ಹೊಸ ಪತ್ರಿಕೆಯ ಸುತ್ತಮುತ್ತ..


– ಪರಶುರಾಮ ಕಲಾಲ್    


ವಿಜಯ ಸಂಕೇಶ್ವರರ ಹೊಸ ಪತ್ರಿಕೆ ರಂಗಕ್ಕಿಳಿಯಲು ದಿನಗಣನೆ ಆರಂಭವಾಗಿವೆ. ಪತ್ರಿಕೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಜಿಲ್ಲಾ ವರದಿಗಾರರು, ಸುದ್ದಿ ಸಂಪಾದಕರು, ಉಪ ಸಂಪಾದಕರು ಎಲ್ಲರೂ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಸುದ್ದಿ ಕಳಿಸುವುದು. ತಿದ್ದುವುದು. ಪೇಜು ಸಿದ್ಧಪಡಿಸುವುದು ಎಲ್ಲಾ ನಡೆಯುತ್ತಿದೆ. ತಾವು ರೂಪಿಸಿದ ಪತ್ರಿಕೆಯನ್ನು ತಾವೇ ನೋಡಿಕೊಂಡು ಡೆಸ್ಕಿನಲ್ಲಿರುವವರು ಸಂತೋಷ ಪಡುತ್ತಿದ್ದಾರೆ.

ಜಿಲ್ಲಾ ವರದಿಗಾರರು, ಹಿರಿಯ ವರದಿಗಾರರು ಯುದ್ಧ ಎದುರಿಸಲು ಸಜ್ಜಾಗಿ ಸೇನಾನಿಗಳಂತೆ ಪೆನ್ನು ಚಾಚಿಯೇ ಕುಳಿತುಕೊಂಡಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಪತ್ರಿಕೆಗಳನ್ನು ಹೇಗೆ ಎದುರಿಸಬೇಕೆಂದು ಯೋಜಿಸಲಾಗಿದೆ. ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ ಬರೆಯುವ ‘ಬೆತ್ತಲೆ ಜಗತ್ತು’ ರೀತಿಯಲ್ಲಿ ಹೊಸ ದಿಗಂತ ಪತ್ರಿಕೆಯಲ್ಲಿ ‘ಮೇರಾ ಭಾರತ್ ಮಹಾನ್’ ಎಂಬ ಅಂಕಣ ಬರೆಯುತ್ತಿದ್ದ ರವೀಂದ್ರ ದೇಶಮುಖ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿರಿಯ ಉಪ ಸಂಪಾದಕ ಸ್ಥಾನ ನೀಡಲಾಗಿದ್ದು, ಪ್ರತಿವಾರ ಅಂಕಣ ಹಾಗೂ ಸಂಪಾದಕೀಯ ಬರೆಯುವ ಕೆಲಸ ಒಪ್ಪಿಸಿದ್ದಾರೆ. ಆರೆಸೆಸ್ಸ್ ಪತ್ರಿಕೆಯಲ್ಲಿ ಬರುವ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿ ‘ಮೇರಾ ಭಾರತ್ ಮಹಾನ್’ ಎಂದು ತಮ್ಮ ಬೈಲೈನ್ ಹಾಕಿಕೊಳ್ಳುತ್ತಿದ್ದರು ರವೀಂದ್ರ ದೇಶಮುಖ್. ಈಗ ಸ್ವತಂತ್ರವಾಗಿ ಮತ್ತೊಂದು ಬೆತ್ತಲೆ ಜಗತ್ತು ಅವರು ಅನಾವರಣ ಮಾಡಬೇಕಿದೆ.

