ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 6)


– ಡಾ.ಎನ್.ಜಗದೀಶ ಕೊಪ್ಪ   


ಕಾರ್ಬೆಟ್‌ ಉದ್ಯೋಗಕ್ಕೆ ಹೊರಟು ನಿಂತಾಗ ಆತನಿಗೆ ಕೇವಲ ಹದಿನೇಳೂವರೆ ವರ್ಷ ವಯಸ್ಸು. 19 ನೇ ಶತಮಾನದ ಅಂತ್ಯದಲ್ಲಿ ಭಾರತದ ರೈಲ್ವೆ ವ್ಯವಸ್ಥೆಗೆ ಬ್ರಿಟೀಷರು ಹೆಚ್ಚಿನ ಆಧ್ಯತೆ ನೀಡಿದ್ದರು. ಇದರಲ್ಲಿ ಅವರ ಸ್ವಾರ್ಥವು ಇತ್ತು. ಬಹುಭಾಷೆ, ಬಹುಮುಖಿ ಸಂಸ್ಕೃತಿಯ ಈ ನೆಲದಲ್ಲಿ ಅವರು ಏಕ ಕಾಲಕ್ಕೆ ಹಲವಾರು ಸಂಸ್ಥಾನಗಳ ಜೊತೆ ಒಡನಾಡಬೇಕಿತ್ತು. ಹಾಗೆಯೆ ಹೋರಾಟ ನಡೆಸಬೇಕಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಬೆಳೆಯುತಿದ್ದ ಹತ್ತಿ, ಎಣ್ಣೆಕಾಳು ಮುಂತಾದುವುಗಳನ್ನು ಬಂದರು ಪಟ್ಟಣಗಳಿಗೆ  ಸಾಗಿಸಿ ಆ ಮೂಲಕ ಇಂಗ್ಲೇಂಡ್‌ಗೆ ರವಾನಿಸಬೇಕಿತ್ತು. ಆಗಿನ ಭಾರತದ ಕಚ್ಛಾ ರಸ್ತೆಗಳು ಪ್ರಯಾಣಕ್ಕೆ, ಸರಕು ಸಾಗಾಣಿಕೆಗೆ ಯೋಗ್ಯವಾಗಿರಲಿಲ್ಲ. ಈ ಎಲ್ಲಾ ದೃಷ್ಟಿಯಿಂದ ಬ್ರಿಟೀಷರು ರೈಲು ಮಾರ್ಗಕ್ಕೆ ಒತ್ತು ನೀಡಿದ್ದರು.

ಆಗಿನ ಕಾಲದ ರೈಲು ಇಂಜಿನ್‌ಗಳು ಬಿಸಿನೀರಿನ ಒತ್ತಡದಿಂದ ಉಂಟಾಗುವ ಹಬೆಯಿಂದ ಚಲಿಸುತಿದ್ದವು. ಕಲ್ಲಿದ್ದಲು ಬಳಕೆಗೆ ಮುನ್ನ ಉಗಿಬಂಡಿಗಳಲ್ಲಿ ನೀರು ಕುದಿಸಲು ಕಟ್ಟಿಗೆಗಳನ್ನು ಬಳಸಲಾಗುತಿತ್ತು. ಆನಂತರದ ದಿನಗಳಲ್ಲಿ ಕಲ್ಲಿದ್ದಲು ಬಳಕೆಗೆ ಬಂತು. ಭಾರತದಲ್ಲಿ ಯಥೇಚ್ಛವಾಗಿ ಬೆಳೆದಿದ್ದ ಅರಣ್ಯದ ಮರಗಳು 20ನೇ ಶತಮಾನದ ಆದಿಭಾಗದಿಂದ ಹಿಡಿದು ಅಂತ್ಯದವರೆಗೆ ರೈಲ್ವೆ ಹಳಿ ಮಾರ್ಗಕ್ಕೆ ಬಳಕೆಯಾಗಿವೆ. ಇತ್ತೀಚೆಗೆ ಹಳಿಗಳ ಕೆಳಗೆ ಸಿಮೆಂಟ್‌ನಿಂದ ತಯಾರಿಸಲಾದ ದಿಮ್ಮಿಗಳನ್ನು ಬಳಸಲಾಗುತಿದ್ದು, ಭಾರತದ ಅರಣ್ಯ ಸ್ವಲ್ಪ ಮಟ್ಟಿಗೆ ಶೋಷಣೆಯಿಂದ ಪಾರಾಗಿದೆ.

