Daily Archives: January 29, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 5)


– ಡಾ.ಎನ್.ಜಗದೀಶ ಕೊಪ್ಪ 


ಕಾರ್ಬೆಟ್‌ ಪಾಲಿಗೆ ಶಾಲೆಗಿಂತ ಹೆಚ್ಚಾಗಿ ಅರಣ್ಯವೇ ಪಾಠಶಾಲೆಯಾಯಿತು. ಬಿಡುವಿನ ವೇಳೆಯಲ್ಲಿ ಹಾಗೂ ಶಾಲಾ ರಜಾದಿಗಳಲ್ಲಿ ತಮ್ಮ ಮನೆಯ ಸಾಕು ನಾಯಿಗಳ ಜೊತೆ ರೈಫಲ್ ಹಿಡಿದು ಕಾರ್ಬೆಟ್‌ ಕಲದೊಂಗಿ ಹಾಗೂ ನೈನಿತಾಲ್ ನಡುವಿನ ಅರಣ್ಯ ಪ್ರದೇಶಕ್ಕೆ ಶಿಖಾರಿಗೆ ಹೊರಟು ಬಿಡುತಿದ್ದ. ತೀರಾ ಅರಣ್ಯದ ಮಧ್ಯ ಭಾಗಕ್ಕೆ ಕಾರ್ಬೆಟ್‌ ಹೋಗುತ್ತಿರಲಿಲ್ಲ. ಬದಲಾಗಿ ಕಲದೊಂಗಿಯಿಂದ ನೈನಿತಾಲ್‌ಗೆ ಅಂಚೆಯವರು, ಪಾದಯಾತ್ರಿಗಳು, ಯಾತ್ರಿಕರು ತೆರುಳುತಿದ್ದ ಹಾದಿಯ ಪಕ್ಕದಲ್ಲಿ ಶಿಖಾರಿಯಲ್ಲಿ ತೊಡಗಿರುತಿದ್ದ. ಈ ರಸ್ತೆಯ ಮಧ್ಯೆ ಕೊಟಾ ಎಂಬ ಹಳ್ಳಿ ಇದ್ದುದರಿಂದ ಉರುವುಲು ಆಯ್ದುಕೊಳ್ಳುವುದಕ್ಕೆ ಮಹಿಳೆಯರು ಬರುತಿದ್ದರು. ಜೊತೆಗೆ ಅವರಿಗೆ ಬೆಂಗಾಲಾಗಿ ಹಳ್ಳಿಯ ಗಂಡಸರು ತಮ್ಮ ಜಾನುವಾರುಗಳನ್ನ ಮೇಯಿಸುತ್ತಾ ಅಲ್ಲೇ ಇರುತಿದ್ದರು. ಸಾಮಾನ್ಯವಾಗಿ ಕಾಡಿನ ಅಪಾಯಕಾರಿ ಪ್ರಾಣಿಗಳು ಮನುಷ್ಯರು ಇರುವ ಕಡೆ ಸುಳಿಯುತ್ತಿರಲಿಲ್ಲ. ಇದರ ಜೊತೆಗೆ ಕಾರ್ಬೆಟ್‌ ಪ್ರಾಣಿಗಳನ್ನು ನಾವು ಉದ್ರೇಕಿಸದ ಹೊರತು ಅವು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂಬುದನ್ನು ಅನುಭವದಿಂದ ಮನವರಿಕೆ ಮಾಡಿಕೊಂಡಿದ್ದ.

