Daily Archives: February 19, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-8)


– ಡಾ.ಎನ್.ಜಗದೀಶ ಕೊಪ್ಪ  


ಜಿಮ್ ಕಾರ್ಬೆಟ್ ಮೊಕಮೆಘಾಟ್‌ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳು ಕಂಡುಬಂದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆ ವಿಷಯದಲ್ಲಿ ಶಿಸ್ತು ಕಾಣಬರತೊಡಗಿತು. ಪ್ರಾರಂಭದಲ್ಲಿ ಕಾರ್ಬೆಟ್‌ಗೆ ಇದ್ದ ಒತ್ತಡಗಳು ಮರೆಯಾದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನಲ್ಲಿ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸೆಂಬರ್ ತಿಂಗಳ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್‌ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ. ತನ್ನ ಕುಟುಂಬದಲ್ಲಿ ಆಚರಿಸುತ್ತಿದ್ದ ಕ್ರಿಸ್‌ಮಸ್ ಹಬ್ಬ ಹೊರತುಪಡಿಸಿದರೆ, ಉಳಿದ ಹಿಂದೂ ಧರ್ಮದ ಹಬ್ಬಗಳಾದ ಹೋಳಿ, ಗಣೇಶಚತುರ್ಥಿ, ದೀಪಾವಳಿಯನ್ನು ಮೊಕಮೆಘಾಟ್‌ನಲ್ಲಿ ಕಾರ್ಮಿಕರ ಜೊತೆ ಆಚರಿಸುತ್ತಿದ್ದ. ಹಬ್ಬದ ದಿನಗಳಲ್ಲಿ ಕಾರ್ಮಿಕರು ಕಾಡಿನಿಂದ ಬಗೆಬಗೆಯ ಹೂ ಮತ್ತು ಎಲೆಗಳನ್ನು ತಂದು ಕಾರ್ಬೆಟ್‌ನ ಮನೆಯನ್ನು ಸಿಂಗರಿಸಿದರೆ, ಮಹಿಳೆಯರು ಮನೆಯ ಮುಂದೆ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದರು. ಕಾರ್ಮಿಕರ ಮಕ್ಕಳ ಬಗ್ಗೆ ಅಪಾರ ಪ್ರೀತಿ, ಕರುಣೆ ಹೊಂದಿದ್ದ ಕಾರ್ಬೆಟ್ ಸಾವಿರಾರು ರೂಪಾಯಿ ಖರ್ಚು ಮಾಡಿ ಸಿಹಿತಿಂಡಿಗಳ ಪೊಟ್ಟಣಗಳನ್ನು ಪೇಟೆಯಿಂದ ಕೊಂಡುತಂದು ಪ್ರತಿ ಮನೆಗೂ ಹಂಚುತ್ತಿದ್ದ. ಜಾತಿ, ಅಂತಸ್ತು ಎಂಬ ತಾರತಮ್ಯವಿಲ್ಲದೆ ಅವರು ನೀಡಿದ ಆಹಾರವನ್ನು ಹಬ್ಬದ ದಿನಗಳಲ್ಲಿ ಸೇವಿಸುತ್ತಿದ್ದ.

ತನಗೆ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಹೆಸರು ಬರಲು ಕಾರ್ಮಿಕರ ಶ್ರಮವೇ ಕಾರಣ ಎಂಬ ಅರಿವು ಕಾರ್ಬೆಟ್‌ನನ್ನು ಸದಾ ಎಚ್ಚರಿಸುತ್ತಿತ್ತು. ಹಾಗಾಗಿ ಪ್ರತಿಯೊಬ್ಬ ಕಾರ್ಮಿಕನ ಕುಟುಂಬವನ್ನು ತನ್ನ ಕುಟುಂಬದಂತೆ ಪ್ರೀತಿಸುತ್ತಿದ್ದ. ಅವನು ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ 26 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಘಟನೆಯಾಗಲಿ, ಅಥವಾ ಅವಿಧೇಯನಾಗಿ ನಡೆದುಕೊಂಡ ಸಂಗತಿಯಾಗಲಿ ಜರುಗಲಿಲ್ಲ. ಒಮ್ಮೆ ಮಾತ್ರ ಕಾರ್ಮಿಕರ ಸಂಬಳ ತಲುಪುವುದು ತಡವಾದ ಕಾರಣ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಸಿದ್ದ.

