Deccan Herald - Mining Payments

ಆದರ್ಶ ಎಂಬುವುದು ಮಾರುಕಟ್ಟೆಯ ಸರಕಲ್ಲ


– ಡಾ.ಎನ್.ಜಗದೀಶ ಕೊಪ್ಪ


[ಕರ್ನಾಟಕ ವಿ.ವಿ.ಯ ಪತ್ರಿಕೋದ್ಯಮ ವಿದಾರ್ಥ್ಯಿಗಳು  ಪತ್ರಿಕೋದ್ಯಮ ಮತ್ತು ಆದರ್ಶ ಕುರಿತಂತೆ ಕೇಳಿದ್ದ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆಯ ಲಿಖಿತ ರೂಪ.]

ವರ್ತಮಾನದ ಬದುಕಲ್ಲಿ ಅದರಲ್ಲೂ ವಿಶೇಷವಾಗಿ ಪತ್ರಿಕೋದ್ಯಮಕ್ಕೆ ಸಂಬಧಪಟ್ಟಂತೆ ಆದರ್ಶ ಮತ್ತು ವಾಸ್ತವ ಕುರಿತು ಮಾತನಾಡುವುದು ಅಥವಾ ಬರೆಯುವುದು ಕ್ಲೀಷೆಯ ಸಂಗತಿ. ಇವತ್ತಿನ ಪತ್ರಿಕೋದ್ಯಮದಲ್ಲಿ ನೀತಿ, ಅನೀತಿಗಳ ನಡುವಿನ ಗಡಿರೇಖೆ ಸಂಪೂರ್ಣ ಅಳಿಸಿ ಹೋಗಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಆಧ್ಯತೆ ಕೂಡ ಬದಲಾಗಿದೆ. ಎಲ್ಲರೂ ಎಲ್ಲವನ್ನು ವ್ಯವಹಾರದ ದೃಷ್ಟಿಕೋನದಿಂದ ನೋಡುತ್ತಾ, ಇಡೀ ಮಾಧ್ಯಮ ಲೋಕವನ್ನು ಲಾಭದಾಯಕ ಉಧ್ಯಮವನ್ನಾಗಿ ಪರಿವರ್ತಿಸುವ ಉಮೇದಿನಲ್ಲಿರುವಾಗ ಆದರ್ಶ ಕುರಿತು ಮಾತನಾಡುವುದು ಅಸಂಗತ ಎಂದು ಅನಿಸತೊಡಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಎಂದರೆ, ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಇರಬೇಕಾದ ಸಂವಹನದ ಸೇತುವೆ ಎಂಬ ಭಾವನೆ ಇತ್ತು. ಪತ್ರಿಕೆ ಮತ್ತು ಪತ್ರಕರ್ತ ಇಬ್ಬರೂ ಓದುಗರಿಗೆ ಉತ್ತರದಾಯಕತ್ವದ ಭಾಗವಾಗಿದ್ದರು. ಒಬ್ಬ ಪತ್ರಕರ್ತನಿಗೆ ನಾನು ಯಾರಿಗಾಗಿ ಬರೆಯುತಿದ್ದೇನೆ, ನನ್ನ ಓದುಗರು ಯಾರು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ದೃಶ್ಯ ಮಾಧ್ಯಮಗಳು ಬಂದ ನಂತರ ಅದೃಶ್ಯ ವೀಕ್ಷಕರಿಗೆ ಸುದ್ಧಿಯನ್ನು ಉಣಬಡಿಸುತ್ತಿರುವಾಗ ಏನೂ ಮಾಡಿದರೂ ಚಲ್ತಾ ಹೈ ಎಂಬ ಉಢಾಪೆತನ ಈಗ ಪತ್ರಕರ್ತ್ರನಲ್ಲಿ ಮನೆ ಮಾಡಿಕೊಂಡಿದೆ. ಹಾಗಾಗಿ ಇಲ್ಲಿ ಯಾವುದೇ ಪತ್ರಕರ್ತನಿಗೆ ಆದರ್ಶಗಳು ಇರಬೇಕು ಎಂಬ ಕಟ್ಟುಪಾಡುಗಳಿಲ್ಲ. ಜೊತೆಗೆ ಆದರ್ಶವೆಂಬುವುದು ಅಂಗಡಿಯಲ್ಲಿ ದೊರೆಯುವ ವಸ್ತು ಕೂಡ ಅಲ್ಲ.

ಇತ್ತೀಚೆಗಿನ ಪತ್ರಿಕೋದ್ಯಮದ ಧೋರಣೆ ಕುರಿತು ಆಕ್ಷೇಪ ವ್ಯಕ್ತವಾದಾಗಲೆಲ್ಲಾ, ಪತ್ರಿಕೋದ್ಯಮಿಗಳು ತಮ್ಮ ರಕ್ಷಣೆಗಾಗಿ ಗುರಾಣಿಯಂತೆ ಬಳಸುವುದು, ಲಾಭ ಮತ್ತು ನಷ್ಟದ ವಿಷಯಗಳನ್ನು ಮಾತ್ರ. ಭಾರತದ ಒಂದು ಶತಮಾನದ ಪತ್ರಿಕೆಗಳ ಇತಿಹಾಸ ಗಮನಿಸಿದರೆ, ಇವರು ಅಪ್ಪಟ ಸುಳ್ಳುಗಾರರು ಎಂಬುದು ಸಾಬೀತಾಗುತ್ತದೆ. ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ಸಂಸ್ಥಾಪಕರು ಚೆನ್ನೈ ನಗರದ ನಾಲ್ವರು ವಕೀಲರು, ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯನ್ನು ಬ್ರಿಟಿಷರಿಂದ ಕೊಂಡವರು ಮಾರವಾಡಿ ಮನೆತನದ ಜೈನ್ ಕುಟುಂಬ, ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಸಂಸ್ಥಾಪಕ ರಾಮನಾಥ್ ಗೊಯಂಕ ವ್ಯಾಪಾರಸ್ಥ ಕುಟುಂಬದಿಂದ ಬಂದ ವ್ಯಕ್ತಿ, ಅಷ್ಟೇ ಏಕೆ, ನಮ್ಮ ಕನ್ನಡದ ದಿನಪತ್ರಿಕೆ ಪ್ರಜಾವಾಣಿಯ ಸಂಸ್ಥಾಪಕ ಕೆ. ಎನ್. ಗುರುಸ್ವಾಮಿ ಹೆಂಡ ಮಾರುವ ವೃತ್ತಿಯಿಂದ ಬಂದವರು (ಇವರ ಮೂಲ, ಆಂಧ್ರಪ್ರದೇಶದ ಆಧೋನಿ).

ಇವರುಗಳಿಗೆ ಸಮಾಜಕ್ಕೆ ನಾವು ಏನಾದರೂ ಮಾಡಬೇಕು ಎಂಬ ಆದರ್ಶ ಇದ್ದುದರಿಂದಲೇ ಪತ್ರಿಕೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಇವರುಗಳಿಗೆ ಲಾಭ ಮೊದಲ ಆದ್ಯತೆಯಾಗಿರಲಿಲ್ಲ. ಈ ಎಲ್ಲಾ ಪತ್ರಿಕೆಗಳು ನಷ್ಟದಲ್ಲಿದ್ದರೆ, ಇಷ್ಟು ದೂರ ಸಾಗಿಬಂದು ಇವತ್ತಿನ ಹೆಮ್ಮರಗಳಾಗಿ ಬೆಳೆಯಲು ಸಾಧ್ಯವಿತ್ತೆ? ಈ ಆದರ್ಶವಾದಿಗಳಿಗೆ ಲಾಭಕೋರತನ ಎಂದೂ ಗುರಿಯಾಗಿರಲಿಲ್ಲ ಅಂದ ಮಾತ್ರಕ್ಕೆ ಪತ್ರಿಕೆಯನ್ನು ನಷ್ಟದಲ್ಲಿ ನಡೆಸಬೇಕೆಂಬ ಉಮೇದು ಇರಲಿಲ್ಲ. ಪತ್ರಿಕೆಯ ಓದುಗರೇ ನಿಜವಾದ ವಾರಸುದಾರರು ಎಂದು ಇವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಪತ್ರಿಕೆಯ ಮುಖಪುಟದ ಜಾಹಿರಾತು ಯಾವ ಕಾರಣಕ್ಕೂ ಕಾಲು ಪುಟಕ್ಕೆ ಮೀರದಂತೆ ಅಲಿಖಿತ ನಿಯಮವನ್ನು ರೂಪಿಸಿಕೊಂಡಿದ್ದರು.

ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಬಲಿಷ್ಟ ರಾಜಕಾರಣಿಗಳ ಮತ್ತು ಕಾರ್ಪೋರೇಟ್ ಕುಳಗಳ ಪಾಲಾಗಿವೆ ಹಾಗಾಗಿ ಹಣ ತರುವ ಜಾಹಿರಾತಿಗಾಗಿ ಇಡೀ ಮುಖಪುಟವನ್ನು ಒತ್ತೆ ಇಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತನಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯ?.

ಮೂರು ದಶಕಗಳ ಹಿಂದೆ ನನ್ನ ತಲೆಮಾರು ಪತ್ರಿಕೋದ್ಯಮ ಪ್ರವೇಶಿಸಿದಾಗ ಪತ್ರಿಕೋದ್ಯಮ ಕುರಿತಂತೆ ಬೋಧಿಸುವ ಯಾವ ಪಠ್ಯಗಳು ಇರಲಿಲ್ಲ,  ಯಾವುದೇ ವಿ.ವಿ.ಯಲ್ಲಿ ಇದು ಜ್ಞಾನ ಶಿಸ್ತುವಾಗಿ ಬೆಳದಿರಲಿಲ್ಲ. ನಮಗೆ ಪತ್ರಿಕೋದ್ಯಮದ ಅ. ಆ. ಇ. ಈ. ಕಲಿಸಿದ ಹಿರಿಯರ ಬದುಕು, ಬರವಣಿಗೆ, ಅವರುಗಳು ನೈತಿಕತೆ ಕುರಿತಂತೆ ಹಾಕಿಕೊಂಡಿದ್ದ ಲಕ್ಷ್ಮಣರೇಖೆ ಇವೆಲ್ಲೂ ನಮ್ಮ ಪಾಲಿಗೆ ನಿಜವಾದ ಪಠ್ಯಗಳಾಗಿದ್ದವು.

ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷ ಇರಬಾರದು. ಓದುಗರಿಗೆ ನಮ್ಮ ಬರವಣೆಗೆ ಮೂಲಕ ನಿಷ್ಟರಾಗಿರಲು ಇರುವ ಏಕೈಕ ಮಾರ್ಗವೆಂದರೆ ಅಧಿಕಾರಯುತ ವ್ಯಕ್ತಿಗಳಿಂದ (ರಾಜಕಾರಣಿ ಮತ್ತು ಅಧಿಕಾರಿ ಇವರುಗಳಿಂದ) ಅಂತರ ಕಾಪಾಡಿಕೊಳ್ಳುವುದು, ಜಾತಿ, ಧರ್ಮ ಇವುಗಳ ವಕಾಲತ್ತು ವಹಿಸಿ ಬರವಣಿಗೆ ಮಾಡಬಾರದು, ನಾವು ಬರೆಯುವ ಒಂದೊಂದು ಅಕ್ಷರದಲ್ಲಿ ಜೀವಪರವಾದ ಧ್ವನಿ ಇರಬೇಕು, ಇವೆಲ್ಲವನ್ನೂ ನನ್ನ ತಲೆಮಾರಿನ ಪತ್ರಕರ್ತರು, ಖಾದ್ರಿ ಶಾಮಣ್ಣ, ಟಿ.ಎಸ್.ಆರ್.,  ವೈ.ಎನ್.ಕೆ.,  ಕೆ. ಶಾಮರಾವ್,  ಎಂ.ಬಿ. ಸಿಂಗ್, ವಡ್ಡರ್ಸೆ ರಘುರಾಮಶೆಟ್ಟಿ, ಪಿ.ಲಂಕೇಶ್, ಜಯಶೀಲರಾವ್, ಐ.ಕೆ. ಜಾಗೀರ್‌ದಾರ್, ಪಾ.ವೆಂ. ಆಚಾರ್ಯ, ಸುರೇಂದ್ರಧಾನಿ ಮುಂತಾದ ಮಹನೀಯರಿಂದ ಕಲಿತುಕೊಂಡಿದ್ದರು.

