ಮಾಧ್ಯಮಗಳ ಮೇಲೊಂದು ಟಿಪ್ಪಣಿ


-ಬಿ. ಶ್ರೀಪಾದ ಭಟ್  


“ಮೌಲ್ಯಗಳು ಹಾಗೂ ನೈತಿಕತೆ ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಕೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು.” -ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಜಾಗತೀಕರಣಗೊಂಡು ಇಪ್ಪತ್ತು ವರ್ಷಗಳ ನಂತರದ ಇಂದಿನ ಸಂದರ್ಭದಲ್ಲಿ ದೇಶದಲ್ಲಿನ ಅನೇಕ ವಲಯಗಳಂತೆ ಪತ್ರಿಕೋದ್ಯಮವೆನ್ನುವುದು ಸಹ ತನ್ನ ಹಿಂದಿನ ರೂಪದಲ್ಲಿ ಉಳಿದಿಲ್ಲ. ಇಂದು ಮಾರುಕಟ್ಟೆ ಆಧಾರಿತ ಆರ್ಥಿಕ ಸ್ಥಿತಿಯಲ್ಲಿ  ಜಾಗತೀಕರಣದ ಮೂಲ ಮಂತ್ರವಾದ, ಸಂಪಾದನೆ ಹಾಗೂ ಸಂಪಾದನೆ ಮತ್ತಷ್ಟು ಸಂಪಾದನೆ ಎನ್ನುವ ಸಿದ್ಧಾಂತವನ್ನು ಇಂದು ತನ್ನದಾಗಿಸಿಕೊಂಡಿರುವ ಪತ್ರಿಕೋದ್ಯಮವೂ ಕೂಡ ಒಂದು ಮಾರ್ಕೆಟಿಂಗ್ ವ್ಯವಸ್ಥೆಯಾಗಿ ಬೆಳೆದುಬಿಟ್ಟಿದೆ. ಇದರ ಫಲವೇ ಮುಕ್ತ ಆರ್ಥಿಕತೆ ಹೇಳುವಂತೆ ವ್ಯವಸ್ಥೆಯಲ್ಲಿ ನೀನು ನಿರಂತರವಾಗಿ ಬದುಕಿ ಉಳಿಯಬೇಕೆನ್ನವುದಾದರೆ ನಿನ್ನ ಉತ್ಪಾದನೆಗಳನ್ನು ಮಾರುಕಟ್ಟೆಗೆ ತಳ್ಳುತ್ತಲೇ ಇರಬೇಕು, ಈ ತಳ್ಳುವಿಕೆ ನಿರಂತರವಾಗಿರಬೇಕು. ಬಹುಪಾಲು ದೃಶ್ಯ ಮಾಧ್ಯಮಗಳು ಈ ಮುಕ್ತ ಆರ್ಥಿಕ ನೀತಿಯ ತಳ್ಳುವಿಕೆಯನ್ನು ತಮ್ಮ ಪತ್ರಿಕೋದ್ಯಮದ ಮೂಲ ಮಂತ್ರ,ತಿರುಳನ್ನಾಗಿಸಿಕೊಂಡಿವೆ.