ನೈನಿತಾಲ್ ಪರ್ವತ ಪ್ರದೇಶಕ್ಕೆ ಹೊಂದಿಕೊಂಡಿದ್ದ ಆ ಅರಣ್ಯದಲ್ಲಿ ಕೆಲೆವೆಡೆ 50 ಅಡಿ ಎತ್ತರದ ಮರಗಳಿದ್ದರೆ, ಮತ್ತೆ ಕೆಲವೆಡೆ ಸಮತಟ್ಟಾದ ಪ್ರದೇಶವಿದ್ದು 8ರಿಂದ 10 ಅಡಿ ಎತ್ತರ ಬೆಳೆಯುತಿದ್ದ ಹಲ್ಲುಗಾವಲಿನ ಪ್ರದೇಶವಿರುತ್ತಿತ್ತು. ಇಲ್ಲಿ ಬಗೆ ಬಗೆಯ ಪಕ್ಷಿಗಳು ಇರುತ್ತಿದ್ದರಿಂದ ಈ ಪ್ರದೇಶ ಕಾರ್ಬೆಟ್‌ಗೆ ಅಚ್ಚು ಮೆಚ್ಚಿನ ಬೇಟೆಯ ತಾಣವಾಗಿತ್ತು. ಮಳೆಗಾಲದಲ್ಲಿ ಅನೇಕ ಬಗೆಯ ಕಾಡುಕೋಳಿ ಮತ್ತು ಹುಂಜಗಳು ಈ ಸ್ಥಳಕ್ಕೆ ಬರುತ್ತಿದ್ದರಿಂದ ಅವುಗಳನ್ನು ಬೇಟೆಯಾಡುವುದು ಅವನ ಹವ್ಯಾಸವಾಗಿತ್ತು. ಪೊದೆಯೊಳಕ್ಕೆ ಹೊಕ್ಕ ಯಾವುದೇ ಪಕ್ಷಿ ಅಥವಾ ಪ್ರಾಣಿಯ ಮೇಲೆ ಕಾರ್ಬೆಟ್‌ ಗುಂಡು ಹಾರಿಸುತ್ತಿರಲಿಲ್ಲ. ಏಕೆಂದರೆ, ಪೊದೆಯ ಗಿಡಗಳನ್ನು ಉರುವಲಿಗಾಗಿ ಕಡಿಯುತ್ತಾ ಮಹಿಳೆಯರು ಆ ಜಾಗದಲ್ಲಿರುವುದನ್ನ ಮನಗಂಡಿದ್ದ ಅವನು ಬಂದೂಕಿನಿಂದ ಗುಂಡು ಹಾರಿಸುವಾಗ ಎಚ್ಚರಿಕೆ ವಹಿಸುತಿದ್ದ. ಬೇಟೆಯ ಸಂದರ್ಭದಲ್ಲಿ ಸ್ಥಳೀಯರ ಜೊತೆ ಸದಾ ಒಡನಾಡುತ್ತಿದ್ದರಿಂದ ಅವರ ಭಾಷೆ, ಸಂಸ್ಕೃತಿ ಎಲ್ಲವನ್ನು ಅರಿಯತೊಡಗಿದ.

ಪಕ್ಷಿ ಮತ್ತು ಮೊಲಗಳಂತಹ ಚಿಕ್ಕ ಪ್ರಾಣಿಗಳ ಬೇಟಿಯನ್ನು ಹೊರತುಪಡಿಸಿ, ಎಂದೂ ದೊಡ್ಡ ಪ್ರಾಣಿಗಳನ್ನು ಬೇಟಿಯಾಡಿ ಅನುಭವವಿಲ್ಲದ ಕಾರ್ಬೆಟ್‌ ತನ್ನ ಹನ್ನೊಂದನೇ ವಯಸ್ಸಿಗೆ ಪ್ರಥಮ ಭಾರಿಗೆ ಏಕಾಂಗಿಯಾಗಿ ತೋಳವೊಂದನ್ನು ಬೇಟೆಯಾಡಿದ. ಅದೊಂದು ದಿನ ನವಿಲು ಅಥವಾ ಕಾಡುಕೋಳಿಗಳನ್ನು ಬೇಟೆಯಾಡಿ ಬರಲು ಹೋದ ಕಾರ್ಬೆಟ್‌ ಕಾಡಿನ ನವಿಲು, ಹುಂಜ, ಪಕ್ಷಿಗಳ ವಿಚಿತ್ರ ಶಬ್ಧ ಅಪಾಯದ ಸೂಚನೆಗಳನ್ನು ಕೊಡುತ್ತಿರುವುದನ್ನು ಅರಿತು ತಾನಿದ್ದ ಕಣಿವೆ ಪ್ರದೇಶದ ಬಳಿ ಬಂದು ಕಲ್ಲಿನ ಬಂಡೆಗೆ ಒರಗಿ ಹೆಗಲಿಗೆ ಬಂದೂಕು ಇಟ್ಟು ಅಪಾಯ ಎದುರಿಸಲು ಸಿದ್ಧನಾಗಿ ಕುಳಿತ. ತನ್ನ ಹಿಂಬದಿಗೆ ಬೃಹತ್ ಬಂಡೆ ಇದ್ದು ಹಿಂಬದಿಯಿಂದ ಪ್ರಾಣಿ ದಾಳಿ ಮಾಡುವ ಸಾಧ್ಯತೆ ಇಲ್ಲದ್ದರಿಂದ ಅವನ ಗಮನವೆಲ್ಲಾ ತನ್ನ ಮುಂದೆಯೇ ಕೇಂದ್ರೀಕೃತವಾಗಿತ್ತು. ಕಡೆಗೂ ಅವನ ನಿರಿಕ್ಷೆಯಂತೆ ಕಣಿವೆಯೊಂದರ ಪೊದೆಯಿಂದ ಘೀಳಿಡುತ್ತಾ ಹೊರಬಂದ ತೋಳ ಒಂದು ಕ್ಷಣ ಕಾರ್ಬೆಟ್‌ನನ್ನು ಗಮನಿಸಿ, ಈತ ನನ್ನನ್ನು ಹಿಂಬಾಲಿಸುತ್ತಿಲ್ಲ ಎಂಬುದನ್ನ ಖಾತರಿಪಡಿಸಿಕೊಂಡು ಹೊರಡಲು ಅಣಿಯಾಗುತ್ತಿದ್ದಂತೆ ಕಾರ್ಬೆಟ್‌ ಅದರ ಎದೆಯನ್ನ ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿದ. ಬಂದೂಕಿನಿಂದ ಗುಂಡು ಸಿಡಿದ ತಕ್ಷಣ ಕಪ್ಪು ಹೊಗೆ ಆವರಿಸಿಕೊಂಡಿದ್ದರಿಂದ ಗುಂಡು ತೋಳಕ್ಕೆ ತಾಗಿತೊ, ಅಥವಾ ಇಲ್ಲವೊ ಎಂಬುದು ಗೊತ್ತಾಗಲಿಲ್ಲ. ಆ ಕಾಲದಲ್ಲಿ ಈಗಿನಂತೆ ಸುಧಾರಿತ ತೋಟಗಳು ಬಳಕೆಯಲ್ಲಿ ಇರಲಿಲ್ಲ. ಕಪ್ಪು ಬಣ್ಣದ ಗನ್ ಪೌಡರ್ ಅನ್ನು ಗೋಲಿ ಗಾತ್ರದ ಉಂಡೆಗಳನ್ನಾಗಿ ಮಾಡಿ ಬಳಸಲಾಗುತ್ತಿತ್ತು. ಗುಂಡು ಹಾರಿದ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ತೋಳಕ್ಕೆ ಗೊಂಡು ತಾಗಿರುವುದು ಅಲ್ಲಿ ಬಿದ್ದಿದ್ದ ರಕ್ತದ ಕಲೆಗಳಿಂದ ಖಾತರಿಯಾಯಿತು. ಆದರೆ ಯಾವ ಸ್ವರೂಪದ ಗಾಯವಾಗಿದೆ ಎಂಬುದು ಕಾರ್ಬೆಟ್‌ಗೆ ತಿಳಿಯದಾಯ್ತು. ಏಕೆಂದರೆ, ಅದು ಅವನ ಮೊದಲ ಬೇಟೆಯಾಗಿತ್ತು. ಮುಂದಿನ ದಿನಗಳಲ್ಲಿ ಅವನು ಎಷ್ಟೊಂದು ನಿಷ್ಣಾತನಾದನೆಂದರೆ, ರಕ್ತದ ಕಲೆ, ಅದರ ಒಣಗಿರುವಿಕೆ, ಅಥವಾ ಹಸಿಯಾಗಿರುವ ರೀತಿಯ ಮೇಲೆ ಪ್ರಾಣಿಗಳ ಭವಿಷ್ಯವನ್ನು ಹೇಳುತ್ತಿದ್ದ.

