ಕೃಷ್ಣ ಪಾಲೇಮಾರ್ ಮತ್ತು ಮಂಗಳೂರಿನ ಪತ್ರಕರ್ತರು

– ಸದಾನಂದ ಕೋಟ್ಯಾನ್

ಮಂಗಳೂರಿನಲ್ಲಿ ಪತ್ರಿಕಾ ಭವನದ ಮೂರನೇ ಮಹಡಿ ಉದ್ಘಾಟನೆ ಆಗಿದೆ. ಕರಾವಳಿಯವರೇ ಆದ ಮುಖ್ಯಮಂತ್ರಿ ಸದಾನಂದ ಗೌಡರು ಭವನ ಉದ್ಘಾಟಿಸಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ರಾಜ್ಯಾಂಗಕ್ಕೆ ದಾಸನಾಗಿರುವುದಕ್ಕೆ ಇಡೀ ಉದ್ಘಾಟನಾ ಸಮಾರಂಭವೇ ಸಾಕ್ಷಿ ಎಂಬಂತೆ ಕಾರ್ಯಕ್ರಮ ನಡೆಯಿತು. ವೇದಿಕೆಯ ತುಂಬ ರಾಜಕಾರಣಿಗಳು. ಅವರ ಅಕ್ಕಪಕ್ಕದಲ್ಲಿ ರಾಜಕಾರಣಿಗಳು ನೀಡಿದ ಕೊಡುಗೆಯನ್ನು ಪ್ರಶಂಸಿಸುವ ಆಸ್ಥಾನ ಭಟರ ಪಾತ್ರಧಾರಿಗಳಾಗಿ ಪರಿವರ್ತನೆ ಹೊಂದಿದ ಪತ್ರಕರ್ತರು. ಇಡೀ ಸಮಾರಂಭ ಮಂಗಳೂರಿನಲ್ಲಿ ಮಾಧ್ಯಮ ಎತ್ತ ಸಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುವಂತಿತ್ತು.

ಸೋರುತ್ತಿರುವ ಸ್ಥೈರ್ಯ, ರಾಜ್ಯಾಂಗ ಮತ್ತು ಕಾರ್ಯಾಂಗವನ್ನು ತರಾಟೆಗೆ ತೆಗೆದುಕೊಳ್ಳುವ, ವಿಮರ್ಶಿಸುವ ಸಾಮರ್ಥ್ಯ ಕಳೆದುಕೊಂಡ ಲೇಖನಿಗಳಿಗೆ ಪ್ರಸ್ತುತ ಅಗತ್ಯವಾಗಿ ಶಕ್ತಿ ತುಂಬಬೇಕಾಗಿದೆ. ಪತ್ರಿಕಾ ಭವನದಲ್ಲಿ ಅಪಾರ ಹಣವಿದೆ. ದೇಶದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಪತ್ರಕರ್ತರು ಇದ್ದಾರೆ. ಅವರ ಸ್ಫೂರ್ತಿಯ ಗೊಡವೆಗೆ ಹೋಗದ, ಲೋಕಲ್ ದಾಸ್ಯಕ್ಕೆ ಶರಣಾದ ಪತ್ರಕರ್ತರು ಭವನದ ನೆಪದಲ್ಲಿ ಮತ್ತಷ್ಟು ಕೆಳಗಿಳಿದರು. ಅದಕ್ಕೆ ಪಕ್ಕಾ ಸಾಕ್ಷಿ ಉದ್ಘಾಟನಾ ಆಹ್ವಾನ ಪತ್ರದಲ್ಲಿರುವ ಕಳಂಕಿತ ಶಾಸಕರೊಬ್ಬರ ಹೆಸರು.