ಈ ರೀತಿಯಾಗಿ ಬದುಕಿ ಉಳಿಯುವುದಕ್ಕಾಗಿ ತನ್ನನ್ನು ತಾನು ವ್ಯವಸ್ಥೆಯಲ್ಲಿ ತಳ್ಳುವ ಪ್ರಕ್ರಿಯಲ್ಲಿ ಈ ಬಹುಪಾಲು ಮಾಧ್ಯಮಗಳು ಪತ್ರಿಕೋದ್ಯಮದ ಮೂಲಭೂತ ಸಿದ್ಧಾಂತಗಳು, ನೈತಿಕ ಪಾಠಗಳು, ವೈಯುಕ್ತಿಕ ಪರಿಶುದ್ಧತೆ ಮುಂತಾದವುಗಳನ್ನೆಲ್ಲವನ್ನೂ ಕೂಡ ಹಳ್ಳಕ್ಕೆ ತಳ್ಳಿ ಬಿಟ್ಟಿವೆ. ಈಗ ಮಾಧ್ಯಮವೆನ್ನುವುದು ಒಂದು ಪ್ಯಾಕೇಜ್ ಆಗಿ ಪರಿವರ್ತಿತಗೊಂಡಿದೆ. ಇಲ್ಲಿ ಮಾಲೀಕನ ವ್ಯವಹಾರಿಕ ಬದ್ಧತೆಗಳು ಹಾಗೂ ಅವನ ಉದ್ಯೋಗಿಯಾದ ಸಂಪಾದಕನೊಬ್ಬನ ಸಾಂಸ್ಕೃತಿಕ, ಸಾಮಾಜಿಕ ಬದ್ಧತೆಗಳ ನಡುವಿನ ಲಕ್ಷ್ಮಣ ರೇಖೆ ಅಳಿಸಿಹೋಗಿದೆ. ಈ ಪ್ಯಾಕೇಜ್ ಪದ್ಧತಿಯ ಪ್ರಕಾರ  ಪ್ರತಿಯೊಂದು ದೃಶ್ಯ ಮಾಧ್ಯಮಗಳು ಒಪ್ಪಿಸುವ ಗಿಣಿ ಪಾಠವೆಂದರೆ, ‘ಮೊದಲನೆಯದಾಗಿ ನಾವು ಜನರಿಗೆ ಏನು ಬೇಕು, ಅದರಲ್ಲೂ ಜನ ಸಾಮಾನ್ಯರಿಗೆ ಏನು ಬೇಕೋ, ಅದರಲ್ಲೂ ಜನಸಾಮಾನ್ಯರ ನಂಬಿಕೆಗಳು ಏನಿವೆಯೋ, ಅವನ್ನು ನಾವು ಅತ್ಯಂತ ನಿಯಮಬದ್ಧವಾಗಿ, ಕರಾರುವಕ್ಕಾಗಿ, ಕ್ರಮಬದ್ಧವಾಗಿ ಮರಳಿ ಜನರಿಗೆ ತಲುಪಿಸುತ್ತೇವೆ.’

ಇಲ್ಲಿ ಭಾರತದಂತಹ ದೇಶದಲ್ಲಿ ಇಲ್ಲಿನ ಜನರ ನಂಬಿಕೆಗಳನ್ನು, ಅವರ ಬೇಕು ಬೇಡಗಳನ್ನು ಋಣಾತ್ಮವಾಗಿ ಗ್ರಹಿಸಿರುವುದರ ಫಲವೇ ಇಂದು ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಹಿಂಜರಿಕೆ, ಅನುಮಾನಗಳು ಹಾಗೂ ನಾಚಿಕೆ ಇಲ್ಲದೆ ಮೂಢನಂಬಿಕೆಗಳನ್ನಾಧರಿಸಿದ ಹತ್ತಾರು ಕಾರ್ಯಕ್ರಮಗಳು ದಿನವಿಡೀ ಬಿತ್ತರಗೊಳ್ಳುತ್ತಿರುತ್ತವೆ. ಏಕೆಂದರೆ ಇವು ಜನರಿಗೆ ಬೇಕಲ್ಲವೇ! ಅವರು ಇದನ್ನು ನಂಬುತ್ತಾರಲ್ಲಾ! ಆದರೆ ಈ ಮೂಢನಂಬಿಕೆ ಆಧಾರಿತ ಕಾರ್ಯಕ್ರಮಗಳು ಸಮಾಜವನ್ನು ದಿಕ್ಕು ತಪ್ಪಿಸಿ ಅಮಾಯಕ, ಮುಗ್ಧ ವೀಕ್ಷಕರನ್ನು ಗೊಂದಲಗೊಳಿಸಿ ಅವರನ್ನು ಇನ್ನಷ್ಟು ಕತ್ತಲಲ್ಲಿ ಕೊಳೆಯುವಂತೆ ಮಾಡುತ್ತಿರುವ ಬಗ್ಗೆ ಈ ದೃಶ್ಯ ಮಾಧ್ಯಮಗಳಿಗೆ ಕೊಂಚವೂ ಕೀಳರಿಮೆ ಇಲ್ಲ. ಇದು ಯಾರ ಆಸ್ತಿ ನಿಮ್ಮ ಆಸ್ತಿ ಎಂದು ಹೇಳಿಕೊಂಡು ಬರುವ ಖಾಸಗಿ ಚಾನಲ್‌ಗಳ ಉದ್ದೇಶ ಕೂಡ ಅಷ್ಟೇ. ಜನರಿಂದ ಹಾಗೂ ಜನರಿಗಾಗಿ ಎನ್ನುತ್ತಾ ಜನರನ್ನು ಹಾದಿ ತಪ್ಪಿಸುವುದು. ಸತ್ಯ ದರ್ಶನದ ಹೆಸರಿನಲ್ಲಿ ಚರ್ಚೆಗಳು, ಚೆಕ್‌ಬಂದಿಗಳು ನಡೆಸುವ ವೇದಿಕೆಗಳನ್ನು ನ್ಯಾಯಾಲಯವಾಗಿ ಮಾರ್ಪಡಿಸಿ ಅಲ್ಲಿ ತಾವೊಬ್ಬ ನ್ಯಾಯಾದೀಶನಂತೆಯೂ, ಇಲ್ಲಿನ ಎಲ್ಲಾ ರೋಗಗಳಿಗೆ ತಾನೊಬ್ಬನೇ ಸರ್ವಮುದ್ದು ನೀಡುವ ವೈದ್ಯನೆಂಬಂತೆ ವರ್ತಿಸುತ್ತಾ ಆಳದಲ್ಲಿ ಇವರೊಬ್ಬ ಜಾಹೀರಾತಿನ ರೂಪದರ್ಶಿಗಳಷ್ಟೇ ಎನ್ನುವ ನಿಜವನ್ನು ಮರೆಮಾಚುತ್ತಾರೆ. ಇಲ್ಲಿರುವುದು ಅನುಕೂಲಸಿಂಧು, ಅವಕಾಶವಾದಿ ಪತ್ರಿಕೋದ್ಯಮ. ಇಲ್ಲಿ ಮಾಧ್ಯಮವೆನ್ನುವುದು ಒಂದು ಪ್ರಾಡಕ್ಟ್. ಇದನ್ನು ಅತ್ಯಂತ ಕೊಳಕಾಗಿ ಉತ್ಪಾದಿಸಿ ವ್ಯಾವಹಾರಿಕವಾಗಿ ಸದಾ ಲಾಭದ ಆಧಾರದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿ ಸರಿ ತಪ್ಪುಗಳ ಜಿಜ್ನಾಸೆಯೇ ಬರುವುದಿಲ್ಲ ಹಾಗು ಕಾಡುವುದಿಲ್ಲ. ಇಲ್ಲಿ ದೃಶ್ಯ ಮಾಧ್ಯಮವೆನ್ನುವುದು ಒಂದು ಕಂಪನಿಯಾಗಿ ಮಾರ್ಪಟ್ಟ ಬಳಿಕ ಅಲ್ಲಿ ನೈತಿಕತೆ ಅಥವಾ ಅನೈತಿಕತೆಯ ಪ್ರಶ್ನೆಯೇ ಇರುವುದಿಲ್ಲ.