ರಕ್ತದ ಕಲೆಯ ಜಾಡು ಹಿಡಿದು ಸಮಾರು ನೂರು ಅಡಿ ಹೋಗಿ ನೋಡಿದಾಗ, ಪೊದೆಯೊಂದರ ಬಳಿ ಅರೆ ಜೀವವಾಗಿ ಒದ್ದಾಡುತ್ತಾ ಬಿದ್ದಿದ್ದ ತೋಳವನ್ನು ಕಂಡಕೂಡಲೇ ಅದರ ತಲೆಗೆ ಗುಂಡು ಹಾರಿಸಿ.ಕೊಂದು ಹಾಕಿದ. ಕಾರ್ಬೆಟ್‌ ಬೇಟೆಯಾಡಿದ ಸಮಯ ಇಳಿ ಸಂಜೆಯಾದ್ದರಿಂದ ಸ್ಥಳೀಯ ಗ್ರಾಮಸ್ಥರನ್ನು ಕರೆಸಿ ಮನೆಗೆ ಎತ್ತಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅದರ ಕಳೇಬರವನ್ನ ಪೊದೆಯಲ್ಲಿ ಸೊಪ್ಪುಗಳಿಂದ ಮುಚ್ಚಿ ಹಾಕಿದ. ತನ್ನ ಶಿಖಾರಿ ಸಾಹಸಕ್ಕೆ ಸಾಕ್ಷಿಯಾಗಿ ಇರಲಿ ಎಂಬಂತೆ ಅದರ ಬಾಲವನ್ನ ಕತ್ತರಿಸಿಕೊಂಡು, ಮೂರು ಮೈಲು ದೂರವಿದ್ದ ನೈನಿತಾಲ್ ಮನೆಗೆ ಓಡಿ ಬಂದು ತನ್ನ ತಾಯಿ, ಮತ್ತು ಸಹೋದರಿ ಮ್ಯಾಗಿಗೆ ಸುದ್ಧಿ ತಿಳಿಸಿದ. ಬಾಲಕ ಕಾರ್ಬೆಟ್‌ನ ಸಾಹಸಕ್ಕೆ ಖುಷಿಗೊಂಡ ಮ್ಯಾಗಿ ತನ್ನ ಮನೆಯ ಸೇವಕರನ್ನು ಕಳಿಸಿ ತೋಳದ ಶವವನ್ನು ಎತ್ತಿ ತರಿಸಿ ಅದರ ಚರ್ಮವನ್ನ ಸುಲಿಸಿ, ಕಾರ್ಬೆಟ್‌ನ ಮೊದಲ ಬೇಟೆಯ ನೆನಪಿಗಾಗಿ ತಮ್ಮ ಮನೆಯ ಗೋಡೆಗೆ ನೇತು ಹಾಕಿದಳು. ಬಹಳ ವರ್ಷ ಗೋಡೆಯಲ್ಲಿದ್ದ ತೋಳದ ಚರ್ಮವನ್ನು ಮುಂದೆ ಕಾರ್ಬೆಟ್‌ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಲ್ಲಿಸಿದಾಗ ಮನೆಯ ಗೋಡೆಯಿಂದ ತೆಗೆಸಿಹಾಕಿದ.

ಕಾರ್ಬೆಟ್‌ನ ಈ ಸಾಹಸ ಅವನಿಗೊಬ್ಬ ಕಾಡಿನ ಗುರು ಹಾಗೂ ಮಾರ್ಗದರ್ಶಕನೊಬ್ಬನನ್ನು ದೊರಕಿಸಿಕೊಟ್ಟಿತು. ಆತನೆ ಕುನ್ವರ್ ಸಿಂಗ್. ಕಾರ್ಬೆಟ್‌ ತನ್ನ ಬಾಲ್ಯದಿಂದ ಸ್ಥಳೀಯರಾದ ಮನೆಯ ಸೇವಕರು, ಗ್ರಾಮಗಳ ಜನತೆಯ ಜೊತೆ ಮತ್ತು ಅವರ ಭಾಷೆ, ಸಂಸ್ಕೃತಿ ಜೊತೆ ಒಡನಾಡಿದ್ದರಿಂದ ಕುನ್ವರ್ ಸಿಂಗ್ ಜೊತೆಗಿನ ಸ್ನೇಹ ಅವನಿಗೆ ಕಷ್ಟವಾಗಲಿಲ್ಲ.

