Daily Archives: February 8, 2012

ಲಕ್ಷ್ಮಣ್ ಸವದಿ ಶಾಸಕ ಸ್ಥಾನ ವಜಾ ಮಾಡಿದ ವಿಧಾನಸಭೆ

ಬೆಂಗಳೂರು, 8-2-12:
ನೆನ್ನೆ ಶಾಸನ ಸಭೆಯ ಕಲಾಪಗಳು ನಡೆಯುತ್ತಿದ್ದ ವೇಳೆ ಸದನದಲ್ಲಿ ಹಾಜರಿದ್ದರೂ ಅದರ ಕಲಾಪದಲ್ಲಿ ಪಾಲ್ಗೊಳ್ಳದೆ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಲನಚಿತ್ರವೊಂದನ್ನು ನೋಡುತ್ತಿದ್ದ ಮಾಜಿ ಸಚಿವ ಲಕ್ಷ್ಮಣ್ ಸವದಿಯವರನ್ನು ಇಂದು ವಿಧಾನಸಭೆ ಅವಿರೋಧವಾಗಿ ವಿಧಾನಸಭಾ ಸದಸ್ಯತ್ವದಿಂದ ವಜಾ ಮಾಡಿತು. ಇಂದು ಬೆಳಿಗ್ಗೆ ತಾನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸವದಿಯವರನ್ನು ಶಾಸಕ ಸ್ಥಾನದಿಂದಲೂ ವಜ ಮಾಡುವ ಮೂಲಕ ವಿಧಾನಸಭೆ ಮುಂದಕ್ಕೆ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಮತ್ತು ಶಾಸಕರಾಗುವವರು ಸದನದ ಘನತೆ ಮತ್ತು ಜನಪ್ರತಿನಿಧಿಗಳ ಗೌರವವನ್ನೂ ಎತ್ತಿಹಿಡಿಯಬೇಕು ಎನ್ನುವ ಸಂದೇಶವನ್ನು ಕಳುಹಿಸಿತು.

ಇಂದು ಬೆಳಿಗ್ಗೆ ಆರಂಭವಾದ ವಿಧಾನಸಭಾ ಕಲಾಪದಲ್ಲಿ ಮೊದಲು ಪ್ರಸ್ತಾಪವಾಗಿದ್ದೇ ಈ ವಿಚಾರ. ಇಂದು ಬೆಳ್ಳಂಬೆಳಗ್ಗೆಯೇ ಲಕ್ಷ್ಮಣ ಸವದಿಯವರೂ ಸೇರಿ ಮೂವರು ಸಚಿವರು ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ವಿಷಯದ ಮೇಲೆ ಚರ್ಚೆ ಆರಂಭಿಸಿದ ಸದನ ಸುಮಾರು ಮೂರು ಗಂಟೆಗಳ ಕಾಲ ಹಲವಾರು ಸದಸ್ಯರ ಅತ್ಯುತ್ತಮ, ಪ್ರಬುದ್ಧ ಭಾಷಣಗಳಿಗೆ ಸಾಕ್ಷಿಯಾಯಿತು. ಮೊದಲಿಗೆ ಮಾತನಾಡಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ವಾತಂತ್ರ್ಯಾನಂತರ ದೇಶ ಅಳವಡಿಸಿಕೊಂಡ ಸಂವಿಧಾನ, ಪ್ರಜಾಪ್ರಭುತ್ವ, ಅದರಲ್ಲಿ ಶಾಸಕಾಂಗದ ಮಹತ್ವ, ಜನಪ್ರತಿನಿಧಿಗಳಾದವರು ತೋರಬೇಕಾದ ಘನತೆ, ತಮ್ಮ ನಡವಳಿಕೆಗಳ ಮೂಲಕ ಸಮಾಜಕ್ಕೆ ಆದರ್ಶವಾಗಿ ನಿಲ್ಲಬೇಕಾದ ಅನಿವಾರ್ಯತೆ, ಮುಂತಾದುವುಗಳನ್ನು ಪ್ರಸ್ತಾಪಿಸಿ ಲಕ್ಷಣ ಸವದಿಯಂತಹವರ ನಡವಳಿಕೆಯನ್ನು ಯಾವ ಕಾರಣಕ್ಕೆ ಸಹಿಸಬಾರದು ಎನ್ನುವುದನ್ನು ಪರಿಣಾಮಕಾರಿಯಾಗಿ ಮಂಡಿಸಿದರು. ಅವರ ಮಾತಿನುದ್ದಕ್ಕೂ ಸದನದ ಪ್ರತಿಯೊಬ್ಬ ಶಾಸಕರೂ ಹಾಜರಿದ್ದು (ಲಕ್ಷ್ಮಣ ಸವದಿಯವರನ್ನು ಹೊರತುಪಡಿಸಿ) ಸಿದ್ಧರಾಮಯ್ಯನವರ ಮಾತುಗಳನ್ನು ಗಂಭಿರತೆಯಿಂದ ಕೇಳಿದರು.

