Daily Archives: January 31, 2012

ಬೇಜವಾಬ್ದಾರಿ ಟಿವಿ ನಿರೂಪಕರು…


– ರವಿ ಕೃಷ್ಣಾರೆಡ್ಡಿ  


ನೆನ್ನೆ ರಾತ್ರಿ (30/1/12) ಸುವರ್ಣ ನ್ಯೂಸ್ 24×7 ನಲ್ಲಿ ನಿರೂಪಕ ರಂಗನಾಥ್ ಭಾರದ್ವಾಜ್ ಪಕ್ಷೇತರ ಶಾಸಕ ನರೇಂದ್ರಸ್ವಾಮಿಯವರನ್ನು ಸಂದರ್ಶಿಸುತ್ತಿದ್ದರು. ವಿಷಯ, ನೆನ್ನೆ ಸದನದಲ್ಲಿ ನಾಲ್ವರು ಪಕ್ಷೇತರ ಶಾಸಕರು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದ್ದು.

ನಾನು ಆಗ ತಾನೆ ಟಿವಿ ಹಾಕಿದ್ದೆ. ಹಾಗಾಗಿ ಆ ಸುದ್ದಿ ನೋಡಿದ್ದೆ ಎರಡು ನಿಮಿಷ. ಆ ಎರಡು ನಿಮಿಷದಲ್ಲಿ ರಂಗನಾಥ್ ಭರದ್ವಾಜ್ ನರೇಂದ್ರಸ್ವಾಮಿಯರ ಹಿತಚಿಂತಕ, ಪೀಡಕ, ಮತ್ತು ಜನರಂಜಕ, ಕಮೀಡಿಯನ್, ಎಲ್ಲವೂ ಆಗಿಹೋದರು.

ಒಂದು ಪ್ರಶ್ನೆ, “ಇವತ್ತು ನೀವು ಮಾಡಿದ ಪ್ರತಿಭಟನೆ ಯಾರನ್ನು ಮೆಚ್ಚಿಸಲು?” ಎಂದಾಗಿತ್ತು.

ಸರಿಯಾದ ಪ್ರಶ್ನೆಯೇ. ಕರ್ನಾಟಕದ ಈ ಬಾರಿಯ ಪಕ್ಷೇತರ ಶಾಸಕರು ನಡೆದುಕೊಂಡಿರುವುದೇ ಹಾಗೆ. ಅಧಿಕಾರದ ಹಿಂದೆ ಬಿದ್ದು ಸದನದಲ್ಲಿ ಸ್ವತಂತ್ರ ಧ್ವನಿಗಳೇ ಇಲ್ಲದಂತೆ ನಡೆದುಕೊಂಡರು. ಹಾಗಾಗಿ ನೆನ್ನೆಯ ಪ್ರತಿಭಟನೆಯೂ ಯಾವುದೋ ಲಾಭಕ್ಕಾಗಿ ಅಥವ ಮುಂದಿನ ದಿನಗಳ ಅನುಕೂಲಕ್ಕಾಗಿ ಎಂದು ಭಾವಿಸಬಹುದು.

ಆದರೆ, ಒಬ್ಬ ಟಿವಿ ನಿರೂಪಕನಾಗಿ ವಿಷಯದ ಹಿನ್ನೆಲೆ ಮತ್ತು ಗಾಂಭೀರ್ಯ ಅರಿಯದೆ ಕೇಳಬಹುದಾದ ಪ್ರಶ್ನೆಯೇ ಅದು? ಸ್ಪೀಕರ್‌ಗೆ ಸುಪ್ರೀಮ್‌ಕೋರ್ಟ್ ಹಾಕಿರುವ ಛೀಮಾರಿಗೆ ಈ ಶಾಸಕರು ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಸ್ವಾರ್ಥಿಗಳೇ ಇರಬಹುದು. ಜನಪ್ರತಿನಿಧಿಗಳಾಗಲು ವೋಟು ಗಳಿಸುವ ದೃಷ್ಟಿ ಹೊರತುಪಡಿಸಿ ಅಯೋಗ್ಯರೇ ಇರಬಹುದು. ಆದರೆ ನೆನ್ನೆಯದು ಬಹಳ ಗಂಭೀರ ವಿಷಯ. ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸಂಬಂಧಿಸಿದ್ದು. ಹಾಗಾಗಿ ಶಾಸಕರ ಆ ಪ್ರತಿಕ್ರಿಯೆಯನ್ನು ಈ ರೀತಿ ಅವಹೇಳನೆ ಅಥವ ನಗೆಪಾಟಲು ಮಾಡುವ ಮೂಲಕ ಸ್ಪೀಕರ್‌ರ ದೋಷ ಮತ್ತು ಅನ್ಯಾಯವನ್ನು ತೆಳು ಮಾಡಿ ಜನರ ಮುಂದೆ ಇಡುತ್ತಿದ್ದೇನೆ ಎನ್ನುವ ಪ್ರಜ್ಞೆ ಈ ನಿರೂಪಕರಿಗೆ ಬೇಡವೆ? ನಗುಮುಖದಿಂದ ಕೂಡಿದ್ದ ಆ ಪ್ರಶ್ನೆ ಕುಚೇಷ್ಟೆಯಿಂದ ಕೂಡಿದ್ದಷ್ಟೇ ಅಲ್ಲ, ಬೇಜವಾಬ್ದಾರಿಯದ್ದೂ ಸಹ.

ಇಷ್ಟಕ್ಕೂ ಇವರು ಸುದ್ದಿಮಾಧ್ಯಮದಲ್ಲಿ ಇದ್ದಾರೊ, ಅಥವ Late Night ಮನರಂಜನೆಯ ಉದ್ಯಮದಲ್ಲಿ ಇದ್ದಾರೊ?

