Daily Archives: February 16, 2012

ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪರವರಿಗೆ ಕೆಲವು ಪ್ರಶ್ನೆಗಳು…


– ಪರಶುರಾಮ ಕಲಾಲ್


ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಒಂದುವರ್ಷ ಹೆಚ್ಚುವರಿಯಾಗಿ ರಾಜ್ಯಪಾಲರಿಂದ ಅವಕಾಶ ಪಡೆದು, ಒಟ್ಟು ನಾಲ್ಕು ವರ್ಷ ಅವಧಿಪೂರ್ಣಗೊಳಿಸಿ, ಡಾ.ಎ. ಮುರಿಗೆಪ್ಪ ಈಗ ವಿಶ್ರಾಂತ ಕುಲಪತಿಗಳಾಗಿದ್ದಾರೆ. ಪ್ರಭಾರಿ ಕುಲಪತಿಯಾಗಿ ಡಾ.ಹಿ.ಚಿ.ಬೋರಲಿಂಗಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ.ಹಿ.ಚಿ.ಬೋರಲಿಂಗಯ್ಯ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು, ಅವರ ಮೇಲೆ ತನಿಖೆ ನಡೆಸಬೇಕೆಂದು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಈ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈಗ ಪ್ರಭಾರಿ ಕುಲಪತಿಗಳಾಗಿಯೇ ಡಾ.ಹಿ.ಚಿ.ಬೋರಲಿಂಗಯ್ಯ ಕೆಲಸ ನಿರ್ವಹಿಸಬೇಕಿದೆ. ಇದು ಆಡಳಿತಾತ್ಮಕವಾಗಿ ಎಷ್ಟು ಸರಿ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.

ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಬುಧವಾರ ಕನ್ನಡ ವಿವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಸಂಕಷ್ಟದ ದಿನಗಳನ್ನು ಹೀಗೆ ನೆನಪಿಸಿಕೊಂಡಿದ್ದಾರೆ:

  1. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ವಿಜಯನಗರ ಪುನಃಶ್ಚೇತನ ಟ್ರಸ್ಟ್‌ಗೆ ಥೀಮ್ ಪಾರ್ಕ್‌ಗಾಗಿ ನೀಡಲು ನನ್ನನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರು ಎಂದಿದ್ದಾರೆ. ಥೀಮ್ ಪಾರ್ಕ್ ಅನ್ನು ಕನ್ನಡ ವಿವಿ ಪಕ್ಕ ಮಾಡುತ್ತೇವೆ. ಕನ್ನಡ ವಿವಿಯ 80 ಏಕರೆಯಲ್ಲಿ ರಿಸರ್ಚ್ ಸೆಂಟರ್ ಬಿಲ್ಡಿಂಗ್ ಕಟ್ಟಿ ಕನ್ನಡ ವಿವಿ.ಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿ ಆ ಮೇಲೆ ಈ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು. ದಾರಿ ತಪ್ಪಿಸಿದರು.
  2. ಯು.ಆರ್. ಅನಂತಮೂರ್ತಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದಾಗ, “ಅವರಿಗೆ ಯಾಕೆ ನಾಡೋಜ ಗೌರವ ಪದವಿ ನೀಡುತ್ತೀರಿ. ಅದನ್ನು ಕೈ ಬಿಡಿ, ಬೇರೆಯವರನ್ನು ಆಯ್ಕೆ ಮಾಡಿ, ಇಲ್ಲವಾದರೆ ನುಡಿಹಬ್ಬದಲ್ಲಿ ಗಲಾಟೆ ಮಾಡಿಸಬೇಕಾಗುತ್ತದೆ,” ಎಂದು ಸಚಿವರಾದ ಜಿ.ಜನಾರ್ಧನ ರೆಡ್ಡಿ, ಬಿ.ಶ್ರೀರಾಮುಲು, ಶಾಸಕ ಆನಂದ್ ಸಿಂಗ್ ಒತ್ತಾಯಿಸಿದರು. ಅವರಿಗೆ ಸಮರ್ಪಕ ಉತ್ತರ ಹೇಳಿ ನಿಭಾಯಿಸಿದೆ.
  3. ನಾಡೋಜ ಗೌರವ ಪದವಿಯನ್ನು ತಾವು ಸೂಚಿಸಿದವರಿಗೆ ಕೊಡಬೇಕೆಂದು ರಾಜ್ಯಪಾಲ ಹಂಸರಾಜ ಭಾರದ್ವಾಜ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಬೇರೆ ಬೇರೆ ಹೆಸರನ್ನು ಸೂಚಿಸಿದರು. ಅದನ್ನು ಪರಿಗಣಿಸಲಿಲ್ಲ. ಇದರಿಂದ ಕುಲಾಧಿಪತಿಯಾಗಿದ್ದ ರಾಜ್ಯಪಾಲರು, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನುಡಿಹಬ್ಬ ಘಟಿಕೋತ್ಸವಕ್ಕೆ ಬರಲಿಲ್ಲ.
  4. ಸಿಂಡಿಕೇಟ್ ಸದಸ್ಯರಾದವರಿಗೆ ದೂರದೃಷ್ಠಿ ಇರಬೇಕು. ಕನಸು ಇರಬೇಕು. ಅದು ಇಲ್ಲದವರು ಸದಸ್ಯರಾದರೆ ಸಮಸ್ಯೆ ಸೃಷ್ಠಿಯಾಗುತ್ತದೆ. (ಹೀಗೆ ಹೇಳುವ ಮೂಲಕ ಸಿಂಡಿಕೇಟ್ ಸದಸ್ಯರ ಆಯ್ಕೆ ಸರಿ ಇರಲಿಲ್ಲ ಎಂದು ಹೇಳಿದಂತಾಯಿತು. ಅಲ್ಲವೆ?)