ಇಲ್ಲಿರುವುದು ಒಂದೇ ಮಂತ್ರ. ಅದು ಲಾಭ ಮತ್ತು ಟಿಅರ್‌ಪಿ. ಅದಕ್ಕಾಗಿ ಇಲ್ಲಿ ನಿಮಿಷಕ್ಕೊಮ್ಮೆ ತಿರಸ್ಕಾರಯೋಗ್ಯವಾದ ಬ್ರೇಕಿಂಗ್ ಸುದ್ದಿ ಬಿತ್ತರಗೊಳ್ಳಲೇ ಬೇಕು, ಇಲ್ಲಿ ಕೆಲವರ ಚಾರಿತ್ಯವಧೆ ನಡೆಯುತ್ತಿರಲೇಬೇಕು, ನಿರ್ಭಯ ಪತ್ರಿಕೋದ್ಯಮದ ಹೆಸರಿನಲ್ಲಿ ಹಸೀ ಹಸೀ ಸುಳ್ಳುಗಳನ್ನು ಬೊಗಳುತ್ತಿರಬೇಕು, ರೋಮಾಂಚಕ ಪತ್ರಿಕೋದ್ಯಮದ ಲಜ್ಜೆಗೇಡಿತನ ಎಲ್ಲೆಲ್ಲೂ ರಾಚುತ್ತಿರಬೇಕು. ಇವೆಲ್ಲ ಇಂದು ದೃಶ್ಯ ಮಾಧ್ಯಮಗಳ ದಿನನಿತ್ಯದ ವಹಿವಾಟಾಗಿದೆ. ಏಕೆಂದರೆ ಇವೆಲ್ಲಾ ಮಾರ್ಕೆಟ್ ವ್ಯವಸ್ಥೆಯ ಆಕಾಂಕ್ಷೆಗಳಿಗೆ ಬದ್ಧತೆಗೊಳಪಟ್ಟಿರುತ್ತವೆ. ಇದು ಪ್ಯಾಕೇಜ್ ನಿಯಮ. ಈ ನೆಲದ ಭಾವನೆಗಳಿಗೆ ಅತ್ಯಂತ ಅಸೂಕ್ಷವಾಗಿ ಸ್ಪಂದಿಸುವ ಈ ದೃಶ್ಯ ಮಾಧ್ಯಮದ ಪತ್ರಕರ್ತರು ಪ್ರಚಲಿತ ವಿದ್ಯಾಮಾನಗಳಿಗೆ ತಾವೇ ಸ್ವತಹ ಬ್ರಾಂಡ್ ಆಗಿಬಿಡುತ್ತಾರೆ ಹೊರತಾಗಿ ಅದರ ಆಳಕ್ಕಿಳಿದು ಸತ್ಯಾಸತ್ಯತೆಗಳನ್ನು ಬಗೆದು ನೋಡುವುದಿಲ್ಲ. ಇಲ್ಲಿನ ಪತ್ರಕರ್ತರು ತಮ್ಮ ಚಾನಲ್ ಜನಪ್ರಿಯಗೊಳ್ಳುತ್ತಿದೆ, ತಾವೊಬ್ಬ ಜನಪ್ರಿಯ ಪತ್ರಕರ್ತ, ಎನ್ನುವ ಭ್ರಮೆಗೆ ಬಲಿಯಾದ ಕ್ಷಣದಿಂದ ಆತ ತನ್ನ ಜೊತೆ ಜೊತೆಗೆ ಗಣರಾಜ್ಯದ ಆದರ್ಶಗಳನ್ನು ಕೂಡ ಮಣ್ಣುಪಾಲು ಮಾಡುತ್ತಾನೆ. ಆಗ ಎಲ್ಲರನ್ನೂ ಆತ ಸಂಬೋಧಿಸುವುದು ಹೊಲಸು ಭಾಷೆಯಿಂದ, ಏಕವಚನದಿಂದ, ತಿರಸ್ಕಾರದಿಂದ, ಆಕ್ಷೇಪಣೆಗಳಿಂದ.

