ಸಿ.ಟಿ.ರವಿಯವರ ಮೇಲಿನ ಭೂಹಗರಣದ ಆರೋಪ ಮತ್ತು ಸಂಬಂಧಿಸಿದ ದಾಖಲೆಗಳು…


– ರವಿ ಕೃಷ್ಣಾರೆಡ್ಡಿ


ಬಹುಶಃ ಕರ್ನಾಟಕದ ಯಾವೊಬ್ಬ ಜನಪ್ರತಿನಿಧಿಯ ಬಗ್ಗೆಯೂ ನಾವು ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳಬಹುದಾದ ರೀತಿ ಕಾಣುತ್ತಿಲ್ಲ. ಇದೊಂದು ಅನ್ಯಾಯ, ಅನೀತಿ, ಸ್ವಚ್ಚಂದ ಭ್ರಷ್ಟಾಚಾರದ ಕಾಲ. ಭ್ರಷ್ಟರೇ ಭ್ರಷ್ಟಾಚಾರದ ಆರೋಪ ಹೊರಿಸುವುದೂ ಅಸಹಜವೇನಲ್ಲ. ಕೆಲವರು ಅತಿ ನಾಜೂಕಾಗಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ಮಾಡಿದರೆ ಮತ್ತೆ ಬಹುಪಾಲು ಜನ ರಾಜಾರೋಷವಾಗಿಯೇ ಮಾಡಿದ್ದಾರೆ.

ನನಗೆ ಇತ್ತೀಚಿನ ತನಕ ಒಬ್ಬ ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಆದರೆ ಇತ್ತೀಚೆಗೆ ಗೊತ್ತಾಗಿದ್ದು ಏನೆಂದರೆ, ಅಷ್ಟೇನೂ ಆಗರ್ಭ ಶ್ರೀಮಂತರಲ್ಲದ ಆ ಶಾಸಕರೂ ತಮ್ಮ ಮನೆಗೆ ಹಣಕಾಸಿನ ಕಷ್ಟ ಹೇಳಿಕೊಂಡು ಸಹಾಯ ಕೇಳಿಕೊಂಡು ಬರುವ ಜನರಿಗೆ ಹಣಕಾಸಿನ ನೆರವು ನೀಡುತ್ತಾರಂತೆ. ಎಲ್ಲಿಂದ ಬರುತ್ತದೆ ಆ ಹಣ? ಅದು ಅವರು ಬೆವರು ಸುರಿಸಿ ತಮ್ಮ ತೋಟದಲ್ಲಿ ದುಡಿದ ಹಣವಲ್ಲ. ಅವರ ಸಂಬಳದ ಹಣವೂ ಅಲ್ಲ. ಹಾಗಾದರೆ ಅವರ ಹಣದ ಮೂಲ ಭ್ರಷ್ಟಾಚಾರವಲ್ಲದೆ ಬೇರೇನು ಇರಬಹುದು?.

ಇನ್ನು ಬೇನಾಮಿತನ. ಈ ಜನಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳು ದಾಖಲೆಗಳಲ್ಲಿ ತಮ್ಮ ಹೆಸರು ಕಾಣಿಸದಂತೆ, ಬೇನಾಮಿಗಳ ಮೂಲಕ ಆಸ್ತಿ ಕೂಡಿಟ್ಟುಕೊಳ್ಳುವುದು ಲಾಗಾಯ್ತಿನಿಂದ ನಡೆದು ಬಂದಿರುವುದೆ. ನಮ್ಮಲ್ಲಿ ಒಂದು ಉತ್ತಮ ಇನ್ವೆಸ್ಟಿಗೇಟಿವ್ ಏಜನ್ಸಿ ಇಲ್ಲದಿರುವುದರಿಂದ ಈ ಅಧಿಕಾರ ದುರುಪಯೋಗ ಮತ್ತು ಬೇನಾಮಿ ಆಸ್ತಿ ಶೇಖರಣೆ ನಿರಂತರವಾಗಿ ನಡೆಯುತ್ತಲೇ ಇದೆ. ಲೋಕಾಯುಕ್ತ…. ಆ ಸಂಸ್ಥೆ ಮತ್ತು ಅದು ಸಲ್ಲಿಸುತ್ತಿರುವ ವರದಿಗಳು, ತೆಗೆದುಕೊಳ್ಳುತ್ತಿರುವ ಸಮಯ, ಮುಖ್ಯ ಲೋಕಾಯುಕ್ತರಿಲ್ಲದೆ ನಡೆಯುತ್ತಿರುವ ಅದರ ಕಾರ್ಯ, ನಿಧಾನಗತಿ… ಇಂದು ಅದರ ವಿಶ್ವಾಸಾರ್ಹತೆಯೆ ಪ್ರಶ್ನಾರ್ಹವಾಗಿದೆ.

ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಮುಂದಿನ ದಿನಗಳ ರಾಜಕೀಯ ನಾಯಕರಾಗಬಹುದಾದವರ ಮೇಲೆಯೂ ಒಳ್ಳೆಯ ಭರವಸೆ ಇಟ್ಟುಕೊಳ್ಳುವಂತಿಲ್ಲ. ಬಹಳಷ್ಟು ಜನ ರೌಡಿ, ಗೂಂಡಾಗಳಂತೆಯೇ ವರ್ತಿಸುತ್ತಾರೆ. ಅವರ ಕೋಮುವಾದದ ಸಿದ್ಧಾಂತ ಒತ್ತಟ್ಟಿಗಿದ್ದರೂ ಶಾಸಕ ಸಿ.ಟಿ.ರವಿಯಂತಹವರ ಬಗ್ಗೆ ಕನಿಷ್ಟ ಅವರ ಪ್ರಾಮಾಣಿಕತೆಯ ಬಗ್ಗೆಯಾದರೂ ನಂಬಿಕೆ ಇಟ್ಟುಕೊಳ್ಳಬಹುದಿತ್ತು. ಇಷ್ಟಕ್ಕೂ ಇವರಂತಹ ಕೋಮುವಾದಿಗಳು ಚುನಾವಣೆ ಗೆದ್ದಿದ್ದು ದುಡ್ಡಿನ ಬಲಕ್ಕಿಂತ ಹೆಚ್ಚಾಗಿ ಕೋಮುವಾದವನ್ನು, ಒಂದು ರೀತಿಯ ಅಪ್ರಾಮಾಣಿಕ ಹುಸಿರಾಷ್ಟ್ರೀಯತೆಯನ್ನು ಉದ್ದೀಪಿಸಿ. ಇವರು ಮಾತನಾಡುತ್ತಿದ್ದದ್ದು ಸ್ವಚ್ಚ, ಪ್ರಾಮಾಣಿಕ ಆಡಳಿತದ ಬಗ್ಗೆ. ದೇಶಭಕ್ತಿಯ ಬಗ್ಗೆ. ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಅದೊಂದು ನಿಸ್ವಾರ್ಥ ಧ್ಯೇಯದಂತೆ ಡಂಗೂರ ಸಾರುತ್ತಿದ್ದರು. ಆದರೆ, ಇವರಂತಹವರ ಬಗ್ಗೆಯೂ ದೂರುಗಳು, ಅಪವಾದಗಳು ಬರುತ್ತವೆ ಎಂದರೆ ಈಗ ಯಾವ ವಿಧಾನಸಭಾ ಶಾಸಕ ಭ್ರಷ್ಟನಲ್ಲ ಎಂದು ಕೇಳುವಂತಾಗಿದೆ. ಉತ್ತರ ಕಷ್ಟವೇನಲ್ಲ. ಅದು ಎರಡಂಕಿ ಮುಟ್ಟುತ್ತದೆ ಎಂದು ಅನ್ನಿಸುತ್ತದೆಯೆ? ಇಷ್ಟಕ್ಕೂ ಆ ಮಹಾತ್ಮರು ಯಾರು? ನನಗಂತೂ ಯಾರೂ ನೆನಪಾಗುತ್ತಿಲ್ಲ. ನಿಮಗೆ?

ಸಿ.ಟಿ. ರವಿಯವರ ಮೇಲಿರುವ ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತದ ಆರೋಪದ ಕತೆ ಹೀಗಿದೆ:

ಶಾಸಕರಾಗಿರುವ ಕಾರಣಕ್ಕೆ ಸಿ.ಟಿ.ರವಿ ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಹೌದು. ಆ ಕಾರಣ ಪ್ರಾಧಿಕಾರದ ನಿರ್ಧಾರಗಳಲ್ಲಿ ಅವರ ಪಾತ್ರ ದೊಡ್ಡದಿರುತ್ತದೆ. ಸುಮಾರು ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಹತ್ತಿರದಲ್ಲಿಯೇ ಹೊಸದೊಂದು ಬಡವಾಣೆ ನಿರ್ಮಾಣ ಮಾಡಲೆಂದು ಹಿರೇಮಗಳೂರು ಸುತ್ತಮುತ್ತ 40 ಎಕರೆ ಭೂಮಿಯನ್ನು ಪ್ರಾಧಿಕಾರ ಗುರುತಿಸಿತ್ತು. ನಂತರ ನಲವತ್ತು ಎಕರೆ ಭೂಮಿ ಈ ಯೋಜನೆಗೆ ಸಾಲದು ಎಂಬ ಕಾರಣಕ್ಕೆ ಬೇರೆ ಕಡೆ ಹೆಚ್ಚಿನ ಜಾಗವನ್ನು ಬಡಾವಣೆಗಾಗಿ ಗುರುತಿಸಿ, ಪ್ರಸ್ತುತ ಭೂಮಿಯನ್ನು ಯೋಜನೆಯಿಂದ ಕೈಬಿಟ್ಟಿತು.