ಈ ಸಂದರ್ಭಗಳಲ್ಲಿ ಕುಲಪತಿಗಳಾಗಿ ಡಾ.ಎ.ಮುರಿಗೆಪ್ಪ ಯಾವ ರೀತಿ ದಿಟ್ಟಕ್ರಮ ಕೈಗೊಂಡರು?
ಯಾಕೆ ಈ ಕುರಿತಂತೆ ತಮ್ಮ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿಲ್ಲ?
ಎಲ್ಲರನ್ನೂ ಸರಿದೂಗಿಸುವ ಪ್ರಯತ್ನ ನಡೆಸುವ ಅಗತ್ಯ ಏನಿತ್ತು? ಇದು ಸರಿಯಾದ ಕ್ರಮವೇ?

ಇಂತಹ ಪ್ರಶ್ನೆಗಳು ಬರುವುದು ಸಹಜ. ಕಠಿಣವಾಗಿಯೇ ನಡೆದುಕೊಂಡೆ ಎಂದೇ ಈಗ ಡಾ.ಎ.ಮುರಿಗೆಪ್ಪ ಹೇಳುತ್ತಾರೆ. ಕನ್ನಡ ವಿವಿಯ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದವರು, ಅವರೂ ಏನನ್ನೂ ಮಾಡಲಿಲ್ಲ, ಎಲ್ಲದಕ್ಕೂ ಬೆಂಡಾದರು ಎಂದೇ ಹೇಳುತ್ತಾರೆ.

ಕನ್ನಡ ವಿವಿ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಮೊಟ್ಟ ಮೊದಲು ಕುವೆಂಪು ಅವರಿಗೆ ಮರಣೋತ್ತರವಾಗಿ ಕೊಡುವ ಮೂಲಕ ಆರಂಭವಾಯಿತು. ಕನ್ನಡ ನಾಡು, ನುಡಿಗೆ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ಕೊಡಬೇಕೆನ್ನುವುದು ಇದರ ಉದ್ದೇಶವಾಗಿತ್ತು. ಇದು ಬರುತ್ತಾ ಹಿಗ್ಗಿಸಿಕೊಂಡು ಏರುತ್ತಾ ಹೋಗಿ ರಾಜ್ಯೋತ್ಸವ ಪ್ರಶಸ್ತಿಯಂತೆ ಅಗ್ಗವಾಗಿ ಬಿಟ್ಟಿತು. ಜಾತಿ, ಪ್ರದೇಶವಾರು ಗುರುತಿಸಲು ಆರಂಭವಾಯಿತು. ನಾ ಎಂಬ ಡೋಜು ಹೆಚ್ಚಾದವರಿಗೆ ಈ ನಾಡೋಜ ಎಂಬ ಅನ್ವರ್ಥನಾಮಕ್ಕೆ ತಿರುಗಿ ಬಿಟ್ಟಿತು. ಹೀಗಾಗಿ ಕಳೆದ ವರ್ಷ ಯೋಗಪಟು ಒಬ್ಬರಿಗೆ ನಾಡೋಜ ದೊರೆಯಿತು. ಜ್ಯೋತಿಷಿಗಳಿಗೆ ಮುಂದಿನ ವರ್ಷ ಕೊಟ್ಟರೂ ಕೊಡಬಹುದು ಎನ್ನುವಲ್ಲಿಗೆ ಬಂದಿದೆ.

ಈ ಗೌರವ ಪದವಿಗೆ ಗೌರವ ಸಿಗುವಂತೆ ಮಾಡಬೇಕಿದೆ.

ಕನ್ನಡ ವಿವಿ ಕುಲಪತಿಗಳಾಗಲು ದೊಡ್ಡ ಲಾಬಿಯೇ ಪ್ರಾರಂಭಗೊಂಡಿದೆ. ಈಗಾಗಲೇ 14 ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಯುಜಿಸಿ ಒಬ್ಬ ಸದಸ್ಯರ ಹೆಸರನ್ನು ಸೂಚಿಸಿಲ್ಲವಾದ್ದರಿಂದ ಇನ್ನೂ ಆಯ್ಕೆ ಸಮಿತಿ ಪೂರ್ಣಗೊಂಡಿಲ್ಲ. ಸಮಿತಿ ರಚನೆಯಾದ ಮೇಲೆ ಅರ್ಜಿ ಸಲ್ಲಿಸುವ ಇನ್ನಷ್ಟು ಅಕಾಂಕ್ಷಿಗಳು ಇದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಈಗ ಸಂಕಷ್ಟದಲ್ಲಿದೆ. ಜಡವಾಗಿದೆ. ಅಲ್ಲಿ ಗುಂಪುಗಾರಿಕೆಗೆ ಹೆಚ್ಚಾಗಿ ಪರಸ್ಪರ ಟೀಕೆ, ಅಪಸ್ಪರಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ವಿವಿಯನ್ನು ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ, ಆಡಳಿತಾತ್ಮಕವಾಗಿ ಮುನ್ನೆಡೆಸುವ ಛಾತಿ ಇರುವವರು ಕುಲಪತಿಗಳಾಗಿ ಬರಬೇಕಿದೆ. ಕನ್ನಡ ವಿವಿ.ಗೆ ಹೊಸ ಸ್ವರೂಪ ಕೊಟ್ಟ ಮೊದಲಿನ ಉತ್ಸಾಹ, ಕನ್ನಡ ನಾಡು-ನುಡಿ ಕಟ್ಟುವ ಕೆಲಸ ಆರಂಭವಾಗಬೇಕಿದೆ. ಇದನ್ನು ಮಾಡಬೇಕಾದವರು ಯಾರು? ಇದು ಪ್ರಶ್ನೆಯಾಗಿಯೇ ಇದೆ.