ವಿಜಯ ಕರ್ನಾಟಕ ಮಾತ್ರ ಬರಲಿರುವ ಹೊಸ ಪತ್ರಿಕೆಯನ್ನು ಎದುರಿಸಲು ಸಜ್ಜಾಗಿ, ಕೋಟೆಯನ್ನು ಭದ್ರ ಪಡಿಸಿಕೊಳ್ಳುವ ಕೆಲಸ ನಡೆಸಿದೆ. ಯುವ ಘರ್ಜನೆ ಎನ್ನುವುದು ಅದರ ಅಂತಹ ಒಂದು ಪ್ರಯತ್ನದ ಭಾಗ. ಪ್ರಜಾವಾಣಿಯು ಇಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರೂ ಆಪಾಯ ಎದುರಿಸಲು ಅದು ಪ್ರಯತ್ನ ಮಾಡುತ್ತಿದೆ. ಸಾಪ್ತಾಹಿಕ ಪುರವಣಿ ಜೊತೆ ದೇಶಕಾಲದ ಜೊತೆಗೆ ನೀಡುತ್ತಿದ್ದ ಸಾಹಿತ್ಯ ಪುರವಣಿಯನ್ನು ಈಗ ತಾನೇ ನಿರ್ವಹಿಸುತ್ತಾ ಉಳಿಸಿಕೊಂಡಿದೆ. ಯುವಜನರಿಗಾಗಿ ಕಾಮನ ಬಿಲ್ಲು ಎಂಬ ಸಣ್ಣ ಪುರವಣಿಯನ್ನು ಹೊರ ತರುತ್ತಿದೆ. ಕನ್ನಡ ಪ್ರಭದ ಸ್ಥಿತಿಯಂತೂ ಶೋಚನೀಯವಾಗಿದೆ. ಅದರ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ‘ನೋಡುತ್ತಾ ಇರಿ, ಏನೋ ಮಾಡುತ್ತೇವೆ’ ಅಂತಾ ಎಂದು ಸಂಪಾದಕ ವಿಶ್ವೇಶ್ವರ ಭಟ್ರು, ಹಾವಾಡಿಗರು ತಮ್ಮ ತೆರೆಯದ ಬುಟ್ಟಿ ತೋರಿಸಿ “ಧರ್ಮಸ್ಥಳದಿಂದ ಹಿಡಿದುಕೊಂಡು ಬಂದಿರುವ ಹಾವು ಇದೆ, ತೋರಿಸುತ್ತೇವೆ” ಎಂದು ಆಟದಲ್ಲಿ ಹೇಳುತ್ತಾ ಕೊನೆಗೂ ಹಾವು ತೋರಿಸುವುದಿಲ್ಲ, ಹಾಗೇ ಆಗಿ ಬಿಟ್ಟಿದೆ ಅವರ ಹೇಳಿಕೆ.

ಉದಯವಾಣಿ, ಸಂಯುಕ್ತ ಕರ್ನಾಟಕ  ತಮ್ಮ ಲೇಔಟ್ ಚೇಂಜ್ ಮಾಡಿಕೊಂಡಿದ್ದು ಬಿಟ್ಟರೆ ಉಳಿದಂತೆ ಆದರ ಪ್ರಯತ್ನ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಈಗ್ಗೆ 12 ವರ್ಷದ ಹಿಂದೆ ವಿಜಯ ಕರ್ನಾಟಕದಲ್ಲಿ ಹುಟ್ಟಿದಾಗ ಏನಿತ್ತು ಪರಿಸ್ಥಿತಿ. ಇವತ್ತಿನ ಪರಿಸ್ಥಿತಿ ಏನಿದೆ ಎನ್ನುವುದು ಪರಿಶೀಲಿಸುವುದು ಇಲ್ಲಿ ಬಹಳ ಮುಖ್ಯ ಸಂಗತಿಯಾಗಿದೆ. ಪ್ರಜಾವಾಣಿ ಕನ್ನಡದ ಅತ್ಯಂತ ಜನಪ್ರಿಯ ದಿನ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿ, ನಂದಿಯಂತೆ ವಿರಾಜಮಾನವಾಗಿತ್ತು. ಕನ್ನಡ ಪ್ರಭ ಎರಡನೇಯ ಸ್ಥಾನದಲ್ಲಿತ್ತು. ಉದಯವಾಣಿ, ಸಂಯುಕ್ತ ಕರ್ನಾಟಕ ಬೆಂಗಳೂರಿನಲ್ಲಿ ಕಚೇರಿ, ಎಡಿಷನ್ ಹೊಂದಿದ್ದರೂ ಅವು ಪ್ರಾದೇಶಿಕ ಪತ್ರಿಕೆಗಳಾಗಿಯೇ ಇದ್ದವು.

