ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ನಾಡು


– ಪರಶುರಾಮ ಕಲಾಲ್


 

ಅದೊಂದು ಪವಿತ್ರ ಸ್ಥಳ. ರಾಜ್ಯದ ನೀತಿ, ನಿಯಮಗಳನ್ನು ರೂಪಿಸುವ ಪ್ರಜಾಪ್ರಭುತ್ವದ ಅಧುನಿಕ ದೇವಾಲಯ. ಅಲ್ಲಿಗೆ ಶಾಸಕರಾಗಿ ತೆರಳುವವರು ಮೊದಲ ವಿಧಾನ ಸಭಾಂಗಣ ಪ್ರವೇಶಿಸುವಾಗ ಬಾಗಿಲಿಗೆ ಕೈ ಮುಗಿದು ಹೋಗುತ್ತಾರೆ. ಅವರ ಕಣ್ಣು ಮುಂದೆ ಕೆಂಗಲ್ ಹನುಮಂತಯ್ಯ, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ದೇವರಾಜ ಅರಸು ಮುಂತಾದ ಮಹನೀಯರು ನೆನಪಾಗುತ್ತಾರೆ ಕಣ್ಣು ಮಂಜಾಗುತ್ತದೆ.

ಈಗ ಕಣ್ಣು ಮಂಜಾಗುವ ಸಮಯ ನಮ್ಮದು. ಒಳಗೆ ಕುಳಿತವರು ಕಣ್ಣು ನೀಲಿಯಾಗಿ ಬಿಟ್ಟಿದೆ.

ಕಿಂಗ್ ಲಿಯರ್ ನಾಟಕದಲ್ಲಿ ಲಿಯರ್ ಮಹಾರಾಜ ಸಂಕಷ್ಟಕ್ಕೆ ಸಿಗುವ ಆಪಾಯ ಕಂಡು ಕೊಂಡ ಲಿಯರ್‌ನ ಆತ್ಮಸಾಕ್ಷಿಯಂತಿರುವ ಕೆಂಟ್ ಏನನ್ನೂ ಮಾಡಲಾಗದ ಸ್ಥಿತಿ ಮುಟ್ಟಿದಾಗ ಒಂದು ಮಾತು ಹೇಳುತ್ತಾನೆ. “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ.” ನಮ್ಮ ಸ್ಥಿತಿಯು ಹಾಗೇ ಆಗಿದೆ. ಮಾದರಿಗಳೇ ಇಲ್ಲ ಈಗ. ಯಾರನ್ನು ಮಾದರಿ ಎನ್ನುತ್ತೇವೆಯೋ ಅವರು ಮಾಯವಾಗುತ್ತಾರೆ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್‌ಗಳ ಕಾಲ ಅಲ್ಲವೇ ಇದು. ಶೂನ್ಯ ಅವರಿಸಿದಾಗ ಇವರೇ ನಾಯಕರಾಗಿ ಮಕ್ಕಳ ಮುಂದೆ ಕಾಣಿಸುತ್ತಾರೆ. ಎಲ್ಲವೂ ರೋಬ್‌ಮಯ.

*

ಅಲ್ಲಿ ಕಕ್ಕ ಮಾಡಬಾರದು ಅದು ಪವಿತ್ರ ಸ್ಥಳ ಎಂದಿರುತ್ತದೆ. ಅಲ್ಲಿ ಕಕ್ಕ ಮಾಡುತ್ತಾರೆ. ಅದು ಕಕ್ಕವೇ ಅಲ್ಲ ಎಂದು ವಾದಿಸುತ್ತಾರೆ. ಕಕ್ಕ ಹೌದು ಅಲ್ಲವೋ ಎಂದು ಪರೀಕ್ಷೆ ನಡೆಸಲು ಫೊರೆನಿಕ್ಸ್ ಲ್ಯಾಬ್‌ಗೆ ಕಳಿಸಿಕೊಡುತ್ತಾರೆ. ವಾಸನೆ ನೋಡಿದ ಯಾರೇ ಆದರೂ ಅದು ಕಕ್ಕ ಎಂದೇ ಹೇಳುತ್ತಾರೆ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಲ್ಲ ಎಂದು ಮೂಗು ಮುಚ್ಚಿಕೊಂಡೆ ಹೇಳುತ್ತಾರಲ್ಲ ಏನನ್ನಬೇಕು ಇವರಿಗೆ. ನಾನು ಇವರಿಗೆ ಹೇಳುವುದು ಇಷ್ಟೇ, “ಸ್ವಲ್ಪ ತಿಂದು ನೋಡಿ ಬಿಡಿ, ಸ್ವಾಮಿ.”

