Monthly Archives: February 2012

ವೈಜ್ಞಾನಿಕ ಮನೋಭಾವ ಮತ್ತು ದೇಶದ ಮುನ್ನಡೆಯ ಸಂಬಂಧ

-ಆನಂದ ಪ್ರಸಾದ್

ವಿಜ್ಞಾನವು ಇಂದು ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಜೀವನಕ್ಕೆ ನೆಮ್ಮದಿಯನ್ನೂ, ಸಂತೋಷವನ್ನೂ, ಭದ್ರತೆಯನ್ನೂ ಕೊಡುವಲ್ಲಿ ವಿಜ್ಞಾನದ ಪಾತ್ರ ಮಹತ್ತರವಾದುದು. ಒಂದು ಕಾಲವಿತ್ತು, ಅದೂ ಹೆಚ್ಚು ಹಿಂದಿನದಲ್ಲ ಕೆಲವೇ ದಶಕಗಳ ಹಿಂದೆ ಜನ ಪ್ಲೇಗು, ಮಲೇರಿಯಾ, ಕ್ಷಯ, ರೇಬೀಸ್, ಕಾಲರಾ ಮೊದಲಾದ ರೋಗಗಳು ಬಂದರೆ ಸಾವನ್ನೇ ಎದುರು ನೋಡಬೇಕಾಗಿತ್ತು. ವಿಜ್ಞಾನವು ಇವುಗಳ ಕಾರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಔಷಧಿಗಳನ್ನು ಕಂಡು ಹಿಡಿದು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಲಕ್ಷಾಂತರ ಅಮೂಲ್ಯ ಜೀವಗಳನ್ನು ಉಳಿಸಿದೆ, ಉಳಿಸುತ್ತಿದೆ. ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸಿದ ಕಾರಣವೇ ವಿಜ್ಞಾನಿಗಳು ಇಂಥ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸುವವರಿಗೆ ಸೂಕ್ತ ಪ್ರೋತ್ಸಾಹ ಇಲ್ಲ, ಬದಲಿಗೆ ಕಿರುಕುಳ ಸಿಕ್ಕುತ್ತದೆ. ಹೀಗಾಗಿ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ್ದರೂ ವಿಶ್ವಖ್ಯಾತಿಯ ವಿಜ್ಞಾನಿಗಳನ್ನು ಬೆಳೆಸಲಿಲ್ಲ. ಲಕ್ಷಾಂತರ ಜೀವಗಳನ್ನು ಉಳಿಸಲು ಕಾರಣವಾದ ವಿಜ್ಞಾನಿಗಳನ್ನು ನಮ್ಮ ಯಾವ ಟಿವಿ ವಾಹಿನಿಗಳೂ ಕೊಂಡಾಡಿದ್ದು, ಹಾಡಿ ಹೊಗಳುವುದು ಬಿಡಿ, ಕನಿಷ್ಠ ಅವರ ಪರಿಚಯವನ್ನೂ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಾಣುವುದಿಲ್ಲ. ಆದರೆ ಪವಾಡ ಪುರುಷರನ್ನು ಮಾತ್ರ ಅಪಾರವಾಗಿ ಹಾಡಿ ಹೊಗಳುವುದನ್ನು ಕಾಣುತ್ತೇವೆ. ಜ್ಯೋತಿಷಿಗಳು, ವಾಸ್ತು ಎಂಬ ಹೆಸರಿನಲ್ಲಿ ಮೋಸ ಮಾಡುವ ಜನರಿಗೆ ನಮ್ಮ ಟಿವಿ ಮಾಧ್ಯಮದಲ್ಲಿ ಅಗ್ರ ಸ್ಥಾನ.

ಕೆಲವು ದಶಕಗಳ ಹಿಂದೆ ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವುದು ಹಲವಾರು ಗಂಟೆಗಳನ್ನು ಅಥವಾ ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು ಹಾಗೂ ಭಾರೀ ಶ್ರಮದಾಯಕವಾಗಿತ್ತು. ಇಂದು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಂಚರಿಸ ಬಹುದಾದರೆ ಅದಕ್ಕೆ ಕಾರಣ ವಿಜ್ಞಾನಿಗಳು ರೂಪಿಸಿದ ಆಧುನಿಕ ಮೋಟಾರು ವಾಹನಗಳು ಹಾಗೂ ತಂತ್ರಜ್ಞಾನಗಳು. ಈ ಯಾವ ತಂತ್ರಜ್ಞಾನವನ್ನೂ ರೂಪಿಸಿದವರು ನಮ್ಮ ದೇಶದವರಲ್ಲ. ನಮ್ಮ ದೇಶದಲ್ಲಿ ಏನಿದ್ದರೂ ಅದು ಪರದೇಶದಿಂದ ಆಮದು ಮಾಡಿಕೊಂಡ ತಂತ್ರಜ್ಞಾನ. ಇದಕ್ಕೆ ಕಾರಣ ಹೊಸ ತೆರನಾಗಿ ಯೋಚಿಸಲು ಅವಕಾಶ ಕೊಡದ ನಮ್ಮ ಬಾಗಿಲು ಮುಚ್ಚಿದ ಮಾನಸಿಕತೆ. ನಾವು ಎಲ್ಲವೂ ಶಾಸ್ತ್ರಗಳಲ್ಲಿ ಹೇಳಿದೆ ಎಂದು ಹೊಸದನ್ನು ಚಿಂತಿಸುವುದನ್ನೇ ಬಿಟ್ಟಿದ್ದೇವೆ. ನಮ್ಮ ಮಾನಸಿಕತೆ ಇನ್ನೂ ಹಲವು ಶತಮಾನಗಳ ಹಿಂದೆ ಇದೆ. ಇದರ ಪರಿಣಾಮವೇ ಇಂದು ನಾವು ಟಿವಿ ವಾಹಿನಿಗಳಲ್ಲಿ ನೋಡುತ್ತಿರುವ ಅವೈಜ್ಞಾನಿಕ ಚಿಂತನೆಗಳ ಮಹಾಪೂರ. ಇಂದು ಒಂದು ನಿಮಿಷದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜನರನ್ನು ಸಂಪರ್ಕಿಸಲು ಸಾಧ್ಯ. ಅದಕ್ಕೆ ಕಾರಣವಾಗಿರುವುದು ಕೂಡ ವಿಜ್ಞಾನವೇ. ಯಾವುದೇ ಹಳ್ಳಿ ಮೂಲೆಯಲ್ಲಿದ್ದರೂ ಇಂದು ಸಾಮಾನ್ಯ ಮನುಷ್ಯನೂ ಡಿ.ಟಿ. ಹೆಚ್ ತಂತ್ರಜ್ಞಾನದ ಮೂಲಕ ಹತ್ತಾರು ಟಿವಿ ವಾಹಿನಿಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿರುವುದು ವಿಜ್ಞಾನದ ಕೊಡುಗೆಯಿಂದಲೇ. ಆದರೆ ಆ ತಂತ್ರಜ್ಞಾನ ಮಾತ್ರ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಳಕೆಯಾಗುತ್ತಿಲ್ಲ. ಇದು ಎಂಥಾ ವಿಪರ್ಯಾಸ! ನಮ್ಮ ಮನೋಭಾವ ಜಡ್ಡುಗಟ್ಟಿದೆ. ಹೀಗಾಗಿ ನಮ್ಮ ದೇಶ ಪ್ರಗತಿಶೀಲ ಚಿಂತನೆಯಲ್ಲಿ ಬಹಳ ಹಿಂದುಳಿದಿದೆ. ನಮ್ಮ ಜನ ಇನ್ನೂ ಆದಿವಾಸಿ ಮನೋಭಾವದಿಂದ ಹೊರಬಂದಿಲ್ಲ ಎಂಬುದು ನಮ್ಮ ಟಿವಿ ವಾಹಿನಿಗಳನ್ನು ಬೆಳಗ್ಗೆ 6 ರಿಂದ 10 ಘಂಟೆವರೆಗೆ ನೋಡಿದರೆ ಅರ್ಥವಾಗುತ್ತದೆ.

ಇಂದು ವಿಜ್ಞಾನದ ಬೆಳವಣಿಗೆಯಿಂದಾಗಿ ಆಹಾರ ಭದ್ರತೆ ಬಂದಿದೆ. ಬರಗಾಲ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಂದ ಜನ ಆಹಾರ ಇಲ್ಲದೆ ಬಳಲುವ ಪರಿಸ್ಥಿತಿ ಸಂಪೂರ್ಣ ಮಾಯವಾಗಿದೆ. ಹಲವಾರು ಯಂತ್ರಗಳು ಬಂದಿರುವುದರಿಂದಾಗಿ ಮಾನವನ ದೈಹಿಕ ಶ್ರಮ ಎಷ್ಟೋ ಕಡಿಮೆಯಾಗಿದೆ. ಇದನ್ನೆಲ್ಲಾ ಸಾಧ್ಯವಾಗಿಸಿದ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರಬೇಕು . ಆದರೆ ವಾಸ್ತವವಾಗಿ ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರುವುದು ಕಂಡು ಬರುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲೂ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಮನ್ನಣೆ ಅಷ್ಟಕ್ಕಷ್ಟೇ. ವೈಜ್ಞಾನಿಕ ಮನೋಭಾವವಂತೂ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ.

ನಮ್ಮ ದೇಶದಲ್ಲಿ ಹೊಸ ಚಿಂತನೆಗಳಿಗೆ ಬರ ಇದೆ. ಹೀಗಾಗಿಯೇ ದೇಶದ ರಾಜಕೀಯ ರಂಗ ಮರಗಟ್ಟಿದೆ. ದೇಶದ ಶಾಸಕಾಂಗ ವ್ಯವಸ್ಥೆ ಹೊಸ ಜನೋಪಯೋಗಿ ಕಾನೂನುಗಳನ್ನು ರೂಪಿಸಲು ಬಹುತೇಕ ವಿಫಲವಾಗಿದೆ. ಕಾರ್ಯಾಂಗ ಜಡ್ಡುಗಟ್ಟಿದೆ. ನ್ಯಾಯಾಂಗವೂ ಭಾರೀ ವಿಳಂಬ ಗತಿಯಲ್ಲಿ ತೆವಳುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿ ಸುಧಾರಣೆಗಳನ್ನು ತರಬೇಕೆಂಬ ಚಿಂತನೆಯೇ ಇಲ್ಲದಿರುವುದು. ಕಾಲ ಕಾಲಕ್ಕೆ ದೇಶದ ಕಾನೂನುಗಳಲ್ಲಿ ಜನೋಪಯೋಗಿ ಸುಧಾರಣೆ ಮಾಡದೇ ಹೋದರೆ ಪ್ರಜಾಪ್ರಭುತ್ವ ಜಡ್ಡುಗಟ್ಟುತ್ತದೆ. ಇದನ್ನೆಲ್ಲಾ ಮಾಡಬೇಕಾದವರು ಯಾರು?  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಮಾಡುವ ಸಾಮರ್ಥ್ಯ ಇರುವುದು ಶಾಸಕಾಂಗಕ್ಕೆ. ಆದರೆ ನಮ್ಮ ಶಾಸಕಾಂಗಕ್ಕೆ ಆಯ್ಕೆಯಾಗುವವರಲ್ಲಿ ವೈಜ್ಞಾನಿಕ ಮನೋಭಾವ ಇಲ್ಲವೇ ಇಲ್ಲವೆಂದರೂ ಸರಿ. ಹೀಗಾಗಿ ಎಲ್ಲೆಡೆಯೂ ಹೊಸ ಚಿಂತನೆಗಳ ಬರ ಇದೆ.

ದೇಶದ ಮಾಧ್ಯಮ ರಂಗವನ್ನು ನೋಡಿದರೆ ಇದೇ ಸ್ಥಿತಿ ಇದೆ. ಇಲ್ಲಿಯೂ ಮೂಢ ನಂಬಿಕೆಗಳ ಸವಾರಿ ಅವ್ಯಾಹತವಾಗಿ ನಡೆಯುತ್ತಿದೆ. ಮಾಧ್ಯಮಗಳನ್ನು ಮಾರುಕಟ್ಟೆ ಶಕ್ತಿಗಳು ನಿಯಂತ್ರಿಸುತ್ತಿರುವುದರಿಂದ ಇಲ್ಲಿ ಯಾವುದೇ ಹೊಸ ಚಿಂತನೆಗಳನ್ನು ನಿರೀಕ್ಷಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ಏನಾದರೂ ಬದಲಾವಣೆ, ಹೊಸತನ ತರುವ ಸಾಮರ್ಥ್ಯ ಇರುವುದು ಬಂಡವಾಳಗಾರರಿಗೆ ಮಾತ್ರ. ಬಂಡವಾಳಗಾರರಿಗೆ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂಬ ತುಡಿತ ಇದ್ದರೆ ಇಂದೂ ಕೂಡ ಮಾರುಕಟ್ಟೆ ಶಕ್ತಿಗಳನ್ನೂ ಮೀರಿ ಹೊಸ ಚಿಂತನೆಗಳಿಗೆ, ವೈಜ್ಞಾನಿಕ ಮನೋಭಾವಕ್ಕೆ ತಮ್ಮ ಮಾಧ್ಯಮಗಳಲ್ಲಿ ಒತ್ತು ಕೊಡಲು ಸಾಧ್ಯವಿದೆ. ತಮ್ಮ ಬೇರೆ ಉದ್ಯಮಗಳಲ್ಲಿ ಬರುವ ಅಪಾರ ಲಾಭದ ಒಂದಂಶವನ್ನು ಬಳಸಿ ಮಾಧ್ಯಮಗಳನ್ನು ನಡೆಸಲು ಸಾಧ್ಯವಿದೆ.

ಮಾಧ್ಯಮಗಳನ್ನು ನಡೆಸಲು ಜಾಹೀರಾತುಗಳನ್ನೇ, ಮಾರುಕಟ್ಟೆ ಶಕ್ತಿಗಳನ್ನೇ ಅವಲಂಬಿಸ ಬೇಕಾದ ಅಗತ್ಯವಿಲ್ಲ. ನಮ್ಮ ಭಾರೀ ಬಂಡವಾಳಗಾರರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ದೇಶಭಕ್ತಿಯ ಕೊರತೆ ಇರುವುದರಿಂದಾಗಿ ಇಂಥ ಒಂದು ಚಿಂತನೆಯೇ ಅವರಲ್ಲಿ ಕಂಡುಬರುತ್ತಿಲ್ಲ. ನಮ್ಮ ಬಹುತೇಕ ಬಂಡವಾಳಗಾರರೂ ಕಂದಾಚಾರ, ಮೌಢ್ಯ, ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದಾರೆ. ಇಲ್ಲದೆ ಹೋಗಿದ್ದರೆ, ಕೆಲವೇ ಕೆಲವು ಬಂಡವಾಳಗಾರರಾದರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿದ್ದರೆ ಇಂದು ದೇಶದ ಸ್ಥಿತಿಯನ್ನೇ ಗಮನಾರ್ಹವಾಗಿ ಬದಲಾಯಿಸಲು ಸಾಧ್ಯವಾಗುತ್ತಿತ್ತು. ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಲು ಇಂದು ಸಾಧ್ಯವಿರುವುದು ಟಿವಿ ಮಾಧ್ಯಮಕ್ಕೆ. ಈ ಮಾಧ್ಯಮವನ್ನು ಬಳಸಿಕೊಂಡೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನಪರವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಮಾಡಬೇಕಾಗಿರುವುದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ. ಈ ಕೆಲಸ ವೈಯಕ್ತಿಕವಾಗಿ ಇಂದು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರ ಸಂಘಟನೆ ಮಾಡಿಕೊಂಡು ಇಡೀ
ದೇಶದಲ್ಲಿ ಜಾಗೃತಿ ಮಾಡಬೇಕಾದರೆ ಜೀವವನ್ನೇ ತೇಯಬೇಕಾದೀತು. ತಮ್ಮ ಕುಟುಂಬ, ವೃತ್ತಿ ಬಿಟ್ಟು ಅದಕ್ಕೆ ಯಾರೂ ಸಿದ್ಧರಿರುವುದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇದೇ ಕೆಲಸವನ್ನು ಟಿವಿ ಮಾಧ್ಯಮವು ಸುಲಭವಾಗಿ, ಏಕಕಾಲದಲ್ಲಿ ಮಾಡಲು ಸಾಧ್ಯವಿದೆ. ವೈಜ್ಞಾನಿಕ ಮನೋಭಾವ ಇರುವ ಕೆಲವು ಜನ ಬಂಡವಾಳಗಾರರು ತಮ್ಮ ಇತರ ಉದ್ಯಮಗಳ ಭಾರೀ ಲಾಭಾಂಶದ ಒಂದು ಅಂಶವನ್ನು ಜನಪರ, ದೇಶಪರ ಟಿವಿ ಮಾಧ್ಯಮವನ್ನು ಕಟ್ಟಲು ಬಳಸಿದರೆ ದೇಶದಲ್ಲಿ ಭಾರೀ ಬದಲಾವಣೆಯನ್ನೇ ತರಲು ಸಾಧ್ಯವಿದೆ.

