Daily Archives: January 30, 2012

ಶಿಕ್ಷಣ ಕ್ಷೇತ್ರದ ಸಮಸ್ಯೆ ಮತ್ತು ಸವಾಲುಗಳು


-ಬಿ. ಶ್ರೀಪಾದ್ ಭಟ್


“ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಜರೂರಾಗಿ ಆಗಬೇಕಾಗಿರುವ ಸುಧಾರಣೆಯೆಂದರೆ ಮುಂದಿನ ಬದುಕಿಗೆ ವ್ಯಕ್ತಿಯನ್ನು ಸಿದ್ಧಪಡಿಸುವುದಷ್ಟೇ ಶಿಕ್ಷಣ ಎನ್ನುವ ಸಂಕುಚಿತ ಭಾವನೆಯನ್ನು ತೊಡೆದು ಹಾಕುವುದು, ಬದಲಿಗೆ ಶಿಕ್ಷಣವನ್ನು ಪರಿಪೂರ್ಣ ಬದುಕಿನ ಒಂದು ಭಾಗ ಎನ್ನುವ ಭಾವನೆಯನ್ನು ಬೆಳೆಸುವುದು.” -ಜಾನ್ ಡ್ಯೂಯಿ (ಖ್ಯಾತ ಶಿಕ್ಷಣ ತಜ್ಞ)

“1833 ರಲ್ಲಿ ಹುಟ್ಟಿದ ಡೆಪ್ಯುಟಿ ಚೆನ್ನಬಸಪ್ಪನವರು ವಿದ್ಯಾಧಿಕಾರಿಗಳಾಗಿದ್ದರು. ಈ ನಾಡಿನ ಕೊಳಕು ನೀಚತನ ಅರಿತಿದ್ದಂತಹ ವ್ಯಕ್ತಿ. ಇಲ್ಲಿ ವೈಚಾರಿಕತೆಯ ಅಗತ್ಯವನ್ನು ಅರಿತಿದ್ದ ವ್ಯಕ್ತಿ. ದೇವರನ್ನು ನಂಬಲು ನಿರಾಕರಿಸುತ್ತಿದ್ದ ಚೆನ್ನಬಸಪ್ಪ ಜಗದ್ಗುರುಗಳಿಗೆ ಸಿಂಹಸ್ವಪ್ನವಾಗಿದ್ದರು. ಮನುಷ್ಯನ ಮೂಲಭೂತ ಕೆಟ್ಟತನವನ್ನು ಅರಿತಿದ್ದ ಚೆನ್ನಬಸಪ್ಪ ಆಡಳಿತ ನಿರ್ವಹಣೆಯಲ್ಲಿನ ಎಲ್ಲ ವಿವರ, ಸೂಕ್ಮಗಳನ್ನು ತಿಳಿದು ವರ್ತಿಸುತ್ತಿದ್ದರು. 1850, 1860 ರ ದಶಕಗಳಲ್ಲಿ ಚೆನ್ನಬಸಪ್ಪ ಹಾಗೂ ರಸಲ್ ವಿದ್ಯಾಧಿಕಾರಿಗಳಾಗಿ ಆಡಳಿತ ನಡೆಸುತ್ತಿದ್ದ 25 ವರ್ಷಗಳಲ್ಲಿ ಧಾರವಾಡದಲ್ಲಿದ್ದ 12 ಶಾಲೆಗಳು 341 ಆದವು. 1341 ಇದ್ದ ವಿದ್ಯಾರ್ಥಿಗಳು 27711 ಆದರು. ಬೆಳಗಾವಿಯ 1498 ವಿದ್ಯಾರ್ಥಿಗಳು 15819 ಆದರು. ಕನ್ನಡ ಪಠ್ಯ ಪುಸ್ತಕಗಳ ರಚನೆ, ಶಿಕ್ಷಕರ ತರಬೇತಿ, ನಿಘಂಟುಗಳ ರಚನೆ, ಭಾಷಾಂತರ ಮಾಡಿದ್ದು, ಜ್ಞಾನದ ಪುಸ್ತಕಗಳ ಪ್ರಕಟಣೆ ಇವೆಲ್ಲಕ್ಕೆ ಚೆನ್ನಬಸಪ್ಪನವರ ವ್ಯವಹಾರ ಜ್ಞಾನ, ಸ್ಪೂರ್ತಿ, ನಿಷ್ಟುರತೆ, ಮಾನವೀಯ ಧೋರಣೆ ಕೂಡ ಕಾರಣವಾಗಿದ್ದವು.” -ಪಿ.ಲಂಕೇಶ್ ( ಟೀಕೆ ಟಿಪ್ಪಣಿ ಸಂಪುಟ 1)

“ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಇಂಡಿಯಾದಲ್ಲಿ ವರ್ಷಕ್ಕೆ ಅಂದಾಜು 60,000 ಕೋಟಿ ರೂಪಾಯಿಗಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರದವತಿಯಿಂದ ಖರ್ಚು ಮಾಡಲಾಗುತ್ತದೆ.”  -ಕೇಂದ್ರ ಸರ್ಕಾರ

1968 ರಲ್ಲಿ ಬಂದ ಕೊಠಾರಿ ಆಯೋಗದಿಂದ ಹಿಡಿದು 2005ರಲ್ಲಿ ಬಂದ ಜ್ಞಾನ ಆಯೋಗದ ವರೆಗೂ ಅನೇಕ ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣ ಅಯೋಗಗಳು ರಚಿತಗೊಂಡಿವೆ. ನಮ್ಮ ರಾಜ್ಯದಲ್ಲಿ 50ರ ದಶಕದಲ್ಲಿ 22000 ಪ್ರಾಥಮಿಕ ಶಾಲೆಗಳು, 60ರ ದಶಕದಲ್ಲಿ 27000 ಪ್ರಾಥಮಿಕ ಶಾಲೆಗಳು, 70ರ ದಶಕದಲ್ಲಿ 32000 ಪ್ರಾಥಮಿಕ ಶಾಲೆಗಳು, 80ರ ದಶಕದಲ್ಲಿ 37000 ಪ್ರಾಥಮಿಕ ಶಾಲೆಗಳು, 2006ರ ವೇಳೆಗೆ 54000ಕ್ಕೆ  ಏರಿದೆ. ಶಿಕ್ಷಕರ ಸಂಖ್ಯೆ 2.5 ಲಕ್ಷದಷ್ಟಿದ್ದರೆ ವಿದ್ಯಾರ್ಥಿಗಳ ಸಂಖ್ಯೆ 8.5 ಮಿಲಿಯನ್ ಆಗಿದೆ. ಹೈಸ್ಕೂಲ್ ಸಂಖ್ಯೆ 9500 ರಷ್ಟಾಗಿದ್ದರೆ ಶಿಕ್ಷಕರ ಸಂಖ್ಯೆ 92000 ರಷ್ಟಿದ್ದರೆ ವಿದ್ಯಾರ್ಥಿಗಳ ಸಂಖ್ಯೆ 1.3 ಮಿಲಿಯನ್ ರಷ್ಟಿದೆ. 80 ದಶಕದಲ್ಲಿ ಪಾಸಾಗುವವರ ಪ್ರಮಾಣ ಶೇಕಡ 30 ರಷ್ಟಿದ್ದರೆ 2010 ರ ವೇಳೆಗೆ ಶೇಕಡ 75ಕ್ಕೆ ಏರಿದೆ. ಸಾಕ್ಷರತೆ  ಪ್ರಮಾಣ ಶೇಕಡ 67ಕ್ಕೆ ತಲುಪಿದೆ. ನಿರಂತರ ಅಭಿವೃದ್ಧಿಗಾಗಿ ಇರುವ ಕೆಲವು ಕಾರ್ಯಕ್ರಮಗಳು ಚಿಣ್ಣರ ಅಂಗಳ, ಬಾ ಮರಳಿ ಶಾಲೆಗೆ, ಕೂಲಿಯಿಂದ ಶಾಲೆಗೆ, ಬೇಡಿಯಿಂದ ಶಾಲೆಗೆ, ಮಧ್ಯಾಹ್ನದ ಬಿಸಿಯೂಟ, ಕಲಿ ನಲಿ ಇತ್ಯಾದಿ ಇತ್ಯಾದಿ. ಇವೆಲ್ಲ ಅಲ್ಲದೆ 2010 ರಲ್ಲಿ ಅತ್ಯಂತ ಘನವಾದ ಯೋಜನೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ಶಿಕ್ಷಣದ ಹಕ್ಕು” ಕಾಯ್ದೆ. ಸರ್ವರಿಗೂ ಶಿಕ್ಷಣ ಕಾಯ್ದೆ.