ಜಿಮ್ ಕಾರ್ಬೆಟ್‌ ರೈಲ್ವೆ ಉದ್ಯೋಗವನ್ನು ಬಯಸಿ ಪಡೆಯಲಿಲ್ಲ. ಅದು ಅವನಿಗೆ ಅನಿರಿಕ್ಷೀತವಾಗಿ ದೊರೆಯಿತು. ಇದಕ್ಕೂ ಮುನ್ನ ಅವನು ಹಲವಾರು ಸಂದರ್ಶನಗಳನ್ನು ಎದುರಿಸಿದ್ದ. ಸಣ್ಣ  ವಯಸ್ಸಿನ ಕಾರಣ ಉದ್ಯೋಗದಿಂದ ವಂಚಿತನಾಗಿದ್ದ. ರೈಲ್ವೆ ಸಂದರ್ಶನಕ್ಕೆ ಬಂದಾಗ ವಯಸ್ಸು ಸಾಲದು ಎಂದಾಗ, ಕಾರ್ಬೆಟ್‌ ಅಧಿಕಾರಿಗಳಿಗೆ ದಿಟ್ಟ ಉತ್ತರ ಕೊಟ್ಟ: “ಈ ವರ್ಷ ಬಂದಾಗ ವಯಸ್ಸು ಸಾಲದು ಅನ್ನುತ್ತೀರಿ, ಮುಂದಿನ ವರ್ಷ ಬಂದರೆ ವಯಸ್ಸು ಮೀರಿ ಹೋಗಿದೆ ಎನ್ನುತ್ತೀರಿ. ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ವ್ಯಕ್ತಿಗೆ ವಯಸ್ಸಿನ ನೆಪದಲ್ಲಿ ಅಡ್ಡಿ ಮಾಡಬಾರದು.” ಕಾರ್ಬೆಟ್‌ನ ಈ ಮಾತುಗಳು ಅಧಿಕಾರಿಗಳಿಗೆ ಮೆಚ್ಚುಗೆಯಾಗಿ ಆ ಕ್ಷಣದಲ್ಲೆ ಅವನಿಗೆ ಉದ್ಯೋಗ ಪತ್ರ ನೀಡಿದರು.

ಕಾರ್ಬೆಟ್‌ನ ಮೊದಲ ಉದ್ಯೋಗ ಪರ್ವ ಪ್ರಾರಂಭವಾದದ್ದು ಬಿಹಾರ್ ರಾಜ್ಯದ ಭಕ್ತಿಯಾರ್‌ಪುರ ಎಂಬ ಆರಣ್ಯ ಪ್ರದೇಶದಲ್ಲಿ. ರೈಲು ಇಂಜಿನ್‌ಗಳಿಗಾಗಿ ಮರಗಳನ್ನು ಕಡಿದು ಅವುಗಳನ್ನು ಮೂರು ಅಡಿ ಉದ್ದಕ್ಕೆ ಕತ್ತರಿಸಿ ಸಂಗ್ರಹಿಸುವ ಕಾರ್ಯದ ಉಸ್ತುವಾರಿಯನ್ನು ಅವನು ನೋಡಿಕೊಳ್ಳಬೇಕಾಗಿತ್ತು. ನೈನಿತಾಲ್, ಕಲದೊಂಗಿ, ಹಾಗೂ ಸುತ್ತಮುತ್ತ ಹಳ್ಳಿಗಳನ್ನ ಹೊರತು ಪಡಿಸಿದರೆ, ಎಂದೂ ಹೊರಗೆ ಹೋಗದ ಕಾರ್ಬೆಟ್‌ ಮೊದಲ ಬಾರಿಗೆ ತನ್ನ ಕುಟುಂಬವನ್ನು ತೊರೆದು 750ಕ್ಕೂ ಹೆಚ್ಚು ಕಿಲೋಮೀಟರ್ ದೂರದ ಬಿಹಾರಕ್ಕೆ ರಸ್ತೆ, ರೈಲು ಪ್ರಯಾಣದ ಮೂಲಕ ಐದು ದಿನ ಪ್ರಯಾಣಿಸಿ ಭಕ್ತಿಯಾರ್‌ಪುರ್ ರೈಲ್ವೆ ಕಚೇರಿಯಲ್ಲಿ ನೇಮಕಾತಿ ಪತ್ರ ಸಲ್ಲಿಸಿ ಉದ್ಯೋಗಕ್ಕೆ ಸೇರ್ಪಡೆಗೊಂಡ.