*

ನಮ್ಮ ಸಂವಿಧಾನದಲ್ಲಿ ಶಾಸಕಾಂಗ ದೊಡ್ಡದು. ಶಾಸಕರಾಗಿ ಆಯ್ಕೆಯಾಗುವ ಜನ ಪ್ರತಿನಿಧಿಗಳು ಆಯಾ ಪಕ್ಷದ ಬಲಾಬಲಗಳ ಮೇಲೆ ಶಾಸಕಾಂಗದ ಸಭೆ ಸೇರಿ ನಾಯಕನನ್ನು ಆಯ್ಕೆ ಮಾಡುತ್ತದೆ. ಆಡಳಿತ ಪಕ್ಷಕ್ಕೆ ಸೇರಿದವರಾದರೆ ಆತ ಮುಖ್ಯಮಂತ್ರಿಯಾಗುತ್ತಾನೆ. ರಾಜ್ಯದ ಬೇರೆ ಬೇರೆ ಕ್ಷೇತ್ರಗಳ ಕುರಿತಂತೆ ಆಡಳಿತ ನಡೆಸಲು ತನ್ನ ವಿವೇಚನೆಯಂತೆ ಸಚಿವರನ್ನು ಆಯ್ಕೆ ಮಾಡುತ್ತಾನೆ. ಇಲ್ಲಿ ಮುಖ್ಯಮಂತ್ರಿಯಾಗಲಿ ಅಥವಾ ಸಚಿವರಾಗಲಿ ಎಲ್ಲರೂ ಮೂಲಭೂತವಾಗಿ ಶಾಸಕರೇ, ಶಾಸನ ಸಭೆಯ ಸದಸ್ಯರುಗಳೇ. ಶಾಸಕರಾದವರು ಹೆಚ್ಚುವರಿ ಕೆಲಸವಾಗಿ ಮುಖ್ಯಮಂತ್ರಿ, ಮಂತ್ರಿಯಾಗುತ್ತಾರೆ. ಶಾಸನ ಸಭೆಯಲ್ಲಿ ಅಗೌರವ ಸೂಚಿಸುವವರು ಯಾರೇ ಆಗಲಿ, ಅವರನ್ನು ಸದನದಿಂದ ಹೊರ ಹಾಕುವ, ಅಮಾನತ್ತು ಮಾಡುವ ಅಧಿಕಾರವನ್ನು ಸಭಾಪತಿ ಪಡೆದಿರುತ್ತಾರೆ. ಅವರು ಪಕ್ಷಾತೀತವಾಗಿ, ಸಂವಿಧಾನದ ಮೂಲ ಉದ್ದೇಶವನ್ನು ಕಾಪಾಡಲು ಪ್ರಮಾಣವಚನ ಪಡೆದುಕೊಂಡು ಎತ್ತರದ ಸ್ಥಾನ ಅಲಂಕರಿಸಿದವರು. ಶಾಸನ ಸಭೆಯಲ್ಲಿ ಯಾರೇ ಅಸಭ್ಯವಾಗಿ ವರ್ತಿಸಿದರೂ ಅವರ ಮೇಲೆ ಕ್ರಮ ಕೈಗೊಳ್ಳಲೇಬೇಕು. ಇಲ್ಲಿ ಪಕ್ಷದ ಹಿತಾಸಕ್ತಿ ನೋಡುವಂತಿಲ್ಲ.

ಸಚಿವರಾದವರು ಅಕ್ಷೇಪಾರ್ಹ ವಿಡಿಯೋ ವೀಕ್ಷಿಸಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಹೆಚ್ಚುವರಿ ಕೆಲಸಗಳನ್ನು ಮಾಡುವುದನ್ನು ಕೈ ಬಿಟ್ಟಂತೆ ಆಗುತ್ತದೆ ಹೊರತು ಅದು ನೈತಿಕತೆ ಆಗುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಸಚಿವ ಸ್ಥಾನಕ್ಕೆ ಕೊಟ್ಟಿದ್ದಾರಲ್ಲ ಎಂದು ವಾದಿಸುವುದು ಅನೈತಿಕವಾಗುತ್ತದೆ.

*

ಲಜ್ಜೆ, ನಾಚಿಕೆ ಕಳೆದುಕೊಂಡು ವಾದಿಸಲು ಆರಂಭಿಸಿದರೆ ಅಂತಹ ಲಜ್ಜೆಗೆಟ್ಟ, ನಾಚಿಕೆ ಕಳೆದುಕೊಂಡ ಸಮಾಜದಲ್ಲಿ ಜೀವಿಸುತ್ತಿರುವ ಬಗ್ಗೆ ವಾಕರಿಕೆ ಬರುತ್ತದೆ. ನಾನು ಮೊದಲೇ ಹೇಳಿದಂತೆ ಕೆಂಟ್ ಹೇಳುವ “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ,” ಮಾತು ನೆನಪಾಗುತ್ತದೆ.

