ಮಲೆನಾಡಿನಲ್ಲಿ ರೈತ ಚಳವಳಿ


-ಪ್ರಸಾದ್ ರಕ್ಷಿದಿ   


[ಇದು ಎನ್.ಎಸ್ ಶಂಕರ್ ಅವರ “ದಲಿತ ರೈತ ಚಳವಳಿಗಳು” ಲೇಖನಕ್ಕೆ ಪೂರಕವಾಗಿ ಒಂದಷ್ಟು ಮಾಹಿತಿ. ಪ್ರಸಾದ್ ರಕ್ಷಿದಿಯವರ “ಬೆಳ್ಳೇಕೆರೆ ಹಳ್ಳಿ ಥೇಟರ್” ಪುಸ್ತಕದ ಒಂದು ಭಾಗ.]

ರೈತ ಸಂಘ ಪ್ರಬಲವಾಗಿದ್ದ  ಸಮಯದಲ್ಲಿ ತಮಗೆ ಅನ್ಯಾಯವಾಗಿದೆಯೆಂದು ಯಾರಾದರೂ ಸಂಘಕ್ಕೆ ದೂರು ಕೊಟ್ಟರೆ ಸಂಬಂಧ ಪಟ್ಟವರಿಗೆ ತೀರ್ಮಾನಕ್ಕಾಗಿ ಸಂಘದ ಪಂಚಾಯ್ತಿಗೆ ಬರಬೇಕೆಂದು ನೋಟಿಸ್ ಕಳುಹಿಸುತ್ತಿದ್ದೆವು. ಸಂಘ ಬಲವಾಗಿದ್ದಲ್ಲಿ ನೋಟಿಸ್ ಪಡೆದವರು ತಕರಾರಿಲ್ಲದೆ ಪಂಚಾಯ್ತಿಗೆ ಬರುತ್ತಿದ್ದರು. ಸಂಘ ಬಲವಾಗಿಲ್ಲದ ಕಡೆಗಳಲ್ಲಿ ಕೆಲವರು ಈ ನೋಟಿಸುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಅಂಥ ಕಡೆಗಳಲ್ಲಿ ಸಾಕಷ್ಟು ಘರ್ಷಣೆಗಳೂ ಆದವು.

ಸ್ವಂತಕ್ಕೆ ಮರ ಕೊಯ್ದುಕೊಳ್ಳಲು ಯಾರೂ ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆಯುವ ಅಗತ್ಯವಿಲ್ಲವೆಂದೂ ರೈತರು ಸ್ವಂತ ಉಪಯೋಗಕ್ಕೆ ಯಾರ ಅನುಮತಿಗೂ ಕಾಯದೆ ತಮ್ಮ ಜಮೀನಿನಲ್ಲಿ ಬೆಳೆದ ಮರವನ್ನು ಕೊಯ್ದು ಕೊಳ್ಳಬಹುದೆಂದೂ ರೈತಸಂಘ ಪ್ರಚಾರ ಮಾಡಿತ್ತು. ರೈತ ಸಂಘ ಬಲವಾಗಿದ್ದಲ್ಲಿ ನಮಗೇಕೆ ಕಷ್ಟ ಎಂದು ಅರಣ್ಯ ಇಲಾಖೆಯವರು ಆ ಕಡೆ ತಲೆ ಹಾಕಲೂ ಇಲ್ಲ ಆದರೆ ಇನ್ನು ಕೆಲವರು ಅತೀ ಬುದ್ಧಿವಂತರು ರೈತ ಸಂಘಕ್ಕೂ ಅರ್ಜಿ ಸಲ್ಲಿಸಿದರು. ಗುಟ್ಟಾಗಿ ಅರಣ್ಯ ಇಲಾಖೆಯವರಿಗೂ ಕಾಣಿಕೆ ಒಪ್ಪಿಸಿದರು. ಹೀಗೆ ಎರಡೂ ಕಡೆ ಒಳ್ಳೆಯವರಾದರು.!  ಅರಣ್ಯ ಇಲಾಖೆಯವರು ರೈತ ಸಂಘದಿಂದಾಗಿ ದೇಶದ ಅರಣ್ಯವೆಲ್ಲಾ ನಾಶವಾಯ್ತೆಂದೂ, ರೈತ ಸಂಘದವರು ನಮ್ಮನ್ನು ಹಳ್ಳಿಗಳಿಗೆ ಕಾಲಿಡಲೂ ಬಿಡುತ್ತಿಲ್ಲವೆಂದೂ ಪ್ರಚಾರ ಮಾಡುತ್ತಾ ಒಳಗಿಂದೊಳಗೇ ಹಣ ಪಡೆಯುತ್ತಾ ಕುಳಿತರು. ಇದೇ ಸಂದರ್ಭವೆಂದು ಕಳ್ಳ ನಾಟಾ ಮಾಡುವವರು ಸರ್ಕಾರಿ ಜಾಗದಲ್ಲಿ ಸಾಕಷ್ಟು ಮರಗಳನ್ನು ಬೋಳಿಸಿದರು. ಒಟ್ಟು ಎಲ್ಲಾ ಗೊಂದಲವಾಯ್ತು.