ಬೆಂಗಾಲ್ ಅಂಡ್ ನಾರ್ತ್ ವೆಸ್ಷ್ರನ್ ರೈಲ್ವೆ ಉದಯೋಗಿಯಾದ ನಂತರ ಭಕ್ತಿಯಾರ್‌ಪುರದಿಂದ 16 ಕಿಲೊಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ಕಾರ್ಬೆಟ್‌ ತೆರಳಿದಾಗ ನಿಜಕ್ಕೂ ಮೊದಲು ಆತ ಅಂಜಿದ. ತಣ್ಣನೆಯ ಗಿರಿಧಾಮದಲ್ಲಿ ಹುಟ್ಟಿ ಬೆಳೆದು ಬಂದಿದ್ದ ಕಾರ್ಬೆಟ್‌ಗೆ ಬಿಹಾರದ ಬಿಸಿಲು, ದೂಳು, ಅರಣ್ಯದ ಸೊಳ್ಳೆಗಳು, ಎಡಬಿಡದೆ ಕಾಡುವ ಸಾಂಕ್ರಮಿಕ ರೋಗಗಳು, ಮಳೆ ಈ ಎಲ್ಲವೂ ಸವಾಲಾಗಿ ನಿಂತವು. ಆದರೆ, ಅರಣ್ಯ ಯಾವಾಗಲೂ ಅವನ ಅಚ್ಚು ಮೆಚ್ಚಿನ ತಾಣವಾಗಿದ್ದರಿಂದ, ಮರ ಕಡಿಯುವ ಕಾರ್ಮಿಕರ ಜೊತೆ ತಾನು ಒಂದು ಗುಡಾರ ಹಾಕಿಕೊಂಡು ಅಲ್ಲೆ ನೆಲೆ ನಿಲ್ಲಲು ನಿರ್ಧರಿಸಿದ.

ಒಬ್ಬ ಆಂಗ್ಲ ಯುವ ಅಧಿಕಾರಿ ತಮ್ಮ ಜೊತೆ ವಾಸಿಸಲು ನಿರ್ಧರಿಸಿದ್ದು, ಸ್ಥಳೀಯ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡುವುದು, ಬಡ ಕೂಲಿಕಾರ್ಮಿಕರನ್ನು ಪ್ರೀತಿಯಿಂದ ಕಾಣುವುದು, ಇವೆಲ್ಲವೂ ಮರ ಕಡಿಯಲು ಬಂದ ಕೂಲಿಕಾರ್ಮಿಕರ ಪಾಲಿಗೆ ಸೋಜಿಗದ ಸಂಗತಿಗಳಾದವು. ಜಿಮ್ ಕಾರ್ಬೆಟ್‌ ದಿನನಿತ್ಯ ಅವರೊಡನೆ ಒಡನಾಡುತ್ತಾ, ಕೆಲಸ ಮಾಡತೊಡಗಿದ. ಕಾರ್ಮಿಕರು ಅಸ್ವಸ್ತರಾದರೆ ಅವರಿಗೆ ಚಿಕಿತ್ಸೆ ನೀಡುವುದು, ಜ್ವರ ಅಥವಾ ಇನ್ನಿತರೆ ಖಾಯಿಲೆಗಳಿಗೆ ಒಳಗಾದರೆ, ತಾನು ತಂದಿದ್ದ ಔಷಧಿಗಳನ್ನು ನೀಡಿ ಉಪಚರಿಸುವುದು, ಹೀಗೆ ಅವರ ಪಾಲಿಗೆ ಅಧಿಕಾರಿಯಾಗಿ, ಒಡನಾಡಿಯಾಗಿ, ಹಿತಚಿಂತಕನಾಗಿ, ವೈದ್ಯನಾಗಿ ಕಾರ್ಬೆಟ್‌ ಅವರ ಪಾಲಿಗೆ ನಡೆದಾಡುವ ದೇವರಾದ.