ಹಾಗೆ ನೋಡಿದರೆ ಮಂಗಳೂರಿನ ಪತ್ರಕರ್ತ ಗೆಳೆಯರಿಗೆ ಈಗ ಕಡು ಕಷ್ಠದ ಕಾಲ. ಅವರನ್ನು ಕಷ್ಟದಿಂದ ಪಾರು ಮಾಡುವ ಕೃಷ್ಣಣ್ಣ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಪತ್ರಿಕೆಗಳು ವಿದ್ಯುನ್ಮಾನ ಮಾಧ್ಯಮಗಳು ಈ ನೀಲಿಚಿತ್ರದ ಪೊಲೀ ಹುಡುಗನ ಕೃಷ್ಣ ಲೀಲೆಗಳನ್ನು ವರದಿ ಮಾಡುತ್ತಾ ಛೀ ಥೂ ಎಂದು ಉಗಿಯುತ್ತಿದ್ದರೆ ಮಂಗಳೂರಿನ ಮಾಧ್ಯಮದ ಗೆಳೆಯರು ತಮ್ಮ ಪತ್ರಕರ್ತರ ಸಂಘದ ಮೂರನೇ ಮಹಡಿಯ ಸಭಾಂಗಣದ ಉದ್ಘಾಟಣೆಗೆ ಕೃಷ್ಣ ಲೀಲೆ ಬಹಿರಂಗಗೊಂಡ ಮರು ದಿವಸವೇ ಕಾರ್‍ಯಕಾರಿ ಸಮಿತಿಯ ಸಭೆ ಸೇರಿ ಆಹ್ವಾನಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಬಹಳ ನೋವಿನಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಂದು ಕೃಷ್ಣ ಪಾಲೇಮಾರ್ ಹೆಸರಿನ ಕೆಳಗೆ ನಮೂದಿಸಿದ್ದಾರೆ. ನೀಲಿಚಿತ್ರ ಸರಬರಾಜುದಾರ ಎಂದು ಇಡೀ ರಾಜ್ಯ ಮತ್ತು ದೇಶದ ಜನತೆ ಟೀಕಿಸುತ್ತಿದ್ದರೆ ಮಂಗಳೂರಿನ ಕಾರ್‍ಯನಿರತ ಪತ್ರಕರ್ತರಿಗೆ ಕೃಷ್ಣ ಜೆ ಪಾಲೇಮಾರ್ “ಮುಖ್ಯ ಅತಿಥಿ”. ಅಷ್ಟು ಮಾತ್ರವಲ್ಲದೆ ತಾವು ಕೆಲಸ ಮಾಡುವ ಮಾಧ್ಯಮಗಳಲ್ಲಿ ತಮ್ಮ ಋಣ ತೀರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷ್ಣಣ್ಣನಿಗೆ ಮೊಬೈಲ್ ಬಳಸಲೇ ಗೊತ್ತಿಲ್ಲ, ಯಾರೋ ಅಪಾಪೋಲಿಗಳು ಕಳುಹಿಸಿರುವ ಎಂಎಂಎಸ್ ಎಂದು ವೈಭವೀಕರಿಸಿ ಬರೆಯುವುದರ ಜೊತೆಗೆ ಕೃಷ್ಣಣ್ಣ ನೈತಿಕ ಹೊಣೆ ಹೊತ್ತು (ಹಿಂದೆ ರೈಲು ಅಪಘಾತವಾದಾಗ ಲಾಲ್ ಬಹುದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದಂತೆ) ರಾಜೀನಾಮೆ ನೀಡಿದ್ದಾರೆ ಎಂದು ಹುತಾತ್ಮ ಪಟ್ಟವನ್ನು ಕಟ್ಟಲು ಹೆಣಗಾಡಿ ನಗೆಪಾಟೀಲಿಗೀಡಾಗುತ್ತಿದ್ದಾರೆ.

ಹೀಗೆ ಮಂಗಳೂರು ಪತ್ರಕರ್ತರ ಕಾರುಬಾರು ಪಟ್ಟಿ ಮಾಡುವುದಾದರೆ :