ಯೋಜನೆ ಕೈ ಬಿಟ್ಟ ನಂತರ ಆ ಜಮೀನು ಮೂಲ ಮಾಲೀಕರ ಕೈಗೆ ಸೇರಬೇಕು. ಈ ನಲವತ್ತು ಎಕರೆ ಪ್ರದೇಶದಲ್ಲಿ 32 ಎಕರೆ ಮೂಲ ಮಾಲೀಕರಿಗೆ ಸೇರಿತು. ಉಳಿದ ಎಂಟು ಎಕರೆಗಳನ್ನು ‘ವಾಟರ್ ಪಾರ್ಕ್’ ಎಂಬ ಯೋಜನೆ ನೆಪದಲ್ಲಿ ಹಾಗೆ ಉಳಿಸಿಕೊಳ್ಳಲಾಯಿತು. ಹಿರೇಮಗಳೂರಿನ ಕೆರೆ ಸುತ್ತಲ ಭೂಮಿಯನ್ನು ಅಭಿವೃದ್ಧಿ ಪಡಿಸಿ ‘ವಾಟರ್ ಪಾರ್ಕ್’ ಮಾಡುವುದು ಪ್ರಾಧಿಕಾರದ ಉದ್ದೇಶ. ಪ್ರಸ್ತುತ ಕೆರೆ ನೀರಾವರಿ ಉದ್ದೇಶಕ್ಕೆ ಉಪಯೋಗವಾಗುತ್ತಿದ್ದುದು ಗೊತ್ತಿದ್ದೂ ಪ್ರಾಧಿಕಾರ ಈ ಯೋಜನೆಗೆ ಕೈ ಹಾಕಿತು.

ಈ ಮಧ್ಯೆ ಈ ಜಮೀನಿನ ಮೂಲ ಮಾಲಿಕರೊಬ್ಬರು ತಾವು ಜಮೀನನ್ನು ಮಾರಾಟ ಮಾಡಬೇಕಿದೆ, ದಯವಿಟ್ಟು ಅನುಮತಿ ಕೊಡಿ ಎಂದು ಪ್ರಾಧಿಕಾರದಿಂದ ‘ನಿರಪೇಕ್ಷಣ ಪತ್ರ’ ಕ್ಕಾಗಿ ಮೊರೆ ಇಟ್ಟರು. ಅರ್ಜಿದಾರರಿಗೆ ಪ್ರಾಧಿಕಾರ ಉತ್ತರಿಸಿ, ಪ್ರಸ್ತುತ ಜಮೀನನ್ನು ವಾಟರ್ ಪಾರ್ಕ್‌ಗಾಗಿ ಗುರುತಿಸಲಾಗಿರುವುದರಿಂದ ಮಾರಾಟ ಮಾಡಲು ಅನುಮತಿ ಕೊಡಲಾಗುವುದಿಲ್ಲ ಎಂದಿತು.

ಅದುವರೆವಿಗೂ ಪ್ರಾಧಿಕಾರ ಹಿರೇಮಗಳೂರು ಕೆರೆಯನ್ನು ಅಭಿವೃದ್ಧಿ ಪಡಿಸಲು ಕೆರೆಯ ಮೂಲ ವಾರಸುದಾರ ಇಲಾಖೆಯಾದ ಸಣ್ಣ ನೀರಾವರಿ ಇಲಾಖೆಯಿಂದ ಹಸ್ತಾಂತರ ಮಾಡಿಕೊಳ್ಳಲು ಆಗಲಿಲ್ಲ.  ಡಿಸೆಂಬರ್ 7, 2009 ರಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪತ್ರ ಬರೆದು ಕೆರೆ ನೀರಾವರಿ ಉಪಯೋಗಕ್ಕೆ ಅಗತ್ಯವಾಗಿರುವುದರಿಂದ ಅದನ್ನು ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂದರು.