ಇವಿಷ್ಟೂ ಸರ್ಕಾರಗಳು ತಾವು ಶಿಕ್ಷಣ ಖಾತೆಯನ್ನು ಹಾಳುಗೆಡುವಿಲ್ಲ ಬದಲಿಗೆ ನೋಡಿ ಇಲ್ಲಿದೆ ಏರಿಕೆಯ ಪ್ರಮಾಣ ಎಂದು ಸೋಗಲಾಡಿತನದಿಂದ, ಆತ್ಮವಂಚನೆಯಿಂದ ಕೊಚ್ಚಿಕೊಳ್ಳಲು ಮೇಲಿನ ಕೆಲವು ಸ್ಯಾಂಪಲ್ ಅಂಕಿಸಂಖ್ಯೆಗಳ ಗೊಂಡಾರಣ್ಯವನ್ನು ತೋರಿಸುತ್ತಾರೆ. ಪ್ರಜ್ಞಾವಂತರು, “ಅಲ್ಲ ಮಾರಾಯ್ರೆ, ನಾವು ಮಾತನಾಡುತ್ತಿರುವುದು ಸರ್ವರಿಗೂ ಸಮಾನ ಶಿಕ್ಷಣ, ಅಂದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಅದಕ್ಕೆ ಸಾಕ್ಷಿಪ್ರಮಾಣವನ್ನು ಕೇಳುತ್ತಿದ್ದೇವೆ.” ಎಂದಾಗ ಈ ಮತಿಹೀನ ಸರ್ಕಾರಗಳಿಗೆ ತಲೆಬುಡ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮ ನಾಗರಿಕತೆಯ ಮೂಲಭೂತ ಹಕ್ಕಾದ ಸಾರ್ವಜನಿಕ ಶಿಕ್ಷಣ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿಯ ಇದುವರೆಗಿನ ಕೆಲವು ಅಘಾತಕಾರಿ ಅಂಕಿಅಂಶಗಳು  ಹಾಗೂ ಅದು ಕೆಳಗಿನಂತಿರುವುದರ ಬಗೆಗೆ ಸರ್ಕಾರಗಳಿಗೆ ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆಗಳಿಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ. ಆದರೆ ಏನೇ ಕೇಳಿದರೆ ಅವು ಹೇಳುವುದು ಅರ್ಥಾತ್ ಗಿಣಿಪಾಠ ಒಪ್ಪಿಸುವುದು ಮತ್ತೆ ಮತ್ತೆ ಮೇಲಿನ  ಅಂಕೆ ಸಂಖ್ಯೆಗಳನ್ನೇ. ಆದರೆ ಅತ್ಯಂತ ಚರ್ವಿತ ಚರ್ವಣವಾದ ಕೆಲವು ನೈಜ ಅಘಾತಕಾರಿ ಅಂಕಿಅಂಶಗಳು ಮಾತ್ರ ಈ ರಾಜ್ಯದ ಪ್ರಾಥಮಿಕ ಶಿಕ್ಷಣದ  ಕರಾಳ ಮಗ್ಗುಲನ್ನು ನಮ್ಮ ಮುಂದೆ ಬಿಚ್ಚಿಡುತ್ತವೆ.

90ರ ದಶಕದಲ್ಲಿ ಅರ್ಧದಲ್ಲೇ  ಶಿಕ್ಷಣವನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಕಡ 37 ರಷ್ಟಿದ್ದರೆ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಕಡಾ 47ರಷ್ಟು, ಹೈಸ್ಕೂಲಿನಲ್ಲಿ ಶೇಕಡ 59 ರಷ್ಟಿತ್ತು. ಇದರ ಪ್ರಮಾಣ ಹದಿನೈದು ವರ್ಷಗಳ ನಂತರ 2005ರ ವೇಳೆಗೆ ಅನುಕ್ರಮವಾಗಿ ಶೇಕಡ 11, ಶೇಕಡ 29 ಹಾಗೂ ಶೇಕಡ 45. ಅಂದರೆ ಸ್ವಾತಂತ್ರ ಬಂದು 64 ವರ್ಷಗಳ ನಂತರವೂ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ತಮ್ಮನ್ನು ತಾವೇ ಮಧ್ಯದಲ್ಲಿ ಮೊಟಕುಗೊಳಿಸುವ ಪ್ರಕ್ರಿಯೆ ಇನ್ನೂ ಅಬಾಧಿತವಾಗಿ ನಡೆಯುತ್ತಲೇ ಇದೆ. ಇದಕ್ಕೆ ಕಾರಣಗಳು ನೂರಾರು ಪುಟಗಳಿಷ್ಟಿವೆ. ಎಲ್ಲವೂ ಈ ಪ್ರಭುತ್ವದ ಹೊಣಗೇಡಿತನದಿಂದಾಗಿಯೇ.

ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರು ಅರ್ಥಾತ್ ಚಕ್ಕರ್ ಹಾಕುವುದರ ಪ್ರಮಾಣ ಶೇಕಡಾ 30. ಭೋದನೇತರ ಚಟುವಟಿಕೆಗಳ ಶೇಕಡಾವಾರು ಪ್ರಮಾಣ ಶೇಕಡ 47. ಪ್ರತಿ 30 ವಿದ್ಯಾರ್ಥಿಗೆ ಒಬ್ಬ ಶಿಕ್ಷಕ/ಶಿಕ್ಷಕಿಯರಿದ್ದಾರೆ. ಆದರೆ ಏಕೋಪಾಧ್ಯಾಯ ಶಾಲೆಗಳು ಶೇಕಡಾ 30 ರಷ್ಟಿವೆ. ಮೂಲಭೂತ ಸೌಲಭ್ಯಗಳನ್ನು ಪಟ್ಟಿಮಾಡಿದಾಗ ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದ ಶಾಲೆಗಳು ಶೇಕಡ 70 ರಷ್ಟಿದ್ದರೆ ಶೌಚಾಲಯಗಳನ್ನು ಹೊಂದಿದ ಶಾಲೆಗಳು ಶೇಕಡಾ 47 ರಷ್ಟಿವೆ ಹಾಗೂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದ ಶಾಲೆಗಳ ಪ್ರಮಾಣ ಕೇವಲ ಶೇಕಡ 23. ಇನ್ನು ತರಗತಿಗಳ ಕೊರತೆಯ ಪ್ರಮಾಣ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಒಂದೇ ಕೋಣೆಯನ್ನುಳ್ಳ ಶಾಲೆಗಳ ಪ್ರಮಾಣ ಶೇಕಡಾ 20. ಪ್ರತಿ ಪ್ರಾಥಮಿಕ ಶಾಲೆಯ ಸರಾಸರಿ ಶಿಕ್ಷಕರ ಸಂಖ್ಯೆ 3 ಮಾತ್ರ. ಈ ಎಲ್ಲಾ ಸೌಲಭ್ಯಗಳು ಕನಿಷ್ಟ ಶೇಕಡಾ 100ರ ಪ್ರಮಾಣದಲ್ಲಿರಬೇಕು. ಯಾವುದೇ ಸಂದರ್ಭದಲ್ಲೂ. ಅದರೆ ಇಲ್ಲಿನ ಮಾಹಿತಿಯ ಪ್ರಕಾರ ನಮ್ಮ ರಾಜ್ಯದ ಶೋಚನೀಯ ಸ್ಥಿತಿ ಇದಕ್ಕಿಂತಲೂ ಬೇರೇನೂ ಇರಲಿಕ್ಕಿಲ್ಲ.

7 ರಿಂದ 10 ವಯಸ್ಸಿನ  ಶೇಕಡ 50 ರಷ್ಟು ಶಾಲಾ ಮಕ್ಕಳಿಗೆ ಲೆವೆಲ್ 1 ಮಟ್ಟದ ವಾಕ್ಯಗಳನ್ನೂ ಓದಲು ಬರುವುದಿಲ್ಲ, ಹಾಗೂ ಶೇಕಡಾ 72 ರಷ್ಟು ಶಾಲಾ ಮಕ್ಕಳಿಗೆ ಲೆವೆಲ್ 2 ಮಟ್ಟದ ಪದ್ಯಗಳನ್ನು ಓದಲು ಬರುವುದಿಲ್ಲ. ಇದೇ ವಯೋಮಿತಿಯೊಳಗಿನ ಶೇಕಡ 60 ರಷ್ಟು ಶಾಲಾ ಮಕ್ಕಳಿಗೆ ಕೂಡುವ ಹಾಗೂ ಕಳೆಯುವ ಲೆವೆಲ್ 1 ಮಟ್ಟದ ಗಣಿತ ಬರುವುದಿಲ್ಲ, ಶೇಕಡಾ 90  ರಷ್ಟು ಶಾಲಾ ಮಕ್ಕಳಿಗೆ ಗುಣಿಸುವ ಹಾಗೂ ಭಾಗಾಕಾರದ ಲೆವೆಲ್ 1 ಮಟ್ಟದ ಗಣಿತ ಬರುವುದಿಲ್ಲ. ಇದೇ ವಯೋಮಾನದ ವಿದ್ಯಾರ್ಥಿಗಳ ಮೂಲಭೂತ ಇಂಗ್ಲೀಷ್ ಜ್ಞಾನದ ಮಟ್ಟ ಕೇವಲ 16 ಪರ್ಸೆಂಟ್. ಯಾಕೆ ಇಂತಹ ಘನಘೋರ ಯಡವಟ್ಟಾಯ್ತು?. ಇಲ್ಲಿ ನಾವು ಕೇವಲ ಮುಗ್ಗರಿಸಲಿಲ್ಲ ಪದೇ ಪದೇ ಮುಗ್ಗರಿಸಿದ್ದೇವೆ. ಉತ್ತಮ ಸರ್ಕಾರವೆನ್ನುವುದು ಒಂದು ಲೊಳಲೊಟ್ಟೆ ಎಂದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ

ಮೊದಲನೆಯದಾಗಿ ಸ್ವಾತಂತ್ರ ಬಂದ ನಂತರ ನೆಹರೂ ಕನಸಿದ್ದು ಜಾತ್ಯಾತೀತ, ಸೆಕ್ಯುಲರ್ ರಾಷ್ಟ್ರದ ಜೊತೆಜೊತೆಗೇ ಶೈಕ್ಷಣಿಕ, ಕೈಗಾರಿಕೆಯ ಅಭಿವೃದ್ಧಿ ಹಾಗೂ ಇದರ ನಾಗಲೋಟ. ಉತ್ತಮ ಶಿಕ್ಷಣ ಆಗಿನ ಪ್ರಾಮಾಣಿಕ ಕನಸಾಗಿತ್ತು. ಸರ್ವರಿಗೂ ಶಿಕ್ಷಣ ಒಂದು ಮಂತ್ರವಾಗಿತ್ತು. ಅದಕ್ಕಾಗಿಯೇ “ಮಾನವ ಸಂಪನ್ಮೂಲ ಅಭಿವೃದ್ಧಿ” ಎನ್ನುವ ಇಲಾಖೆಯಡಿ ಶಿಕ್ಷಣ ಖಾತೆಯನ್ನು ಒಂದು ಪ್ರಮುಖ ಆದರ್ಶವನ್ನಾಗಿಯೇ ಪರಿಭಾವಿಸಿದ್ದರು. ಆಗ  ಮೌಲಾನ ಅಬ್ದುಲ್ ಕಲಾಂ ಅಜಾದರಂತಹ ಶ್ರೇಷ್ಟ ಶಿಕ್ಷಣ ತಜ್ಞ, ಬುದ್ಧಿಜೀವಿ, ಸಂಸದೀಯಪಟು ಶಿಕ್ಷಣ ಮಂತ್ರಿಗಳಾಗಿದ್ದರು. ಮೌಲಾನ ಅಜಾದರು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗೆ ಒಂದು ಘನತೆಯನ್ನೇ ತಂದು ಕೊಟ್ಟರು. ಅಷ್ಟೇ ಅಲ್ಲ ಭವಿಷ್ಯದಲ್ಲೂ ಈ ಇಲಾಖೆಗೆ ಭದ್ರ ಅಡಿಪಾಯವನ್ನು ಹಾಕಿದರು. ನಂತರ ಬಂದ ಕೆ.ಎಲ್.ಶ್ರಿಮಾಲಿಯವರೂ ಇದೇ ದಾರಿಯಲ್ಲಿ ಸಾಗಿದ್ದರು. ಆದರೆ ನಂತರ ವರ್ಷಗಳಲ್ಲಿ ಕೇಂದ್ರದ ಈ ಶಿಕ್ಷಣ ಖಾತೆ ಸಂಪೂರ್ಣ ಅವಜ್ಞೆಗೂ, ಸಂಪೂರ್ಣ ತಿರಸ್ಕಾರಕ್ಕೂ ಒಳಗಾಯಿತು. ಉದಾಹರಣೆಗೆ ನೋಡಿ, ದೇಶದ ಸಾಮಾಜಿಕ ವ್ಯವಸ್ಥೆಯ ಪ್ರಾಥಮಿಕ ತಿಳುವಳಿಕೆ, ಹಾಗೂ ಸಮತಾವಾದದ ನೀತಿಯಡಿ ದೇಶದ, ಸಮಾಜದ ಜಮೀನ್ದಾರ ಅಥವಾ ಮೇಲ್ವರ್ಗಗಳ ಮಕ್ಕಳಿಗೂ ಹಾಗೂ ಸ್ಲಂನ, ಕೂಲಿ ಕಾರ್ಮಿಕರ, ಬಡವರ ಮಕ್ಕಳಿಗೂ ಸಮಾನ ಶಿಕ್ಷಣ ಅವಕಾಶ, ಅದಕ್ಕಾಗಿ ಅತ್ಯುತ್ತಮವಾದ ಪಠ್ಯಪುಸ್ತಕಗಳ ರಚನೆ ಇವೆಲ್ಲವನ್ನು ಆದರ್ಶಪ್ರಾಯವಾಗಿಯೇ ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಂತಹ ಶಿಕ್ಷಣ ತಜ್ಞರು, ರಾಜಕೀಯ ಇಚ್ಛಾಶಕ್ತಿಯುಳ್ಳಂತಹ ರಾಜಕಾರಣಿಗಳು ಈ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯನ್ನು ನಡೆಸಬೇಕಾದ ಜಾಗದಲ್ಲಿ ಕಳೆದ ದಶಕಗಳಿಂದ ಬಂದು ಹೋದ ಫಕ್ರುದ್ದೀನ್ ಅಲಿ ಅಹ್ಮದ್, ಎಸ್.ಎಸ್.ರೇ, ಶಂಕರಾನಂದ (ನಮ್ಮ ರಾಜ್ಯದವರು), ಕರಣ ಸಿಂಗ್, ಎಸ್.ಬಿ.ಚವ್ಹಾಣ, ಪಿ.ವಿ. ನರಸಿಂಹರಾವ್, ಮುರಳೀ ಮನೋಹರ ಜೋಶಿ, ಅರ್ಜುನ್ ಸಿಂಗ್, ಈಗ ಕಪಿಲ್ ಸಿಬಾಲ್ ರಂತಹ ರಾಜಕಾರಣಿಗಳ ಕೈಯಲ್ಲಿ ದೇಶದ ಅತ್ಯಂತ  ಪ್ರಮುಖ ಇಲಾಖೆ ನಲುಗಿ, ಹಾದಿ ತಪ್ಪಿ ಹೋಯ್ತು. ಈ ಮೂಲಕ ಭವಿಷ್ಯದಲ್ಲಿ ಅತ್ಯುತ್ತಮ ಪ್ರಜೆಗಳನ್ನು, ಮಾನವತಾವಾದಿಗಳನ್ನು ನಿರ್ಮಿಸಬೇಕಾದಂತಹ ಮಾನವ ಸಂಪನ್ಮೂಲ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಯಿತು. ಇದೇ ಮಾತು ಕರ್ನಾಟಕದ ಮಟ್ಟಿಗೂ ಅನ್ವಯಿಸುತ್ತದೆ. ಈ ಪ್ರಾಥಮಿಕ ಶಿಕ್ಷಣದ ಉನ್ನತೀಕರಣವೇ ಈ  ಶತಮಾನದ ಅಭಿವೃದ್ಧಿಯ ಮಾನದಂಡವೆನ್ನುವ ಮಹಾತ್ವಾಕಾಂಕ್ಷೆಯ ರಾಜಕೀಯ ಇಚ್ಛಾಶಕ್ತಿಯ ಸ್ವರೂಪವನ್ನು  ಪಡೆದುಕೊಂಡು ಮುನ್ನುಗ್ಗಬೇಕಿದ್ದ ಈ ಮಾನವ ಸಂಪನ್ಮೂಲ ಅಭಿವೃದ್ಧಿ ಅರ್ಥಾತ್ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ನಗಣ್ಯವಾಗಿದೆ. ಸಂಪೂರ್ಣವಾಗಿ ದಿಕ್ಕುತಪ್ಪಿ ಅನಾಥವಾಗಿದೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಭ್ರಷ್ಟಾಚಾರದ ಕರಿನೆರಳು ಶಿಕ್ಷಣ ಇಲಾಖೆಯನ್ನೂ ಬಿಟ್ಟಿಲ್ಲ.ಅದರಲ್ಲೂ ಶಿಕ್ಷಕರ ವರ್ಗಾವಣೆ ರಾಜಕಾರಣಿಗಳಿಗೆ ಅಕ್ಷಯಪಾತ್ರೆ. ಇಲ್ಲಿನ ಭ್ರಷ್ಟತೆ ಅಳೆತೆಗೂ ಸಿಕ್ಕದು. ಅಲ್ಲದೆ ಸಂಬಂಧಪಟ್ಟ ಶಿಕ್ಷಣ ಮಂತ್ರಿಗಳೂ ಹಾಗೂ ಸಾರ್ವಜನಿಕ ಶಿಕ್ಷಣದ ಅಧಿಕಾರಿಗಳು ಪದೇ ಪದೇ ಕೊಚ್ಚಿಕೊಳ್ಳುವುದು ಮಧ್ಯಾಹ್ನದ ಬಿಸಿಯೂಟದಿಂದಾಗಿ ಶಾಲೆಗೆ ವಿದ್ಯಾರ್ಥಿಗಳು ಹೆಚ್ಚಾಗಿ ಸೇರುತ್ತಿದ್ದಾರೆ ಅಲ್ಲದೆ ಮಧ್ಯದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುವ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು !! ಉತ್ತಮ ಭವಿಷ್ಯದಲ್ಲಿ ಆಸೆ ಇಟ್ಟು ಅದಕ್ಕಾಗಿ ಪ್ರಾಥಮಿಕ ಶಾಲೆ ಸೇರಬಯಸುತ್ತಾರೆ ಎಂದು ಈ ಜನ ಹೇಳಬೇಕಾಗಿತ್ತು. ಅದರೆ ಇವರು ತೋರಿಸಿಕೊಳ್ಳುತ್ತಿರುವುದು ತಮ್ಮ ಆತ್ಮವಂಚನೆಯನ್ನ. ಇದು ನಮ್ಮ ನಾಗರಿಕ ಸಮಾಜದ ಆತ್ಮಗೌರವಕ್ಕೇ ಧಕ್ಕೆ  ತರುವಂತಹ  ಹೇಳಿಕೆಗಳು.

