ತಲೆದಂಡ ಪಡೆದ ಮಾಧ್ಯಮ


– ಪರಶುರಾಮ ಕಲಾಲ್


ಅಂತೂ ಮೂವರು ಸಚಿವರ ತಲೆದಂಡವನ್ನು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವೆಂದು ಬಣ್ಣಿತವಾಗುವ ಪತ್ರಿಕಾ/ಟಿವಿ ಮಾಧ್ಯಮ ಬಲಿ ತೆಗೆದುಕೊಂಡಿದೆ.

ಸಮರ್ಥ ವಿರೋಧ ಪಕ್ಷವಾಗಿ ಮಾಧ್ಯಮ ಈ ವಿಷಯದಲ್ಲಿ ಕಾರ್ಯನಿರ್ವಹಿಸಿದೆ. ದೃಶ್ಯಮಾಧ್ಯಮದ ಈ ಕಾರ್ಯಕ್ಕೆ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡದೇ ದಿನ ಪತ್ರಿಕೆಗಳು ಸಹ ಸರಿಯಾಗಿ ಸಾಥ್ ನೀಡಿ, ಬೆಂಬಲಿಸಿವೆ. ಕಳೆದ ಎರಡುದಿನಗಳಿಂದ ನಡೆದ ಈ ಹೋರಾಟ ಯಶಸ್ವಿಯಾಯಿತು ಎಂದೇ ಹೇಳಬೇಕು.

ನಾಚಿಕೆ ಕಳೆದುಕೊಂಡ ವ್ಯವಸ್ಥೆಯಲ್ಲಿ ಜೀವಿಸುವುದು ತುಂಬಾ ಅತ್ಯಂತ ನೋವು, ಬೇಸರದ ಸಂಗತಿ. ಇಂತಹ ಸಂದರ್ಭದಲ್ಲಿಯೂ ಇದೊಂದು ಆಶಾಕಿರಣವಾಗಿ ಮೂಡಿ ಬಂದಿದೆ.

ಮಾಧ್ಯಮದ ಮೇಲೆ ರೇಗಾಡುವ ಸರ್ಕಾರದ ಅತಿರಥಮಹಾರಥರು ತಮ್ಮೊಳಗೆ ಆಪಾರ ಕೋಪ, ತಾಪಗಳಿದ್ದರೂ ಏನೋ ಮಾಡಲಾರದ ಸ್ಥಿತಿ ಮುಟ್ಟಿದ್ದರು.

ಶೀಲ, ಚಾರಿತ್ರ್ಯದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಂಘ, ಪರಿವಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಎಂದಿನಂತೆ ದಿವ್ಯ ಮೌನವಹಿಸಿದೆ. ನರಗುಂದದಲ್ಲಿ ಮೂವರು ಸಚಿವರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘ ಪರಿವಾರಕ್ಕೆ ಸೇರಿದ ಸದಸ್ಯನೊಬ್ಬ ಮಾಧ್ಯಮದ ಎದುರು ಹೇಳಿದ್ದು ನನಗೆ ಇಲ್ಲಿ ಮುಖ್ಯ ಎನ್ನಿಸುತ್ತಿದೆ. ಧೀಮಂತ ಹೋರಾಟಗಾರ ಜಗನ್ನಾಥರಾವ್ ಜೋಷಿಯ ಸ್ಮಾರಕವನ್ನು ಅಭಿವೃದ್ಧಿ ಪಡಿಸುತ್ತೇನೆಂದು ಮಾತು ಕೊಟ್ಟ ಬಿಜೆಪಿ ಸರ್ಕಾರವೂ ಈಗ ಇಂತಹ ಅನೈತಿಕ ಚಟುವಟಿಕೆಯಲ್ಲಿ ತೊಡಗಿದೆ. ಇವರಿಗೆ ಯಾವ ಮೌಲ್ಯವೂ ಇಲ್ಲ.

ಆರ್.ಎಸ್.ಎಸ್. ಬಗ್ಗೆ ಗೊತ್ತಿರುವವರಿಗೆ ಜಗನ್ನಾಥ ರಾವ್ ಜೋಷಿಯ ಬಗ್ಗೆ ಗೊತ್ತಿರುತ್ತದೆ. ಸಂಘದ ಬೈಠಕ್‌ನಲ್ಲಿ ಭಾಗವಹಿಸಿ, ಸಂಘದ ದೀಕ್ಷೆ ಪಡೆದು ರಾಷ್ಟ್ರಭಕ್ತಿ ಪ್ರದರ್ಶಿಸುವ ಯುವಕರು  ಭ್ರಮನಿರಸನ ಹೊಂದಲು ಇನ್ನೇನೂ ಬೇಕು. ಸಂಘ ಪರಿವಾರ ಈ ಘಟನೆಯ ಬಗ್ಗೆ ದಿವ್ಯಮೌನ ವಹಿಸಲು ಇದು ಒಂದು ಕಾರಣವಾಗಿದೆ. ಯುವಕರನ್ನು ಬಡಿದೆಬ್ಬಿಸಬಹುದು, ಆದರೆ ಕುಳಿತುಕೊಳ್ಳಲು ಹೇಳಲು ಅದಕ್ಕೆ ಆಗದ ಸ್ಥಿತಿಯಲ್ಲಿ ಅದರ ನಾಯಕತ್ವವಿದೆ. ಅದರ ಹಿಡಿತ ಸರ್ಕಾರದ ಮೇಲೆ ಇದೆ. ಆದರೆ ಅದು ಹೇಳುವ ಶೀಲ, ಚಾರಿತ್ರ್ಯವೇ ಹರಣವಾಗುತ್ತಿದ್ದರೆ ಅದನ್ನು ತಿದ್ದುವುದು ಅದಕ್ಕೆ ಸಾಧ್ಯವಿಲ್ಲ. ಅಧಿಕಾರದ ಮುಂದೆ ಅದು ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಇಂತಹ ಹೊಂದಾಣಿಕೆಯನ್ನು ಅದು ಮಾಡಿಕೊಳ್ಳುತ್ತಲೇ ಬಂದಿದೆ.

ನಮ್ಮ ಮಾಧ್ಯಮಗಳು ಈಗ ಎಚ್ಚೆತ್ತುಕೊಂಡಿವೆ. ಒಂದಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿವೆ. ಇದೇ ರೀತಿ ಮುಂದಿನ ದಿನಗಳಲ್ಲೂ ನಡೆದುಕೊಂಡರೆ ಕರ್ನಾಟಕದ ರಾಜಕಾರಣವನ್ನು ಒಂದು ತಹಬಂದಿಗೆ ತರಲು ಸಾಧ್ಯವಾಗುತ್ತದೆ ಎಂಬ ಭರವಸೆಗೆ ಈ ಮೂವರು ಸಚಿವರ ತಲೆದಂಡ ಒಂದು ದಿಕ್ಸೂಚಿಯಾಗಿದೆ.

Leave a Reply

Your email address will not be published.