ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 6


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5

94ರ ಚುನಾವಣೆಯಲ್ಲಿ ಕಾನ್ಶಿರಾಂ ನೇತೃತ್ವದ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ನೀಡಲು ತೀರ್ಮಾನಿಸಿದ್ದ ದಸಂಸ ಕಡೆಗೆ ಇಡಿಯಾಗಿ ಆ ಪಕ್ಷದಲ್ಲೇ ವಿಲೀನಗೊಂಡುಬಿಟ್ಟಿತು. …ಬಹುಶಃ ಇಂಡಿಯಾದ ಪರ್ಯಾಯ ರಾಜಕಾರಣದ ಇತಿಹಾಸದಲ್ಲಿ ಜನಚಳವಳಿಯ ಸಂಘಟನೆಯೊಂದು ಇಷ್ಟೊಂದು ಅಮಾಯಕವಾಗಿ ತನ್ನ ಕಣ್ಣನ್ನೇ ತಾನು ಚುಚ್ಚಿಕೊಂಡ ಮೊದಲ ನಿದರ್ಶನ ಇದೇ ಇರಬೇಕು. ಮುಖಂಡರೆಲ್ಲರೂ ಉತ್ಸಾಹದಿಂದ ಬಿಎಸ್ಪಿ ಚಿಹ್ನೆಯ ಮೇಲೇ ವಿಧಾನಸಭೆಗೆ ಸ್ಪರ್ಧಿಸಿ ಒಬ್ಬರು (ಬೀದರ್‌ನಿಂದ) ಗೆದ್ದೂಬಿಟ್ಟರು…

ಆಯಿತಾ? 95ರಲ್ಲಿ ಬಿಎಸ್ಪಿ, ಉತ್ತರಪ್ರದೇಶದಲ್ಲಿ ಬಿಜೆಪಿ ಜತೆ ಗೆಳೆತನ ಬೆಳೆಸಿ ಅಧಿಕಾರಕ್ಕೆ ಬಂತು. ಮಾಯಾವತಿ ಮುಖ್ಯಮಂತ್ರಿಯೂ ಆದರು. ಆಗ ಇಲ್ಲಿನ ದಲಿತ ಸಂಘಟನೆಯ ಒಂದು ಗುಂಪು ಬಿಜೆಪಿ ಸಖ್ಯವನ್ನು ವಿರೋಧಿಸಿ ಒಡೆದುಕೊಂಡು ಹೊರಬಂತು. ಆಗ ಬಿಎಸ್ಪಿ ಜೊತೆಗೇ ಉಳಿದ ಬಿ. ಕೃಷ್ಣಪ್ಪ, ‘ಇದೇನೋ ಹೊಸ ಕಣಿ ತೆಗೆದರಲ್ಲಪ್ಪ…?’ ಎಂದು ಉದ್ಗರಿಸಿದರು. ಮತ್ತು ಈಗಿನ ಒಡಕು, ಮೂಲದಲ್ಲಿ ಎಡಗೈ- ಬಲಗೈ ಬಣಗಳ- ಅಂದರೆ ಸಾಗರ್- ಜಯಣ್ಣ ಬಣಗಳ- ವಿಭಜನೆಯಾಗಿತ್ತು. ಅಥವಾ ಗೋವಿಂದಯ್ಯನವರು ಹೇಳಿದಂತೆ ‘ಮಹಾದೇವ- ಕೃಷ್ಣಪ್ಪ ಎಂಬ ಜಾತಿಧ್ರುವಗಳ ಇಬ್ಭಾಗವಾಗಿತ್ತು’. ಹೀಗಾಗಿ ಹುಟ್ಟಿದ ಇಪ್ಪತ್ತೈದು ವರ್ಷಗಳಲ್ಲಿ ಒಂದು ಮಹಾನ್ ಬದಲಾವಣೆಗೆ ಕಾರಣವಾಗಬಹುದಾಗಿದ್ದ ದಲಿತ ಶಕ್ತಿ, ವಿಭಜಕ ರಾಜಕಾರಣದ ಸ್ವವಂಚನೆಗೆ ಒಳಗಾಗಿ ಚಳವಳಿ ರಾಜಕಾರಣವನ್ನು ಪಕ್ಷ ರಾಜಕಾರಣದ ಮಟ್ಟಕ್ಕೆ ತಂತಾನೇ ತಂದು ನಿಲ್ಲಿಸಿಕೊಂಡಿತು. ಪಕ್ಷ ರಾಜಕಾರಣ ಪ್ರವೇಶದ ನಂತರ ದಲಿತ ಅಸ್ತಿತ್ವ ರೂಪಿಸುವ ಒಂದೇ ಒಂದು ಕಾರ್ಯಕ್ರಮ ಕೂಡ ಯಾವುದೇ ಬಣದಿಂದಲೂ ಮೂಡಿ ಬರದೆ ಹೋಯಿತು….