ಮರದ ಕಟ್ಟಿಗೆಗಳನ್ನು ಎತ್ತಿನ ಗಾಡಿಗಳ ಮೂಲಕ ಭಕ್ತಿಯಾರ್‌ಪುರ ರೈಲ್ವೆ ನಿಲ್ದಾಣಕ್ಕೆ ಸಾಗಿಸಲಾಗುತಿತ್ತು. ವಾರಕ್ಕೊಮ್ಮೆ ರೈಲ್ವೆ ನಿಲ್ದಾಣದಿಂದ ಹಣ ತೆಗೆದುಕೊಂಡು ಹೋಗಿ ಕಾರ್ಮಿಕರಿಗೆ ಬಟವಾಡೆ ಮಾಡುತಿದ್ದ. ಮನೆಬಿಟ್ಟು ಹೊರಜಗತ್ತಿಗೆ ಕಾರ್ಬೆಟ್‌ ತೆರೆದುಕೊಳ್ಳುತಿದ್ದಂತೆ ತನ್ನ ಸಂಸ್ಕೃತಿಗೆ ವಿಭಿನ್ನವಾದ ಭಾರತೀಯ ಸಂಸ್ಕೃತಿ, ಭಾಷೆ, ಜನರ ಬಡತನ, ಅವರ ಪ್ರಾಮಾಣಿಕತನ, ಒಂದು ತುತ್ತು ಅನ್ನಕ್ಕಾಗಿ ಅವರು ಬಿಸಿಲು ಮಳೆಯೆನ್ನದೆ ದುಡಿಯುವ ವೈಖರಿ ಇವೆಲ್ಲವೂ ಅವನನ್ನು ಹೊಸ ಮನುಷ್ಯನನ್ನಾಗಿ ಪರಿವರ್ತಿಸಿಬಿಟ್ಟವು.

ಕೇವಲ ಎರಡು ವರ್ಷಗಳ ಅವಧಿಯಲ್ಲಿ ಜಿಮ್ ಕಾರ್ಬೆಟ್‌ ನಿಜ ಭಾರತವೆಂದರೇನು ಎಂಬುದನ್ನು ಅರಿತುಕೊಂಡ. ಅಲ್ಲದೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನೂ ತನ್ನದಾಗಿಸಿಕೊಂಡ. ಒಬ್ಬ ವಿದೇಶಿ ಮೂಲದ ವ್ಯಕ್ತಿಯೊಬ್ಬ ಬಿಸಿಲು, ಮಳೆ, ಧೂಳೆನ್ನದೆ ತಮ್ಮ ಜೊತೆ ಒಡನಾಡಿದ್ದು ಅಲ್ಲಿನ ಕೂಲಿಕಾರ್ಮಿಕರಿಗೆ ಆಶ್ಚರ್ಯವಾಗಿತ್ತು. ಆ ಕಾಲದಲ್ಲಿ ಸಾಮಾನ್ಯವಾಗಿ ಒಂಟಿಯಾಗಿರುತಿದ್ದ ಬ್ರಿಟೀಷ್ ಅಧಿಕಾರಿಗಳು ಕುಡಿತಕ್ಕೆ ದಾಸರಾಗಿ ಇಲ್ಲವೆ ಸ್ಥಳೀಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾಯುವುದು ವಾಡಿಕೆಯಾಗಿತ್ತು. ಇದಕ್ಕೆ ಭಿನ್ನವಾಗಿ ಕಾರ್ಬೆಟ್‌ ಅಪ್ಪಟ ಭಾರತೀಯನಂತೆ ಬದುಕಿದ. ತನ್ನ ಬಾಲ್ಯದಲ್ಲಿ ಕಲದೊಂಗಿ, ಚೋಟಾ ಹಲ್ದಾನಿ ಹಾಗೂ ಸುತ್ತಮುತ್ತಲಿನ ಹಳ್ಳಿಗರ ಜೊತೆ ಅವನು ಸಂಪಾದಿಸಿದ್ದ ಸ್ನೇಹ ಇಲ್ಲಿ ಉಪಯೋಗಕ್ಕೆ ಬಂತು. ಅವನು ಅಲ್ಲಿನ ಕಾಡಿನೊಳಗೆ ಬಿಸಿಲು ಮಳೆಯೆನ್ನದೆ ತಿರುಗಾಟ ನಡೆಸಿದ್ದು ಮಲೇರಿಯಾ, ಅಥವಾ ಇನ್ನಿತರೆ ಜ್ವರಕ್ಕೆ ಬಲಿಯಾಗದಂತೆ ಕಾರ್ಬೆಟ್‌ನ ಶರೀರ ಪ್ರತಿರೋಧದ ಶಕ್ತಿಯನ್ನು ವೃದ್ಧಿಸಿಕೊಂಡಿತ್ತು.