ಅತ್ಯಂತ ಲಾಭದಾಯಕವಾದ ಮಾಧ್ಯಮವಾಗಿರುವುದರಿಂದಲೇ ಇಂದು ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸುವುದರ ಬಗೆಗೆ ದಿನನಿತ್ಯ ಕಾರ್ಯಕ್ರಮಗಳಿರುತ್ತವೆ. ಆದರೆ ಹಸಿವಿನ ಬಗೆಗೆ, ಅಪೌಷ್ಟಿಕತೆ ಬಗೆಗೆ ಚರ್ಚಿಸಲು ತಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಯಾವುದೇ ಬಗೆಯ SLOT ದೊರೆಯುವುದಿಲ್ಲ! ಅಸ್ಪೃಶ್ಯರ ಮಾನವ ಹಕ್ಕುಗಳು ಪದೇ ಪದೇ ಹಲ್ಲೆಗೊಳಗಾದಾಗ ,ಅಲ್ಪಸಂಖ್ಯಾತರು ದಿನನಿತ್ಯದ ಅವಮಾನಗಳಿಗೆ ತುತ್ತಾಗುತ್ತಿದ್ದಾಗ, ಬಲಿಷ್ಟ ಜಾತಿಯ ಧನದಾಸೆಗೆ ದಲಿತನೊಬ್ಬನ ನರಬಲಿ ನಡೆದಾಗ, ಇದಕ್ಕೆ ಸಂಬಂಧಪಟ್ಟ ವರದಿಗಳಿಗೆ, ಚರ್ಚೆಗಳಿಗೆ ದಿನನಿತ್ಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸ್ಥಾನವೇ ಇರುವುದಿಲ್ಲ. ಆದರೆ ಕ್ರೈಂ ಸ್ಟೋರಿಗಳು, ಭೀಭತ್ಸ ವರದಿಗಳು, ಜನ್ಮಾಂತರದ ಬೊಗಳೆಗಳು ಪ್ರತಿದಿನ ಪ್ರಸಾರಗೊಳ್ಳುತ್ತಿರುತ್ತವೆ. ಏಕೆಂದರೆ ಇದು ಪ್ಯಾಕೇಜ್ ನಿಯಮ. ಮುಕ್ತ ಮಾರುಕಟ್ಟೆ ಇದನ್ನು ರೂಪಿಸಿದೆ.

