ಜ್ಯೋತಿಬಾ ಪುಲೆಯವರ ಚಿಂತನೆಗಳ ಪ್ರಸ್ತುತತೆ


-ಬಿ. ಶ್ರೀಪಾದ್ ಭಟ್


 

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಈ ಸಂಘಪರಿವಾರ ತನ್ನ ಕೇಸರಿ ಧ್ವಜ ಹಾರಿಸಿದಂತಹ ರಾಜ್ಯವೆನ್ನುವ ಅಪಖ್ಯಾತಿಗೆ ಒಳಗಾಗಿದ್ದ ನಮ್ಮ ಕರ್ನಾಟಕ ಈಗ ಮತ್ತೆ ಇದೇ ಸಂಘ ಪರಿವಾರ ತನ್ನ ನೀಲಿ ಧ್ವಜವನ್ನು ಹಾರಿಸಿದ ರಾಜ್ಯವೆನ್ನುವ ಅಪಖ್ಯಾತಿಗೆ ಒಳಗಾದ ದುರಂತ ಕೂಡ ಈ ರಾಜ್ಯದ್ದು. ರೇಣುಕಾಚಾರ್ಯ, ಹಾಲಪ್ಪ, ಈಗ ಸವದಿ, ಸಿ.ಸಿ.ಪಾಟೀಲ, ಕೃಷ್ಣ ಪಾಲೇಮಾರ್‌ಗಳು ಮೊಟ್ಟ ಮೊದಲ ಬಾರಿಗೆ ಮಂತ್ರಿಗಳಾಗಿದ್ದಂತಹವರು. ಇವರೆಲ್ಲ ನಮ್ಮ ಶಿಕಾರಿಪುರ ಶಾಸಕರ ಹಿಂಬಾಲಕರು!!! ಆದರೆ ಈ ಬಿಜೆಪಿಯ ಹಿರಿಯಣ್ಣ ಆರ್.ಎಸ್.ಎಸ್.ನದೂ ಕೂಡಾ ಅತ್ಯಂತ ಕಸಬುದಾರಿಕೆಯ ನಡೆಗಳೇ. ತನ್ನ ಕೇಸರೀಕರಣ ಅಜೆಂಡಾವನ್ನು ಬೆಳೆಸಲು, ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಕೋಮುವಾದಿ ಅಜೆಂಡಾವನ್ನು ತುಂಬಲು, ತನ್ನ ಶಾಖಾ ಮಠಗಳನ್ನು ವಿಸ್ತರಿಸಲು ಇದೇ ಬಿಜೆಪಿ ಸರ್ಕಾರ ತನ್ನ, ತನ್ನ ಬಳಗದ ಸರ್ಕಾರವಾಗುತ್ತದೆ. ಆದರೆ ಇದೇ ಬಿಜೆಪಿ ಸರ್ಕಾರ ಹಗರಣಗಳ ಮೇಲೆ ಹಗರಣಗಳಲ್ಲಿ ಸಿಲಿಕಿಕೊಂಡಾಗ ಇದೇ ಆರ್.ಎಸ್.ಎಸ್ .ಕೈ ತೊಳೆದುಕೊಂಡು ಅದು ಪಕ್ಷದ ಅಂತರಿಕ ವಿಚಾರ ಎಂದು ಬೂಸಿ ಬಿಡುತ್ತದೆ. ಇದನ್ನು ನಂಬಲು ಕನ್ನಡದ ಜನತೆ ಎಲ್ಲಾ ಶುದ್ಧ ಹುಂಬರೂ, ಮುಗ್ಧರೂ, ಮತಿಹೀನರೂ, ಸಿನಿಕರೂ ಆಗಿರಬೇಕು. ಇವೆಲ್ಲದರ ಮಧ್ಯೆ ಸಂಘ ಪರಿವಾದವರು ಆರ್.ಎಸ್.ಎಸ್. ನೇತೃತ್ವದಲ್ಲಿ ನಮ್ಮ ಶಿಕ್ಷಣದಲ್ಲಿ ಅಖಂಡ ಹಿಂದೂತ್ವದ ಕೋಮುವಾದಿ ಚಿಂತನೆಗಳನ್ನು, ಅನಾದಿ ಕಾಲದಿಂದಲೂ ಬಿತ್ತುತ್ತಾ ಬಂದಂತಹ ತನ್ನ ಪರಧರ್ಮದ ದ್ವೇಷದ ವಿಚಾರಗಳನ್ನು ಮಾಧ್ಯಮಿಕ ಹಾಗೂ ಹೈಸ್ಕೂಲ್ ಶಿಕ್ಷಣದಲ್ಲಿ ತಂದಿರುವ ರೀತಿ ನಿಜಕ್ಕೂ ಖಂಡನಾರ್ಹ. ಇದನ್ನು ಇವರು ಆರ್. ಎಸ್. ಎಸ್. ಕಣ್ಣಳತೆಯಲ್ಲಿ ನಡೆಸಿದ್ದಾರೆ.

ಇದು ಇಂದು ಎಂದಿನಂತೆ ಗುಪ್ತ ಕಾರ್ಯಸೂಚಿಯಾಗಿ ಉಳಿದಿಲ್ಲ. ಈ ಬಾರಿ ಬಹಿರಂಗವಾಗಿಯೇ ಇಂತಹ ಜೀವವಿರೋಧಿ, ಕೋಮುವಾದೀ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇದಕ್ಕೆ ಮೂಲಭೂತ ಕಾರಣಗಳೆಂದರೆ ನಮ್ಮ ಪ್ರಜ್ಞಾವಂತರ ಮೌನ ಹಾಗೂ ನಿರ್ಲಕ್ಷ್ಯ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿರುವುದು. ಸ್ವಾತಂತ್ರ ನಂತರ ಸುಮಾರು 45 ವರ್ಷಗಳಷ್ಟು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ನಿರಂತರ ರಾಜಕೀಯದಲ್ಲಿ ಇಷ್ಟು ಬೇಗ ನಿಸ್ಸಾಹಯಕರಾಗಿ ದಣಿದವರಂತೆ ಬೇಜವ್ದಾರಿಯಿಂದ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಹತಾಶೆಯ ದಿನಗಳನ್ನು ಸೂಚಿಸುತ್ತವೆ. ಇವರಿಗೆ ವಿರೋಧ ಪಕ್ಷವೆಂದರೇನೆ ಅಪಥ್ಯವೆನ್ನುವಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವದ ದೊಡ್ಡ ಸೋಲು. ಇದರಿಂದಾಗಿಯೇ ಇಂದು ಆರ್.ಎಸ್.ಎಸ್. ನವರಿಗೆ ತಮ್ಮ ಹಿಂದುತ್ವದ ಅಜೆಂಡವನ್ನು ಹುಟ್ಟು ಹಾಕಲು ಮೊದಲಿನ ಹಾಗೆ ಒಳಗೊಳಗೆ ಭಯ, ಆತಂಕವಾಗಲಿ ಇಲ್ಲ, ಯಾವ ಗುಪ್ತ ಕಾರ್ಯಸೂಚಿಗಳಿಲ್ಲ. ಎಲ್ಲವೂ ಬಹಿರಂಗವಾದ, ನಿರ್ಭಯ ನಡಾವಳಿಗಳೇ !!!!