3 thoughts on “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ನಾಡು

  1. ಮಹಾದೇವ ಹಡಪದ.

    ಅಧಿಕಾರ,ಆಡಳಿತ ನಿರ್ಣಯ, ಕೂಟ ಕಲಾಪ ನೆಡೆಸುವ ಸ್ಥಳಗಳು ಪವಿತ್ರವಾದವು,ದೇವಾಲಯ ಎಂದೆಲ್ಲ ಹೇಳುವುದು ನನಗ್ಯಾಕೋ ಸರಿ ಅನಿಸದು, ಪವಿತ್ರ ಎನ್ನುವ ಇಂಡಿಯಾದ ಉನ್ನತೀಕರಿಸಲ್ಪಟ್ಟ ಶಬ್ದದ ಒಳಗೆ ಎಲ್ಲಾ ಹೇಸಿಕೆಗಳು ತುಂಬಿಕೊಂಡಿದ್ದಾವೆ. ಹಾಗಾಗಿ ಅದು ರಾಜ್ಯದ ನೀತಿ ನಿಯಮಗಳನ್ನು ರೂಪಿಸುವ ಪ್ರಜಾಪ್ರಭುತ್ವದ ಭವನ ಅಷ್ಟೆ. ಅಲ್ಲಿನ ಗೋಡೆಗಳು ಕನ್ನಡಿಯ ಹಾಗಿದ್ದರೆ ಸಾಕು, ಮತ್ಯಾವ ಗೋಸುಂಬೆ ಥರದ, ಚಡ್ಡಿ ಒಳಗಿನದ್ದು ಮುಚ್ಚಿಟ್ಟು-ಅದು ಹಾಗಲ್ಲ ಹೀಗಲ್ಲ ಎಂದು ಹೇಳುವ, ಸಮರ್ಥಿಸಿಕೊಳ್ಳುವ ಬೊಗಳೆ ಹೊಡೆಯುವ ರಾಜಕಾರಣಿಗಳು ನಮಗೆ ಮಾದರಿ ಆಗಬೇಕಾದ್ದಿಲ್ಲ.ರಾಮನ ರೂಪದಲ್ಲಿ ವೈದಿಕ ಶಾಸ್ತ್ರ ಕತೆ ಕಟ್ಟಿದ್ದು ಹೀಗೆನೆ. ಜಗತ್ತಿನ ಒಳತಿಗಾಗಿ,ಮಾದರಿ ನಾಯಕನಾಗುವ ಸಲುವಾಗಿ,ರಾಜನ ನಡವಳಿಕೆಯಂತೆ ಪ್ರಜೆಗಳೂ ಬದುಕಲಿ ಎನ್ನುವ ಕಾರಣಕ್ಕಾಗಿ ತನ್ನ ಮೇಲೆ ಬರುವ ನಿಂದೆ ತಪ್ಪಿಸಲು ಸೀತೆಯನ್ನ ಕಾಡಿಗಟ್ಟುತ್ತಾನಲ್ಲ,ಅದು ತುಂಬು ಗರ್ಭಿಣಿಯನ್ನ, ಅವನೆಂಥ ಕ್ಷಾತ್ರತೇಜಸ್ಸಿನವ…? ಈ ಮಾದರಿಯಲ್ಲಿ ರಚನೆಗೊಂಡ ಸಮುದಾಯಗಳೊಳಗೆ ಎಂಥ ಮೋಸಗಳು ನಡೆದಿವೆ, ಎಷ್ಟೆಲ್ಲ ಹಿಂಸೆಗಳು ಘಟಿಸಿಹೋಗಿವೆ.ಸಂವಿಧಾನವೇ ಶ್ರೇಷ್ಟವಾದದ್ದು ಆದ್ದರಿಂದ ಲೋಕನಿಯಮ ನಡಾವಳಿಗಳನ್ನು ಚರ್ಚಿಸುವ ಸ್ಥಳ-ಪವಿತ್ರನೂ ಅಲ್ಲ ದೇವಾಲಯವೂ ಅಲ್ಲ-ಅದೊಂದು ಮುಕ್ತಮನಸುಗಳು ಕೂಡಿ ಸಮಾಜ ಅಧ್ಯಯನ ಮಾಡುವ ಮತ್ತು ಆಗುಹೋಗುಗಳನ್ನು ಚರ್ಚಿಸುವ ಒಂದು ಕಾನೂನು ರಿತ್ಯಾ ಸಭೆ ನಡೆಸುವ ಜಾಗ ಅಷ್ಟೆ. (ನಾನು ಎಳಸು ತಪ್ಪಿದ್ದಲ್ಲಿ ಕ್ಷಮಿಸಿ)

    Reply

Leave a Reply to ಮಹಾದೇವ ಹಡಪದ. Cancel reply

Your email address will not be published. Required fields are marked *