ಇಲ್ಲಿ ಗಂಭೀರ, ವಿಚಾರಶೀಲ, ವೈಚಾರಿಕ, ನೈತಿಕತೆಯ ಪತ್ರಿಕೋದ್ಯಮವೆನ್ನುವುದು ( ದೃಶ್ಯ ಮಾಧ್ಯಮ) ತೀರಿಕೊಂಡು ಗೋರಿ ಸೇರಿದೆ.

ಕೊಲಂಬಿಯಾ ದೇಶದ ಪ್ರಖ್ಯಾತ ಲೇಖಕ “ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್” ಸುಮಾರು 2004-05 ರಲ್ಲಿ ಸೆಮಿನಾರ್ ಒಂದರಲ್ಲಿ ಮಂಡಿಸಿದ ಪ್ರಬಂಧವನ್ನು ನಾವು ಮತ್ತೊಮ್ಮೆ ಓದಲೇಬೇಕು. ಪತ್ರಿಕೋದ್ಯಮದ ಬಗ್ಗೆ ಸ್ವತಃ ಪತ್ರಕರ್ತರಾಗಿದ್ದ ಮಾರ್ಕೆಜ್‌ನ ಚಿಂತನೆಗಳನ್ನು ಇಲ್ಲಿ ಸಂಗ್ರಹವಾಗಿ ಹಾಗು ಸಂಕ್ಷಿಪ್ತವಾಗಿ ಅನುವಾದಿಸಲಾಗಿದೆ.

“50 ವರ್ಷಗಳ ಹಿಂದೆ ಪತ್ರಿಕೋದ್ಯಮದ ಶಾಲೆಗಳು ವ್ಯಾವಹಾರಿಕವಾಗಿ ಆಕರ್ಷಕವಾಗಿರಲಿಲ್ಲ. ಪತ್ರಿಕೋದ್ಯಮದ ಕಸುಬನ್ನು ನಾವೆಲ್ಲಾ ಸುದ್ದಿಮನೆಗಳಲ್ಲಿ, ಮುದ್ರಣಾಲಯಗಳಲ್ಲಿ, ಟೀ ಅಂಗಡಿಗಳಲ್ಲಿ ಕಲಿಯುತ್ತಿದ್ದೆವು. ಇಲ್ಲಿ ನಮಗೆ ಸರಿಯಾದ ಮೂಲಭೂತ ತರಬೇತಿಯನ್ನು ನೀಡಲಾಗುತ್ತಿತ್ತು, ಇದು ಒಂದು ಸೌಹಾರ್ದಯುತ, ಜೀವಂತ, ಲವಲವಿಕೆಯ ವಾತಾವರಣದಲ್ಲಿ ನಡೆಯುತ್ತಿತ್ತು. ಆ ಕಾಲದಲ್ಲಿ ಪತ್ರಿಕೋದ್ಯಮವೆನ್ನುವುದನ್ನು ಸುದ್ದಿ, ಸಂಪಾದಕೀಯ, ವರ್ತಮಾನ ಹಾಗೂ ಭವಿಷ್ಯದ ವಿಶ್ಲೇಷಣೆಗಳು, ಈ ರೀತಿಯಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಈ ಮೂರೂ ವಿಭಾಗಗಳಲ್ಲಿ ಸಂಪಾದಕೀಯಕ್ಕೆ ಅತ್ಯಂತ ಘನತೆ ಮತ್ತು ಹೆಚ್ಚು ಒತ್ತು ನೀಡಲಾಗುತ್ತಿತ್ತು. ಈ ಪತ್ರಿಕೋದ್ಯಮವನ್ನು ಪ್ರವೇಶಿಸಲು ಸಾಂಸ್ಕೃತಿಕ ಅರಿವು ಹಾಗೂ ಅದರ ಹಿನ್ನೆಲೆಗಳ ಬಗೆಗಿನ ತಿಳುವಳಿಕೆ ಅತ್ಯಂತ ಅವಶ್ಯಕವಾಗಿತ್ತು. ಇದನ್ನು ಅಲ್ಲಿನ ವಾತಾವರಣದಲ್ಲಿ ಕಲಿಸಿಕೊಡುತ್ತಿದ್ದರು. ನಿರಂತರ ಓದುವಿಕೆ ಕೂಡ ಪೂರಕ ಅಗತ್ಯವಾಗಿತ್ತು. ಆದರೆ ಇಂದು ಪತ್ರಿಕೋದ್ಯಮದಲ್ಲಿ ಅಕಡೆಮಿಕ್‌ನ, ಚಿಂತನೆಗಳ ಪರಿಣಿತಿಯ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಪತ್ರಿಕೋದ್ಯಮದ ಶಾಲೆಗಳನ್ನು ತೆರೆಯಲಾಯಿತು. ಇಲ್ಲಿ ಪತ್ರಿಕೋದ್ಯಮಕ್ಕೆ ಬೇಕಾಗುವ ಪೂರಕ ವಿಷಯಗಳನ್ನು ಹೇಳಿಕೊಡುತ್ತಾರೆ, ಆದರೆ ಪತ್ರಿಕೋದ್ಯಮದ ಬಗೆಗೆ ಹೇಳಿಕೊಡುವುದು ಬಹಳ ಕಡಿಮೆ. ಇಲ್ಲಿ ಮಾನವೀಯ ಅಂಶಗಳಿಗೆ ಹೆಚ್ಚು ಸಮಯವನ್ನು ಮೀಸಲಿಡವುದರ ಬದಲಾಗಿ ಮಹಾತ್ವಾಕಾಂಕ್ಷೆ ಹಾಗೂ ಜಡತೆಗೆ ಹೆಚ್ಚು ಒತ್ತು ಕೊಡುತ್ತಾರೆ.