ಮೊಕಮೆಘಾಟ್‌ನಲ್ಲಿ ಕೆಲಸ ಪ್ರಾರಂಭಿಸಿದ ನಾಲ್ಕನೇ ವರ್ಷದಲ್ಲಿ ಕೇಂದ್ರ ಕಚೇರಿಯಿಂದ ಕೂಲಿಕಾರ್ಮಿಕರ ಸಂಬಳ ಬರುವುದು ತಡವಾಯಿತು. ಪ್ರತಿವಾರ ಹಣ ಪಾವತಿಸುತ್ತಿದ್ದ ಕಾರ್ಬೆಟ್ ತಾನು ಉಳಿಸಿದ್ದ ಸಂಬಳ ಮತ್ತು ಬೋನಸ್ ಹಣವನ್ನು ಕಾರ್ಮಿಕರಿಗೆ ಪಾವತಿಸುತ್ತಾ ಕೆಲಸ ಮುಂದುವರಿಸಿದ್ದ. ಹೀಗೆ ಆರು ವಾರ ಕಳೆದರೂ ಹಣ ಬರಲಿಲ್ಲ. ತನ್ನಲ್ಲಿದ್ದ ಹಣವೆಲ್ಲಾ ಖರ್ಚಾದ ನಂತರ ಏಳನೇ ವಾರ ಹಣ ಪಾವತಿಸಿರಲಿಲ್ಲ. ಆದರೂ ಎಲ್ಲಾ ಕಾರ್ಮಿಕರು ಕೆಲಸ ಮುಂದುವರಿಸಿದ್ದರು.

ಕಲ್ಲಿದ್ದಲು ತುಂಬುವ ಕಾರ್ಮಿಕನಾಗಿ ಕೆಲಸ ಮಾಡುತಿದ್ದ ಒಬ್ಬ ಮುಸ್ಲಿಂ ವೃದ್ದನೊಬ್ಬ ನಾಲ್ಕನೇ ದಿನದ ರಾತ್ರಿ ಒಂದಿಷ್ಟು ಹಣ ಕೇಳಲು ಕಾರ್ಬೆಟ್ ನಿವಾಸಕ್ಕೆ ಬಂದ. ಅದು ಊಟದ ಸಮಯವಾದ್ದರಿಂದ ಸಾಹೇಬರು ಊಟ ಮಾಡಲಿ ಎಂದು ಹೊರಗೆ ಕಾಯುತ್ತಿದ್ದ. ಸೇವಕ ಕಾರ್ಬೆಟ್ ಗೆ ಬಡಿಸುತಿದ್ದ ಊಟವನ್ನು ಗಮನಿಸಿದ ಆ ಮುಸ್ಲಿಂ ವೃದ್ದ ಸೇವಕನನ್ನು ಪ್ರಶ್ನಿಸಿದ, ಏಕೆ ಸಾಹೇಬರು ಒಂದೇ ಚಪಾತಿಯನ್ನು ಮಾತ್ರ ತಿನ್ನುತ್ತಿದ್ದಾರೆ? ಆಗ ನಿಜ ಸಂಗತಿಯನ್ನ ಬಿಚ್ಚಿಟ್ಟ ಸೇವಕ, ಸಾಹೇಬರು  ಕಳೆದ ಆರುವಾರಗಳಿಂದ ತಮ್ಮಲ್ಲಿದ್ದ ಹಣವನ್ನು ಕೂಲಿ ರೂಪದಲ್ಲಿ ನಿಮಗೆಲ್ಲಾ ಪಾವತಿಸಿಬಿಟ್ಟಿದ್ದಾರೆ. ಕಛೇರಿಯಿಂದ ಕಳೆದ ಒಂದೂವರೆ ತಿಂಗಳಿಂದ ಹಣ ಬಂದಿಲ್ಲ. ಮನೆಗೆ ದಿನಸಿ ಸಾಮಾನು ತರಲು ಅವರ ಬಳಿ ಹಣವಿಲ್ಲ. ಹಾಗಾಗಿ ಬೆಳಿಗ್ಗೆ, ರಾತ್ರಿ ಒಂದೊಂದೇ ಚಪಾತಿ ಸೇವಿಸುತ್ತಿದ್ದಾರೆ ಎಂದು ಎಲ್ಲವನ್ನೂ ವಿವರಿಸಿದ. ಕೂಲಿ ಹಣ ಕೇಳಲು ಬಂದಿದ್ದವ ಏನೂ ಮಾತಾಡದೇ ಮನೆಗೆ ಹಿಂತಿರುಗಿದ.