ಕಾರ್ಬೆಟ್‌ ಬಿಹಾರಿನ ಈ ಸ್ಥಳಕ್ಕೆ ಬಂದ ಮೇಲೆ ಅವನು ಕಳೆದುಕೊಂಡ ಒಂದು ಅವಕಾಶವೆಂದರೆ, ಅವನ ಶಿಖಾರಿ ಹವ್ಯಾಸ. ಬರುವಾಗಲೇ ಒಂದು ರೈಫಲ್, ಮೀನು ಹಿಡಿಯುವ ಗಾಳಗಳು, ಔಷಧಿಗಳು ಎಲ್ಲವನ್ನು ತಂದಿದ್ದ. ಪ್ರತಿನಿತ್ಯ ನಿಗದಿತ ಗುರಿಯ ಪ್ರಮಾಣದಷ್ಟು ಮರಗಳನ್ನು ಕಡಿದು ಅವುಗಳನ್ನು ತುಂಡರಿಸಬೇಕಿತ್ತು. ಈ ವಿಷಯದಲ್ಲಿ ಕಾರ್ಬೆಟ್‌ ಮೇಲಿನ ಪ್ರೀತಿ ಮತ್ತು ಗೌರವದಿಂದ ಕಾರ್ಮಿಕರು ಗುರಿಯನ್ನು ಮೀರಿ ಮರಗಳನ್ನು ಕಡಿದದ್ದು ಉಂಟು. ಇಡೀ ದಿನದ ಕೆಲಸ ಮುಗಿಸಿ ತನ್ನ ಗುಡಾರಕ್ಕೆ ಬರುವ ವೇಳೆಗೆ ಕತ್ತಲು ಕವಿಯುತಿತ್ತು. ಹಾಗಾಗಿ ಕಾಡಿನ ಶಿಖಾರಿ ಸಾಧ್ಯವಾಗುತ್ತಿರಲಿಲ್ಲ. ಅಪರೂಪಕ್ಕೆ ನದಿ ತಿರಕ್ಕೆ ಹೋಗಿ ಬೆಳದಿಂಗಳಲ್ಲಿ ಮೀನು ಹಿಡಿದು ತರುತಿದ್ದ. ಮಾಂಸಹಾರಿಯಾಗಿದ್ದ ಕಾರ್ಬೆಟ್‌ ಭಕ್ತಿಯಾರ್‌ಪುರ ಆರಣ್ಯಕ್ಕೆ ಬಂದ ನಂತರ ರೋಟಿ, ದಾಲ್ (ಬೇಳೆಯ ಗಟ್ಟಿಯಾದ ಸಾಂಬಾರ್) ಹಾಗೂ ಮೊಸರನ್ನಕ್ಕೆ ಒಗ್ಗಿ ಹೋಗಿದ್ದ. ಮರ ಕಡಿಯುವ ಸಂದರ್ಭದಲ್ಲಿ ಅಪರೂಪಕ್ಕೆ ಕಾಡುಕೋಳಿಗಳು ಸಿಕ್ಕರೆ ಮಾತ್ರ ಟಿಕ್ಕ ಮಾಡಿ ಉಪಯೋಗಿಸುತಿದ್ದ.( ಟಿಕ್ಕ ಎಂದರೆ, ಮಸಾಲೆ, ಉಪ್ಪು, ಮೆಣಸು ಬೆರತ ಕೋಳಿ ಮಾಂಸವನ್ನು ಬೆಂಕಿಯ ಕೆಂಡದಲ್ಲಿ ಬೇಯಿಸುವುದು.)