“ಈ ಶಾಲೆಗಳಲ್ಲಿ ಸಂಶೋಧನೆಯನ್ನುವುದು ಹೆಚ್ಚುವರಿ ವಿಷಯವನ್ನಾಗಿ ಕಲಿಸದೆ ಪತ್ರಿಕೋದ್ಯಮದ ಒಂದು ಭಾಗವಾಗಿ ಕಲಿಸಬೇಕು. ಅತ್ಯಂತ ಮುಖ್ಯವಾದದ್ದು ಮೌಲ್ಯಗಳು ಹಾಗೂ ನೈತಿಕತೆ. ಅವು ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಹೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು. ಇದನ್ನು ನವ ಪೀಳಿಗೆಯ ಪತ್ರಕರ್ತರು ಮನದಟ್ಟು ಮಾಡಿಕೊಳ್ಳಬೇಕು. ಆದರೆ ಇಂದು ಪತ್ರಿಕೋದ್ಯಮ ಶಾಲೆಗಳಲ್ಲಿ ಕಲಿತು ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ಅತ್ಯಂತ ಅಸಹಜವಾದ ಅಪಾರ ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಇವರಿಗೆ ವಾಸ್ತವದ ಪರಿಚಯವಾಗಲಿ ಅಥವಾ ಅದರೊಂದಿಗಿನ ನಂಟಾಗಲಿ ಇರುವುದಿಲ್ಲ. ಸ್ವಹಿತಾಸಕ್ತಿಯನ್ನು,ತಮ್ಮ ಭವಿಷ್ಯದ ಆತಂಕಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ಈ ಪದವೀಧರರು ತಾವು ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವಾಗ ಕ್ರಿಯಾಶೀಲತೆ ಹಾಗೂ ಅನುಭವಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟಿರುತ್ತಾರೆ. ಇಂದಿನ ಉದಯೋನ್ಮುಖ ಪತ್ರಕರ್ತರು ಮಂತ್ರಿಗಳ, ಅಧಿಕಾರಿಗಳ ಸುಪರ್ದಿಯಲ್ಲಿರುವ ಗುಪ್ತ ದಾಖಲೆಗಳನ್ನು ಅಮೂಲಾಗ್ರವಾಗಿ ಓದುವುದರಲ್ಲಿ, ಸಂದರ್ಶನದ ವೇಳೆಯಲ್ಲಿ ಆತ್ಮೀಯತೆಯಿಂದ ಹೇಳಿದ ಮಾತುಗಳನ್ನು ಸಂಬಂಧಪಟ್ಟ ವ್ಯಕ್ತಿಗೆ ತಿಳಿಸದೆ ಅದನ್ನು ಮುದ್ರಿಸುವುದರಲ್ಲಿ ಅತ್ಯಂತ ಉತ್ಸುಕತೆ ತೋರುತ್ತಾರೆ ಹಾಗೂ ಆ ರೀತಿ ನಡೆದುಕೊಳ್ಳುವುದರ ಬಗೆಗೆ ಹೆಮ್ಮೆಯನ್ನು ವ್ಯಕ್ತ ಪಡಿಸುತ್ತಾರೆ. “ಆಫ಼್ ದಿ ರೆಕಾರ್ಡ್” ಎಂದು ಹೇಳಿದ್ದರೂ ಅದನ್ನು ಅತ್ಯಂತ ರೋಮಾಂಚಕ ಸುದ್ದಿಯನ್ನಾಗಿ ಪ್ರಚಾರ ಮಾಡುವುದರಲ್ಲಿ ಇವರಿಗೆ ಅಪಾರ ಆಸಕ್ತಿ. ಇಲ್ಲಿ ದುಖಕರ ಸಂಗತಿಯೆಂದರೆ ಈ ಎಲ್ಲಾ ತರಹದ ಅನೈತಿಕ ನಡಾವಳಿಗಳನ್ನು ಈ ಉದಯೋನ್ಮುಖ ಪತ್ರಕರ್ತರು ಅತ್ಯಂತ ಸಹಜವಾಗಿಯೇ ಸ್ವೀಕರಿಸುತ್ತಾರೆ ಹಾಗೂ ಇದನ್ನು ತಮ್ಮ ಪ್ರಜ್ಞೆಯೊಳಗೆ ಬೇರು ಬಿಡುವಂತೆ ನೋಡಿಕೊಳ್ಳುತ್ತಾರೆ. ಅತ್ಯುತ್ತಮ ಸುದ್ದಿಯನ್ನು ಮೊದಲು ಪ್ರಕಟಿಸುವುದಕ್ಕಿಂತಲೂ ಮುಖ್ಯವಾದದ್ದು ಅದನ್ನು ಅಷ್ಟೇ ಉತ್ತಮವಾಗಿ ಮಂಡಿಸಬೇಕು ಎನ್ನುವುದನ್ನು ಮರೆಯುತ್ತಾರೆ. ವ್ಯವಸ್ಥೆಯಲ್ಲಿ ಅಡಕವಾಗಿರುವ ಘಟನೆಗಳನ್ನು, ಸುದ್ದಿಗಳನ್ನು, ತನಿಖಾ ವರದಿಗಳನ್ನು ಪ್ರಕಟಿಸುವಾಗ ಮೊದಲು ಜಾಗಕ್ಕೆ ತೆರಳಿ, ಅಮೂಲಗ್ರವಾಗಿ ಸಂಶೋಧಿಸಿ ನಂತರ ಈ ವರದಿಗಳನ್ನು ವ್ಯಾಕರಣದ ತಪ್ಪಿಲ್ಲದೆ ಬರೆಯುವುದಕ್ಕೆ ಅಪಾರವಾದ ಜ್ಞಾನ, ಸಂಯಮ, ವೇಳೆ, ಮತ್ತಷ್ಟು ಸಂಶೋಧನೆಯನ್ನು ಮಾಡುವ ಹುಮ್ಮಸ್ಸು, ಬರೆಯುವ ಕಸಬುದಾರಿಕೆ, ಎಲ್ಲವೂ ಒಂದೇ ಕಡೆ ಅಡಕಗೊಂಡಿರಬೇಕು. ವರದಿಯೆನ್ನುವುದು ನಡೆದ ಒಂದು ಘಟನೆಯನ್ನು ಅತ್ಯಂತ ಕೂಲಂಕುಷವಾಗಿ, ಪಕ್ಷಪಾತವಿಲ್ಲದೆ, ಆದಷ್ಟು ಸತ್ಯಕ್ಕೆ ಹತ್ತಿರವಾಗಿ ಪುನರ್‌ನಿರ್ಮಾಣ ಮಾಡುವ ಕಲೆ ಎನ್ನುವುದನ್ನು ಇವರು ಮರೆಯುತ್ತಾರೆ.