ವಿಚಿತ್ರವೆಂದರೆ, ಇಲಾಖೆಯಿಂದ ಹೀಗೆ ಉತ್ತರ ಬರುವ ಮೂರು ತಿಂಗಳ ಮೊದಲೇ ಪ್ರಸ್ತುತ ಜಮೀನು ಮೂಲ ಮಾಲೀಕರ ಖಾತೆಗಳಿಂದ ಸಿ.ಡಿ ಅನಿಲ್ ಕುಮಾರ್ ಮತ್ತಿತರರ ಹೆಸರಿಗೆ ವರ್ಗಾವಣೆ ಆಗಿತ್ತು!

ಮೂಲ ಮಾಲಿಕರು ಮಾರಾಟ ಮಾಡಲು ಅನುಮತಿ ಕೇಳಿದಾಗ ವಾಟರ್ ಪಾರ್ಕ್ ಯೋಜನೆ ನೆಪದಲ್ಲಿ ಪ್ರಾಧಿಕಾರ ನಿರಾಕರಿಸಿತ್ತು. ಹಾಗಾದರೆ ಇದು ಸಿ.ಡಿ ಅನಿಲ್ ಕುಮಾರ್ ಮತ್ತಿತರರ ಹೆಸರಿಗೆ ರಿಜಿಸ್ಟರ್ ಆಗಿದ್ದಾದರೂ ಹೇಗೆ?

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ. ಹೀಗೆ ಅನಿಲ್ ಕುಮಾರ್ ಹೆಸರಿಗೆ ಜಮೀನು ನೋಂದಣಿ ಆದ ಕೆಲವೇ ತಿಂಗಳಲ್ಲಿ ಅಂದರೆ ಜೂನ್ 2010 ರ ವೇಳೆಗೆ ಶಾಸಕರ ಪತ್ನಿಗೆ ಹತ್ತಿರದ ಸಂಬಂಧಿಕರಾದ ತೇಜಸ್ವಿನಿ ಸುದರ್ಶನ್ ಹೆಸರಿಗೆ ಜಮೀನು ವರ್ಗಾವಣೆ ಆಯಿತು. ನಂತರ ಅದೇ ಜಾಗದಲ್ಲಿ ಬಡಾವಣೆ ನಿರ್ಮಾಣಗೊಂಡಿದೆ. ಅಲ್ಲಿಯ ನಿವೇಶನಗಳು ಈಗ ಲಕ್ಷಾಂತರ ರೂ ಬೆಲೆ ಬಾಳುತ್ತಿವೆ.

ಚಿಕ್ಕಮಗಳೂರಿನ ಜೆಡಿಎಸ್ ಮುಖಂಡ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯ ಎಸ್.ಎಲ್ ಭೋಜೇಗೌಡ ಈ ಪ್ರಕರಣದ ದಾಖಲೆಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ ಇದೆಲ್ಲದರ ಹಿಂದೆ ಶಾಸಕರ ಸ್ವಜನ ಪಕ್ಷಪಾತ, ಧನದಾಹ ಎಲ್ಲವೂ ಇವೆ ಎಂದು ಆರೋಪಿಸಿದ್ದಾರೆ. ನೀರಾವರಿಗೆ ಉಪಯೋಗಕ್ಕಿರುವ ಕೆರೆಯನ್ನು ವಾಟರ್ ಪಾರ್ಕ್ ಯೋಜನೆಗೆ ಗುರುತಿಸಿದ್ದೇ ಒಂದು ಸಂಚು ಎನ್ನುವುದು ಅವರ ಆರೋಪ.