ಜಿಮ್ ಕಾರ್ಬೆಟ್‌ ಎಂದೂ ಪರಿಸರ ರಕ್ಷಣೆಯ ಬಗ್ಗೆಯಾಗಲಿ, ಜೀವ ಜಾಲದ ಎಲ್ಲಾ ಸಂತತಿಗಳ ಬಗ್ಗೆ ಗಂಭೀರವಾಗಿ ಯೋಚಿಸಿದವನಲ್ಲ. ಅರಣ್ಯವಿರುವುದು, ಪ್ರಾಣಿ, ಪಕ್ಷಿಗಳು ಇರುವುದು ಮನುಷ್ಯನ ಮೋಜಿನ ಬೇಟೆಗಾಗಿ ಎಂದೂ ಅವನೂ ನಂಬಿದ್ದ. ಆ ಕಾಲದ ಸಮಾಜದ ನಂಬಿಕೆಗಳು ಸಹ ಹಾಗೇ ಇದ್ದವು. ಕಡಿಮೆ ಜನಸಂಖ್ಯೆಯ ಕಾರಣ ಅರಣ್ಯ ನಾಶವಾಗಲಿ, ಪ್ರಾಣಿಗಳ ಸಂತತಿಯ ನಾಶವಾಗಲಿ ತಕ್ಷಣಕ್ಕೆ ಗೋಚರಿಸುತ್ತಿರಲಿಲ್ಲ. ಪ್ರತಿನಿತ್ಯ ಎರಡೂವರೆ ಎಕರೆ ಪ್ರದೇಶದ ಮರಗಳು ಕಾರ್ಬೆಟ್‌ ಕಣ್ಣೆದುರು ನೆಲಕ್ಕೆ ಉರುಳುತಿದ್ದಾಗ ಅವನೊಳಗೆ ಅರಿವಿಲ್ಲದಂತೆ ಪ್ರಜ್ಞೆಯೊಂದು ಜಾಗೃತವಾಯಿತು. ಇದಕ್ಕೆ ಕಾರಣವೂ ಇತ್ತು. ಮರವನ್ನು ಕಡಿದು ಉರುಳಿಸಿದಾಗ ಅದರಲ್ಲಿದ್ದ ಪಕ್ಷಿಯ ಗೂಡುಗಳು ಚಲ್ಲಾಪಿಲ್ಲಿಯಾಗಿ ತಾಯಿಲ್ಲದ ಮರಿಹಕ್ಕಿಗಳು ಕಣ್ಣೆದುರೇ ಪ್ರಾಣಬಿಡುವುದಕ್ಕೆ ಅವನು ಸಾಕ್ಷಿಯಾಗುತಿದ್ದ. ಆಹಾರ ಅರಸಿಹೋಗಿದ್ದ ತಾಯಿ ಹಕ್ಕಿಗಳು ಗೂಡು ಕಾಣದೆ, ತಮ್ಮ ಮರಿಗಳನ್ನು ಕಾಣದೆ ಆಕಾಶದಲ್ಲಿ ದಿಕ್ಕೆಟ್ಟು ಹಾರಾಡುವಾಗ ಅವನ ಮನ ಕಲಕುತಿತ್ತು.

ಮರಗಳು ಉರುಳಿ ಬೀಳುವ ರಭಸಕ್ಕೆ ಪೊದೆಯಲ್ಲಿದ್ದ ಎಷ್ಟೋ ಪ್ರಾಣಿಗಳ ಮರಿಗಳು ಸಾವನ್ನಪ್ಪುತಿದ್ದವು. ಮರಗಳು ಉರುಳುತಿದ್ದಂತೆ ಮಂಗಗಳು, ಅವುಗಳ ಮರಿಗಳು ಛೀರಿಡುತಿದ್ದವು. ಒಮ್ಮೆ ಪುಟ್ಟ ಸಾರಂಗದ ಮರಿಯೊಂದು ಕಾಲು ಮುರಿದ ಸ್ಥಿತಿಯಲ್ಲಿ ಕಾರ್ಬೆಟ್‌ಗೆ ಸಿಕ್ಕಿತು. ಅದನ್ನು ತನ್ನ ಗುಡಾರಕ್ಕೆ ತಂದು ಹಾಲುಣಿಸಿ ಸಾಕತೊಡಗಿದ. ಅದ ಕುಂಟುತ್ತಾ ಒಡಾಡುವುದನ್ನು ನೋಡಲಾಗದೆ,  ಪಕ್ಕದ ಹಳ್ಳಿಯಿಂದ ಜಾನುವಾರುಗಳ ಕಾಲಿನ ಮೂಳೆ ಮುರಿದಾಗ, ಸರಿ ಪಡಿಸುವ ನಾಟಿ ವೈದ್ಯನನ್ನು ಕರೆಸಿ ಅದರ ಕಾಲಿಗೆ ಬಿದಿರಿನ ದಬ್ಬೆಯ ಕಟ್ಟು ಹಾಕಿಸಿ,ವೈದ್ಯ ನೀಡಿದ. ಯಾವುದೋ ವನಸ್ಪತಿ ತೈಲ, ಸೊಪ್ಪಿನ ರಸಗಳಗಳನ್ನು ಲೇಪಿಸಿ ಹಾರೈಕೆ ಮಾಡಿದ.