ತನ್ನ ಹುಟ್ಟಿನಲ್ಲಿ ಭೂಹೀನರ, ಆಧಾರ ತಪ್ಪಿದವರ ವೇದಿಕೆಯಾಗಿದ್ದ ದಲಿತ ಸಂಘಟನೆ ಕ್ರಮೇಣ ಹೊಟ್ಟೆ ತುಂಬಿದ ದಲಿತ ನೌಕರಶಾಹಿಯ ವೇದಿಕೆಯಾಗಿ ಪರಿವರ್ತನೆಗೊಳ್ಳುತ್ತ ಬಂದಿತ್ತು. ಕಟ್ಟಕಡೆಯ ಮನುಷ್ಯನ ಕಣ್ಣೀರು ತೊಡೆಯಲು ಬಳಕೆಯಾಗುತ್ತಿದ್ದ ಸಂಘಟನೆಗಳ ಲೆಟರ್‌ಹೆಡ್‌ಗಳು ಇಂತಿಂಥ ನೌಕರರನ್ನು ಇಂತಿಂಥ ಜಾಗಗಳಿಗೆ ವರ್ಗಾವಣೆ ಮಾಡಿ ಎಂದು ಮೊರೆಯಿಡುತ್ತ ವಿಧಾನಸೌಧದ ಮಂತ್ರಿ ಶಾಸಕರ, ಸಚಿವಾಲಯದ ಮೇಜುಗಳನ್ನು ಅಲಂಕರಿಸತೊಡಗಿದವು.

ಹೀಗಾಗಬೇಕಿರಲಿಲ್ಲ.

**

ಆ ದಶಕಗಳ ಒಟ್ಟೂ ಎಚ್ಚರ, ಸಮೂಹ ರಾಜ್ಯಾಧಿಕಾರವಾಗಿ ಪರಿವರ್ತನೆಗೊಳ್ಳಲೆಂದು ನಾಡಿನ ಸಮಸ್ತ ಪ್ರಜ್ಞಾವಂತ ವಲಯ ನಿರೀಕ್ಷಿಸಿತ್ತು. ಕಿಷನ್ ಪಟ್ನಾಯಕ್‌ರಂಥ ಧೀಮಂತ ಸಮಾಜವಾದಿ ನಾಯಕ ಕೂಡ- ‘ಕರ್ನಾಟಕದಲ್ಲಿ ರೈತಸಂಘ, ದಲಿತ ಸಂಘಟನೆ ಮತ್ತು ಪ್ರಗತಿರಂಗ ಒಗ್ಗೂಡಿ ಸಮಾನ ವೇದಿಕೆ ಮಾಡಿಕೊಂಡು ಹೊಸ ರಾಜಕೀಯ ಆರಂಭಿಸಬೇಕೆಂದು’ ಸೂಚಿಸಿದ್ದರು. ಪ್ರೊಫೆಸರ್ ನಂಜುಂಡಸ್ವಾಮಿಯವರಿಗೇನೋ ಯಾವಾಗಿನಿಂದಲೂ ದಲಿತ ಸಂಘದ ಜೊತೆ ಸೇರುವ ಬಯಕೆ ಇದ್ದೇ ಇತ್ತು. 87ರಲ್ಲಿ ಅವರು ರೈತರದೇ ರಾಜಕೀಯ ಪಕ್ಷ ‘ಕನ್ನಡ ದೇಶ’ ಸ್ಥಾಪಿಸುವ ಮುನ್ನವೂ ತಮ್ಮ ಜೊತೆಗೂಡಲು ದಲಿತ ಸಂಘವನ್ನು ಆಹ್ವಾನಿಸಿದ್ದರು. ಅವರ ವಿರೋಧ ಇದ್ದದ್ದು ಲಂಕೇಶರೊಂದಿಗೆ ಕೈ ಜೋಡಿಸುವ ವಿಷಯದಲ್ಲಿ ಮಾತ್ರ. ಆದರೆ ಕಿಷನ್ರ ಚಿಂತನೆಯ ಹಾದಿಯಲ್ಲೇ ಮೂರೂ ಶಕ್ತಿಗಳ ಒಕ್ಕೂಟದ ಕನಸು ಕಾಣುತ್ತಿದ್ದ ದೇವನೂರ ಮಹಾದೇವ, ಪ್ರೊಫೆಸರರ ಆಹ್ವಾನಕ್ಕೆ ಆ ಸಂದರ್ಭದಲ್ಲಿ ಪ್ರತಿಕ್ರಿಯಿಸದೆ ಸುಮ್ಮನಿದ್ದರು.

