ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ

-ದಿನೇಶ್ ಕುಮಾರ್ ಎಸ್.ಸಿ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ.

ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ. ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ.

ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ತಾವೂ ಅಂಧಶ್ರದ್ಧೆಗೆ ಬಿದ್ದು ಜ್ಯೋತಿಷ್ಯದಂಥ ಕಾರ್ಯಕ್ರಮಗಳನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲ. ಚಾನಲ್‌ನಲ್ಲಿ ಮಾತನಾಡುವ ಜ್ಯೋತಿಷಿಗಳು ಹೇಳುವ ಮಾತುಗಳನ್ನು ಚಾನಲ್ ನವರೇ ನಂಬುವುದಿಲ್ಲ, ಅನುಸರಿಸುವುದಿಲ್ಲ. ಈ ಮೀಡಿಯಾ ಜನರಿಗೆ ತಮ್ಮದು ಮುಠ್ಠಾಳ, ಮನೆಹಾಳ ಕಾರ್ಯಕ್ರಮಗಳು ಎಂಬುದು ಚೆನ್ನಾಗಿಯೇ ಗೊತ್ತು.

ಎಲೆಕ್ಟ್ರಾನಿಕ್ ಮಾಧ್ಯಮಗಳು ಹಲವು ಬಗೆಯ ಮೌಢ್ಯಗಳನ್ನು ಪ್ರಸಾರ ಮಾಡುತ್ತಿವೆ. ಪ್ರಸಾರ ಮಾಡುತ್ತಿವೆ ಎಂಬ ಶಬ್ದಕ್ಕಿಂತ ಮಾರಾಟ ಮಾಡುತ್ತಿವೆ ಎಂಬ ಶಬ್ದವನ್ನು ಬಳಸಲು ಬಯಸುತ್ತೇನೆ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಪ್ರತಿ ಕಾರ್ಯಕ್ರಮವೂ ಮಾರಾಟದ ಸರಕು. ಜ್ಯೋತಿಷ್ಯ, ಪುನರ್ಜನ್ಮ, ಬಾನಾಮತಿ, ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರ, ಮಾಟ-ಮಂತ್ರ ಇತ್ಯಾದಿಗಳೆಲ್ಲವೂ ಬಹುಬೇಗ ಸೇಲ್ ಆಗುವ ವಸ್ತುಗಳು. ಜನರಿಗೆ ಅಂತೀಂದ್ರಿಯವಾದದ್ದೆಲ್ಲ ಕುತೂಹಲ ಹುಟ್ಟಿಸುತ್ತವೆ. ಯಾವುದಕ್ಕೆ ವೈಜ್ಞಾನಿಕ ತರ್ಕ ವಿಶ್ಲೇಷಣೆಗಳು ಬಹುಬೇಗ ತಲೆಗೆ ಹೊಳೆಯುತ್ತವೋ ಅಂಥವು ಜನರಿಗೆ ಬೇಕಾಗಿಲ್ಲ. ಹೀಗಾಗಿ ತಮ್ಮ ಬುದ್ಧಿಗೆ ನಿಲುಕದ್ದನ್ನೆಲ್ಲ ಜನರು ಆಶ್ಚರ್ಯದಿಂದ ನೋಡುತ್ತಾರೆ. ಮತ್ತು ಅದಕ್ಕೆ ತಲೆಕೊಡುತ್ತಾರೆ. ಇದು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ಗೊತ್ತಿರುವ ವಿಷಯ. ಹೀಗಾಗಿ ಅವು ಒಂದಾದ ಮೇಲೊಂದರಂತೆ ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನ ಗೆಳೆಯನೊಬ್ಬ ಇದನ್ನು ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾನೆ. ಅವನ ದೃಷ್ಟಿಯಲ್ಲಿ ಅವನೊಬ್ಬ ಪತ್ರಕರ್ತನಲ್ಲ. ಒಬ್ಬ ಬಿಜಿನೆಸ್ ಮ್ಯಾನ್, ಅವನ ಜತೆ ಕೆಲಸ ಮಾಡುವ ಸಹ ಪತ್ರಕರ್ತರು ಸೇಲ್ಸ್ ಮನ್‌ಗಳು. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಅವರಿಗೆ ಮುಖ್ಯ. ಜನರಿಗೆ ಏನನ್ನು ಕೊಡಬೇಕು ಎಂಬುದು ಮುಖ್ಯವಲ್ಲ. ಒಂದು ವೇಳೆ ಜನರಿಗೆ ನಿಜವಾಗಿಯೂ ಕೊಡಬೇಕಾಗಿದ್ದನ್ನು ಕೊಟ್ಟರೆ ಅವರು ಸ್ಪರ್ಧೆಯಲ್ಲಿ ಉಳಿಯುವುದಿಲ್ಲ. ಹೀಗಾಗಿ ನಾವು ಜನ ನೋಡುವುದನ್ನಷ್ಟೆ ಕೊಡುತ್ತೇವೆ ಎನ್ನುತ್ತಾನೆ ಆತ. ಹೀಗಾಗಿ ಜ್ಯೋತಿಷ್ಯ, ಮಾಟ-ಮಂತ್ರ, ಸೆಕ್ಸ್, ಕ್ರಿಕೆಟ್ ಇಂಥವುಗಳೇ ಚಾನಲ್‌ಗಳಿಗೆ ಆದ್ಯತೆಯ ವಿಷಯ. ಅವುಗಳನ್ನು ಬಿಟ್ಟು ಇವು ಬದುಕಲಾರಂತೆ ಆಗಿಹೋಗಿವೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡ ತರುವಾಯ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಹೇಳಿದ್ದು ಇದನ್ನೇ. ಅವರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು ತೀವ್ರ ಅಸಮಾಧಾನವಿತ್ತು. ಚಾನಲ್‌ಗಳು ಅಂಧಶ್ರದ್ಧೆಗಳನ್ನು ಹರಡುತ್ತಿವೆ. ಇವುಗಳಿಗೆ ಲಗಾಮು ಹಾಕಲೇಬೇಕು ಎಂಬ ಮಾತುಗಳನ್ನು ಅವರು ಆಡಿದರು. ಖಟ್ಜು ಕೆಲವು ದೇಶಮಟ್ಟದ ಹಿಂದಿ ಚಾನಲ್‌ಗಳನ್ನು ನೋಡಿ ಈ ಅಭಿಪ್ರಾಯ ಹೇಳಿರಬಹುದು. ಒಂದು ವೇಳೆ ಅವರು ನಮ್ಮ ಕನ್ನಡ ಚಾನಲ್‌ಗಳನ್ನು ನೋಡಿದ್ದರೆ, ಅದರಲ್ಲೂ ನರೇಂದ್ರ ಬಾಬು ಶರ್ಮನಂಥವನ ಮಾತುಗಳನ್ನು ಒಂದು ಹತ್ತು ನಿಮಿಷ ಕೇಳಿದ್ದರೆ ಅವರ ಎದೆ ಒಡೆದುಹೋಗುತ್ತಿತ್ತೇನೋ?