ಕುನ್ವರ್ ಸಿಂಗ್ ಠಾಕೂರ್ ಜಾತಿಯವನಾಗಿದ್ದು ಸ್ಥಳೀಯ ಚಾಂದಿನಿ ಚೌಕ್ ಎಂಬ ಹಳ್ಳಿಯ ಮುಖಂಡನಾಗಿದ್ದ. ಆತನಿಗೂ ಮತ್ತು ಕಾರ್ಬೆಟ್‌ನ ಅಣ್ಣ ಟಾಮ್‌ಗೂ ಮೊದಲಿನಿಂದಲೂ ಶಿಖಾರಿ ಕುರಿತಂತೆ ಸ್ನೇಹವಿತ್ತು. ಕುನ್ವರ್ ಸಿಂಗ್‌ಗೆ ಬಾಲ್ಯದಿಂದಲೂ ಕಾಡಿನ ಶಿಖಾರಿ ಎಂದರೆ ಹುಚ್ಚು. ಆದರೆ ಅಂದಿನ ನಿಯಾಮಾವಳಿಗಳ ಪ್ರಕಾರ ಬ್ರಿಟೀಷ್ ಅಧಿಕಾರಿಗಳು, ಯುರೊಪಿಯನ್ನರು, ಮತ್ತು ಸಂಸ್ಥಾನಗಳ ರಾಜ ಮಹಾರಾಜರು ಇವರುಗಳನ್ನು ಹೊರತುಪಡಿಸಿದರೆ, ಜನಸಾಮಾನ್ಯರಿಗೆ ಅರಣ್ಯಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಅವಕಾಶವಿರಲಿಲ್ಲ. ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಅನೇಕ ರಾಜರುಗಳು ತಮ್ಮ ಬೇಟೆಯ ಖಯಾಲಿಗಾಗಿ ಅನೇಕ ಅರಣ್ಯಗಳನ್ನು ಮೀಸಲಾಗಿ ಇಟ್ಟುಕೊಳ್ಳುತಿದ್ದರು. ಈ ಕಾರಣಕ್ಕಾಗಿ ಕುನ್ವರ್ ಸಿಂಗ್ ಕಾರ್ಬೆಟ್‌ ಕುಟುಂಬದೊಂದಿಗೆ ಸಲಿಗೆ ಬೆಳೆಸಿಕೊಂಡು ತನ್ನ ಶಿಖಾರಿಯ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದ. ಎಷ್ಟೋಬಾರಿ ಒಬ್ಬನೆ ಕದ್ದು ಬೇಟೆಯಾಡಿದ ಪ್ರಸಂಗವೂ ಉಂಟು. ಹಾಗಾಗಿ ಆತನನ್ನು ಸ್ಥಳೀಯರು ಕಳ್ಳ ಬೇಟೆಗಾರ ಎಂದೂ ಸಹ ಕರೆಯುತ್ತಿದ್ದರು.

ಕಾರ್ಬೆಟ್‌ ಏಕಾಂಗಿಯಾಗಿ ತೋಳವನ್ನು ಬೇಟೆಯಾಡಿದ ನಂತರ ಅವನನ್ನು ಒಬ್ಬ ನುರಿತ ಶಿಖಾರಿಗಾರ ಎಂದು ಒಪ್ಪಿಕೊಂಡ ಕುನ್ವರ್ ಕಾರ್ಬೆಟ್‌ ಜೊತೆ ಅರಣ್ಯದಲ್ಲಿ ಅಲೆದಾಡಲು ಶುರುವಿಟ್ಟುಕೊಂಡ. ಕಾರ್ಬೆಟ್‌ ಕುನ್ವರ್ ಸಿಂಗ್‌ನಿಂದ ಬೇಟೆಯ ಕುರಿತಂತೆ ಅನೇಕ ಸಂಗತಿಗಳನ್ನು ಸಹ ಕಲಿತ. ಇದರಲ್ಲಿ ಮೊದಲ ಪಾಠವೆಂದರೆ, ಅಪಾಯಕಾರಿ ಪ್ರಾಣಿಗಳು