 • ಇಡೀ ಕರ್ನಾಟಕ ರಾಜ್ಯದಲ್ಲಿ ಕೆಐಎಡಿಬಿ ಹಗರಣಗಳು ಹೊರಬೀಳುತ್ತಿದ್ದರೆ ಮಂಗಳೂರಿನ ಪತ್ರಕರ್ತರು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.
 • ವರದಿಗಾರಿಕೆಯಲ್ಲಿ ಪ್ರಾಯೋಜಕರತ್ತಲೇ ನಿಷ್ಠೆ ಹೊರತು ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಿಲ್ಲ
 • ನೈತಿಕ ಪೊಲೀಸ್‌ಗಿರಿಗೆ ಸದಾ ಬೆಂಬಲಿಸುತ್ತಿದ್ದ ಮಾಧ್ಯಮ, ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಆರಂಭಿಸಿದ ನಂತರವಷ್ಟೇ ಬಹಿರಂಗ ಬೆಂಬಲವನ್ನು ನಿಲ್ಲಿಸಿ, ನಿಜವಾದ ಸುದ್ದಿಯತ್ತ ಪ್ರಾಮುಖ್ಯತೆ ಕೊಟ್ಟರು.
 • ಬ್ರಹ್ಮಕಲಶ, ನಾಗಮಂಡಲಗಳ ಜಾಹೀರಾತಿಗೇ ಕಾಯುವ ಪತ್ರಿಕೆಗಳು ದೇವರ ಆರಾಧನೆಗಿಂತಲೂ ಜಾಹೀರಾತು ಆರಾಧನೆಗೇ ಒತ್ತು ಕೊಡುತ್ತಿರುವುದು ಇಂದಿಗೂ ವಾಸ್ತವ.

ಇನ್ನು  ಕೃಷ್ಣ ಜೆ. ಪಾಲೇಮಾರ್ ಕೃಪಾಪೋಷಿತ ಮಾಫಿಯಾಗಳ ವಿಚಾರ ಕೇಳಬೇಕೇ? ನಗರದಲ್ಲಿರುವ ಅಕ್ರಮ ಮಾಲ್ ಒಂದರ ಪಾಲುದಾರರೊಬ್ಬರಿಗೆ ಪಾಲೇಮಾರ್ ಪರವಾದ ಪ್ರತಿಭಟನೆ ಮಾಡಲು ಐಡಿಯಾ ಕೊಟ್ಟವರೂ ಪತ್ರಕರ್ತರು. ನಾವೇ ನಮ್ಮಷ್ಟಕ್ಕೆ ಬರೆದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ, ನಮ್ಮ ವರದಿಗೆ ಪೂರಕವಾಗಿ ನಿಮ್ಮ ದ್ವನಿಯೂ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಪತ್ರಕರ್ತರದ್ದು. ಬಳ್ಳಾರಿಯಿಂದ ಗಣಿ ಮಂಗಳೂರು ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ ಮಾಫಿಯಾದ ಹಿಂದೆ ಬಂದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಕೈ ಕೆಲಸ ಮಾಡಿತ್ತು. ಆದರೆ ಮಂಗಳೂರಿನ ಪತ್ರಕರ್ತರು ಈ ಬಗ್ಗೆ ವರದಿಗಳನ್ನು ಮಾಡಿದ್ದೇ ಇಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ರಾಜೀನಾಮೆಗೆ ಪಾಲೇಮಾರ್ ಕಾರಣರಾಗಿದ್ದ ಸಂಧರ್ಭ ಬೆಂಗಳೂರು ಮತ್ತು ಕಾರವಾರದಿಂದ ಪಾಲೇಮಾರ್ ವಿರುದ್ಧ ವರದಿಗಳು ಪ್ರಕಟಗೊಂಡವು. ಆದರೆ ಮಂಗಳೂರಿನ ಶಾಸಕ, ಸಚಿವರಾಗಿದ್ದ ಪಾಲೇಮಾರ್ ಬಗ್ಗೆ ಪತ್ರಕರ್ತರು ಆಸಕ್ತಿ ವಹಿಸಿ ಪ್ರಕರಣವನ್ನು ಫಾಲೋ ಮಾಡಲೇ ಇಲ್ಲ. ಕೆಐಎಡಿಬಿ ಹಗರಣ ರಾಜ್ಯಾಧ್ಯಂತ ಸುದ್ಧಿಯಾದಾಗ ಮಂಗಳೂರು ಕೆಐಎಡಿಬಿ ಹಗರಣಗಳ ಹೂರಣವನ್ನು ಕೆದಕಲು ಹೋಗಲೇ ಇಲ್ಲ. ಕೆಐಎಡಿಬಿ ಕಡತಗಳ ಯಾವುದೋ ಒಂದು ಮೂಲೆಯಲ್ಲಿ ಪಾಲೇಮಾರ್ ಹೆಸರು ಇರಲೇ ಬೇಕು ಎಂಬುದು ಕರಾವಳಿಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇರುವ ಸರಕಾರಿ ಜಮೀನುಗಳನ್ನು ಅತಿಕ್ರಮಿಸಿ ಫ್ಲ್ಯಾಟು, ಲೇಔಟ್, ಮಾಲ್, ಬಹುಮಹಡಿ ಕಟ್ಟಡಗಳ ನಿರ್ಮಾಣದ ಹಿಂದೆ ಪಾಲೇಮಾರ್ ಪಾಲುದಾರಿಕೆ ಇದೆ. ಪಾಲೇಮಾರ್ ಜಮೀನಿನಲ್ಲಿ ಪತ್ತೆಯಾದ ಅಕ್ರಮ ಮರಳು ಶೇಖರಣೆಗೆ ಜಿಲ್ಲಾಧಿಕಾರಿ ತಂಡ ದಾಳಿ ಮಾಡಿದಾಗಲೂ ಮಂಗಳೂರಿನ ಕೆಲವೊಂದು ಪತ್ರಿಕೆಗಳಿಗೆ ಅದು ಸುದ್ಧಿಯೇ ಆಗಿರಲಿಲ್ಲ. ಸಚಿವರೊಬ್ಬರ ವ್ಯವಹಾರಕ್ಕೆ ಅಧಿಕಾರಿಗಳು ತಂಡ ದಾಳಿ ಮಾಡಿ ಮರಳನ್ನು ವಶಪಡಿಸಿಕೊಳ್ಳುವುದು ಸುದ್ಧಿಯೇ ಅಲ್ಲ ಎಂಬುದು ಪಾಲೇಮರ್ ಮತ್ತು ಪತ್ರಕರ್ತರ ಮಧ್ಯದ ಸಂಬಂಧವನ್ನು ಎತ್ತಿ ತೋರಿಸುತ್ತದೆ.

