ಜೀವನದಿಗಳ ಸಾವಿನ ಕಥನ – 22


– ಡಾ.ಎನ್.ಜಗದೀಶ ಕೊಪ್ಪ


ಜಗತ್ತಿನ ಬೃಹತ್ ಅಣೆಕಟ್ಟುಗಳಿಗೆ ಪರ್ಯಾಯ ವ್ಯವಸ್ಥೆ ಕೂಡ ಇದೆ ಎಂಬುದನ್ನ ತೋರಿಸಿಕೊಟ್ಟವರು ನಮ್ಮ ಮಹಾರಾಷ್ಟ್ರದ ಯರೇಲ ನದಿಯ ತೀರದ ಎರಡು ಹಳ್ಳಿಗಳ ರೈತರು. ಈ ಕುರಿತು ದೆಹಲಿಯ ಸೇಜ್ ಪ್ರಕಾಶನ ಪ್ರಕಟಿಸಿರುವ “Big Dams, Displaced People: Rivers of Sorrow, Rivers of Change” ಎಂಬ ಕೃತಿ ನಮ್ಮೆಲ್ಲರ ಕಣ್ಣು ತೆರಸಬಲ್ಲದು. ಈ ನದಿಯ ಪ್ರಾಂತ್ಯದ ರೈತರು ನೀರಿನ ಹಂಚಿಕೆ ಕುರಿತಂತೆ ಸಹಕಾರಿ ತತ್ವದ ಮೇಲೆ ತಾವೇ ಒಂದು ಸಮಿತಿಯನ್ನು ರಚಿಸಿಕೊಂಡು ನೀರು ಹಂಚಿಕೆ ಕುರಿತು ಈ ರೀತಿಯ ಪ್ರತಿಜ್ಞೆ ಮಾಡಿದ್ದಾರೆ: “ಈ ಭೂಮಿಯ ಮೇಲಿರುವ ಎಲ್ಲರಿಗೂ ಬಡವ-ಬಲ್ಲಿದ ಎಂಬ ತಾರತಮ್ಯವಿಲ್ಲದೆ ಪ್ರಕೃತಿಯ ಕೊಡುಗೆಯಾದ ನೀರಿನ ಮೇಲೆ ಹಕ್ಕಿದೆ. ನಮ್ಮೆಲ್ಲರ ಶ್ರಮದಾನದಿಂದ ಶೇಖರಿಸಲ್ಪಡುವ ಈ ನದಿ ನೀರಿನ ಮೇಲೆ ಯಾರಿಗೂ ವಿಶೇಷವಾದ ಅಧಿಕಾರವಿರುವುದಿಲ್ಲ. ನಾವು ಕೈಗೊಂಡಿರುವ ಈ ಪ್ರತಿಜ್ಙೆಯಂತೆ ಕಾಯಾ ವಾಚಾ ಮನಸಾ ನಡೆದುಕೊಳ್ಳುತ್ತೇವೆ.”

ಆಧುನಿಕ ಅಣೆಕಟ್ಟುಗಳಿಗೆ ಬದಲಾಗಿ ಪಾರಂಪರಿಕ ತಂತ್ರಜ್ಞಾನ ಬಳಸಿ ನದಿಯ ಸಹಜ ಹರಿಯುವಿಕೆಗೆ ಅಡ್ಡಿಯಾಗದಂತೆ ನಿರ್ಮಿಸಿದ ಒಡ್ಡುಗಳ ಮೂಲಕ ಹೊಸ ಭಾಷ್ಯವನ್ನು ಬರೆದ ಈ ರೈತರ ಪ್ರತಿಜ್ಞೆ ಜಗತ್ತಿನ ಎಲ್ಲಾ ನದಿ ನೀರಿನ ಬಳಕೆದಾರರಿಗೆ ದಾರಿ ದೀಪವಾಗಬಲ್ಲದು. ಜೊತೆಗೆ ಬರಗಾಲಕ್ಕೂ ಮದ್ದಾಗಬಲ್ಲದು. ನದಿ ಪಾತ್ರದಲ್ಲಿ ಬದುಕುವ ಆಯಾ ಸಮುದಾಯ ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನದಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನಿರ್ಮಿಸುತ್ತಿರುವ ಕಿರು ಅಣೆಕಟ್ಟುಗಳು ಸರ್ಕಾರಗಳಿಗೆ ಹೊರೆಯಾಗಿರುವುದಿಲ್ಲ. ಎಲ್ಲೆಡೆ ನಿರ್ಮಾಣವಾಗುತ್ತಿರುವ ಒಡ್ಡುಗಳು, ಕಿರು ಅಣೆಕಟ್ಟುಗಳು ಬಹುತೇಕ ರೈತರೇ ಶ್ರಮದಾನದ ಮೂಲಕ  ನಿರ್ಮಿಸುವುದರಿಂದ ಅಲ್ಪ ವೆಚ್ಚದಿಂದ ಕೂಡಿರುತ್ತವೆ. ಕಚ್ಛಾ ವಸ್ತುಗಳಾದ ಸಿಮೆಂಟ್ ಕಬ್ಬಿಣ ಇಂತಹುಗಳಿಗೆ ಹಣ ವೆಚ್ಚವಾಗುತ್ತದೆ. ಕೆಲವೆಡೆ ತಜ್ಞರು ಇವರಿಗೆ ಉಚಿತ ತಾಂತ್ರಿಕ ಸಲಹೆ ನೀಡಿರುವ ಉದಾಹರಣೆಗಳುಂಟು. ಕಿರು ಅಣೆಕಟ್ಟಿನ ವೆಚ್ಚಕ್ಕಾಗಿ ರೈತರು ಬ್ಯಾಂಕುಗಳಿಂದ ಸಾಲ ಪಡೆದು ವರ್ಷಕ್ಕೊಮ್ಮೆ ಮರು ಪಾವತಿ ಮಾಡುತ್ತಿದ್ದಾರೆ. ಈ ರೀತಿಯ ರೈತರ ಸ್ವಾವಲಂಬನೆಯ ನೀರಾವರಿ ಯಶಸ್ಸಿನ ಕಥನ ಮಹರಾಷ್ಟ್ರ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಗುರಿ ಮುಟ್ಟಿದೆ.