ಊಟ ಮಾಡಿ ಮನೆಯ ಹೊರಗೆ ಆರಾಮ ಕುರ್ಚಿಯಲ್ಲಿ ಸಿಗರೇಟು ಸೇದುತ್ತಾ ಕುಳಿತಿದ್ದ ಕಾರ್ಬೆಟ್ ಎದುರು ಆ ವೃದ್ದ ಮತ್ತೆ ಪ್ರತ್ಯಕ್ಷನಾದ. ಅವನ ಕೈಯಲ್ಲಿ ಕರವಸ್ತ್ರದಿಂದ ಮುಚ್ಚಿದ್ದ ಕೆಲವು ವಸ್ತುಗಳಿದ್ದವು. ಕಾರ್ಬೆಟ್ ಎದುರು ಕೈಜೋಡಿಸಿ ನಿಂತ ಆ ಮುಸ್ಲಿಂ ವೃದ್ದ, “ಮಹಾರಾಜ್ ನಿಮ್ಮ ಸೇವಕನಿಂದ ಎಲ್ಲಾ ವಿಷಯ ತಿಳಿಯಿತು. ಸಾಹೇಬ್, ನಾವು ಹಸಿವಿನಲ್ಲಿ ಹುಟ್ಟಿದವರು, ಹಸಿವಿನಲ್ಲಿ ಬದುಕಿದವರು, ಹಸಿವಿನಲ್ಲೆ ಸಾಯುವ ಮಂದಿ. ಇದು ನಮಗೆ ಹೊಸದಲ್ಲ. ಆದರೆ, ನೀವು ಈ ರೀತಿ ಇರುವುದನ್ನ ಸಹಿಸಲು ಸಾದ್ಯವಾಗುತ್ತಿಲ್ಲ. ತೆಗೆದುಕೊಳ್ಳಿ ಇದರಲ್ಲಿ ನನ್ನ ಹೆಂಡತಿಯ ಒಡವೆಗಳಿವೆ. ಇವುಗಳನ್ನ ಮಾರಿ ಹಾಕಿ ಮನೆಗೆ ಸಾಮಾನು ತಂದು ಊಟ ಮಾಡಿ ನೆಮ್ಮದಿಯಿಂದ ಇರಿ,” ಎನ್ನುತ್ತಾ ಕಾರ್ಬೆಟ್‌ನ ಕಾಲು ಬಳಿ ಕಣ್ಣೀರಿಡುತ್ತಾ ಕುಳಿತು ಬಿಟ್ಟ.. ಆ ಬಡ ಕೂಲಿ ಕಾರ್ಮಿಕನ ಮಾತು ಕೇಳಿದ ಕಾರ್ಬೆಟ್ ಕಣ್ಣಲ್ಲೂ ಸಹ ನೀರು ಹರಿಯತೊಡಗಿತು. ಕಾರ್ಮಿಕನನ್ನು ಹಿಡಿದೆತ್ತಿ ನಿಲ್ಲಿಸುತ್ತಾ ಇನ್ನೆರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಹೋಗು ಎಂದು ಸಮಾಧಾನ ಹೇಳಿ ಕಳಿಸಿದ. ಕಾರ್ಬೆಟ್ ಆ ಕ್ಷಣದಲ್ಲಿ ಟೆಲಿಗ್ರಾಫ್ ಕಚೇರಿಗೆ ತೆರಳಿ,  ಉಳಿದ ಎಲ್ಲಾ ಲೈನ್ ಗಳನ್ನು ತೆರವುಗೊಳಿಸಿ ಈ ಸಂದೇಶವನ್ನು ಗೋರಖ್‌ಪುರಕ್ಕೆ ತ್ವರಿತವಾಗಿ ರವಾನಿಸಿ ಎಂದು ಸಿಬ್ಬಂದಿಗೆ ಸೂಚನೆ ಕೊಟ್ಟ. ಮುಂದಿನ 48 ಗಂಟೆಗಳ ಒಳಗಾಗಿ ಕಾರ್ಮಿಕರ ವೇತನ ಪಾವತಿಸದಿದ್ದರೆ, ಕೆಲಸ ಸ್ಥಗಿತಗೊಳಿಸಲಾಗುವುದು ಅಲ್ಲದೆ ಕೆಲಸಕ್ಕೆ ರಾಜಿನಾಮೆ ನೀಡಲಾಗುವುದು ಎಂಬ ಎಚ್ಚರಿಕೆಯ ಸಂದೇಶ ಕಳಿಸಿ ಮನೆಗೆ ಬಂದು ಮಲಗಿದ. ಮಧ್ಯ ರಾತ್ರಿಯ ವೇಳೆಗೆ ರೈಲ್ವೆ ನಿಲ್ದಾಣದ ಸಿಬ್ಬಂದಿಯ ಮೂಲಕ ನಾಳೆಯೇ ಹಣ ರವಾನಿಸಲಾಗುತ್ತದೆ ಎಂಬ ಮರು ಸಂದೇಶ ಕೂಡ ಕಾರ್ಬೆಟ್‌ಗೆ ಬಂದು ತಲುಪಿತು. ನಿರಿಕ್ಷೆಯಂತೆ ಮಾರನೇ ದಿನ ಸಂಜೆ ವೇಳೆಗೆ ಇಬ್ಬರು ಬಂದೂಕುದಾರಿ ಪೋಲಿಸರ ರಕ್ಷಣೆಯೊಂದಿಗೆ ಗೋರಖ್‌ಪುರದಿಂದ ಬಂದಿದ್ದ ಹಣದ ಪೆಟ್ಟಿಗೆಯನ್ನು ರೈಲ್ವೆ ಸಿಬ್ಬಂದಿ ಹೊತ್ತು ತಂದು ಕಾರ್ಬೆಟ್ ಗೆ ತಲುಪಿಸಿದರು.