ಎದುರಾದಾಗ ಜೀವ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ, ಹತ್ತಿರದ ಮರವೇರಿ ಕುಳಿತುಕೊಳ್ಳುವುದು. ಹುಲಿ ಹಾಗೂ ಕೆಲವು ಜಾತಿಯ ಚಿರತೆಗಳು ಬಿಟ್ಟರೆ, ಉಳಿದ ಪ್ರಾಣಿಗಳು ಮರವನ್ನು ಏರಲಾರವು. ಮರವೇರಿ ಕುಳಿತ ವ್ಯಕ್ತಿಗಳನ್ನು ಹುಲಿ, ಅಥವಾ ಚಿರತೆ ಬೆನ್ನಟ್ಟುವ ಸಾಹಸವನ್ನು ಮಾಡಲಾರವು ಎಂಬುದನ್ನ ಕಾರ್ಬೆಟ್‌ ಕುನ್ವರ್ ಮೂಲಕ ಕಲಿತ. ಜೊತೆಗೆ ಕಾಡಿನಲ್ಲಿ ನಾವು ಸಂಚರಿಸುವಾಗ ವಹಿಸಬೇಕಾದ ಎಚ್ಚರಿಕೆ, ಬೇಟೆಯ ಸಂದರ್ಭದಲ್ಲಿ ನಾವು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಳ. ಇವುಗಳ ಬಗ್ಗೆ ಅರಿತ. ಅಕಸ್ಮಾತ್ ಬೇಟೆ ಗುರಿತಪ್ಪಿ, ಅಪಾಯ ಎದುರಾದ ಸಂದರ್ಭದಲ್ಲಿ ಪ್ರಾಣಿಗಳನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಕುನ್ವರ್ ಕಾರ್ಬೆಟ್‌ಗೆ ಮನವರಿಕೆ ಮಾಡಿಕೊಟ್ಟ. ಯಾವುದೇ ಕಾರಣಕ್ಕೂ ಕಣಿವೆ ಅಥವಾ ಹಳ್ಳದಂತಹ ಪ್ರದೇಶಗಳಲ್ಲಿ ನಾವು ಕೆಳಗೆ (ತಗ್ಗು ಪ್ರದೇಶದಲ್ಲಿ) ಕುಳಿತು ಹೊಂಚು ಹಾಕಿ ಮೇಲಿಂದ ಬರುವ ಪ್ರಾಣಿಗಳ ಮೇಲೆ ಗುಂಡು ಹಾರಿಸಬಾರದು. ನಾವು ಬೇಟೆಗೆ ಕುಳಿತ ಸ್ಥಳದಲ್ಲಿ ನಮ್ಮ ಹಿಂಬದಿಗೆ ದೊಡ್ಡದಾದ ಮರ ಇಲ್ಲವೆ, ಕಲ್ಲಿನ ಬಂಡೆ ಆಸರೆಯಾಗಿರಬೇಕು ಇದರಿಂದ ಅಪಾಯಕಾರಿ ಪ್ರಾಣಿಗಳಾದ ಹುಲಿ ಚಿರತೆ ಇವುಗಳು ಹಿಂದಿನಿಂದ ನಮ್ಮ ಮೇಲೆ ದಾಳಿ ನಡೆಸುವುದನ್ನು ತಪ್ಪಿಸಿಕೊಳ್ಳಬಹುದು. ಇಂತಹ ಶಿಖಾರಿಯ ಅತ್ಯಮೂಲ್ಯ ಪಾಠಗಳನ್ನು ಕಾರ್ಬೆಟ್‌ ಕುನ್ವರ್ಸಿಂಗ್ ಮೂಲಕ ಕಲಿತ. ಹಾಗಾಗಿ ಮುಂದೆ ಬಹಳ ವರ್ಷಗಳ ಕಾಲ ಕುನ್ವರ್ ಸಿಂಗ್ ಕಾರ್ಬೆಟ್‌ಗೆ ಬೇಟೆಯ ಸಂಗಾತಿಯಾಗಿದ್ದ.