ಆರ್ಥಿಕ ಉದಾರೀಕರಣ, ಜಾಗತೀಕರಣದ ಪರಿಣಾಮವಾಗಿ ದೇಶದಲ್ಲಿಂದು ಎಲೆಕ್ಟ್ರಾನಿಕ್ ಮಾಧ್ಯಮ ಬೆಳೆದು ನಿಂತಿದೆ. ಈಗ ಅದು ಲಂಗು ಲಗಾಮಿಲ್ಲದ ಕುದುರೆ. ನಮ್ಮ ಪತ್ರಿಕಾ ಮಾಧ್ಯಮಕ್ಕೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ ಅವುಗಳ ರಚನೆ, ದೃಷ್ಟಿಯಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಪತ್ರಿಕಾ ಮಾಧ್ಯಮ ಭಾರತದ ಮಟ್ಟಿಗೆ ಬೆಳೆಯಲು ಶುರುವಾಗಿದ್ದು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ. ಆ ಕಾಲದಲ್ಲಿ ಪತ್ರಿಕಾ ಮಾಧ್ಯಮಗಳ ಧೋರಣೆ ಹೇಗಿತ್ತೆಂದರೆ ಅದು ಒಂದು ಆದರ್ಶದ ಕ್ಷೇತ್ರವಾಗಿತ್ತು. ಅದೂ ಕೂಡ ಚಳವಳಿಯ ಭಾಗವಾಗಿಯೇ ಕೆಲಸ ಮಾಡುತ್ತಿತ್ತು.

ಇವತ್ತಿಗೂ ನೀವು ಪತ್ರಿಕೆಗಳನ್ನು, ಅದರಲ್ಲೂ ವಿಶೇಷವಾಗಿ ದಿನಪತ್ರಿಕೆಗಳನ್ನು ನೋಡಿ. ಅವುಗಳು ಸಾಮಾಜಿಕ ಕಳಕಳಿ ಅವುಗಳಿಗೆ ಸ್ಥಾಯಿಯಾದ ಉದ್ದೇಶಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಕೆಲವು ರಾಜಕೀಯ ಪಕ್ಷಗಳ, ವ್ಯಕ್ತಿಗಳ, ಸಂಘಟನೆಗಳ ತುತ್ತೂರಿಯಾಗಿದ್ದರೂ ಅಲ್ಲಿ ಜನಪರವಾದ ಸುದ್ದಿಗಳಿಗೆ ಮಹತ್ವ ಇದ್ದೇ ಇರುತ್ತದೆ. ಯಾವುದೋ ಹಳ್ಳಿಯ ಏನೋ ಸಮಸ್ಯೆಯನ್ನು ಒಬ್ಬ ಓದುಗ ವಾಚಕರ ವಾಣಿಯಲ್ಲಿ ಬರೆಯಬಲ್ಲ, ಆ ಸುದ್ದಿ ಇತರ ಓದುಗರಿಗೆ ಅಪ್ರಸ್ತುತವಾಗಿದ್ದರೂ ಕೂಡ.

ಅದಕ್ಕಿಂತ ಹೆಚ್ಚಾಗಿ ವೃತ್ತ ಪತ್ರಿಕೆಗಳ ಪತ್ರಕರ್ತರನ್ನು ಆ ಪತ್ರಿಕೆಗಳ ಮಾಲೀಕ ನನಗೆ ಸೇಲ್ ಆಗುವ ಸುದ್ದಿಯನ್ನೇ ಬರೆಯಬೇಕು ಎಂದು ಎಂದೂ ಸಹ ಕೈಹಿಡಿದು ಬರೆಸಲು ಹೋಗುವುದಿಲ್ಲ. ಅಷ್ಟು ಸ್ವಾತಂತ್ರ್ಯವನ್ನು ಈ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ವರದಿಗಾರ ಸೇಲ್ ಆಗುವ ಸುದ್ದಿಯನ್ನೇ ಕೊಡಬೇಕು. ಕೊಡದೇ ಇದ್ದರೆ ಸಂಪಾದಕ ಸ್ಥಾನಗಳಲ್ಲಿರುವವರು ತಲೆ ತಿನ್ನಲು ಶುರು ಮಾಡಿರುತ್ತಾನೆ. ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕುವ ವರದಿಗಾರ ತನ್ನ ಇಚ್ಛೆಗೆ ವಿರುದ್ಧವಾಗಿ ಜನಪ್ರಿಯ ಸುದ್ದಿಗಳ ಬೆನ್ನುಹತ್ತುತ್ತಾನೆ.