1970ರ ದಶಕದಲ್ಲಿ ಯರೇಲ ನದಿ ತೀರದಲ್ಲಿ ನಡೆದ ಅಡೆತಡೆಯಿಲ್ಲದ ಅಕ್ರಮ ಮರಳು ಸಾಗಾಣಿಕೆ, ಶ್ರೀಮಂತ ಜಮೀನುದಾರರ ಕಬ್ಬಿನ ಬೆಳೆಗೆ ಬಳಕೆಯಾದ ಯಥೇಚ್ಛ ನದಿ ನೀರು, ಇವುಗಳ ಪರಿಣಾಮ ನದಿ ಪಾತ್ರದ ಹಳ್ಳಿಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕುಸಿದು ತೆರೆದ ಬಾವಿ, ಕೊಳವೆ ಬಾವಿ ಬತ್ತತೊಡಗಿದವು. ಸರಕಾರ ನಿರ್ಮಿಸಿದ ಜಲಾಶಯವಾಗಲಿ, ನೀರಾವರಿ ಯೋಜನೆಗಳಾಗಲಿ ರೈತರ ಬವಣೆ ನೀಗುವಲ್ಲಿ ವಿಫಲವಾದವು,

ಇವೆಲ್ಲವನ್ನು ಗಮನಿಸಿ ರೈತರು  ಸರ್ಕಾರದ ಆಸರೆಯಿಲ್ಲದೆ 1986ರಲ್ಲಿ ತಾವೇ ನದಿಗೆ ಚಿಕ್ಕ ಅಣೆಕಟ್ಟು ನಿರ್ಮಿಸಿದರು. ರೈತರು, ವಿರ್ದ್ಯಾಥಿಗಳ ಶ್ರಮಾದಾನದಿಂದ ಇದಕ್ಕೆ ಕೇವಲ ಮೂರು ಲಕ್ಷ ರೂ. ವೆಚ್ಚವಾಯಿತು. 13 ಅಡಿ ಎತ್ತರ ಮತ್ತು 360 ಅಡಿ ಉದ್ದದ ಈ ಅಣೆಕಟ್ಟನ್ನು ಮಹರಾಷ್ಟ್ರ  ಸರ್ಕಾರ ಅಕ್ರಮ ನಿರ್ಮಾಣ ಎಂದು ಷೋಷಿಸಿತು. ಈ ಸಂದರ್ಭದಲ್ಲಿ ರೈತರ ನೆರವಿಗೆ ಬಂದ ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆ ರೈತರ ಬವಣೆ ಮತ್ತು ಸಕಾರದ ನಿರ್ಲಕ್ಷ್ಯ ಧೋರಣೆ ಕುರಿತಂತೆ ನಿರಂತರವಾಗಿ ಲೇಖನಗಳ ಸರಣಿಯನ್ನೇ ಬರೆದು ಪ್ರಕಟಿಸಿತು. ಸರ್ಕಾರದ ಇಂತಹ ಅವಿವೇಕದ ನಿರ್ಧಾರದ ಹಿಂದೆ ಮರಳು ಮಾಫಿಯಾ ಮತ್ತು  ಶ್ರೀಮಂತ ಭೂಮಾಲಿಕರ ಕೈವಾಡವಿದೆಯೆಂದು ಪತ್ರಿಕೆ ಆರೋಪಿಸಿತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ  ಅಂತಿಮವಾಗಿ 1989ರಲ್ಲಿ ಅಣೆಕಟ್ಟನ್ನು ಅಧಿಕೃತ ಎಂದು ಘೋಷಿಸಿತು.

ಆರು ಲಕ್ಷ ಚದುರ ಮೀಟರ್ ನೀರು ಶೇಖರವಾಗುವ ಈ ಜಲಾಶಯದ ನೀರಿನಲ್ಲಿ ಅಲ್ಲಿನ ರೈತರು ತಮ್ಮ ಹಳ್ಳಿಗಳಲ್ಲಿ ಜಮೀನಿಲ್ಲದ ರೈತರಿಗೂ ನೀರಿನ ಹಕ್ಕನ್ನು ಕೊಟ್ಟರು. ಈ ರೈತರು ತಮ್ಮ ಪಾಲಿನ ನೀರನ್ನು ಇತರೆ ರೈತರಿಗೆ ಮಾರಿ ಆದಾಯ ಗಳಿಸಿದರು.