ಜೀವನದಿಗಳ ಸಾವಿನ ಕಥನ – ಅಂತಿಮ ಅಧ್ಯಾಯ (24)


– ಡಾ.ಎನ್.ಜಗದೀಶ್ ಕೊಪ್ಪ    


[ಗೆಳೆಯರೆ, ನಮ್ಮ ವರ್ತಮಾನ.ಕಾಮ್ ಆರಂಭವಾದ ಒಂದು ತಿಂಗಳ ಒಳಗೇ ಆರಂಭವಾದ (4/9/2011) ಜಗದೀಶ್ ಕೊಪ್ಪರ ಈ ಲೇಖನ ಸರಣಿ ತನ್ನ ನಿಲುವು ಮತ್ತು ಅಧ್ಯಯನಶೀಲತೆಯಿಂದ ನಮ್ಮನಿಮ್ಮೆಲ್ಲರನ್ನು ಪ್ರಭಾವಿಸಿದ್ದು ಮಾತ್ರವಲ್ಲದೆ, ಚಿಂತನೆಗೂ ಹಚ್ಚಿತ್ತು. ಇಂದಿನದು ಆ ಸರಣಿಯ ಅಂತಿಮ ಅಧ್ಯಾಯ. ವರ್ತಮಾನ.ಕಾಮ್‌ನಲ್ಲಿ ಇದನ್ನು ಪ್ರಥಮ ಬಾರಿಗೆ ಪ್ರಕಟಿಸಲು ಇಚ್ಚಿಸಿದ್ದಕ್ಕಾಗಿ ಶ್ರೀ ಜಗದೀಶ್ ಕೊಪ್ಪರವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆದಷ್ಟು ಬೇಗ ಇದು ಪುಸ್ತಕರೂಪದಲ್ಲಿಯೂ ಬಂದು ಇನ್ನೂ ಹೆಚ್ಚು ಜನರನ್ನು ತಲುಪಲಿ ಎಂದು ಆಶಿಸುತ್ತೇನೆ. ಹಾಗೆಯೇ, ಅಂತರ್ಜಾಲದಲ್ಲಿನ ನಮ್ಮ ವರ್ತಮಾನ.ಕಾಮ್ ಪ್ರಯತ್ನಕ್ಕೆ ಮೊದಲಿನಿಂದಲೂ ಕ್ರಿಯಾಶೀಲವಾಗಿ ಬೆಂಬಲಿಸುತ್ತ ಬಂದಿರುವ ಜಗದೀಶ್ ಕೊಪ್ಪರ ಸಹಾಯ ದೊಡ್ಡದು. ಮತ್ತೊಮ್ಮೆ ಅವರಿಗೆ ಧನ್ಯವಾದಗಳು ಮತ್ತು ಕನ್ನಡದಲ್ಲಿ ಇಂತಹುದೊಂದು ಅಪರೂಪದ ವಿಷಯದ ಬಗ್ಗೆ ಬರೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. -ರವಿ…]

ಜಗತ್ತಿನ ನದಿಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಬದ್ಧತೆ, ಕಾಳಜಿ ಹಾಗೂ ಸ್ವಾಭಿಮಾನದ ಮೂಲಕ ಘನತೆ ತಂದುಕೊಟ್ಟವರು ಬ್ರೆಜಿಲ್ ಮತ್ತು ಭಾರತದ ಪರಿಸರವಾದಿ ಸತ್ಯಾಗ್ರಾಹಿಗಳು. ತಮ್ಮ ಎದೆಯೊಳಗಿನ ಕಿಚ್ಚು ಮತ್ತು ಸಂಕಟಗಳನ್ನು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿ ಅಣೆಕಟ್ಟುಗಳ ವಿರುದ್ಧದ ಹೋರಾಟಕ್ಕೆ ಎಲ್ಲರನ್ನೂ ಕ್ರೂಢೀಕರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬ್ರೆಜಿಲ್ ದೇಶದ ಮೂಲ ನಿವಾಸಿಗಳು ಮತ್ತು ಭಾರತದ ನರ್ಮದಾ ಬಚಾವ್ ಆಂದೋಲನದ ಚಳವಳಿಗಾರರು ತಮ್ಮ ಅವಿರತ ಪ್ರತಿಭಟನೆಯ ಮೂಲಕ ವಿಶ್ವದ ಗಮನ ಸೆಳೆದರು ಅಲ್ಲದೆ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿ ಪರಿಸರವಾದಿಗಳಿಗೆ ಸ್ಪೂರ್ತಿಯಾಗಿ ನಿಂತರು.

ಅದು 1989ರ ಪಬ್ರವರಿ ತಿಂಗಳಿನ ಮೊದಲ ವಾರದ ಒಂದು ದಿನ. ಬ್ರೆಜಿಲ್ ಈಶಾನ್ಯ ಭಾಗದ ಅಮಜೋನಿಯಾ ಪ್ರಾಂತ್ಯದ ಅಲ್ಟಮಿರಾ ಎಂಬ ಪಟ್ಟಣದ ಸಮುದಾಯ ಭವನದಲ್ಲಿ ಅಲ್ಲಿನ 20ಕ್ಕು ಹೆಚ್ಚಿನ ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳ ನಡುವೆ ಸಂಧಾನ ಸಭೆ ಏರ್ಪಟ್ಟಿತ್ತು. ಸಮಾರು ಒಂದು ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದ ಆ ಸಭೆಯಲ್ಲಿ ಬ್ರೆಜಿಲ್ ಸರ್ಕಾರದ ಅಣೆಕಟ್ಟು ನಿರ್ಮಾಣ ಹಾಗೂ ವಿದ್ಯುತ್ ಉತ್ಪಾದನೆಯ ಉಸ್ತುವಾರಿ ಹೊತ್ತಿದ್ದ ಮುಖ್ಯ ಇಂಜಿನಿಯರ್ ಸರ್ಕಾರದ ರೂಪು ರೇಷೆ ಮತ್ತು ಪುನರ್ವಸತಿ ಕುರಿತಂತೆ, ಸರ್ಕಾರ ನೀಡುವ ಪರಿಹಾರ ಧನ ಕುರಿತಂತೆ ಮಾತನಾಡುತಿದ್ದ. ಆ ದೇಶದ ಎಲ್ಲಾ ಸುದ್ಧಿ ಮಾಧ್ಯಮಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು. ಬ್ರೆಜಿಲ್‌ನ ಮುಖ್ಯ ನದಿಗಳಲ್ಲಿ ಒಂದಾದ ಕ್ಷಿಂಗು ನದಿಗೆ ಕಟ್ಟಲಾಗುವ ಅಣೆಕಟ್ಟುಗಳು, ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯಪ್ರದೇಶ, ವಸತಿ ಪ್ರದೇಶದ ವಿವರ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಇವುಗಳ ಕುರಿತು ಸ್ಥಳೀಯ ಮೂಲನಿವಾಸಿಗಳಿಗೆ ಸವಿವರವಾಗಿ ಮನದಟ್ಟು ಮಾಡಿಕೊಡುತಿದ್ದ.