ಇದೆಲ್ಲದಕ್ಕೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಕೇಂದ್ರೀಯ ಆಡಳಿತ ವ್ಯವಸ್ಥೆ. ಇಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ಭವನದಲ್ಲಿ ಕುಳಿತ ಅಧಿಕಾರಿಗಳು ಆಡಳಿತಾತ್ಮಕವಾಗಿ ಎಲ್ಲಾ ನಿರ್ಣಯಗಳನ್ನು ಏಕರೂಪವಾಗಿ ತೆಗೆದುಕೊಳ್ಳುತ್ತಾರೆ. ಇದು ರಾಜ್ಯದಾದ್ಯಾಂತ ಒಟ್ಟಾರೆ ಶಿಕ್ಷಣ ಸ್ವರೂಪಕ್ಕೆ ಧಕ್ಕೆ ಉಂಟು ಮಾಡುತ್ತದೆ. ಏಕೆಂದರೆ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸ್ಥಳೀಯತೆಗೆ (Local) ಬಹಳ  ಆದ್ಯತೆ ಕೊಡಬೇಕಾಗುತ್ತದೆ. ಏಕೆಂದರೆ ಶಾಲೆಗೆ ಬರುವ ವಿದ್ಯಾರ್ಥಿಗಳು ಸ್ಥಳೀಯತೆಯಿಂದಲೇ ರೂಪಿತಗೊಂಡಿರುತ್ತಾರೆ. ಇದು 6 ರಿಂದ 13 ವಯಸ್ಸಿನ ಮಕ್ಕಳನ್ನು ರೂಪಿಸಬೇಕಾದಂತಹ ಕಾಲಘಟ್ಟ. ಅತ್ಯಂತ ಸೂಕ್ಮವಾದ, ಕುಸುರಿ ಕಲೆಯ ಮಟ್ಟದ ಕಾರ್ಯದಕ್ಷತೆಯ ಅವಶ್ಯಕತೆ ಬಹಳ ಇದೆ. ಇಂತಹ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿ ಸಮುದಾಯಗಳನ್ನು ರೂಪಿಸಿ ಈ ಸಮುದಾಯಗಳನ್ನು ತಮ್ಮ ಆಡಳಿತಗಳಲ್ಲಿ ಒಳಗೊಳ್ಳುವಿಕೆಗಾಗಿ ವೇದಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಆ ಮೂಲಕ ತಮ್ಮ ಕಾರ್ಯನೀತಿಯನ್ನು ಕಾನೂನುಬದ್ಧವಾಗಿ ರೂಪಿಸಿಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾದರೆ ಆಗ ಮಸಲ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ಅಥವಾ ತಾಲೂಕು ಪಂಚಾಯ್ತಿ ಮಟ್ಟದಲ್ಲಿ ಬರುವ ಶಾಲೆ ಒಂದು ವೇಳೆ ಯಾವುದೇ ರೀತಿಯ ತೊಂದರೆಗೊಳಗಾದರೂ ಅಲ್ಲಿನ ಸ್ಥಳೀಯ ಸಂಸ್ಥೆಗಳೇ ಇದನ್ನು ಸರಿಪಡಿಸಲು ಮುಂದಾಗುತ್ತವೆ. ಏಕೆಂದರೆ ಇದು ಅವರಿಗೆ ವಹಿಸಿರುವ ಜವಾಬ್ದಾರಿಯ ಜೊತೆಗೆ ಊರಿನ ಮರ್ಯಾದೆಯ ಪ್ರಶ್ನೆ ಮುಖ್ಯವಾಗುತ್ತದೆ. ಆದರೆ ಇದಕ್ಕೆ ಅಪಾರವಾದ ಶ್ರಮ, ಅಧ್ಯಯನ, ಸಮರ್ಪಣಾ ಮನೋಭಾವ ಬೇಕಾಗುತ್ತದೆ. ಆದರೆ ಬೆಂಗಳೂರಿನ ಲಾಬಿ ನಗರದಿಂದ ಹೊರಡುವ ಅಡಳಿತಾತ್ಮಕ ಏಕಪಕ್ಷೀಯ ನಿರ್ಧಾರಗಳ ತಿರುಳು, ಅದರ ಸ್ವರೂಪಗಳು ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕುಗಳು, ಗ್ರಾಮಗಳನ್ನು ಒಳಗೊಳ್ಳುವುದೇ ಇಲ್ಲ. (ಸದ್ಯಕ್ಕೆ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಬಲಿಷ್ಟ ಹಿಡಿತದಲ್ಲಿರುವ ನಮ್ಮ ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳ ಕಾರ್ಯಕ್ಷಮತೆಯನ್ನು,  ಸಾಮಾಜಿಕ ನ್ಯಾಯದ ಒಳತೋಟಿಯನ್ನು ಅಳೆಯಲು ಮತ್ತೊಂದು ಅಧ್ಯಯನವೇ ಬೇಕಾಗುತ್ತದೆ). ಇದು ಒಂದು ರೀತಿಯಲ್ಲಿ ಧ್ವಂಸ ಪ್ರವೃತ್ತಿಯದ್ದಾಗಿರುತ್ತದೆ. ಈ ಮೂಲಕ ವೈವಿಧ್ಯತೆಯನ್ನು ಒಳಗೊಳ್ಳುವ ಏಕತೆಯ ಕನಸು ಸಂಪೂರ್ಣವಾಗಿ ನಿರ್ನಾಮವಾಗುತ್ತದೆ. ಪುಟ್ಟ ವಿದ್ಯಾರ್ಥಿಗಳು ನಲುಗಿಹೋಗುತ್ತಾರೆ. ಎರಡನೇಯದಾಗಿ ಸದಾ ಕಾಲ ಜೀವಂತಿಕೆಯ, ಹುಮ್ಮಸ್ಸಿನ ಚಟುವಟಿಕೆಗಳು, ನಿರಂತರವಾಗಿ ಹೊಸದನ್ನು ಚಿಂತಿಸುವ ಮನಸ್ಸುಗಳ ಅವಶ್ಯಕತೆ ಬೇರೆ ಎಲ್ಲಾ ಇಲಾಖೆಗಿಂತಲೂ ಶಿಕ್ಷಣ ಇಲಾಖೆಗೆ ಜರೂರತ್ತಿದೆ. ಆದರೆ ನಮ್ಮಲ್ಲಿ ಅದು ಸಂಪೂರ್ಣವಾಗಿ ನಶಿಸಿಹೋಗಿದೆ. ಆದರೆ ಕೇಂದ್ರೀಕೃತ ನೌಕರ ವರ್ಗಗಳು ಸದಾ ಕಾಲ ಯಾವುದಾದರೊಂದು ಕಡತಗಳನ್ನು ಹೊತ್ತುಕೊಂಡು ಓಡಾಡುತ್ತಿರುವುದನ್ನು ನಾವೆಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಗಳಲ್ಲಿ ನೋಡಬಹುದು. ಅವು ಮತ್ತೇನಲ್ಲದೆ ವರ್ಗಾವಣೆಗಳದ್ದೋ, ಟಿಎ, ಡಿಎಗಳದ್ದೋ, ಇಲ್ಲಾ ಸಚಿವರ ಹಾಗೂ ಶಿಕ್ಷಣಾದಿಕಾರಿಗಳ ದಿನನಿತ್ಯದ ಸಮಾರಂಭಗಳದ್ದೋ, ಇತ್ಯಾದಿ ಇಷ್ಟೇ. ಬೇರಿನ್ನೇನು ಇರುವುದೇ ಇಲ್ಲ. ಇದರಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ನೌಕರಶಾಹಿಯ ಸಂಪೂರ್ಣ ನಿಷ್ಕ್ರಿಯತೆ, ಇಲ್ಲಿ ಚಲನಶೀಲತೆಯೇ ನಿಂತು ಹೋಗಿರುವ ವ್ಯವಸ್ಥೆ, ಕೇವಲ ಕಡತಗಳ ವಿಲೇವಾರಿಯನ್ನು ಮಾಡಿಕೊಂಡಿರುವ ಇಲ್ಲಿನ ನೌಕರ ವರ್ಗದಿಂದ ಅದಕ್ಕಿಂತ ಹೆಚ್ಚಿನದನ್ನು ಆಪೇಕ್ಷಿಸುವುದೇ ಮೂರ್ಖತನವಾಗುತ್ತದೆ. ಏಕೆಂದರೆ ಇದಕ್ಕೆ ಅಪರೂಪದ ವೈಚಾರಿಕ, ಪ್ರಗತಿಪರ ರಾಜಕೀಯದ ಸ್ಪರ್ಶ ನಿರಂತರವಾಗಿ ಇರಬೇಕಾಗುತ್ತದೆ. ಆಗಲೇ ಇಲ್ಲಿನ ನೌಕರ  ಶಾಹಿ ಗುಂಪು ಉತ್ತೇಜಗೊಳ್ಳುತ್ತದೆ. ಆದರೆ ಸರ್ಕಾರಗಳಿಗೆ ಬೇಕಾಗಿರುವುದು ವೈಯುಕ್ತಿಕವಾಗಿ ಆರ್ಥಿಕ ಲಾಭ ತಂದುಕೊಡುವ ಇಲಾಖೆಗಳು ಮಾತ್ರ.ಏಕೆಂದರೆ ಇಲ್ಲಿ ತಮ್ಮ ಸಂಪನ್ಮೂಲದ ಅಭಿವೃದ್ಧಿ ತುಂಬಾ ಕಡಿಮೆ ಇರುವುದರಿಂದ ಇವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಎಂದರೆ ಇನ್ನಿಲ್ಲದ ಅಲರ್ಜಿ. ಮಲತಾಯಿ ಧೋರಣೆ.

