Daily Archives: February 12, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ -7)


– ಡಾ.ಎನ್.ಜಗದೀಶ ಕೊಪ್ಪ


ಸಮಷ್ಟೀಪುರದ ರೈಲ್ವೆ ನಿಲ್ದಾಣದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಹೊರ ಜಗತ್ತಿನ ಅನುಭವಗಳನ್ನು ದಕ್ಕಿಸಿಕೊಂಡ ಜಿಮ್ ಕಾರ್ಬೆಟ್‌ ಕೆಲ ಕಾಲ ಸರಕು ಸಾಗಾಣಿಕೆಯ ರೈಲಿನಲ್ಲಿ ಗಾರ್ಡ್ ಆಗಿ ಕತಿಹಾರ್ ಮತ್ತು ನೇಪಾಳದ ಗಡಿಭಾಗದ ಮೋತಿಹಾರಿ ನಡುವೆ ಸಂಚರಿಸಿ ಹೊಸ ಅನುಭವವನ್ನು ಪಡೆದನು.

ಮಧೈ ಬಿಡುವಾದಾಗ ರೈಲ್ವೆ ಕೇಂದ್ರ ಕಚೇರಿ ಇರುವ ಗೋರಖ್‌ಪುರಕ್ಕೆ ಬೇಟಿ ನೀಡುತಿದ್ದ. ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಇಂಜಿನ್‌ಗಳ ದುರಸ್ತಿ, ಇಂಧನ ಕ್ಷಮತೆ ಮತ್ತು ಉಳಿತಾಯ ಮಾಡುವ ಬಗೆ ಇವುಗಳ ಬಗ್ಗೆ ಅಪಾರ ಆಸಕ್ತಿಯನ್ನೂ ಕೂಡ ತಾಳಿದ್ದ. ಜಿಮ್ ಕಾರ್ಬೆಟ್‌ನ ಕೆಲಸದ ಬಗೆಗಿನ ಬಧ್ಧತೆ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಕಾರ್ಬೆಟ್‌ ಎಂತಹ ಸವಾಲಿನ ಕೆಲಸವನ್ನೂ ಸಹ ನಿಭಾಯಿಸಬಲ್ಲ ಎಂಬ ನಂಬಿಕೆ ಅಧಿಕಾರಿಗಳಿಗಿತ್ತು. ಇಂತಹ ನಂಬಿಕೆ ಕಾರ್ಬೆಟ್‌ಗೆ ರೈಲ್ವೆ ಇಲಾಖೆಯಲ್ಲಿ ಹೊಸ ಹಾದಿಗೆ ಕಾರಣವಾಯಿತು.

ಸಮಷ್ಟೀಪುರದಿಂದ ಸಮಾರು 40 ಕಿಲೋಮೀಟರ್ ದೂರದಲ್ಲಿ ಹರಿಯುತಿದ್ದ ಗಂಗಾನದಿಗೆ ಆಕಾಲದಲ್ಲಿ ಯಾವುದೇ ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ ಸುಮಾರು ಐದು ಕಿಲೋಮೀಟರ್ ವಿಸ್ತೀರ್ಣ ಅಗಲ ಹರಿಯುತಿದ್ದ ನದಿಗೆ ರೈಲ್ವೆ ಮಾರ್ಗಕ್ಕಾಗಿ ಸೇತುವೆ ನಿರ್ಮಿಸುವುದು ದುಬಾರಿ ವೆಚ್ಚದ ಕೆಲಸ ಎಂದು ಬ್ರಿಟೀಷರು ತೀರ್ಮಾನಿಸಿದ್ದರು. ಹಾಗಾಗಿ ನದಿಯ ಎರಡು ದಂಡೆಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಿ ಪ್ರಯಾಣಿಕರನ್ನು ಹಾಗೂ ಸರಕು, ಕಲ್ಲಿದ್ದಲು, ಮರದ ದಿಮ್ಮಿ ಇತರೆ ವಸ್ತುಗಳನ್ನು ಮಧ್ಯಮ ಗಾತ್ರದ ಹಡಗುಗಳಲ್ಲಿ ಸಾಗಿಸುತಿದ್ದರು. ಇದರಿಂದಾಗಿ ಉತ್ತರ ಭಾರತದ ವಿಶೇಷವಾಗಿ ನೇಪಾಳ ಗಡಿಭಾಗದ ಜನತೆಗೆ ಕೊಲ್ಕತ್ತ ಸೇರಿದಂತೆ ದಕ್ಷಿಣ ಭಾಗಕ್ಕೆ ಸಂಚರಿಸಲು ಅನುಕೂವಾಗಿತ್ತು.

ಈಗಿನ ಬಿಹಾರ ರಾಜ್ಯಕ್ಕೆ ಹೊಂದಿಕೊಂಡಂತಿರುವ ಗಂಗಾ ನದಿಯ ದಕ್ಷಿಣ ಭಾಗದ ನಿಲ್ದಾಣಕ್ಕೆ ಮೊಕಮೆಘಾಟ್ ಎಂತಲೂ, ಉತ್ತರ ಭಾಗದ ನಿಲ್ದಾಣಕ್ಕೆ ಸಮಾರಿಯಾ ಘಾಟ್ ಎಂದು ಹೆಸರಿಡಲಾಗಿತ್ತು. ನದಿಯಲ್ಲಿ ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಸಾಗಿಸುವ ಜವಬ್ದಾರಿಯನ್ನು ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ದಕಿಣ ಭಾಗದ ಮೊಕಮೆಘಾಟ್ ನಿಲ್ದಾಣದಲ್ಲಿ ಕಾರ್ಮಿಕರ ಸಮಸ್ಯೆಯಿಂದ ಸರಕುಗಳು ಮತ್ತು ಪ್ರಯಾಣಿಕರು ನಿಗದಿತ ಅವಧಿಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. 24 ಗಂಟೆಯೊಳಗೆ ಖಾಲಿಯಾಗಬೇಕಿದ್ದ ಸರಕುಗಳು ತಿಂಗಳುಗಟ್ಟಳೆ ನಿಲ್ದಾಣದಲ್ಲಿ ಕೊಳೆಯತೊಡಗಿದವು. ಕೊನೆಗೆ ಉಸ್ತುವಾರಿ ಹೊತ್ತಿದ್ದ ಕಂಪನಿ ಈ ಕೆಲಸ ತನ್ನಿಂದ ಸಾಧ್ಯವಿಲ್ಲವೆಂದು ಹೇಳಿ ಕೈಚೆಲ್ಲಿತು. ಆಂಧ್ರದ ಸಿಂಗರೇಣಿ ಮತ್ತು ಪಶ್ಚಿಮ ಬಂಗಾಳದ ಧನಬಾದ್‌ನಿಂದ ಉತ್ತರ ಭಾಗದ ರೈಲುಇಂಜಿನುಗಳಿಗೆ ಪೂರೈಕೆಯಾಗುತಿದ್ದ ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡ ಕಾರಣ ರೈಲುಗಳ ಓಡಾಟದಲ್ಲಿ ವೆತ್ಯಯ ಉಂಟಾಯಿತು. ಇದರಿಂದ ಬೇಸತ್ತ ಅಧಿಕಾರಿಗಳು ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಯ ಕೆಲಸವನ್ನು ಗುತ್ತಿಗೆ ನೀಡುವ ಬದಲು ಕಾರ್ಬೆಟ್‌ಗೆ ವಹಿಸಲು ನಿರ್ಧರಿಸಿದರು.

ಯುವಕ ಕಾರ್ಬೆಟ್‌ಗೆ ಮತ್ತೆ 50 ರುಪಾಯಿ ಸಂಬಳ ಹೆಚ್ಚಿಸಿ, ಪ್ರಯಾಣಕರು ಮತ್ತು ಸರಕುಗಳ ಸಾಗಾಣಿಕೆಯ ಉಸ್ತುವಾರಿ ವಹಿಸಿ ಅವನನ್ನು ಮೊಕಮೆಘಾಟ್ ರೈಲ್ವೆ ನಿಲ್ದಾಣಕ್ಕೆ ವರ್ಗಾವಣೆ ಮಾಡಲಾಯಿತು. ಸಂಬಳದ ಜೊತೆಗೆ ಕೂಲಿ ಕಾರ್ಮಿಕರಿಗೆ ನೀಡುವ ಹಣದಲ್ಲಿ ಶೇ.2ರಷ್ಟು ಕಮಿಷನ್ ಮತ್ತು ನಿಗದಿತ ಅವಧಿಯೊಳಗೆ ಸರಕುಗಳನ್ನು ಮತ್ತು ಕಲ್ಲಿದ್ದಲನ್ನು ಕ್ರಮಬದ್ಧವಾಗಿ ಸಾಗಾಣಿಕೆ ಮಾಡಿದರೆ, ಹೆಚ್ಚುವರಿ ಬೋನಸ್ ನೀಡುವುದಾಗಿ ರೈಲ್ವೆ ಇಲಾಖೆ ಪ್ರಕಟಿಸಿತು. ಈ ಹೊಸ ಸವಾಲಿನ ಕೆಲಸವನ್ನು ಜಿಮ್ ಕಾರ್ಬೆಟ್‌ ಸಂತೋಷದಿಂದಲೇ ಸ್ವೀಕರಿಸಿದ.

