ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

6 thoughts on “ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

  1. g.mahanthesh.

    ಈ ರಾಮಚಂದ್ರಗೌಡರ ಬಗ್ಗೆ ಹೇಳುವುದಕ್ಕೆ ಇನ್ನೂ ಒಂದು ವಿಷಯ ಇದೆ. ಇವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾಗಿದ್ದಾಗ ನಡೆದ ಘಟನೆ ಇದು. ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಸಚಿವರಾಗಿ ಪ್ರವೇಶಿಸುವ ಮೊದಲು ಇವರು ಕೂರುವ ಕುರ್ಚಿ ಮೇಲೆ ಒಂದಷ್ಟು ಫೋಟೋ ಇಟ್ಟು(ಫೋಟೋ ಯಾವುದು ಎಂದು ಮರೆತು ಹೋಗಿದೆ)ಹೋಮ, ಹವನ ನಡೆಸುವ ಮೂಲಕ ಕಚೇರಿ ಪ್ರವೇಶಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನ ಅಣಕಿಸಿದ್ದರು.
    ಇನ್ನು, ಪರಿಷತ್​ನ ಶಿಕ್ಷಕರ, ಪದವೀಧರರ ಕ್ಷೇತ್ರ ಚುನಾವಣೆ ವಿಷಯ. ಇವತ್ತಿಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರು ನರಳುತ್ತಿದ್ದಾರೆ. ಜೆಡಿಎಸ್​ ಸರ್ಕಾರ ಇದ್ದಾಗ ಅನುದಾನ ಕೊಡುವ ಮತ್ತು ಶಿಕ್ಷಕರಿಗೆ ಸೇವಾ ಖಾತ್ರಿ ನೀಡಲು ಮುಂದಾಗದ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಈಗ ಧಾರವಾಡದಿಂದ ಪಾದಯಾತ್ರೆ ಆರಂಭಿಸಿ, ಶಿಕ್ಷಕರ ಗಮನ ಸೆಳೆಯುವ ಮೂಲಕ ಮತ ಬ್ಯಾಂಕ್​ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ಪರಿಷತ್​ನ ಇನ್ನೊಬ್ಬ ಸದಸ್ಯ ಕೋಲಾರ ಜಿಲ್ಲೆಯ ನಾರಾಯಣಸ್ವಾಮಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಭಾಗದಲ್ಲಿ ಶಿಕ್ಷಕರಿಗೆ ಪ್ರತಿ ಭಾನುವಾರ ಮದ್ಯ ಸಮಾರಾಧನೆ ನಡೆಸುವ ಮೂಲಕ ಮತಗಳ ಲೆಕ್ಕ ಹಾಕುತ್ತಿದ್ದಾರೆ. ಇದಕ್ಕೆ ಪದವೀಧರರ ಕ್ಷೇತ್ರವೂ ಹೊರತಲ್ಲ.
    ಅಂತೂ ನಿರಾಶ್ರಿತರ ಗಂಜಿ ತಾಣವಾಗಿರೋ ಪರಿಷತ್​ನ ಪಾವಿತ್ರ್ಯಕ್ಕೆ ಹೊರಗಿನಿಂದಲೇ ಧಕ್ಕೆ ಆಗಲಾರಂಭಿಸಿದೆ.
    ಮಹಂತೇಶ್​, ಜಿ.

    Reply
  2. B.Narasinga Rao

    Throw this person in 2 dustbin..even it will be ashamed 2 have him!The most foolish laughing stock in Yaddis group!

    Reply
  3. r.h.nataraj

    ಇಂಥ ಗೋಸುಂಬೆ ರಾಜಕಾರಣಿಗಳಿಗೆ ಅವ್ರ ಪಕ್ಷಗಳು ಮಣೆ ಹಾಕುತ್ತವೆ ಅಂದಿನಿಂದ ವೋಟು ಮಾಡಿದವರು ಇವರಿಗೆ ವೋಟು ಹಾಕ್ತಾರೆ ಮತ್ತೆ ಗೆಲ್ಲ್ತಾರೆ ತತ್ತ್ವ ಸಿದ್ದಾಂತ ಅಂತ ಮತದಾರ ಅನ್ನಿಸಿಕೊಂದಿರೋ ಪ್ರಭು ಸಹ ಇಂತಹದೆ ವಾದ ಮಂಡಿಸುತ್ತಿರೋದು ಬೆಂಗಳೂರಿನ ಹಲವೆಡೆ ದಾರಳವಾಗಿ ಕಾಣುತ್ತಿದ್ದೇವೆ ….ಬೆಕ್ಕಿನ ಕೊರಳಿಗೆ ಗಂಟ್ಥೆ ಕಟ್ಟುವರು ಯಾವಾಗ ಎದ್ದೆಳುತ್ತರೂ ಗೊತ್ತಿಲ್ಲ

    Reply
  4. ವಿಮಲಾ.ಕೆ.ಎಸ್.

    ವರ್ತಮಾನಕ್ಕೆ ಅಭಿನಂದನೆಗಳು. ಆ ಜನದ ಬಗ್ಗೆ ಬರೆಯಲು ಇನ್ನೂ ಬಹಳ ಉಂಟು. ಅವರಿಗೆ ಸರ್ಕಾರೀ ವೆಚ್ಚದಲ್ಲಿ ತರಿಸಿದ ಹಿಯರಿಂಗ್ ಏಯ್ಡ್ ಬೆಲೆ ಕೇವಲ 5 ಲಕ್ಷ ರೂಪಾಯಿಗಳು. ಪಾಪ ಸರಳ, ಸಜ್ಜನ!!!. ಅವರ ಮತ್ತು ಅವರಂತಹ ಗೋಸುಂಬೆ ರಾಜಕಾರಿಣಿಗಳ ಬಗ್ಗೆ ಏನೋ ಸರಿ. ಆದರೆ ಈ ಚುನಾವಣೆಯಲ್ಲಿ ಸ್ಪಷ್ಟ ರಾಜಕೀಯ ತಿಳುವಳಿಕೆಯೊಂದಿಗೆ, ಸದಾ ಜನರ ಸಮಸ್ಯಗಳ ಪರಿಹಾರಕ್ಕಾಗಿ,ನಿರಂತರವಾಗಿ ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿರುವ,ಕಾಸ್ಮೆಟಿಕ್ ರಾಜಕಾರಣ ಮಾಡದ ವ್ಯಕ್ತಿ ಸ್ಪರ್ದಿಸಿದರೆ, ಯಾರಿಗೆ ಬೇಕಾದರೂ ಮತ ಹಾಕಿ ಎನ್ನದೇ ‘ವರ್ತಮಾನ’ ಅವರನ್ನು ಬೆಂಬಲಿಸಬೇಕು ಎಂದು ನಿರೀಕ್ಷಿಸುತ್ತೇನೆ.

    Reply
  5. Pingback: ವರ್ತಮಾನ.ಕಾಮ್

  6. Pingback: ವರ್ತಮಾನ

Leave a Reply

Your email address will not be published. Required fields are marked *