“ಈ ಟೇಪ್ ರಿಕಾರ್ಡರ್ ಬರುವುದಕ್ಕಿಂತ ಮೊದಲು ಪತ್ರಿಕೋದ್ಯಮದಲ್ಲಿ ನಾವು ಬಳಸುತ್ತಿದ್ದ ಪರಿಕರಗಳೆಂದರೆ ಒಂದು ನೋಟ್ ಬುಕ್, ಪಕ್ಷಪಾತವಿಲ್ಲದ ನಮ್ಮ ಜೋಡಿ ಕಿವಿಗಳು, ಹಾಗು ಹೊಂದಾಣಿಕೆ ಮಾಡಿಕೊಳ್ಳದ ನಮ್ಮ ಪ್ರಾಮಾಣಿಕತೆ. ಕ್ಯಾಸೆಟ್ ಎನ್ನುವುದು ಎಂದಿಗೂ ವ್ಯಕ್ತಿಯೊಬ್ಬನ ನೆನಪಿನ ಶಕ್ತಿಯ ಬದಲೀ ಸಾಧನವಲ್ಲ. ಅದೊಂದು ಉಪಕರಣ ಅಷ್ಟೇ. ಈ ರೆಕಾರ್ಡರ್ ಎನ್ನುವುದು ಕೇಳಿಸಿಕೊಳ್ಳುತ್ತದೆ ಆದರೆ ಮನನ ಮಾಡಿಕೊಳ್ಳುವುದಿಲ್ಲ ಎನ್ನುವ ಸತ್ಯವನ್ನು ನಮ್ಮ ಇಂದಿನ ತಲೆಮಾರಿನ ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಪತ್ರಕರ್ತರು ರೆಕಾರ್ಡರ್ ಅನ್ನು ಕೇವಲ ಸಾಕ್ಷಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಕಡೆಗೂ ಉಪಯೋಗಿಸಬೇಕಾಗಿರುವುದು ನ್ಯಾಯದ ಪಕ್ಷಪಾತವಿರುವಂತಹ ಮನಸ್ಸಿನ ತರಬೇತಿಯನ್ನು ಮಾತ್ರ. ಅದರೆ ಇಲ್ಲಿ ಪತ್ರಿಕೋದ್ಯಮದ ತರಬೇತಿ ವಿಷಯಗಳನ್ನು ಕಾಲಕಾಲಕ್ಕೆ ತಕ್ಕ ಹಾಗೆ ಅಂದಿನ ಪ್ರಸ್ತುತತೆಗೆ ಅನುವಾಗುವಂತೆ ಸೂಕ್ತ ಬದಲಾವಣೆಗಳಿಗೆ ಒಳಪಡಿಸುತ್ತಾ, ಇದನ್ನು ಕಲಿಸುವುದಕ್ಕಾಗಿ ಸದಾಕಾಲ ಹೊಸ ಹೊಸ ಪರಿಕರಗಳನ್ನು ಹುಡುಕಿಕೊಳ್ಳಬೇಕು. ಆದರೆ ನಾವು ಹಳೇ ಕಾಲದ ಕೇಳುವ ಹಾಗೂ ಕಲಿಯುವ ಪದ್ಧತಿಯನ್ನು ನವೀಕರಿಸುತ್ತಿದ್ದೇವೆ. ಇದರಿಂದ ಏನೂ ಉಪಯೋಗವಾಗುವುದಿಲ್ಲ.