ನಮ್ಮದು ರಾಜ್ಯವಾರು, ಜಿಲ್ಲಾವಾರು, ತಾಲೂಕು ಮಟ್ಟದಲ್ಲೂ ಜೀವನದ ವಿವಿಧ ರಂಗಗಳಲ್ಲಿ ವಿವಿಧ ಭಿನ್ನತೆಗಳನ್ನೊಳಗೊಂಡ, ವಿವಿಧ ಜಾತಿ, ಕೋಮುಗಳನ್ನೊಳಗೊಂಡ ಗಣರಾಜ್ಯ. ಇದು ದೇಶಕ್ಕೆ ಅನ್ವಯಿಸಿದ ಹಾಗೆಯೇ ರಾಜ್ಯಗಳಿಗೂ, ಹಾಗೆಯೇ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮಗಳಿಗೂ ಅನ್ವಯಿಸುತ್ತದೆ. ಯಾವುದೇ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ರಚಿಸುವಾಗ ವೈವಿಧ್ಯತೆಯನ್ನೂ ಗಮನದಲ್ಲಿರಿಸಿಕೊಳ್ಳಲೇಬೇಕು. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ನಮ್ಯ ಪಠ್ಯ ಪುಸ್ತಕಗಳು ಏಕರೂಪಿ. ಇಲ್ಲಿನ ಪುರೋಹಿತಶಾಹಿ ಮನಸ್ಸು ಬಹುರೂಪಿಯನ್ನು ನಿರಾಕರಿಸುತ್ತದೆ.ಶಂಕರಾಚಾರ್ಯ, ರಾಮಾನುಜಾಚಾರ್ಯರ ಬಗ್ಗೆ ಪುಸ್ತಕಗಳಲ್ಲಿ ಪಾಠವಾಗಿ ಬರುತ್ತದೆ. ಆದರೆ ಅಲ್ಲಮ, ಮುಂಟೇಸ್ವಾಮಿ ಮಾಹಿತಿ ರೂಪವಾಗಿಯೂ ಬರುವುದೇ ಇಲ್ಲ. ಏಕೆಂದರೆ ಒಂದು ವೇಳೆ ಈ ಅಲ್ಲಮ, ಮುಂಟೇಸ್ವಾಮಿಯವರು ಪಠ್ಯಪುಸ್ತಕಗಳಲ್ಲಿ ಪ್ರಾಥಮಿಕ ಹಂತದಿಂದಲೇ ಸೇರಿಕೊಂಡಿದ್ದರೆ ಇಂದು ವೈದಿಕಶಾಹಿ ಪರಂಪರೆಯ ಭಗವದ್ಗೀತೆ ಅಲ್ಲಿ ಇರುತ್ತಲೇ ಇರಲಿಲ್ಲ. ಅಷ್ಟೊಂದು ವೈಚಾರಿಕ ಪ್ರಖರತೆ, ಜನಪರತೆ ಈ ಧರೆಗೆ ದೊಡ್ಡವರದು. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಟೇ ಸ್ವಾಮಿ, ಮಲೆ ಮಹದೇಶ್ವರ, ಸಿದ್ದಯ್ಯ ದೇವರುಗಳನ್ನು ತಮ್ಮ ಗರ್ಭಗುಡಿಯೊಳಗೆ ಬಿಟ್ಟು ಕೊಂಡೇ ಇಲ್ಲ. ಈ ಧರೆಗೆ ದೊಡ್ಡವರ ಬಗ್ಗೆ ವಿದ್ಯಾರ್ಥಿಗಳಿಗೆ ಗೊತ್ತಾಗುವುದು ಒಂದು ವೇಳೆ ಅವರು ತಮ್ಮ ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡರೆ ಮಾತ್ರ. ಇಲ್ಲದಿದ್ದರೆ ಇಲ್ಲವೇ ಇಲ್ಲ. ಹೀಗಾಗಿ ಕನ್ನಡದ ಅತ್ಯಂತ ಪ್ರಗತಿಪರ ಪರಂಪರೆ, ಕೇವಲ ಅಕಡೆಮಿಕ್ ಚಿಂತನೆಗಳಲ್ಲಿ, ಸಂಶೋದನೆಗಳಲ್ಲಿ ಉಳಿದುಕೊಳ್ಳುತ್ತದೆ. ಇದು ಅತ್ಯಂತ ಮಾರಕ. ಇದು ಕೇವಲ ಒಂದು ಉದಾಹರಣೆ ಮಾತ್ರ.  ಇಲ್ಲಿ ಅಂಕೆ, ನೀತಿ ಎಚ್ಚರ ತಪ್ಪಿದರೆ ಪುಸ್ತಕಗಳು ಜಾತಿವಾದವನ್ನು, ಕೋಮುವಾದವನ್ನೂ, ಫ್ಯೂಡಲಿಸಂನ್ನೂ ತನ್ನೊಡಲೊಳಗೆ ತುಂಬಿಕೊಳ್ಳುತ್ತವೆ. ಇದು ಅನೇಕ ವೇಳೆ ರಾಜಕಾರಣಿಗಳ ಮೂಗಿನಡಿಯಲ್ಲೇ ರೂಪಿತಗೊಳುತ್ತವೆ. ಇದು ಅಂತಿಮವಾಗಿ ಬಹುಸಂಖ್ಯಾತರಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ವಿವರಿಸಲು ಮತ್ತೊಂದು ವೇದಿಕೆಯೇ ಬೇಕು.

ಕರ್ತರುಗಳಾದ ರಾಜಕಾರಣಿಗಳ ದುರಂತ ಈ ಮಟ್ಟದ್ದಾದರೆ ಕ್ರಿಯೆಗಳಾದ ಶಿಕ್ಷಕರ ಬಗ್ಗೆ ಹೇಳುವುದೇನಿಲ್ಲ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಕರ ಗುಣಮಟ್ಟದ ಬಗ್ಗೆ ಅನೇಕ ಅಪನಂಬಿಕೆಗಳು, ಆರೋಪಗಳು ಮಾಡಲ್ಪಡುತ್ತಿದೆ. ಇದು ಅನೇಕ ಸನ್ನಿವೇಶಗಳಲ್ಲಿ ಸತ್ಯವೆಂದು ಸಾಬೀತಾಗಿದೆ. ಪ್ರಾಥಮಿಕ ಶಾಲೆಯ ಶಿಕ್ಷಕರ ಗುಣಮಟ್ಟವೆಂದರೆ ಅದಕ್ಕೆ ಮೂರು ಪ್ರಮುಖ ಮಾನದಂಡಗಳಿವೆ.  ಮೊದಲನೇಯದಾಗಿ ವಿಷಯದ ಪರಿಣಿತಿ. ಇಲ್ಲಿ ಅಂತಹ ತಕರಾರು ಇರುವಂತಿಲ್ಲ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಶಿಕ್ಷಕರು ತಾವು ಕಲಿತ ವಿಷಯಗಳನ್ನು,ಅವುಗಳ ಮೇಲಿನ ಪರಿಣಿತಿಯನ್ನು ವರ್ಷಗಳ ಕಾಲ ನಿರಂತರವಾಗಿ ಅದೇ ಮಟ್ಟದಲ್ಲಿ ಉಳಿಸಿಕೊಳ್ಳುವಲ್ಲಿ ಸೋಲುತ್ತಾರೆ (sustenance). ಅಲ್ಲದೆ ಬದಲಾದ ಕಾಲಘಟ್ಟದಲ್ಲಿ ವಿಷಯಗಳ ಮೇಲಿನ ಗ್ರಹಿಕೆಗಳೂ ತನ್ನ ಮೂಲಭೂತ ಅಂಶಗಳನ್ನು ಇಟ್ಟುಕೊಂಡೂ ತಂತಾನೇ ಬದಲಾವಣೆಗಳಿಗೆ ಒಳಪಡುತ್ತಿರುತ್ತದೆ. ಇದು ಎಲ್ಲಾ ವಿಷಯಗಳಿಗೆ ಅನ್ವಯಿಸುತ್ತದೆ. ಈ ರೀತಿಯ ಗುಣಾತ್ಮಕ ಬದಲಾವಣೆಗಳಿಗೆ ನಮ್ಮ ಶಿಕ್ಷಕರು ಒಗ್ಗಿಕೊಳ್ಳುವುದೇ ಇಲ್ಲ. ಹೀಗಾಗಿ ವಿಜ್ನಾನ, ಗಣಿತ, ಸಮಾಜ ಶಾಸ್ತ್ರ ದಂತಹ ವಿಷಯಗಳ ಮೇಲಿನ ಪಠ್ಯಗಳು ಸದಾ UPDATED ಆಗುತ್ತಿರುವಂತೆಯೇ ಸಂಬಂಧಪಟ್ಟ ಶಿಕ್ಷಕರೂ ಈ ಹೊಸ ಅವಿಷ್ಕಾರಗಳನ್ನು ತಾವೂ ಅರಿತುಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಹಾಗಾಗುವುದೇ ಇಲ್ಲ. ಎಲ್ಲರೂ ಬಾವಿಯೊಳಗಿನ ಕಪ್ಪೆಗಳಾಗಿಯೇ ಉಳಿದುಬಿಡುತ್ತಾರೆ ತಮಗೆ ಅರಿವಿಲ್ಲದೆಯೇ. ಇದು ಕ್ರಮೇಣ ವಿದ್ಯಾರ್ಥಿಗಳ ಜ್ಞಾನದ ಮೇಲು ಖುಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದಲ್ಲದೆ ಪ್ರತಿ ಶಾಲೆಗಳೂ ಶೇಕಡಾ 100 ರಷ್ಟು ಫಲಿತಾಂಶವನ್ನು ಕೊಡಲೇಬೇಕು ಎನ್ನುವ ಒತ್ತಡದಲ್ಲಿರುವ ಮುಖ್ಯೋಪಾಧ್ಯಯರು ಹಾಗೂ ಶಿಕ್ಷಕರು ಗುಣಮಟ್ಟವನ್ನು ಕಾಪಾಡಿಕೊಳ್ಳುವದಿಕ್ಕಿಂತಲೂ ಟಾರ್ಗೆಟ್ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ನನಗೆ ಪರಿಚಯವಿರುವ ಕೆಲವು ಮುಖ್ಯೋಪಾಧ್ಯಾಯರೊಂದಿಗೆ ಅನೇಕ ವೇಳೆ ಈ ವಿಷಯವನ್ನು ಕುರಿತು ಚರ್ಚಿಸಿದ್ದೇನೆ. ಆದರೆ ಅವರಿಗೂ ಯಾವುದೇ ಬಗೆಯ ಮಂತ್ರದಂಡಗಳು ಗೊತ್ತಿಲ್ಲ. ಏಕೆಂದರೆ ಸಧ್ಯಕ್ಕೆ ನಮ್ಮ ಬಹುಪಾಲು ಮುಖ್ಯೋಪಾಧ್ಯಾಯರುಗಳು ತಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ಶೇಕಡಾ 70 ರಷ್ಟು ಸಮಯವನ್ನು ಕೇವಲ ಆಡಳಿತಾತ್ಮಕ ಕೆಲಸಗಳಲ್ಲೇ ಕಳೆದು ಹೋಗುತ್ತಾರೆ. ಶಾಲೆಯ ಯಜಮಾನನ ಸ್ಥಿತಿಯೇ ಈ ಮಟ್ಟದ್ದಾದರೆ ಇನ್ನೆಲ್ಲಿಯ ಗುಣಮಟ್ಟದ  ಶಿಕ್ಷಣ. ಅದು ಗಗನ ಕುಸುಮ.