ಸುಮಾರು 380 ಹೆಕ್ಟೆರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಂಡ ರೈತರು ಅಧಿಕ ನೀರು ಬೇಡುವ ವಾಣಿಜ್ಯ ಬೆಳೆಗಳಿಗೆ ಕೈ ಹಾಕದೆ ಕಡಿಮೆ ನೀರಿನಲ್ಲಿ ಬೆಳೆಯ ಬಹುದಾದ ಗೋಧಿ, ಜೋಳ, ಕಿರುಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದರು. ನದಿಯ ಇಕ್ಕೆಲಗಳಲ್ಲಿ ಹಾಗೂ ಅಣೆಕಟ್ಟಿನ ದಿಬ್ಬದ ಮೇಲೆ ಬೆಳೆಸಿದ ಗಿಡ ಮರಗಳಿಂದಾಗಿ ಅಲ್ಲಿನ ಜೈವಿಕ ಪರಿಸರ ಮತ್ತೇ ಸಮತೋಲನಕ್ಕೆ ಬಂದು, ಬತ್ತಿ ಹೋಗಿದ್ದ ಬಾವಿಗಳಿಗೆ ಮರು ಜೀವ ಬಂದಿತು ಈ ಕುರಿತು ವಿವರವಾದ ಅಧ್ಯಯನ ನಡೆಸಿದ ಗಂಗೂಲಿ ಕುಗ್ರಾಲ್ ಮತ್ತು ಮುಚಿಂದ್ರ ಸಾಕೇಟ್ ಎಂಬ ಸಮಾಜ ವಿಜ್ಞಾನಿಗಳು. ಈ ಹಳ್ಳಿಗರಿಂದ ನಿರ್ಮಿತವಾಗಿರುವ ಈ ಪುಟ್ಟ ಜಲಾಶಯದ ನೀರು ಯಾವುದೇ ಧರ್ಮ, ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ನೀರಿನ ಮೇಲೆ ಸಮಾನ ಹಕ್ಕನ್ನು ಕಲ್ಪಿಸಿಕೊಟ್ಟಿದೆ ಎಂದು ದಾಖಲಿಸಿದ್ದಾರೆ.’

ರೈತರ ಇಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳಿಂದ ಪರೋಕ್ಷವಾಗಿ ಕೆರೆ, ಬಾವಿಗಳಿಗೆ ಮರುಜೀವ ಬರಲು ಸಾದ್ಯವಾಯಿತು, ಹರಿಯುವ ನದಿ ನೀರನ್ನು ಅಲ್ಪ ಪ್ರಮಾಣದಲ್ಲಿ ತಡೆ ಹಿಡಿಯುವುದರಿಂದ ಈ ನೀರು ಅಂತರ್ಜಲದ ಮೂಲಕ ಸಾಗಿ ಕೆರೆ, ಬಾವಿಗಳಲ್ಲಿ ಶೇಖರಗೊಳ್ಳುವುದರಿಂದ ಕುಡಿಯಲು ಪರಿಶುದ್ಧ ನೀರು ದೊರಕಿದಂತಾಗುತ್ತದೆ. ಇತ್ತೀಚಿಗಿನ ದಿನಗಳಲ್ಲಿ ಕೊಳವೆ ಬಾವಿಗಳಿಂದ  ಮಿತಿಯಿಲ್ಲದೆ ನೀರನ್ನು ತೆಗೆಯುತ್ತಿರುವ ಪರಿಣಾಮ ಜಗತ್ತಿನ ಎಲ್ಲಾ ಭಾಗದಲ್ಲೂ ಅಂತರ್ಜಲದ ಪ್ರಮಾಣ ಒಂದೇ ಸಮನೆ ಕುಸಿಯತೊಡಗಿದೆ.

ಇಡೀ ಭಾರತದಲ್ಲಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಅಂತರ್ಜಲ ಕುಸಿದಿರುವ ನಗರಗಳೆಂದರೆ, ಒಂದು ಬೆಂಗಳೂರು, ಇನ್ನೊಂದು ಅಹಮದಾಬಾದ್ ನಗರ. 1946ರಲ್ಲಿ ಭೂಮಿಯಿಂದ ಕೇವಲ 25 ಅಡಿ ಆಳದಲ್ಲಿ ದೊರೆಯುತಿದ್ದ ನೀರು ಈ ಎರಡು ನಗರಗಳಲ್ಲಿ ಕೆಲವೆಡೆ 1500 ಆಳಕ್ಕೆ ಇಳಿದಿದೆ. ಕರ್ನಾಟಕದ ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶ ಕೂಡ ಅಪಾಯಕಾರಿ ಸ್ಥಿತಿ ತಲುಪಿದೆ.