ಮುಂದೆ 89ರ ಚುನಾವಣೆ ಸಮಯದಲ್ಲಿ ತೃತೀಯ ಶಕ್ತಿ ರಚನೆಯ ಪ್ರಯತ್ನಕ್ಕೆ ದಲಿತ ಸಂಘರ್ಷ ಸಮಿತಿ ಹಾಗೂ ಮಹಾದೇವ ಮತ್ತೊಮ್ಮೆ ಕೈ ಹಾಕಿದರು. ಎಲ್ಲರೂ ಒಪ್ಪಿದರೆ ಹಾಸನದಲ್ಲಿ ಸಭೆ ಸೇರಿ ಮಾತಾಡುವುದು ಎಂದೂ ಆಯಿತು. ಆಗ ಪರಸ್ಪರ ಮುಖ ನೋಡದಿದ್ದ ಲಂಕೇಶ್- ಪ್ರೊ. ನಂಜುಂಡಸ್ವಾಮಿಯವರ ನಡುವೆ, ದಲಿತ ಸಂಘಟನೆ ಪರವಾಗಿ ದೇವನೂರು ಮತ್ತು ಪ್ರೊ. ಗೋವಿಂದಯ್ಯನವರ ನಿರ್ದೇಶನದ ಮೇರೆಗೆ ರಾಜಿ ಸಂಧಾನಕ್ಕೆ ಓಡಾಡಿದವನು ನಾನೇ ಆದ್ದರಿಂದ ವಿವರಗಳು ನೆನಪಿವೆ. ಆಗ ನಾನು ಮೊದಲು ಭೇಟಿ ಮಾಡಿದ್ದು ಪ್ರೊಫೆಸರ್ರನ್ನು. ಅದಕ್ಕೆ ಮುಂಚೆ ಒಮ್ಮೆ ಯಾರೋ ನಂಜುಂಡಸ್ವಾಮಿಯವರ ಮುಂದೆ ‘ನೀವೂ, ಲಂಕೇಶರೂ ರಾಜಕೀಯವಾಗಿ ಸೇರಬಾರದೇಕೆ?’ ಎಂದು ಕೇಳಿ, ಅದಕ್ಕೆ ಉತ್ತರವಾಗಿ ಪ್ರೊಫೆಸರ್ ‘ಹೆಣ್ಣು ಕೇಳೋಕೆ ಬರೋರು ಯಾರಾದರೂ ಕೈಯಲ್ಲಿ ಬೆಕ್ಕು ಹಿಡಕೊಂಡು ಬರ್ತಾರೇನ್ರೀ?’ ಎಂದು ಗದರಿದ್ದರಂತೆ! ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನನಗಿದು ಗೊತ್ತೂ ಇರಲಿಲ್ಲ. ಅದೇನು ನನ್ನಅದೃಷ್ಟವೋ, ಪ್ರೊಫೆಸರ್ ನನ್ನೊಂದಿಗೆ ಅಂಥ ಅಡ್ಡಮಾತೂ ಆಡಲಿಲ್ಲ. ಪ್ರೊಫೆಸರರ ಮೊದಲ ಪ್ರಶ್ನೆ:

‘ನಿಮಗೆ- ದಲಿತರಿಗೆ- ಲಂಕೇಶ್ ಅಂದ್ರೆ ಯಾಕೆ ಅಷ್ಟು ಮೋಹ?’
‘ನಮಗೆ ನಿಮ್ಮನ್ನು ಕಂಡರೂ ಅಷ್ಟೇ ಮೋಹ ಸಾರ್’.
‘ಪ್ರಗತಿರಂಗ ಪ್ರಣಾಳಿಕೆ ನೋಡಿದ್ದೀರೇನು? ಏನಿದೆ ಅದರಲ್ಲಿ? ರೈತಸಂಘದ್ದೂ ನೋಡಿದ್ದೀರಲ್ಲ?…’