ಹೀಗಾಗಿ ಯಾವುದೋ ಒಂದು ಕಾಲೇಜಿನ ಮುಂಭಾಗ ಯಾರೋ ಒಂದು ನಿಂಬೆಹಣ್ಣು, ಕುಂಕುಮದ ಪೊಟ್ಟಣ, ಸಣ್ಣ ಬೊಂಬೆ ಇಟ್ಟು ಹೋಗಿದ್ದರೆ ಚಾನಲ್ ವರದಿಗಾರ ಎಲ್ಲವನ್ನೂ ಬಿಟ್ಟು ಓಬಿವ್ಯಾನ್ ತಂದು ಅದರ ಕವರೇಜ್ ಗೆ ನಿಂತುಬಿಡುತ್ತಾನೆ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲೆಂದೇ ಮಾಟ ಮಾಡಿಸಿದ್ದಾನೆ ಎಂದು ಓತಪ್ರೋತ ಕಥೆ ಕಟ್ಟುತ್ತಾನೆ. ಚಾನಲ್ ಗಳಲ್ಲಿ ಗಂಟೆಗಟ್ಟಲೆ ಪ್ಯಾನಲ್ ಚರ್ಚೆ ಶುರುವಾಗಿಬಿಡುತ್ತದೆ. ಅಲ್ಲಿ ಕೆಲವು ಚಿತ್ರವಿಚಿತ್ರ ವೇಷದ ಜ್ಯೋತಿಷಿಗಳು, ಮಾಟಗಾರರು, ಕಾಳಿ ಉಪಾಸಕರೆಂದು ಹೇಳಿಕೊಳ್ಳುವ ಆಂಟಿ ಮಾಟಗಾರರು (ವೈರಸ್ ಗಳಿಗೆ ಆಂಟಿವೈರಸ್ ಗಳಿದ್ದಂತೆ ಈ ಆಂಟಿ ಮಾಟಗಾರರು, ಇವರೂ ಕೂಡ ಒಂದು ಥರದ ವೈರಸ್ಸುಗಳೇ) ಬಂದು ಕುಳಿತುಬಿಡುತ್ತಾರೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತೇವೆಂಬ ಕಾರಣಕ್ಕೆ ಕ್ಯಾಮೆರಾ ಮುಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಚಾನಲ್‌ಗಳ ಹೊಟ್ಟೆ ತುಂಬುತ್ತದೆ.

ನಿತ್ಯ ಬೆಳಿಗ್ಗೆ ನೀವು ಟಿವಿ ಆನ್ ಮಾಡಿ ನೋಡಿ. ಎಲ್ಲ ಚಾನಲ್ ಗಳಲ್ಲೂ ವಿಚಿತ್ರ ಪೋಷಾಕುಗಳನ್ನು ಧರಿಸಿ, ವಿಚಿತ್ರ ರೀತಿಯಲ್ಲಿ ಸಜ್ಜುಗೊಳಿಸಿದ ಸ್ಟುಡಿಯೋದಲ್ಲಿ ಜ್ಯೋತಿಷಿಗಳು ಹಾಜರಾಗಿರುತ್ತಾರೆ. ಕೆಲವು ಜ್ಯೋತಿಷಿಗಳೋ ತಮ್ಮನ್ನು ತಾವು ಗರ್ಭಗುಡಿಯಲ್ಲಿ ಕುಳಿತುಕೊಂಡ ಹಾಗೆ ಸ್ಟುಡಿಯೋ ಅಲಂಕಾರ ಮಾಡಿಸಿಕೊಂಡಿರುತ್ತಾರೆ. ತಮ್ಮ ತಲೆಯ ಹಿಂದೆ ಡ್ಯೂಪ್ಲಿಕೇಟ್ ಪ್ರಭಾವಳಿಗಳ ಸಮೇತ ಆಸೀನರಾಗಿ ಜ್ಯೋತಿಷ್ಯ ಶುರುಮಾಡುತ್ತಾರೆ. sಸಾಧಾರಣವಾಗಿ ಕನ್ನಡ ಚಾನಲ್‌ಗಳಲ್ಲಿ ಈ ಜ್ಯೋತಿಷಿಗಳು ಲ್ಯಾಪ್ ಟಾಪ್ ನಲ್ಲಿ ಜ್ಯೋತಿಷ್ಯದ ಒಂದು ರೆಡಿಮೇಡ್ ಸಾಫ್ಟ್ ವೇರ್ ಹಾಕಿಕೊಂಡು ಕೂತಿರುತ್ತಾರೆ. ಒಬ್ಬ ನಿರೂಪಕಿ ಜತೆಗೆ ಕುಳಿತಿರುತ್ತಾಳೆ. ಆಕೆಯೇ ದೂರವಾಣಿ ಕರೆಗಳನ್ನು ಸ್ವೀಕರಿಸಿ ವೀಕ್ಷಕನ/ವೀಕ್ಷಕಳ ಜನ್ಮದಿನಾಂಕ ಪಡೆಯುತ್ತಾಳೆ, ಅವಳು ಅವನ ಜತೆ ಮಾತನಾಡುತ್ತಿರುವಾಗ ಜ್ಯೋತಿಷಿ ಲ್ಯಾಪ್ ಟಾಪ್‌ನಲ್ಲಿ ಜನ್ಮದಿನಾಂಕ ಎಂಟ್ರಿ ಮಾಡಿ, ಗುರು, ಶನಿ, ರಾಹು ಎಲ್ಲರೂ ಯಾವ್ಯಾವ ಮನೆಯಲ್ಲಿದ್ದಾರೆ ಎಂಬುದನ್ನು ಗಮನಿಸಿ ತನ್ನ ಜಡ್ಜ್‌ಮೆಂಟ್ ಕೊಡೋದಕ್ಕೆ ಶುರು ಮಾಡುತ್ತಾನೆ.

ಸಾಧಾರಣವಾಗಿ ಈ ಜ್ಯೋತಿಷಿಗಳು ದುರಹಂಕಾರಿಗಳು. ಅವರು ಮಾತನಾಡುವ ಶೈಲಿಯನ್ನು ಸರಿಯಾಗಿ ಗಮನಿಸಿ. ತಾವು ಏನನ್ನು ಹೇಳುತ್ತಿದ್ದೇವೋ ಅದೇ ಸತ್ಯ ಎಂಬ ಉಡಾಫೆ ಅವರುಗಳದ್ದು. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಅವರ ಬಳಿ ಪರಿಹಾರವಿದೆ. ಚಿತ್ರ ವಿಚಿತ್ರವಾದ ಪರಿಹಾರಗಳನ್ನು ಅವರು ನೀಡುತ್ತಾರೆ. ತುಪ್ಪದ ದೀಪ ಹಚ್ಚಿ ಎನ್ನುವುದರಿಂದ ಹಿಡಿದು, ಆ ದೇವಸ್ಥಾನದಲ್ಲಿ ಅಭಿಷೇಕ ಮಾಡಿ, ಈ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ಮನೆ ಸುತ್ತ ಎಳ್ಳು ಚೆಲ್ಲಿ, ಬಿಳಿ ಬಟ್ಟೆ ಹಾಕ್ಕೊಳ್ಳಿ, ಶನಿವಾರ ಮನೆಯಿಂದ ಹೊರಗೆ ಹೋಗಬೇಡಿ, ಬೀದಿ ನಾಯಿಗೆ ಊಟ ಹಾಕಿ ಎನ್ನುವವರೆಗೆ ಈ ಪರಿಹಾರಗಳಿರುತ್ತವೆ. ಒಬ್ಬ ಜ್ಯೋತಿಷಿ ಕಳೆದ ವರ್ಷ ಫೆಬ್ರವರಿಯಲ್ಲಿ ಜಗತ್ತು ಪ್ರಳಯವಾದಂತೆ ತಡೆಯಲು ದೇವಸ್ಥಾನಗಳಲ್ಲಿ ಐದು ವಿಧವಿಧದ ಎಣ್ಣೆಗಳನ್ನು ಬಳಸಿ ದೀಪ ಹಚ್ಚಿ ಎಂದು ಕರೆ ನೀಡಿದ್ದ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಅಂದು ನೂಕುನುಗ್ಗಲು.