ಸಾರಂಗದ ಮರಿ ಚೇತರಿಸಿಕೊಂಡ ನಂತರ ಕಾಡಿಗೆ ಬಿಡಬೇಕು ಎಂದು ಜಿಮ್ ಕಾರ್ಬೆಟ್‌ ಆಲೋಚಿಸಿದ್ದ.  ಆದರೇ, ಅದು ಒಂದು ಕ್ಷಣವೂ ಅವನನ್ನು ಬಿಟ್ಟು ಇರುತ್ತಿರಲಿಲ್ಲ. ಕಾರ್ಬೆಟ್‌ ಕಾರ್ಮಿಕರು ಮರ ಕಡಿಯುತಿದ್ದ ಸ್ಥಳಕ್ಕೆ ಹೋದರೆ ಅದು ಅವನನ್ನು ಹಿಂಬಾಲಿಸುತಿತ್ತು. ಅವನು ಆರಣ್ಯದಲ್ಲಿ ಗುಡಾರ ಬದಲಾಯಿಸಿದಾಗ ಕೂಡ ಅವನ ಹಿಂದೆ ಸಾಗುತಿತ್ತು. ಈ ಮೂಕ ಪ್ರಾಣಿಯ ಪ್ರೀತಿ ಮತ್ತು ನಡುವಳಿಕೆಗಳು  ಕಾರ್ಬೆಟ್‌ನ ಚಿಂತನೆಗಳನ್ನ ಅಲುಗಾಡಿಸಿ ಸಂಪೂರ್ಣ ಬದಲಿಸಿಬಿಟ್ಟವು. ಇದೇ ವೇಳೆಗೆ ರೈಲ್ವೆ ಇಲಾಖೆ ಉಗಿಬಂಡಿಗಳಿಗೆ ಉರುವಲಾಗಿ ಮರದಕಟ್ಟಿಗೆಗಳನ್ನು ಬಳಸುವುದು ದುಬಾರಿ ಎನಿಸಿದ್ದರಿಂದ ಕಲ್ಲಿದ್ದಲು ಬಳಕೆಗೆ ನಿರ್ಧರಿಸಿ ಸುಧಾರಿತ ಇಂಜಿನ್‌ಗಳನ್ನು ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿತು.

ಭಕ್ತಿಯಾರ್‌ಪುರ್ ಅರಣ್ಯ ಪ್ರದೇಶದಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ ಕಾರ್ಬೆಟ್‌ ಸಮಷ್ಟೀಪುರದ ರೈಲ್ವೆ ಕಚೇರಿಗೆ ಹೋಗಿ ಸಂಪೂರ್ಣ ಲೆಕ್ಕಪತ್ರವನ್ನು ಒಪ್ಪಿಸಿದ. ಈ ಸಂದರ್ಭದ ಒಂದು ಘಟನೆ ರೈಲ್ವೆ ಅಧಿಕಾರಿಗಳನ್ನ ಚಕಿತಗೊಳಿಸಿತು. ಮರದ ಕಟ್ಟಿಗೆಗಳನ್ನು ಎತ್ತಿ ಗಾಡಿಯಲ್ಲಿ ಸಾಗಿಸುತಿದ್ದ ಒಬ್ಬ ವ್ಯಕ್ತಿ 200 ರೂಪಾಯಿಗಳನ್ನು ಯಾವುದೋ ಕಾರಣಕ್ಕಾಗಿ ಪಡೆದಿರಲಿಲ್ಲ. ಆತನ ಹಳ್ಳಿಗೆ ಹೋಗಿ ಹುಡುಕಿ ಹಣ ತಲುಪಿಸುವ ಪ್ರಯತ್ನವನ್ನು ಸಹ ಕಾರ್ಬೆಟ್‌ ಮಾಡಿದ್ದ. ಆದರೆ, ಆ ವ್ಯಕ್ತಿ ಬೇರೆ ಗುತ್ತಿಗೆ ಪಡೆದು ದೂರದ ಊರಿಗೆ ಹೊರಟು ಹೋಗಿದ್ದ. ಆ ಹಣವನ್ನು ಕಛೇರಿಗೆ ತಲುಪಿಸಿ ಕಾರ್ಬೆಟ್‌ ಆ ವ್ಯಕ್ತಿ ಎಂದಾದರೂ ಬಂದರೆ, ಇದನ್ನು ತಲುಪಿಸಿ ಎಂದು ಅಧಿಕಾರಿಗಳನ್ನು ವಿನಂತಿಸಿಕೊಂಡ. ಇಂಗ್ಲಿಷ್ ಬಾರದ, ಸಮಷ್ಟೀಪುರದಲ್ಲಿ ಕಛೇರಿ ಇದೆ ಎಂದು ತಿಳಿಯದ ಆ ರೈತ ಹಣಕ್ಕಾಗಿ ಬರುವ ಸಾಧ್ಯತೆ ಇರಲಿಲ್ಲ. ಆ ವೇಳೆ 150 ರೂಪಾಯಿ ಸಂಬಳ ಪಡೆಯುತಿದ್ದ ಕಾರ್ಬೆಟ್‌ ಅನಾಯಾಸವಾಗಿ 200ರೂ.ಗಳನ್ನು ಜೇಬಿಗೆ ಇಳಿಸಬಹುದಿತ್ತು. ಆದರೆ, ಅವನ ಕುಟುಂಬ, ವಿಶೇಷವಾಗಿ ತಾಯಿ ಮೇರಿ ಕಲಿಸಿದ ಪ್ರಾಮಾಣಿಕತೆ ಪಾಠ ಅವನಿಗೆ ಅದಕ್ಕೆ ಆಸ್ಪದ ನೀಡಲಿಲ್ಲ.