ಇಂದು ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳಲ್ಲಿ ಮಹತ್ತರ ಬದಲಾವಣೆ ಆಗಬೇಕಾದ ಅಗತ್ಯ ಇದೆ. ಶಾಸಕಾಂಗದಲ್ಲಿ ಮಹತ್ತರ ಬದಲಾವಣೆ ತರಬೇಕಾದರೆ ಇಂದು ದೇಶಭಕ್ತರ ಹೊಸ ರಾಷ್ಟ್ರೀಯ ಪಕ್ಷವನ್ನು ಕಟ್ಟಬೇಕಾದ ಅಗತ್ಯ ಇದೆ. ಆ ಪಕ್ಷವು ಚುನಾವಣೆಗಳಲ್ಲಿ ನಿಂತು ಗೆದ್ದು ಸರ್ಕಾರ ರೂಪಿಸಿ ಜನಪರವಾದ ಕಾನೂನುಗಳನ್ನು ರೂಪಿಸುವ ಮೂಲಕ ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ತನ್ಮೂಲಕ ಇಡೀ ರಾಷ್ಟ್ರದ ಸ್ಥಿತಿಯನ್ನು ಬದಲಾಯಿಸಲು ಪ್ರಜಾಸತ್ತಾತ್ಮಕವಾಗಿಯೇ ಸಾಧ್ಯವಿದೆ. ಹೊಸ ಪಕ್ಷವನ್ನು ರೂಪಿಸುವಾಗ ಅದರಲ್ಲಿ ಅತ್ಯಂತ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಉದಾಹರಣೆಗೆ ಪಕ್ಷದ ಅಧ್ಯಕ್ಷ ಸ್ಥಾನ ಚುನಾವಣೆಗಳ ಮೂಲಕವೇ ಅಯ್ಕೆಯಾಗಬೇಕು, ಪಕ್ಷದಲ್ಲಿ ವಂಶವಾಹಿ ಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತೆ ನಿಯಮ ರೂಪಿಸುವುದು, ಚುನಾವಣೆಗಳಲ್ಲಿ ನಿಲ್ಲುವವರಿಗೆ ನಿರ್ದಿಷ್ಟ ಅರ್ಹತೆಯನ್ನು ನಿಗದಿ ಪಡಿಸುವುದು; ಭ್ರಷ್ಟರು, ಆಪಾದಿತರು, ಅಪರಾಧಿಗಳು ಚುನಾವಣೆಗಳಿಗೆ ಸ್ಪರ್ಧಿಸದಂತೆ ನಿಯಮ ರೂಪಿಸುವುದು; ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಇತರ ಮಂತ್ರಿಗಳ ಸ್ಥಾನಗಳಿಗೆ ಅರ್ಹತೆಯೊಂದನ್ನೇ ಆಧಾರವಾನ್ನಗಿಸುವುದು; ಪಕ್ಷದ ನೀತಿ ನಿಯಮ ಉಲ್ಲಂಘಿಸಿದವರನ್ನು ಹೊರಹಾಕಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು, ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶವಾಗದಂತೆ ನಿಯಮ ರೂಪಿಸುವುದು ಮೊದಲಾದವುಗಳನ್ನು ಮಾಡಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಜನವಿರೋಧಿಯಾಗುವುದನ್ನು ತಪ್ಪಿಸಬಹುದು. ಇದನ್ನು ಈಗ ಇರುವ ರಾಜಕೀಯ ಪಕ್ಷಗಳೂ ಮಾಡಬಹುದು.

ಒಂದು ಸ್ಪಷ್ಟವಾದ ಪರ್ಯಾಯ ಚಿಂತನೆಗಳ, ಜನಪರ ಸೈದ್ದಾಂತಿಕ ಧೋರಣೆಯ ರಾಷ್ಟ್ರೀಯ ಪಕ್ಷವು ರೂಪುಗೊಂಡರೆ ಅದರ ಪರವಾಗಿ ನಮ್ಮ ಟಿವಿ ವಾಹಿನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅದು ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡುವುದು ಅಸಾಧ್ಯವೇನೂ ಅಲ್ಲ. ದೇಶದಾದ್ಯಂತ ಈಗ ಇರುವ ರಾಜಕೀಯ ಪಕ್ಷಗಳಿಂದ ರೋಸಿ ಹೋಗಿರುವ ಜನತೆ ಹೊಸತನಕ್ಕಾಗಿ ಹಂಬಲಿಸುತ್ತಿರುವುದು ಸಹಜವೇ ಆಗಿದೆ. ಜನ ಸ್ವಚ್ಛ, ಭ್ರಷ್ಟಾಚಾರ ರಹಿತ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಅಣ್ಣಾ ಹಜಾರೆಯವರ ಹೋರಾಟದ ಸಮಯದಲ್ಲಿ ಕಂಡು ಬಂದಿದೆ. ಆದರೆ ಆ ಹೋರಾಟ ರಾಜಕೀಯಕರಣಗೊಂಡು ದುರ್ಬಲವಾಗಿದೆ. ಅಣ್ಣಾ ಹಜಾರೆ ಹಾಗೂ ಅವರ ತಂಡದಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇರುವುದೂ ಕಂಡು ಬಂದಿದೆ. ಇದೇ ತಂಡದಲ್ಲಿ ಸ್ಪಷ್ಟವಾದ ವೈಜ್ಞಾನಿಕ ಮನೋಭಾವ ಇದ್ದಿದ್ದರೆ ಇದು ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತಿತ್ತು. ಈಗ ಹಜಾರೆಯವರ ಹೋರಾಟವನ್ನು ನೋಡುವುದಾದರೆ ಅದು ಒಂದು ರಾಜಕೀಯ ಪಕ್ಷದ ಪರವಾಗಿ ದೇಶದಲ್ಲಿ ಜನಾಭಿಪ್ರಾಯ ಹುಟ್ಟು ಹಾಕಲು ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಅದು ದುರ್ಬಲವಾಗಿದೆ. ಈಗ ಹಜಾರೆಯವರು ಯಾವ ಪಕ್ಷದ ಪರವಾಗಿ ಹವಾ ಉಂಟು ಮಾಡಲು ಬಯಸುತ್ತಿದ್ದಾರೋ ಆ ಪಕ್ಷವು ಉಳಿದ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಹಾಗೂ ಆ ಪಕ್ಷದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸ್ಥಾನವೂ ಇಲ್ಲದಿರುವುದೂ ಕಂಡು ಬರುತ್ತದೆ.

ಎಕೂಷೆ ಫೆಬ್ರವರಿ : ಅಂತರರಾಷ್ಟ್ರೀಯ ಮಾತೃಭಾಷಾ ದಿನ

-ಭಾರತೀ ದೇವಿ. ಪಿ

ಬಹುಸಂಖ್ಯಾತರ ಭಾಷೆಯನ್ನು ಮಾನ್ಯಮಾಡಬೇಕೆಂದು ಹುಟ್ಟಿಕೊಂಡ ಚಳುವಳಿಯೊಂದು ಸ್ವಾಯತ್ತದೇಶಕ್ಕಾಗಿ ನಡೆದ ದೊಡ್ಡ ಹೋರಾಟ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರವಹಿಸಿದ್ದನ್ನು ನೆನಪಿಸಿಕೊಡುವ ದಿನ ಫೆಬ್ರವರಿ 21. ಪ್ರತಿವರ್ಷ ಫೆಬ್ರವರಿ 21ನೇ ತಾರೀಕನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸಾಂಸ್ಕೃತಿಕ ಮತ್ತು ಭಾಷಿಕ ಬಹುತ್ವವನ್ನು ಮಾನ್ಯಮಾಡುವ ದಿಸೆಯಲ್ಲಿ ವಿಶ್ವಸಂಸ್ಥೆ 1999ರಲ್ಲಿ ಈ ದಿನವನ್ನು ಮಾತೃಭಾಷಾ ದಿನವನ್ನಾಗಿ ಘೋಷಿಸಿತು.