ಇಂತಹ ಸಂದರ್ಭದಲ್ಲಿ ನಾವು ಮಹಾತ್ಮ ಜ್ಯೋತಿಬಾ ಪುಲೆಯವರ ಕ್ರಾಂತಿಕಾರೀ ಪ್ರಗತಿಪರ ಚಿಂತನೆಗಳನ್ನು, ಶಿಕ್ಷಣದ ಬಗೆಗಿನ ಅವರ ಚಿಂತನೆಗಳು ಹಾಗೂ ಸಾಧನೆಗಳನ್ನು ನೆನೆಯುವುದು ಹಾಗೂ ಅದನ್ನೂ ನಿಜಕ್ಕೂ ಈ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದೂ ಅತ್ಯಂತ ಪ್ರಸ್ತುತವಾಗಿದೆ. ಏಕೆಂದರೆ ಮಹಾತ್ಮ ಪುಲೆಯವರು ಕೇವಲ ಬೋಧಕರಾಗಿರಲಿಲ್ಲ, ಕೇವಲ ಅಕಡೆಮಿಕ್ ಚಿಂತಕರಾಗಿರಲಿಲ್ಲ, ಸಾರ್ವಜನಿಕವಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು, ಸ್ವತಹ ಮಾಡಿ ತೋರಿಸಿದವರು. ಇದು ನಮ್ಮೆಲ್ಲರಿಗೆ ಮಾದರಿಯಾಗಬೇಕು. ಮಹಾರಾಷ್ಟ್ರದ ಸತಾರ ಜಿಲ್ಲೆಯ ಲಾಲ್ ಗುಣಿ ಗ್ರಾಮದಲ್ಲಿ ಹುಟ್ಟಿದ ಮಹಾತ್ಮ “ಜ್ಯೋತಿಬಾ ಪುಲೆ” ಹತ್ತೊಂಬತ್ತನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು. ತಳಸಮುದಾಯಗಳ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ದೊಡ್ಡ ಸಂತ. ಇವರು 28.2.1828 ರಲ್ಲಿ ಜನಿಸಿದರು. ಓದಿದ್ದು ಮಾಧ್ಯಮಿಕ ಶಾಲೆಯವರೆಗೆ ಮಾತ್ರ. ಇವರ ಜೀವನ ಚರಿತ್ರೆಯ ಪ್ರಮುಖ ಅಂಶಗಳನ್ನು Leftword books, Delhi ಪ್ರಕಾಶನದಿಂದ ಪ್ರಕಟಿಸಲಾದ ” ಜಿ.ಪಿ.ದೇಶಪಾಂಡೆ” ಬರೆದ ಹಾಗೂ ಸಂಪಾದಿಸಿದ ” Selected Writings of Jyotiba Phule ” ಎನ್ನುವ ಪುಸ್ತಕದಿಂದ ಸಂಗ್ರಹರೂಪವಾಗಿ ಇಲ್ಲಿ ಅನುವಾದಿಸಿಲಾಗಿದೆ. .