ಅಂತರ್ಜಜಲಕ್ಕೆ ಧಕ್ಕೆಯಾಗದಂತೆ ಎತ್ತರದ ಗುಡ್ಡಗಳಲ್ಲಿ ಸುರಂಗ ಕೊರೆದು ಅಲ್ಲಿಂದ ಕೆಳಗಿನ ಪ್ರದೇಶದ ಬಾವಿಗಳಿಗೆ ನೀರು ಹರಿಸಿ ಶೇಖರಿಸಿ ಇಟ್ಟುಕೊಳ್ಳುವ ದೇಶಿ ತಂತ್ರ ಜ್ಞಾನವೊಂದು ನಮ್ಮ ಪೂರ್ವಿಕರಲ್ಲಿ ಬಳಕೆಯಲ್ಲಿತ್ತು  ಈಗಲೂ ಇಂತಹದ್ದನ್ನು ಶಿರಸಿ, ಸಿದ್ದಾಪುರ ಮುಂತಾದ ಘಟ್ಟಪ್ರದೇಶಗಳಲ್ಲಿ ಕಾಣಬಹುದು. ಈ ತಂತ್ರಜ್ಞಾನ ಇರಾನ್, ಮಧ್ಯಪ್ರಾಚ್ಯದ ರಾಷ್ಟ್ರಗಳು, ಚಿಲಿ, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಆಚರಣೆಯಲ್ಲಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ. ಅದರೆ ಇವೆಲ್ಲವೂ 1970 ರ ನಂತರ ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಕಾಣೆಯಾದವು. ಗೃಹ ಬಳಕೆ ಮತ್ತು ಕೈಗಾರಿಕೆಗಳ ಬಳಕೆಗಾಗಿ ದಿನೇ ದಿನೇ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಕೊಳವೆ ಬಾವಿ ಮೂಲಕ ಒಂದೇ ಸಮನೆ ನೀರನ್ನು ಎತ್ತಲಾಗುತ್ತಿದೆ. ಈ ಬಾವಿಗಳಿಗೆ ಮಳೆನೀರನ್ನು ಸಂಗ್ರಹಿಸಿ ಇಂಗಿಸುವ ತಂತ್ರಜ್ಞಾನವನ್ನು ನಾವು ನಿರ್ಲಕ್ಷಿಸುತ್ತಾ ಬಂದಿದ್ದೇವೆ. ಭೂಮಿಯ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ನಾವು ನಮ್ಮ ನಡುವೆ ಇರುವ ಕೆರೆ, ಬಾವಿ ಕೊಳ, ನೀರಿನ ತಾಣ ಇವುಗಳಿಗೆ ಮರುಜೀವ ನೀಡಬೇಕಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಎಲ್ಲಾ ಸರ್ಕಾರಗಳು ಮನೆ ನಿರ್ಮಾಣದ ಪರವಾನಗಿ ನೀಡುವ ಸಂದರ್ಭದಲ್ಲಿ ಮಳೆನೀರು ಸಂಗ್ರಹವನ್ನು ಖಡ್ಡಾಯ ಮಾಡಿವೆ. ಚೆನ್ನೈ ನಗರ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ನೀರಿನ ವಿಷಯದಲ್ಲಿ ಅದು ಕುಡಿಯುವ ನೀರಿರಲಿ, ಅಥವಾ ಕೃಷಿ ಬಳಕೆಯದಾಗಿರಲಿ ಬಳಸುವಾಗ ಅದರ ಇತಿ ಮಿತಿಯನ್ನು ನಾವು ಮೊದಲು ಅರಿಯಬೇಕಾಗಿದೆ. ನಮ್ಮ ಪೂರ್ವಿಕರ ಮಿತಬಳಕೆಯ ಸೂತ್ರಗಳು ನಮಗೆ ಮಾದರಿಯಾಗಿವೆ. ಏಷ್ಯಾ ರಾಷ್ಟ್ರಗಳು ಮತ್ತು ಆಪ್ರಿಕಾದ ಸಹರಾ ಮರುಭೂಮಿಯಂಚಿನ ರಾಷ್ಟ್ರಗಳಲ್ಲಿ ಶತ ಶತಮಾನಗಳ ಪೂರ್ವದಿಂದಲೂ ನಮ್ಮ ಜನಪದರು ಈ ಪದ್ಧತಿಯನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದರು.

ಈಶಾನ್ಯ ಭಾರತದ ರಾಜ್ಯಗಳು, ನೇಪಾಳ, ಥಾಯ್ಲೆಂಡ್ ಪಿಲಿಪೈನ್ಸ್ ಮುಂತಾದ ರಾಷ್ಟ್ರಗಳ ಪ್ರದೇಶಗಳಲ್ಲಿ ಬೀಳುವ ಪ್ರತಿ ಮಳೆ ನೀರಿನ ಹನಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ದೇಶಿ ತಂತ್ರಜ್ಞಾನ ಬಳಕೆಯಲ್ಲಿದೆ. ಹಾಗಾಗಿ ಇಲ್ಲಿ ನದಿಯ ಶೋಷಣೆ ಎಂಬ ಪ್ರಶ್ನೆಯೇ ಉದ್ಭವವಾಗಿಲ್ಲ. ತಾಂಜೇನಿಯಾದ ಕಿಲಿಮಾಂಜರೊ ಕಣಿವೆ ಪ್ರದೇಶದಲ್ಲಿ ಅಲ್ಲಿನ ಜನ ಗುಡ್ಡ ಪ್ರದೇಶದಲ್ಲಿ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ಇಳಿಜಾರಿನ ಪ್ರದೇಶದಲ್ಲಿ ಬೇಸಾಯ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗುವಂತಹದ್ದು.