ಈ ಫೆಬ್ರವರಿ 21ರ ವಿಶೇಷತೆ ಏನು ಎಂಬುದನ್ನು ತಿಳಿಯಲು ಇತಿಹಾಸದತ್ತ ಕಣ್ಣು ಹಾಯಿಸಬೇಕಾಗುತ್ತದೆ. 1947ರಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿದ್ದ ಪ್ರದೇಶವನ್ನು ಬಿಟ್ಟುಹೋಗುವ ಮೊದಲು ಭಾರತ ಮತ್ತು ಪಾಕಿಸ್ತಾನ ಎಂಬ ದೇಶಗಳು ರೂಪುಗೊಂಡದ್ದನ್ನು ನಾವೆಲ್ಲರೂ ಬಲ್ಲೆವು. ಹೀಗಾದಾಗ ಪಾಕಿಸ್ತಾನ ಎರಡು ಭಾಗಗಳಾಗಿ ಈಗಿರುವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನವಾಗಿಯೂ, ಇಂದಿನ ಬಾಂಗ್ಲಾದೇಶ ಪೂರ್ವಪಾಕಿಸ್ತಾನವಾಗಿಯೂ ಭಾರತದ ಪೂರ್ವ ಮತ್ತು ಪಶ್ಚಿಮ ಗಡಿಗಳಾಚೆ ಹರಡಿಹೋಗಿದ್ದವು. ಆಡಳಿತ, ಕಾನೂನು, ನೀತಿನಿಯಮಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸುವಲ್ಲಿ ಹೆಚ್ಚಿನ ಹಿಡಿತವಿದ್ದದ್ದು ಪಶ್ಚಿಮ ಪಾಕಿಸ್ತಾನದ ನೇತಾರರ ಕೈಯಲ್ಲಿ. ಹೀಗಾಗಿ ಪೂರ್ವಪಾಕಿಸ್ತಾನದ ಜನರು ಎಲ್ಲ ರಂಗದಲ್ಲಿಯೂ ಅವಗಣನೆಗೆ ಒಳಗಾಗಿದ್ದರು. ಜೊತೆಗೆ ಪೂರ್ವಪಾಕಿಸ್ತಾನದ ಬಹುಸಂಖ್ಯಾತರ ಭಾಷೆ ಬಾಂಗ್ಲಾ (ಬಂಗಾಳಿ) ಇದ್ದಾಗಲೂ ಅದನ್ನು ಕಡೆಗಣಿಸಿ ಜಿನ್ನಾ ಮೊದಲಾಗಿ ನೇತಾರರು ಉರ್ದುವನ್ನು ರಾಷ್ಟ್ರಭಾಷೆಯಾಗಿ ಘೋಷಿಸಿದರು. ಇದು ಪೂರ್ವ ಪಾಕಿಸ್ತಾನದ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಇದು ತಮ್ಮ ಹಕ್ಕನ್ನು, ಹಿತಾಸಕ್ತಿಯನ್ನು ಅವಗಣಿಸುವ ಬಗೆಯಾಗಿ ಅವರಿಗೆ ಕಂಡಿತು. ಇದೇ ಸಂದರ್ಭದಲ್ಲಿ ಭಾಷೆಯ ಕುರಿತಾದ ತಮ್ಮ ಹಕ್ಕು ಸ್ಥಾಪಿಸುವ ಉದ್ದೇಶದಿಂದ ‘ಆಲ್ ಪಾರ್ಟಿ ಸ್ಟೇಟ್ ಲಾಂಗ್ವೇಜ್ ಕಮಿಟಿ’ ರೂಪಿತವಾಯಿತು.

ಈ ವಿರುದ್ಧ 1952ರ ಫೆಬ್ರವರಿ 20-21ರಂದು ದೇಶವ್ಯಾಪಿ ಚಳುವಳಿ ಮಾಡುವುದಾಗಿ ಈ ಸಮಿತಿ ನಿರ್ಧರಿಸಿತು. 21ರಂದು ಬಜೆಟ್ ಮಂಡನೆಯಿದ್ದ ಕಾರಣ ಈ ದಿನಗಳನ್ನು ಅವರು ಆರಿಸಿಕೊಂಡರು. ಇದರಲ್ಲಿ ವಿದ್ಯಾರ್ಥಿಗಳು, ನಾಯಕರು, ಸಾಹಿತಿಗಳು ಎಲ್ಲರೂ ಸೇರಿದ್ದರು. ಆದರೆ ಸರ್ಕಾರ ಇದ್ದಕ್ಕಿದ್ದಂತೆ ಚಳುವಳಿ ನಡೆಸದಂತೆ 144ನೇ ಸೆಕ್ಷನ್ ಹೇರಿತು. ಈ ಸಂದರ್ಭದಲ್ಲಿ ಮುಂದಿನ ಕ್ರಮ ನಿರ್ಧರಿಸಲು 20ರ ಸಂಜೆ ಮುಂಚೂಣಿಯಲ್ಲಿರುವವರು ಸಭೆ ಸೇರಿದರು. ಈ ಹೊತ್ತಿನಲ್ಲಿ ಪ್ರತಿಭಟನೆ ಕೈಬಿಡುವ ತೀರ್ಮಾನಕ್ಕೂ ಕೆಲವು ನಾಯಕರು ಬಂದರು. ಆದರೆ ಈಗಾಗಲೇ ಹುರುಪಿನಿಂದ ಕೆಚ್ಚಿನಿಂದ ಕೂಡಿದ್ದ ಯುವಸಮುದಾಯಕ್ಕೆ ಈ ನಿರ್ಧಾರ ಸಮ್ಮತವಾಗಲಿಲ್ಲ.

ಫೆಬ್ರವರಿ 21ರಂದು (ಬಂಗಾಳಿ ಭಾಷೆಯಲ್ಲಿ ಎಕೂಷೆ ಫೆಬ್ರವರಿ) ವಿದ್ಯಾರ್ಥಿಗಳು ಢಾಕಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಿಳಿದರು. ಬಜೆಟ್ ಮಂಡನೆಗೆಂದು ಬರುತ್ತಿದ್ದ ನಾಯಕರು ಪ್ರವೇಶಿಸದಂತೆ ದ್ವಾರದಲ್ಲಿ ತಡೆ ಒಡ್ಡಿದರು. ಈ ಸಂದರ್ಭದಲ್ಲಿ ಪೊಲೀಸರು ಸರ್ಕಾರದ ಆದೇಶದಂತೆ ಗುಂಡು ಹಾರಿಸತೊಡಗಿದರು. ಈ ಗುಂಡಿನ ದಾಳಿಗೆ ಹಲವಾರು ವಿದ್ಯಾರ್ಥಿಗಳು ಬಲಿಯಾದರು.

ಪ್ರಭುತ್ವದ ಹೇರಿಕೆ, ಕ್ರೌರ್ಯವನ್ನು ನೇರವಾಗಿ ಬಯಲಿಗೆಳೆದ ಈ ಘಟನೆ ಸ್ವಾಯತ್ತ ಬಾಂಗ್ಲಾದೇಶಕ್ಕಾಗಿ ಹೋರಾಟ ನಡೆಸಲು ದೊಡ್ಡ ಪ್ರೇರಣೆಯಾಯಿತು. ಕೊನೆಯಲ್ಲಿ 1971ರಲ್ಲಿ ಸ್ವತಂತ್ರ ಬಾಂಗ್ಲಾದೇಶ ತಲೆಯೆತ್ತಿತು.