ಪುಲೆಯವರು 1847ರಲ್ಲಿ Thomas Pains ಬರೆದ The rights of man ಎನ್ನುವ ಕೃತಿಯಿಂದ ಪ್ರಭಾವಿತರಾದರು. 1848ರಲ್ಲಿ ಪುಲೆಯವರು ಶೂದ್ರಾತಿಶೂದ್ರ ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದರು. ಸ್ವತ ತಾವೂ ಹಾಗೂ ತಮ್ಮ ಪತ್ನಿ ಸಾವಿತ್ರಿಬಾಯೀ ಪುಲೆಯವರು ಇದನ್ನು ನಡೆಸುತ್ತಿದ್ದರು. ಆದರೆ ಆ ಕಾಲದ ಕಟ್ಟುನಿಟ್ಟಿನ ಸಮಾಜ ಸಂಪ್ರದಾಯಗಳಿಗೆ ಭಯಬೀತರಾಗಿದ್ದ ಅವರ ತಂದೆ ಗೋವಿಂದರಾವ್ ಪುಲೆ ಅವರು ಇದರಿಂದ ಬಲು ಅಸಮಧಾನಗೊಂಡರು. ಆದರೆ ಜ್ಯೋತಿಬಾ ಪುಲೆಯವರು ತಮ್ಮ ಆದರ್ಶವನ್ನು ಬಿಟ್ಟುಕೊಡದೆ ಅಸ್ಪೃಶ್ಯರಿಗೋಸ್ಕರ ಪತ್ನಿಯೊಂದಿಗೆ ತಮ್ಮ ತಂದೆಯ ಮನೆಯನ್ನೇ ತೊರೆದರು. 1851 ರಲ್ಲಿ ಎಲ್ಲ ಜಾತಿಯ ಹೆಣ್ಣುಮಕ್ಕಳಿಗೋಸ್ಕರ ಶಾಲೆಯನ್ನು ಆರಂಭಿಸಿದರು. 1855 ರಲ್ಲಿ ಕೆಲಸ ಮಾಡುವ ಅನಕ್ಷರಸ್ಥರಿಗಾಗಿ ಸಂಜೆ ಶಾಲೆಯನ್ನು ಆರಂಭಿಸಿದರು. ಇವರ ಈ ಕ್ರಾಂತಿಕಾರಿ ಧೋರಣೆಗಳಿಗೆ ಆ ಕಾಲದ ಸಂಪ್ರದಾಯಸ್ಥ ಗುಂಪುಗಳಿಂದ 1856ರಲ್ಲಿ ಜೀವದ ಮೇಲೆ ಹಲ್ಲೆಯ ಪ್ರಯತ್ನ ಕೂಡ ನಡೆಯಿತು. ಆದರೆ ಪುಲೆ ಹಾಗೂ ಅವರ ಪತ್ನಿ ಸಾವಿತ್ರಿ ಬಾಯಿಯವರು ಇದಕ್ಕೆಲ್ಲ ಎದೆಗುಂದಲಿಲ್ಲ. ಅದೇ ವರ್ಷ ತಮ್ಮ ಮನೆಯಲ್ಲಿನ ಕುಡಿಯುವ ನೀರಿನ ತೊಟ್ಟಿಯನ್ನು ಅಸ್ಪೃಶ್ಯರಿಗಾಗಿ ತೆರೆದುಕೊಟ್ಟರು. ಇದು ಆ ಕಾಲಕ್ಕಿರಲಿ ಈ ಕಾಲಕ್ಕೂ ಅತ್ಯಂತ ಕ್ರಾಂತಿಕಾರಿ ನಡೆಯೆನ್ನಬಹುದು. 1860ರಲ್ಲಿ ವಿಧವಾ ವಿವಾಹ ಆಂದೋಲನವನ್ನು ಹುಟ್ಟು ಹಾಕಿದರು. 24.9.1873ರಲ್ಲಿ ಸತ್ಯ ಶೋದಕ ಸಮಾಜವನ್ನು ಸ್ಥಾಪಿಸಿದರು. ಆ ಮೂಲಕ ಶೂದ್ರಾತಿಶೂದ್ರರನ್ನು ಅಕ್ಷರ ದಾಸೋಹದ ಮೂಲಕ ಕತ್ತೆಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕಾರ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. 1876 – 1882 ರ ಅವಧಿಯಲ್ಲಿ ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿದ್ದರು. ಆ ಕಾಲಘಟ್ಟದಲ್ಲಿ ಪಾನ ನಿಷೇಧದ ವಿರುದ್ಧ, ಬಾಲ್ಯ ವಿವಾಹದ ವಿರುದ್ಧ ಹೋರಾಡಿದ್ದರು. ಆ ಕಾಲದ ಇತರೇ ಸಮಾಜ ಸುಧಾರಣ ಆಂದೋಲನಗಳು ಮೇಲ್ಜಾತಿಯಲ್ಲಿನ ಕಂದಾಚಾರಗಳ ವಿರುದ್ಧ ಹೋರಾಡಿದರೆ ಜ್ಯೋತಿಬಾ ಪುಲೆಯವರು ಈ ಹೋರಾಟವನ್ನು ಕೆಳಜಾತಿಗಳ ಸಮಾಜೋದ್ಧಾರಕ್ಕೆ ವಿಸ್ತರಿಸಿದರು. Total inclusive policy ಯನ್ನು ಮೊಟ್ಟ ಮೊದಲ ಬಾರಿಗೆ ಚಿಂತಿಸಿದವರು ಜ್ಯೋತಿಬಾ ಪುಲೆಯವರು.