ಪ್ರಜಾವಾಣಿಯ ಏಜೆನ್ಸಿ ತೆಗೆದುಕೊಳ್ಳುವುದು ಎಂದರೆ ಪೆಟ್ರೂಲ್ ಬಂಕ್ ಪಡೆಯುವಂತೆ ಕಷ್ಟ ಪಡಬೇಕಿತ್ತು. ಅಷ್ಟು ಡಿಮ್ಯಾಂಡ್ ಆಗ. ಕನ್ನಡ ಪ್ರಭದ ಏಜೆಂಟ್ರು ಹತ್ತು ಪತ್ರಿಕೆ ಹೆಚ್ಚು ಮಾಡಲು ಹರ ಸಾಹಸ ಮಾಡಬೇಕಿತ್ತು. ಆಗ ಕನ್ನಡ ಪ್ರಭದ ಪ್ರಸರಣ ವಿಭಾಗದವರು ಪತ್ರಿಕೆ ಸಂಖ್ಯೆ ಹೆಚ್ಚಿಸಬೇಡಿ, ಇದ್ದಷ್ಟೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳುತ್ತಿದ್ದರು. ಕಳೆದ 20 ವರ್ಷದಲ್ಲಿ ಕನ್ನಡ ಓದುಗರ ಸಂಖ್ಯೆ ಹೆಚ್ಚಿದೆ. ಅವರನ್ನು ತಲುಪಬೇಕೆಂಬ ಉದ್ದೇಶ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಪ್ರಸರಣ ಹೆಚ್ಚಾದರೆ ಲಾಭವಿಲ್ಲ. ಬದಲು ನಷ್ಠವೇ ಹೆಚ್ಚು ಎಂಬ ಲೆಕ್ಕಾಚಾರ ಎಲ್ಲರದ್ದೂ ಆಗಿತ್ತು. ಬೆಲೆ ಏರಿಕೆ ನಡೆಯುತ್ತಾ ಹೋಗುತ್ತಿರುವ ಲೆಕ್ಕದಲ್ಲಿ ಹೋದರೆ ಇವತ್ತು ಕನ್ನಡ ದಿನ ಪತ್ರಿಕೆಗಳ ಬೆಲೆಯು 8 ರೂ. ಮುಟ್ಟಬೇಕಿತ್ತು.

ಇಂತಹ ಸಂದರ್ಭದಲ್ಲಿಯೇ ವಿಜಯ ಕರ್ನಾಟಕ ಕಾಲಿಟ್ಟಿತು. ಎಲ್ಲಾ ಕಡೆ ಎಡಿಷನ್ ಮಾಡುವ ಮೂಲಕ ಎಲ್ಲರಿಗೂ ಪತ್ರಿಕೆ ಮುಟ್ಟಿಸುವ ಕೆಲಸ ಆರಂಭಿಸಿತು. ಹಳ್ಳಿಗಳಲ್ಲಿ ಬೆಳಿಗ್ಗೆ 10, 11ಕ್ಕೆ ಸಿಗುತ್ತಿದ್ದ ಪ್ರಜಾವಾಣಿಯ ಬದಲು ಬೆಳಿಗ್ಗೆ 6ಕ್ಕೆಲ್ಲಾ ಸಿಗುವಂತಾಯಿತು. ಪತ್ರಿಕೆ ಏಜೆನ್ಸಿ ಅನ್ನುವುದು ಇಷ್ಟು ಸುಲಭ ಎನ್ನುವುದನ್ನು ತೋರಿಸಿ ಬಿಟ್ಟರು. ಹಳ್ಳಿ ಹಳ್ಳಿಗೂ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಒಂದು ಊರಿನಲ್ಲಿ ಎಷ್ಟು ಬೇಕು ಅಷ್ಟು ಏಜೆನ್ಸಿ ಕೊಡುವ ಮೂಲಕ ಪತ್ರಿಕೆ ಪ್ರಸರಣವನ್ನು ವಿಸ್ತರಿಸಿಬಿಟ್ಟರು. ದರ ಸಮರವನ್ನು ಸಾರಿ ಬಿಟ್ಟರು. ಉಳಿದ ಪತ್ರಿಕೆಗಳು ಎಚ್ಚೆತ್ತುಕೊಂಡು ಪ್ರಸರಣ ವಿಸ್ತರಿಸುವ ಪ್ರಯತ್ನಗಳ ನಡುವೆ ವಿಜಯಕರ್ನಾಟಕ ನಂಬರ್ ವನ್ ಆಗಿಯೇ ಬಿಟ್ಟಿತು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ತ್ರಿವಳಿ ಮಂತ್ರವನ್ನು ಜಪಿಸಲಾರಂಭಿಸಲಾಯಿತೋ ಆಗ ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಪಡೆಯಲು ಎಬಿಸಿ ಎನ್ನುವ ಪ್ರಸರಣ ಸಂಖ್ಯೆಯ ಪಟ್ಟಿ ಮುಖ್ಯವಾಗಿ ಹೊಯಿತು. ಪತ್ರಿಕೆಗಳ ಸರಕಾಗಲು ತುದಿಗಾಲಿನ ಮೇಲೆ ನಿಂತವು. ಈಗಾಗಿ ಪತ್ರಿಕೆಗೆ ಮೌಲಿಕ ಓದುಗರಗಿಂತ ಗ್ರಾಹಕ ಓದುಗರು ಮುಖ್ಯವಾದರು. ಅಥವಾ ಓದುಗರನ್ನು ಗ್ರಾಹಕರನ್ನಾಗಿ ಮಾಡಲು ಪೈಪೋಟಿಗೆ ಇಳಿಯಬೇಕಾಯಿತು. ವಿಜಯ ಕರ್ನಾಟಕ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಈಗ ಎಲ್ಲಾ ದಿನ ಪತ್ರಿಕೆಗಳು ಎಡಿಷನ್ ಮಾಡಿ, ತಮ್ಮ ಪತ್ರಿಕೆಯ ವಿಸ್ತರಣೆ ಕೆಲಸಕ್ಕೆ ಕೈ ಹಾಕಿವೆ. ಪ್ರಜಾವಾಣಿ ಎಡಿಷನ್ ಮಾಡಿ, ಏಜೆನ್ಸಿಯ ಬಿಗಿ ನೀತಿ ಸಡಿಲಿಸಿ, ಅದು ಹಳ್ಳಿ ಹಳ್ಳಿಗೂ ಏಜೆನ್ಸಿಯನ್ನು ನೀಡಿ ಪ್ರಸರಣಕ್ಕೆ ಅದ್ಯತೆ ನೀಡುತ್ತಿದೆ. ಇದೇ ಸಾಲಿನಲ್ಲಿ ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ನಡೆಸಿವೆ. ಇವುಗಳ ಜೊತೆಗೆ ಈಗ ಹೊಸ ದಿಗಂತವೂ ಸೇರಿಕೊಂಡಿದೆ.