ಬಿರು ಬೇಸಿಗೆ ಆದಿನಗಳಲ್ಲಿ ತನ್ನ ಹೊಸ ಹುದ್ದೆಯ ನೇಮಕಾತಿ ಪತ್ರ ಹಿಡಿದು ಬಂದ 22ವರ್ಷದ ಯುವಕ ಕಾರ್ಬೆಟ್‌ನನ್ನು ನೋಡಿದ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿ ಸ್ಟೋರರ್ ಇವರಿಗೆ ಅಚ್ಚರಿಯಾಯಿತು. ಆ ವೇಳೆಗಾಗಲೇ ಮೊಕಮೆಘಾಟ್‌ನ ರೈಲ್ವೆ ನಿಲ್ದಾಣದಲ್ಲಿ ಅನೇಕ ಬ್ರಿಟಿಷ್ ವ್ಯಕ್ತಿಗಳು ಸೇವೆ ಸಲ್ಲಿಸುತಿದ್ದರು. ನಿಲ್ದಾಣಕ್ಕೆ ಸ್ಟೇಶನ್ ಮಾಸ್ಟರ್ ಆಗಿ ರಾಮ್ ಶರಣ್ ಎಂಬ ವ್ಯಕ್ತಿ, ಹಾಗೂ ಚಟರ್ಜಿ ಎಂಬ ಬಂಗಾಳಿ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತಿದ್ದರು. ಇವರಿಬ್ಬರೂ ಕಾರ್ಬೆಟ್‌ಗಿಂತ 20 ವರ್ಷ ಹಿರಿಯವರಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಈ ಹುದ್ದೆಗಳಿಗೆ ಬಡ್ತಿ ಪಡೆದಿದ್ದರು. ಕಾರ್ಬೆಟ್‌ ಈ ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸ್ಥಿತಿ ಗತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ. ಕಂಪನಿಯಲ್ಲಿ ಕೆಲಸ ಮಾಡುತಿದ್ದ ಕೂಲಿ ಕಾರ್ಮಿಕರನ್ನು ಕರೆಸಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ. ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆಯಲ್ಲಿ ಆಗುತಿದ್ದ ಲೋಪಗಳನ್ನು ಗುರುತಿಸಿದ.

ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರನ್ನು ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿಕೊಂಡು. ಪ್ರತಿ ಕಾರ್ಮಿಕನ ಬೌದ್ಧಿಕ ಮತ್ತು ದೈಹಿಕ ಶಕ್ತಿ ಆಧಾರದ ಮೇಲೆ ವಿಂಗಡನೆ ಮಾಡಿದ. ಹತ್ತು ಕಾರ್ಮಿಕರನ್ನು ಒಲಗೊಂಡ ತಂಡವನ್ನು ಮಾಡಿ ಪ್ರತಿ ತಂಡಕ್ಕೆ ಒಬ್ಬ ಮೇಸ್ತ್ರಿಯನ್ನು ನೇಮಕ ಮಾಡಿದ. ಆರು  ತಂಡಗಳನ್ನು ಕಲ್ಲಿದ್ದಲು ಸಾಗಾಣಿಕೆಗೆ  ಮತ್ತು ಕೆಲವು ತಂಡಗಳಿಗೆ ಸರಕು ಸಾಗಾಣಿಕೆ, ಉಳಿದ ತಂಡಗಳಿಗೆ ಪ್ರಯಾಣಿಕರನ್ನು ಸಾಗಿಸುವ ಹೊಣೆಗಾರಿಕೆ ವಹಿಸಿಕೊಟ್ಟ. ತಾನು ಅವರ ಜೊತೆ ನಿಂತು  ಒಡನಾಡುತ್ತಾ ಅವರನ್ನು ಹುರಿದುಂಬಿಸುತ್ತಾ ಕೇವಲ ಒಂದು ತಿಂಗಳ ಅವಧಿಯಲ್ಲಿ ಮೊಕಮೆಘಾಟ್ ನಿಲ್ದಾಣದ ಅವ್ಯವಸ್ತೆಯನ್ನ ಹತೋಟಿಗೆ ತಂದು ಕಾರ್ಬೆಟ್‌ ಎಲ್ಲರಲ್ಲೂ ಅಚ್ಚರಿ ಮೂಡಿಸಿದ. ಅವನ ಈ ಯಶಸ್ವಿನ ಹಿಂದಿನ ಸೂತ್ರವೇನೆಂದರೆ, ತಾನೊಬ್ಬ ವಿದೇಶಿ ಮೂಲದ ವ್ಯಕ್ತಿ ಎಂಬುದನ್ನು ಮರೆತು, ತನ್ನ ಬಣ್ಣ, ಹಾಗೂ ಜಾತಿ, ಧರ್ಮ, ಹಿರಿಯ, ಕಿರಿಯ, ಬಡವ, ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಬೆರೆಯುವ ವ್ಯಕ್ತಿತ್ವ ಅದ್ಭುತವಾಗಿ ಕೆಲಸ ಮಾಡಿತ್ತು. ಭಕ್ತಿಯಾರ್‌ಪುರದಲ್ಲಿ ಅರಣ್ಯದ ನಡುವೆ ಮರ ಕಡಿಯುವ ಬಡ ಕಾರ್ಮಿಕರ ನಡುವೆ ಅವನು ಒಡನಾಡಿದ್ದ ಅನುಭವ  ಇಲ್ಲಿ ಉಪಯೋಗಕ್ಕೆ ಬಂತು. ಕಾರ್ಬೆಟ್‌ ನ ಪ್ರೀತಿ ವಿಶ್ವಾಸಕ್ಕೆ ಮನಸೋತ ಕಾರ್ಮಿಕರು, ಭಾನುವಾರದ ರಜಾದಿನ, ಹಬ್ಬವೆನ್ನದೆ ವಾರದ ಏಳು ದಿನವೂ ಕೆಲಸ ಮಾಡತೊಡಗಿದರು. ತಾವು ಹಿಂದೆ ಕೆಲಸ ಮಾಡುತಿದ್ದ ಕಂಪನಿಯಲ್ಲಿ ಪಡೆಯುತಿದ್ದ ಹಣಕ್ಕಿಂತ ಹೆಚ್ಚಿನ ಕೂಲಿಯನ್ನು ಪಡೆಯತೊಡಗಿದರು. ನಿಗದಿತ ಅವಧಿಯಲ್ಲಿ ಸರಕುಗಳು, ಮತ್ತು ಕಲ್ಲಿದ್ದಲು ರವಾನೆಯಾದ ಪ್ರಯುಕ್ತ ನೀಡುತಿದ್ದ ಬೋನಸ್ ಹಣದಲ್ಲಿ ಕೇವಲ ಶೇ. 20 ರಷ್ಟನ್ನು ತಾನು ಇಟ್ಟಕೊಂಡು ಉಳಿದ 80ರಷ್ಟು ಭಾಗವನ್ನು  ಕಾರ್ಬೆಟ್‌ ಕಾರ್ಮಿಕರಿಗೆ ಹಂಚಿಬಿಡುತಿದ್ದ.