150 ವರ್ಷಗಳ ಹಿಂದೆ ಪುಲೆಯವರು ಇಲ್ಲಿನ ಜಾತೀಯತೆಯನ್ನು ವಿಶ್ಲೇಷಿಸುವಾಗ ಹಿಂದುತ್ವವಾದಕ್ಕಿಂತಲೂ “ಬ್ರಾಹ್ಮಣವಾದಕ್ಕೆ” ಹೆಚ್ಚು ಒತ್ತು ನೀಡುತ್ತಾರೆ. ಇವರ ಪ್ರಕಾರ ಹಿಂದುತ್ವವೆನ್ನುವುದು ವೇದಗಳು, ಮನುಸ್ಮೃತಿ ಎನ್ನುವ ಎರಡು ಕೃತಿಗಳಿಂದ, ಚಿಂತನೆಗಳಿಂದ ರೂಪುಗೊಂಡಿದೆ. ಈ ಕೃತಿಗಳು ಬ್ರಾಹ್ಮಣವಾದದಿಂದ ಬರೆಯಲ್ಪಟ್ಟವು. ಈ ಮೂಲಕ ತಮ್ಮ ಸಾರ್ವಭೌಮತ್ವವನ್ನು ಸಮಾಜದಲ್ಲಿ ಪ್ರತಿಷ್ಟಾಪಿಸಿದವು. ಬ್ರಾಹ್ಮಣಿಕೆಯ ಈ ಶ್ರೇಷ್ಟತೆಯ ಯಜಮಾನಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಪುಲೆಯವರು ಈ ಕೃತಿಗಳ ಏಕಸ್ವಾಮತೆಯನ್ನೂ ಕೂಡ ತಿರಸ್ಕರಿಸಿದರು. ಅಂದರೆ ಈ ಪುರೋಹಿತಶಾಹಿ ಕೃತಿಗಳನ್ನು ಪರಿಷ್ಕರಿಸಿ ಇವಕ್ಕೆ ಮಾನವೀಯತೆಯ ಸ್ಪರ್ಶ ನೀಡಬೇಕೆನ್ನುವ ಉದಾರವಾದದ ಚಿಂತನೆಯನ್ನೂ ಪುಲೆ ಪ್ರತಿಪಾದಿಸಲಿಲ್ಲ. ಬದಲಾಗಿ ಪುಲೆಯವರು ಪ್ರತಿಪಾದಿಸಿದ್ದು ಈ ಬ್ರಾಹ್ಮಣೀಕೃತ ಪ್ರೇರೇಪಿತ ಎಲ್ಲ ಶೈಕ್ಷಣಿಕ, ಸಾಮಾಜಿಕ ಪುಸ್ತಕಗಳನ್ನೂ ನಿಷೇದಿಸಬೇಕೆಂಬುದನ್ನು. ಪುಲೆಯವರು ಭಗವಂತನ ಅವತಾರಗಳ ಬಗೆಗಿನ ಸಿದ್ಧಾಂತಗಳನ್ನು ಕಟುವಾಗಿ ಟೀಕಿಸುತ್ತಾರೆ. ಶೂದ್ರಾತಿಶೂದ್ರ ನೆಲೆಗಟ್ಟಿನಲ್ಲಿ ಈ ಬ್ರಾಹ್ಮಣತ್ವ ಅಧಾರಿತ ಚರಿತ್ರೆಯನ್ನು ಅಲ್ಲಗೆಳೆಯುತ್ತಾ ಅದನ್ನು ತಿರಸ್ಕರಿಸಿ ಚರಿತ್ರೆಯನ್ನು ತಳಸಮುದಾಯಗಳ ಮೂಲಕ ಪುನರಚಿಸುವುದಕ್ಕೆ ಕರೆಕೊಡುತ್ತಾರೆ. ಇದಕ್ಕೆ ಸ್ವತಹ ತಾವೇ ಮುಂದು ನಿಂತು ಪ್ರಾಯೋಗತ್ಮಕವಾಗಿ ಚಾಲನೆ ನೀಡುತ್ತಾರೆ. ತಮ್ಮ ಚಿಂತನೆಗಳಲ್ಲಿ ಜಾತೀಯತೆಗಿಂತಲೂ ವರ್ಣಾಶ್ರಮತೆಗೆ ಪ್ರಾಧಾನತೆಯನ್ನು ನೀಡುತ್ತ ಆ ಮೂಲಕ Dichotomous Structure ಅನ್ನು ಸೃಷ್ಟಿಸುತ್ತಾ ಇಲ್ಲಿ ಬ್ರಾಹ್ಮಣತ್ವ ಹಾಗೂ ಶೂದ್ರಾತಿಶೂದ್ರರೆನ್ನುವ ಎರಡು ಧೃವಗಳ ಸಮಾಜದ ಪರಿಕಲ್ಪನೆಯನ್ನು ಬಳಸುತ್ತಾರೆ. ಹಿಂದೂ ಧರ್ಮದ ಉಸಿರುಗಟ್ಟುವ ವಾತಾವರಣದಿಂದ ಪಾರಾಗಲು ತಳಸಮುದಾಯದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದನ್ನು ಪುಲೆ ಸಮರ್ಥಿಸುತ್ತಾರೆ. ಮತಾತಂರವೆನ್ನುವುದು ಮೂಲಭೂತ ಹಕ್ಕು ಎನ್ನುವುದನ್ನು ಮೊಟ್ಟಮೊದಲು ಪ್ರತಿಪಾದಿಸಿದವರು ಪುಲೆಯವರು. ಇಲ್ಲಿ ಅವರು ಕ್ರಿಶ್ಚಿಯಾನಿಟಿ ಧರ್ಮದ ಶ್ರೇಷ್ಟತೆಗಿಂತ ಹಿಂದೂ ಧರ್ಮದ ಅಸ್ಪೃಶ್ಯತೆಗೆ ಹೆಚ್ಚು ಒತ್ತು ನೀಡುತ್ತಾರೆ. ಚಿತ್ಪಾವಣ ಭ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಡಿತ ರಮಾಬಾಯಿಯವರು ಕ್ರ್ಶಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಈ ನೆಲೆಗಟ್ಟಿನಲ್ಲಿ ಸಮರ್ಥಿಸುತ್ತಾರೆ. ಅನೇಕ ಬಾರಿ ಪುಲೆಯವರ ಬ್ರಾಹ್ಮಣತ್ವದ ಕಟುಟೀಕೆ ಅವರ ಹಿಂಬಾಲಕರಿಗೂ, ಶಿಷ್ಯಂದಿರಿಗೂ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ತಮ್ಮ ಕಾಲದ ಇತರ ಸಮಾಜ ಸುಧಾಕರಿಗಿಂತ ಪುಲೆಯವರು ಭಿನ್ನವಾಗಿರುವುದಕ್ಕೆ ಕಾರಣ ಅವರು ಶೂದ್ರಾತಿಶೂದ್ರರ ಜೀವನೋದ್ಧಾರಕ್ಕಾಗಿ ಕ್ರಾಂತಿಕಾರಕ ಬದಲಾವಣೆಗಳ ಹರಿಕಾರರಾಗಿದ್ದರು.

1881 ಲಾರ್ಡ್ ರಿಪ್ಪನ್ ಎನ್ನುವ ವೈಸರಾಯ್ “ವಿಲಿಯನ್ ಹಂಟರ್” ನೇತೃತ್ವದಲ್ಲಿ Education commission ಒಂದನ್ನು ಸ್ಥಾಪಿಸುತ್ತಾರೆ. ಇದನ್ನು “ಹಂಟರ್ ಶಿಕ್ಷಣ ಸಮಿತಿ” ಎಂದು ಕರೆಯಲಾಗುತ್ತದೆ. ಇದಕ್ಕೆ ಜ್ಯೋತಿಬಾ ಪುಲೆಯವರನ್ನು ತಮ್ಮ ಚಿಂತನೆಗಳನ್ನು, ಸಂಶೋಧನೆಗಳನ್ನು ಮಂಡಿಸಲು ಕೋರಲಾಯಿತು. ಈ ಕಮಿಷನ್ ಮುಂದೆ ಪುಲೆಯವರು ಮಂಡಿಸಿದ ಅತ್ಯಂತ ವಿಚಾರಪೂರ್ಣ ಹಾಗೂ ಕ್ರಾಂತಿಕಾರಿ ನಿಲುವುಗಳನ್ನು, ಚಿಂತನೆಗಳನ್ನು ಹಂಟರ್ ಒಪ್ಪಲಿಲ್ಲ. ಅಲ್ಲದೆ ಇದನ್ನು ತಮ್ಮ ಕಮಿಷನ್‌ನಲ್ಲಿ ಸೇರಿಸಲಿಲ್ಲ. ಇದರಲ್ಲಿ ಆಶ್ಚರ್ಯವೇನಿರಲಿಲ್ಲ. ಏಕೆಂದರೆ 130 ವರ್ಷಗಳ ಹಿಂದೆ ಶಿಕ್ಷಣದ ಸುಧಾರಣೆಗಾಗಿ ಕೇವಲ ಉದಾರವಾದದ, ಮನ ಪರಿವರ್ತನೆಯ ತಿರುಳನ್ನು ನೆಚ್ಚದೆ ಅಮೂಲಾಗ್ರ ಬದಲಾವಣೆಯನ್ನು ಪ್ರತಿಪಾದಿಸಿದ ಪುಲೆಯವರ ಆದರ್ಶಗಳು ಅಂದಿನ ಬ್ರಿಟಿಷ್ ಸರ್ಕಾರಕ್ಕಾಗಲಿ, ಹಂಟರ್‌ಗಾಗಲಿ ಅರ್ಥವಾಗಿವುರುವ ಸಾಧ್ಯತೆಗಳೇ ಕಡಿಮೆ. ಇದರಿಂದ ಬೇಸತ್ತ ಪುಲೆಯವರು ಈ ಹಂಟರ್ ಕಮಿಷನ್ ಒಂದು ವ್ಯರ್ಥ ಕಾಲಹರಣವೆಂದು ಕಿಡಿಕಾರಿದ್ದರು. ಇವು ಪ್ರಾಥಮಿಕ ಶಿಕ್ಷಣದ ನೀತಿಗಾಗಿ ಪುಲೆಯವರು ಪ್ರತಿಪಾದಿಸಿದ, ಚಿಂತಿಸಿದ, ಇದನ್ನು ತಾವು ನಡೆಸುವ ಶಾಲೆಗಳಲ್ಲಿ ಯಸಸ್ವಿಯಾಗಿ ಜಾರಿಗೆ ತಂದ, ಮತ್ತು ಹಂಟರ್ ಕಮಿಷನ್ ಮುಂದಿಟ್ಟಂತಹ ಪ್ರಮುಖ ವಿಚಾರಗಳು . (1880 ರಲ್ಲಿ)