ಮರಗಳ ಕಡಿತ ಮತ್ತು ಸಾಗಾಣಿಕೆಗಾಗಿ ಇತರೆ ಪ್ರದೇಶಕ್ಕೆ ಕಲಿಸಿದ್ದ ಇತರೆ ಅಧಿಕಾರಿಗಳು ನಿಗದಿತ ಗುರಿ ತಲುಪದೆ, ಇಲಾಖೆಗೆ ನಷ್ಟ ಉಂಟು ಮಾಡಿದ್ದರೆ, ಕಾರ್ಬೆಟ್‌ ಲಾಭ ತೋರಿಸಿದ್ದ. ಕಾರ್ಬೆಟ್‌ನ ವ್ಯಕ್ತಿತ್ವ, ಕೆಲಸದ ಬಗ್ಗೆ ಇದ್ದ ಬದ್ಧತೆ, ಪ್ರಾಮಾಣಿಕತೆ ಇವುಗಳಿಂದ ಪ್ರಭಾವಿತರಾದ ರೈಲ್ವೆ ಅಧಿಕಾರಿಗಳು ಆತನಿಗೆ 50 ರೂ ಸಂಬಳ ಹೆಚ್ಚಿಸಿ ಸಮಷ್ಟಿಪುರ ರೈಲ್ವೆ ನಿಲ್ದಾಣಕ್ಕೆ ಸಹಾಯಕ ಮಾಸ್ಟರ್ ಆಗಿ ನೇಮಕ ಮಾಡಿದರು.

ಸುಮಾರು ಎರಡು ವರ್ಷ ಕಾಲ ಕಾರ್ಬೆಟ್‌ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್, ಸ್ಟೋರ್‌ಕೀಪರ್, ಗೂಡ್ಸ್ ರೈಲುಗಳ ಗಾರ್ಡ್ ಆಗಿ ಸೇವೆ ಸಲ್ಲಿಸಿ ಉತ್ತರ ಭಾರತವನ್ನು ವಿಶೇಷವಾಗಿ ನೇಪಾಳದ ಗಡಿಭಾಗವನ್ನು ಪರಿಚಯಿಸಿಕೊಂಡ. ಕಾಡಿನ ನಡುವೆ ಇದ್ದ ಕಾರ್ಬೆಟ್‌ಗೆ ಹಲವು ಬಗೆಯ ಜನ, ಅವರ ಭಾಷೆ, ಸಂಸ್ಕೃತಿ ಈ ಅವಧಿಯಲ್ಲಿ ಪರಿಚಯವಾಯಿತು. ಅವನ ಅನುಭವ ಮತ್ತಷ್ಟು ವೃದ್ಧಿಸಿತು.

(ಮುಂದುವರೆಯುವುದು)

One thought on “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 6)

  1. Chandrashekhar BK

    Once i saw a film about jim corbett and i become very curious know about him but didnt find anything.but your story series is very gud and interesting.

    Reply

Leave a Reply

Your email address will not be published. Required fields are marked *