ಮುಖ ಪುಟದಲ್ಲಿ ಪದಗಳ ಜೊತೆ ಆಟ, ಅದೇ ದೊಡ್ಡದು ಎನ್ನುವ ರೀತಿಯ ವಿಜೃಂಭಣೆ, ಟ್ಯಾಬ್ಲೊಯಿಡ್ ಪತ್ರಿಕೆಗಳ ಭಾಷೆ ಬಳುಸುವುದು, ಇಂತಹ ಸರ್ಕಸ್ ನಡೆಸುವ ಮೂಲಕ ಸಂಪಾದಕರು ಎನ್ನುವವರು ಈಗ ಸರ್ಕಸ್ ಕಂಪನಿಯ ಮ್ಯಾನೇಜರ್ ಆಗಿ ಬಿಟ್ಟಿದ್ದಾರೆ. ಅದೇ ಸಂಪಾದಕರ ಚಹರೆ ಹಾಗೂ ಮಾನದಂಡವಾಗಿ ಬಿಟ್ಟಿದೆ. ಪತ್ರಿಕೆಯನ್ನು ಅಗ್ಗದ ಸರಕಾಗಿ ಮಾರಾಟ ಮಾಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಇಂತಹ ವಾತಾವರಣದಲ್ಲಿ ಹೊಸ ಪತ್ರಿಕೆ ವಿಜಯ ವಾಣಿಯ ನಡಿಗೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಎಲ್ಲರೂ ಈಗ ಓಡುತ್ತಿದ್ದಾರೆ. ಈ ಓಟದ ಸಾಲಿನಲ್ಲಿ ವಿಜಯವಾಣಿ ಸೇರಿಕೊಳ್ಳಬೇಕಾಗಿದೆ. ಅನ್ಯಮಾರ್ಗವೇ ಇಲ್ಲ.

3 thoughts on “ಹೊಸ ಪತ್ರಿಕೆಯ ಸುತ್ತಮುತ್ತ..