ಕಾರ್ಬೆಟ್‌ಗೆ ಅರಣ್ಯ ಕುರಿತಂತೆ ಇದ್ದ ಏಕೈಕ ಭಯವೆಂದರೆ, ಕಾಡ್ಗಿಚ್ಚು. ಬೇಸಿಗೆಯಲ್ಲಿ ಒಣಗುತಿದ್ದ ದಟ್ಟವಾದ ಹುಲ್ಲುಗಾವಲು, ಸಣ್ಣ ಗಿಡಗಳು, ಬಿದಿರು ಮರಗಳ ಘರ್ಷಣೆ ಮತ್ತು ತಿಕ್ಕಾಟದಿಂದ ಉಂಟಾಗುತಿದ್ದ ಬೆಂಕಿಯ ಕಿಡಿಗಳಿಂದ ಹೊತ್ತಿಕೊಂಡು ಉರಿಯುವುದು ಸಾಮಾನ್ಯವಾಗಿತ್ತು. ಗಾಳಿ ಬೀಸಿದ ಕಡೆಯೆಲ್ಲಾ ಹಬ್ಬುತ್ತಿದ್ದ ಈ ಕಾಡ್ಗಿಚ್ಚು ನಿರಂತರ ತಿಂಗಳುಗಟ್ಟಲೆ ಉರಿದು ಒಮ್ಮೊಮ್ಮೆ ಇಡೀ ಅರಣ್ಯವನ್ನು ಆಪೋಷನ ತೆಗೆದುಕೊಳ್ಳುತ್ತಿತ್ತು. ಇಂತಹ ವೇಳೆ ಕಾಡಿನಲ್ಲಿ ಆವರಿಸಿಕೊಳ್ಳುತಿದ್ದ ದಟ್ಟಹೊಗೆ ಅನೇಕ ಪ್ರಾಣಿಗಳ ಜೀವಕ್ಕೆ ಎರವಾಗುತಿತ್ತು. ಯಾವ ವೇಳೆಯಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ತನ್ನ ಬದುಕಿನ ಕಡೆಯವರೆಗೂ ಕಾರ್ಬೆಟ್‌ ಕಾಡ್ಗಿಚ್ಚಿನ ಬಗ್ಗೆ ಹೆದುರುತ್ತಿದ್ದ ಹಾಗೂ ಎಚ್ಚರಿಕೆ ವಹಿಸುತ್ತಿದ್ದ. ಇದೊಂದನ್ನ ಹೊರತು ಪಡಿಸಿದರೆ, ತನ್ನ ವೈಯಕ್ತಿಕ ಅನುಭವದ ಮೇಲೆ ಕಾಡಿನ ಲೋಕದ ಎಲ್ಲಾ ವ್ಯವಹಾರಗಳನ್ನು ಅರ್ಥಮಾಡಿಕೊಂಡಿದ್ದ. ಪಕ್ಷಿ ಮತ್ತು ಮಂಗಗಳ ಧ್ವನಿಯನ್ನು ಅವುಗಳಂತೆಯೇ ಅನುಕರಣೆ ಮಾಡುವುದನ್ನು ಕಲಿತ.

ನಿಸರ್ಗದ ಬಗ್ಗೆ, ಅರಣ್ಯದ ಬಗ್ಗೆ ಇಷ್ಟೆಲ್ಲಾ ಆಸಕ್ತಿ ಇದ್ದರೂ ಕೂಡ ಕಾರ್ಬೆಟ್‌ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ತುಂಬಾ ಬುದ್ಧಿವಂತ, ಪ್ರತಿಭಾವಂತ ವಿದ್ಯಾರ್ಥಿ ಅಲ್ಲದಿದ್ದರೂ, ಉತ್ತಮ ಅಂಕಗಳನ್ನು ತೆಗೆದುಕೊಂಡು ಪ್ರತಿ ತರಗತಿಯನ್ನು ಪಾಸಾಗುವಷ್ಟು ಬುದ್ಧಿಮತ್ತೆ ಅವನಲ್ಲಿತ್ತು. ನೈನಿತಾಲ್‌ನಲ್ಲಿ ಆಂಗ್ಲರೇ ನಡೆಸುತಿದ್ದ ಓಕ್ ಎಂಬ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿದ ಅವನು ಮುಂದೆ ಡೈಯೊಸೆಸನ್ ಬಾಯ್ಸ್ ಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ. ಶಾಲೆಯಲ್ಲಿದ್ದ ಸ್ಕೌಟ್ ತಂಡಕ್ಕೆ ಸೇರ್ಪಡೆಯಾಗಿ ಅತ್ಯುತ್ತಮ ಕೆಡೆಟ್ ಎಂಬ ಗೌರವಕ್ಕೆ ಕಾರ್ಬೆಟ್‌ ಪಾತ್ರನಾಗಿದ್ದ.