ಜ್ಯೋತಿಷ್ಯ ಸಾಕಾಗದೇ ಹೋದಾಗ ಚಾನಲ್‌ಗಳು ಪುನರ್ಜನ್ಮ ಕುರಿತು ಕಾರ್ಯಕ್ರಮ ಮಾಡುತ್ತವೆ. ವ್ಯಕ್ತಿಯೊಬ್ಬನಿಗೆ ಪ್ರಜ್ಞೆ ತಪ್ಪಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿ ಅವನ ಪುನರ್ಜನ್ಮದ ಕಥೆ ಕೇಳುವುದು ಈ ಕಾರ್ಯಕ್ರಮದ ತಂತ್ರ. ಇದೂ ಸಹ ಸ್ಕ್ರಿಪ್ಟೆಡ್ ಕಾರ್ಯಕ್ರಮ. ಸತ್ತ ಕೆಲವೇ ದಿವಸಕ್ಕೆ ಚಾನಲ್ ಒಂದರಲ್ಲಿ ಸಾಯಿಬಾಬಾ ಬಂದು ಮಾತನಾಡಿದ್ದೂ ಸಹ ಹೀಗೆಯೇ.

ಇನ್ನೊಂದು ಗಮನಿಸಬೇಕಾದ ಅಂಶವೊಂದಿದೆ. ಜ್ಯೋತಿಷ್ಯ, ಮಾಟ ಮಂತ್ರ ಇನ್ನಿತ್ಯಾದಿ ಅಂಧಶ್ರದ್ಧೆಗಳ ವಿರುದ್ಧ ಸುದ್ದಿ ಮಾಡಿದರೂ, ಕಾರ್ಯಕ್ರಮ ಮಾಡಿದರೂ ಜನರು ನೋಡುತ್ತಾರೆ. ಹಿಂದೆ ಕ್ರೈಂ ಡೈರಿ, ಕ್ರೈಂಡ ಸ್ಟೋರಿ ಥರಹದ ಕಾರ್ಯಕ್ರಮಗಳಲ್ಲಿ ಬ್ಲೇಡ್ ಬಾಬಾಗಳು, ಡೋಂಗಿ ಸ್ವಾಮಿಗಳು, ಸುಳ್ಳು ದೇವರನ್ನು ಆವಾಹನೆ ಮಾಡಿಕೊಳ್ಳುವವರ ವಿರುದ್ಧ ಕಾರ್ಯಕ್ರಮಗಳು ಬರುತ್ತಿದ್ದವು. ಇತ್ತೀಚಿಗೆ ಹುಲಿಕಲ್ ನಟರಾಜ್ ಅವರ ಪವಾಡ ಬಯಲು ಕಾರ್ಯಕ್ರಮಗಳೂ ಸಹ ಜನಪ್ರಿಯವಾಗಿದ್ದವು. ಆದರೆ ಚಾನಲ್ ಗಳಿಗೆ ಹೊಟ್ಟೆ ತುಂಬಿಸುವಷ್ಟು ಇವು ಶಕ್ತವಾಗಿಲ್ಲ. ಹೀಗಾಗಿ ಅವು ಹೀಗೂ ಉಂಟೆ ಥರದ ಕಾರ್ಯಕ್ರಮಗಳನ್ನು ವರ್ಷಗಟ್ಟಲೆ ಪ್ರಸಾರ ಮಾಡುತ್ತವೆ.

ಜ್ಯೋತಿಷ್ಯ ಈಗ ಕವಲೊಡೆದು ಹೆಮ್ಮರವಾಗಿ ಬೆಳೆದಿದೆ. ಜ್ಯೋತಿಷಿಗಳಿಗೆ ವಾಸ್ತು ತಜ್ಞರು, ಸಂಖ್ಯಾ ತಜ್ಞರು, ಮಂತ್ರವಾದಿಗಳು ಪೈಪೋಟಿ ನೀಡುತ್ತಿದ್ದಾರೆ. ಹಿಂದೆ ಜ್ಯೋತಿಷಿಗಳನ್ನು ಸ್ಟುಡಿಯೋ ಚರ್ಚೆಗೆ ಕರೆದರೆ ಜತೆಯಲ್ಲಿ ಪ್ರತಿವಾದ ಮಾಡಲು ಒಬ್ಬ ವಿಜ್ಞಾನಿಯನ್ನೋ, ವಿಜ್ಞಾನ ಬರಹಗರಾರನ್ನೋ ಕಾಟಚಾರಕ್ಕಾದರೂ ಕರೆಯುತ್ತಿದ್ದರು. ಈಗ ಇವರುಗಳದ್ದೇ ದರ್ಬಾರು. ಕೆಲವು ಜ್ಯೋತಿಷಿಗಳನ್ನು ಕಿರುತೆರೆಯ ಮೇಲೆ ನೊಡುವುದಕ್ಕೆ ಭಯವಾಗುತ್ತದೆ. ಹಾಗಿರುತ್ತದೆ ಅವರ ವೇಷಭೂಷಣ. ಈ ಜ್ಯೋತಿಷಿಗಳೇ ಈಗ ಚಾನಲ್‌ಗಳಿಗೆ ಹಣ ತರುವ ಏಜೆಂಟರಾಗಿದ್ದಾರೆ.