  1. 1. ಇಂದಿನ ಶಿಕ್ಷಣ ( 1880 ರಲ್ಲಿ ) ಇಲಾಖೆಯು ಬ್ರಾಹ್ಮಣರ, ಇಂಗ್ಲೀಷರ ಅಧಿಪತ್ಯದಲ್ಲಿದೆ. ಇಲ್ಲಿ ಕೆಳಜಾತಿಯ ಮಕ್ಕಳಿಗೆ ಪ್ರವೇಶವೇ ಇಲ್ಲ. ಆದರೆ ಬ್ರಿಟಿಷ ಸರ್ಕಾರದ ಆದಾಯದ ಮೂಲ ಇರುವುದು ರೈತರಿಂದ, ಕೂಲಿಕಾರರ ಬೆವರಿನ ದುಡಿಮೆಯಿಂದ. ಮೇಲ್ವರ್ಗಗಳ ಸಮಾಜದಿಂದ ಸರ್ಕಾರದ ಆದಾಯಕ್ಕೆ ಬರುತ್ತಿರುವ ಕಾಣಿಕೆ ಅತ್ಯಲ್ಪ. ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಶಿಕ್ಷಣವನ್ನು ಇಂದಿನ ಅಧೋಗತಿಗೆ ಇಳಿಸಿದ್ದಕ್ಕೆ ಸರ್ಕಾರವನ್ನೇ ದೂರಬೇಕು. ಈ ದೇಶದ ಬಹುಸಂಖ್ಯಾತ ಶೂದ್ರರ ಹಾಗೂ ಅತಿ ಹಿಂದುಳಿದವರನ್ನು ಸರ್ಕಾರವೇ ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಅವರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿ ಇಡೀ ಶಿಕ್ಷಣ ಇಲಾಖೆಯನ್ನು ಬ್ರಾಹ್ಮಣರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಬೇಕು.
  2. ಹಿಂದೆಂದಿಗಿಂತಲೂ ಈಗ ಪ್ರಾಥಮಿಕ ಶಾಲೆಗಳು ಹೆಚ್ಚಿವೆ. ಆದರೆ ಅವು ಬಹು ಸಂಖ್ಯಾತರನ್ನು ಒಳಗೊಂಡಿಲ್ಲ. ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚುವರಿ CESS ಅನ್ನು ಪಡೆಯುತ್ತದೆ. ಆದರೆ ಬಹುಸಂಖ್ಯಾತರ ಶಿಕ್ಷಣಕ್ಕಾಗಿ ಯಾವುದೇ ಖರ್ಚನ್ನು ಮಾಡುತ್ತಿಲ್ಲ. ಇಲ್ಲಿನ ಪ್ರಾಂತದಲ್ಲಿ ಸುಮಾರು ಹತ್ತು ಲಕ್ಷದಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಇವರೆಲ್ಲ ಸರ್ಕಾರದ ಮೇಲೆ ಅವಲಂಬಿತರು. ಆದರೆ ಸರ್ಕಾರ ಇವರ ಬಗ್ಗೆ ಕುರುಡಾಗಿ ವರ್ತಿಸುತ್ತಿದೆ. ನನ್ನ ಪ್ರಕಾರ ಬಹುಸಂಖ್ಯಾತ ಜಾತಿಯ ಮಕ್ಕಳಿಗೆ 12 ನೇ ವರ್ಷದವರೆಗೂ ಪ್ರಾಥಮಿಕ ಶಿಕ್ಷಣವನ್ನು ಕಡ್ದಾಯಗೊಳಿಸಬೇಕು .ಅದೂ ಉಚಿತವಾಗಿ. ಹಳ್ಳಿಗಳಲ್ಲಿ ಬಡತನದಿಂದಾಗಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಬಹುಪಾಲು ಮಕ್ಕಳು ಒಕ್ಕಲುತನ, ಕೂಲಿಕೆಲಸಕ್ಕೆ, ದನಕಾಯುವುದಕ್ಕೆ ಹೋಗುತ್ತಾರೆ. ಇವರನ್ನು ಶಾಲೆಗೆ ಕರೆತರಲು ಸರ್ಕಾರ ಸ್ಕಾಲರ್‌ಷಿಪ್ ಯೋಜನೆಯನ್ನು ಜಾರಿಗೆ ತರಬೇಕು. ಚುರುಕಾಗಿ ಓದುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಬಹುಮಾನಗಳನ್ನು ಕೊಡಬೇಕು. ಇದು ಆ ಮಕ್ಕಳಿಗೆ ಓದನ್ನು ಮುಂದುವರೆಸಲು ಉತ್ತೇಜನ ಸಿಗುತ್ತದೆ. ಆದರೆ ನಮ್ಮ ದೇಶದಲ್ಲಿ ಜಾತಿ ಕಾರಣಕ್ಕಾಗಿ ಮುಮರು, ಮಹರ್, ಮಾಂಗ್ ಜಾತಿಗೆ ಸೇರಿದ ಅಸ್ಪೃಶ್ಯರನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ಮೇಲ್ಜಾತಿ ಮಕ್ಕಳ ಜೊತೆಗೆ ಕೂರಿಸುತ್ತಿಲ್ಲ. ಅಲ್ಲದೆ ಮೇಲ್ಜಾತಿಯ ಶಿಕ್ಷಕರು ಈ ಅಸ್ಪೃಶ್ಯ ಮಕ್ಕಳನ್ನು ಮುಟ್ಟುತ್ತಿಲ್ಲ. ಅಲ್ಲದೆ ಈ ಮಕ್ಕಳನ್ನು ಬೋಧನೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರ ತುರ್ತಾಗಿ ಅಸ್ಪೃಶ್ಯ ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕು.