ಇದಕ್ಕಿಂತ ಕೆಟ್ಟ ಪ್ರಶ್ನೆ, “ಈ ಪ್ರತಿಭಟನೆ ಮಾಡದೇ ಇದ್ದಿದ್ದರೆ ನಿಮಗೆ ಮುಂದಕ್ಕೆ ಏನಾದರೂ ಲಾಭ ಆಗುತ್ತಿತ್ತೊ ಏನೊ. ಅದೇನೋ ಹೇಳುತ್ತಾರಲ್ಲ, ಸುಮ್ಮನೆ ಇರಲಾರದೆ ಚಡ್ಡಿಯಲ್ಲಿ.. ಅದೇನೊ ಇರುವೆ ಬಿಟ್ಟುಕೊಂಡರಂತೆ, ಹಾಗೆ. ಯಾಕೆ ಮಾಡೋದಿಕ್ಕೆ ಹೋದ್ರಿ?”

ಇದು ಎಂತಹ ಅಪ್ರಬುದ್ಧ ಭಾಷೆ ನೋಡಿ. ಈ ನರೆಂದ್ರಸ್ವಾಮಿ ರಂಗನಾಥ್‌ಗೆ ಯಾವ ರೀತಿಯ ಸ್ನೇಹಿತ? ಹೀಗೆಲ್ಲ ಜನಪ್ರತಿನಿಧಿಗಳನ್ನು ಕೇವಲವಾಗಿ ಮಾತನಾಡಿಸಿದರೆ ನಮ್ಮ ಶಾಸಕಾಂಗದ ಗೌರವ ಏನು ಉಳಿಯಿತು? ನಮ್ಮ ಶಾಸಕರು ಇವತ್ತು ಇಂತಹುದನ್ನೆಲ್ಲ ಕೇಳಿಸಿಕೊಳ್ಳುವುದಕ್ಕೆ ಯೋಗ್ಯರೇ ಇರಬಹುದು. ಆದರೆ, ಒಬ್ಬ ಜವಾಬ್ದಾರಿಯುತ ಪತ್ರಕರ್ತ, ನಿರೂಪಕ, ಆಡುವ ಮಾತೇ ಇದು? ಬೀದಿಯಲ್ಲಿ ಮಾತನಾಡುವ ಸಲಿಗೆಯ ಕುಚೇಷ್ಟೆಯ ಭಾಷೆ.

ಇಬ್ಬರಿಗೂ ನಾಚಿಕೆಯಾಗಬೇಕು.

ಇಂತಹ ನಡವಳಿಕೆ ರಂಗನಾಥ್ ಭಾರದ್ವಾಜ್ ಒಬ್ಬರಿಗೇ ಸೀಮಿತವಾಗಿಲ್ಲ. ನಮ್ಮ ಅನೇಕ ಟಿವಿ ನಿರೂಪಕರು ರಾಜಕಾರಣಿಗಳ ಜೊತೆ ಅತಿಸಲಿಗೆ ಬೆಳೆಸಿಕೊಂಡು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನೇ ಕುಗ್ಗಿಸುತ್ತಿದ್ದಾರೆ. ಎಷ್ಟೋ ಸಲ ನಮ್ಮ ಪತ್ರಕರ್ತರು ರಾಜಕಾರಾಣಿಗಳಿಗಿಂತ ಹೆಚ್ಚಿಗೆ ಓದಿಕೊಂಡಿರುತ್ತಾರೆ. ಸಿದ್ಧಾಂತ, ಸಭ್ಯನಡವಳಿಕೆ, ಭಾಷಾಪ್ರಯೋಗದ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅದ್ಯಾವುದೂ ಅವರ ನಡವಳಿಕೆ ಮತ್ತು ಭಾಷೆಯಲ್ಲಿ ಕಾಣಿಸುತ್ತಿಲ್ಲ.

ರಾಜಕಾರಣಿಗಳ ಜೊತೆ ಅತಿಸಲಿಗೆಯಿಂದ ಮತ್ತು ಅತಿ ಬೇಜವಾಬ್ದಾರಿಯಿಂದ ವರ್ತಿಸುವ ಕನ್ನಡದ ಟಿವಿ ನಿರೂಪಕರು ವಿನೋದ್ ಮೆಹ್ತಾರ ಈ ಮಾತುಗಳನ್ನು ಕೇಳಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯ ಕೆಲವು ಪ್ರಾಥಮಿಕ ಪಾಠಗಳನ್ನಾದರೂ ಕಲಿಯಬೇಕು.

ಟಿವಿ ನಿರೂಪಕರು ಇನ್ನೊಬ್ಬರ ಘನತೆಯನ್ನು ಹೆಚ್ಚು ಮಾಡದಿದ್ದರೂ ಪರವಾಗಿಲ್ಲ, ಕನಿಷ್ಟ ತಮ್ಮ ವೃತ್ತಿಘನತೆಯನ್ನಾದರೂ ಉಳಿಸಿಕೊಳ್ಳಲಿ.

ಈಗಾಗಲೆ ಅವರ ಘನತೆ ರಾಜಕಾರಣಿಗಳ ತರಹವೇ ಭ್ರಷ್ಟಾಚಾರದ ವರದಿಗಳಲ್ಲಿ, ಮಾಧ್ಯಮ ಕುರಿತಾದ ಸೆಮಿನಾರ್‌ಗಳಲ್ಲಿ. ಟ್ಯಾಬ್ಲಾಯ್ಡುಗಳಲ್ಲಿ,  ಹಾದಿಬೀದಿಯಲ್ಲಿ, ಹರಾಜಾಗುತ್ತಿದೆ.