ಅಂಧಶ್ರದ್ಧೆಗಳನ್ನು ಹರಡುವ ಚಾನಲ್‌ಗಳ ಮುಖ್ಯಸ್ಥರನ್ನೆಲ್ಲ ಒಮ್ಮೆ ಕರೆಸಿ ಅವರೊಂದಿಗೆ ಮಾತನಾಡಿ ನೋಡಿ. ಎಲ್ಲರೂ ಒಂದೇ ಉತ್ತರ ನೀಡುತ್ತಾರೆ. ಟಿಆರ್‌ಪಿಗಾಗಿ ನಾವು ಇದನ್ನೆಲ್ಲ ಮಾಡುತ್ತೇವೆ ಎಂಬುದು ಅವರು ಸೋಗು. ತಾವು ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ಅವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಟಿಆರ್‌ಪಿ ಕಪಿಮುಷ್ಠಿಯಲ್ಲಿ ನಾವೆಲ್ಲ ಸಿಕ್ಕಿಬಿದ್ದಿದ್ದೇವೆ ಎಂದು ಅವರು ತಮ್ಮ ಅಸಹಾಯಕತೆ ತೋರ್ಪಡಿಸಿಕೊಳ್ಳುತ್ತಾರೆ.

ಅಷ್ಟಕ್ಕೂ ಟಿಆರ್ ಪಿ ಎಂಬುದೇ ಮಹಾಮೋಸದ ಪ್ರಕ್ರಿಯೆ. ಅದು ನಿಜವಾದ ನೋಡುಗರ ಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಟಿಆರ್‌ಪಿಯನ್ನು ನಿರ್ಧರಿಸುವ ಸಂಸ್ಥೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಯ್ದ ಕೆಲವು ಟಿವಿ ವೀಕ್ಷಕರ ಮನೆಗಳಲ್ಲಿ ತಮ್ಮ ಉಪಕರಣಗಳನ್ನು ಜೋಡಿಸಿರುತ್ತಾರೆ. ಅವರು ಯಾವ ಚಾನಲ್ ನ ಯಾವ ಕಾರ್ಯಕ್ರಮ ನೋಡುತ್ತಾರೆ ಎಂಬುದರ ಆಧಾರದ ಮೇಲೆ ಟಿಆರ್‌ಪಿ ಮತ್ತು ಜಿಆರ್‌ಪಿಗಳು ನಿರ್ಧಾರವಾಗುತ್ತವೆ. ಟಿಆರ್ ಪಿಯನ್ನು ಆಧರಿಸಿ ಜಾಹೀರಾತು ಸಂಸ್ಥೆಗಳು ಜಾಹೀರಾತು ನೀಡುತ್ತವೆ. ಜಾಹೀರಾತು ಇಲ್ಲದೇ ಇದ್ದರೆ ಚಾನಲ್‌ಗಳು ಬದುಕುವುದಿಲ್ಲ. ಹೀಗಾಗಿ ಅವುಗಳಿಗೆ ಟಿಆರ್‌ಪಿ ಬೇಕೇಬೇಕು.

ಟಿಆರ್ ಪಿ ಮೆಷಿನ್ನುಗಳು ಪಟ್ಟಣಗಳಲ್ಲಿ ಇರುವುದಿಲ್ಲ, ಹಳ್ಳಿಗಳಲ್ಲಿ ಇರುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಜನರ ಇಷ್ಟಾನಿಷ್ಟಗಳು ಮೆಷಿನ್ನುಗಳಲ್ಲಿ ಲೆಕ್ಕ ಆಗೋದೇ ಇಲ್ಲ. ಹಾಗೆ ನೋಡಿದರೆ ಆಧುನೀಕರಣದ ಭರಾಟೆಯಲ್ಲಿ ಗ್ರಾಮೀಣ ಜನರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವವರಾದರೂ ಯಾರು? ಟಿಆರ್‌ಪಿ ಮೆಷಿನ್ನುಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಯಾಕೆ ಇಡುವುದಿಲ್ಲವೆಂಬ ಪ್ರಶ್ನೆಗೆ ಉತ್ತರವೂ ಆಘಾತಕಾರಿಯಾಗಿಯೇ ಇದೆ. ಗ್ರಾಮೀಣ ಜನರು ಜಾಹೀರಾತುದಾರರ ಗ್ರಾಹಕರಲ್ಲವಾದ್ದರಿಂದ ಹಳ್ಳಿಗಳ ಜನರ ಅಭಿರುಚಿ, ಇಷ್ಟಗಳನ್ನು ಅವರು ಲೆಕ್ಕ ಹಾಕುವುದಿಲ್ಲವಂತೆ.

ಇಂಥ ಸನ್ನಿವೇಶದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮೌಢ್ಯವನ್ನು ಬಿತ್ತುವ ಕೆಲಸವನ್ನು ನಿಲ್ಲಿಸುವುದಾದರೂ ಹೇಗೆ? ಇದು ಯಾರ ಹೊಣೆಗಾರಿಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಈ ಸಮಸ್ಯೆಗೆ ಇದುವರೆಗೆ ಯಾರೂ ಸಹ ಮುಖಾಮುಖಿಯಾಗಿ ನಿಂತು ಪರಿಹಾರಕ್ಕೆ ಯತ್ನಿಸದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಸಾಮಾಜಿಕ ಸಂಘಟನೆಗಳು ಇಂಥ ಅಂಧಶ್ರದ್ಧೆಗಳ ವಿರುದ್ಧ ಮಾತನಾಡುತ್ತವೆ, ಆದರೆ ಚಾನಲ್ ಗಳ ಮುಂದೆ ನಿಂತು ಇದನ್ನು ಹೇಳಲು ಯತ್ನಿಸಿದ ಉದಾಹರಣೆಗಳು ಕಡಿಮೆ. ಸುದ್ದಿಮಾಧ್ಯಮಗಳನ್ನು ಎದುರುಹಾಕಿಕೊಳ್ಳಲು ಸಂಘಟನೆಗಳು ಹಿಂದೆಮುಂದೆ ನೋಡುತ್ತವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಧ್ವನಿಗಳು ಮೊಳಗಿದರೂ ಅವು ಹಾಗೆಯೇ ತಣ್ಣಗಾಗುತ್ತವೆ.

ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಪಾತ್ರ ವಹಿಸಬಹುದಾಗಿರುವುದು ಮೀಡಿಯಾದ ಬಹುಮುಖ್ಯ ಭಾಗವಾಗಿರುವ ಪತ್ರಿಕಾರಂಗ. ಎಲೆಕ್ಟ್ರಾನಿಕ್ ಮಾಧ್ಯಮಗಳ ಇಂಥ ಹೊಣೆಗೇಡಿತನದ ವಿರುದ್ಧ ಮಾತನಾಡಬಹುದಾಗಿರುವುದು ಪತ್ರಿಕೆಗಳು. ಆದರೆ ನೋವಿನ ಸಂಗತಿಯೆಂದರೆ ಈ ಪತ್ರಿಕೆಗಳು ಕೂಡ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವಳಿಗೆ ಒಳಗಾಗಿ ಜ್ಯೋತಿಷ್ಯ ಸಂಬಂಧಿ ಲೇಖನಗಳನ್ನು ದಿನೇದಿನೇ ಹೆಚ್ಚು ಮಾಡುತ್ತಲೇ ಇವೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜ್ಯೋತಿಷ್ಯಕ್ಕಾಗಿಯೇ ವಾರಕ್ಕೊಂದು ವಿಶೇಷ ಪುರವಣಿಯನ್ನು ನೀಡುತ್ತಿವೆ. ಯಾವ ನೈತಿಕ ಧೈರ್ಯದಿಂದ ಇವುಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಮಾತನಾಡಬಲ್ಲವು? ಒಂದು ಮಾಧ್ಯಮದ ತಪ್ಪುಗಳನ್ನು ಇನ್ನೊಂದು ಮಾಧ್ಯಮದವರು ಬರೆಯಬಾರದು ಎಂಬ ಅಲಿಖಿತ ನಿಯಮವೊಂದು ಕನ್ನಡ ಮಾಧ್ಯಮರಂಗದಲ್ಲಿ ಜಾರಿಯಲ್ಲಿದೆ. ಇದು ಇನ್ನೊಂದು ಬಗೆಯ ಮೌಢ್ಯ. ಇವರು ಪರಸ್ಪರ ಕೆಸರು ಎರಚಿಕೊಂಡು ಹೊಡೆದಾಡಲಿ ಎಂದು ಯಾರೂ ಬಯಸುತ್ತಿಲ್ಲ. ಆದರೆ ಒಂದು ಮಾಧ್ಯಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವಾಗ ಇನ್ನೊಂದು ಮಾಧ್ಯಮ ಸುಮ್ಮನೇ ಕುಳಿತುಕೊಳ್ಳುವುದು ಆತ್ಮವಂಚನೆಯಲ್ಲವೇ?

ಈ ಆತ್ಮವಂಚನೆಯ ವಿರುದ್ಧ ಕರ್ನಾಟಕದ ಜನರು ಜಾಗೃತರಾಗಬೇಕಿದೆ. ಅದಕ್ಕೂ ಮುನ್ನ ವೈಜ್ಞಾನಿಕ ಮನೋಭಾವವಿರುವ ಎಲ್ಲರೂ ಸಂಘಟಿತರಾಗಬೇಕಿದೆ. ಕರ್ನಾಟಕ ವಿಜ್ಞಾನ್ ಪರಿಷತ್‌ನಂಥ ಸಂಘಟನೆಗಳು ಈ ಚಾನಲ್‌ಗಳ ಮುಖ್ಯಸ್ಥರೊಂದಿಗೆ ಮಾತನಾಡಬೇಕಿದೆ, ಒತ್ತಡ ಹೇರಬೇಕಿದೆ. ಚಾನಲ್‌ಗಳು ಸರಿಪಡಿಸಲಾಗದ ತಪ್ಪು ಮಾಡಿದಾಗ ಅವುಗಳ ವಿರುದ್ಧ ಪ್ರತಿಭಟಿಸಬೇಕಿದೆ. ಮೀಡಿಯಾಗಳು ಹರಡುವ ಅಂಧಶ್ರದ್ಧೆಯ ವಿರುದ್ಧ ದೂರು ನೀಡುವಂಥ ಧೈರ್ಯ ಮತ್ತು ಬದ್ಧತೆಯನ್ನು ನಾವು ನೀವೆಲ್ಲರೂ ಸೇರಿ ಪ್ರದರ್ಶಿಸಬೇಕಿದೆ.

(ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ತು, ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ಬೆಂಗಳೂರಿನ ಕಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ೫ನೇ ರಾಜ್ಯಮಟ್ಟದ ವಿಜ್ಞಾನ ಸಾಹಿತಿಗಳ ಸಮಾವೇಶದ ಎರಡನೇ ದಿನ (ಫೆಬ್ರವರಿ ೧೨) ನಡೆದ ವಿದ್ಯುನ್ಮಾನ ಮಾಧ್ಯಮದಲ್ಲಿ ಮೂಢನಂಬಿಕೆ ವಿಷಯ ಕುರಿತ ಗೋಷ್ಠಿಯಲ್ಲಿ ಮಂಡಿಸಿದ ಭಾಷಣ.