ದಿನ ನಿತ್ಯ ಬಡಕೂಲಿ ಕಾರ್ಮಿಕರ ಬವಣೆಗಳನ್ನ ನೋಡುತ್ತಾ, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡುತ್ತಾ ಬದುಕಿದ್ದ ಕಾರ್ಬೆಟ್ ಗೆ ಕಾರ್ಮಿಕರ ಪರವಾಗಿ ತಾನು ಸೇವೆ ಸಲ್ಲಿಸುತ್ತಿದ್ದ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ ಮಾಡದೇ ವಿಧಿ ಇರಲಿಲ್ಲ. ಇದೊಂದು ಘಟನೆಯಿಂದ ಎಚ್ಚೆತ್ತ ಇಲಾಖೆ ಮುಂದಿನ 18 ವರ್ಷಗಳಲ್ಲಿ ಹಣ ಪಾವತಿಸಲು ಎಂದೂ ವಿಳಂಬ ಮಾಡಲಿಲ್ಲ.

ತನ್ನಲ್ಲಿ ಕೂಲಿ ಕೆಲಸ ಕೇಳಿಕೊಂಡು ಯಾರೇ ಬರಲಿ, ಅವರ ಹಿನ್ನೆಲೆಯನ್ನು ವಿಚಾರಿಸಿ, ಕೆಲಸ ಕೊಡುವುದು, ಕಷ್ಟದಲ್ಲಿದ್ದರೆ ಸಹಾಯ ಮಾಡುವುದು ಇವೆಲ್ಲಾ ಕಾರ್ಬೆಟ್‌ನ ದಿನಚರಿ ಮತ್ತು ಹವ್ಯಾಸಗಳಾಗಿದ್ದವು. ಅವನು ಕಾರ್ಮಿಕರ ಹಿತಾಸಕ್ತಿಗೆ ಎಷ್ಟೊಂದು ಗಮನ ನೀಡುತ್ತಿದ್ದ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಮೂರು ವರ್ಷಗಳಿಂದ ಅವನಲ್ಲಿ ಬುದ್ದು ಎಂಭಾತ ಕಲ್ಲಿದ್ದಲು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದ ಅವನಿಗೆ ಕೂಲಿ ಕೆಲಸದಲ್ಲಿ ಪತ್ನಿ ಕೂಡ ಸಹಕರಿಸುತ್ತಿದ್ದಳು. ಅವನು ಸದಾ ಮೌನಿಯಾಗಿ ಚಿಂತೆಯಲ್ಲಿ ಇರುವಂತೆ ಕಾಣುತ್ತಿದ್ದ. ಅವನು ಎಂದೂ ನಕ್ಕಿದ್ದನ್ನು ಕಾರ್ಬೆಟ್ ನೋಡಿರಲೇ ಇಲ್ಲ. ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಜನವರಿವರೆಗೆ ಊರಿಗೆ ಹೋಗುತ್ತಿದ್ದ. ಈ ಬಗ್ಗೆ ಕಾರ್ಬೆಟ್‌ಗೆ ಕುತೂಹಲ ಮೂಡಿ ಮೇಸ್ತ್ರಿಯನ್ನು ವಿಚಾರಿಸಿದಾಗ ಊರಿನಿಂದ ಅಂಚೆಪತ್ರ ಬಂದ ತಕ್ಷಣ ಬುದ್ದು ಹೊರಟುಬಿಡುತ್ತಾನೆ ಎಂಬ ಮಾಹಿತಿ ಮಾತ್ರ ದೊರೆಯಿತು. ಮತ್ತೇ ಜನವರಿ ತಿಂಗಳಿನಲ್ಲಿ ಬುದ್ದು ಕೆಲಸಕ್ಕೆ ಹಾಜರಾದಾಗ ಕಾರ್ಬೆಟ್ ಅವನನ್ನು ಕರೆದು ವಿಚಾರಿಸಿದ.

ನನ್ನ ಊರಿನಲ್ಲಿ ಶ್ರೀಮಂತ ಜಮೀನುದಾರನೊಬ್ಬನಿಂದ ಅಜ್ಜ ಪಡೆದಿದ್ದ ಎರಡು ರೂಪಾಯಿ ಸಾಲಕ್ಕೆ  ಅಜ್ಜ ಮತ್ತು ನನ್ನಪ್ಪ ಜೀವನ ಪೂರ್ತಿ ಜೀತದಾಳಾಗಿ ದುಡಿದರೂ ಇನ್ನೂ ಬಡ್ಡಿ ಸೇರಿ 125 ರೂಪಾಯಿ ಬಾಕಿ ಉಳಿದಿದೆ. ನಾನು ಇಲ್ಲಿ ದುಡಿದ ಹಣದಲ್ಲಿ ಪ್ರತಿವರ್ಷ 25 ರೂ ಪಾವತಿಸುತ್ತಿದ್ದೇನೆ. ಜೊತೆಗೆ ಅವನ ಜಮೀನಿನಲ್ಲಿ ಫಸಲು ಕೊಯ್ಲಿಗೆ ಬಂದಾಗ  ನಾನು ಹೋಗಿ ಒಕ್ಕಣೆ ಮಾಡಿಕೊಟ್ಟು ಬರಬೇಕು. ಇದಕ್ಕಾಗಿ ಪ್ರತಿ ವರ್ಷ ನನ್ನಿಂದ ಕೆಲವು ಪತ್ರಕ್ಕೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುತ್ತಾನೆ ಎಂದು ಬುದ್ದು ತನ್ನ ಬದುಕಿನ ವೃತ್ತಾಂತವನ್ನು ವಿವರಿಸಿದ,