ಚೀನಾ, ಥಾಯ್ಲೆಂಡ್, ವಿಯಟ್ನಾಂ, ಇಂಡೋನೇಷಿಯಾ ಮುಂತಾದ ರಾಷ್ಟ್ರಗಳಲ್ಲಿ ಕಿರುತೊರೆ ಅಥವಾ ನದಿಗಳಿಗೆ ಬಿದರಿನ ಹಂದರಗಳಿಗೆ ಪ್ರಾಣಿಗಳ ಚರ್ಮ ಇಲ್ಲವೇ ಬೇರುಗಳಿಂದ ಎಣೆದ ಚಾಪೆಯನ್ನು ಹೊದಿಸಿ ಅವುಗಳನ್ನು ಅಡ್ಡಲಾಗಿ ನಿಲ್ಲಿಸಿ, ಶೇಖರವಾಗುವ ನೀರನ್ನು ವ್ಯವಸಾಯದ ಭೂಮಿಗೆ ಹರಿಸುವ ಪದ್ಧತಿ ಜಾರಿಯಲ್ಲಿದೆ. ಪ್ರವಾಹದ ಸಂದರ್ಭದಲ್ಲಿ ಇವುಗಳನ್ನು ತೆಗೆದು ಹಾಕಲಾಗುತ್ತದೆ. ಯಾವುದೇ ಖರ್ಚಿಲ್ಲದ ಈ ದೇಶೀ ತಂತ್ರಜ್ಞಾನ ರೈತರ ಪಾಲಿಗೆ ವರದಾನವಾಗಿದ್ದು, ಇವತ್ತಿಗೂ ಅರಣ್ಯವಾಸಿಗಳು ಭಾರತದಲ್ಲೂ ಈ ಪದ್ಧತಿಯನ್ನು ಅನುಸರಿಸುತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದುಪ್ಪಟ್ಟಾದ ಅಣೆಕಟ್ಟು ಮತ್ತು ನೀರಾವರಿ ಯೋಜನೆಗಳ ವೆಚ್ಚ, ಮತ್ತು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದಿಂದಾಗಿ ಅಣೆಕಟ್ಟು ತಂತ್ರಜ್ಞರು ಹಾಗೂ ಕೃಷಿ ವಿಜ್ಞಾನಿಗಳು ಈವರೆಗೆ ಪ್ರತಿಪಾದಿಸಿಕೊಂಡು ಬಂದಿದ್ದ ತಂತ್ರಜ್ಞಾನವನ್ನು ಬದಿಗೊತ್ತಿ ಪರ್ಯಾಯ ತಂತ್ರಜ್ಞಾನಗಳ ಬಗ್ಗೆ ಮರು ಚಿಂತನೆ ಆರಂಭಿಸಿದ್ದಾರೆ. ಇಂತಹ ಆಲೋಚನೆಗಳ ಬಗ್ಗೆ ವಿಶ್ವಬ್ಯಾಂಕ್ ಕೂಡ  ಆಸಕ್ತಿ ತಾಳಿದೆ.

ಈ ಆಲೋಚನೆಯ ಮಾದರಿಗಳೆಂದರೆ, ಎಲ್ಲಾ ನೀರು ಕುರಿತ ಯೋಜನೆಗಳಿಗೆ ನದಿಗಳನ್ನೇ ಅವಲಂಬಿಸುವ ಬದಲು ನಿಸರ್ಗದ ಕೊಡುಗೆಯಾದ ಮಳೆನೀರನ್ನು ಪರಿಣಾಮಕಾರಿಯಾಗಿ,  ಕೃಷಿ ಚಟುವಟಿಕೆಗೆ ಮತ್ತು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದೇ ಆಗಿದೆ. 1995ರಲ್ಲಿ ವಿಶ್ವಬ್ಯಾಂಕ್ ತನ್ನ 50 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪರ್ಯಾಯ ಚಿಂತನೆಗಳಿಗೆ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪ್ರಕಟಿಸಿತು.

ನಮ್ಮ ಪ್ರಾಚೀನ ನೀರಿನ ಬಳಕೆಯ ಮೂಲಸೂತ್ರವೆಂದರೆ, ನೀರಿನ ಮೇಲೆ ಎಲ್ಲರಿಗೂ ಇರುವ ಸಾಮುದಾಯಿಕ ಹಕ್ಕು. ಇದರಿಂದ ನೀರಿನ ದುರ್ಬಳಕೆ ಮತ್ತು ಶೋಷಣೆ ತಪ್ಪುತ್ತದೆ. ನೀರು ಖಾಸಗೀಕರಣ ಅಥವಾ ನೀರಾವರಿ ಯೋಜನೆಗಳ ಖಾಸಗೀಕರಣದಿಂದ ನದಿಯಷ್ಟೇ ಅಲ್ಲ ಭೂಮಿಯ ಶೋಷಣೆ ಕೂಡ ನಿರಂತರವಾಗಿ ಮುಂದುವರಿಯುತ್ತದೆ. ಇಂತಹ ಶೋಷಣೆಗಳನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಗ್ರಾಮ ಸಮುದಾಯಗಳು ಮಿತವಾಗಿ ಅವಶ್ಯಕತೆಗೆ ತಕ್ಕಂತೆ ನೆಲ ಜಲ ಇವುಗಳನ್ನು ಬಳಸಿಕೊಳ್ಳಲು ಮುಂದಾಗಿವೆ. ಇಂತಹ ಮಾದರಿಗಳು ಎಲ್ಲೆಡೆ ಯಶಸ್ವಿಯಾಗಿವೆ.