ನಂತರ ಮಾತನಾಡಿದ ವಿರೋಧಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರರವರು, ತಾನು ನೆನ್ನೆ ತಾನೆ ಈ ಬಾರಿಯ ಶಾಸನ ಸಭೆಯ ಸದಸ್ಯನಾಗಿ ಯಾಕಾಗಿ ಆದೆನೊ ಎನ್ನುವ ಆವಮಾನದಲ್ಲಿ ಬೇಸರದಲ್ಲಿ ಕಳೆದೆ; ಆದರೆ ಇಂದು ಸದನದ ಸದಸ್ಯರ ನಡವಳಿಕೆ ಮತ್ತು ಅವರ ಬದಲಾದ ವರ್ತನೆ ನೋಡಿ ತಮಗೆ ಮತ್ತೊಮ್ಮೆ ಮನುಷ್ಯನ ಒಳ್ಳೆಯತನದ ಮೇಲೆ ನಂಬಿಕೆ ಬಂದಿದೆ ಎಂದು ಹೇಳಿ, ಇಂತಹ ಘಟನೆ ಮುಂದೆಂದೂ ನಡೆಯದ ರೀತಿಯಲ್ಲಿ ಸದನದ ಸದಸ್ಯರಿಗಷ್ಟೇ ಅಲ್ಲ, ಎಲ್ಲಾ ಜನಪ್ರತಿನಿಧಿಗಳಿಗೂ ಶಿಷ್ಟಾಚಾರದ ಪಠ್ಯವನ್ನು ರೂಪಿಸಿ ಅದನ್ನು ಕಡ್ಡಾಯವಾಗಿ ಅವರು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಾಳೆ ಇದೇ ವಿಷಯದ ಬಗ್ಗೆ ತಾವು ನಿಯಮಾವಳಿ ಪರಿಷ್ಕರಣೆಯ ಬಗ್ಗೆ ವಿಷಯ ಮಂಡಿಸುವುದಾಗಿ ಹೇಳಿದರು.

ಆದರೆ ಇವರಿಬ್ಬರಷ್ಟೇ ಅಲ್ಲದ ಜೆಡಿಎಸ್ ಮತ್ತು ಬಿಜೆಪಿಯ ಸದಸ್ಯರು ಸಹ ಮೇಲಿನವರು ಹೇಳಿದ ಮಾತುಗಳಿಗೆ ತಮ್ಮ ಬೆಂಬಲ ಸೂಚಿಸಿ ಮಾತನಾಡಿದರು. ಆಡಳಿತ ಪಕ್ಷವಾದ ಬಿಜೆಪಿಯ ಅನೇಕ ಶಾಸಕರು ತಮ್ಮ ಸಹಶಾಸಕನ ವರ್ತನೆಯಿಂದ ತೀವ್ರ ಜಿಗುಪ್ಸೆ, ಅವಮಾನ, ಬೇಸರ ವ್ಯಕ್ತಪಡಿಸಿದ್ದೇ ಅಲ್ಲದೆ ಈ ವಿಷಯವಾಗಿ ರಾಜ್ಯದ ಜನತೆಯ ಕ್ಷಮೆಯಾಚಿಸಿದರು. ತಮ್ಮ ಮನೆಯನ್ನು ಶುದ್ಧಗೊಳಿಸುವ ಕಾರ್ಯ ಇಂದಿನಿಂದಲೇ ಆರಂಭವಾಗಿದೆ ಎಂದು ಹೇಳಿದರು. 2005 ಡಿಸೆಂಬರ್ 23 ರಂದು ದೇಶದ ಸಂಸತ್ತು 11 ಜನ ಸಂಸತ್ ಸದಸ್ಯರನ್ನು ಅವರ ಅನೀತಿಯುತ ನಡವಳಿಕೆಗಾಗಿ ವಜಾಗೊಳಿಸಿದ್ದನ್ನು ಅನೇಕ ಸದಸ್ಯರು ಪ್ರಸ್ತಾಪಿಸಿ, ಕರ್ನಾಟಕದ ಶಾಸನಸಭೆಯನ್ನು ಸ್ವಚ್ಚಗೊಳಿಸುವ ಕಾರ್ಯ ಆರಂಭವಾಗಬೇಕಿದೆ ಎಂದು ಪ್ರತಿಪಾದಿಸಿದರು.