ರೈಲ್ವೆ ನಿಲ್ಧಾಣದ ಪಕ್ಕದಲ್ಲಿ ಕಾಮಿಕರಿಗೆ ವಸತಿ ಕಾಲೋನಿ ನಿರ್ಮಿಸಿ ಎಲ್ಲರೂ ಒಂದೆಡೆ ವಾಸಿಸುವಂತೆ ಮಾಡಿ ತಾನೂ ಕೂಡ ಕಾರ್ಮಿಕರ ಮನೆಗಳಿಗೆ ಹತ್ತಿರವಾಗಿರುವ ರೈಲ್ವೆ ಸಿಬ್ಬಂದಿಗಾಗಿ ನಿರ್ಮಿಸಿದ್ದ ಒಂದು ಮನೆಯೊಂದನ್ನು ಪಡೆದು ಅದರಲ್ಲಿ ವಾಸಿಸತೊಡಗಿದ.. ಕಾರ್ಬೆಟ್‌ಗೆ ನಿಲ್ದಾಣದ ಉಗ್ರಾಣದ ಉಸ್ತುವಾರಿ ಅಧಿಕಾರಿಯಾದ ಸ್ಟೋರರ್ ಬಂಗಲೆಯಲ್ಲಿ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲದೆ, ನಿಲ್ದಾಣದಲ್ಲಿ ಕೆಲಸ ಮಾಡುವ ಬ್ರಿಟೀಷರಿಗೆ ಪ್ರತ್ಯೇಕ ಕ್ಯಾಂಟಿನ್ ವ್ಯವಸ್ತೆ ಇತ್ತು. ಆದರೆ, ಅಪ್ಪಟ ಭಾರತೀಯನಂತೆ ಬದುಕಿದ್ದ ಜಿಮ್ ಕಾರ್ಬೆಟ್‌ ಇವೆಲ್ಲವನ್ನು ನಿರಾಕರಿಸಿ ಬಡ ಕೂಲಿಕಾರ್ಮಿಕರ ನಡುವೆ ಬದುಕುತ್ತಾ ಅದರಲ್ಲೇ ನೆಮ್ಮದಿ ಕಾಣುತಿದ್ದ. ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರ ಓಡಾಟ ಎಲ್ಲವೂ ಒಂದು ಸುವ್ಯವಸ್ತೆಗೆ ತಲುಪಿದ ಮೇಲೆ ಪ್ರತಿಭಾನುವಾರ ಕಾರ್ಮಿಕರಿಗೆ ಅರ್ಧ ದಿನ ರಜೆ ಘೋಷಿಸಿದ. ವಾರದ  ಸಂಬಳವನ್ನು ತಾನೇ ತನ್ನ ಮನೆಯ ಅಂಗಳದಲ್ಲಿ ಎಲ್ಲರನ್ನೂ ಕೂರಿಸಿಕೊಂಡು ಕೈಯ್ಯಾರೆ ನೀಡುತಿದ್ದ. ಪ್ರತಿಯೊಬ್ಬ ಕಾರ್ಮಿಕನ ಕುಟುಂಬದ ಬಗ್ಗೆ ವಿಚಾರಿಸುತಿದ್ದ. ಅವರು ಕಾಯಿಲೆ ಬಿದ್ದರೆ, ತಾನೇ ಉಪಚರಿಸುತಿದ್ದ. ಜಿಮ್ ಕಾರ್ಬೆಟ್‌ನ ಈ ಪ್ರೀತಿ, ಅವನ ನಡುವಳಿಕೆ ಕಾರ್ಮಿಕರ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದವು.

ದಿನವಿಡಿ ದುಡಿಯುತಿದ್ದ ಕಾರ್ಮಿಕರ ಮಕ್ಕಳ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಮಾಡಬೇಕೆಂದು ಕಾರ್ಬೆಟ್‌ನ ಒಳಮನಸ್ಸು ತುಡಿಯುತಿತ್ತು. ಆದರೆ ಅದು ಒಬ್ಬ ವ್ಯಕ್ತಿ ಏಕಾಂಗಿಯಾಗಿ ಮಾಡುವ ಕೆಲಸವಾಗಿರಲಿಲ್ಲ. ಕಾರ್ಮಿಕರ ಮಕ್ಕಳು ಶಾಲೆಗೆ ಹೋಗದೇ ಇಡೀ ದಿನ ತಮ್ಮ ಶೆಡ್ಡುಗಳ ಹತ್ತಿರ ಆಟವಾಡುತ್ತಾ ಕಾಲ ಕಳೆಯುತಿದ್ದರು. ಒಮ್ಮೆ ಈ ಕುರಿತಂತೆ ಕಾರ್ಬೆಟ್‌ ತನಗಿಂತ ಹಿರಿಯವನಾಗಿದ್ದ, ರೈಲ್ವೆ ಸ್ಟೇಶನ್ ಮಾಸ್ಟರ್ ರಾಮ್ ಶರಣ್ ಜೊತೆ ಮಾತನಾಡುತ್ತಾ ಕಾರ್ಮಿಕರ ಮಕ್ಕಳಿಗೆ ಶಾಲೆ ಪ್ರಾರಂಭಿಸಿದರೆ ಹೇಗೆ? ಎಂಬ ಪ್ರಶ್ನೆ ಹಾಕಿದ. ತನ್ನ ಸೇವೆಯುದ್ದಕ್ಕೂ ಬ್ರಿಟೀಷರು ಭಾರತೀಯರನ್ನು ಎರಡನೇ ದರ್ಜೆಯ ನಾಗರೀಕರಂತೆ ಕಾಣುತಿದ್ದುದನ್ನು ಮನಗಂಡಿದ್ದ ರಾಮ್ ಶರಣ್, ಕಾರ್ಬೆಟ್‌ ನಲ್ಲಿ ಇಂತಹ ಅಂಶವನ್ನು ಕಂಡಿರಲಿಲ್ಲ. ಎಲ್ಲರನ್ನೂ ಸಮಾನ ಮನೋಭಾವದಿಂದ ನೋಡುತಿದ್ದ ಕಾರ್ಬೆಟ್‌ ಬಗ್ಗೆ ಅವನಲ್ಲಿ ಅಪಾರ ಗೌರವ ಇತ್ತು ಹಾಗಾಗಿ ಕೂಡಲೇ ಕಾರ್ಬೆಟ್‌ ನ ಕನಸಿನ ಯೋಜನೆಗೆ ರಾಮ್ ಶರಣ್ ಕೈಜೋಡಿಸಿದ.