  3. ಶಿಕ್ಷಕರ ಸಂಬಳವನ್ನು ಈಗಿನ ರೂಪಾಯಿ 10ರಿಂದ ರೂಪಾಯಿ 12ಕ್ಕೆ ಹಾಗೂ ರೂಪಾಯಿ 15ಕ್ಕೆ ಏರಿಸಬೇಕು. ಶಿಕ್ಷಕರನ್ನು ಆರಿಸುವಾಗಲೂ ರೈತರ, ಕೂಲಿಕಾರ್ಮಿಕರ ವಲಯದಿಂದ ಆರಿಸಬೇಕು. ಆಗ ಶಿಕ್ಷಕರು ಎಲ್ಲಾ ಜಾತಿಯ ಮಕ್ಕಳೊಂದಿಗೆ ಬೆರೆಯುತ್ತಾರೆ ಅಲ್ಲದೆ ಬಹುಸಂಖ್ಯಾತ ಮಕ್ಕಳ ಮೂಲಭೂತ ಅವಶ್ಯಕತೆಗಳನ್ನು ಅರಿತವರಾಗಿರುತ್ತಾರೆ ಹಾಗೂ ಈ ಅವಶ್ಯಕತೆಗಳಿಗೆ ತುರ್ತಾಗಿ ಸ್ಪಂದಿಸುತ್ತಾರೆ. ಆದರೆ ಬ್ರಾಹ್ಮಣ ಶಿಕ್ಷಕರು ಹಾಗಲ್ಲ. ಇವರು ಮಕ್ಕಳನ್ನು ಮುಟ್ಟುವುದೂ ಇಲ್ಲ.
  4. ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣದ ಜೊತೆಗೆ ವ್ಯವಸಾಯ, ನೈರ್ಮಲೀಕರಣದ ಬಗೆಗೆ ಪ್ರಾಥಮಿಕ ಅಂಶಗಳನ್ನು ಅಳವಡಿಸಬೇಕು. ಈ ಶಿಕ್ಷಕರನ್ನು ಗ್ರಾಮದ ಗ್ರಾಮ ಲೆಕ್ಕಿಗರ ಜೊತೆಗೆ, ತಹಶೀಲ್ದಾರರ ಜೊತೆಗೆ, ಪೋಸ್ಟ್ ಮಾಸ್ಟರ್ ಜೊತೆಗೆ ದಿನದ ಕೆಲಕಾಲ ಬೆರೆಯುವಂತೆ ಮಾಡಬೇಕು. ಈ ಮೂಲಕ ಶಿಕ್ಷಕರಿಗೆ ಸಮಾಜದ ಇತರೇ ಸ್ತರಗಳ ಬಗೆಗೆ ಜ್ಞಾನ ಪ್ರಾಪ್ತವಾಗುತ್ತದೆ ಹಾಗೂ ಆ ಗ್ರಾಮದಲ್ಲಿ ಒಂದು ಬಗೆಯ ಅಧಿಕಾರವೂ ದೊರೆಯುತ್ತದೆ. ಉತ್ತಮ ಫಲಿತಾಂಶಗಳನ್ನು ತಂದಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಬಹುಮಾನಗಳನ್ನು, ಅವರ ಸಂಬಳದಲ್ಲಿ ಉತ್ತಮ ಏರಿಕೆಯನ್ನು ಕೊಡಬೇಕು. ಇದು ಅವರಿಗೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸಲು ಉತ್ತೇಜನ ದೊರೆಯುತ್ತದೆ.
  5. ಮಕ್ಕಳು ಪಠ್ಯಪುಸ್ತಕಗಳನ್ನು ಓದುವುದರ ಜೊತೆಜೊತೆಗೆ ಬಾಲಭೋದಿ, ಮಾತೃಭಾಷೆ, accounts, grammar, ಭೂಗೋಳ, ಇತಿಹಾಸ, ವ್ಯವಸಾಯ, ನೀತಿ ತತ್ವದ ಪಾಠಗಳು, ನೈರ್ಮಲೀಕರಣಗಳನ್ನು ಬೋಧಿಸಬೇಕು. ದ್ವಿಭಾಷಾ ಮಾಧ್ಯಮ ( ಮಾತೃಭಾಷೆ, ಇಂಗ್ಲೀಷ್) ವನ್ನು ಜಾರಿಗೆ ತರಬೇಕು.
  6. ಶಿಕ್ಷಣಾಧಿಕಾರಿಗಳು ಈಗಿನ ಸಂಪ್ರದಾಯದಂತೆ ವರ್ಷಕ್ಕೊಮ್ಮೆ ಶಾಲೆಗೆ ಭೇಟಿ ಕೊಡುವುದನ್ನು ಬದಲಿಸಿ ಮೂರು ತಿಂಗಳಿಗೊಮ್ಮೆ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ಗುಣ ಮಟ್ಟವನ್ನು, ಸೌಲಭ್ಯಗಳನ್ನು ಪರಿಶೀಲಿಸಬೇಕು. ಈ ಶಿಕ್ಷಣಾಧಿಕಾರಿಗಳು ಶಾಲಾ ವೇಳೆಯ ಹೊರತಾಗಿಯೂ ಬೇರೆ ವೇಳೆಯಲ್ಲಿ ಭೇಟಿ ಕೊಟ್ಟು ಪಠ್ಯೇತರ ಚಟುವಟಿಕೆಗಳನ್ನೂ ಪರಿಶೀಲಿಸಬೇಕು. ಶಿಕ್ಷಕರ ಹಾಗೂ ಬಡ ವಿದ್ಯಾರ್ಥಿಗಳ ವಸತಿ ಸೌಕರ್ಯ, ಓದಲಿಕ್ಕೆ ಅನುಕೂಲಕರವಾದ ನೈರ್ಮಲೀಕರಣದ ವ್ಯವಸ್ಥೆ ಕೂಡ ಶಿಕ್ಷಣಾಧಿಕಾರಿಗಳಿಗೆ ವಹಿಸಬೇಕು. ಇದರಿಂದ ಅವರ ಜವಾಬ್ದಾರಿಯ ವ್ಯಾಪ್ತಿ ಹೆಚ್ಚಾಗುತ್ತದೆ.
  7.  ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರಾಥಮಿಕ ಶಿಕ್ಷಣಕ್ಕಾಗಿ ಗ್ರಾಮದ, ಮುನ್ಸಿಪಾಲಿಟಿಯ ಆದಾಯದ ಅರ್ಧದಷ್ಟು ಹಣವನ್ನು ಮೀಸಲಿಡಬೇಕು. ಮುನ್ಸಿಪಾಲಿಟಿ ವ್ಯಾಪ್ತಿಯೊಳಗೆ ಬರುವ ಪಟ್ಟಣಗಳಲ್ಲಿ Grant in aid ಪದ್ಧತಿಯನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ನೀಡಬೇಕು.
  8.  ಕನಿಷ್ಠ ಆರನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಮಾಡಿದವರನ್ನು, ಕಾಲೇಜು ವಿದ್ಯಾಭ್ಯಾಸ ಮಾಡಿದವರನ್ನು ಶಿಕ್ಷಕರಾಗಿ ಆರಿಸಬೇಕು. ಬೇಕಿದ್ದರೆ ಸಮಾಜದ ವಿವಿಧ ಇಲಾಖೆಗಳಿಂದಲೂ ಸಮರ್ಥರನ್ನು ಶಿಕ್ಷಕರಾಗಿ ಪ್ರಯೋಗಾತ್ಮಕವಾಗಿ ಆರಿಸಬೇಕು.