ಸರಕಾರ ಯಾವುದೇ ಕಾರಣಕ್ಕೂ ಆ ಕೆರೆಯನ್ನು ಯೋಜನೆಗೆ ಹಸ್ತಾಂತರ ಮಾಡುವುದಿಲ್ಲ ಎಂದು ಗೊತ್ತಿದ್ದೇ ಶಾಸಕರು ಆ ಯೋಜನೆಯನ್ನು ಪ್ರಸ್ತಾಪಿಸಿದರು. ಅದೇ ಕಾರಣಕ್ಕೆ ಸಣ್ಣ ನೀರಾವರಿ ಇಲಾಖೆ ಅನುಮತಿ ನಿರಾಕರಿಸುವ ಮೊದಲೇ ಶಾಸಕರ ಆಪ್ತರ ಹೆಸರಿಗೆ ನೋಂದಣಿಯಾಗಿದ್ದು ಈ ಸಂಚಿನ ಆರೋಪಕ್ಕೆ ಪುಷ್ಟಿ ಕೊಡುತ್ತದೆ. ನಂತರ ಮೂಲ ಮಾಲೀಕರಾದ ಬಡ ರೈತರನ್ನು ಹೆದರಿಸಿ, ಬೆದರಿಸಿ ಅಥವಾ ‘ಮನವೊಲಿಸಿ’ ಅವರಿಂದ ಜಮೀನಿನ ಮಾರಾಟ ಮಾಡಿಸಿದರು. ‘ಸರಕಾರ ಜಮೀನನ್ನು ಕೊಂಡರೆ ನಿಮಗೆ ಸಿಗುವುದು ಬಿಡಿಗಾಸು, ನಾವು ಜಾಸ್ತಿ ಕೊಡುತ್ತೇವೆ,’ ಎಂದು ಹೇಳಿ ರೈತರಿಂದ ಜಮೀನನ್ನು ಖರೀದಿಸಿರುವ ಸಾಧ್ಯತೆ ಇದೆ. ಅಭಿವೃದ್ಧಿ ಯೋಜನೆಗೆ ಗುರುತಿಸಲಾಗಿದ್ದ ಜಮೀನಿನ ನೋಂದಣಿ ಶಾಸಕರ ಪ್ರಭಾವದಿಂದ ಸಾಧ್ಯವಾಯಿತು ಎನ್ನುವುದು ಬೋಜೇಗೌಡರ ಇನ್ನೊಂದು ಆರೋಪ.

ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಾಸಕರು, ಪ್ರಾಧಿಕಾರದ ಸದಸ್ಯರಾಗಿದ್ದ ಕಾರಣ ವಾಟರ್ ಪಾರ್ಕ್ ಯೋಜನೆಯನ್ನು ಪ್ರಸ್ತಾಪ ಮಾಡಲು ಸಾಧ್ಯವಾಯಿತು. ಆ ಮೂಲಕ ಆಯಕಟ್ಟಿನ ಜಾಗವನ್ನು ಗುರುತಿಸಲು ಸಹಕಾರಿಯಾಯಿತು. ನಂತರ ತಮ್ಮ ಪ್ರಭಾವ ಬಳಸಿ ಆ ಜಮೀನನ್ನು ತಮ್ಮ ಆಪ್ತರಿಗೆ ನಂತರ ನೆಂಟರಿಗೆ ವರ್ಗಾಯಿಸಿದರು.

ದಾಖಲೆಗಳ ಪ್ರಕಾರ ಜಮೀನು ಅವರ ಹೆಸರಿನಲ್ಲಿಲ್ಲ. ಆದರೆ ಎಲ್ಲಾ ಹಂತದಲ್ಲೂ ಅವರ ಪ್ರಭಾವ ಹೆಸರು ಮಾಡಿದೆ. ದಾಖಲೆಗಳನ್ನು ಮತ್ತು ಸಂಬಂಧಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ನೋಡಿದರೆ ಅಧಿಕಾರ ದುರುಪಯೋಗ ಎದ್ದು ಕಾಣಿಸುತ್ತದೆ. ಇದನ್ನೇ ಭೋಜೇಗೌಡರು ಹೇಳುತ್ತಿರುವುದು.

ಸಿ.ಡಿ.ಅನಿಲ್‌ಕುಮಾರ್ ಮತ್ತು ಸಿ.ಟಿ. ರವಿಯವರಿಗೆ ಇರುವ ಸ್ನೇಹ ಮತ್ತು ವ್ಯವಹಾರಿಕ ಸಂಬಂಧಗಳ ಬಗ್ಗೆ. ಅವರ ಮತ್ತು ಕೊನೆಯದಾಗಿ ರಿಜಿಸ್ಟರ್ ಮಾಡಿಸಿಕೊಂಡಿರುವ ಮತ್ತು ತೇಜಸ್ವಿನಿ ಸುದರ್ಶನ್‌ರ ಆದಾಯ ಮೂಲಗಳ ಬಗ್ಗೆ, ರಿಜಿಸ್ಟರ್ ಆದ ಸಂದರ್ಭದಲ್ಲಿ ಈ ಎಲ್ಲಾ ಪಾತ್ರಧಾರಿಗಳ ಫೋನ್ ಕರೆಗಳ ಬಗ್ಗೆ, ರಿಜಿಸ್ಟರ್ ಸಮಯದಲ್ಲಿ ಆಗಿರುವ ಲೋಪಗಳ ಬಗ್ಗೆ ದಾಖಲೆಗಳನ್ನು ಕ್ರೋಢೀಕರಿಸಿಕೊಂಡು ತನಿಖಾ ಸಂಸ್ಥೆಯೊಂದು ವಿಚಾರಣೆ ನಡೆಸಿದರೆ ಇದರ ಹಿಂದಿನ ಸತ್ಯ ದಾಖಲಾಗಬಹುದು.