ಆ ವೇಳೆಗಾಗಲೇ ಲಂಕೇಶರು ಪ್ರಗತಿರಂಗ ಹುಟ್ಟುಹಾಕಿ ರಾಜ್ಯಾದ್ಯಂತ ಓಡಾಡಿ ಪಕ್ಷದ ಪ್ರಣಾಳಿಕೆಯನ್ನೂ ಅಚ್ಚು ಹಾಕಿದ್ದರು. ಅದರಲ್ಲಿ ಎಲ್ಲರಿಗೂ ಹಿಡಿಸುವ ಹಲವಾರು ಅಂಶಗಳಿದ್ದವು. ಆದರೆ ಆ ಯಾವ ಉಸಾಬರಿಗೂ ಹೋಗದೆ- ‘ಮೊದಲು ಎಲ್ಲರೂ ಒಂದಾಗಲಿ ಸಾರ್. ಆಮೇಲೆ, ಎಲ್ಲರೂ ಸೇರಿ ಹೊಸ ಪ್ರಣಾಳಿಕೆ ಬರಕೋಬಹುದು’ ಅಂದೆ.

ಅವರಿಗೇನನಿಸಿತೋ, ಅದೂ ಇದೂ ಮಾತಾಡಿ ‘ಆಯ್ತು, ಸಭೆಗೆ ಬರ್ತೀನಿ ಬಿಡಿ’ ಅಂದುಬಿಟ್ಟರು! ನನಗಾಗಲೇ ಅರ್ಧ ಯುದ್ಧ ಗೆದ್ದಂತಾಗಿಬಿಟ್ಟಿತು.

ಮತ್ತೆ ಲಂಕೇಶರ ಹತ್ತಿರ ಇದೇ ಪ್ರಸ್ತಾಪ ಇಟ್ಟಾಗ, ಅವರು ಹೆಚ್ಚು ಮಾತೇ ಆಡದೆ ‘ಆಯ್ತು, ಮಾತಾಡಕ್ಕೇನಂತೆ? ಹಾಸನಕ್ಕೆ ಹೋಗಣ’ ಅಂದರು. ನಾನು ಸಂತೋಷದಿಂದ ಇಷ್ಟೂ ಬೆಳವಣಿಗೆ ಗೋವಿಂದಯ್ಯನವರಿಗೆ ತಿಳಿಸಿದೆ. ಅಲ್ಲಿಗೆ ಎಲ್ಲರ ಮನಸ್ಥಿತಿಯೂ ಒಂದು ಹದಕ್ಕೆ ಬಂದು ಇನ್ನೇನು ಸಭೆ ನಡೆದೇ ತೀರುವುದು ಎಂದಾದಾಗ, ಇಂಥದೊಂದು ಸಮಾವೇಶವೇ ನಡೆಯದಂತೆ ಕೆಲವರು ಅಟ ಆಡಿ ಎಲ್ಲ ಮುರಿದುಬಿತ್ತು….!

‘ಅವರೆಲ್ಲ ಆಗ ಸೇರಿ ಮಾತಾಡಿದ್ದರೂ, ಒಂದಾಗುತ್ತಿದ್ದುದು ಅನುಮಾನ’ ಅನ್ನುತ್ತಾರೆ ಮಹಾದೇವ: “ಅವರಿಗೇನು ಕಡಿಮೆ ಸ್ವಪ್ರತಿಷ್ಠೆಯಿತ್ತೇ…?” ನಿಜವೇ. ‘ದೇವರಂಥ ಮನುಷ್ಯ’ ಕಡಿದಾಳು ಶಾಮಣ್ಣನವರನ್ನೇ ರಾಜ್ಯಸಮಿತಿಯಿಂದ ಕೈ ಬಿಟ್ಟ ಪ್ರಸಂಗ ರೈತಸಂಘದಲ್ಲಿ ನಡೆಯಿತೆಂದರೆ…! (22 ಜುಲೈ 89) ಆ ಸಂದರ್ಭದಲ್ಲಿ ಶಾಮಣ್ಣನವರಿಗೆ ತೇಜಸ್ವಿ ಬರೆದಿದ್ದನ್ನೂ ನೋಡಬೇಕು (ಆ ದಶಕ): …ನಂಜುಂಡಸ್ವಾಮಿ ಇಡೀ ರೈತಸಂಘವನ್ನು ಚೇಲಾಗಳ ಸಂಘಟನೆ ಮಾಡಬೇಕೆಂದಿದ್ದಾರೆ…. ಈಗ ನಿಮ್ಮ ಮೇಲೆ ಹಾರಾಡಿರುವ ಅವಿವೇಕಿಗಳೇ ಇನ್ನು ಒಂದೆರಡು ತಿಂಗಳೊಳಗಾಗಿ ನಿಮ್ಮದೆ ಸರಿ ಎಂದು ಹೇಳದಿದ್ದರೆ ಕೇಳಿ. ಎಂಡಿಎನ್‌ಗೆ ಈಗ ರೈತಸಂಘ ಬಿಟ್ಟರೆ ಬೇರೆಲ್ಲೂ ಗತಿ ಇಲ್ಲ. ಹಾಗಾಗಿ ರೈತಸಂಘ ನಾಶವಾದರೂ ಅದರ ನಾಯಕ ನಾನೇ ಆಗಿರಬೇಕೆಂದು ತೀರ್ಮಾನಿಸಿರುವಂತಿದೆ… (29 ಜುಲೈ 89.)