ಆ ಸಭೆಯಲ್ಲಿ ಕುಳಿತಿದ್ದ ಕಯಾಪು ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕುಡುಗೋಲು ಆಕಾರದ ಆಯುಧದೊಂದಿಗೆ ಮುಂದೆ ಬಂದು ಅದನ್ನು ನೇರವಾಗಿ ಮುಖ್ಯ ಇಂಜಿನಿಯರ್ ಆಂಟೋನಿಯಾ ಎಂಬಾತನ ಕುತ್ತಿಗೆಗೆ ಹಿಡಿದು, “ನೀನೊಬ್ಬ ಅಪ್ಪಟ ಸುಳ್ಳುಗಾರ, ನಮಗೆ ನಿನ್ನ ವಿದ್ಯುತ್ ಬೇಕಾಗಿಲ್ಲ ನಿನ್ನ ವಿದ್ಯುತ್‌ನಿಂದ ನಮಗೆ ಆಹಾರ ದಕ್ಕುವುದಿಲ್ಲ. ನಮಗೆ ಆಹಾರ ಸಿಗುವುದು ನೀನು ಮುಳುಗಡೆ ಮಾಡಲಿರುವ ಅರಣ್ಯದಿಂದ. ಅದು ನಮ್ಮನ್ನು ಪೊರೆಯುವ ತಾಯಿ. ಈ ಅರಣ್ಯ ಹೀಗೆ ಇರಬೇಕು, ಈ ನದಿ ಇದೇ ರೀತಿ ಹರಿಯಬೇಕು,” ಎಂದು ಅವನು ತೋರಿಸುತಿದ್ದ ನಕಾಶೆಯತ್ತ ಕೈ ಮಾಡಿ ದೊಡ್ಡ ಗಂಟಲಿನಲ್ಲಿ ಬಡಬಡಸಿದಳು. ಇಡೀ ದೃಶ್ಯ ಟಿ.ವಿ. ಚಾನಲ್ ಗಳಲ್ಲಿ ನೇರಪ್ರಸಾರವಾಗುತಿತ್ತು. ಆತ ಸ್ತಂಭೀಭೂತನಾಗಿ ಮಾತಿಲ್ಲದೆ, ಬೆವರುತ್ತಾ ನಿಂತಿದ್ದ. ಈ ಬುಡಕಟ್ಟು ಮಹಿಳೆಯ ಸಿಟ್ಟು ಕೇವಲ ಅವಳೊಬ್ಬಳ ಒಡಲಾಳದ ಸಂಕಟವಾಗಿರಲಿಲ್ಲ. ಅದು ಇಡೀ ಬ್ರೆಜಿಲ್ ದೇಶದ ಮೂಲನಿವಾಸಿಗಳ ಆಕ್ರೋಶದ ಧ್ವನಿಯಾಗಿತ್ತು.

ಕ್ಷಿಂಗ್ ನದಿಯ ಹರಿವಿನುದ್ದಕ್ಕು ಒಟ್ಟು ಆರು ಅಣೆಕಟ್ಟುಗಳನ್ನ ನಿಮಿಸಲು ಬ್ರೆಜಿಲ್ ಸರ್ಕಾರ ಯೋಜನೆಗಳನ್ನ ರೂಪಿಸಿತ್ತು. ಇವುಗಳಲ್ಲಿ 11 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾನೆಯೂ ಸೇರಿತ್ತು. ಈ ಯೋಜನೆಗಳಿಗಾಗಿ ಅಪರೂಪದ ಸಾವಿರಾರು ಹೆಕ್ಟೇರ್ ಮಳೆಕಾಡು ಹಿನ್ನೀರಿನಲ್ಲಿ ಮುಳುಗಡೆಯಾಗುವುದು ಮತ್ತು ಅನೇಕ ಬುಡಕಟ್ಟು ಜನಾಂಗಗಳು ನಿರ್ವಸತಿರಾಗುವುದು ಅನಿವಾರ್ಯವಾಗಿತ್ತು. ಅಭಿವೃದ್ಧಿಯ ಅಂಧಯುಗಲ್ಲಿ ಸಾಗುತಿದ್ದ ಅಲ್ಲಿನ ಸರ್ಕಾರಕ್ಕೆ ನೂರಾರು ವರ್ಷಗಳಿಂದ ಅರಣ್ಯದಲ್ಲಿ ಪರಿಸರಕ್ಕೆ ಮಾರಕವಾಗದಂತೆ ಜೀವಿಸಿದ್ದ ಮೂಲನಿವಾಸಿಗಳು ತೃಣಸಮಾನರಾಗಿದ್ದರು ಯಾವ ಕ್ಷಣದಲ್ಲಿ ಬೇಕಾದರೂ ಇವರನ್ನು ಹೊಸಕಿ ಹಾಕಬಹುದು ಎಂಬ ಅಹಂಕಾರವನ್ನ ಬ್ರೆಜಿಲ್ ಸರ್ಕಾರ ಬೆಳೆಸಿಕೊಂಡಿತ್ತು.