ಆದರೆ…

ಮೊದಲೇ ಹೇಳಿದ ಹಾಗೆ ನಮ್ಮಲ್ಲಿ ಉತ್ತಮವಾದ ಸ್ವತಂತ್ರವಾದ, suo moto ಅಧಿಕಾರವಿರುವ ತನಿಖಾ ಸಂಸ್ಥೆಗಳಿಲ್ಲ. ಅಂತಹ ಸಂಸ್ಥೆಗಳನ್ನು ಸ್ಥಾಪಿಸಲು ಕಾನೂನು ರಚಿಸಬೇಕಾದವರೆ ಇಂದು ಅಪರಾಧಿಗಳಾಗಿ ಕಾಣಿಸುತ್ತಿದ್ದಾರೆ. ನ್ಯಾಯಾಲಯಗಳಿಗೆ ಜೈಲುಗಳಿಗೆ ಅಲೆಯುತ್ತಿದ್ದಾರೆ. ಇದು ಯಾರು ಮಾಡಿದ ತಪ್ಪು?

ಇವು ಮೇಲಿನ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಲಭ್ಯವಿರುವ ದಾಖಲೆಗಳಲ್ಲಿ ಕೆಲವು ದಾಖಲೆ ಪತ್ರಗಳು.

 

 

 

4 thoughts on “ಸಿ.ಟಿ.ರವಿಯವರ ಮೇಲಿನ ಭೂಹಗರಣದ ಆರೋಪ ಮತ್ತು ಸಂಬಂಧಿಸಿದ ದಾಖಲೆಗಳು…

 1. Ananda Prasad

  ಕಳೆದ ಶನಿವಾರ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಲೋಕಾಯುಕ್ತರ ನೇಮಕದ ಹಿಂದೆ ಲಾಬಿ ಇದೆಯೇ ಎಂಬ ಬಗ್ಗೆ ಒಂದು ಚರ್ಚೆ ನಡೆಯಿತು. ಇದರಲ್ಲಿ ಲೋಕಾಯುಕ್ತರಾಗಿ ಬನ್ನೂರ್ಮಠ ನೇಮಕ ಏಕೆ ಬೇಡ ಎಂಬ ಬಗ್ಗೆ ಕೆಲವರು ಪ್ರಶ್ನಿಸಿದರೆ ಇನ್ನು ಕೆಲವರು ಬನ್ನೂರ್ಮಠ ಅವರೇ ಏಕೆ ಲೋಕಾಯುಕ್ತರಾಗಿ ನೇಮಕ ಆಗಬೇಕು ಎಂದು ಕೇಳಿದರು. ಇಷ್ಟಾದರೂ ವರ್ತಮಾನದಲ್ಲಿ ಪ್ರಕಟವಾದ ಬನ್ನೂರ್ಮಠ ಅವರ ಮೇಲೆ ರಾಜ್ಯಪಾಲರಿಗೆ ಬಂದ ದೂರಿನ ಬಗ್ಗೆ ಯಾವುದೇ ಪ್ರಸ್ತಾಪ ಆಗಲಿಲ್ಲ. ಸುದ್ದಿ ವಾಹಿನಿಯೊಂದಕ್ಕೆ ಬನ್ನೂರ್ಮಠ ಅವರ ಮೇಲೆ ರಾಜ್ಯಪಾಲರಿಗೆ ಬಂದ ದೂರಿನ ಬಗ್ಗೆ ಏನೂ ಮಾಹಿತಿ ಇಲ್ಲ ಎಂದರೆ ನಂಬಲು ಸಾಧ್ಯವೇ? ಈ ವಿಷಯವನ್ನು ಸುದ್ದಿ ವಾಹಿನಿಯವರೇ ತಿಳಿಸಿ ಬನ್ನೂರ್ಮಠ ಅವರ ನೇಮಕ ಏಕೆ ಬೇಡ ಎಂದು ಹೇಳಬಹುದಿತ್ತು. ಆದರೆ ವಾಹಿನಿ ಆ ಬಗ್ಗೆ ಮೌನ ತಳೆದಿತ್ತು. ಇದು ಎಂಥ ಮಾಧ್ಯಮ ಮೌಲ್ಯ? ಇದೀಗ ಬನ್ನೂರ್ಮಠ ಅವರು ಕೇರಳದಲ್ಲಿ ಮುಖ್ಯ ನ್ಯಾಯಾಧೀಶರಾಗಿ ಕೆಲಸ ಮಾಡಿದಾಗ ಅಲ್ಲಿನ ಲೋಕ ಅದಾಲತ್ ಅನ್ನು ದುರ್ಬಲಗೊಳಿಸಿದ ಅಪಾದನೆಯೂ ಬಂದಿದೆ. ಅದರೂ ರಾಜ್ಯದ ಮಾಧ್ಯಮಗಳು ಒಕ್ಕೊರಲಿನಿಂದ ಬನ್ನೂರ್ಮಠ ಅವರು ಲೋಕಯುಕ್ತರಾಗುವುದು ಬೇಡ ಎಂದು ಸಾರಿ ಹೇಳಲು ಮುಂದೆ ಬರುತ್ತಿಲ್ಲ. ರಾಜ್ಯದ ಮಾಧ್ಯಮಗಳಿಗೆ ಹಿಡಿದ ರೋಗವಾದರೂ ಏನು?

