Daily Archives: February 7, 2012

`ಪ್ಯಾರ್ಗೆ ಆಗ್ಬುಟ್ಟೈತೆ…’ ಹಾಗೂ ಚಿತ್ರರಂಗದ ಬೌದ್ಧಿಕ ದಾರಿದ್ರ್ಯ

-ಬಿ.ಎಸ್.ಗೋಪಾಲ ಕೃಷ್ಣ

ಕರ್ನಾಟಕ ಸರ್ಕಾರದ ನೆರವು ಯಾಚಿಸುವಾಗ ಕನ್ನಡ ಚಿತ್ರ ನಿರ್ಮಪಕರು, ನಿರ್ದೇಶಕರು ಹಲವು ರೀತಿಯ ವಾದಗಳನ್ನ ಮುಂದಿಡುತ್ತಾರೆ. ಕನ್ನಡ ಭಾಷೆಯ ಅಭಿಮಾನ, ನಾಡು ನುಡಿಯ ಅಭಿವೃದ್ಧಿ, ಸಾಂಸ್ಕೃತಿಕ ವೈಶಿಷ್ಟ್ಯ- ಹೀಗೆ ತಮಗೆ ತಕ್ಕನಾದ ಬಣ್ಣದ ಮಾತುಗಳನ್ನಾಡಿ ಜನರ ತೆರಿಗೆಯ ಹಣದಿಂದ ಧನಸಹಾಯ, ಪ್ರಶಸ್ತಿ ಪುರಸ್ಕಾರ ಪಡೆಯುತ್ತಾರೆ. ಆದರೆ, ಚಿತ್ರ ನಿರ್ಮಾಣದ  ಸಂದರ್ಭದಲ್ಲಿ ಭಾಷೆ, ಸಂಸ್ಕೃತಿಗೆ ಸಬಂಧಿಸಿದ ವಿಚಾರಗಳನ್ನು ಒಂದೋ ನಿರ್ಲಕ್ಷ್ಯ ಮಾಡುತ್ತಾರೆ; ಇಲ್ಲವೇ ನಗೆಪಾಟಲಿನ ಅಂಶವನ್ನಾಗಿ ಚಿತ್ರಿಸಿ ತಮ್ಮ ಚಿಂತನಾ ದಾರಿದ್ರ್ಯವನ್ನು ತೋರ್ಪಡಿಸುತ್ತಾರೆ. ಇದಕ್ಕೆ ಇತ್ತೀಚಿನ ನಿದರ್ಶನ `ಗೋವಿಂದಾಯ ನಮಃ’ ಚಿತ್ರದ `ಪ್ಯಾರ್ಗೆ ಆಗ್ಬುಟ್ಟೈತೆ’ ಎನ್ನುವ ಹಾಡು.

`ಗೋವಿಂದಾಯ ನಮಃ’ ಪವನ್ ಒಡೆಯರ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ. ಕೋಮಲ್ ಚಿತ್ರದ ಹೀರೋ. ಈ ಚಿತ್ರದಲ್ಲಿ ಬರುವ `ಪ್ಯಾರ್ಗೆ ಆಗ್ಬುಟ್ಟೈತೆ’ ಎನ್ನುವ ಹಾಡು ಚಿತ್ರ ಬಿಡುಗಡೆಗೂ ಮುನ್ನವೇ ಜನರ ಕುರೂಹಲ ಕೆರಳಿಸಿ, ಜನಪ್ರಿಯತೆ ಗಳಿಸಿದೆ. ಅಲ್ಪ ಅವಧಿಯಲ್ಲೇ ಯೂ ಟ್ಯೂಬ್ನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ನೋಡಿದ್ದಾರೆ ಎಂದೂ, ಧನುಷ್ನ ಕೊಲವೆರಿ ಡಿ ಹಾಡಿನಂತೆ ಇದೂ ಒಂದು ದಾಖಲೆ ಎಂದೂ ಚಾನೆಲ್ಗಳು ಬೊಂಬಡಾ ಬಾರಿಸುತ್ತಿವೆ.