ಮುಂದಿನ ಬಾರಿ ಪತ್ರ ಬಂದಾಗ ನನಗೆ ತಂದು ತೋರಿಸು ನೀನು ಊರಿಗೆ ಹೋಗುವ ಅವಶ್ಯಕತೆಯಿಲ್ಲ, ಹಣವನ್ನು ನಾನು ಚುಕ್ತಾ ಮಾಡುತ್ತೇನೆ ಎಂದು ಕಾರ್ಬೆಟ್ ತಿಳಿಸಿದ. ಒಂಬತ್ತು ತಿಂಗಳು ಕಳೆದ ನಂತರ ಎಂದಿನಂತೆ ಅವನ ಊರಿನಿಂದ ಪತ್ರ ಬಂತು. ಕಾರ್ಬೆಟ್ ಪತ್ರದಲ್ಲಿದ್ದ ಶ್ರೀಮಂತ ಜಮೀನುದಾರನ ವಿಳಾಸ ಪತ್ತೆ ಹಚ್ಚಿ ಅವನಿಗೆ ವಕೀಲನ ಮೂಲಕ ನೋಟೀಸ್ ಜಾರಿ ಮಾಡಿದ. ಆ ಶ್ರೀಮಂತ ಜಮೀನುದಾರ ಕಾರ್ಬೆಟ್‌ನನ್ನು ಎದುರಿಸಲಾರದೆ, ನೋಟೀಸ್ ನೀಡಿದ ವಕೀಲನ ಮನೆಗೆ ಹೋಗಿ ಅವನನ್ನು ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ. ಜೊತೆಗೆ ಹಣ ಬಾಕಿ ಇರುವುದರ ಬಗ್ಗೆ ಬುದ್ದು ಪ್ರತಿವರ್ಷ ಬರೆದು ಕೊಟ್ಟಿದ್ದ ಕಾಗದ ಪತ್ರಗಳನ್ನು ತೋರಿಸಿದ.

ಕಾರ್ಬೆಟ್ ಬಳಿ ಬಂದ ವಕೀಲ ಎಲ್ಲವನ್ನು ವಿವರಿಸಿದಾಗ ಅವನ ಬಾಕಿ ಹಣ 125 ರೂಪಾಯಿ, ಅದಕ್ಕೆ ಬಡ್ಡಿ 50 ರೂಪಾಯಿ ಮತ್ತು ವಕೀಲನ ಸೇವಾಶುಲ್ಕ 50 ರೂಪಾಯಿ ಎಲ್ಲವನ್ನು ಪಾವತಿಸಿ, ಬುದ್ದುವಿನ ಕಾಗದ ಪತ್ರವನ್ನು ಪಡೆಯುವಂತೆ ಸೂಚಿಸಿದ. ಜಮಿನುದಾರ ಎಲ್ಲಾ ಪತ್ರಗಳನ್ನು ಹಿಂತಿರುಗಿಸಿದ. ಆದರೆ, ಪ್ರತಿವರ್ಷ ಮೂರು ತಿಂಗಳು ಪುಕ್ಕಟೆ ದುಡಿಯುವ ಕುರಿತಂತೆ ಬರೆದುಕೊಟ್ಟಿದ್ದ ಕರಾರು ಪತ್ರವನ್ನು ಮಾತ್ರ ತನ್ನಲ್ಲೆ ಉಳಿಸಿಕೊಂಡ. ಇದರಿಂದ ಸಿಟ್ಟಿಗೆದ್ದ ಕಾರ್ಬೆಟ್ ಅವನ ಮೇಲೆ ಸ್ಥಳೀಯ ನ್ಯಾಯಾಲಯದಲ್ಲಿ ಮೊಕೊದ್ದಮೆ ದಾಖಲಿಸಿದ. ಈ ಘಟನೆಯಿಂದ ಬೆಚ್ಚಿಬಿದ್ದ ಆ ಶ್ರೀಮಂತ ತಾನೇ ಖುದ್ದು ಕಾರ್ಬೆಟ್ ಬಳಿ ಬಂದು ಪತ್ರ ಒಪ್ಪಿಸಿಹೋದ.