ಈ ನೆನಪಿನಲ್ಲಿ ವಿಶ್ವಸಂಸ್ಥೆ ಫೆಬ್ರವರಿ 21ನ್ನು ಬಹುತ್ವವನ್ನು ಒಳಗುಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರೇರೇಪಿಸುವ ದಿನವಾಗಿ ಮಾತೃಭಾಷಾ ದಿನ ಎಂದು ಘೋಷಿಸಿದೆ. ಬಹುಭಾಷಿಕ ಪರಿಸರದಲ್ಲಿ ನೆಲೆಸಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರಂತರ ಕೊಡುಕೊಳೆಯಲ್ಲಿ ನಿರತವಾಗಿರುವ ನಾವು ಬಹುತ್ವವನ್ನು ಮಾನ್ಯಮಾಡುವುದನ್ನು ಅತ್ಯಗತ್ಯವಾಗಿ ಕಲಿಯಲೇಬೇಕಾಗಿದೆ. ಮಾತೃಭಾಷಾ ದಿನ ನಮ್ಮ ಭಾಷೆ ಸಕ್ಕರೆ, ಚಿನ್ನ ಎಂದು ಕೊಂಡಾಡುವ ದಿನವಲ್ಲ ಎಂಬುದು ಈ ದಿನದ ಹಿನ್ನೆಲೆಯನ್ನು ಅರಿತರೆ ಅರ್ಥವಾಗುತ್ತದೆ. ಭಾಷಾ ಹೇರಿಕೆ, ಭಾಷಾ ಮೂಲಭಾತವಾದವನ್ನು ಕಿತ್ತೊಗೆದು ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲ ಭಾಷೆಗಳನ್ನು ಗೌರವಿಸುವ ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುವ ದಿನ ಇದು. ಈ ದಿನಕ್ಕೆ ಸಂಬಂಧಿಸಿದಂತೆ ಈ ವರ್ಷದ ಘೋಷಣಾ ವಾಕ್ಯವೂ ‘ಮಾತೃಭಾಷಾಮಾಧ್ಯಮ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ’ ಎಂದಿರುವುದು ಇಂದಿನ ತುರ್ತನ್ನು ಮತ್ತೆ ಒತ್ತಿಹೇಳುವಂತಿದೆ.

ಮಲೆನಾಡಿನಲ್ಲಿ ರೈತ ಚಳವಳಿ


-ಪ್ರಸಾದ್ ರಕ್ಷಿದಿ   


[ಇದು ಎನ್.ಎಸ್ ಶಂಕರ್ ಅವರ “ದಲಿತ ರೈತ ಚಳವಳಿಗಳು” ಲೇಖನಕ್ಕೆ ಪೂರಕವಾಗಿ ಒಂದಷ್ಟು ಮಾಹಿತಿ. ಪ್ರಸಾದ್ ರಕ್ಷಿದಿಯವರ “ಬೆಳ್ಳೇಕೆರೆ ಹಳ್ಳಿ ಥೇಟರ್” ಪುಸ್ತಕದ ಒಂದು ಭಾಗ.]

ರೈತ ಸಂಘ ಪ್ರಬಲವಾಗಿದ್ದ  ಸಮಯದಲ್ಲಿ ತಮಗೆ ಅನ್ಯಾಯವಾಗಿದೆಯೆಂದು ಯಾರಾದರೂ ಸಂಘಕ್ಕೆ ದೂರು ಕೊಟ್ಟರೆ ಸಂಬಂಧ ಪಟ್ಟವರಿಗೆ ತೀರ್ಮಾನಕ್ಕಾಗಿ ಸಂಘದ ಪಂಚಾಯ್ತಿಗೆ ಬರಬೇಕೆಂದು ನೋಟಿಸ್ ಕಳುಹಿಸುತ್ತಿದ್ದೆವು. ಸಂಘ ಬಲವಾಗಿದ್ದಲ್ಲಿ ನೋಟಿಸ್ ಪಡೆದವರು ತಕರಾರಿಲ್ಲದೆ ಪಂಚಾಯ್ತಿಗೆ ಬರುತ್ತಿದ್ದರು. ಸಂಘ ಬಲವಾಗಿಲ್ಲದ ಕಡೆಗಳಲ್ಲಿ ಕೆಲವರು ಈ ನೋಟಿಸುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಅಂಥ ಕಡೆಗಳಲ್ಲಿ ಸಾಕಷ್ಟು ಘರ್ಷಣೆಗಳೂ ಆದವು.

ಸ್ವಂತಕ್ಕೆ ಮರ ಕೊಯ್ದುಕೊಳ್ಳಲು ಯಾರೂ ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆಯುವ ಅಗತ್ಯವಿಲ್ಲವೆಂದೂ ರೈತರು ಸ್ವಂತ ಉಪಯೋಗಕ್ಕೆ ಯಾರ ಅನುಮತಿಗೂ ಕಾಯದೆ ತಮ್ಮ ಜಮೀನಿನಲ್ಲಿ ಬೆಳೆದ ಮರವನ್ನು ಕೊಯ್ದು ಕೊಳ್ಳಬಹುದೆಂದೂ ರೈತಸಂಘ ಪ್ರಚಾರ ಮಾಡಿತ್ತು. ರೈತ ಸಂಘ ಬಲವಾಗಿದ್ದಲ್ಲಿ ನಮಗೇಕೆ ಕಷ್ಟ ಎಂದು ಅರಣ್ಯ ಇಲಾಖೆಯವರು ಆ ಕಡೆ ತಲೆ ಹಾಕಲೂ ಇಲ್ಲ ಆದರೆ ಇನ್ನು ಕೆಲವರು ಅತೀ ಬುದ್ಧಿವಂತರು ರೈತ ಸಂಘಕ್ಕೂ ಅರ್ಜಿ ಸಲ್ಲಿಸಿದರು. ಗುಟ್ಟಾಗಿ ಅರಣ್ಯ ಇಲಾಖೆಯವರಿಗೂ ಕಾಣಿಕೆ ಒಪ್ಪಿಸಿದರು. ಹೀಗೆ ಎರಡೂ ಕಡೆ ಒಳ್ಳೆಯವರಾದರು.!  ಅರಣ್ಯ ಇಲಾಖೆಯವರು ರೈತ ಸಂಘದಿಂದಾಗಿ ದೇಶದ ಅರಣ್ಯವೆಲ್ಲಾ ನಾಶವಾಯ್ತೆಂದೂ, ರೈತ ಸಂಘದವರು ನಮ್ಮನ್ನು ಹಳ್ಳಿಗಳಿಗೆ ಕಾಲಿಡಲೂ ಬಿಡುತ್ತಿಲ್ಲವೆಂದೂ ಪ್ರಚಾರ ಮಾಡುತ್ತಾ ಒಳಗಿಂದೊಳಗೇ ಹಣ ಪಡೆಯುತ್ತಾ ಕುಳಿತರು. ಇದೇ ಸಂದರ್ಭವೆಂದು ಕಳ್ಳ ನಾಟಾ ಮಾಡುವವರು ಸರ್ಕಾರಿ ಜಾಗದಲ್ಲಿ ಸಾಕಷ್ಟು ಮರಗಳನ್ನು ಬೋಳಿಸಿದರು. ಒಟ್ಟು ಎಲ್ಲಾ ಗೊಂದಲವಾಯ್ತು.