ಊಟದ ಸಮಯವನ್ನೂ ಮೀರಿ ನಡೆದ ಕಲಾಪ ಕೊನೆಗೆ ಲಕ್ಷ್ಮಣ ಸವದಿಯವರನ್ನು “ಅನೀತಿ ಮತ್ತು ಶಾಸಕ ಸ್ಥಾನಕ್ಕೆ ತಕ್ಕುದಲ್ಲದ ನಡವಳಿಕೆ ( “unethical and unbecoming” of Members of Legislative Assembly)” ಎಂದು ಘೋಷಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವ ಪ್ರಸ್ತಾಪವನ್ನು ಅವಿರೋಧವಾಗಿ ಅಂಗೀಕರಿಸಿತು. ಸಿ.ಸಿ. ಪಾಟೀಲ್ ಮತ್ತು ಪಾಲೇಮಾರ್‌ರವರಿಗೆ ಸದನದ ಘನತೆಯನ್ನಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಗೌರವ ಮತ್ತು ಘನತೆಯನ್ನೂ ಕಾಪಾಡಿಕೊಳ್ಳಬೇಕೆಂಬ ಸೂಚನೆ ನೀಡಲಾಯಿತು.

ಇಷ್ಟೇ ಅಲ್ಲ:
ರಾಜ್ಯದ ಇಂದಿನ ವಿಧಾನಸಭೆಯ ಘಟನೆಗಳನ್ನು ನೋಡಿದರೆ ವಿಷಯ ಇಲ್ಲಿಗೇ ಮುಕ್ತಾಯವಾಗುವುದಿಲ್ಲ ಎನ್ನುವ ಸೂಚನೆಗಳು ಕಾಣಿಸುತ್ತಿವೆ. ಕಳೆದ ವಾರ ತಾನೆ ಸುಪ್ರೀಮ್‌ಕೋರ್ಟ್‌ನಿಂದ ತೀವ್ರ ವಿಮರ್ಶೆಗೆ ಒಳಗಾಗಿರುವ ಸ್ಪೀಕರ್ ಬೋಪಯ್ಯನವರು ಈ ಇಡೀ ವಿದ್ಯಮಾನದಿಂದ ತೀವ್ರ ನೊಂದಿದ್ದು ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ತದನಂತರ ಕೂಡಲೆ ರಾಜೀನಾಮೆ ನೀಡಲು ಚಿಂತಿಸುತ್ತಿರುವುದಾಗಿ ಅನಧಿಕೃತ ಮೂಲಗಳು ತಿಳಿಸಿವೆ. 11 ಬಿಜೆಪಿ ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ ವಿಷಯದಲ್ಲಿ ರಾಜಕೀಯ ಒತ್ತಡಗಳಿಗೆ ಒಳಗಾಗಿ ಅನ್ಯಾಯದ ತೀರ್ಮಾನದ ಕೈಗೊಂಡಿದ್ದು ಅವರನ್ನು ತೀವ್ರವಾಗಿ ಬಾಧಿಸುತ್ತಿದೆ ಎಂದು ಹೇಳಲಾಗಿದೆ. ದೇಶದ ಪರಮೋಚ್ಚ ನ್ಯಾಯಾಲದಿಂದ ಈ ರೀತಿ ವಿಮರ್ಶೆಗೊಳಗಾದ ರಾಜ್ಯದ ಪ್ರಥಮ ಸ್ಪೀಕರ್ ಎಂಬ ಅವಮಾನ ಅವರನ್ನು ನಿತ್ಯವೂ ಕಾಡುತ್ತಿದ್ದು ಅವರು ಈಗಾಗಲೆ ರಾಜೀನಾಮೆಗೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ, ಹೋಗುವ ಮೊದಲು ತಮ್ಮ ಕಾಲದಲ್ಲಿ ಜನಪ್ರತಿನಿಧಿಗಳ ಘನತೆ ಮತ್ತು ಗೌರವಕ್ಕೆ ಅವಮರ್ಯಾದೆ ಉಂಟುಮಾಡಿದ ತಮ್ಮ ಸದನದ ಸದಸ್ಯರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿರ್ಗಮಿಸುವುದಾಗಿ ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಾಳೆ ಇನ್ನೂ ಹಲವು ಶಾಸಕರು ಸದನದ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆಗಳಿವೆ. ಲಂಚ ತೆಗೆದುಕೊಳ್ಳುತ್ತಿರುವಾಗ ಲೋಕಾಯುಕ್ತ ಪೋಲಿಸರ ಕೈಗೆ ಸಿಕ್ಕುಬಿದ್ದಿದ್ದ ಕೆ.