ಎರಡನೆಯದಾಗಿ ಕೆಲಸದಲ್ಲಿನ ವೃತ್ತಿಪರತೆ (Professionalism) . ಇದು ವಿದ್ಯಾರ್ಥಿಗಳ ಒಟ್ಟಾರೆ ಗುಣಮಟ್ಟವನ್ನು ನಿರ್ಧರಿಸುತ್ತದೆ. ಇದಕ್ಕೆ ನಮ್ಮ ಶಿಕ್ಷಕರ ತರಬೇತಿ ಪಠ್ಯಪುಸ್ತಕಗಳ ಗುಣಮಟ್ಟದ ಜೊತೆ ಜೊತೆಗೆ ಶಿಕ್ಷಕರ ವೈಯುಕ್ತಿಕ ತಿಳುವಳಿಕೆಗಳೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉದಾಹರಣೆಗೆ ಪ್ರತಿಯೊಬ್ಬ ಶಿಕ್ಷಕನೂ/ಶಿಕ್ಷಕಿಯೂ ತರಗತಿಯಲ್ಲಿ ಪಾಠ ಮಾಡುವಾಗ ಅಲ್ಲಿನ ವಿದ್ಯಾರ್ಥಿಗಳ ಸಾಮಾಜಿಕ, ಕೌಟುಂಬಿಕ ಹಿನ್ನೆಲೆ. ಅವರ ಪೋಷಕರ ಸಾಮಾಜಿಕ ಸ್ಥಿತಿಗತಿ ಇವೆಲ್ಲವನ್ನೂ ಗಮನದಲ್ಲಿರಿಸಿಕೊಳ್ಳಲೇಬೇಕು. ಇದಕ್ಕಾಗಿ ಇವರು ಅಪಾರ ಮಾನಸಿಕ ಸಿದ್ಧತೆ ಮಾಡಿಕೊಳ್ಳಲೇಬೇಕಾಗುತ್ತದೆ, ಕನಿಷ್ಟ ಮಟ್ಟದ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಲೇ ಬೇಕಾಗುತ್ತದೆ ಹಾಗೂ ತಮ್ಮ ದೈನಂದಿನ ಕೆಲಸದ ಜೊತೆಗೆ   ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಮೀಸಲಿರಿಸಲೇಬೇಕು. ಮೊದಲನೇ ಮಟ್ಟದ ಈ ವೃತ್ತಿಪರತೆಯನ್ನು ಸಾಧಿಸಲು ಮೊಟ್ಟಮೊದಲು ಶಿಕ್ಷಣ ತರಬೇತಿ ವಿಧಾನ, ಅದಕ್ಕೆ ಬೇಕಾದ ಪರಿಕರಗಳು ಅಮೂಲಾಗ್ರವಾಗಿ ಬದಲಾಗಲೇಬೇಕು. ಈಗಿರುವ ಅತ್ಯಂತ ದೋಷಪೂರ್ಣ, ಬಾಲಿಶ, OUTDATED ತರಬೇತಿ ಪಠ್ಯಕ್ರಮಗಳಿಂದ ವೃತ್ತಿಪರ ತರಬೇತಿ ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಈಗಿನ ಈ ತರಬೇತಿ ವ್ಯಾಸಂಗ ಕ್ರಮ  ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿತವಾದದ್ದು. ಇದನ್ನು ತಮ್ಮ ತರಬೇತಿ ಶಿಕ್ಷಣದ ಅಡಿಯಲ್ಲಿ ವ್ಯಾಸಂಗ ಮಾಡುವ ಶಿಕ್ಷಕರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋಭೂಮಿಕೆ, ಅವರ ಸಾಮಾಜಿಕ ಹಿನ್ನೆಲೆ, ಅವರು ವಾಸಿಸುವ ಗ್ರಾಮದ ಪರಿಸರ ಇವೆಲ್ಲವೂ ಮನದಟ್ಟಾಗುವ ಸಾಧ್ಯತೆಗಳೇ ಕಡಿಮೆ. ಶಿಕ್ಷಣ ವ್ಯವಸ್ಥೆಯ ಈ ಮಧ್ಯಮ ವರ್ಗದ ಪರ ಸಾರ್ವತ್ರಿಕ ಒಲವು ಗ್ರಾಮೀಣ ವಿದ್ಯಾರ್ಥಿಗಳನ್ನು ನುಂಗಿಹಾಕಿದೆ. ಈ ಎಲ್ಲಾ ದೌರ್ಬಲ್ಯಗಳನ್ನು ಮೀರಲು ಶಿಕ್ಷಕರಲ್ಲಿ ಅಪಾರವಾದ ವೈಯುಕ್ತಿಕ ಅರ್ಪಣಾ ಮನೋಭಾವ ಬೇಕಾಗುತ್ತದೆ. ಆದರೆ ದುಖದ ಸಂಗತಿಯೆಂದರೆ ಬಹುಪಾಲು ಶಿಕ್ಷಕರಲ್ಲಿ ಇದರ ಗೈರುಹಾಜರಿ ಎದ್ದು ಕಾಣುತ್ತದೆ. ಇಂದಿನ ಬಹುಪಾಲು ಶಿಕ್ಷಕರು ತಮಗೆ ಗೊತ್ತಿಲ್ಲದೆಯೇ ತಮ್ಮ ಮನಸ್ಸು ಹಾಗೂ ಮಿದುಳನ್ನು ನಗರಕೇಂದ್ರಿತವಾಗಿರಿಸಿಕೊಂಡಿದ್ದಾರೆ. ಈ ರೀತಿ ನಗರೀಕರಣಗೊಂಡ ಶಿಕ್ಷಕರು ತಮ್ಮ ಅರಿವಿಗೆ ಮೀರಿ ಕೂಪಮಂಡೂಕಗಳಾಗುತ್ತಿದ್ದಾರೆ.ಜಾತ್ಯಾತೀತತೆಯನ್ನು ಮರೆಯುತ್ತಿದ್ದಾರೆ. ಆದರೆ ಇಲ್ಲಿ ನಿರಾಶವಾದಕ್ಕೆ ಅವಕಾಶವೇ ಇಲ್ಲ. ಅಂದಿನ ಕಾಲದ ಡೆಪ್ಯುಟಿ ಚೆನ್ನಬಸಪ್ಪ, ಗಂಗಾಧರೇಶ್ವರ ಮಡಿವಾಳ, ತುರುಮುರಿಯಂತಹ ಶ್ರೇಷ್ಟ ಶಿಕ್ಷಕರ ಪರಂಪರೆಯ ಕೊಂಡಿ ನಮ್ಮ ಕಾಲದ ಕೃಷ್ಣಮೂರ್ತಿ ಬಿಳಿಗೆರೆಯವರವರೆಗೂ ಬೆಳೆದಿದೆ. ಕಳೆದ 150 ವರ್ಷಗಳಿಂದ ಈ ಕೊಂಡಿ ಕಳಚಿಕೊಂಡಿಲ್ಲ. ನಿರಂತರವಾಗಿದೆ. ಆ ಕಾಲದಿಂದ ಇಂದಿನ ಕಾಲದವರೆಗೂ ಎಲ್ಲಾ ತಲೆಮಾರಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವಮಾನದಲ್ಲಿ ಕನಿಷ್ಟವೆಂದರೂ 2 ರಿಂದ 3 ಮಾದರಿ, ನಿಸ್ವಾರ್ಥ, ಸಮರ್ಪಣಾ ಮನೋಭಾವದ ಶಿಕ್ಷಕರ ಕೆಳಗೆ ಓದಿಯೇ ಇರುತ್ತಾರೆ. ಇವರಿಂದ ರೂಪುಗೊಂಡಿರುತ್ತಾರೆ. ಈ ಮಾದರಿ ಶಿಕ್ಷಕರು ಎಲೆಮರೆಯ ಕಾಯಿಯಾಗಿ ಈಗಲೂ ಇದ್ದಾರೆ. ಆದರೆ ಈ ಶಿಕ್ಷಕರ ಸಂಖ್ಯೆ ಒಂದು ಆಂದೋಲನದ ರೂಪು ಪಡೆದಾಗ ಮಾತ್ರ ಶಾಲೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಹುಟ್ಟುವುದಕ್ಕೆ ಸಾಧ್ಯ. ಇದರ ಬಗ್ಗೆ ನಮಗಂತೂ ಆಶಾವಾದವಿದೆ.