ನಮ್ಮ ಬೆಳ್ಳೇಕೆರೆಯ ಸುತ್ತಮುತ್ತ ಅನೇಕ ತೋಟಗಳ ಕಾರ್ಮಿಕರಿಂದ ಮಾಲೀಕರ ವಿರುದ್ಧ ದೂರುಗಳು ಬರತೊಡಗಿದವು. ಹೆಚ್ಚಿನ ದೂರುಗಳೆಲ್ಲ ಸಂಬಳದ ತಕರಾರುಗಳು ಇಲ್ಲವೇ ಮಾಲೀಕರ ದಬ್ಬಾಳಿಕೆಯ ಬಗ್ಗೆ ಇರುತ್ತಿದ್ದವು. ದೂರಿನಲ್ಲಿ ನಿಜಾಂಶ ಕಂಡುಬಂದರೆ  ಅದನ್ನು ಕಾರ್ಮಿಕ ಕಾನೂನಿಗೆ ಅನುಗುಣವಾಗಿಯೇ ತೀರ್ಮಾನ ಮಾಡುತ್ತಿದ್ದೆವು. ಈ ಕಾರ್ಮಿಕ ಕಾನೂನುಗಳು ಕೂಲಿ ಕೆಲಸಗಾರರಿಗೆ ಪೂರ್ಣವಾಗಿ ನ್ಯಾಯವನ್ನು ಒದಗಿಸಲಾರವೆಂಬ ಅರಿವು ನಮಗಿದ್ದರೂ, ನಾವು ಕಾನೂನಿನ ಮಿತಿಯನ್ನು ಮೀರುವಂತಿರಲಿಲ್ಲ. ಕೆಲವು ತೋಟ, ಮಾಲೀಕರು- ಕಾರ್ಮಿಕ ಕಾನೂನನ್ನೇ ಒಪ್ಪಲು ತಯಾರಿರಲ್ಲದಂತಹ ಪರಿಸ್ಥಿತಿಯಲ್ಲಿ ಅವರನ್ನು ನಾವು ಕಾನೂನಿನ ಚೌಕಟ್ಟಿನೊಳಗೆ ತರಲು ಕೂಡಾ ರೈತ ಸಂಘಟನೆಯ ಬಲ ಬೇಕಾಗುತ್ತಿತ್ತು. ಆದರೆ ರೈತ ಸಂಘದಲ್ಲಿದ್ದ ಅನೇಕರಿಗೆ ಈ ಕಾನೂನುಗಳ ಅರಿವಿರಲಿಲ್ಲವಷ್ಟೇ ಅಲ್ಲ, ಈ ಕಾನೂನುಗಳೇ ರೈತ ವಿರೋಧಿಯಾದವು ಎಂದು ನಂಬಿದವರಿದ್ದರು!  ಆದ್ದರಿಂದ ನಾವು ಈ ತೋಟಗಳ ಮಾಲೀಕರು ನಮ್ಮ ಮೇಲೆ ಪೋಲೀಸು ಕಂಪ್ಲೇಂಟು ಕೊಡದಂತೆ ನಮ್ಮ ಮಿತಿಯೊಳಗೇ ಏನಾದರೂ ಮಾಡಬೇಕಿತ್ತು. ಇಲ್ಲವೇ ಬಲವಾದ ಸಂಘಟನೆಯ ಮೂಲಕ ದೀರ್ಘ ಕಾಲದ ಹೋರಾಟಕ್ಕೆ ಅಣಿಯಾಗಬೇಕಿತ್ತು. ಈ ಎಲ್ಲಾ ಮಿತಿಗಳೊಳಗೇ ನಾವು ಹಲವು ಕಡೆಗಳಲ್ಲಿ ತೀರ್ಮಾನಗಳನ್ನು ಮಾಡಿದೆವು.

ಇವುಗಳಲ್ಲೆಲ್ಲಾ ಸಾಮಾನ್ಯವಾಗಿ ನಾಗರಾಜ್- ಮುರಳೀಧರ್, ಅಶೋಕ, ಮುಳ್ಳಯ್ಯ ನಾವುಗಳೆಲ್ಲಾ ಇರುತ್ತಿದ್ದೆವು. ಇದರಿಂದಾಗಿ ನಾವು ಕೆಲವು ತೋಟಗಳ ಮಾಲೀಕರ ವಿರೋಧ ಕಟ್ಟಿಕೊಳ್ಳ ಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಒಂದು ತೋಟದಲ್ಲಿ ರೈಟರ್ ಒಬ್ಬ ಟಿಂಬರ್ ವ್ಯಾಪಾರಿಯೊಡನೆ ಸೇರಿ ತನ್ನ ಮಾಲೀಕರನ್ನೇ ಹೆದರಿಸಿ ಸಾಕಷ್ಟು ಮರಗಳನ್ನು ಕದ್ದು ಮಾರುವ ಹುನ್ನಾರ ಮಾಡಿದ್ದ. ಆ ರೈಟರ್‌ನ ಮಗನೊಬ್ಬ ಎಲ್ಲಾ ದುಶ್ಚಟಗಳನ್ನು ಬೆಳೆಸಿಕೊಂಡಿದ್ದು ಹಣಕ್ಕಾಗಿ ದಾರಿಯಲ್ಲಿ ನಿಂತು ಅದೇ ತೋಟದ ಕೆಲಸಗಾರರನ್ನು ಬೆದರಿಸಿ ಹಣ ಕೀಳುತ್ತಿದ್ದ. ತೋಟದ ಮಾಲೀಕರು ಪೋಲಿಸ್ ಕಂಪ್ಲೇಂಟ್ ಕೊಡಲು ಹೋದರೆ ಪೋಲೀಸರು ಈಗೆಲ್ಲ ರೈತ ಸಂಘದವರದ್ದೇ ದರ್ಬಾರು ನೀವು ಅವರಿಗೆ ಹೇಳಿ ಎಂದರಂತೆ!  ಈ ತಂದೆ ಮಕ್ಕಳ ಉಪಟಳ ತಾಳಲಾರದೆ ಸೋತು ಮಾಲೀಕರೇ ನಮ್ಮಲ್ಲಿಗೆ ದೂರು ಕೊಡಲು ಬಂದರು. ನಾವೆಲ್ಲ ಹೋಗಿ ವಿಚಾರಿಸಿದಾಗ ಮಾಲೀಕರ ದೂರು ನಿಜವೆಂದು ತಿಳಿಯಿತು. ಅಷ್ಟೆಲ್ಲ ಮಾಡಿಯೂ ಆ ತಂದೆ – ಮಕ್ಕಳು ನಮಗೆ ರೈತ ಸಂಘದವರ ಬೆಂಬಲವಿದೆಯೆಂದೂ ಹೇಳಿಕೊಂಡಿದ್ದರು! ರೈಟರ್ ಮತ್ತು ಅವನ ಮಗನಿಂದ  ಮುಚ್ಚಳಿಕೆ ಬರೆಸಿಕೊಂಡು ಅವರನ್ನೆಲ್ಲಾ ಅಲ್ಲಿಂದ ಓಡಿಸಿದೆವು.

ಗುಂಡೂರಾಯರ ಸರ್ಕಾರವಿದ್ದಾಗ ಬಲಗೊಳ್ಳುತ್ತಾ ಹೋದ ರೈತಸಂಘ, ಗುಂಡೂರಾವ್ ಸರ್ಕಾರವನ್ನು ಅಧಿಕಾರದಿಂದ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಆದರೆ ಹೆಗಡೆ ಸರ್ಕಾರ ಬಂದ ನಂತರ ರೈತ ಸಂಘ ದುರ್ಬಲವಾಗುತ್ತಾ ಹೋಯಿತು. ನಮ್ಮಲ್ಲಿ  ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹೆಚ್ಚಿನವರು ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತ ಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತ ಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿ ಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತ ಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿತ್ತು. ನಮ್ಮಲ್ಲಿನಂತಹ ಕೆಲವು ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತ ಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿ ಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ – ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತ ಸಂಘಕ್ಕೆ ಸಿಗದೇ ಹೋಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತ ಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಸರ್ಕಾರ ಕೂಡಾ ರೈತ ಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತ ಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತ ಸಂಘದಿಂದ  ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಹೆಚ್ಚಿನವರು ಜನತಾದಳಕ್ಕೆ ಹೋದರು. ಈ ಎಲ್ಲಾ ಕಾರಣಗಳಿಂದ ಮಲೆನಾಡಿನ ಕಾಫಿ ವಲಯದಲ್ಲಿ ರೈತ ಸಂಘ ನಾಮಾವಶೇಷವಾಗಿ ಹೋಯಿತು.

ಹೊಸ ಪತ್ರಿಕೆಯ ಸುತ್ತಮುತ್ತ..