ನಿರ್ದೇಶಕ ಪವನ್ ಒಡೆಯರ್ ಬರೆದಿರುವ ಈ ಹಾಡಿನ ಸಾಹಿತ್ಯದಲ್ಲಾಗಲಿ, ಚಿತ್ರಿಸಿರುವ ಶೈಲಿಯಲ್ಲಾಗಲಿ ವಿಶೇಷವಾದದ್ದೇನೂ ಇಲ್ಲ; ಉರ್ದು ಮಿಶ್ರಿತ ಕನ್ನಡದ ಬಳಕೆ, ಕೋಮಲ್ರ ಯಥಾಪ್ರಕಾರದ ಕೋಡಂಗಿ ಚೇಷ್ಟೆ ಹಾಗೂ ಗುರುಕಿರಣ್ರ ಜಾಣ ಕಳ್ಳತನದ ಸಂಗೀತ ಸಂಯೋಜನೆ. ಅಂಬರೀಶ್ ಹಾಗೂ ರಮೇಶ್ ಅರವಿಂದ್ ಅಭಿನಯಿಸಿದ್ದ `ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ’ ಚಿತ್ರದ ಹಾಡೊಂದರ ಜೊತೆ `ಪ್ಯಾರ್ಗೆ ಆಗ್ಬುಟ್ಟೈತೆ’ ಹಾಡನ್ನು ಹೋಲಿಸಿ ನೋಡಿದ್ರೆ ಇದರ ಸಾಚಾತನ ತಿಳಿಯುತ್ತದೆ. ಆದರೆ, ಈ `ಪ್ಯಾರ್ಗೆ ಆಗ್ಬುಟ್ಟೈತೆ’ ಹಾಡು ಅಪಾಯಕಾರಿ ಅನ್ನಿಸುವುದು ಈ ಯಾವ ಕಾರಣದಿಂದಲೂ ಅಲ್ಲ; ಗೀತೆಯಲ್ಲಿರೋ ಅಸೂಕ್ಷ್ಮತೆಯಿಂದಾಗಿ ಹಾಗೂ ನಮ್ಮ ಸಾಂಸ್ಕೃತಿಕ ಬಹುರೂಪತೆಯನ್ನು ಅಗ್ಗದ ಮನರಂಜನಾ ಸರಕನ್ನಾಗಿ ಮಾಡಿರುವ ಕಾರಣಕ್ಕಾಗಿ. ಗೀತರಚನೆಕಾರ ಪವನ್, ಅಲ್ಪಸಂಖ್ಯಾತರ ಮಾತಿನ ಶೈಲಿಯನ್ನೇ ಕ್ಷಿಪ್ರವಾಗಿ ಜನರ ಗಮನ ಸೆಳೆಯುವ ತಂತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಆರ್.ಎನ್.ಜಯಗೋಪಾಲ್, ಗೀತಪ್ರಿಯರಂತೆ ಮಧುರ ಹಾಗೂ ಆದ್ರ್ರ ಗೀತೆಗಳನ್ನಾಗಲಿ, ಚಿ.ಉದಯಶಂಕರ್ರಂತೆ ವಸ್ತುವಿನ ವೈವಿಧ್ಯತೆಯಿಂದಾಗಲಿ ಗಮನ ಸೆಳೆಯಲಾಗದ ಇಂದಿನ ಕನ್ನಡದ ಅನೇಕ ಗೀತರಚನೆಕಾರರು, ತಕ್ಷಣ ಜನರ ಸೆಳೆಯುವುದಕ್ಕಾಗಿ ಇಂಥ ಗಿಮಿಕ್ ಮಾಡುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿಬಿಟ್ಟಿದೆ. ಉಪೇಂದ್ರ, ಪ್ರೇಮ್, ಯೋಗರಾಜ್ ಭಟ್ ಎಲ್ಲರೂ ಇದೇ ಪರಂಪರೆಗೆ ಸೇರಿದವರೇ. ವಿಶೇಷವೆಂದರೆ, `ಪ್ಯಾರ್ಗೆ ಆಗ್ಬುಟ್ಟೈತೆ’ ಹಾಡು ಬರೆದಿರುವ ಪವನ್ ಒಡೆಯರ್ ಯೋಗರಾಜ್ ಭಟ್ಟರ ಶಿಷ್ಯ. ಗುರುವಿಗೆ ತಕ್ಕ ಶಿಷ್ಯ ಎನ್ನುವ ಮಾತು ಈ ಹಾಡಿನ ಮಟ್ಟಿಗಂತೂ ನಿಜವಾಗಿದೆ.