ಮೂರನೆಯದಾಗಿ ಶೇಕಡಾ 40 ರಷ್ಟು  ಶಿಕ್ಷಕರು ತಾವು ಕೆಲಸ ಮಾಡುವ ಊರಿನಲ್ಲಿ ವಾಸಿಸುವುದಿಲ್ಲ. ಪ್ರತಿದಿನ ಕೆಲಸಕ್ಕಾಗಿ ಸರಾಸರಿ 40 ಕಿ.ಮೀ. ಪರವೂರಿಗೆ ಪ್ರಯಾಣ ಮಾಡುತ್ತಾರೆ. ಇಲ್ಲಿ ವೃತ್ತಿಪರತೆ ಕುಂಠಿತಗೊಳ್ಳುತ್ತದೆ. ವೈಯುಕ್ತಿಕ ಹಿತಾಸಕ್ತಿ ಮೇಲುಗೈ ಪಡೆದು ಕೊಳ್ಳುತ್ತದೆ. ಇದಕ್ಕೆ ಬಲಿಯಾಗುವುದು ಎಂದಿನಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಒಂದು ಶಾಶ್ವತ ಪರಿಹಾರವೇ ಇಲ್ಲ. ಇನ್ನೂ ಗೊಂದಲಗಳಿವೆ. ಇದಕ್ಕೆ ರಾಜಕಾರಣಿಗಳ ಪ್ರಾಮಾಣಿಕ ಹಸ್ತಕ್ಷೇಪ ಬೇಕಾಗುತ್ತದೆ. ಆದರೆ ಭ್ರಷ್ಟ ರಾಜಕಾರಣಿ ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡುವುದೇ ಹಣ ಗಳಿಸಲು. ಇಲ್ಲಿ ವೈದ್ಯ ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ವ್ಯವಸ್ಥೆ ಜಾರಿಗೊಂಡಾಗ ಇನ್ನೆಲ್ಲಿಯ ವೃತ್ತಿಪರತೆ !! ಅದು ಶಿವಾಯ ನಮ:.

ಇನ್ನು ನಮ್ಮ ಪರೀಕ್ಷಾ ಪದ್ಧತಿ. ಇದು ಗಾಯದ ಮೇಲೆ ಬರೆ ಎಳೆದಂತೆ. ಅವ್ಯವಸ್ಥೆಯ ಅಗರವಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ ಪರೀಕ್ಷಾ ಪದ್ಧತಿ, ಸಿದ್ದಪಡಿಸುವ ಪ್ರಶ್ನೆಪತ್ರಿಕೆಗಳು ಎಲ್ಲವೂ ಓಬಿರಾಯನ ಕಾಲಕ್ಕೆ ಸೇರಿದ್ದು. ಇಲ್ಲಿ ವಿದ್ಯಾರ್ಥಿಗಳು ನಿಜದ ಜ್ಞಾನಾರ್ಜನೆಯ ಬದಲು ಅದರ ಇಲಾಖೆಗಳ ಅಸಮರ್ಥತೆಯ ಒಳಸುಳಿಗೆ ಬಲಿಯಾಗಿ ಎಲ್ಲಿಯೂ ಸಲ್ಲದಂತವರಾಗುತ್ತಾರೆ.ಏಕೆಂದರೆ ಮುಂದಿನ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಗಳಿಸುವ ಅಂಕಗಳೇ ಮಾನದಂಡವನ್ನಾಗಿ ಪರಿಗಣಿಸುತ್ತಿರುವಾಗ ಇಲ್ಲಿ ವೈಯುಕ್ತಿಕ ಪ್ರತಿಭೆಯನ್ನು ಅಳೆಯುವ ಮಾನದಂಡ ಎಷ್ಟೇ ದೋಷಪೂರಿತವಾಗಿದ್ದರೂ ಇದರ ಬಲಿ ಬಡ ವಿದ್ಯಾರ್ಥಿಗಳು.

ಇಷ್ಟೆಲ್ಲಾ ಶೋಚನೀಯ ಪರಿಸ್ಥಿಯಲ್ಲಿ ನಮ್ಮ ಕೇಂದ್ರದಲ್ಲಿ ಕಪಿಲ್ ಸಿಬಲ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅವರಿಗೆ ಶತಕೋಟಿಗಳ ವ್ಯವಹಾರವುಳ್ಳ, ಗ್ಲಾಮರ್ ಇರುವ ಕಮುನಿಕೇಶನ್ಸ್  ಖಾತೆಯ ಮೇಲೆ ಅಪಾರ ಪ್ರೀತಿ ಹಾಗೂ ಗಮನ. ಇವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಏನಾದರೂ ಮಾತನಾಡಿದ್ದರೆ ಅದು ಉನ್ನತ ಶಿಕ್ಷಣದ ಬಗ್ಗೆ. IIT, IIMಗಳ ಬಗ್ಗೆ ಮಾತ್ರ. ಅವುಗಳನ್ನು ಇನ್ನಷ್ಟು ಬಲಪದಿಸುವ ಕಾರ್ಯತಂತ್ರದ ಬಗ್ಗೆ ಮಾತ್ರ. ಮತ್ತದೇ ಸಮಾಜದ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಹಿತಾಸಕ್ತಿ.ಮುಂಬರುವ ರಾಜಕೀಯ ವ್ಯವಸ್ಥೆ ಕೂಡ ಇದರ ಬಗ್ಗೆ ಯಾವ ಬೆಳಕನ್ನು ಚೆಲ್ಲುವ ಸಾಧ್ಯತೆಗಳು ತುಂಬಾ ಕಡಿಮೆ. ಎಂದಿನಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ಲಕ್ಷ ಧೋರಣೆಯಿಂದ ನಾಶವಾಗುತ್ತಿದೆ. ಅಷ್ಟು ಮಾತ್ರ ನಿಜ.  ಇನ್ನು ನಮ್ಮ ರಾಜ್ಯದ ಶಿಕ್ಷಣ ಮಂತ್ರಿ ಸಂಘಪರಿವಾರದ ಸ್ವಂಯಂಸೇವಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು. ಇವರಿಗೆ ಮೇಲಿನ ಎಲ್ಲಾ ವಿಷಯಗಳಿಗಿಂತಲೂ ತಮ್ಮ ಪೂರ್ವಾಶ್ರಮದ ಆರ್.ಎಸ್.ಎಸ್. ಚಾಳಿಯನ್ನು ಮತ್ತೆ ಮತ್ತೆ ಜಾರಿಗೆ ತರಲೆತ್ನಿಸುತ್ತಾರೆ. ಮಾತೆತ್ತಿದರೆ ಶಿಕ್ಷಣದ ಅಮೂಲಾಗ್ರ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಧ್ವನಿಯ ಮೂಲ ಬೇರಿರುವುದು ಕೇಶವ ಕೃಪದಲ್ಲಿ. ಅಮೂಲಾಗ್ರ ಬದಲಾವಣೆ ಎಂದರೆ ಅಖಂಡ ಹಿಂದೂ ರಾಜ್ಯದ  ಪರಿಕಲ್ಪನೆಯನ್ನಾಧರಿಸಿದ ಕೋಮುವಾದ ಶಿಕ್ಷಣ ನೀತಿ. ಇದಕ್ಕೆ ಪ್ರಾಥಮಿಕ ಹಂತವಾಗಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಪ್ರಸ್ತಾಪ. ಆ ಮೂಲಕ ಭವಿಷ್ಯದ ಪ್ರಜೆಗಳು ಮೂಢನಂಬಿಕೆಗಳನ್ನು ತಲೆ ಮೇಲೆ ಹೊತ್ತುಕೊಂಡು ಅನ್ಯ ಧರ್ಮಗಳನ್ನು ದ್ವೇಷಿಸುವ ನಾಗರಿಕರಾಗಿ ಹೊರಹೊಮ್ಮುತ್ತಾರೆ.