  1. Ananda Prasad

    ವಿಜಯ ಸಂಕೇಶ್ವರರು ತಾವೇ ಕಟ್ಟಿ ಬೆಳೆಸಿದ ವಿಜಯ ಕರ್ನಾಟಕ ಪತ್ರಿಕೆಯನ್ನು ಮಾರಿ ಇದೀಗ ಪುನಃ ಮತ್ತೊಂದು ಹೊಸ ಪತ್ರಿಕೆಯನ್ನು ಕಟ್ಟಲು ಹೊರಟಿರುವುದಕ್ಕೆ ಪ್ರಧಾನ ಕಾರಣ ವಿಜಯ ಕರ್ನಾಟಕ ಪತ್ರಿಕೆಯು ಸಂಘದ ಮುಖವಾಣಿಯಂತಿದ್ದ ಧೋರಣೆಯಿಂದ ಹೊರಬಂದಿರುವುದೇ ಇರಬಹುದು ಎಂದು ಅನಿಸುತ್ತದೆ. ವಿ. ಭಟ್ಟರು ವಿಜಯ ಕರ್ನಾಟಕದಲ್ಲಿ ಪ್ರಧಾನ ಸಂಪಾದಕರಾಗಿ ಇರುವಷ್ಟು ಸಮಯ ಸಂಘದ ಧೋರಣೆಗಳಿಗೆ ವಿಜಯ ಕರ್ನಾಟಕದಲ್ಲಿ ಪ್ರಾಧಾನ್ಯತೆ ಇತ್ತು. ಅವರ ಪ್ರಧಾನ ಸಂಪಾದಕರ ಹುದ್ಧೆಗೆ ರಾಜೀನಾಮೆ ಕೊಡಿಸಿದ ನಂತರ ವಿಜಯ ಕರ್ನಾಟಕ ಪ್ರತಿಗಾಮಿ ಧೋರಣೆಯಿಂದ ಹೊರಬಂತು. ಅದರಲ್ಲಿ ಕೆಲವು ಪ್ರಗತಿಶೀಲ ಲೇಖನಗಳು ಪ್ರಕಟವಾಗತೊಡಗಿದವು. ಈ ಬೆಳವಣಿಗೆಯನ್ನು ತಡೆಯಲೋಸುಗ ಮತ್ತು ಪ್ರತಿಗಾಮಿ ಸಂಘ ಪರಿವಾರದ ಧೋರಣೆಗಳನ್ನು ರಾಜ್ಯಾದ್ಯಂತ ಪಸರಿಸಲು ಇದೀಗ ಸಂಕೇಶ್ವರ ಅವರಿಗೆ ಮತ್ತೆ ಹೊಸ ಪತ್ರಿಕೆಯೊಂದರ ಅವಶ್ಯಕತೆ ಕಂಡು ಬಂದಿದೆ. ಹೀಗಾಗಿ ಹೊಸ ಪತ್ರಿಕೆಯೊಂದು ಆರಂಭವಾಗುತ್ತಿದೆ ಎಂದು ನನ್ನ ಊಹೆ. ಅವರ ಹೊಸ ಪತ್ರಿಕೆ ಸಂಘದ ಧೋರಣೆಗಳಿಗೆ ಒತ್ತು ಕೊಟ್ಟು ಪ್ರಕಟವಾಗಲಿದೆ ಅನಿಸುತ್ತದೆ. ವಿಜಯ ಸಂಕೇಶ್ವರ ಅವರು ಸಂಘದ ಬೆಂಬಲಿಗರು ಮತ್ತು ಅದರಿಂದ ಪ್ರೇರಣೆ ಪಡೆದ ಉದ್ಯಮಿ ಎಂಬುದು ಗಮನಾರ್ಹ

    Reply
  2. ರಾಜಾರಾಂ ತಲ್ಲೂರು

    ಲೇ ಔಟ್ ಹೆಸರಿನಲ್ಲಿ ಕನ್ನಡ ಪತ್ರಿಕೆಗಳು ನಡೆಸಿರುವ ಬಣ್ಣಗಳ ಸರ್ಕಸ್ ವಾಕರಿಕೆ ತರಿಸುವಂತಿದೆ. ಒಂದು ಪುಟದಲ್ಲಿ ೧೦-೧೨ ಬಣ್ಣಗಳ ಢಾಳಾದ ಬಳಕೆ – ಕನ್ನಡ ಪತ್ರಿಕೆಗಳನ್ನು ಚೀಪ್ ಪಾಂಪ್ಲೆಟ್ ಗಳ ಮಟ್ಟಕ್ಕಿಳಿಸಿದೆ. ಬೇರೆ ವೃತ್ತಿಪರ ಲೇಔಟ್ ಗಳನ್ನು ಮಕ್ಕೀ-ಕಾ-ಮಕ್ಕೀ ನಕಲು ಮಾಡುವ ಭರದಲ್ಲಿ ಕನ್ನಡ ಪತ್ರಿಕೆಗಳು ಇರುವ ಅಂದವನ್ನೂ ಕಳೆದುಕೊಳ್ಳುತ್ತಿವೆ. ಇಂಗ್ಲೀಷ್ ಪತ್ರಿಕೆಗಳ ಲೇಔಟ್, ಫಾಂಟ್ ಗಳ ಆಟ ಕನ್ನಡ ಅಕ್ಷರಗಳಿಗೆ ಹೊಂದದು ಎಂಬ ಮೂಲಭೂತ ಅಂಶವನ್ನೇ ಮರೆತು ಈ ಆಟ ನಡೆಯುತ್ತಿದೆ.

    Reply

Leave a Reply to ರಾಜಾರಾಂ ತಲ್ಲೂರು Cancel reply

Your email address will not be published. Required fields are marked *