ನಮ್ಮ ಬೆಳ್ಳೇಕೆರೆಯ ಸುತ್ತಮುತ್ತ ಅನೇಕ ತೋಟಗಳ ಕಾರ್ಮಿಕರಿಂದ ಮಾಲೀಕರ ವಿರುದ್ಧ ದೂರುಗಳು ಬರತೊಡಗಿದವು. ಹೆಚ್ಚಿನ ದೂರುಗಳೆಲ್ಲ ಸಂಬಳದ ತಕರಾರುಗಳು ಇಲ್ಲವೇ ಮಾಲೀಕರ ದಬ್ಬಾಳಿಕೆಯ ಬಗ್ಗೆ ಇರುತ್ತಿದ್ದವು. ದೂರಿನಲ್ಲಿ ನಿಜಾಂಶ ಕಂಡುಬಂದರೆ  ಅದನ್ನು ಕಾರ್ಮಿಕ ಕಾನೂನಿಗೆ ಅನುಗುಣವಾಗಿಯೇ ತೀರ್ಮಾನ ಮಾಡುತ್ತಿದ್ದೆವು. ಈ ಕಾರ್ಮಿಕ ಕಾನೂನುಗಳು ಕೂಲಿ ಕೆಲಸಗಾರರಿಗೆ ಪೂರ್ಣವಾಗಿ ನ್ಯಾಯವನ್ನು ಒದಗಿಸಲಾರವೆಂಬ ಅರಿವು ನಮಗಿದ್ದರೂ, ನಾವು ಕಾನೂನಿನ ಮಿತಿಯನ್ನು ಮೀರುವಂತಿರಲಿಲ್ಲ. ಕೆಲವು ತೋಟ, ಮಾಲೀಕರು- ಕಾರ್ಮಿಕ ಕಾನೂನನ್ನೇ ಒಪ್ಪಲು ತಯಾರಿರಲ್ಲದಂತಹ ಪರಿಸ್ಥಿತಿಯಲ್ಲಿ ಅವರನ್ನು ನಾವು ಕಾನೂನಿನ ಚೌಕಟ್ಟಿನೊಳಗೆ ತರಲು ಕೂಡಾ ರೈತ ಸಂಘಟನೆಯ ಬಲ ಬೇಕಾಗುತ್ತಿತ್ತು. ಆದರೆ ರೈತ ಸಂಘದಲ್ಲಿದ್ದ ಅನೇಕರಿಗೆ ಈ ಕಾನೂನುಗಳ ಅರಿವಿರಲಿಲ್ಲವಷ್ಟೇ ಅಲ್ಲ, ಈ ಕಾನೂನುಗಳೇ ರೈತ ವಿರೋಧಿಯಾದವು ಎಂದು ನಂಬಿದವರಿದ್ದರು!  ಆದ್ದರಿಂದ ನಾವು ಈ ತೋಟಗಳ ಮಾಲೀಕರು ನಮ್ಮ ಮೇಲೆ ಪೋಲೀಸು ಕಂಪ್ಲೇಂಟು ಕೊಡದಂತೆ ನಮ್ಮ ಮಿತಿಯೊಳಗೇ ಏನಾದರೂ ಮಾಡಬೇಕಿತ್ತು. ಇಲ್ಲವೇ ಬಲವಾದ ಸಂಘಟನೆಯ ಮೂಲಕ ದೀರ್ಘ ಕಾಲದ ಹೋರಾಟಕ್ಕೆ ಅಣಿಯಾಗಬೇಕಿತ್ತು. ಈ ಎಲ್ಲಾ ಮಿತಿಗಳೊಳಗೇ ನಾವು ಹಲವು ಕಡೆಗಳಲ್ಲಿ ತೀರ್ಮಾನಗಳನ್ನು ಮಾಡಿದೆವು.