ಕನ್ನಡ ಚಿತ್ರರಂಗದಲ್ಲಿ ಇಂಥ ಅಸೂಕ್ಷ್ಮ ಹಾಗೂ ಅಲ್ಪಸಂಖ್ಯಾತ ವಿರೋಧಿ ಧೋರಣೆ ಹೊಸದೇನಲ್ಲ; ಇಲ್ಲಿ ಮುಸ್ಲಿಮರು, ಶೆಟ್ಟರು, ಮಾರ್ವಾಡಿಗಳು ಮುಂತಾದ ಅಲ್ಪಸಂಖ್ಯಾತರ ಮಾತಿನ ಶೈಲಿ ತಮಾಷೆಯ ವಸ್ತುವಾಗಿಯೇ ಹೆಚ್ಚು ಬಳಕೆಯಾಗುತ್ತಿದೆ. ಮನೆಯಲ್ಲಿ ಉರ್ದು ಮಾತನಾಡುವ ಮುಸ್ಲಿಮರು ಬೀದಿಯಲ್ಲಿ ಆಯಾ ಪ್ರದೇಶದ ಆಡುಭಾಷೆಯಲ್ಲಿ- ಅದರ ಅತ್ಯಂತ ಸಹಜ ಲಯದೊಂದಿಗೆ- ಸಂವಹನ ನಡೆಸುತ್ತಾರೆ ಎನ್ನುವ ತಿಳುವಳಿಕೆಯೇ ಚಿತ್ರರಂಗದ ಗಿಲೀಟು ಜನರಿಗೆ ಇದ್ದಂತಿಲ್ಲ. ಅಲ್ಪಸಂಖ್ಯಾತರ ಮಾತಿನ ಶೈಲಿ ಅಷ್ಟೇ ಅಲ್ಲ.. ಕನ್ನಡದ ಕೆಲವು ಉಪಭಾಷೆಗಳನ್ನು ಕೂಡ (ಉದಾ: ಮಂಗಳೂರು ಕನ್ನಡ, ಉತ್ತರ ಕರ್ನಾಟಕದ ಜವಾರಿ ಕನ್ನಡ) ಚಿತ್ರರಂಗದಲ್ಲಿ ಹಾಸ್ಯದ ಸರಕನ್ನಾಗಿಯೇ ಬಳಸಲಾಗುತ್ತಿದೆ. ದಕ್ಷಿಣ ಕನ್ನಡ ಮೂಲದವರಾದ ಕಾಶೀನಾಥ್ ಹಾಗೂ ಉಪೇಂದ್ರ ಕೂಡ ಇದಕ್ಕೆ ಹೊರತಲ್ಲ. ಅಲ್ಪಸಂಖ್ಯಾತರ ಮಾತಿನ ಶೈಲಿಯನ್ನ ಅನುಕರಿಸಿದ್ರೆ, ತಿರುಚಿದ್ರೆ ಅದು ಹಾಸ್ಯ; ಕನ್ನಡದ ಅನನ್ಯತೆಯ ಕುರುಹಾದ ಉಪಭಾಷೆಗಳನ್ನು ಬಳಸಿದರೆ ಅದು ಕಾಮಿಡಿ- ಇದು ನಮ್ಮ ಚಿತ್ರರಂಗದ ಬೌದ್ಧಿಕ ದಾರಿದ್ರ್ಯದ ಸಂಕೇತ. ವಾಸ್ತವ ಪ್ರಜ್ಞೆ ಹಾಗೂ ಕಲ್ಪನೆಯ ಸೊಗಸಿನಿಂದ, ಕಲಾತ್ಮಕ ಚಿತ್ರಣದಿಂದ ಜನರನ್ನ ಸೆಳೆಯಲಾಗದವರು ತಮ್ಮ ಬೌದ್ಧಿಕ ದಾರಿದ್ರ್ಯವನ್ನೇ ಪ್ರತಿಭೆ ಎಂದು ಬಿಂಬಿಸುತ್ತಿರುವುದು; ಕೆಲವರು ಅದನ್ನೇ ಮನರಂಜನೆ ಎಂದು ಆನಂದಿಸುತ್ತಿರುವುದು ಜನರ ತಾರತಮ್ಯ ಪ್ರಜ್ಷೆಯ ಕೊರತೆಯನ್ನು ತೋರಿಸುತ್ತದೆ.