ಉಪಸ್ಥಿತರು: ಅಧ್ಯಕ್ಷತೆ: ಜಿ. ರಾಮಕೃಷ್ಣ, ಸಂಪಾದಕರು, ಹೊಸತು ಪತ್ರಿಕೆ

ಸಹ ವಿಷಯ ಮಂಡಕರು: ಡಾ. ನಾ.ಸೋಮೇಶ್ವರ ಹಾಗು ಬಿ.ಎಸ್.ಸೊಪ್ಪಿನ

6 thoughts on “ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ

  1. prasad raxidi

    ಒಳ್ಳೆಯ ವಿಶ್ಲೇಷಣೆ, ಬದುಕೇ ಮಾರಾಟದ ಸರಕಾಗುತ್ತಿರುವಾಗ ಎಲ್ಲ ಕಡೆ ಅಭದ್ರತೆಯ ಭಯ ಹರಡುತ್ತಲೇ ಹೋಗುತ್ತದೆ. ಅದರಿಂದ ಹೊರಬರಲು ಹೆಚ್ಚಿನವರು ಬಯಸುವುದು ಸುಲಭದದಾರಿ, ಈ ಮನಸ್ಥಿತಿಯೇ ನಮ್ಮನ್ನು ಮೌಢ್ಯದತ್ತ ಎಳೆದೊಯ್ಯುತ್ತದೆ. ಅದರ ದುರ್ಲಾಭವನ್ನು ಮೀಡಿಯಾಗಳು ಬಳಸಿಕೊಳ್ಳುತ್ತಿವೆ.ಹೌದು ಇದರ ವಿರುದ್ಧ ದನಿ ಎತ್ತುವ ವಿಚಾರ ಬಹುಶಃ ಹೀಗೇ ಇಂತಹ ಅಂತರ್ಜಾಲ ಮಾಧ್ಯಮಗಳನ್ನು, ಮತ್ತದೇ ಹಳೆಯ ಹೋರಾಟದ ದಾರಿಗಳನ್ನು ಬಳಸಬೇಕಷ್ಟೆ, ಏಕೆಂದರೆ ನಿಮಗೂ ಗೊತ್ತಿರುವಂತೆ ಪತ್ರಿಕಾ ಮಾಧ್ಯಮದಲ್ಲಿ ಮಾರಾಟದ ಒತ್ತಡ (ಸೇಲೆಬಲ್ ನ್ಯೂಸ್) ಕಡಿಮೆ ಇದ್ದರೂ, ಇತ್ತೀಚೆಗೆ ಪತ್ರಕರ್ತರೇ ಮಾರಾಟದ ಸರಕಾಗುತ್ತಿದ್ದರಲ್ಲ ಏನು ಮಾಡುವುದು…

    Reply
  2. Ananda Prasad

    ಇಂದು ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಿವಿ ವಾಹಿನಿಗಳನ್ನು ನೋಡಿದರೆ ಬೇಲಿಯೇ ಎದ್ದು ಹೊಲ ಮೇದಂತೆ ಕಂಡು ಬರುತ್ತದೆ. ಜ್ಯೋತಿಷ್ಯ, ವಾಸ್ತು, ಮಾಟ, ಮಂತ್ರ ಎಂದು ಜನರ ದಾರಿ ತಪ್ಪಿಸುತ್ತಿರುವ ಟಿವಿ ವಾಹಿನಿಗಳು ಮಾಡುತ್ತಿರುವುದು ದೇಶದ್ರೋಹದ ಕೆಲಸ ಎಂದು ಕಾಣುತ್ತದೆ. ಇವು ಸ್ವಾಮಿ ವಿವೇಕಾನಂದರು ಹೇಳಿದ ಮಾತುಗಳಿಗೆ ವಿರುದ್ಧವಾಗಿ ನಡೆಯುತ್ತಿವೆ. ಮಾಧ್ಯಮಗಳೇ ದೇಶದ್ರೋಹದ ಕೆಲಸ ಮಾಡುತ್ತಿರುವಾಗ ನಾವು ಯಾರನ್ನು ನೆಚ್ಚಬೇಕು? ಟಿವಿ ವಾಹಿನಿಗಳು ದೇಶವನ್ನು ಶತಮಾನಗಳಷ್ಟು ಹಿಂದೆ ಕೊಂಡೊಯ್ಯುತ್ತಿರುವ ಇಂಥ ಸಂದರ್ಭದಲ್ಲಿ ಇವುಗಳಿಗೆ ನ್ಯಾಯಾಲಯ ಗಳು ಚಾಟಿ ಏಟು ಕೊಡಲು ಬಹುಶ: ಸಾಧ್ಯವಿದೆ. ಜ್ಯೋತಿಷ್ಯದ ಪೊಳ್ಳುತನ, ವಾಸ್ತುವಿನ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ಇವು ಯಾವ ರೀತಿ ಆಧಾರರಹಿತ ಎಂಬ ಬಗ್ಗೆ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ ರಾಜ್ಯದ ಪ್ರತಿ ಶಾಲೆ ಕಾಲೇಜುಗಳಲ್ಲಿ ಪ್ರದರ್ಶಿಸುವ ಕೆಲಸ ಪ್ರಜ್ಞಾವಂತರು ಹಾಗೂ ಸಂಘಟನೆಗಳಿಂದ ಆಗಬೇಕಾಗಿದೆ. ಹೀಗೆ ಮಾಡಿದರೆ ಎಳೆಯ ವಯಸ್ಸಿನಲ್ಲೇ ಮಕ್ಕಳನ್ನು ಮೂಢ ನಂಬಿಕೆಗಳ ಹೊಂಡಕ್ಕೆ ಬೀಳಿಸುವುದನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದೋ ಏನೋ?