ಸತ್ಯದೊಂದಿಗೆ ಸದಾ ಮುಖಾಮುಖಿಯಾಗುತ್ತಲೇ ಮಾನವೀಯತೆಯನ್ನು ಈ ಪತ್ರಿಕೋದ್ಯಮವೆನ್ನುವ ಅನುಶಕ್ತಿಯೊಂದಿಗೆ ಮಿಳಿತಗೊಳಿಸಬೇಕಾಗುತ್ತದೆ. ಯಾವನು ಇದನ್ನು ತನ್ನ ವ್ಯಕ್ತಿತ್ವದೊಳಗೆ ರಕ್ತಗತ ಮಾಡಿಕೊಂಡಿರುವುದಿಲ್ಲವೋ ಅವನು ಇದರ ಮಾಂತ್ರಿಕತೆಯನ್ನೂ ಕೂಡ ಗ್ರಹಿಸಲಾರ. ಇದರ ಅನುಭವದ ತೆಕ್ಕೆಗೆ ಒಳಪಡದವನು ಕೇವಲ ರೋಮಾಂಚಕ ವರದಿಗಳಿಗೆ, ಈ ವರದಿಗಳು ತಂದುಕೊಡುವ ಹುಸಿ ರೋಚಕತೆಗೆ ಬಲಿಯಾಗುತ್ತಾನೆ. ಆ ಮೂಲಕ ತನಗರಿವಿಲ್ಲದೆಯೇ ಅನೈತಿಕತೆಯ ಆಳಕ್ಕೆ ಕುಸಿದಿರುತ್ತಾನೆ.”

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

Leave a Reply

Your email address will not be published. Required fields are marked *