ಎಜಿ.ಎಫ್. ಶಾಸಕ ಸಂಪಗಿ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಹರತಾಳು ಹಾಲಪ್ಪ, ಖಚಿತವಾಗಿ ಅನರ್ಹವಾಗಲಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಈ ಎಲ್ಲದಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರದಲ್ಲಿ ತೊಡಗಿ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಪಾತ್ರವನ್ನೇ ಹೀನಾಯಗೊಳಿಸಿದ ಇನ್ನೂ ಹಲವು ಶಾಸಕರನ್ನು ಮತ್ತು ಮಂತ್ರಿಗಳನ್ನು ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಚಿಂತನೆಗಳು ವಿಧಾನಸಭೆಯ ಕಾರಿಡಾರ್‌ಗಳಲ್ಲಿ ಇಂದು ಹರಿದಾಡುತ್ತಿದ್ದವು. ಈಗಾಗಲೆ ಲೋಕಾಯುಕ್ತದಲ್ಲಿ ಪ್ರಕರಣವಿರುವವರ ಜೊತೆಗೆ ವಿವಿಧ ಮಾಧ್ಯಮಗಳಲ್ಲಿ ಬಯಲಾಗಿರುವ ಪ್ರಕರಣಗಳ ಆಧಾರದ ಮೇಲೆ ಶಾಸಕರ ಒಂದು ಪಟ್ಟಿ ಸಿದ್ದಪಡಿಸಿ, ತಮ್ಮ ಆದಾಯಮೂಲಗಳಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಎಲ್ಲಾ ಶಾಸಕರನ್ನು ಅನರ್ಹಗೊಳಿಸುವುದಷ್ಟೇ ಅಲ್ಲದೆ, ಅಂತಹವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಕ್ರಮ ಜರುಗಿಸುವ ಬಗ್ಗೆಯೂ ಚಿಂತನೆಗಳು ಆರಂಭವಾಗಿವೆ. ಮಾಜಿ ಮುಖ್ಯಮಂತ್ರಿ,  ಹಲವಾರು ಹಾಲಿ-ಮಾಜಿ ಸಚಿವರೂ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಮೇಲ್ಪಟ್ಟು ಶಾಸಕರು ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

ತಮ್ಮ ಈ ಕಾರ್ಯುದ ಮೂಲಕ ಕರ್ನಾಟಕದಲ್ಲಿ ಕುಸಿದಿರುವ ಸಾರ್ವಜನಿಕ ಜೀವನದ ಮೌಲ್ಯಗಳನ್ನು ಮತ್ತೆ ಪುನರ್‌ಸ್ಥಾಪಿಸುವುದಷ್ಟೇ ಅಲ್ಲದೆ ಜನರಲ್ಲೂ ಈ ಮೌಲ್ಯಗಳನ್ನು ಪ್ರಸ್ತುತಗೊಳಿಸುವ ನಿಟ್ಟಿನಲ್ಲಿ ತಮ್ಮ ಉಳಿದ ಶಾಸಕ ಸ್ಥಾನದ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹಲವಾರು ಶಾಸಕರು ಇಂದು ವಿಧಾನಸೌಧದ ಮೊಗಸಾಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು.

(ಹೀಗೊಂದು ಆಶಯ.)


– ರವಿ ಕೃಷ್ಣಾರೆಡ್ಡಿ