ಇದಕ್ಕು ಮುನ್ನ ಸರ್ಕಾರ ಸ್ಥಳೀಯ ನದಿಯೊಂದಕ್ಕೆ ಟುಕುರ್ವ ಎಂಬ ಅಣೆಕಟ್ಟನ್ನು ನಿರ್ಮಿಸಿ ಅಲ್ಲಿನ ಸ್ಥಳೀಯ ನಿವಾಸಿಗಳಾದ ಗೇವಿಯೊ ಎಂಬ ಬುಡಕಟ್ಟು ಜನಾಂಗಕ್ಕೆ ಆಸೆ ಆಮಿಷಗಳನ್ನು ತೋರಿಸಿ ಅವರನ್ನು ಒಕ್ಕಲೆಬ್ಬಿಸಿತ್ತು. ಆ ಜನಾಂಗದ ನಾಯಕನೊಬ್ಬ ಸಭೆಗೆ ಆಗಮಿಸಿ ತನ್ನ ಜನಾಂಗದ ಬದುಕು ಮೂರಾಬಟ್ಟೆಯಾದುದನ್ನು ಹೃದಯಕ್ಕೆ ನಾಟುವಂತೆ ವಿವರಿಸಿದ್ದ.

ಅಂತಿಮವಾಗಿ ಬ್ರೆಜಿಲ್‌ನ ಬುಡಕಟ್ಟು ಜನಾಂಗದ ನಾಯಕರು ಒಗ್ಗೂಡಿ, ಅಮೇರಿಕಾಕ್ಕೆ ತೆರಳಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಿಶ್ವಬ್ಯಾಂಕ್ ಅಧಿಕಾರಿಗಳನ್ನ ಬೇಟಿಮಾಡಿ ಸರ್ಕಾರದ ವಂಚನೆಯನ್ನ ವಿವರಿಸಿ, ಅಣೆಕಟ್ಟುಗಳ ವಿಷಯವಾಗಿ ಬ್ರೆಜಿಲ್ ಸರ್ಕಾರಕ್ಕೆ ಯಾವುದೇ ಆರ್ಥಿಕ ನೆರವು ನೀಡದಂತೆ ಮನವಿ ಸಲ್ಲಿಸಿದರು.ಇದರಿಂದ ಆಕ್ರೋಶಗೊಂಡ ಬ್ರೆಜಿಲ್ ಸರ್ಕಾರ ಆ ಮೂವರು ನಾಯಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿತು. ಅಲ್ಲದೆ ವಿದೇಶಿಯರು ನಡೆಸಬಹುದಾದ ಬುಡಮೇಲು ಕೃತ್ಯದಂತಹ ಗುರುತರ ಆರೋಪ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿತು.ಈ ಘಟನೆ ಸಹಜವಾಗಿ ಬ್ರೆಜಿಲ್‌ನ ಎಲ್ಲಾ ನಾಗರೀಕರನ್ನು ಕೆರಳಿಸಿತು. ಅಲ್ಲಿನ ಟಿ.ವಿ.ಚಾನಲ್ ಒಂದರ ನಿರೂಪಕ ಸಚಿವನೊಬ್ಬನನ್ನು ಚರ್ಚೆಗೆ ಆಹ್ವಾನಿಸಿ, ಬುಡಕಟ್ಟು ಜನಾಂಗದ ನಾಯಕರು ವಿದೇಶಿ ಪ್ರಜೆಗಳಾದರೆ, ಇಲ್ಲಿ ಚರ್ಚೆ ಮಾಡುತ್ತಿರುವ ನಾನು ನೀವು ಯಾವ ದೇಶದ ಪ್ರಜೆಗಳು ಎಂದು ಪ್ರಶ್ನೆ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ. ಈ ದೃಶ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದ ಅಲ್ಲಿನ ಪ್ರಜೆಗಳು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಅಂತಿಮವಾಗಿ ಮೂಲನಿವಾಸಿಗಳ ಮತ್ತು ಜನಗಳ ಒತ್ತಾಯಕ್ಕೆ ಮಣಿದ ಬ್ರೆಜಿಲ್ ಸರ್ಕಾರ ಆರು ಅಣೆಕಟ್ಟುಗಳ ಯೋಜನೆಯನ್ನು ರದ್ದುಪಡಿಸಿತು. ಇದರಿಂದಾಗಿ 7.200 ಹೆಕ್ಟೇರ್ ಪ್ರದೇಶದ ಮಳೆಕಾಡು ಹಾಗೂ ಅರಣ್ಯದೊಳಗೆ ವಾಸವಾಗಿದ್ದ 20 ಕ್ಕೂ ಹೆಚ್ಚು ಬುಡಕಟ್ಟು ಜನಾಂಗ ಹಿನ್ನೀರಿನಲ್ಲಿ ಮುಳುಗುವುದರಿಂದ ಪಾರಾದವು.