ಕನ್ನಡ ಸಾಹಿತ್ಯ ತನ್ನ ಅನುಭವ ದ್ರವ್ಯ, ಅಭಿವ್ಯಕ್ತಿ ಕ್ರಮ ಹಾಗೂ ಭಾಷಿಕ ಬಹರೂಪತೆಯಿಂದಾಗಿ ಭಾರತದಲ್ಲಿ ಹಾಗೂ ಭಾರತದಾಚೆಗೂ ಹೆಸರು ಗಳಿಸಿದೆ. ಕನ್ನಡ ಸಾಹಿತ್ಯದ ಅನನ್ಯತೆಗೆ ಕಾರಣ ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ. ಇದು ಹೊಸ ವಿಷಯವೇನಲ್ಲ. ಆದರೆ, ಪರಭಾಷೆಗಳ ತರ್ಕರಹಿತ ರಕ್ತಪಾತ ಹಾಗೂ ನಿರ್ಜೀವ ಆಡಂಬರದ ಚಿತ್ರಗಳನ್ನು ಕದ್ದು ಅಥವಾ ರೀಮೇಕ್ ಮಾಡಿ ಪ್ರೇಕ್ಷಕರ ತಲೆ ಚಿಟ್ಟು ಹಿಡಿಸುವ ಕನ್ನಡ ಚಿತ್ರ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈ ಸರಳ ಸತ್ಯದ ಅರಿವಿದ್ದಂತಿಲ್ಲ. ಇನ್ನು ಸಾಮಾಜಿಕ ಜವಾಬ್ದಾರಿ, ವಾಸ್ತವತೆ, ಸಾಂಸ್ಕೃತಿಕ ಮಹತ್ವ ಇವೇ ಮುಂತಾದ ಪದಗಳೆಂದರೆ, ಇವರಿಗೆ ಮಹಾ ಅಲರ್ಜಿ. ಯಾವನೋ ರಾಜಕಾರಣಿಯ ವಶೀಲಿಯಿಂದ ಇಲ್ಲವೇ ಅಧಿಕಾರಶಾಹಿಯ ಮರ್ಜಿ ಕಾಯ್ದು ಸರ್ಕಾರದ ಸಹಾಯಧನ, ಪ್ರಶಸ್ತಿ ಗಿಟ್ಟಿಸುವ ಇವರಿಗೆ ಅವುಗಳನ್ನು ತಿಳಿಯಬೇಕಾದ ಅಗತ್ಯವೇ ಬರುವುದಿಲ್ಲ.

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕಂತೂ ಸಂವೇದನಾಶೀಲ ನಿರ್ದೇಶಕರ ಕೊರತೆ ಎದ್ದು ಕಾಣುತ್ತಿದೆ. ಕಮರ್ಷಿಯಲ್ ಸಕ್ಸಸ್ಗಾಗಿ ಏನು ಮಾಡಿದರೂ ತಪ್ಪಲ್ಲ ಅನ್ನುವ ಮನೋಧರ್ಮ ಬಲವಾಗುತ್ತಿದೆ. ನಮ್ಮ ಭಾಷೆ, ಸಂಸ್ಕೃತಿ, ಬಹುರೂಪತೆಗಳ ಬಗ್ಗೆ ಕನಿಷ್ಠ ತಿಳುವಳಿಕೆ, ಬದ್ಧತೆ ಇಲ್ಲದ ನಿರ್ಮಾಪಕರು, ನಿರ್ದೇಶಕರು ರೂಪಿಸಿದ ಚಿತ್ರಗಳು, ಹಾಡುಗಳು ಹಾಗೂ ಸಂಭಾಷಣೆ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವುದು ಇತ್ತೀಚಿನ ಅಪಾಯಕಾರಿ ಟ್ರೆಂಡ್. ಸಮೂಹ ಮಾಧ್ಯಮಗಳಲ್ಲಿ ಮೀಡಿಯೋಕರ್ ಹಾಗೂ ಸಬ್ ಸ್ಟ್ಯಾಂಡರ್ಡ್ ಮಂದಿ ಹಾಗೂ ವಿಚಾರಗಳು ಹೆಚ್ಚುತ್ತಿರುವುದರ ಫಲ ಇದು. ನಮ್ಮ ಸಂಸ್ಕೃತಿಯ ಹೆಮ್ಮೆಯ ಕುರುಹುಗಳೆಲ್ಲಾ ಮನರಂಜನೆಯ ಸರಕಾಗುತ್ತಿರುವುದು ಕಲಾ ಮಾಧ್ಯಮವೊಂದರ ಅಧಃಪತನವನ್ನೂ ಸೃಷ್ಟಿಶೀಲತೆಯ ಅವನತಿಯನ್ನೂ ಸೂಚಿಸುತ್ತವೆ.