– ಪರಶುರಾಮ ಕಲಾಲ್    


ವಿಜಯ ಸಂಕೇಶ್ವರರ ಹೊಸ ಪತ್ರಿಕೆ ರಂಗಕ್ಕಿಳಿಯಲು ದಿನಗಣನೆ ಆರಂಭವಾಗಿವೆ. ಪತ್ರಿಕೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಜಿಲ್ಲಾ ವರದಿಗಾರರು, ಸುದ್ದಿ ಸಂಪಾದಕರು, ಉಪ ಸಂಪಾದಕರು ಎಲ್ಲರೂ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಸುದ್ದಿ ಕಳಿಸುವುದು. ತಿದ್ದುವುದು. ಪೇಜು ಸಿದ್ಧಪಡಿಸುವುದು ಎಲ್ಲಾ ನಡೆಯುತ್ತಿದೆ. ತಾವು ರೂಪಿಸಿದ ಪತ್ರಿಕೆಯನ್ನು ತಾವೇ ನೋಡಿಕೊಂಡು ಡೆಸ್ಕಿನಲ್ಲಿರುವವರು ಸಂತೋಷ ಪಡುತ್ತಿದ್ದಾರೆ.

ಜಿಲ್ಲಾ ವರದಿಗಾರರು, ಹಿರಿಯ ವರದಿಗಾರರು ಯುದ್ಧ ಎದುರಿಸಲು ಸಜ್ಜಾಗಿ ಸೇನಾನಿಗಳಂತೆ ಪೆನ್ನು ಚಾಚಿಯೇ ಕುಳಿತುಕೊಂಡಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಪತ್ರಿಕೆಗಳನ್ನು ಹೇಗೆ ಎದುರಿಸಬೇಕೆಂದು ಯೋಜಿಸಲಾಗಿದೆ. ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ ಬರೆಯುವ ‘ಬೆತ್ತಲೆ ಜಗತ್ತು’ ರೀತಿಯಲ್ಲಿ ಹೊಸ ದಿಗಂತ ಪತ್ರಿಕೆಯಲ್ಲಿ ‘ಮೇರಾ ಭಾರತ್ ಮಹಾನ್’ ಎಂಬ ಅಂಕಣ ಬರೆಯುತ್ತಿದ್ದ ರವೀಂದ್ರ ದೇಶಮುಖ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿರಿಯ ಉಪ ಸಂಪಾದಕ ಸ್ಥಾನ ನೀಡಲಾಗಿದ್ದು, ಪ್ರತಿವಾರ ಅಂಕಣ ಹಾಗೂ ಸಂಪಾದಕೀಯ ಬರೆಯುವ ಕೆಲಸ ಒಪ್ಪಿಸಿದ್ದಾರೆ. ಆರೆಸೆಸ್ಸ್ ಪತ್ರಿಕೆಯಲ್ಲಿ ಬರುವ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿ ‘ಮೇರಾ ಭಾರತ್ ಮಹಾನ್’ ಎಂದು ತಮ್ಮ ಬೈಲೈನ್ ಹಾಕಿಕೊಳ್ಳುತ್ತಿದ್ದರು ರವೀಂದ್ರ ದೇಶಮುಖ್. ಈಗ ಸ್ವತಂತ್ರವಾಗಿ ಮತ್ತೊಂದು ಬೆತ್ತಲೆ ಜಗತ್ತು ಅವರು ಅನಾವರಣ ಮಾಡಬೇಕಿದೆ.

ವಿಜಯ ಕರ್ನಾಟಕ ಮಾತ್ರ ಬರಲಿರುವ ಹೊಸ ಪತ್ರಿಕೆಯನ್ನು ಎದುರಿಸಲು ಸಜ್ಜಾಗಿ, ಕೋಟೆಯನ್ನು ಭದ್ರ ಪಡಿಸಿಕೊಳ್ಳುವ ಕೆಲಸ ನಡೆಸಿದೆ. ಯುವ ಘರ್ಜನೆ ಎನ್ನುವುದು ಅದರ ಅಂತಹ ಒಂದು ಪ್ರಯತ್ನದ ಭಾಗ. ಪ್ರಜಾವಾಣಿಯು ಇಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರೂ ಆಪಾಯ ಎದುರಿಸಲು ಅದು ಪ್ರಯತ್ನ ಮಾಡುತ್ತಿದೆ. ಸಾಪ್ತಾಹಿಕ ಪುರವಣಿ ಜೊತೆ ದೇಶಕಾಲದ ಜೊತೆಗೆ ನೀಡುತ್ತಿದ್ದ ಸಾಹಿತ್ಯ ಪುರವಣಿಯನ್ನು ಈಗ ತಾನೇ ನಿರ್ವಹಿಸುತ್ತಾ ಉಳಿಸಿಕೊಂಡಿದೆ. ಯುವಜನರಿಗಾಗಿ ಕಾಮನ ಬಿಲ್ಲು ಎಂಬ ಸಣ್ಣ ಪುರವಣಿಯನ್ನು ಹೊರ ತರುತ್ತಿದೆ. ಕನ್ನಡ ಪ್ರಭದ ಸ್ಥಿತಿಯಂತೂ ಶೋಚನೀಯವಾಗಿದೆ. ಅದರ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ‘ನೋಡುತ್ತಾ ಇರಿ, ಏನೋ ಮಾಡುತ್ತೇವೆ’ ಅಂತಾ ಎಂದು ಸಂಪಾದಕ ವಿಶ್ವೇಶ್ವರ ಭಟ್ರು, ಹಾವಾಡಿಗರು ತಮ್ಮ ತೆರೆಯದ ಬುಟ್ಟಿ ತೋರಿಸಿ “ಧರ್ಮಸ್ಥಳದಿಂದ ಹಿಡಿದುಕೊಂಡು ಬಂದಿರುವ ಹಾವು ಇದೆ, ತೋರಿಸುತ್ತೇವೆ” ಎಂದು ಆಟದಲ್ಲಿ ಹೇಳುತ್ತಾ ಕೊನೆಗೂ ಹಾವು ತೋರಿಸುವುದಿಲ್ಲ, ಹಾಗೇ ಆಗಿ ಬಿಟ್ಟಿದೆ ಅವರ ಹೇಳಿಕೆ.

ಉದಯವಾಣಿ, ಸಂಯುಕ್ತ ಕರ್ನಾಟಕ  ತಮ್ಮ ಲೇಔಟ್ ಚೇಂಜ್ ಮಾಡಿಕೊಂಡಿದ್ದು ಬಿಟ್ಟರೆ ಉಳಿದಂತೆ ಆದರ ಪ್ರಯತ್ನ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಈಗ್ಗೆ 12 ವರ್ಷದ ಹಿಂದೆ ವಿಜಯ ಕರ್ನಾಟಕದಲ್ಲಿ ಹುಟ್ಟಿದಾಗ ಏನಿತ್ತು ಪರಿಸ್ಥಿತಿ. ಇವತ್ತಿನ ಪರಿಸ್ಥಿತಿ ಏನಿದೆ ಎನ್ನುವುದು ಪರಿಶೀಲಿಸುವುದು ಇಲ್ಲಿ ಬಹಳ ಮುಖ್ಯ ಸಂಗತಿಯಾಗಿದೆ. ಪ್ರಜಾವಾಣಿ ಕನ್ನಡದ ಅತ್ಯಂತ ಜನಪ್ರಿಯ ದಿನ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿ, ನಂದಿಯಂತೆ ವಿರಾಜಮಾನವಾಗಿತ್ತು. ಕನ್ನಡ ಪ್ರಭ ಎರಡನೇಯ ಸ್ಥಾನದಲ್ಲಿತ್ತು. ಉದಯವಾಣಿ, ಸಂಯುಕ್ತ ಕರ್ನಾಟಕ ಬೆಂಗಳೂರಿನಲ್ಲಿ ಕಚೇರಿ, ಎಡಿಷನ್ ಹೊಂದಿದ್ದರೂ ಅವು ಪ್ರಾದೇಶಿಕ ಪತ್ರಿಕೆಗಳಾಗಿಯೇ ಇದ್ದವು.