ದಕ್ಷಿಣ ಏಷ್ಯಾದ ಸುಂದರ ಭೌಗೋಳಿಕ ಪ್ರದೇಶಗಳಿಂದ, ಅಲ್ಲಿನ ಕಡಲ ತೀರಗಳಿಂದ, ಹೆಸರುವಾಸಿಯಾದ ಥಾಯ್ಲೆಂಡ್ ದೇಶ ಇತ್ತೀಚಿಗೆ ಪ್ರವಾಸೋದ್ಯಮದ ಮೂಲಕ ಜಗತ್ತಿನ ಗಮನ ಸೆಳೆದಿದೆ. 1980ರಿಂದ ಅಲ್ಲಿ ತೀವ್ರಗೊಂಡ ಉದ್ಯಮೀಕರಣದಿಂದ ವಿದ್ಯುತ್ ಬೇಡಿಕೆ ಹೆಚ್ಚಾಯಿತು. ಈ ಕಾರಣಕ್ಕಾಗಿ ಥಾಯ್ಲೆಂಡ್ ಸರ್ಕಾರ 1982ರಲ್ಲಿ ವಿಶ್ವಬ್ಯಾಂಕ್ ಹಾಗೂ ಜಪಾನ್ ಸರ್ಕಾರದ ನೆರವಿನಿಂದ ಅಲ್ಲಿನ ಪ್ರಸಿದ್ದ ಕ್ವಾಯ್ ನದಿಗೆ 187 ಮೀಟರ್ ಎತ್ತರದ ನಾಮ್ ಚೋನ್ ಎಂಬ ಅಣೆಕಟ್ಟು ನಿರ್ಮಿಸಲು ಆರಂಭಿಸಿತು. ಈ ಅಣೆಕಟ್ಟಿನ ಹಿನ್ನೀರಿನಲ್ಲಿ 75 ಕಿ.ಮಿ. ವ್ಯಾಪ್ತಿಯ ಅಭಯಾರಣ್ಯ ಹಾಗೂ ಆನೆಗಳು ಚಲಿಸುವ ಕಾರಿಡಾರ್ ಮುಳುಗುವ ಸಂಭವ ಹೆಚ್ಚಾಯಿತು. ಜೊತೆಗೆ ಎರಡು ಸಾವಿರ ಕರೇನ್ ಎಂಬ ಮೀನುಗಾರಿಕೆಯನ್ನ ಕಸಬಾಗಿಸಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಸಹ ಒಕ್ಕಲೆಬ್ಬಿಸಲು ಸರ್ಕಾರ ನೊಟೀಸ್ ಜಾರಿ ಮಾಡಿತ್ತು. ಈ ಅಭಯಾರಣ್ಯದಲ್ಲಿ ಅಪರೂಪದ ಪಕ್ಷಿ ಸಂಕುಲವಿದ್ದುದನ್ನು ಮನಗಂಡಿದ್ದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಪಿಲಿಪ್ ಹಾಗೂ ಅವನ ಪುತ್ರ ಪ್ರಿನ್ಸ್ ಚಾರ್ಲ್ಸ್ ಅಭಯಾರಣ್ಯದ ರಕ್ಷಣೆಗೆ ಆರ್ಥಿಕ ನೆರವು ನೀಡಿದ್ದರು. ಇವೆಲ್ಲವನ್ನು ಲೆಕ್ಕಿಸದ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾದಾಗ ಅಲ್ಲಿನ ವಿದ್ಯಾರ್ಥಿ ಸಂಘಟನೆ, ನಾಗರೀಕರು, ಪರಿಸರವಾದಿಗಳು ಪ್ರತಿಭಟನೆಗೆ ಮುಂದಾದರು. ಇವರುಗಳಿಗೆ ರಾಜಧಾನಿ ಬ್ಯಾಂಕಾಕ್‌ನ ಸ್ವಯಂ ಸೇವಾ ಸಂಘಟನೆ ನೆರವಿಗೆ ಬಂದಿತು. ನಾಮ್ಚೋನ್ ಅಣೆಕಟ್ಟು ಮತ್ತು ಇದರಿಂದ ಸೃಷ್ಟಿಯಾಗುವ ಜಲಾಶಯದಿಂದ ಆಗುವ ದುಷ್ಪಾರಿಣಾಮಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿ ವರದಿಯನ್ನ ಹೊರಜಗತ್ತಿಗೆ ಬಿಡುಗಡೆ ಮಾಡಿತು. ನಂತರ ಅಣೆಕಟ್ಟಿನ ವಿರುದ್ಧ ಸ್ಥಳೀಯವಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ಎದುರಾದಾಗ ಥಾಯ್ಲೆಂಡ್ ಸರ್ಕಾರ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗುವ ಯಾವುದೇ ಅಣೆಕಟ್ಟುಗಳನ್ನು ನಿರ್ಮಿಸುವುದಿಲ್ಲ ಎಂದು ಘೋಷಿಸಿತು. ಥಾಯ್ಲೆಂಡ್ ನಾಗರೀಕರ ಈ ಹೋರಾಟ ನೆರೆಯ ಬರ್ಮಾ, ಕಾಂಬೋಡಿಯ, ಲಾವೋಸ್ ರಾಷ್ಟ್ರಗಳ ನಾಗರೀಕರಿಗೆ ಸ್ಪೂರ್ತಿ ನೀಡಿತು.

ಭಾರತದಲ್ಲಿ ಅಣೆಕಟ್ಟುಗಳ ವಿರುದ್ಧದ ಪ್ರತಿಭಟನೆ ಪ್ರಾರಂಭವಾದದ್ದು 1946ರಲ್ಲಿ ಆರಂಭವಾದ ದೇಶದ ಪ್ರಥಮ ಹಿರಾಕುಡ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ. ಅಲ್ಲಿನ ಸಂತ್ರಸ್ತರ ಪ್ರತಿಭಟನೆಯನ್ನ ಪೊಲಿಸರು ಲಾಠಿಚಾರ್ಜ್ ಮಾಡುವುದರ ಮೂಲಕ ಹತ್ತಿಕ್ಕಿದರು. 1978ರಲ್ಲಿ ಬಿಹಾರದ ಸುವರ್ಣರೇಖ ನದಿಗೆ ಕಟ್ಟಲಾದ ಚಾಂಡಿಲ್ ಅಣೆಕಟ್ಟು ಅನೇಕ ಹಿಂಸೆ ಸಾವು ನೋವಿಗೆ ಕಾರಣವಾಯಿತು. ಭಾರತದಲ್ಲೆ ಪ್ರಥಮ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿದರು. 1982ರಲ್ಲಿ 8 ಸಾವಿರ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ನಡೆದ ಘರ್ಷಣೆಯಲ್ಲಿ ಪೋಲಿಸರ ಗುಂಡಿಗೆ ಮೂವರು ಬಲಿಯಾದರು. ಘಟನೆಯ ನಂತರ ಸಂತ್ರಸ್ತರಿಗೆ ನೀಡುವ ಪರಿಹಾರ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡತೊಡಗಿತು.

ಇದಾದ ನಂತರ ಅಣೆಕಟ್ಟುಗಳ ವಿರುದ್ಧ ವಿರೋಧ ಇವತ್ತಿಗೂ ಮುಂದುವರಿದುಕೊಂದು ಬಂದಿದೆ, ಪಶ್ಚಿಮ ಹಿಮಾಲಯದ ತೆಹ್ರಿ ಅಣೆಕಟ್ಟು ವಿಷಯದಲ್ಲಿ ಅಲ್ಲಿನ ಪರಿಸರವಾದಿ ಹಾಗೂ ಮರಗಳ ರಕ್ಷಣೆಗಾಗಿ ಅಪ್ಪಿಕೊ ಚಳುವಳಿಯನ್ನು ಹುಟ್ಟು ಹಾಕಿದ ನೇತಾರ ಸುಂದರ್ ಲಾಲ್ ಬಹುಗುಣ ಇವರ ಪ್ರಬಲ ವಿರೋಧದ ಫಲವಾಗಿ ಅಣೆಕಟ್ಟು ಸಾಧ್ಯವಾಗಿಲ್ಲ.