    Reply
  3. santhosh kumar

    ಟಿ.ಆರ್.ಪಿ. ಎಂಬುದು ಶುದ್ಧ ಮೋಸ ಎಂಬುದರಲ್ಲಿ ಸಂದೇಹವೇ ಇಲ್ಲ. ಕೆಲವೇ ಕೆಲವು ಆಯ್ದ ನಗರಗಳಲ್ಲಿ, ಕೆಲವೇ ಮನೆಗಳಲ್ಲಿ ಉಪಕರಣ ಅಳವಡಿಸಿ ಕೋಟ್ಯಂತರ ಜನರ ಟಿವಿ ವೀಕ್ಷಣೆಯ ಅಭಿರುಚಿ ನಿರ್ಧರಿಸುವುದು ಮೂರ್ಖತನದ ಪರಮಾವಧಿ. ಇಂಥ ಮೋಸದ ಮೂಲಕ ಇಡೀ ಟಿವಿ ಮಾಧ್ಯಮವನ್ನೇ ನಿಯಂತ್ರಿಸುವ ಮೋಸಗಾರಿಕೆಗೆ ಕಡಿವಾಣ ಹಾಕಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ನ್ಯಾಯಾಲಯಗಳು ಮುಂದೆ ಬರಬೇಕಾಗಿದೆ. ಒಟ್ಟು ಜನಸಂಖ್ಯೆಯ ಶೇಕಡಾ ೭೦ ರಷ್ಟಿರುವ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರ ನಿಲುವುಗಳು, ಅಭಿರುಚಿಗಳು ಮುಖ್ಯವಲ್ಲ ಎಂಬುದು ಭೀಕರ ತಾರತಮ್ಯದ ದ್ಯೋತಕ. ಗ್ರಾಮೀಣ ಪ್ರದೇಶಗಳಲ್ಲಿ ಇಂದು ನಗರಗಳಲ್ಲಿ ಉಪಯೋಗಿಸುವ ಬಹುತೇಕ ವಸ್ತುಗಳನ್ನು ಉಪಯೋಗಿಸುತ್ತಿದ್ದಾರೆ. ಹೀಗಿರುವಾಗ ಗ್ರಾಮೀಣ ಗ್ರಾಹಕರ ಅಭಿರುಚಿಗಳು ಲೆಕ್ಕಕ್ಕೇ ಇಲ್ಲ ಎಂಬುದು ಸರ್ವಾಧಿಕಾರಿ ಧೋರಣೆಯಂತೆ ಕಾಣುತ್ತದೆ. ಇಂದು ಗ್ರಾಮೀಣ ಭಾಗದಲ್ಲಿ ಬಹುತೇಕ ಮನೆಗಳಲ್ಲಿ ಡಿ. ಟಿ.ಎಚ್. ಮೂಲಕ ಟಿವಿ ವಾಹಿನಿಗಳನ್ನು ವೀಕ್ಷಿಸಲಾಗುತ್ತಿದೆ. ಇದು ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ಇದೆ. ಅಲ್ಲದೆ ನಗರಗಳಲ್ಲೂ ಇಂದು ಸಾಕಷ್ಟು ಜನ ಡಿ.ಟಿ.ಎಚ್. ಹಾಕಿಸಿಕೊಂಡು ಟಿವಿ ವೀಕ್ಷಣೆ ಮಾಡುತ್ತಿರುವುದು ಕಂಡು ಬರುತ್ತದೆ. ಇದ್ಯಾವುದೂ ಟಿ.ಆರ್.ಪಿ. ನಿರ್ಧರಿಸುವಲ್ಲಿ ನಿರ್ಣಾಯಕವಲ್ಲ ಎಂಬುದು ಒಪ್ಪುವಂಥದ್ದಲ್ಲ.

    Reply
  4. g.mahanthesh.

    ಜ್ಯೋತಿಷ್ಯ, ಮತ್ತು ಜ್ಯೋತಿಷಿಗಳನ್ನೇ ಹತ್ತಿರಕ್ಕೆ ಬಿಟ್ಟುಕೊಳ್ಳದ ಚಾನಲ್​ಗಳು ಇದ್ದಾವಲ್ಲ ಅವುಗಳನ್ನೂ ಪ್ರಸ್ತಾಪಿಸಬೇಕಿತ್ತು. ಅಷ್ಟೇ ಅಲ್ಲ, ವೈಜ್ಞಾನಿಕ, ವೈಚಾರಿಕ ಹಾದಿಯಲ್ಲಿ ಸಾಗುವ ಚಾನಲ್​ಗಳ ಕುರಿತು ಪ್ರಶಂಸಿಸಬೇಕಿತ್ತು. ಹಾಗೇ ನೋಡಿದರೆ ಎಡಪಂಥೀಯ ಚಿಂತಕರೊಬ್ಬರು ಸಮಯ ವಾಹಿನಿಗೆ ಮುಖ್ಯಸ್ಥರಾಗಿದ್ದಾಗಲೇ ಜ್ಯೋತಿಷ್ಯ ಪ್ರಸಾರವಾಗಿತ್ತಲ್ಲ. ಬಹುಶಃ ದಿನೇಶ್​ ಅವರಿಗೆ ಇದು ಮರೆತು ಹೋಗಿರಬೇಕು ಎಂಬುದು ನನ್ನ ಭಾವನೆ.
    ಪತ್ರಿಕೆಗಳಿಗೆ ಹೇಗೆ ಪ್ರಸಾರ ಸಂಖ್ಯೆ ಮುಖ್ಯವೋ(ಜಾಹೀರಾತಿಗಾಗಿ) ಚಾನಲ್​ಗಳಿಗೆ ಟಿಆರ್​ಪಿ ಕೂಡ ಅಷ್ಟೇ ಮುಖ್ಯ. ಹಾಗಂತ ಜ್ಯೋತಿಷ್ಯ, ಬಾನಾಮತಿಗಳಂತಹ ಪ್ರಕರಣಗಳನ್ನ ಬೆಂಬಲಿಸುವುದು ಸರಿಯಲ್ಲ.
    ಚಂದ್ರಗ್ರಹಣದಂದು ನಿರ್ದಿಷ್ಟವಾಗಿ ಒಂದು ಚಾನಲ್​, ವೈಜ್ಞಾನಿಕ ಹೊಳಹು ನೀಡಿತ್ತು. ಕೆ.ಎನ್​.ಗಣೇಶಯ್ಯ ಜತೆ ಸಮಾಲೋಚನೆ ಮತ್ತು ಸಂವಾದವೂ ಕೂಡ ನಡೆದಿತ್ತು. ಚಾನಲ್​ಗಳ ಬಗ್ಗೆ ಹೇಳೋವಾಗ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ಹೇಳಬಾರದಿತ್ತು. ಏನಂತೀರಿ…

    Reply
  5. ashok Kumar valadur

    ಒಳ್ಳೆಯ ವಿಶ್ಲೇಷಣೆ . ದೃಶ್ಯ ಮಾಧ್ಯಮಗಳು ಕಳಪೆಯನ್ನೇ ಬಿತ್ತರಿಸಿ ಸಮಾಜದ ದುಸ್ಥಿತಿಗೆ ಕಾರಣರಾಗಿದ್ದಾರೆ. ಸಿಕ್ಕಂತ ಅವಕಾಶದಲ್ಲಿ ಬಾಚಿಕೊಳ್ಳುವುದೇ ಮಾಡಿದ್ದಾಯ್ತು . ತುಂಬಾ ಕೆಟ್ಟು ಹೋಗಿದೆ .

    Reply
  6. shylesh

    nithikathaya illadha indina madyamagalu nijakku bayanakavagi beleyuthiruvudu apayakariyada belavanige idara bagge prajnavantharu dani yethale bekagide. moudyathayannu saruththiruva kevala t r p gage janara hagu samajadha swsthavannu halu geduvuthirava madyamagalu hagu drushya madyamagalannu dikkarisi. mulegumupu madi

    Reply

Leave a Reply to ashok Kumar valadur Cancel reply

Your email address will not be published. Required fields are marked *