಸಮೂಹದ ಒಲವು ಹೆಗಡೆ ಪರ ಇದ್ದು, ಅವರ ವಿರುದ್ಧದ ಟೀಕೆಗಳನ್ನು ಸಹಿಸಲು ಜನರೇ ತಯಾರಿರಲಿಲ್ಲ. ಅದುವರೆಗೆ ಸಕರ್ಾರವನ್ನು ಎದುರು ಹಾಕಿಕೊಂಡಿದ್ದ ಚಳವಳಿಗಳು ಆಗ ‘ಕಾಂಗ್ರೆಸ್ ವಿರೋಧಿ’ಯಾಗಿ ಜನಸ್ತೋಮದ ಚಡಪಡಿಕೆಯನ್ನು ಪ್ರತಿನಿಧಿಸುತ್ತಿದ್ದವು. ಆದರೆ ‘ಜನಾನುರಾಗಿ’ ಹೆಗಡೆ ಬಂದೊಡನೆ, ಜನಕ್ಕೆ ಇದೇ ಚಳವಳಿಗಳು ಅನಗತ್ಯ ಕಿರಿಕಿರಿಯಾಗಿ ಗೋಚರಿಸಿರಬೇಕು. ಜೊತೆಗೆ ಆಗ ಬ್ರಾಹ್ಮಣ ಹೆಗಡೆಯವರನ್ನು ಎತ್ತಿ ಮೆರೆಸಿದ ಮೇಲ್ಜಾತಿ ಮಾಧ್ಯಮಗಳ ಪಾತ್ರವೇನೂ ಕಮ್ಮಿಯಲ್ಲ. ರೇವಜಿತು, ಬಾಟ್ಲಿಂಗ್, ಫೋನ್ ಕದ್ದಾಲಿಕೆ… ಹೆಗಡೆ ಕಾಲದಲ್ಲಿ ಹಗರಣಗಳಿಗೇನೂ ಕೊರತೆಯಿರಲಿಲ್ಲ. ಆದರೆ ಕೊನೆ ಗಳಿಗೆವರೆಗೆ ಅವರಿಗೆ ಮಾಧ್ಯಮಗಳ ಬೆಂಬಲ ಕುಗ್ಗಲಿಲ್ಲ!… ‘ಇಂಡಿಯಾ ಟುಡೇ’ ಅವರನ್ನು ಮುಂದಿನ ಪ್ರಧಾನಿಯಾಗಿಯೇ ಕಂಡಿರಲಿಲ್ಲವೇ?

(ಮುಂದುವರೆಯುವುದು)

Leave a Reply

Your email address will not be published.