  Reply
 2. prasad raxidi

  ರವಿ ಭ್ರಷ್ಟಾಚಾರದ ನೂರಾರು ಮುಖಗಳಲ್ಲಿ ಇದೊಂದು ಅಷ್ಟೆ, ನೀವು ಪ್ರತಿಯೊಬ್ವ ಶಾಸಕರ ಮನೆಯಮುಂದೆ ನಿಂತುನೋಡಿ ಹಣಕ್ಕಾಗಿ ಕಾದುನಿಲ್ಲುವ ಜನರ, ಪಕ್ಷದಕಾರ್ಯಕರ್ತರೆಂದು ಹೇಳಿಕೊಳ್ಳುವವರ ದಂಡೇ ಇರುತ್ತದೆ. ಹಣಸಿಕ್ಕಿದವರು ಇನ್ನೊಮ್ಮೆ ಹಣ ಸಿಗುವವವರೆಗೆ ಅವರನ್ನು ಹಾಡಿ ಹೊಗಳುತ್ತಲೂ, ಸಿಗದವರು ಆ ಕ್ಷಣದಿಂದಲೇ ಅವರನ್ನು ದೂರುತ್ತಲೂ ಇರುತ್ತಾರೆ. ಈ ಜನಪ್ರತಿನಿಧಿಗಳೂ ಅಷ್ಟೆ ಅಂತವರಿಂದಲೇ ತಾವು ಆಯ್ಕೆಯಾಗಿರುವುದೆಂದು ತಿಳಿದುಕೊಂಡು ಏನೇನೋ ಮಾಡಿ ಅವರನ್ನು ತೃಪ್ತಿ ಪಡಿಸುತ್ತಲೇ ಇರುತ್ತಾರೆ.ಈ ಸಾಲಿಗೆ ಅನೇಕಜನ ಮಾಧ್ಯಮದವರು, ಸಾಮಾಜಿಕ ಸೇವೆಯ ಬೋರ್ಡು ತಗುಲಿಸಿಕೊಂಡವರು ಸೇರುತ್ತಾರೆ, ಇದಕ್ಕೆ ಯಾವ ಪಕ್ಷವೂ- ಶಾಸಕರೂ, ಹೊರತಲ್ಲ.

  Reply
 3. prasad raxidi

  ರವಿ ಭ್ರಷ್ಟಾಚಾರದ ನೂರಾರು ಮುಖಗಳಲ್ಲಿ ಇದೊಂದು ಅಷ್ಟೆ, ನೀವು ಪ್ರತಿಯೊಬ್ವ ಶಾಸಕರ ಮನೆಯಮುಂದೆ ನಿಂತುನೋಡಿ ಹಣಕ್ಕಾಗಿ ಕಾದುನಿಲ್ಲುವ ಜನರ, ಪಕ್ಷದಕಾರ್ಯಕರ್ತರೆಂದು ಹೇಳಿಕೊಳ್ಳುವವರ ದಂಡೇ ಇರುತ್ತದೆ. ಹಣಸಿಕ್ಕಿದವರು ಇನ್ನೊಮ್ಮೆ ಹಣ ಸಿಗುವವವರೆಗೆ ಅವರನ್ನು ಹಾಡಿ ಹೊಗಳುತ್ತಲೂ, ಸಿಗದವರು ಆ ಕ್ಷಣದಿಂದಲೇ ಅವರನ್ನು ದೂರುತ್ತಲೂ ಇರುತ್ತಾರೆ. ಈ ಜನಪ್ರತಿನಿಧಿಗಳೂ ಅಷ್ಟೆ ಅಂತವರಿಂದಲೇ ತಾವು ಆಯ್ಕೆಯಾಗಿರುವುದೆಂದು ತಿಳಿದುಕೊಂಡು ಏನೇನೋ ಮಾಡಿ ಅವರನ್ನು ತೃಪ್ತಿ ಪಡಿಸುತ್ತಲೇ ಇರುತ್ತಾರೆ.ಈ ಸಾಲಿಗೆ ಅನೇಕಜನ ಮಾಧ್ಯಮದವರು, ಸಾಮಾಜಿಕ ಸೇವೆಯ ಬೋರ್ಡು ತಗುಲಿಸಿಕೊಂಡವರು ಸೇರುತ್ತಾರೆ, ಇದಕ್ಕೆ ಯಾವ ಪಕ್ಷವೂ- ಶಾಸಕರೂ, ಹೊರತಲ್ಲ..