ಇವು ಜ್ಯೋತಿಬಾ ಪುಲೆಯವರು ಶಿಕ್ಷಣದ ಹಾಗೂ ಸಮಾಜದ ಉನ್ನತೀಕರಣಕ್ಕಾಗಿ ಚಿಂತಿಸಿದ ಕೆಲವು ಪ್ರಮುಖ ಅಂಶಗಳು. ಮೇಲ್ಕಾಣಿಸಿದ ಪುಸ್ತಕದಿಂದ ಸಂಗ್ರಹವಾಗಿ ಆರಿಸಿದ್ದು. ಇದನ್ನು ಅವರು 130 ವರ್ಷಗಳಷ್ಟು ಹಿಂದೆಯೇ ಪ್ರತಿಪಾದಿಸಿದ್ದರು. ಇಂದಿನ ವ್ಯವಸ್ಥೆಯಲ್ಲಿ, ಶಿಕ್ಷಣದ ವ್ಯವಸ್ಥೆಯಲ್ಲಿ ಪುಲೆಯವರು ಹೇಳಿದ ಬಹುಪಾಲು ವಿಚಾರಗಳು ದೈಹಿಕವಾಗಿ ಅಂದರೆ ಬಾಹ್ಯವಾಗಿ ಅನುಷ್ಟಾನಗೊಂಡರೂ ಮಾನಸಿಕವಾಗಿ ಇಂದಿಗೂ 130 ವರ್ಷಗಳಷ್ಟು ಹಿಂದೆ ಇದೆ. ಅಸ್ಪೃಶ್ಯತೆ ಈಗಲೂ ಚಾಲ್ತಿಯಲ್ಲಿದೆ. ಈಗಲೂ ಹಳ್ಳಿಗಾಡಿನ ಬಡಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತಾರೆ. ಈಗಲೂ ಶಿಕ್ಷಕರ ಗುಣಮಟ್ಟ ಮೇಲೇರಿಲ್ಲ. ಅವರ ತರಬೇತಿಯ ಪರಿಕರಗಳೂ, ಹಾಗೂ ಅದರ content ಇಂದಿಗೂ ಓಬಿರಾಯನ ಕಾಲದ್ದಾಗಿದೆ. ಹಾಗೆಯೇ ನೌಕರಶಾಹಿ ಸಹ. ಇನ್ನು ರಾಜಕಾರಣಿಗಳ ಬಗ್ಗೆ ಹೇಳುವುದಕ್ಕೆ ಏನೂ ಉಳಿದಿಲ್ಲ. 150 ವರ್ಷಗಳ ಹಿಂದೆಯೇ ಪುಲೆಯವರು ಇದನ್ನು ಮನಗಂಡೇ ಉದಾರವಾದದ ನೀತಿಯನ್ನು ತಿರಸ್ಕರಿಸಿ ಅಮೂಲಾಗ್ರ ಬದಲಾವಣೆಗಳನ್ನು ಅನುಷ್ಟಾನಗೊಳಿಸಲು ತೀವ್ರವಾಗಿ ಕಾರ್ಯತತ್ಪರರಾಗಿದ್ದರು. ಆದರೆ ಇಂದು ಕೂಡ ನಾವೆಲ್ಲ ಚಿಂತಿಸುತ್ತಿರುವುದು ಸುಧಾರಣಾವಾದದ ನೆಲೆಗಟ್ಟಿನಲ್ಲಿ. ಇದು ದುರಂತವಲ್ಲದೆ ಮತ್ತಿನ್ನೇನು. ನಾವು ಕೇವಲ ಅಕಡೆಮಿಕ್ ಚೌಕಟ್ಟನ್ನು ಮೀರಿ ಹೊರಬಂದು ವಾಸ್ತವಕ್ಕೆ ಮುಖಾಮುಖಿಯಾದರೆ ಮಾತ್ರ ಏನಾದರೂ ಬದಲಾವಣೆ ಗೋಚರಿಸಲು ಸಾಧ್ಯ. ಚಿಂತನೆಗಳನ್ನು ಕೇವಲ ಬೋಧನೆಗಳ ಮಟ್ಟಕ್ಕೆ, ಸೆಮಿನಾರ್‌ಗಳ ಮಟ್ಟಕ್ಕೆ ನಿಲ್ಲಿಸದೆ ಸ್ವತಹ ಸಮಾಜದಲ್ಲಿ ಅವನ್ನು ಪ್ರಯೋಗಕ್ಕೆ ಅಳಪಡಿಸಿದಾಗ ಅವುಗಳ ಪ್ರಭಾವ, ಮಿತಿಗಳು ಗೋಚರಿಸುತ್ತವೆ. ಇದನ್ನು ಪುಲೆಯವರು 150 ವರ್ಷಗಳ ಹಿಂದೆ ಸ್ವತಹ ತಾವೇ ಮಾಡಿ ತೋರಿಸಿದ್ದರು. ನಾವೂ ಕೂಡ ಇದನ್ನೇ ಅನುಸರಿದೆ ಬೇರೆ ದಾರಿಯೇ ಇಲ್ಲ. ಏಕೆಂದರೆ ಅಂಬೇಡ್ಕರ್ ಸಹ ಅನುಸರಿಸಿದ್ದು ಪುಲೆ ಮಾದರಿಯನ್ನೇ. ಆದರೆ ಇಂದು ಜಾತೀಯತೆ, ಅಸ್ಪೃಶ್ಯತೆ ಎನ್ನುವುದು ಕೇವಲ ಬ್ರಾಹ್ಮಣತ್ವದ ಕೈಯಲ್ಲಿ ಉಳಿದಿಲ್ಲ. ಇಂದು ಮಧ್ಯಮ ಶೂದ್ರ ಜಾತಿಗಳೂ ಕೂಡ ತಮ್ಮ ಜಾತೀಯತೆಗಳ ಕರಾಳ ಸ್ವರೂಪಗಳನ್ನು, ಅತ್ಯಾಚಾರಗಳನ್ನು ಅತ್ಯಂತ ಅಮಾನವೀಯವಾಗಿ ವ್ಯವಸ್ಥೆಯಲ್ಲಿ ಜಾರಿಗೊಳಿಸುತ್ತಿದ್ದಾರೆ.

