Daily Archives: February 18, 2012

ಅಸಹಜ ನಿರೀಕ್ಷೆಗಳ ಮಧ್ಯೆ ಜನಶ್ರೀ

-ಭೂಮಿ ಬಾನು

ಸದ್ಯದ ಮಟ್ಟಿಗೆ ಒಂದಿಷ್ಟು ಸೆನ್ಸಿಬಲ್ ಚಾನೆಲ್ ಎನ್ನಬಹುದಾದ ಜನಶ್ರೀ ಸುದ್ದಿ ವಾಹಿನಿ ಇಂದು (ಫೆಬ್ರವರಿ 18) ಒಂದು ವರ್ಷ ಪೂರೈಸಿದೆ. ಚಾನೆಲ್‌ನ ಕ್ರಿಯಾಶೀಲ ಹಾಗೂ ಸೂಕ್ಷ್ಮ ಮನಸ್ಸಿನ  ಸಿಬ್ಬಂದಿಗೆ ಅಭಿನಂದನೆಗಳು.

ಹೇಳಿ ಕೇಳಿ ಚಾನೆಲ್ ಅನ್ನು ಆರಂಭಿಸಿದ್ದು ಗಣಿ ವ್ಯವಹಾರದಲ್ಲಿ ಹಣ ಗಳಿಸಿದ್ದ ಜನಾರ್ಧನ ರೆಡ್ಡಿ. ಅವರಿಗೆ ಜ್ಯೋತಿಷ್ಯದ ಬಗ್ಗೆಯಾಗಲಿ, ವೈಜ್ಞಾನಿಕ ಚಿಂತನೆಯ ಅಗತ್ಯತೆಯಾಗಲಿ, ಸ್ಪಷ್ಟ ಆಲೋಚನೆಗಳೇನೂ ಇರಲಿಲ್ಲ. ದೈವದ ಬಗ್ಗೆ ಅತೀವ ಭಕ್ತಿ ಇತ್ತು, ಆದರೆ ಸಾರ್ವಜನಿಕ ಸಂಪತ್ತಿನ ದುರಪಯೋಗದ ಬಗ್ಗೆ ಮುಜುಗರ ಇರಲಿಲ್ಲ. ಇಂತಹವರಿಂದ ಒಂದು ಮೂಢನಂಬಿಕೆ ವಿರೋಧಿ ಸುದ್ದಿವಾಹಿನಿಯೊಂದನ್ನು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ಅದರಲ್ಲೂ ಪೈಪೋಟಿಯಲ್ಲಿರುವ ಇತರೆ ಚಾನೆಲ್ ಗಳು ಜ್ಯೋತಿಷ್ಯ, ಅಂಧ ಶ್ರದ್ಧೆಗಳನ್ನು ಢಾಳಾಗಿ ತೋರಿಸಿ ನೋಡುಗರನ್ನು ಆಕರ್ಷಿಸುತ್ತಿರುವಾಗ ಒಂದು ವರ್ಷದ ಹಿಂದೆ ಆರಂಭವಾದ ಚಾನೆಲ್  ಭಿನ್ನವಾಗಿರಬೇಕೆಂಬ ನಿರೀಕ್ಷೆಯೇ ಅಸಹಜವಾಗಿತ್ತು.

ಆದರೆ ಚಾನೆಲ್ ಭಿನ್ನವಾಗಿಯೇ ಹೊರಬಂತು. ಅದಕ್ಕೆ ಕಾರಣ ಮಾಲಿಕರಲ್ಲ, ಕ್ರಿಯಾಶೀಲ ಸಿಬ್ಬಂದಿ. ರಾಶಿ ಭವಿಷ್ಯ, ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ.…ತಲೆದಂಡದಂತಹ ಕಾರ್ಯಕ್ರಮಗಳನ್ನು ಇವರು ಪ್ರಸಾರ ಮಾಡಲಿಲ್ಲ. ಗ್ರಹಣದ ಸಂದರ್ಭಗಳಲ್ಲೂ ಜ್ಯೋತಿಷ್ಯದ ಜೊತೆ ವೈಜ್ಞಾನಿಕ ಚಿಂತನೆಯನ್ನು ಮುಖಾಮುಖಿಯಾಗಿಸಿದರು. ನಿನ್ನೆ (ಫೆ.17) ಕೂಡ ರೈಸ್ ಪುಲ್ಲಿ ಯಿಂದ ಮೋಸ ಹೋಗುವವರನ್ನು ಎಚ್ಚರಗೊಳಿಸಲು ಒಂದು ಉತ್ತಮ ಕಾರ್ಯಕ್ರಮ ಮಾಡಿದ ಹೆಗ್ಗಳಿಕೆ ಜನಶ್ರೀಗೆ ಸೇರುತ್ತದೆ.