  Reply
 4. Ananda Prasad

  ರಾಜ್ಯ ಸರ್ಕಾರ ಲೋಕಾಯುಕ್ತರ ನೇಮಕದ ವಿಷಯದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಮನಿಸಿದೆಯೆಂಬ ಮಾಹಿತಿ ಇದೆ. ಕಾನೂನು ಪ್ರಕಾರವೇ ಲೋಕಾಯುಕ್ತರ ನೇಮಕದ ಪ್ರಕ್ರಿಯೆ ನಡೆಸಿದರೂ ರಾಜ್ಯಪಾಲರು ಇಲ್ಲ ಸಲ್ಲದ ನೆವ ಹೇಳಿ ನೇಮಕಕ್ಕೆ ಸಹಿ ಹಾಕುತ್ತಿಲ್ಲ, ಲೋಕಾಯುಕ್ತರ ನೇಮಕದಲ್ಲಿ ರಾಜ್ಯಪಾಲರ ಪಾತ್ರ ಎಷ್ಟು ಎಂಬ ಬಗ್ಗೆ ಸ್ಪಷ್ಟ ಪಡಿಸುವಂತೆ ಕೊರಲಾಗುವುದೆಂದು ಹೇಳಲಾಗಿದೆ. ನೈತಿಕವಾಗಿ ನೋಡಿದರೆ ರಾಜ್ಯಪಾಲರ ಕ್ರಮ ಅತ್ಯಂತ ಸಮರ್ಥನೀಯ. ಲೋಕಾಯುಕ್ತರ ಹುದ್ಧೆಗೆ ನೇಮಕವಾಗುವವರು ನಿಷ್ಕಳಂಕರಾಗಿರಬೇಕು ಎಂಬುದು ಅಪೇಕ್ಷಣೀಯ. ರಾಜ್ಯ ಸರ್ಕಾರದ ಹಲವು ಸಚಿವರು, ಮಾಜಿ ಮುಖ್ಯ ಮಂತ್ರಿ ಸೇರಿದಂತೆ ಹಲವರು ಲೋಕಾಯುಕ್ತರ ಮುಂದೆ ಆರೋಪಿಗಳಾಗಿ ನಿಂತಿರುವಾಗ ಅದೇ ಸರ್ಕಾರ ಕಳಂಕಿತ ವ್ಯಕ್ತಿಯೊಬ್ಬರನ್ನು ಲೋಕಾಯುಕ್ತರಾಗಿ ನೇಮಿಸಲು ಪದೇ ಪದೇ ಹಠ ಹಿಡಿಯುವುದು ಏನನ್ನು ಸೂಚಿಸುತ್ತದೆ? ಸರ್ಕಾರ ಲೋಕಾಯುಕ್ತ ಕಾನೂನು ಪ್ರಕಾರವೇ ನೇಮಕಾತಿ ಶಿಫಾರಸು ಕಳುಹಿಸಿದರೂ ಕಳುಹಿಸಿದ ವ್ಯಕ್ತಿಯ ಬಗ್ಗೆ ರಾಜ್ಯಪಾಲರಿಗೆ ದೂರು ಬಂದಿರುವಾಗ ರಾಜ್ಯಪಾಲರು ಅದಕ್ಕೆ ಕಣ್ಣು ಮುಚ್ಚಿ ಸಹಿ ಹಾಕಬೇಕೆಂದು ಅಪೇಕ್ಷಿಸುವುದು ನೈತಿಕವಾಗಿ ಸರಿಯಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕಳಂಕಿತ ವ್ಯಕ್ತಿಯೊಬ್ಬ ಲೋಕಾಯುಕ್ತ ಹುದ್ಧೆಗೆ ಬಂದರೆ ರಾಜ್ಯ ಸರ್ಕಾರದ ವಿಶ್ವಾಸಾರ್ಹತೆ ಕುಸಿಯುವುದು ಖಚಿತ ಎಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಡ.

  Reply

Leave a Reply

Your email address will not be published.