ಗುಜರಾತ್ ರಾಜ್ಯದ ದಹೂದ್ ಜಿಲ್ಲೆಯ ಮಹುದಿ ಎಂಬ ಗ್ರಾಮ, ಮಧ್ಯಪ್ರದೇಶದ ಧರ್ ಎಂಬ ಜಿಲ್ಲೆಯ ಹಲವು ಗ್ರಾಮಗಳು, ಗುಜರಾತ್‌ನ ರಾಜ್‌ಕೋಟ್ ಬಳಿಯ ಸಮಾಧಿಯಾಲ ಗ್ರಾಮ, ಕಛ್ ಜಿಲ್ಲೆಯ ಗಾಂಧಿಗ್ರಾಮ್, ರಾಜ್‌ಕೋಟ್ ಜಿಲ್ಲೆಯ ಮಾಂಡಲಿಕ್ಪುರ್, ಜಾಬುವ ಜಿಲ್ಲೆಯ ಗೆಲಾರ್ ಚೋಟಿ ಮುಂತಾದ ಗ್ರಾಮಗಳ ಯಶಸ್ಸಿನ ಕಥೆ ನಮ್ಮ ಮುಂದಿದೆ. ಇವುಗಳ ಜೊತೆಗೆ ಇಸ್ರೇಲ್‌ನ ಹನಿ ನೀರಾವರಿ ಪದ್ಧತಿಯಂತೆ ನಮ್ಮ ಈಶಾನ್ಯ ಭಾರತ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಬಿದಿರು ಬೊಂಬುಗಳ ಮೂಲಕ ನೀರನ್ನು ಗಿಡಗಳ ಬುಡಕ್ಕೆ ಮಿತವಾಗಿ ತಲುಪಿಸುವ ವ್ಯವಸ್ಥೆ ಇಂದಿಗೂ ಆಚರಣೆಯಲ್ಲಿದೆ. ಇಂತಹುಗಳ ಜೊತೆ ಭೂಮಿಗೆ ನೀರು ಸಿಂಪಡಿಸುವ ಹೊಸ ಪದ್ಧತಿ ಕೃಷಿ ಚಟುವಟಿಕೆಯಲ್ಲಿ ನೀರು ಪೋಲಾಗದಂತೆ ತಡೆಯಬಲ್ಲದ್ದಾಗಿದೆ. ಇದರಿಂದ ವಿಶೇಷವಾಗಿ ತರಕಾರಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯಬಹುದಾಗಿದೆ.

ಜಗತ್ತಿನ 700 ಕೋಟಿ ಜನಸಂಖೈಯಲ್ಲಿ 200 ಕೋಟಿಗೂ ಅಧಿಕ ಜನತೆ ಕುಡಿಯಲು ಶುದ್ಧ ನೀರಿಲ್ಲದೆ, ಕಲ್ಮಶ ನೀರು ಕುಡಿದು ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಆಧುನಿಕತೆ ಮತ್ತು ನಾಗರೀಕತೆಯ ನೆಪದಲ್ಲಿ ನಗರಗಳಲ್ಲಿ ಕುಡಿಯುವ ನೀರನ್ನು ಜನತೆ ತಮ್ಮ ಕೈ ತೋಟಕ್ಕೆ ಹಾಗೂ ಕಾರು ತೊಳೆಯಲು ಉಪಯೋಗಿಸುವುದರ ಮೂಲಕ ದುಂದು ವೆಚ್ಚ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ನೀರು ಸರಬರಾಜುವಿನ ತಾಂತ್ರಿಕ ವೈಫಲ್ಯ ಮತ್ತು ಕಡಿಮೆ ಗುಣಮಟ್ಟದ ಕೊಳವೆಗಳಿಂದಾಗಿ ಶೇ.10 ರಿಂದ ಶೇ, 30 ರವರೆಗೆ ನೀರು ಪೋಲಾಗುತ್ತಿದೆ. ನಮ್ಮ ನಗರವಾಸಿಗಳು ಅಳವಡಿಸಿಕೊಂಡಿರುವ ಶೌಚಾಲಯಗಳಲ್ಲಿ ಒಮ್ಮೆ ನೀರಿನ ಗುಂಡಿ ಒತ್ತಿದರೆ 5 ಲೀಟರ್ ನೀರು ಹೊರ ಹೋಗುತ್ತದೆ. ರಾಜಸ್ಥಾನದ ಹಳ್ಳಿಗಳಲ್ಲಿ ಅಲ್ಲ್ಲಿನ ಮಹಿಳೆ ಒಂದು ಕೊಡ ಕುಡಿಯುವ ನೀರು ತರಲು ಪ್ರತಿನಿತ್ಯ 14 ಕಿಲೊಮೀಟರ್ ನಡೆಯುತ್ತಾಳೆ. ನಗರಗಳಲ್ಲಿ  ನಾಯಿಕೊಡೆಯಂತೆ ತಲಿಯೆತ್ತುತ್ತಿರುವ ರೆಸಾರ್ಟ್ ಮತ್ತು ತಾರಾ ಹೋಟೆಲ್‌ಗಳಲ್ಲಿ ಈಜುಕೊಳದ ಮೋಜಿಗಾಗಿ ಪ್ರತಿ ನಿತ್ಯ ಲಕ್ಷಾಂತರ ಲೀಟರ್ ನೀರನ್ನು ವ್ಯಯಮಾಡಲಾಗುತ್ತಿದೆ.