ಟಿ.ಆರ್.ಪಿ ಗಳಿಕೆಯಲ್ಲಿ ಜನಶ್ರೀ ಯಾವ ಸ್ಥಾನದಲ್ಲಿದೆಯೋ ಹೊರ ಜಗತ್ತಿಗೆ ಅದು ಗೊತ್ತಾಗುವುದಿಲ್ಲ. ಗೊತ್ತಾದರೂ, ಅದು ಕೆಲವೇ ವರ್ಗಗಳಿಗೆ ಸೀಮಿತವಾದ ಮಾಹಿತಿಯಾಗಿ ಉಳಿದುಬಿಡುತ್ತದೆ. ವಿಭಿನ್ನ, ವಿಶಿಷ್ಟವಾದ ಅನೇಕ ಕಾರ್ಯಕ್ರಮಗಳು ಈ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿವೆ. ಒಂದು ಸಿನಿಮಾ ಕತೆ, ಈಗ ನಾನು, ಒಂದೊಳ್ಳೆ ಕೆಲಸ, ಜನಶ್ರೀ ತನಿಖೆ, ಡೆಡ್ ಲೈನ್… ಕೆಲವು ಉದಾಹರಣೆಗಳಷ್ಟೆ.

ಹಾಗಂತ ಚಾನೆಲ್ ಎಲ್ಲಾ ಲೋಪಗಳಿಂದ ಮುಕ್ತ ಎಂದೇನಲ್ಲ. ಬಳ್ಳಾರಿ ಗಣಿ ಸುದ್ದಿಗಳು ಗೌಣವಾಗಿ ಬಿತ್ತರಗೊಳ್ಳುತ್ತವೆ. ಚಾನೆಲ್ ಮಾಲಿಕರು ಜೈಲಿಗೆ ಹೋದದ್ದು ಸುದ್ದಿಯಾದರೂ, ಯಡಿಯೂರಪ್ಪನ ಜೈಲು ಸಹವಾಸ ಅಥವಾ ಶ್ರೀರಾಮುಲು ಗೆಲುವಿನ ಸುದ್ದಿಯಷ್ಟಲ್ಲ.

ಗುಂಡಿಗಳಿರುವ ರಸ್ತೆ, ಹಾಳಾದ ಸೇತುವೆ, ತಲುಪದ ಪಿಂಚಣಿ, ಅನರ್ಹರಿಗೆ ವಿಶ್ವವಿದ್ಯಾನಿಲಯಗಳು ಹಾಕಿದ ಮಣೆ…ಹೀಗೆ ಅನೇಕ ಸುದ್ದಿಗಳಾಗುತ್ತವೆ. ಆದರೆ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನಿಂತು ನೋಡಿದಾಗ ಇನ್ನೂ ಶೋಷಣೆ ಇದೆ. ಜಾತಿ ಜಾತಿಗಳ ನಡುವಿನ ಸೇತುವೆ ಶಿಥಿಲಗೊಂಡಿದೆ. ದಲಿತರು, ಹಿಂದುಳಿದವರು ಸಾಗಬೇಕಾದ ಪ್ರಗತಿ ಪಥದಲ್ಲಿ ಗುಂಡಿಗಳೇ ಹೆಚ್ಚು. ಅತ್ತ ಕಡೆಯೂ ಒಂದಿಷ್ಟು ಗಮನ ಹರಿಸಬೇಕಿದೆ. ಅಥವಾ ಈ ನಿಟ್ಟಿನಲ್ಲಿ ಎಷ್ಟೇ ಗಮನ ಹರಿಸಿದರೂ ಕಡಿಮೆಯೇ.