ಪ್ರಜಾವಾಣಿಯ ಏಜೆನ್ಸಿ ತೆಗೆದುಕೊಳ್ಳುವುದು ಎಂದರೆ ಪೆಟ್ರೂಲ್ ಬಂಕ್ ಪಡೆಯುವಂತೆ ಕಷ್ಟ ಪಡಬೇಕಿತ್ತು. ಅಷ್ಟು ಡಿಮ್ಯಾಂಡ್ ಆಗ. ಕನ್ನಡ ಪ್ರಭದ ಏಜೆಂಟ್ರು ಹತ್ತು ಪತ್ರಿಕೆ ಹೆಚ್ಚು ಮಾಡಲು ಹರ ಸಾಹಸ ಮಾಡಬೇಕಿತ್ತು. ಆಗ ಕನ್ನಡ ಪ್ರಭದ ಪ್ರಸರಣ ವಿಭಾಗದವರು ಪತ್ರಿಕೆ ಸಂಖ್ಯೆ ಹೆಚ್ಚಿಸಬೇಡಿ, ಇದ್ದಷ್ಟೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳುತ್ತಿದ್ದರು. ಕಳೆದ 20 ವರ್ಷದಲ್ಲಿ ಕನ್ನಡ ಓದುಗರ ಸಂಖ್ಯೆ ಹೆಚ್ಚಿದೆ. ಅವರನ್ನು ತಲುಪಬೇಕೆಂಬ ಉದ್ದೇಶ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಪ್ರಸರಣ ಹೆಚ್ಚಾದರೆ ಲಾಭವಿಲ್ಲ. ಬದಲು ನಷ್ಠವೇ ಹೆಚ್ಚು ಎಂಬ ಲೆಕ್ಕಾಚಾರ ಎಲ್ಲರದ್ದೂ ಆಗಿತ್ತು. ಬೆಲೆ ಏರಿಕೆ ನಡೆಯುತ್ತಾ ಹೋಗುತ್ತಿರುವ ಲೆಕ್ಕದಲ್ಲಿ ಹೋದರೆ ಇವತ್ತು ಕನ್ನಡ ದಿನ ಪತ್ರಿಕೆಗಳ ಬೆಲೆಯು 8 ರೂ. ಮುಟ್ಟಬೇಕಿತ್ತು.

ಇಂತಹ ಸಂದರ್ಭದಲ್ಲಿಯೇ ವಿಜಯ ಕರ್ನಾಟಕ ಕಾಲಿಟ್ಟಿತು. ಎಲ್ಲಾ ಕಡೆ ಎಡಿಷನ್ ಮಾಡುವ ಮೂಲಕ ಎಲ್ಲರಿಗೂ ಪತ್ರಿಕೆ ಮುಟ್ಟಿಸುವ ಕೆಲಸ ಆರಂಭಿಸಿತು. ಹಳ್ಳಿಗಳಲ್ಲಿ ಬೆಳಿಗ್ಗೆ 10, 11ಕ್ಕೆ ಸಿಗುತ್ತಿದ್ದ ಪ್ರಜಾವಾಣಿಯ ಬದಲು ಬೆಳಿಗ್ಗೆ 6ಕ್ಕೆಲ್ಲಾ ಸಿಗುವಂತಾಯಿತು. ಪತ್ರಿಕೆ ಏಜೆನ್ಸಿ ಅನ್ನುವುದು ಇಷ್ಟು ಸುಲಭ ಎನ್ನುವುದನ್ನು ತೋರಿಸಿ ಬಿಟ್ಟರು. ಹಳ್ಳಿ ಹಳ್ಳಿಗೂ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಒಂದು ಊರಿನಲ್ಲಿ ಎಷ್ಟು ಬೇಕು ಅಷ್ಟು ಏಜೆನ್ಸಿ ಕೊಡುವ ಮೂಲಕ ಪತ್ರಿಕೆ ಪ್ರಸರಣವನ್ನು ವಿಸ್ತರಿಸಿಬಿಟ್ಟರು. ದರ ಸಮರವನ್ನು ಸಾರಿ ಬಿಟ್ಟರು. ಉಳಿದ ಪತ್ರಿಕೆಗಳು ಎಚ್ಚೆತ್ತುಕೊಂಡು ಪ್ರಸರಣ ವಿಸ್ತರಿಸುವ ಪ್ರಯತ್ನಗಳ ನಡುವೆ ವಿಜಯಕರ್ನಾಟಕ ನಂಬರ್ ವನ್ ಆಗಿಯೇ ಬಿಟ್ಟಿತು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ತ್ರಿವಳಿ ಮಂತ್ರವನ್ನು ಜಪಿಸಲಾರಂಭಿಸಲಾಯಿತೋ ಆಗ ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಪಡೆಯಲು ಎಬಿಸಿ ಎನ್ನುವ ಪ್ರಸರಣ ಸಂಖ್ಯೆಯ ಪಟ್ಟಿ ಮುಖ್ಯವಾಗಿ ಹೊಯಿತು. ಪತ್ರಿಕೆಗಳ ಸರಕಾಗಲು ತುದಿಗಾಲಿನ ಮೇಲೆ ನಿಂತವು. ಈಗಾಗಿ ಪತ್ರಿಕೆಗೆ ಮೌಲಿಕ ಓದುಗರಗಿಂತ ಗ್ರಾಹಕ ಓದುಗರು ಮುಖ್ಯವಾದರು. ಅಥವಾ ಓದುಗರನ್ನು ಗ್ರಾಹಕರನ್ನಾಗಿ ಮಾಡಲು ಪೈಪೋಟಿಗೆ ಇಳಿಯಬೇಕಾಯಿತು. ವಿಜಯ ಕರ್ನಾಟಕ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಈಗ ಎಲ್ಲಾ ದಿನ ಪತ್ರಿಕೆಗಳು ಎಡಿಷನ್ ಮಾಡಿ, ತಮ್ಮ ಪತ್ರಿಕೆಯ ವಿಸ್ತರಣೆ ಕೆಲಸಕ್ಕೆ ಕೈ ಹಾಕಿವೆ. ಪ್ರಜಾವಾಣಿ ಎಡಿಷನ್ ಮಾಡಿ, ಏಜೆನ್ಸಿಯ ಬಿಗಿ ನೀತಿ ಸಡಿಲಿಸಿ, ಅದು ಹಳ್ಳಿ ಹಳ್ಳಿಗೂ ಏಜೆನ್ಸಿಯನ್ನು ನೀಡಿ ಪ್ರಸರಣಕ್ಕೆ ಅದ್ಯತೆ ನೀಡುತ್ತಿದೆ. ಇದೇ ಸಾಲಿನಲ್ಲಿ ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ನಡೆಸಿವೆ. ಇವುಗಳ ಜೊತೆಗೆ ಈಗ ಹೊಸ ದಿಗಂತವೂ ಸೇರಿಕೊಂಡಿದೆ.

ಮುಖ ಪುಟದಲ್ಲಿ ಪದಗಳ ಜೊತೆ ಆಟ, ಅದೇ ದೊಡ್ಡದು ಎನ್ನುವ ರೀತಿಯ ವಿಜೃಂಭಣೆ, ಟ್ಯಾಬ್ಲೊಯಿಡ್ ಪತ್ರಿಕೆಗಳ ಭಾಷೆ ಬಳುಸುವುದು, ಇಂತಹ ಸರ್ಕಸ್ ನಡೆಸುವ ಮೂಲಕ ಸಂಪಾದಕರು ಎನ್ನುವವರು ಈಗ ಸರ್ಕಸ್ ಕಂಪನಿಯ ಮ್ಯಾನೇಜರ್ ಆಗಿ ಬಿಟ್ಟಿದ್ದಾರೆ. ಅದೇ ಸಂಪಾದಕರ ಚಹರೆ ಹಾಗೂ ಮಾನದಂಡವಾಗಿ ಬಿಟ್ಟಿದೆ. ಪತ್ರಿಕೆಯನ್ನು ಅಗ್ಗದ ಸರಕಾಗಿ ಮಾರಾಟ ಮಾಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಇಂತಹ ವಾತಾವರಣದಲ್ಲಿ ಹೊಸ ಪತ್ರಿಕೆ ವಿಜಯ ವಾಣಿಯ ನಡಿಗೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಎಲ್ಲರೂ ಈಗ ಓಡುತ್ತಿದ್ದಾರೆ. ಈ ಓಟದ ಸಾಲಿನಲ್ಲಿ ವಿಜಯವಾಣಿ ಸೇರಿಕೊಳ್ಳಬೇಕಾಗಿದೆ. ಅನ್ಯಮಾರ್ಗವೇ ಇಲ್ಲ.