ಅಮೇರಿಕಾದ ನಾಗರೀಕರು ತಮ್ಮ ಭೋಗ ಜೀವನಕ್ಕೆ ಹೆಸರಾಗಿದ್ದವರು. ಅವರುಗಳೇ ಈಗ ನೀರಿನ ರಕ್ಷಣೆಗೆ ಮುಂದಾಗಿದ್ದಾರೆ. ತಮ್ಮ ಸ್ನಾನ ಮತ್ತು ಶೌಚಾಲಯಗಳಲ್ಲಿ ಬಳಸುತ್ತಿದ್ದ ನೀರನ್ನು ಮಿತವಾಗಿ ಬಳಸಲು ಪ್ರಾರಂಭಿಸಿದ ಮೇಲೆ ಅಲ್ಲಿ ದಿನವೊಂಕ್ಕೆ ಮೂರು ಸಾವಿರ ದಶಲಕ್ಷ ಲೀಟರ್ ನೀರು ಉಳಿತಾಯವಾಗತೊಡಗಿದೆ. ಇದರಿಂದ ನೀರು ಶುದ್ಧೀಕರಣಕ್ಕಾಗಿ ಆಗುತಿದ್ದ ವಿದ್ಯುತ್‌ನಲ್ಲಿ ಅಪಾರ ಉಳಿತಾಯವಾಗಿದೆ. ನೀರು ಮತ್ತು ವಿದ್ಯುತ್‌ನ ಒಟ್ಟು  ವಾರ್ಷಿಕ  ಉಳಿತಾಯ ಲೆಕ್ಕ ಹಾಕಿದರೆ ಇದು ಕನಿಷ್ಟ ಮೂರು ವಿದ್ಯುತ್ ಆಧಾರಿತ ಅಣೆಕಟ್ಟುಗಳಿಗೆ ಸಮ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೀರಿನ ಸರಬರಾಜುವಿನಲ್ಲಿ ಇರುವ ಮುಖ್ಯ ವೈಫಲ್ಯವೆಂದರೆ, ಕೊಳವೆ ಪೈಪ್‌ಗಳ ಅಸಮರ್ಪಕ ಜೋಡಣೆ. ಇದನ್ನು ಸರಿಪಡಿಸಿದರೆ, ಈಗ ಬಳಸಲಾಗುತ್ತಿರುವ ನೀರಿನಲ್ಲಿ ಶೇ.30 ರಿಂದ ಶೇ.40 ರಷ್ಟು ನೀರನ್ನು ಉಳಿತಾಯ ಮಾಡಬಹುದು. ಇದೇ ರೀತಿ ಕೃಷಿ ಚಟುವಟಿಕೆಯ ನೀರಾವರಿ ಕಾಲುವೆಗಳನ್ನು ಸುಧಾರಿಸಿದರೆ ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದು

ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವ್ಯಕ್ತಿಯೊಬ್ಬ ದಿನವೊಂದಕ್ಕೆ 700 ಲೀಟರ್ ಬಳಕೆ ಮಾಡುತ್ತಿದ್ದು, ಇತ್ತೀಚಿಗೆ ಈ ಪ್ರಮಾಣ 530 ಲೀಟರ್‌ಗೆ ಇಳಿದಿದೆ. ಭಾರತದಲ್ಲಿ ಪ್ರತಿ ಪ್ರಜೆ ದಿನವೊಂದಕ್ಕೆ ಸರಾಸರಿ 80 ಲೀಟರ್ ನೀರು ಬಳಕೆ ಮಾಡುತ್ತಿದ್ದಾನೆ. ಮಧ್ಯ ಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಲ್ಲಿ ಕುಡಿಯುವ ನೀರಿನದು ಅತಿ ದೊಡ್ಡ ಸಮಸ್ಯೆಯಾಗಿದೆ. ಸಮುದ್ರದ ನೀರನ್ನು ಸಂಸ್ಕರಿಸುವ ವಿಧಾನ ಅತಿ ವೆಚ್ಚದಿಂದ ಕೂಡಿದ್ದು, ಈ ನೀರನ್ನು ಮಿಲಿಟರಿ ನೆಲೆ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಮಾತ್ರ ಬಳಸಲಾಗುತ್ತಿದೆ, ಸಮುದ್ರದ ನೀರನ್ನು ಅಧಿಕ ಉಷ್ಣಾಂಶದಲ್ಲಿ ಕಾಯಿಸಿ, ಅದರಲ್ಲಿನ ಉಪ್ಪಿನ ಅಂಶ ಹೊರ ತೆಗೆದು ಮತ್ತೆ ಖನಿಜಾಂಶಗಳನ್ನು ಸೇರಿಸುವ ಪ್ರಕ್ರಿಯೆ ದುಬಾರಿ ವೆಚ್ಚದ್ದಾಗಿದೆ, ಇದಕ್ಕೆ ಅಪಾರ ಪ್ರಮಾಣದ ವಿದ್ಯುತ್ ಅವಶ್ಯಕತೆ ಇದ್ದು, ಈಗ ಸೂರ್ಯನ ಶಾಖ ಮತ್ತು ಗಾಳಿಯಿಂದ ಉತ್ಪಾದಿಸುವ ವಿದ್ಯುತ್ ಕುರಿತು ಪ್ರಯೋಗಗಳು ಮುಂದುವರಿದಿವೆ.