ಇದೆಲ್ಲರ ಪ್ರತಿರೂಪವನ್ನು, ಶೂದ್ರ ಜಾತಿಗಳ ದಬ್ಬಾಳಿಕೆಗಳ ವಿರುದ್ಧವಾಗಿ ದಲಿತರು ಬ್ರಾಹ್ಮಣರೊಂದಿಗೆ ಧೃವೀಕರಣಗೊಳ್ಳುತ್ತಿರುವುದನ್ನು ಇಂದಿನ ಉತ್ತರ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಅಸಂಗತ ಜೋಡಿಯ ಸಾಧ್ಯತೆಗಳನ್ನು ಕಾನ್ಸೀರಾಮ್ ಅವರು ತೊಂಬತ್ತರ ದಶಕದಲ್ಲಿ ಚಾಲ್ತಿಗೆ ತಂದರು. 2004 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಾಯಾವತಿ ಅದನ್ನು ಯಶಸ್ವಿಯಾಗಿ ಪ್ರಯೋಗಿಸಿ ಅಧಿಕಾರವನ್ನೂ ಪಡೆದರು. ಈ ಬಾರಿ ಇದರ ಭವಿಷ್ಯವನ್ನು ಚುನಾವಣ ಫಲಿತಾಂಶಗಳೇ ನಿರ್ಧರಿಸುತ್ತವೆ. ಆದರೆ ಈ ದ್ವಿಜ ಹಾಗೂ ದಲಿತ ಹೊಂದಾಣಿಕೆ ಸಹ ಕೇವಲ ವ್ಯಾವಹಾರಿಕ, ಅಧಿಕಾರ ಗ್ರಹಣಕ್ಕೆ ಮಾತ್ರ ಸಂಬಂಧಪಟ್ಟಿದೆ. ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವ ಹಳೇ ಗಾದೆ ಮಾತಿನ ತತ್ವದಡಿ ಈ ಕೂಡುವಿಕೆ ಜಾರಿಗೊಂಡಿದೆ. ಕಡೆಗೂ ಬಲಿಪಶುಗಳು ತಳಸಮುದಾಯಗಳೇ. ಪುಲೆ ಶೂದ್ರಾತಿಶೂದ್ರರ ಬಗ್ಗೆ ಮಾತನಾಡಿದಾಗಲೂ ಅವರು ಇಂದಿನ ಪರಿಸ್ಥಿಯನ್ನು 150 ವರ್ಷಗಳ ಹಿಂದೆ ಕಲ್ಪಿಸಿರಲೂ ಇಲ್ಲ. ಇದರ ಪರಿಕಲ್ಪನೆ ಕೂಡ ಬಹುಶ ಅವರಿಗೆ ಇರಲಾರದು.

ತೀವ್ರವಾದ ಬದಲಾವಣೆಯ ಹರಿಕಾರರಾಗಿದ್ದ, ಬ್ರಾಹ್ಮಣೀಕರಣದ ಕಟು ವಿರೋಧಿಯಾಗಿದ್ದ, ಆದರೆ ಭಕ್ತಿ ಪಂಥದಿಂದ ಪ್ರಭಾವಗೊಂಡಿದ್ದ, ಚರ್ಚೆಗಳ, ಸಿದ್ಧಾಂತಗಳ ಗಂಗೋತ್ರಿಯಾಗಿದ್ದ, ಹತ್ತೊಂಬತ್ತನೇ ಶತಮಾನದ ಬಲು ದೊಡ್ಡ ಸಮಾಜ ಸುಧಾರಕ ಜ್ಯೋತಿಬಾ ಪುಲೆಯವರು.

One thought on “ಜ್ಯೋತಿಬಾ ಪುಲೆಯವರ ಚಿಂತನೆಗಳ ಪ್ರಸ್ತುತತೆ

Leave a Reply to Pavan Cancel reply

Your email address will not be published. Required fields are marked *