ಇಬ್ಬರೂ ಸೇರಿ ನಿಲ್ದಾಣದ ಬಳಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿ ಒಬ್ಬ ಶಿಕ್ಷಕನನ್ನು ನೇಮಕ ಮಾಡಿ ಶಾಲೆಯನ್ನು ಪ್ರಾರಂಭಿಸಿದರು. ಮುವತ್ತು ಮಕ್ಕಳು ಮತ್ತು ಒಬ್ಬ ಶಿಕ್ಷಕನಿಂದ ಪ್ರಾರಂಭವಾದ ಈ ಶಾಲೆ ಕೇವಲ ಎರಡು ವರ್ಷದಲ್ಲಿ 270 ಮಕ್ಕಳು ಮತ್ತು 7 ಮಂದಿ ಶಿಕ್ಷಕರನ್ನು ಒಳಗೊಂಡಿತು. ಕಾರ್ಬೆಟ್‌ ತನ್ನ ಸ್ವಂತ ಖರ್ಚಿನಲ್ಲಿ ಮತ್ತಷ್ಟು ಕೊಠಡಿಗಳನ್ನ ನಿರ್ಮಿಸಿಕೊಟ್ಟ.. ಪಾಠದ ಜೊತೆ ಆಟಕ್ಕೂ ಪ್ರಾಶಸ್ತ್ಯ ನೀಡಿದ ಜಿಮ್ ಕಾರ್ಬೆಟ್‌ ಸಮಾರಿಯಾ ರೈಲ್ವೆ ನಿಲ್ದಾಣದಲ್ಲಿ ಸ್ಟೇಶನ್ ಮಾಸ್ಟರ್ ಆಗಿದ್ದ ಟಾಮ್ ಕೆಲ್ಲಿ ಜೊತೆಗೂಡಿ ಶಾಲೆಯ ಮಕ್ಕಳಿಗೆ ಹಾಕಿ ಮತ್ತು ಪುಟ್ಬಾಲ್ ಕ್ರೀಡೆಗಳನ್ನು ಪರಿಚಯಿಸಿದ. ಆಟಕ್ಕೆ ಬೇಕಾದ ಕ್ರೀಡಾ ಸಾಮಾಗ್ರಿಗಳನ್ನು ಕಾರ್ಬೆಟ್‌ ಮತ್ತು ಟಾಮ್ ಕೆಲ್ಲಿ ಇಬ್ಬರೂ ಕೂಡಿ  ತಮ್ಮ ಸ್ವಂತ ಹಣದಿಂದ ಖರೀದಿಸಿ ಶಾಲೆಗೆ ಧಾನವಾಗಿ ನೀಡಿದರು. ಅಲ್ಲದೆ, ತಮಗೆ ಬಿಡುವು ದೊರೆತಾಗ  ಮಕ್ಕಳ ಜೊತೆ ಹಾಕಿ, ಪುಟ್ಬಾಲ್ ಪಂದ್ಯಗಳಲ್ಲಿ  ಪಾಲ್ಗೊಂಡು ಆಟವಾಡುತಿದ್ದರು. ಮುಂದೆ ಈ ಶಾಲೆಯನ್ನು ಸರ್ಕಾರ ವಹಿಸಿಕೊಂಡಿತು. ಇದೀಗ ಈ ಶಾಲೆ ಮೊಕಮೆಘಾಟ್ ರೈಲ್ವೆ ನಿಲ್ದಾಣದ ಸಮೀಪ ಕೇಂದ್ರೀಯ ವಿದ್ಯಾಲಯವಾಗಿ ಹೆಮ್ಮರದಂತೆ ಬೆಳೆದು ನಿಂತಿದೆ ಅಲ್ಲದೆ  ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರುತಿದೆ.

(ಮುಂದುವರಿಯುವುದು)