2 thoughts on “ಕೃಷ್ಣ ಪಾಲೇಮಾರ್ ಮತ್ತು ಮಂಗಳೂರಿನ ಪತ್ರಕರ್ತರು

 1. Ananda Prasad

  ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸಾಕ್ಷರತೆ, ಜೀವನ ಮಟ್ಟ, ಅರ್ಥಿಕ ಸ್ಥಿತಿಯಲ್ಲಿ ಇಡೀ ರಾಜ್ಯದಲ್ಲಿ ಮುಂದೆ ಇದ್ದರೂ ವೈಚಾರಿಕತೆಯಲ್ಲಿ ಎಲ್ಲಕ್ಕಿಂತ ಹಿಂದೆ ಇವೆ. ಇದಕ್ಕೆ ಇಲ್ಲಿನ ಮಾಧ್ಯಮಗಳೂ ಕಾರಣ. ಇಲ್ಲಿ ಬಲಪಂಥೀಯ, ಮೂಲಭೂತವಾದಿ, ಸಂಪ್ರದಾಯವಾದಿ ಪತ್ರಿಕೆಗಳದ್ದೇ ಮೇಲುಗೈ. ಪ್ರಗತಿಶೀಲ ನಿಲುವಿನ ಪತ್ರಿಕೆಗಳು ಇಲ್ಲವೆಂದಲ್ಲ ವಾರ್ತಾಭಾರತಿ, ಕರಾವಳಿ ಅಲೆಯಂಥ ಪತ್ರಿಕೆಗಳೂ ಇವೆ. ಇಲ್ಲಿನ ಜನಜೀವನದಲ್ಲಿ ಧಾರ್ಮಿಕ ಮೂಲಭೂತವಾದ ಮೊದಲಿನಿಂದಲೂ ಹಾಸುಹೊಕ್ಕಾಗಿದೆ. ಇದು ಒಂದು ರೀತಿಯಲ್ಲಿ ಗುಜರಾತಿನ ಒಂದು ತುಂಡು ಎಂದರೂ ಸರಿ. ಹೀಗಾಗಿ ಇಲ್ಲಿನ ರಾಜಕೀಯದಲ್ಲಿಯಾಗಲಿ, ಜನಜೀವನದಲ್ಲಾಗಲಿ ವೈಚಾರಿಕತೆಗೆ ಜಾಗವಿಲ್ಲ. ಗುಜರಾತಿನಲ್ಲಿ ಯಾವ ರೀತಿ ಮೂಲಭೂತವಾದಿಗಳು ಹಲವರು ವರ್ಷಗಳಿಂದ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದಾರೋ ಹಾಗೆಯೆ ಇಲ್ಲಿಯೂ ಹಲವಾರು ವರ್ಷಗಳಿಂದ ಮೂಲಭೂತವಾದಿಗಳು ಚುನಾವಣೆಯಲ್ಲಿ ಗೆಲ್ಲುತ್ತಾ ಇದ್ದು ಇಲ್ಲಿ ಚುನಾವಣೆ ನಡೆಸುವುದು ವ್ಯರ್ಥ ಎಂಬಂಥ ಪರಿಸ್ಥಿತಿ ಇದೆ. ಇಲ್ಲಿ ಕೆಲವಾರು ವರ್ಷಗಳಿಂದ ಸಂವಿಧಾನೇತರ ಶಕ್ತಿಗಳೇ ಮೇಲುಗೈ ಪಡೆದಿರುವುದರಿಂದಾಗಿ ಇಲ್ಲಿ ಕಾನೂನುಗಳು ಮೂಲಭೂತವಾದಿ ಶಕ್ತಿಗಳಿಗೆ ಹೇಗೆ ಬೇಕೋ ಹಾಗೆ ಬಾಗಿಸಲಾಗಿದೆ. ಇದು ರಾಜ್ಯದಲ್ಲಿಯೇ ಅತ್ಯಂತ ಮುಂದುವರಿದ ಜಿಲ್ಲೆಯ ದುರಂತ. ಹೀಗಾಗಿ ಇಲ್ಲಿನ ಪತ್ರಕರ್ತರಿಂದ ಆರೋಗ್ಯಕರವಾದ ಏನನ್ನೂ ನಿರೀಕ್ಷಿಸುವುದು ಸಾಧ್ಯವಿಲ್ಲ.

  Reply
 2. prasad raxidi

  ಪತ್ರಕರ್ತರ ಈ ಪ್ರವೃತ್ತಿ ದ.ಕ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ ಎಲ್ಲ ಕಡೆಗಳಲ್ಲೂ ರಾಜಕಾರಣಿ- ಉಧ್ಯಮಿ- ಮತ್ತು ಮಾಫಿಯಾ ಗುಂಪುಗಳ ಜೊತೆ ಪತ್ರಕರ್ತರೆನಿಸಿಕೊಂಡವರ ಗೆಳೆತನ ಪಾಲುದಾರಿಕೆ ಸಣ್ಣ ಸಣ್ಣ ಊರುಗಳಿಗೂ ತಲಪಿದೆ.ನಿಜವಾದ -ಹೊಣೆಯರಿತ ಪರ್ಕರ್ತರು ಏಕಾಂಗಿಗಳಾಗುತ್ತಿದ್ದಾರೆ. ಉದಾಹರಣೆಗೆ ಪಶ್ಚಿಮ ಘಟ್ಟಗಳಲ್ಲಿ ಆರಂಭವಾಗುತ್ತಿರುವ ಜಲವಿದ್ಯುತ್ ಕಂಪೆನಿಗಳ ಲೆಕ್ಕಪತ್ರವನ್ನು ತನಿಖೆನಡೆಸಿದರೆ ಅನೇಕ ಪರಿಸರವಾದಿ ಮುಖವಾಡ ಹೊತ್ತ ಪತ್ರಕರ್ತರು ಅವರ “ಪೇ ಲಿಸ್ಟ್” ನಲ್ಲಿರುವದು ಕಂಡುಬರುತ್ತದೆ..

  Reply

Leave a Reply

Your email address will not be published.