ಇವುಗಳಲ್ಲೆಲ್ಲಾ ಸಾಮಾನ್ಯವಾಗಿ ನಾಗರಾಜ್- ಮುರಳೀಧರ್, ಅಶೋಕ, ಮುಳ್ಳಯ್ಯ ನಾವುಗಳೆಲ್ಲಾ ಇರುತ್ತಿದ್ದೆವು. ಇದರಿಂದಾಗಿ ನಾವು ಕೆಲವು ತೋಟಗಳ ಮಾಲೀಕರ ವಿರೋಧ ಕಟ್ಟಿಕೊಳ್ಳ ಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಒಂದು ತೋಟದಲ್ಲಿ ರೈಟರ್ ಒಬ್ಬ ಟಿಂಬರ್ ವ್ಯಾಪಾರಿಯೊಡನೆ ಸೇರಿ ತನ್ನ ಮಾಲೀಕರನ್ನೇ ಹೆದರಿಸಿ ಸಾಕಷ್ಟು ಮರಗಳನ್ನು ಕದ್ದು ಮಾರುವ ಹುನ್ನಾರ ಮಾಡಿದ್ದ. ಆ ರೈಟರ್‌ನ ಮಗನೊಬ್ಬ ಎಲ್ಲಾ ದುಶ್ಚಟಗಳನ್ನು ಬೆಳೆಸಿಕೊಂಡಿದ್ದು ಹಣಕ್ಕಾಗಿ ದಾರಿಯಲ್ಲಿ ನಿಂತು ಅದೇ ತೋಟದ ಕೆಲಸಗಾರರನ್ನು ಬೆದರಿಸಿ ಹಣ ಕೀಳುತ್ತಿದ್ದ. ತೋಟದ ಮಾಲೀಕರು ಪೋಲಿಸ್ ಕಂಪ್ಲೇಂಟ್ ಕೊಡಲು ಹೋದರೆ ಪೋಲೀಸರು ಈಗೆಲ್ಲ ರೈತ ಸಂಘದವರದ್ದೇ ದರ್ಬಾರು ನೀವು ಅವರಿಗೆ ಹೇಳಿ ಎಂದರಂತೆ!  ಈ ತಂದೆ ಮಕ್ಕಳ ಉಪಟಳ ತಾಳಲಾರದೆ ಸೋತು ಮಾಲೀಕರೇ ನಮ್ಮಲ್ಲಿಗೆ ದೂರು ಕೊಡಲು ಬಂದರು. ನಾವೆಲ್ಲ ಹೋಗಿ ವಿಚಾರಿಸಿದಾಗ ಮಾಲೀಕರ ದೂರು ನಿಜವೆಂದು ತಿಳಿಯಿತು. ಅಷ್ಟೆಲ್ಲ ಮಾಡಿಯೂ ಆ ತಂದೆ – ಮಕ್ಕಳು ನಮಗೆ ರೈತ ಸಂಘದವರ ಬೆಂಬಲವಿದೆಯೆಂದೂ ಹೇಳಿಕೊಂಡಿದ್ದರು! ರೈಟರ್ ಮತ್ತು ಅವನ ಮಗನಿಂದ  ಮುಚ್ಚಳಿಕೆ ಬರೆಸಿಕೊಂಡು ಅವರನ್ನೆಲ್ಲಾ ಅಲ್ಲಿಂದ ಓಡಿಸಿದೆವು.

ಗುಂಡೂರಾಯರ ಸರ್ಕಾರವಿದ್ದಾಗ ಬಲಗೊಳ್ಳುತ್ತಾ ಹೋದ ರೈತಸಂಘ, ಗುಂಡೂರಾವ್ ಸರ್ಕಾರವನ್ನು ಅಧಿಕಾರದಿಂದ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಆದರೆ ಹೆಗಡೆ ಸರ್ಕಾರ ಬಂದ ನಂತರ ರೈತ ಸಂಘ ದುರ್ಬಲವಾಗುತ್ತಾ ಹೋಯಿತು. ನಮ್ಮಲ್ಲಿ  ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹೆಚ್ಚಿನವರು ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತ ಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತ ಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿ ಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತ ಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿತ್ತು. ನಮ್ಮಲ್ಲಿನಂತಹ ಕೆಲವು ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತ ಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿ ಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ – ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತ ಸಂಘಕ್ಕೆ ಸಿಗದೇ ಹೋಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತ ಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಸರ್ಕಾರ ಕೂಡಾ ರೈತ ಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತ ಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತ ಸಂಘದಿಂದ  ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಹೆಚ್ಚಿನವರು ಜನತಾದಳಕ್ಕೆ ಹೋದರು. ಈ ಎಲ್ಲಾ ಕಾರಣಗಳಿಂದ ಮಲೆನಾಡಿನ ಕಾಫಿ ವಲಯದಲ್ಲಿ ರೈತ ಸಂಘ ನಾಮಾವಶೇಷವಾಗಿ ಹೋಯಿತು.

Leave a Reply

Your email address will not be published. Required fields are marked *