ಇದಕ್ಕೆ ತೀವ್ರ ಪ್ರತಿರೋಧ ಎದುರಾದರೆ ಬೇಕಾದರೆ ಭಗವದ್ಗೀತೆಯ ಜೊತೆಜೊತೆಗೆ ಕುರಾನ್ ಹಾಗೂ ಬೈಬಲ್ ನ ಭಾಗಗಳನ್ನೂ ಸೇರಿಸೋಣ ಎನ್ನುವ ಕೋಮುವಾದದ ಆಷಾಡಭೂತಿತನ. ಧಾರ್ಮಿಕತೆಯೆಂದರೆ ಅದು ತೀರಾ ವೈಯುಕ್ತಿಕವಾದದ್ದು, ಅದನ್ನು ಕೇವಲ ಮನೆಯೊಳಗೆ ಮಾತ್ರ ಆಚರಿಸಿಕೊಳ್ಳಬೇಕು, ಸಾರ್ವಜನಿಕವಾಗಿ, ಅಧಿಕೃತವಾಗಿ ಎಲ್ಲೂ ಭೋದಿಸಬಾರದು ಎನ್ನುವ ಎಲಿಮೆಂಟರಿ ಶಿಕ್ಷಣವನ್ನು ಈ ಹಿಂದೂ ಧರ್ಮದ ಶಿಕ್ಷಣ ಸಚಿವ ಕಾಗೇರಿಯವರಿಗೆ ಈಗ ಅತ್ಯಂತ ತುರ್ತಾಗಿ ನೀಡಬೇಕಾಗಿದೆ. ಇವರಿಗೆ ಸರ್ವ ಶಿಕ್ಷಣ ಅಭಿಯಾನದ ಪ್ರಾಥಮಿಕ ಪಾಠಕ್ಕಾಗಿ ಮತ್ತೆ ಬಾ ಮರಳಿ  ಶಿಕ್ಷಣದ ತರಬೇತಿ ಕೊಡುವುದೊಳಿತು. ಇನ್ನೇನಾಗದಿದ್ದರೂ ಶಿಕ್ಷಣದ ಕೇಸರೀಕರಣವನ್ನಾದರೂ ಚಣ ಮಟ್ಟಿಗಾದರೂ ತಪ್ಪಿಸಬಹುದು. ಇಂತಹ ದಿಕ್ಕುತಪ್ಪಿದ ಪರಿಸ್ಥಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ, ಕನ್ನಡ ಮಾಧ್ಯಮದ ಶಾಲೆಗಳು ಇಂದು ತಲುಪಿರುವ ದುರಂತ ಸ್ಥಿತಿ. ನಮ್ಮೆಲ್ಲರ ಪ್ರೀತಿಯ ಅಭಿಮಾನದ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮೇಲಿನ ಶಿಕ್ಷಣದ ಎಲ್ಲಾ ಅಡತಡೆಗಳನ್ನು ದಾಟಿ ತನ್ನ ಐಡೆಂಟಿಟಿಯನ್ನು ಮತ್ತೆ ಪುನರ್ ಪ್ರತಿಷ್ಟಾಪಿಸಿಕೊಳ್ಳಲು ಹೊಸ ದಿಕ್ಕಿನಲ್ಲಿ ಚಿಂತನೆಗಳ ಅವಶ್ಯಕತೆ ಇದೆ. ಸರ್ಕಾರಗಳ ಅನೈತಿಕ, ಅವೈಜ್ಞಾನಿಕ ಚಿಂತನೆಗಳು, ಅಪಾರವಾದ ಆರ್ಥಿಕ ಹಾಗೂ ಬೌದ್ಧಿಕ ಭ್ರಷ್ಟತೆ, ನಮಗೆ ಯಾವುದು ಆರ್ಥಿಕವಾಗಿ ಲಾಭ ಗಳಿಸಿಕೊಡುತ್ತದೆಯೋ ಅದನ್ನು ಮಾತ್ರ ನಾವು ಹಿಂಬಾಲಿಸುತ್ತೇವೆ ಹೊರತಾಗಿ ಈ ನಮ್ಮ ನೆಲ ನಮ್ಮ ಭಾಷೆ ಎನ್ನುವ ಅಭಿಮಾನವೇ ಒಂದು ಅರ್ಥಹೀನ ಚಟುವಟಿಕೆ ಎನ್ನುವ ನಮ್ಮ ಮಧ್ಯಮ,ಮೇಲ್ಮಧ್ಯಮ ವರ್ಗಗಳ ಆತ್ಮವಂಚನೆ, ಹಾಗೂ ಈ ಅತ್ಮವಂಚನೆಯ ತಿರುಳೇ ನಮ್ಮ ಕೆಳ ಮಧ್ಯಮ, ಕೆಳ ವರ್ಗಗಳಿಗೆ ಮಾದರಿಯಾಗಿರುವುದು, ಹಾಗೂ ನಮ್ಮೆಲ್ಲರ ಮೇಲಿನ ನೈತಿಕ ಅಧಪತನವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಕನ್ನಡದಲ್ಲಿ ಶಿಕ್ಷಣ ಎನ್ನುವ ಈ ಅಸ್ಮಿತೆ ಹಾಗೂ ಐಡೆಂಟಿಟಿಯನ್ನು ಮತ್ತೆ ಬಿತ್ತಿ ಬೆಳೆಸಬಹುದು. ಇದಕ್ಕಾಗಿ ಕೃಷ್ಣಮೂರ್ತಿ ಬಿಳಿಗೆರೆರಂತಹವರ ನಿಜದ ಶಿಕ್ಷಣ ತಜ್ಞರ ಮನದಾಳದ ನೋವಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಾತುಗಳು ಮುಂದಿನ ದಿಕ್ಕಿಗೆ ದಾರಿದೀಪವಾಗಬಲ್ಲವು. ಈ ಮಾತುಗಳು ಪುಸ್ತಕದ, ಅಕಡೆಮಿಕ್ ಬದನೇಕಾಯಿಯಲ್ಲ, ಬದಲಿಗೆ ಸ್ವತಹ ಗ್ರಾಮೀಣ ಶಿಕ್ಷಕನಾಗಿ ಅನುಭವಿಸಿ ಕಣ್ಣಾರೆ ಕಂಡಿದ್ದರ ಫಲ. ಈ ಕಾಲಘಟ್ಟದಲ್ಲಿ ನಾವು ಅತ್ಯಂತ ಎಚ್ಚರಿಕೆಯ ನಡೆಗಳನ್ನು ಇಡಬೇಕಾಗುತ್ತದೆ. ನಮ್ಮ ಕನ್ನಡ ಮಾಧ್ಯಮದ ಶಾಲೆಗಳ ಪರವಾಗಿನ ಹೋರಾಟವನ್ನು ಮೇಲಿನ ಎಲ್ಲಾ ಅಡೆತಡೆಗಳನ್ನು ಗಮನದಲ್ಲಿರಿಸಿಕೊಂಡು ಅದನ್ನು ಆದ್ಯತೆಯ ಆಧಾರದ ಮೇಲೆ ಹಂತ ಹಂತವಾಗಿಯಾದರೂ ನಿವಾರಿಸಿಕೊಂಡು, ಸರಿದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಇದಕ್ಕಾಗಿ ನಾವೆಲ್ಲ ನಮ್ಮನ್ನು ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಲೇಬೇಕು ಮತ್ತು ಕಡೆಗೆ ಇದನ್ನು ತಾರ್ಕಿಕ ಅಂತ್ಯಕ್ಕೆ (ಅಂದರೆ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ)  ಮುಟ್ಟಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲೇಬೇಕು. ಇದಕ್ಕಾಗಿ ಅಪಾರ ಪರಿಜ್ಞಾನ ಹಾಗೂ ರೂಪುರೇಷೆ ಇಲ್ಲದಿದ್ದರೆ ನಮ್ಮ ಬೌದ್ಧಿಕ ಬಡಿವಾರಗಳಿಗೋಸ್ಕರ ಮತ್ತೊಮ್ಮೆ ಕಂಡವರ ಮಕ್ಕಳನ್ನು ಬಾವಿಗೆ ದೂಡಿದಂತಾಗುತ್ತದೆ. ಅಲ್ಲದೆ ಕೇವಲ ಚಿಂತನೆಗಳ ರೋಚಕತೆಗೋಸ್ಕರ, ಭಾಷೆಯ ಮೇಲಿನ ಭಾವುಕತೆಗೋಸ್ಕರ ನಾವು ನಡೆದುಕೊಂಡರೆ ಅರ್ವೆಲ್ ಹೇಳಿದಂತೆ “ನಾವು ಭಯಗ್ರಸ್ತ, ವಿಶ್ವಾಸ ಘಾತುಕ, ಶೋಷಣೆಯ, ದಿನ ಕಳೆದಂತೆ ಹೆಚ್ಚು ಹೆಚ್ಚು ಕ್ರೂರ ಜಗತ್ತನ್ನು ಸೃಷ್ಟಿ ಮಾಡುತ್ತಿದ್ದೇವೆ” ಎಂದು ಆಗುತ್ತದೆ.