ಮನುಷ್ಯ ತನ್ನ ಬೇಕು ಬೇಡಗಳಿಗೆ ಮಿತಿ ಹಾಕಿಕೊಳ್ಳದಿದ್ದರೆ, ಜಗತ್ತಿನ ಯಾವುದೇ ನದಿಯಿರಲಿ, ಬೆಟ್ಟವಿರಲಿ, ಕೆರೆ, ಹಳ್ಳ ಕೊಳ್ಳವಿರಲಿ, ಅರಣ್ಯವಿರಲಿ ಇವುಗಳಿಗೆ ಉಳಿಗಾಲವಿಲ್ಲ. ಆಧುನಿಕ ಜಗತ್ತಿನ ಮನುಷ್ಯನ ಮಿತಿಯಿಲ್ಲದ ಭೋಗಲಾಲಸೆಗಳಿಗೆ ಎಲ್ಲವೂ ಬಲಿಯಾಗುತ್ತಿವೆ. ತಾವು ಇದ್ದಲ್ಲೆ, ತಮಗೆ ಸಿಕ್ಕ ಅವಕಾಶದಲ್ಲಿ ಸಂತೃಪ್ತಿಯನ್ನು ಕಾಣುತ್ತಾ ನಿಸರ್ಗಕ್ಕೆ ಕೇಡಾಗದಂತೆ ಬದುಕಿದ್ದ ನಮ್ಮ ಜನಪದರ ಪ್ರಜ್ಞೆ, ಪೂರ್ವಿಕರ ಸರಳವಾದ ದೇಶಿಯ ಬದುಕು ನಮಗೆ ಬೆಳಕಿನ ಹಾದಿಯಾಗಬೇಕಿದೆ.

ಇದು ಕಥೆಯಲ್ಲ. ನನಗಿನ್ನೂ ನೆನಪಿದೆ. ಅದು 1963-64 ರ ದಿನಗಳು. ನನಗಾಗ 8 ವರ್ಷ. ನನ್ನೂರಿಗೆ ಬಿದ್ದ ಮೊದಲ ಮುಂಗಾರು ಮಳೆಯ ಮಾರನೇ ದಿನ ಮುಂಜಾನೆ ನನ್ನಪ್ಪ ನೇಗಿಲು ಮತ್ತು ನೊಗವನ್ನು ಹೊತ್ತು ಎತ್ತುಗಳ ಜೊತೆ ಹೊಲಕ್ಕೆ ಹೊರಡುತಿದ್ದ. ನಾನು ಒಂದು ಸಣ್ಣ ತಂಬಿಗೆಯಲ್ಲಿ ನೀರು ತಂಬಿಕೊಂಡು ಅಪ್ಪನನ್ನು ಹಿಂಬಾಲಿಸುತಿದ್ದೆ. ತನ್ನ ಚಪ್ಪಲಿಯನ್ನ ಹೊಲದ ಹೊರಗೆ ಬಿಟ್ಟು ಅಪ್ಪ ದನಗಳಿಗೆ ನೇಗಿಲು ಹೂಡಿ ನಂತರ ಮೂರು ಸಣ್ಣ ಕಲ್ಲುಗಳನ್ನು ಆಯ್ದು ತಂದು ಅವುಗಳನ್ನ ನೀರಿನಿಂದ ತೊಳೆಯುತಿದ್ದ. ತನ್ನ ಚಡ್ಡಿ ಜೇಬಿನಿಂದ ಅರಿಶಿನ ಕುಂಕುಮ ತೆಗೆದು ಅವುಗಳಿಗೆ ಬಳಿದು ಹೊಲದ ಬದುವಿನ ಮೇಲೆ ಸಾಲಾಗಿ ಇರಿಸಿ ಗರಿಕೆ ಹುಲ್ಲು ತಂದು ಇಟ್ಟು ಅವುಗಳನ್ನು ಕರ್ಪೂರ ಮತ್ತು ಊದುಬತ್ತಿ ಹಚ್ಚಿ ಪೂಜಿಸುತಿದ್ದ. ನಂತರ ಹೊಲ ಉಳಲು ಪ್ರಾರಂಭಿಸುತಿದ್ದ. ಹೊಲದಲ್ಲಿ ಬಿದ್ದಿದ್ದ ಸಾಮಾನ್ಯ ಕಲ್ಲುಗಳು ಅಪ್ಪನ ಕೈಯಲ್ಲಿ ದೇವರಾಗುವ ಬಗೆ ನನಗೆ ಆಗ ಕುತೂಹಲ ಮತ್ತು ವಿಸ್ಮಯ ಮೂಡಿಸುತಿತ್ತು. ತಾನು ಇದ್ದಲ್ಲೇ ದೇವರನ್ನು ಕಾಣುವ, ಸೃಷ್ಟಿಸುವ ನಮ್ಮ ಹಿರಿಯರ ತಾಕತ್ತು ಮತ್ತು ಚಿಂತನೆ ನನಗೀಗ ಅರ್ಥವಾಗುತ್ತಿದೆ. ನಮ್ಮ ಜನಪದರ ಇಂತಹ ಆದರ್ಶನೀಯವಾದ ಬದುಕು ಜಗತ್ತಿನ ಯಾವ ಜೀವ ಜಾಲಕ್ಕೂ ಮಾರಕವಾಗಿರಲಿಲ್ಲ. ಇದರಿಂದಾಗಿ ಎಲ್ಲಾ ಜೀವ ನದಿಗಳಷ್ಟೇ ಅಲ್ಲ, ಪರಿಸರದ ಪ್ರಾಣಿ ಪಕ್ಷಿಗಳು ಬದುಕಿ ಕೊಂಡಿದ್ದವು.

(ಮುಂದುವರೆಯುವುದು)

Leave a Reply

Your email address will not be published.