ಭಾರತದ ಪರಿಸರವಾದಿಗಳಿಗೆ ನೈತಿಕ ವಿಜಯವನ್ನು ಕೇರಳದ ಮೌನ ಕಣಿವೆಯ ಅಣೆಕಟ್ಟು ತಂದಿಕೊಟ್ಟಿತು. 1980ರ ದಶಕದಲ್ಲಿ 120 ಮೀಟರ್ ಎತ್ತರದ ಅಣೆಕಟ್ಟನ್ನು ಕೇರಳದ ಇಡುಕ್ಕಿ ಜಿಲ್ಲೆಯ ಮೌನಕಣಿವೆಯಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಹೊರಟಾಗ ಪಶ್ಚಿಮಘಟ್ಟದ ಜೀವ ಸಂಕುಲಗಳ ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಎಲ್ಲಾ ವರ್ಗದ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ 1983ರಲ್ಲಿ ಅಂದಿನ ಪ್ರದಾನಿ ಇಂದಿರಾಗಾಂಧಿ ಯೋಜನೆಯನ್ನ ರದ್ದುಪಡಿಸಿದರು.

ಭಾರತದ ಅಣೆಕಟ್ಟುಗಳ ಪ್ರತಿಭಟನೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೆಂದರೆ ನರ್ಮದಾ ಬಚಾವ್ ಆಂಧೋಲನ. ಮಹರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳ ನಡುವೆ ಹರಿಯುವ ನರ್ಮದಾ ನದಿಗೆ ಕಟ್ಟಲಾಗುತ್ತಿರುವ ಅಣೆಕಟ್ಟುಗಳ ವಿರುದ್ಧ ದನಿಯೆತ್ತಿ ನಿರಾಶ್ರಿತರ ಪರವಾಗಿ ಹೋರಾಡುತ್ತಾ ಹೋರಾಟಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಮೇಧಾ ಪಾಟ್ಕರ್‌ರಿಗೆ ಸಲ್ಲುತ್ತದೆ.

1985 ರಲ್ಲಿ 30 ವರ್ಷ ವಯಸ್ಸಿನ ಮೇಧಾ ಪಾಟ್ಕರ್ ನರ್ಮದಾ ಅಣೆಕಟ್ಟಿನಿಂದ ಮುಳುಗಡೆಯಾಗುವ ಹಳ್ಳಿಗಳ ಅಧ್ಯಯನಕ್ಕೆ ಬಂದವರು, ಅಲ್ಲಿನ ಹಳ್ಳಿಗರ ನೋವು, ಆಕ್ರಂದನ, ಸರ್ಕಾರದ ಅಧಿಕಾರಿಗಳ ಶೋಷಣೆಯನ್ನ ಸಹಿಸಲಾರದೆ ನಿರಾಶ್ರಿತರ ಪರವಾಗಿ ಅಧ್ಯಯನ ಕೈಬಿಟ್ಟು ಹೋರಾಟಕ್ಕೆ ನಿಂತರು. ಸತತ 27 ವರ್ಷಗಳಿಂದ ಮನೆ ಮಠ ತೊರೆದು, ಅವಿವಾಹಿತರಾಗಿ ಉಳಿದು ಹೋರಾಟ ನಡೆಸುತ್ತಿರುವ ಮೇಧಾರಿಂದ ಸ್ಫೂರ್ತಿ ಪಡೆದ ಅನೇಕ ಇಂಜಿನಿಯರ್‌ಗಳು, ವೈದ್ಯರು, ಸಾಮಾಜಿಕ ಸೇವಾಕರ್ತರು ಇವರ ಜೊತೆ ಕೈಜೋಡಿಸಿದ್ದಾರೆ.. ಈ ಹೋರಾಟಕ್ಕೆ ಅನೇಕ ಮಗ್ಗಲುಗಳಿದ್ದು ಆಸಕ್ತರು ಲೇಖಕಿ ಅರುಂಧತಿರಾಯ್ ರವರ “ದ ಗ್ರೇಟರ್ ಕಾಮನ್ ಗುಡ್” ಕೃತಿಯನ್ನು ಅವಲೋಕಿಸಬಹುದು. (ಪ್ರಕಾಶಕರು: ಇಂಡಿಯಾ ಬುಕ್ ಹೌಸ್-1999)

ಸಮಾರು 200 ಕಿಲೋಮೀಟರ್ ಪಾದಯಾತ್ರೆ ಮಾಡಿ ನಿರಾಶ್ರಿತರ ಬವಣೆಗಳನ್ನ ಅರಿತ ಮೇಧಾ ನರ್ಮದಾ ಕಣಿವೆಯಲ್ಲಿರುವ ಆದಿವಾಸಿಗಳಿಗೆ ಬದುಕು ಕಟ್ಟಿಕೊಡಲು ನಡೆಸಿದ ಹೋರಾಟ ವಿಶ್ವಾದ್ಯಂತ ಪ್ರಸಿದ್ಧಿಯಾಗಿದೆ. ಇವರ ಹೋರಾಟಕ್ಕೆ ಮಣಿದ ವಿಶ್ವಬ್ಯಾಂಕ್ ಕೆಲವು ವರ್ಷಗಳ ಕಾಲ ಆರ್ಥಿಕ ನೆರವನ್ನ ತಡೆಹಿಡಿತ್ತು.