Deccan Herald - Mining Paymentsಈ ತಲೆಮಾರಿನ ಮುಂದಿರುವ ಆದರ್ಶವೆಂದರೆ, ಸಾಧ್ಯವಾದಷ್ಟು ಹಣ ಮಾಡಬೇಕು, ಬೆಂಗಳೂರಿನಲ್ಲಿ ಒಂದು ಮನೆ ಮಾಡಬೇಕು, ಓಡಾಡಲು ಕಾರಿರಬೇಕು. ಇನ್ನೂ ಸಾಧ್ಯವಾದರೆ, ನಗರದ ಹೊರವಲಯದಲ್ಲಿ ಒಂದು ತೋಟ ಇರಬೇಕು. ಇಂತಹವರಿಂದ ಏನನ್ನು ತಾನೆ ಕಲಿಯಲು ಸಾಧ್ಯ? ಕೇವಲ 15 ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದಿದ್ದವರೆಲ್ಲಾ ಇಂದು ಕೋಟಿ ಕೋಟಿ ರೂಗಳ ಒಡೆಯರು. ಗಣಿಧಣಿಗಳ ಎಂಜಲು ಕಾಸಿಗೆ ಕೈಯೊಡ್ಡಿದವರೆಲ್ಲಾ ಇಂದು ಸ್ಟಾರ್ ಪತ್ರಕರ್ತರು. ಇಂತಹ ಅಯೋಮಯ ಸ್ಥಿತಿಯಲ್ಲಿ ಹೊಸ ತಲೆಮಾರಿನ ಪತ್ರಕರ್ತರಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಇತ್ತೀಚೆಗಿನ ಯುವ ಜನಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಹನೆ ಎದ್ದು ಕಾಣುತ್ತಿದೆ. ಎಲ್ಲೆಡೆ ಪ್ರಾಮಾಣಿಕತೆಯನ್ನು ಬಯಸುವ ಮನೋಭಾವ ಬೆಳೆದು ಬಂದಿದೆ. ಜೊತೆಗೆ ತಾವೂ ಪ್ರಾಮಾಣಿಕರಾಗಿ ಇರಲು ಬಯಸುತ್ತಾರೆ. ಇದು ಪತ್ರಿಕೋದ್ಯಮ ಹೊರತು ಪಡಿಸಿ ಉಳಿದ ರಂಗಗಳ ಯುವಜನತೆಯಲ್ಲಿ ಕಾಣುವ ಅಂಶ ಎಂದು ತೀವ್ರ ವಿಷಾದದಿಂದ ಹೇಳಲು ಬಯಸುತ್ತೇನೆ.

ಇವತ್ತಿನ ಕಾಲೇಜು ಅಥವಾ ವಿ.ವಿ ಗಳಲ್ಲಿ ನಾವು ಪಡೆಯುತ್ತಿರುವ ಪದವಿ ಉದ್ಯೋಗಕ್ಕೆ ಒಂದು ಪರವಾನಗಿ ಅಷ್ಟೇ, ಅದರಾಚೆ ಅದು ಈ ಯುವ ತಲೆಮಾರಿಗೆ ಏನನ್ನೂ ಕಲಿಸಿಕೊಡುವುದಿಲ್ಲ, ಬೋಧಿಸುವುದಿಲ್ಲ. ಅದು ದೃಶ್ಯಮಾಧ್ಯಮವಾಗಿರಲಿ, ಮುದ್ರಣ ಮಾಧ್ಯಮವಾಗಿರಲಿ, ಇಲ್ಲಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುವ ಯುವಕರು ನೈತಿಕತೆ ಮತ್ತು ಆದರ್ಶಗಳನ್ನು ಸ್ವಯಂ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬನೂ ಏಕಲವ್ಯನಾಗಲು ಸಿದ್ಧನಿರಬೇಕು. ಆದರ್ಶಗಳನ್ನು ಮೈಗೂಡಿಸಿಕೊಂಡರೆ, ಬದುಕಿನ ಕಟು ವಾಸ್ತವಗಳು ಏನು ಎಂಬುದು ತಂತಾನೆ ಅರ್ಥವಾಗುವ ಸಂಗತಿ.

Leave a Reply

Your email address will not be published. Required fields are marked *