ಆ ದಿನ ಸಂಜೆ ಕಾರ್ಬೆಟ್ ಬುದ್ದು ಮತ್ತು ಅವನ ಪತ್ನಿಯನ್ನು ಮನೆಗೆ ಕರೆಸಿ ಇನ್ನು ಮುಂದೆ ನೀವು ಸ್ವತಂತ್ರರಾಗಿದ್ದೀರಿ. ನೆಮ್ಮದಿಯಿಂದ ಬಾಳಿ ಎನ್ನುತ್ತಾ ಅವರ ಎದುರು ಸಾಲಪತ್ರಗಳನ್ನು ಸುಡಲು ಆರಂಭಿಸಿದ. ಕಾರ್ಬೆಟ್‌ನ ಪ್ರಯತ್ನಕ್ಕೆ ತಡೆಯೊಡ್ಡಿದ ಬುದ್ದು, “ಬೇಡ ಮಹರಾಜ್ ಅವುಗಳನ್ನು ಸುಡಬೇಡಿ ನಮ್ಮ ಸಾಲ ತೀರುವ ತನಕ ಅವುಗಳು ನಿಮ್ಮಲ್ಲಿರಲಿ, ಇನ್ನು ಮುಂದೆ ನಾವು ನಿಮ್ಮ ಜೀತದಾಳುಗಳು,” ಎನ್ನುತ್ತಾ ಒದ್ದೆ ಕಣ್ಣುಗಳಲ್ಲಿ ಕೈ ಮುಗಿದು ನಿಂತ. ಕಾರ್ಬೆಟ್ ಅವನ ಹೆಗಲ ಮೇಲೆ ಕೈ ಇರಿಸಿ, “ಬುದ್ದು, ನೀನು ನನ್ನ ಹಣವನ್ನು ತೀರಿಸುವುದು ಬೇಕಾಗಿಲ್ಲ. ನಿನ್ನ ಮುಖದಲ್ಲಿ ನಗು ಕಂಡರೆ ಸಾಕು, ನನ್ನ ಸಾಲ ತೀರಿದಂತೆ,” ಎಂದು ನುಡಿಯುತ್ತಿದ್ದಂತೆ  ಕಲ್ಲಿದ್ದಲು ಮಸಿಯಿಂದ ಕಪ್ಪಾಗಿದ್ದ ಬುದ್ದುವಿನ ಮುಖವನ್ನು ಅವನ ಕಣ್ಣೀರು ತೋಯಿಸಿಬಿಟ್ಟಿತು.

ಕಾಲಿಗೆ ನಮಸ್ಕಾರ ಮಾಡಿ ಮನೆಯತ್ತ ತೆರಳುತ್ತಿದ್ದ ಬುದ್ದು ಹಾಗೂ ಅವನ ಪತ್ನಿಯನ್ನು ನೋಡುತ್ತಾ ಕುಳಿತ ಕಾರ್ಬೆಟ್, ಈ ನನ್ನ ಭಾರತದಲ್ಲಿ ಬಡತನವಿದೆ, ಆದರೆ, ಬಡವರಲ್ಲಿ ಹೃದಯ ಶೀಮಂತಿಕೆಯೂ ಇದೆ ಇದನ್ನು ನನ್ನ ಬಿಳಿಯರ ಜಗತ್ತಿಗೆ ಹೇಗೆ ಸಾಬೀತು ಪಡಿಸಲಿ? ಎನ್ನುವ ಪ್ರಶ್ನೆಯನ್ನು ಮನಸ್ಸಿಗೆ ಹಾಕಿಕೊಳ್ಳುತ್ತಾ ತುಟಿಗೆ ಸಿಗರೇಟು ಇಟ್ಟು ಬೆಂಕಿ ಹಚ್ಚಿದ.

(ಮುಂದುವರಿಯುವುದು)