ಸರ್ಕಾರದ ಸುಳ್ಳು ಮಾಹಿತಿಗಳು, ಪರಿಹಾರದಲ್ಲಿ ಮಾಡಲಾದ ವಂಚನೆಗಳು ಇವಲ್ಲವನ್ನೂ ಅಮೇರಿಕಾಕ್ಕೆ ತೆರಳಿ ವಿಶ್ವಬ್ಯಾಂಕ್‌ಗೆ ಮನದಟ್ಟು ಮಾಡಿಕೊಟ್ಟು ಬಂದ ದಿಟ್ಟ ಹೆಣ್ಣು ಮಗಳು ಈಕೆ. ಈಗ ನರ್ಮದಾ ಸರೋವರ ಅಣೆಕಟ್ಟಿನ ಎತ್ತರವನ್ನು 63 ಮೀಟರ್‌ಗಿಂತ ಹೆಚ್ಚು ಮಾಡಕೂಡದೆಂಬ ಎಚ್ಚರಿಕೆಯನ್ನು ಗುಜರಾತ್ ಸರ್ಕಾರಕ್ಕೆ ರವಾನಿಸಿರುವ ಮೇಧಾ ಪಾಟ್ಕರ್ ತಮ್ಮ ಹೋರಾಟವನ್ನು ಇಂದಿಗೂ ಮುಂದುವರಿಸಿ ಜಗತ್ತಿನ ಅನೇಕ ರಾಷ್ಟ್ರಗಳ ಹೋರಾಟಗಾರರಿಗೆ ಮಾದರಿಯಾಗಿ ನಿಂತಿದ್ದಾರೆ.

ಜೀವನದಿಗಳ ರಕ್ಷಣೆ ಮತ್ತು ಅಣೆಕಟ್ಟುಗಳ ವಿರೋಧಕ್ಕೆ ಅಂತರಾಷ್ಟ್ರೀಯ ವೇದಿಕೆ ನಿರ್ಮಾಣ ಮಾಡಿಕೊಟ್ಟವರೆಂದರೆ, ಎಡ್ವರ್ಡ್ ಗೊಲ್ಡ್‌ಸ್ಮಿತ್ ಮತು ನಿಕೊಲಸ್ ಹಿಲ್ಡ್‌ಯಾರ್ಡ್. ಈ ಇಬ್ಬರು ಮಹನೀಯರು ಸೇರಿ 1984ರಲ್ಲಿ ರಚಿಸಿದ “ದ ಸೊಷಿಯಲ್ ಅಂಡ್ ಎನ್ವಿರಾನ್ಮೆಂಟಲ್ ಎಪೆಕ್ಟ್ಸ್ ಆಪ್ ಲಾರ್ಜ್ ಡ್ಯಾಮ್ಸ್” ಕೃತಿ ಪರಿಸರವಾದಿಗಳಿಗೆ ಆಧಾರವಾಯಿತು. ಈ ಇಬ್ಬರು ಲೇಖಕರು ತಾವು ಸಂಪಾದಕರಾಗಿದ್ದ “ದ ಎಕಾಲಜಿಸ್ಟ್” ಪತ್ರಿಕೆಯಲ್ಲಿ ಕೂಡ ನಿರಂತರ ಲೇಖನಗಳನ್ನು ಬರೆದು ಅಣೆಕಟ್ಟುಗಳ ಕ್ರೂರ ಇತಿಹಾಸವನ್ನು ಬಿಚ್ಚಿಟ್ಟರು. ಇದರಿಂದಾಗಿ “ಇಂಟರ್‌ನ್ಯಾಷನಲ್ ರಿವರ್ ನೆಟ್ವರ್ಕ್” ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.

ಈಗ ಜಗತ್ತಿನಾದ್ಯಂತ ಅಣೆಕಟ್ಟು ಕುರಿತಂತೆ ಸರ್ಕಾರಗಳಿಗೆ ಇದ್ದ ಕುರುಡು ನಂಬಿಕೆ ಅಳಿಸಿಹೋಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿದೆ. ಸಣ್ಣದು ಸುಂದರ ಎಂಬ ಪ್ರಸಿದ್ಧ ಅರ್ಥಶಾಸ್ತ್ರಜ್ಙ ಶೂಮಾಕರ್ನ ತತ್ವ ಅರಿವಾಗತೊಡಗಿದೆ. ಹಾಗಾಗಿ ಜೀವನದಿಗಳ ಮಾರಣ ಹೋಮಕ್ಕೆ ತಡೆಯುಂಟಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕಮ್ಯುನಿಸ್ಟ್ ಪ್ರಭುತ್ವ ಇರುವ ಚೀನಾ ದೇಶದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಿ ಅಣೆಕಟ್ಟುಗಳನ್ನು ಸಮರೋಪಾದಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಇತ್ತೀಚಿಗೆ ಬಿಡುಗಡೆಯಾದ ಲೇಖಕ ಬ್ರಹ್ಮ ಚೆಲ್ಲನೀ ಅವರ “ವಾಟರ್: ಏಷ್ಯಾಸ್ ನ್ಯೂ ಬ್ಯಾಟಲ್‌ಗ್ರೌಂಡ್” ಕೃತಿಯಲ್ಲಿ ಸವಿವರವಾಗಿ ವಿವರಿಸಲಾಗಿದೆ.

ಒಟ್ಟಾರೆ ಹಲವು ತ್ಯಾಗಮಯಿ ಜೀವಿಗಳಿಂದ, ಈ ನೆಲದ ಮೆಲಿನ ಅಕ್ಕರೆಯಿಂದ, ಇಲ್ಲಿ ನೆಲ ಜಲ ನಮ್ಮ ಪಾಲಿಗೆ, ನಮ್ಮ ಮುಂದಿನ ತಲೆಮಾರಿಗೆ ಉಳಿದುಕೊಂಡಿವುದು ನಮ್ಮ ಪುಣ್ಯವಿಶೇಷವೆಂದೇ ಹೇಳಬೇಕು. ನಾವು ಜೀವನಪೂರ್ತಿ ಈ ಹೋರಾಟಗಾರರಿಗೆ ಚಿರಋಣಿಯಾಗಿರಬೇಕು.

(ಮುಗಿಯಿತು.)