ಕೇವಲ ಕಬ್ಬು ಬೆಳೆಗಾರರ ಸಂಘವಾಗಿದ್ದ ರೈತ ಸಂಘಟನೆಯನ್ನು ಜನಾಂದೋಲನವಾಗಿ ರೂಪಿಸಿ ಬೆಳೆಸಿದ ಪ್ರೊಫೆಸರ್ ಇರುವವರೆಗೆ, ರೈತಸಂಘ ತನ್ನ ‘ಒನ್ ಮ್ಯಾನ್ ಷೋ’ ಸ್ವರೂಪ ಕಳೆದುಕೊಳ್ಳಲೇ ಇಲ್ಲ. ಆ ಸ್ಥಿತಿಯ ಅನುಕೂಲ ಹಾಗೂ ತೊಡಕುಗಳನ್ನು, ಜೊತೆಗೆ ಆ ವಾತಾವರಣದಲ್ಲಿ ತೇಜಸ್ವಿ ಮತ್ತು ಶಾಮಣ್ಣನಂಥವರು ಎಷ್ಟು ತಲೆ ಚಚ್ಚಿಕೊಂಡಿರಬಹುದೆಂಬುದನ್ನು, ಊಹಿಸುವುದು ಕಷ್ಟವೇನಲ್ಲ. ಅಷ್ಟಾದರೂ 84ರ ಲೋಕಸಭಾ ಚುನಾವಣಾ ಸಂದರ್ಭದಿಂದಲೇ ಅಧಿಕಾರ ರಾಜಕೀಯಕ್ಕಿಳಿದು, 89ರಲ್ಲಿ ಒಂಟಿಯಾಗಿ ನೇರ ಸ್ಪರ್ಧೆಗಿಳಿದು ಬಾಬಾಗೌಡರನ್ನು ಗೆಲ್ಲಿಸಿಕೊಂಡು, ಕೇವಲ 200ರಿಂದ 2000 ಮತಗಳ ಅಂತರದಲ್ಲಿ ಇಪ್ಪತ್ತು ಕ್ಷೇತ್ರಗಳನ್ನು ಕಳೆದುಕೊಂಡ ರೈತಸಂಘ, ದಲಿತ ಸಂಘಟನೆಯ ಹಾಗೆ ರಾಜಕೀಯ ಸಂಗದಲ್ಲಿ ಕಕ್ಕಾಬಿಕ್ಕಿಯಾಗಲಿಲ್ಲ ಎಂಬುದೂ ಗಮನಾರ್ಹವಾಗಿದೆ.

ಅದು ಹೇಗೇ ಹೋಗಲಿ, ದಲಿತ ಸಂಘಟನೆ, ರೈತಸಂಘ, ಪ್ರಗತಿರಂಗ ಮೂರೂ ನಿಜಕ್ಕೂ ಸೇರುತ್ತಿದ್ದವೋ ಇಲ್ಲವೋ, ಸೇರಿದ್ದರೂ ಒಗ್ಗಟ್ಟು ಉಳಿಯುತ್ತಿತ್ತೋ ಇಲ್ಲವೋ, ಅವೆಲ್ಲ ಈಗ ನಿರರ್ಥಕ ಪ್ರಶ್ನೆಗಳು. ಆದರೆ ಆ ಕಾಲದಲ್ಲಿ ಅಂಥದೊಂದು ಪ್ರಯತ್ನ- ಅಲ್ಪ ಕಾಲಕ್ಕೇ ಆದರೂ- ಯಶಸ್ವಿಯಾಗಿದ್ದಿದ್ದರೆ ಅದು ಎಬ್ಬಿಸುತ್ತಿದ್ದ ಮಹತ್ತರ ಕಂಪನಗಳ ಕಲ್ಪನೆಯೇ ರೋಮಾಂಚಕ….**

(ಮುಂದುವರೆಯುವುದು)

Leave a Reply

Your email address will not be published. Required fields are marked *