ಕಾರ್ಬೆಟ್‌ ವಯಸ್ಸಿಗೆ ಬರುತ್ತಿದ್ದಂತೆ ತನ್ನ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿದ. ಅವನ ಮುಂದೆ ಶಿಕ್ಷಣ ಕುರಿತಂತೆ ಅನೇಕ ಅವಕಾಶಗಳಿದ್ದವು. ತನ್ನ ಕುಟುಂಬದ ವೃತ್ತಿಯಾಗಿ ಬಂದಿದ್ದ ವೈದ್ಯವೃತ್ತಿಗೆ, ಅಥವಾ ಇಂಜಿನಿಯರ್ ವೃತ್ತಿಗೆ ಹೋಗುವ ಅವಕಾಶಗಳಿದ್ದವು. ಆದರೆ ಉನ್ನತ ಶಿಕ್ಷಣಕ್ಕೆ ಬೇಕಾಗುವಷ್ಟು ಹಣವನ್ನು ಪೂರೈಸುವ ಸ್ಥಿತಿಯಲ್ಲಿ ಅವನ ಕುಟುಂಬ ಇರಲಿಲ್ಲ. ಅವನ ಸಹೋದರರೆಲ್ಲರೂ ತಮ್ಮ ವಿವಾಹವಾದ ನಂತರ ಹೊರ ಹೋಗಿದ್ದರು. ಕಾರ್ಬೆಟ್‌ನ ತಾಯಿಗೆ ಬರುತ್ತಿದ್ದ ತಂದೆಯ ಪಿಂಚಣಿ ಹಣ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಿಂದ ಬರುತ್ತಿದ್ದ ಅಲ್ಪ ಹಣದಿಂದ ಕುಟುಂಬದ ನಿರ್ವಹಣೆ ಸಾಗಬೇಕಿತ್ತು. ಮನೆಯಲ್ಲಿ ಕಾರ್ಬೆಟ್‌, ಅವನ ಚಿಕ್ಕ ತಮ್ಮ ಆರ್ಚರ್, ಅಕ್ಕ ಮ್ಯಾಗಿ, ವಿಧವೆಯಾಗಿ ಅಣ್ಣನ ಮನೆ ಸೇರಿದ್ದ ಕಾರ್ಬೆಟ್‌ನ ಸೋದರತ್ತೆ ಮತ್ತು ಆಕೆಯ ಇಬ್ಬರು ಸಣ್ಣ ಮಕ್ಕಳ ವಿದ್ಯಾಭ್ಯಾಸ ಎಲ್ಲವೂ ನಡೆಯಬೇಕಾಗಿತ್ತು.

ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತ ಕುಟುಂಬವಲ್ಲದ ಬಗ್ಗೆ ಅರಿವಿದ್ದ ಕಾರ್ಬೆಟ್‌ ತನ್ನ 17ನೇ ವಯಸ್ಸಿಗೆ ವಿದ್ಯಾಭ್ಯಾಸ ನಿಲ್ಲಿಸಿ ಉದ್ಯೋಗದ ಮೂಲಕ ತನ್ನ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿದ.್

ಆ ಕಾಲದಲ್ಲಿ ಏಳನೇ ತರಗತಿ ಪಾಸಾದವರಿಗೆ ಶಿಕ್ಷಕ ಹುದ್ದೆ, ಹತ್ತನೇ ತರಗತಿ ಪಾಸಾದವರಿಗೆ ಅಮಲ್ದಾರ್ ಹುದ್ದೆ ಸಿಗುತ್ತಿತ್ತು. ಅದೂ ಬ್ರಿಟೀಷ್ ಕುಟುಂಬದ ಸದಸ್ಯನಾಗಿದ್ದ ಕಾರ್ಬೆಟ್‌ ಮುಂಬೈ, ಕೊಲ್ಕ್ಲತ್ತ, ದೆಹಲಿ ಮುಂತಾದ ಕಡೆ ಇದ್ದ ಬ್ರಿಟೀಷರ ಕಚೇರಿಗಳಲ್ಲಿ, ಇಲ್ಲವೇ ಸೈನ್ಯದಲ್ಲಿ ಕೆಲಸಕ್ಕೆ ಸೇರಬಹುದಾಗಿತ್ತು. ಕಾರ್ಬೆಟ್‌ ಇವೆಲ್ಲವನ್ನು ಬದಿಗೊತ್ತಿ ತಿಂಗಳಿಗೆ 150 ರೂಪಾಯಿ ಸಂಬಳದ ರೈಲ್ವೆ ಉದ್ಯೋಗಕ್ಕೆ ಸೇರ್ಪಡೆಯಾದ.

(ಮುಂದುವರೆಯುವುದು)